Tuesday, December 30, 2008

ಅವಳು ಹೊರಗೆ, ಇವಳು ಬಳಿಗೆ



[caption id="attachment_236" align="aligncenter" width="500" caption="ಚಿತ್ರಕೃಪೆ: ಸ್ಪ್ರಾಗ್‌ ಫೋಟೋ ಸ್ಟಾಕ್‌"]ಸ್ಪ್ರಾಗ್‌ ಫೋಟೋ ಸ್ಟಾಕ್‌[/caption]

ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿಸುತ್ತದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ನಿರೀಕ್ಷೆ, ಕಾತರದ ಕಣ್ಣುಗಳು. ಪ್ರತಿ ವರ್ಷ ಕಳೆಯುವಾಗಲೂ ಆ ವರ್ಷ `ಸಾಕಪ್ಪಾ' ಎನಿಸಿರುತ್ತದೆ, ಅಯ್ಯೋ ಈ ವರ್ಷದಷ್ಟು ಕೆಟ್ಟದಾಗಿ ಯಾವುದೂ ಇರಲಿಲ್ಲ ಎಂಬ ಭ್ರಮೆ ಮೂಡುತ್ತದೆ. ಅಂದರೆ ಮನೆಯ ಅಜ್ಜಿಯಂತೆ ಆಕೆ ಯಾರಿಗೂ ಬೇಡ. ಹೊಸ ವರ್ಷ ಮನೆಗೆ ಬರುತ್ತಿರುವ ಹೊಸ ಹೆಣ್ಣಂತೆ, ಎಲ್ಲರಿಗೂ ಕುತೂಹಲ.
ಗೋಡೆಯ ಮೇಲೆ ಕ್ಯಾಲೆಂಡರ್‌ ಬದಲಾಗಿ, ಸಹಿ ಕೆಳಗೆ ಬರೆಯುವ ದಿನಾಂಕಗಳು ಬದಲಾಗಿ, ಇಸವಿಗೆ ಒಂದು ವರ್ಷ ಹೆಚ್ಚು ವಯಸ್ಸಾಗಿ ಜಗತ್ತು ಮುಂದಡಿ ಇಡುತ್ತಿದೆ. ಡಿಸೆಂಬರ್‌ನ ಚಳಿ, ನವೆಂಬರ್‌ನ ಬಾಂಬ್‌ ದಾಳಿ, ಈ ವರ್ಷದ ಕೊನೆಯ ರಿಸೆಷನ್‌ ಭೂತ, ಸಮರ ಭೀತಿ-ಗಳ ಮಧ್ಯೆ ಬೆಳಗ್ಗೆ ಬರುವ ಸೂರ್ಯನಂತೆ ಹೊಸ ವರ್ಷ ಬರುತ್ತಿದೆ. ಆದರೆ ಆ ಹೊತ್ತಿಗೆ ಕಳೆದ `ಹಳೆಯ ವರ್ಷ' ನಮ್ಮ ಬ್ಲಾಗ್‌ನ ಕವಿತೆಗೆ ಕಂಡಿದ್ದು ಹೀಗೆ.
ಹೇಗೆ?

`ಅ-ಮೃತವರ್ಷಿಣಿ' ಕವಿತೆ ಏನನ್ನುತ್ತಿದೆಯೋ, ಹಾಗೆ.

ಒಂದೇ ವರ್ಷದ ಹಿಂದೆ
ವರ್ಷಾರಂಭದ ತಾರೀಕುಗಳ,
ವಾರಗಳ,
ದಿವಾ, ಗಳಿಗೆಗಳ
ಮನೆಗೆ ನಗುನಗುತ್ತಾ ಕಾಲಿಟ್ಟವಳು
ಆಕೆ, ವರ್ಷಿಣಿ.

ಹಳೆಯ ಕಸಗಳ
ಒಂದೂ ಬಿಡದೇ ಎತ್ತಿ ಎಸೆದು
ಹೊಸ ಸರಸಗಳ
ಮೆಲ್ಲ ಮೆಲ್ಲ ಎತ್ತಿಟ್ಟು
ಎಲ್ಲರನ್ನೂ ಮುತ್ತಿಟ್ಟಳು,
ಹಸಿದ ಬಾಯಿಗಳಿಗೆ ತುತ್ತಿತ್ತಳು.
ಈ ಜಗತ್ತಿನ ಎಲ್ಲಾ
ಸಂಭ್ರಮಗಳೂ
ಇವಳ ಮಡಿಲ ಮೇಲಾಡಿ,
ಸಂಕಟಗಳೆಲ್ಲಾ
ಒಡಲನ್ನು ಹುಡಿಮಾಡಿ
ಹಾರಿ ಹೋದವು ಕಾಲದ
ರೆಕ್ಕೆಯ ಮೇಲೆ...

Saturday, December 27, 2008

ಕಳೆದ ರಾತ್ರಿ ಕಂಡ ಕೆಟ್ಟ ಕನಸು

parzania-2005-9b(ಧರ್ಮಾಂಧತೆಗೆ ಬಲಿಯಾದ ಜಗತ್ತಿನ ಎಲ್ಲಾ ಅಮಾಯಕರಿಗೆ ಮಿಡಿಯುವ ಬರಹ)



ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ' ಎಂಬ ಚಿತ್ರ.ಅಹ್ಮದಾಬಾದ್‌ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್‌ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ  ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.
`ಪರ್ಜಾನಿಯಾ' ಕತೆ ಗೋಧ್ರಾ ದುರಂತದ ನಂತರ ನಡೆಯುವ  ಅಹ್ಮದಾಬಾದ್‌ನ ಒಂದು ಘಟನೆ. ನಾಸಿರುದ್ದೀನ್‌ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ  ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್‌ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ.
ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ.

Tuesday, December 23, 2008

ಚಳಿಗಾಳಿ ಸಹಿ ಹಾಕಿದೆ ಮನಸಿನಲಿ...

ಈ ಚಳಿ ಯಾಕಾಗಿದೆ, ಏನು ನಿನ್ನ ಚಳಿಯ ಲೀಲೆ, ಚಳಿಗಾಳಿ, ಚಳಿಗಾಳಿ ಸಹಿ ಹಾಕಿದೆ ಮನಸಿನಲಿ...
ಹೀಗೆ ನಮ್ಮ ಜನಪ್ರಿಯ ಚಿತ್ರಗೀತೆಗಳನ್ನೆಲ್ಲಾ ಬದಲಿಸಿಕೊಂಡು ಹಾಡುವಂತೆ, ನಡುಗುತ್ತಾ ಮುದುರುವಂತೆ ಈ ಸಲ ಚಳಿಗಾಲ ಯಶಸ್ವಿಯಾಗಿ ಪ್ರದರ್ಶನವಾಗುತ್ತಿದೆ. `ಗರಿಮುದುರು ಮಲಗಿದ್ದ ಹಕ್ಕಿಗೂಡುಗಳಲ್ಲಿ ಇರುಳು ಹೊಂಗನಸೂಡಿ ಸಾಗುತ್ತಿತ್ತು' ಎಂಬ ಎಸ್‌ವಿ ಪರಮೇಶ್ವರ ಭಟ್ಟರ ಸಾಲುಗಳನ್ನು ಕೇಳುತ್ತಿದ್ದರೆ ನಮಗೆಲ್ಲಾ ಚಳಿಯ ಈ ದಿನಗಳೇ ನೆನಪಾಗುತ್ತವೆ.
ಕಿವಿಗೊಂದು ಮಫ್ಲರ್‌, ಮೈಗೆ ಸ್ವೆಟರ್‌, ಕಾಲಿಗೆ ಸಾಕ್ಸ್‌, ಆಗಾಗ ಉಜ್ಜಿ ಉಜ್ಜಿ ಕೈಬಿಸಿ ಮಾಡಿಕೊಳ್ಳುವ ಅಗತ್ಯ, ಬೆಂಕಿ ಕಂಡರೆ, ಬಿಸಿಲು ಬಿದ್ದರೆ ಮೈ ಒಡ್ಡುವ ತವಕ. ಬೆಳಿಗ್ಗೆಯ ವಾಕಿಂಗ್‌ ಬ್ಯಾನ್‌ ಮಾಡಿ, ಸಂಜೆಯ ಯಾವುದಾದರೂ ಮೀಟಿಂಗ್‌ ಕ್ಯಾನ್ಸಲ್‌ ಮಾಡಿ ಮನೆ ಸೇರಿಕೊಂಡು, ಕಂಬಳಿ ಸೇರಿಕೊಳ್ಳುವವರ ಸಂಖ್ಯೆ ಜಾಸ್ತಿ ಇರಬಹುದು.
ತುಟಿ ಒಡೆಯದಿರಲು ಲಿಪ್‌ಗಾರ್ಡೂ ಮೈಕೈ ಒಡೆದು ಸಿಪ್ಪೆ ಏಳದಿರಲು ವ್ಯಾಸಲಿನ್ನೂ ನಮಗೀಗ ಬೇಕಾಗಿದೆ. ಅದನ್ನು ಕೊಂಡು ತರುವವರೂ ಹೆಚ್ಚು, ಅದಕ್ಕಾಗಿ ಅಂಗಡಿಯಲ್ಲಿ ವ್ಯಾಪಾರವೂ ಹೆಚ್ಚು. ಇಂಥದೇ ಚಳಿಯ ಬಗ್ಗೆ ಶೇಕ್ಸ್‌ಪಿಯರ್‌ `ಬ್ಲೋ ಬ್ಲೋ ದೌ ವಿಂಟರ್‌ವಿಂಡ್‌' ಎಂದು ಬರೆದ. ಅವನು ಚಳಿಗಾಳಿ ಬಗ್ಗೆ ಬರೆದ ಸಂದರ್ಭದಲ್ಲಿ ಅವನದೇ ಪಾತ್ರ ಕಿಂಗ್‌ ಲೀಯರ್‌ ತನ್ನ ಮಕ್ಕಳಿಂದ ಬೇರ್ಪಟ್ಟು, ನಿರ್ಗತಿಕನಾಗಿದ್ದ. ನಿರ್ಗತಿಕನಾಗುವುದಕ್ಕಿಂತ ಚಳಿ ಬೇರಿಲ್ಲ. `ಸುಳಿ ಸುಳಿ ಓ ಚಳಿಗಾಳಿ, ಮನುಷ್ಯಗಿಂತ ನೀ ನಿರ್ದಯವಲ್ಲ ತಿಳಿ' ಎಂದು ಶೇಕ್ಸ್‌ಪಿಯರ್‌ ಅದ್ಭುತವಾಗಿ ಬರೆಯುತ್ತಾ ಹೋಗುತ್ತಾನೆ.
ಅದೇನೇ ಇದ್ದರೂ ಚಳಿಯಿಂದ ಮುದುರಿ ಕುಳಿತ, ಮೈಕೈ ಬಿರಿದು ಕೂತ ಈ ಹೊತ್ತಿಗೆ ಕಣ್ಣನ್ನು, ಆ ಮೂಲಕ ಮನಸ್ಸನ್ನು ಬೆಚ್ಚಗಾಗಿಸಲು ಇಲ್ಲಿ ಚಳಿಗಾಲದ ಒಂದಿಷ್ಟು ಫೋಟೋಗಳನ್ನು ಪ್ರಕಟಿಸಲಾಗುತ್ತಿದೆ. ಇದನ್ನು ನ್ಯೂಸ್‌ ಏಜನ್ಸಿ, ಫೋಟೋ ಬಕೆಟ್‌ ಮೊದಲಾದ ಮೂಲಗಳಿಂದ ಬಳಸಿಕೊಳ್ಳಲಾಗಿದೆ. ಅವರಿಗೆಲ್ಲಾ ಕೃತಜ್ಞತೆಗಳು.


INDIA-WEATHER-WINTER22bnp131cimg0756coffee-1taipei_india-wintervacation2007-052

Monday, December 22, 2008

ಕೈಗೆ ಬಂದೂಕು ಕೊಡದಿರಲಿ ದೇವರು



[caption id="attachment_217" align="aligncenter" width="500" caption="ಚಿತ್ರಕೃಪೆ: ಫ್ಲಿಕರ್‌"]ಫ್ಲಿಕರ್‌[/caption]

ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ ಅಂತಿಮವಾಗಿ ಯಾವೊಂದು ರಾಷ್ಟ್ರಕ್ಕೂ ಶಾಶ್ವತ ಸಂತೋಷವನ್ನು, ಪರಿಹಾರವನ್ನು  ಕಂಡುಕೊಟ್ಟಿಲ್ಲ. ಪರಸ್ಪರ ಸೇಡು ತೀರಿಸಿಕೊಳ್ಳಲು ಮಾತ್ರ ಅದು ಬಳಕೆಯಾಗಿದೆ. ಸಮರ ಬೇಡ ಎಂದೇ ಯಾವತ್ತಿಗೂ ಜನಸಾಮಾನ್ಯರೆಲ್ಲರೂ ಪ್ರತಿಪಾದಿಸಿದರು. `ಕೈಯ್ಯಲ್ಲಿ ಬಂದೂಕು ಕೊಡುವ ದೇವರು ಹಿಂದೂಗಳಿಗೂ ಬೇಡ, ಮುಸಲ್ಮಾನರಿಗೂ ಬೇಡ' ಎಂದು ಮೊನ್ನೆ ಡಾ. ಯು ಆರ್‌ ಅನಂತಮೂರ್ತಿ ಹೇಳಿದರು. ಕೈ ಕೈ ಮಿಲಾಯಿಸಿ, ಸಾವು ತಂದುಕೊಂಡ ಯಾವುದೆ ರಾಷ್ಟ್ರವೂ ಮತ್ತೊಮ್ಮೆ ಸಮರವನ್ನು ಬಯಸುವುದಿಲ್ಲ. ಯಾಕೆಂದರೆ ಕದನದ ಅನಂತರದ ಸ್ಥಿತಿ ನಮಗೆಲ್ಲಾ ಗೊತ್ತು. ಮಹಾಭಾರತ ಸಮರ, ಅಶೋಕ ಮಾಡಿದ ಕದನ-ಗಳ ಪರಿಣಾಮವನ್ನು ತಿಳಿದ ರಾಷ್ಟ್ರ ನಮ್ಮದು.
ನಾವು ಈ ಕೈ ಕೈ ಮಿಲಾಕತ್‌ಗೂ ಮೀರಿದ ಪರಿಹಾರವನ್ನು ಸರ್ವ ರಾಷ್ಟ್ರಗಳ ಸಹಯೋಗದೊಂದಿಗೆ, ರಕ್ತರಹಿತ ಕ್ರಾಂತಿಯಂತೆ, ಮೌನಸಂಗ್ರಾಮದಂತೆ ಕಂಡುಕೊಳ್ಳುವ ಜರೂರತ್ತು ಇವತ್ತಿದೆ. ಯಾಕೆಂದರೆ ಅಮಾಯಕರನ್ನು ಕೊಲ್ಲುವುದನ್ನು ಬಿಟ್ಟು ಈ ಸಮರ ಬೇರೇನನ್ನೂ ಮಾಡುವುದಿಲ್ಲ. ಅಫ್ಗಾನ್‌ನಲ್ಲಿ ಕೆಲವೇ ವರ್ಷಗಳ ಹಿಂದೆ ಆದ ಸಮರದ ಪರಿಣಾಮ ನಮಗೆಲ್ಲರಿಗೂ ಮೊನ್ನ ಮೊನ್ನೆ ನಡೆದಂತೆ ಹಚ್ಚ ಹಸಿರಾಗಿದೆ. ಭಾರತ ನಡೆಸುವ ಸಮರದಲ್ಲೂ ಅಮೆರಿಕಾದಂಥ ರಾಷ್ಟ್ರ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗುತ್ತಿದೆ. ಸಮರವನ್ನು ನಾವು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟರೆ ಅದೇ ಅಸ್ತ್ರ  ಮುಂದೊಂದು ದಿನ ನಮ್ಮ ಕಡೆಗೇ ತಿರುಗುತ್ತದೆ.
ಸಮರವನ್ನು ಪ್ರತಿಭಟಿಸುತ್ತಾ, ಭಯೋತ್ಪಾದಕತೆ ನಿವಾರಣೆಗೆ ಆದಷ್ಟು ಹುಷಾರಾದ ಮಾರ್ಗವನ್ನು  ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಾ ಹಿಂದೆ ಅಫ್ಗಾನ್‌ ಸಮರದ ತರುವಾಯ ಬರೆದ
`ಅಫ್ಗಾನ್‌ಗೆ ಬನ್ನಿ ಇಫ್ತಾರ್‌ ಕೂಟಕ್ಕೆ' ಎಂಬ ಕವಿತೆಯನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲರ ಒಂದೊಂದು ಕೂಗೂ ನಡೆಯಲು ಅನುವಾಗಿರುವ ಸಮರವನ್ನು ಪ್ರತಿಭಟಿಸಲಿ.

(Now In afgan everything is was- ಅಫ್ಘಾನ್‌ ಗೈಡ್‌ ಒಬ್ಬ ಹೇಳಿದ್ದು.)

ಕಾಬೂಲ ವಿರಳ ಪ್ರಾಚ್ಯ ಸಂಗ್ರಹಾಲಯ,
ದರುಲಮನ್‌ ಅರಮನೆ ಆವರಣ
ಝೂನ ಮುಗ್ಧ ಜೀವಿ ಜಗತ್ತು
ಮದ್ದುಗುಂಡಿನಡಿ ಮುದ್ದೆಯಾಗಿ
ಕಾಬೂಲಿನ
ಆಲಯಗಳೆಲ್ಲಾ ಈಗ ಬಟಾ ಬಯಲು!
ಬಬೂರು ಗಾರ್ಡನಿನ ಹೊಸ ಹೂಗಳು,
ಆ ಹೂವಿನಂಥ ಜನಗಳು
ಒಟ್ಟುಗೂಡಿಸಿಟ್ಟಿದ್ದ ಅಷ್ಟೋ ಇಷ್ಟೋ ಅಗುಳು-
ನಜ್ಜುಗುಜ್ಜಾಗಿದೆ ಈಗ...

ಲೂಟಿಯಾದ ಮೇಲೆ ಕೋಟೆಯ ಬಾಗಿಲು
ಇಕ್ಕಿಕೊಂಡು
ಹಿರಿಯರ ಬಣ
ಘನ ಸರಕಾರದ ಚೌಕಟ್ಟು ಚಾಚಿತು
ನಾವು... ಇದನ್ನು
ನೀವು... ಅದನ್ನು
ನಾವೆಲ್ಲರೂ... ನಿಮ್ಮೆಲ್ಲರನ್ನೂ
ನೋಡಿಕೊಳ್ಳುತ್ತೇವೆಂದು
ಕರ್ಝಾಯಿ ಡಂಗುರ ಹೊರಡಿಸುತ್ತಿದ್ದಂತೇ-
ಕಿವಿಗೊಟ್ಟು ಆಲಿಸಿ
ಕೇಳುತ್ತಿಲ್ಲವೇ ನಿಮಗೆ-
`ಪ್ರಭು ಪ್ರಭುತ್ವವನ್ನು ಹೇರಿ
ತೋರಾಬೋರಾದಲ್ಲಿ ಈಗಾಗಲೇ
ಸೇರಿಕೊಂಡಿದ್ದಾನೆ...'
ಎಂಬ
ನಿರಾಶ್ರಿತರ ಪಿಸು ನಿಟ್ಟುಸಿರು!

ರಮ್ಜಾನ್‌ನ ಪೂರ್ಣಚಂದ್ರ ಕಾಣಿಸಿಕೊಂಡ,
ಓ ಚಂದ್ರ
ಎಲ್ಲಿ ಬೆಳುದಿಂಗಳು?
ಎಲ್ಲಾ ಮತ್ತದೇ ಧರ್ಮಾಂಧರ ತಂಗಳು
ಇನ್ನೆಲ್ಲಿ ಖುಷಿ ತಿಂಗಳು?
ಬುರ್ಖಾ ಕಿತ್ತೊಗೆದರೇನು ಬಂತು
ಯಾರಿಗೆ
ಎಲ್ಲಿಗೆ
ಮತ್ತೆ... ಯಾತಕ್ಕೆ
ಬಂದತಾಯ್ತು ಅಸಂತುಷ್ಟ ಸ್ವಾತಂತ್ರ್ಯ?

ವಿಚ್ಛಿದ್ರ ಬದುಕಿನ ಮೃತಯಾಚನೆ
ಅಬ್ಬಾ!
ಈ ಹಬ್ಬ!
ಮಾಯದ ಅಮಾಯಕರ ಮರುಕ
ನಮಾಜ್‌
ವ್ರಣ, ಹೆಣಗಳುರುಳಿದ ಕಣದಲ್ಲಿ
ರಕ್ತಸಿಕ್ತ ಇಫ್ತಾರ್‌...
ಈ ಸಾರಿ
ಅಫ್ಘಾನಿಗೆ ಬನ್ನಿ ಇಫ್ತಾರ್‌ಗೆ
ಬೇಕಾದಷ್ಟು ಉಂಡು
ಸಾಧ್ಯವಾದರೆ
ಕೊಂಡೂ ಹೋಗಿ
ಈ ರೌರವ ಔತಣ!

ಅಫ್ಘಾನಿನ ಸುತ್ತಾ
ಈಗೆಲ್ಲಾ

ಗತ... ಗತ... ಗತ...

Friday, December 19, 2008

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ

diwali_2ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡುಗೊರೆ ಕೊಡುವುದೇ? ಸ್ನೇಹ ಇರುವುದು ಪ್ರೀತಿಯಲ್ಲಾ, ನಿಕಟ ಒಡನಾಟದಲ್ಲಾ, ತ್ಯಾಗದಲ್ಲಾ, ಸ್ವಾರ್ಥದಲ್ಲಾ ನಿಃಸ್ವಾರ್ಥದಲ್ಲಾ? ಈ ಮಾತಿಗೆ ಕಾಲಮಾನಕ್ಕೊಂದು ವ್ಯಾಖ್ಯೆ ಬಂದುಹೋಗಿವೆ. ಸ್ನೇಹದಲ್ಲಿ ನಿಸ್ವಾರ್ಥ ಇರಬೇಕು ಎಂಬ ಹಳಸಲು ಮಾತುಗಳು ಸದಾ ನಮ್ಮ ನಡುವೆ ಹಾದು ಹೋಗಿವೆ. ಆದರೆ ಗೆಳೆತನ ಈ ಎಲ್ಲಾ ಹಂಗನ್ನೂ ತೊರೆದು ಎರಡು ಜೀವಗಳ ಮಧ್ಯೆ ಲಿಂಗ, ವಯಸ್ಸು, ಜಾತಿ, ವರ್ಚಸ್ತು, ಅಂತಸ್ತು, ಮತಾತೀತವಾಗಿ ಹುಟ್ಟಿಕೊಂಡಿದೆ. ಸ್ನೇಹ ಮತ್ತೊಬ್ಬನನ್ನು ಇತ್ಯಾತ್ಮಕ(ಪಾಸಿಟಿವ್‌)ವಾಗಿ ಬದಲಿಸಬೇಕು ಎಂಬ ಒಂದು ಹಿತ ನುಡಿಯ ಮೇಲೆ ಇಲ್ಲೊಂದು ಕತೆ ಇದೆ. ಅದು ಅತ್ಯಂತ ಜನಪ್ರಿಯ ಕತೆ. ಆದರೆ ಓದಿದ ಪ್ರತಿ ಸಲವೂ ಅದು ನಮ್ಮನ್ನು ಆರ್ದ್ರಗೊಳಿಸುತ್ತದೆ. ಪ್ರತಿ ಓದಿನಲ್ಲೂ ಅದು ನಿಮಗೆ ಏನೇನನ್ನೋ ಹೇಳುತ್ತದೆ. ನಿಮಗೇ ಗೊತ್ತು, ಅದು ಓ ಹೆನ್ರಿ ಕತೆ. ಹೆಸರು:  ಆಫ್ಟರ್‌  20 ಈಯರ್ಸ್‌ (ಇಪ್ಪತ್ತು ವರ್ಷಗಳ ನಂತರ). ಅನುವಾದ: ಚಿತ್ರಾಂಗದ.
ನಮ್ಮ `ತಿಳಿಯ ಹೇಳುವ ಇಷ್ಟಕತೆಯನು' ಮಾಲಿಕೆಯಲ್ಲಿ ಈ ಬಾರಿ ಒಂದು ಅನುವಾದಿತ ಕತೆ. ಓದಿ, ಪ್ರತಿಕ್ರಿಯಿಸಿ.


ದೊಂದು ತಬ್ಬಲಿ ರಾತ್ರಿ. ಕರುಳು ಕೊರೆಯುವ ಚಳಿಗಾಲ. ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು. ಜನ ಸಂದಣಿ ಕಡಿಮೆ. ಒಬ್ಬ ಪೊಲೀಸ್‌ ಪೇದೆಯ ಉಪಸ್ಥಿತಿಯಿತ್ತು. ಅವನಿಗೆ ರಾತ್ರಿ ಪಾಳಿ. ಗಸ್ತು ತಿರುಗುವುದು ಅಭ್ಯಾಸವಾಗಿತ್ತು. ಆದರೆ ಯಾರನ್ನೋ ತೃಪ್ತಿಪಡಿಸುತ್ತಿದ್ದೇನೋ ಎಂಬ ಛಾತಿಯಲ್ಲಿ ಅವನ ನೈಟ್‌ ಬೀಟ್‌ ನಡೆಯುತ್ತಿತ್ತು.
ಅಲ್ಲೊಂದು ಸಣ್ಣ ಕ್ಲಬ್‌. ಅದರ ನಿರ್ಜನತೆಗೆ ವಿರುದಾರ್ಥಕ ಪದವಾಗಿ ಒಬ್ಬ ಆಸಾಮಿ ನಿಂತಿದ್ದ. ಏನೋ ಚಡಪಡಿಕೆ, ಏನೋ ಆತಂಕ, ಯಾವುದೋ ನಿರೀಕ್ಷೆ ಆ ಆಫೀಸರನ ಮುಖದಲ್ಲಿ. ಅವನ ಕಣ್ಣುಗಳು ದೂರದ ನೀರವ ಬೀದಿಗಳತ್ತ ನೆಟ್ಟಿದ್ದವು. ಅಲ್ಲಿಗೆ ಪೊಲೀಸ್‌ ಪೇದೆ ಹೋಗುವುದಕ್ಕೂ ಆ ವ್ಯಕ್ತಿ ತನ್ನ ಸಿಗಾರ್‌ಅನ್ನು ಉರಿಸಲು ಹೊರಡುವುದಕ್ಕೂ ಸರಿ ಹೋಯ್ತು. ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಾಯ್ದರು. ಪೇದೆ `ಸಾರಿ ಸರ್‌, ಕಾಣಲಿಲ್ಲ' ಎಂದ. ಆತ ಪರವಾಗಿಲ್ಲ ಎಂಬಂತೆ ನೋಡಿ, ಪೇದೆಗೆ ಹೇಳತೊಡಗಿದ. `ನಾನು ನನ್ನೊಬ್ಬ ಗೆಳೆಯನಿಗಾಗಿ ಕಾಯ್ತಿದ್ದೇನೆ. ನಿಮಗೆ ಗೊತ್ತಾ, ಇದೊಂಥರ ವಿಚಿತ್ರ ಕೇಸ್‌' .

Monday, December 15, 2008

ದೇವಿಸೂಕ್ತ: ಸಂಧ್ಯೆಯ ವ್ಯಕ್ತ, ಅವ್ಯಕ್ತ

cಸಂಧ್ಯಾದೇವಿ. ಐವತ್ತರ ಆಸುಪಾಸಿನಲ್ಲಿ ತಮ್ಮ `ಮಾತು ಚಿಟ್ಟೆ, ಬೆಂಕಿ ಬೆರಳು, ಮುರಿದ ಮುಳ್ಳಿನಂತೆ ಜ್ಞಾನ' ಎಂಬ ಕವಿತೆಗಳ ದೊಡ್ಡ ಹಣತೆ ಹಿಡಿದು ಕನ್ನಡ ಸಾಹಿತ್ಯ ಲೋಕವನ್ನು ಥಟ್ಟನೆ ಬೆಳಗಿಸಿದವರು.
ತಾವಿಬ್ಬ ಸ್ತ್ರೀಯಾಗಿ ಸ್ತ್ರೀಪರ ಕವಿತೆಯನ್ನೇ ಬರೆಯಬೇಕೆಂಬ ಹಠವಿಲ್ಲದ, ಹೆಣ್ಣು ಮಗಳ ಕವಿತೆಯಾದ ಕಾರಣ `ಸ್ವಲ್ಪ ರೋಚಕವಾಗಿರೋಣ, ಜನ ಓದುತ್ತಾರೆ' ಎಂಬ ಲೋಲುಪತೆ ಇಲ್ಲದ, ಕವಿ ಎಂದ ಕೂಡಲೇ ಘೋಷಣೆ ನಡೆಯಲಿ ಎಂಬ ಹಪಾಹಪಿ ಇಲ್ಲದ, ಕನ್ನಡದ ಅಪರೂಪದ ಕವಯಿತ್ರಿ ಸಂಧ್ಯಾದೇವಿ. `ನಾದದ ಕಡಲಲ್ಲಿ ತೇಲುವ ನಾನೊಂದು ಹಡಗು' ಎಂದು ಬರೆದ ಸಂಧ್ಯಾದೇವಿ ಅವರು ಇದೀಗ ಹೊಸ ಸಂಕಲನ `ಅಗ್ನಿದಿವ್ಯ'ದೊಂದಿಗೆ ಹಾಜರಾಗಿದ್ದಾರೆ.
ಅವರ ಕವಿತೆಗಳನ್ನು ಹೆಚ್ಚು ಹೆಚ್ಚು ವಿಶ್ಲೇಷಿಸಿ ಮೂಗು ತೂರಿಸುವ ಬದಲು ಓದಿ, ಅನುಭವಿಸುವ ಕಾಯಕವಷ್ಟೇ ನಮ್ಮದಾಗಲಿ. ಇಲ್ಲಿ ಅವರ ಸಂಕಲನದ ಕೆಲವು ಸವಿ ಸಾಲುಗಳಿವೆ. ಪ್ರಕಟಿಸಿದ್ದು `ಅಭಿನವ'ದ `ಪಿ. ಪಿ. ಗೆಳೆಯರ `ಅಂಕಣ' ಬಳಗ ಮಾಲೆ'. ಬೆಲೆ ಮೂವತ್ತು ರೂಪಾಯಿ. ಸಂಕಲನದ ಶಾಶ್ವತ ಆನಂದಕ್ಕಾಗಿ ಕೊಂಡು ಓದಿ:
*`...ಇದೀಗ ಇಲ್ಲಿದೆ ಅಚ್ಚರಿ:/ ಬಣ್ಣಗಳ ಮೇಳದಲ್ಲಿ/ ವೇಷ ಕಳಚಿದವ/ ಎಣ್ಣೆ ಹಚ್ಚಿ/ ಬಣ್ಣ ತೆಗೆದವ/ ಚೌಕಿಯಲ್ಲಿ ಒಬ್ಬನಾದರೂ ಇದ್ದೇ ಇದ್ದಾನು'
ಮತ್ತು
...`ಸತ್ತಂತಿದ್ದಾನೆ' ಎನ್ನುತ್ತಾರೆ ಕೆಲವರು/ ಮೂಡರು/ `ಇಲ್ಲ ಇಲ್ಲ'/ ಈಗಷ್ಟೇ ಅಮೃತ ಕುಡಿದು/ ಕಣ್ಣು ಮುಚ್ಚಿ ಕೂತಿದ್ದಾನೆ/ ಎನ್ನುವರು ತಿಳಿದವರು' (ಜಾತ್ರೆಯಲ್ಲಿ ಜ್ಞಾನಿ)

*...ಆಡಿ ಆಡಿ/ ಕಾಣದ ಆಟ/ ಬರೀ ಉಸಿರಾಟ/ ವ್ಯರ್ಥ ಹೋರಾಟ/ ಈ ಜಗವೊಂದು ತೆರೆದ ಕ್ರೀಡಾಂಗಣ/ ಸರ್ವಭೂತಾಂತರಾತ್ಮನಿಗೆ' (ಉಸಿರು ಅಥವಾ ಪ್ರಾಣ)

*...ಸ್ಥಾವರ ಜಂಗಮ ವನಸ್ಪತಿ/ ಪಶುಪಕ್ಷಿ ಪಾಶಾಣ/ ಯಾವ ಯೋನಿಯಲ್ಲಿ ಯಾವ ಶರೀರ/ ಆಯ್ಕೆಯ ಸ್ವಾತಂತ್ರ್ಯ ಯಾರಿಗಿದೆ?/ ಸೃಷ್ಟಿ ಚಕ್ರದಲ್ಲಿ/ ನಮ್ಮನ್ನು ನಿಲ್ಲಿಸಿ/ ಗಿರ್ರನೆ ಒಮ್ಮೆ ಸುಮ್ಮನೆ ತಿರುಗಿಸಿ/ ಯಾವಾಗ ನಿಲ್ಲಿಸುವೆಯೋ ಯಾರಿಗೆ ಗೊತ್ತಿದೆ?/ ಮರಳಿ ಮತ್ತೆಲ್ಲಿ/ ಯಾವ ದೇಶದಲ್ಲಿ/ ಯಾವ ರೂಪದ ಯಾವ ದೇಹದಲ್ಲಿ/ ಯಾವಾಗ ಹುಟ್ಟಿಸುವೆಯೋ? (ಅಂತಿಮ ನಿರ್ಧಾರ)

*... ಕಂಡದ್ದು ಸುಳ್ಳಲ್ಲ/ ಕಾಣದಿದ್ದದ್ದು ಇಲ್ಲವೆಂದಲ್ಲ/ ಆತ್ಮನ ಅಸ್ತಿತ್ವ/ ಕಂಡೂ ಕಾಣದಂತಿರುವುದು..../ಬಿಂಬವಿದ್ದರೆ ಇದ್ದೇ ಇದೆ ಪ್ರತಿಬಿಂಬ/ ಅದಕ್ಕಾಗಿಯೇ ಇದೆ ಎನ್ನುವರು/ ದೇಹವೆಂಬ ಮಾಧ್ಯಮ (ಮಾಧ್ಯಮ)

***
ಅಂದಹಾಗೆ ಇಲ್ಲಿನ ಎಲ್ಲಾ ಕವಿತಾಪುಷ್ಪಗಳಿಗೆ ಇರುವ ಅಧ್ಯಾತ್ಮದ ಎಸಳಿಗೆ ಕಾರಣವೆಂದರೆ ಇಲ್ಲಿನ ಎಲ್ಲಾ ಕವಿತೆಯನ್ನೂ `ಕಠೋಪನಿಷತ್‌'ನ ಶ್ಲೋಕದ ಆಧಾರದಲ್ಲಿ ಬರೆಯಲಾಗಿದೆ. ಒಂದು ಲೆಕ್ಕದಲ್ಲಿ ಅದರ ಭಾವಾನುವಾದವಾದರೂ `ಕಠೋಪನಿಷತ್‌' ಅನ್ನು ಕವಯಿತ್ರಿ ತಮ್ಮ ನೆಲೆಯಲ್ಲಿ, ಇಹ- ಪರದ ನಡುವಲ್ಲಿ ಗ್ರಹಿಸಿದ್ದನ್ನು ಕವಿತೆಯಾಗಿಸಿದ್ದಾರೆ. ಆ ಬಗ್ಗೆ ಅವರು ಪುಸ್ತಿಕೆಯ ಬೆನ್ನಿನಲ್ಲಿ ಬರೆದುಕೊಂಡಿರುವುದು ಹೀಗೆ:
`ಇದು ಕಠೋಪನಿಷತ್‌ ಮಂತ್ರಗಳ ಅಕ್ಷರಶಃ ಅನುವಾದವಲ್ಲ. ಮಂತ್ರಗಳ ಅರ್ಥವನ್ನು ಬಿಡಿಸಿಟ್ಟು ಪದ್ಯ ಕಟ್ಟುವುದು ನನ್ನ ಉದ್ದೇಶವೂ ಅಲ್ಲ. ಇದೇನೆಂದರೆ: ಮಂತ್ರಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆ.

Sunday, December 14, 2008

ದಿವಂಗತ ಶ್ರೀಸಾಮಾನ್ಯ!

IND20109Bಸಿದಾಂತಗಳ ಕತ್ತಿಗೆ ಶ್ರೀಸಾಮಾನ್ಯ ಕತ್ತು ಕತ್ತರಿಸಿಹೋಗುತ್ತಿದೆ. ಭಯೋತ್ಪಾದಕ ದಾಳಿ, ನಕ್ಸಲೀಯ ವಾದ, ಎಲ್‌ಟಿಟಿಇ- ಎಂಬ ಹೆಸರಿನ, ರಕ್ತ ಹರಿಸುವುದೇ ಉದ್ದೇಶವಾದ ನಾನಾ ಸಿದಾಂತಗಳ ಜಗತ್ತಿನಲ್ಲಿ ಒಬ್ಬ ಮಾಮೂಲಿ ಮನುಷ್ಯ ಈಗ ನೆಮ್ಮದಿಯಾಗಿ ನಿದ್ರಿಸಲಾರ. ಹೊರಗೆ ಹೋದ ಗಂಡ, ಹೆಂಡತಿ, ಶಾಲೆಗೆ ಹೋದ ಕಂದಮ್ಮಗಳು ಸುರಕ್ಷಿತವಾಗಿ ವಾಪಾಸು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. `ಕೊನೆಗೊಂಡಿತೋ ಓರ್ವೋರ್ವರ ಗರ್ವದ ಕಾಲ, ಇದು ಸರ್ವರ ಕಾಲ' ಎಂದು ಕುವೆಂಪು `ಶ್ರೀಸಾಮಾನ್ಯಗೀತೆ'ಯನ್ನು ಬರೆದರು. ಆದರೆ ಶ್ರೀಸಾಮಾನ್ಯನ ಗೀತೆ ಇದೀಗ ವಿಷಾದ ರಾಗದಲ್ಲೇ ಕೇಳಿಬರಲು ಪ್ರಾರಂಭವಾಗಿದೆ.
(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ  14-12-2008ರಂದು ಪ್ರಕಟವಾದ ಲೇಖನ)

ಉಗ್ರವಾದ, ನಕ್ಸಲ್‌ ಸಿದಾಂತ ಎನ್ನುತ್ತಾ ಒಂದಿಷ್ಟು ವರ್ಗಗಳು ಕಂಬನಿಯ ಕುಯಿಲಿಗೆ ಹೊರಟಿವೆ. ಆ ಸಮಗ್ರ ಕುಯಿಲಿನ ಕುಡುಗೋಲಿಗೆ ಗೋಣಾಗುತ್ತಿರುವವನ ಹೆಸರು: ಶ್ರೀಸಾಮಾನ್ಯ. ಈತನದು ಯಾವ ದೇಶ, ಯಾವ ಭಾಷೆ, ಯಾವ ವರ್ಗ, ಯಾವ ಲಿಂಗ, ಯಾವ ಕೋಮು, ಯಾವ ಧರ್ಮ ಎಂಬ ಪ್ರಶ್ನೆಗಲ್ಲಿ ಅರ್ಥವಿಲ್ಲ, ಕುಡುಗೋಲು ಪಿಡಿದವಗೆ ಅದು ಮುಖ್ಯವೂ ಅಲ್ಲ. ಎಲ್ಲಾ ಸಿದಾಂತಕ್ಕೂ ತನ್ನನ್ನು ತಾನು ಪ್ರಯೋಗಿಸಿಕೊಳ್ಳಲು ಒಂದು ನವಿರಾದ, ಪ್ರತಿಭಟನೆ ಮಾಡದ, ಬೇರೆ ದಾರಿ ಕಂಡುಕೊಳ್ಳಲಾರದ ಗೋಣು ಬೇಕು.
ಈ ಗೋಣು ಯಾವಾಗಲೂ ಯಾವುದಕ್ಕೂ ಸುಲಭದಲ್ಲಿ ಶರಣು. ಆತನಿಗೆ ಈ ಸಿದಾಂತಗಳ್ಯಾವುದೂ ಗೊತ್ತಾಗುವುದಿಲ್ಲ. ಅಗ್ರಿಮೆಂಟ್‌ ಫಾರ್ಮ್‌ ಅನ್ನು ಓದದೇ ಸೈನ್‌ ಮಾಡಿಬಿಡುವಂತೆ ಈ ಸಿದಾಂತಗಳಿಗೂ ಆತ ಮುಗತೆಯಿಂದ ಬದ.

Tuesday, December 9, 2008

`ನನ್ನಪ್ಪ ಸಾಯದೇ ಇರುತ್ತಿದ್ದರೆ...'

princess02ಮುಂಬೈಯ ಎಷ್ಟು ಮನೆಗಳು ಯಜಮಾನರನ್ನು, ಯಜಮಾನರು ತಮ್ಮ ಹೆಂಗಸರನ್ನು, ಹೆಂಗಸರು ಮಕ್ಕಳನ್ನು, ಮಕ್ಕಳು ಅಪ್ಪ ಅಮ್ಮಂದಿರನ್ನು, ಅಮ್ಮಂದಿರು ಬಂಧು ಬಳಗವನ್ನು ಕಳೆದುಕೊಂಡಿವೆಯೋ- ಗೊತ್ತಿಲ್ಲ. ನಾವು ಸಿದಾಂತವನ್ನು, ನೀತಿಯನ್ನು, ಕ್ರೌರ್ಯವನ್ನೂ ಮಾತಾಡುತ್ತಾ, ಲೇಸ್‌ ತಿನ್ನುತ್ತಾ ಟೀವಿ ನೋಡುತ್ತಾ ಕುಳಿತಿದ್ದೇವೆ.
ಬ್ಲಾಗ್‌ಗೆ ಯಾವುದೇ ಹೊಸ ವಿಚಾರವನ್ನೂ ಹಾಕಲು ಮನಸ್ಸಾಗುತ್ತಿಲ್ಲ. ಏನೇ ವಿಚಾರ ಬಂದಾಗಲೂ ಮತ್ತೆ ಹೊಗೆಯಾಡುತ್ತಿರುವ ಮುಂಬೈ, ಓಡುತ್ತಿರುವ ಭಯಭೀತ ಕಾಲುಗಳು, ಸಂದೀಪ್‌ ಉನ್ನಿಕೃಷ್ಣನ್‌, ಆಸ್ಪತ್ರೆಯ ಹೆಣಗಳು, ಹರಿದುಕೊಂಡು ಬಿದ್ದ ಚಪ್ಪಲಿಗಳು ಕಣ್ಣಿಗೆ ಕಟ್ಟುತ್ತಿವೆ.
ಹಿಂದೆ ಅಮೆರಿಕಾ ಅವಳಿ ಕಟ್ಟದ ಮೇಲೆ ಆದ ಬಾಂಬ್‌ ದಾಳಿಯಲ್ಲೂ ಹೀಗೇ ಆಗಿತ್ತು, ಸುನಾಮಿಯಲ್ಲೂ ಹೀಗೇ. ಆದರೆ ಅದಕ್ಕೂ ಹಿಂದೆ ಹಿರೋಷೀಮಾ, ನಾಗಸಾಕಿಯಲ್ಲಿ ಹೀಗೇ ಆಗಿತ್ತಲ್ಲಾ? ಒಂದು ಕಾಲದ ಆ ದುರಂತ ಈಗಲೂ ಮತ್ತಷ್ಟು ಹತಭಾಗ್ಯರನ್ನು ಹಡೆಯುತ್ತಲೇ ಇದೆ. ಮಕ್ಕಳಿಗೆ ಅಪ್ಪ ಇಲ್ಲದೇ, ತಮ್ಮನಿಗೆ ತಂಗಿಯಿಲ್ಲದೇ ಈಗ ಹಿರೋಷಿಮಾದಲ್ಲಿ ಹಡೆದ ಮಕ್ಕಳ ಬಾಯಲ್ಲೆಲ್ಲಾ ಪ್ರಶ್ನೆಗಳೇ.
ಅಲ್ಲಿನ ಶಾಲಾ ಮಕ್ಕಳು ಬರೆದ ಒಂದಿಷ್ಟು ಕವಿತೆಗಳನ್ನು ಓದಿದರೆ ಕರುಳು ಕಿವುಚುತ್ತದೆ. ಅಂಥ ಮೂರು ಕವಿತೆಗಳ ಭಾವಾನುವಾದ ಇಲ್ಲಿವೆ, ಓದಿ.

Saturday, December 6, 2008

ಕಾಪಾಡು ಶ್ರೀ ಡಿಸೆಂಬರ್‌ ಮಾರಾಯನೇ

hands-folded-in-prayerಈ ಡಿಸೆಂಬರ್‌ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿದೆ. ಭಯೋತ್ಪಾದಕ ಕೃತ್ಯಗಳಿಂದಾಗಿ ಯಾರೂ ನೆಮ್ಮದಿಯಾಗಿ ಆಫೀಸಿಗೆ, ಸಿನಿಮಾಕ್ಕೆ, ಶಾಪಿಂಗ್‌ಗೆ ಹೋಗುತ್ತಿಲ್ಲ. ಚಿತ್ರಮಂದಿರಗಳಿಗೆ, ಮಾಲ್‌ಗಳಿಗೆ ವ್ಯಾಪಾರವಿಲ್ಲ. ಜನ ಸಂಚಾರದಲ್ಲಿ ಒಂದು ಬಗೆಯ ದುಗುಡ.
ಎಲ್ಲಕ್ಕೂ ಮುಖ್ಯವಾಗಿ ಡಿಸೆಂಬರ್‌ ಮಹಾ ಚಳಿಯ ತಿಂಗಳು. ಬೆಂಗಳೂರಿನಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇದ್ದಂತಿಲ್ಲ. ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು. ಆಮೇಲೆ ಬಿಸಿಲಿಗೆ ಮೈ, ಕೈ ಒಡೆದುಕೊಂಡು ಇಡೀ ದಿನ ದೂಡಬೇಕು. ಸಂಜೆಯಾಗುತ್ತಲೇ ಬಹಳ ಬೇಗ ಆವರಿಸಿಕೊಳ್ಳುತ್ತದೆ ಕತ್ತಲು. ಸಂಜೆ ರಾತ್ರಿಯಲ್ಲಿ ಸೇರಿಕೊಂಡು ಯಾವುದು ಸಂಜೆ, ಯಾವುದು ರಾತ್ರಿ ಎಂದೇ ಗುರುತಿಸುವುದು ಕಷ್ಟ. ಹೀಗಾಗಿ ಚಳಿ ನಮ್ಮೆಲ್ಲರನ್ನೂ ಮಂಕಾಗಿಸುತ್ತಿದೆ, ಮೂಡ್‌ ಹಾಳು ಮಾಡುತ್ತಿದೆ.
ಹಿಂದೊಮ್ಮೆ ನವೆಂಬರ್‌ ತಿಂಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯ ನಡೆದದ್ದು ಅಮೆರಿಕಾದ ಅವಳಿ ಕಟ್ಟಡದ ಮೇಲೆ. ಅಲ್ಲಿಂದ ಶುರುವಾದ ಭಯ ಬೆಳೆಯುತ್ತಲೇ ಇದೆ. ಈ ನವೆಂಬರ್‌ನಲ್ಲಂತೂ ಮುಂಬೈ ಭಯೋತ್ಪಾದಕ ಕೃತ್ಯ ಇಡೀ ದೇಶವನ್ನು ನಡುಗಿಸಿದೆ. ಇನ್ನಷ್ಟು ದಾಳಿಯ ಭೀತಿ ಎಲ್ಲಾ ಕಡೆ ಇರುವುದರಿಂದ ಈ ಡಿಸೆಂಬರ್‌ ಆ ಭಯದಲ್ಲೇ ತಿಂಗಳು ದೂಡುವ ಅನಿವಾರ್ಯತೆ ಇದೆ. ಡಿಸೆಂಬರ್‌ ತಿಂಗಳಲ್ಲೇ ಬಾಬ್ರಿ ಮಸೀದಿ ಮೇಲೆ ದಾಳಿ ನಡೆದಿದ್ದರಿಂದ ಆ ಬಗ್ಗೆ ಭೀತಿ ಮುಂದುವರಿದಿದೆ. ಆ ಘಟನೆಯ ನೆನಪು ಸಹಜವಾಗಿ ಒಂದು ತಳಮಳವನ್ನು ಸಣ್ಣಗೆ ಹುಟ್ಟು ಹಾಕಿದೆ.
`ಆವುದೋ ಭಯ ಎಂಥದೋ ಭಯ' ಎಂಬ ಸಾಲಿನ ಗೀತೆಯೊಂದು ಪು. ತಿ. ನರಸಿಂಹಾಚಾರ್‌ ಅವರ `ಗೋಕುಲ ನಿರ್ಗಮನ' ಗೀತ ನಾಟಕದಲ್ಲಿ ಬರುತ್ತದೆ. ಹಾಗೆಯೇ ಈ ಡಿಸೆಂಬರ್‌ನಲ್ಲಿ ನಮ್ಮೆಲ್ಲರಿಗೂ ಕೂಡ ಆವುದೋ ಭಯ. ಮೇಲಕಾರಿಗಳು ಉದ್ಯೋಗಿಯನ್ನು ಚೇಂಬರ್‌ಗೆ ಕರೆದರೆ ಕೆಲಸ ಕಳೆದುಬಿಡುತ್ತಾರೋ ಎಂಬ ಭಯ. ನಮ್ಮ ಏರಿಯಾದಲ್ಲಿ ಯಾವುದೋ ಪಟಾಕಿ ಸಿಡಿದರೆ ಬಾಂಬ್‌ ಇಟ್ಟರೋ ಎಂಬ ಭಯ. ಬೆಂಗಳೂರಿನಲ್ಲಿರುವ ಮಗ/ ಮಗಳು ಊರಲ್ಲಿರುವವರ ಸಂಪರ್ಕಕ್ಕೆ ಎರಡು ದಿನ ಸಿಗಲಿಲ್ಲವೆಂದರೆ ಊರಲ್ಲಿ ಅಪ್ಪ, ಅಮ್ಮಂದಿರಿಗೆ ಆತಂಕ. ಆಫೀಸಿನಿಂದ ಗಂಡ ಬರುವುದು ಸ್ವಲ್ಪ ತಡವಾದರೆ ಹೆಂಡತಿಗೂ, ಮಗ/ಗಳು ಶಾಲೆ, ಕಾಲೇಜಿನಿಂದ ಬರುವುದು ಸ್ವಲ್ಪ ತಡವಾದರೂ ಅಪ್ಪ- ಅಮ್ಮನಿಗೆ ಜೀವವೇ ಬಾಯಿಗೆ ಬಂದ ಹಾಗೆ.
ಬಿವಿ ಕಾರಂತರು `ಗೋಕುಲ ನಿರ್ಗಮನ'ವನ್ನು ರಂಗ ರೂಪಕ್ಕಿಳಿಸಿದಾಗ ಕೊನೆಯಲ್ಲಿ ಒಂದು ದೃಶ್ಯ ತಂದಿದ್ದರು. ಗೋಕುಲ ತೊರೆದು ಹೋದ ಕೃಷ್ಣನಿಗಾಗಿ ಎಲ್ಲರೂ ದೀಪ ಇಟ್ಟುಕೊಂಡು ಕಾಯುತ್ತಾ ಮರಳಿ ಬರುವಂತೆ ಪ್ರಾರ್ಥಿಸಿ ಹಾಡುತ್ತಾರೆ. ಹಾಗೇ ನಾವೆಲ್ಲಾ ಹಾಡಬೇಕು, ನಮ್ಮನ್ನು ಕಾಪಾಡಲು ಬರಲಿರುವ ಆವುದಾದರೂ ಶಕ್ತಿಗಾಗಿ, ನಮ್ಮನ್ನು ಬಿಟ್ಟು ಹೋಗಲಿರುವ ಭೀತಿಗಾಗಿ, ನಮ್ಮನ್ನು ಮತ್ತೆ ಆವರಿಸಿಕೊಳ್ಳಲಿರುವ ನೆಮ್ಮದಿಗಾಗಿ, ನಮ್ಮವರು ರಾತ್ರಿ ಮನೆಗೇ ಬರಬೇಕೆಂಬ ಬೇಡಿಕೆಗಾಗಿ, ಕೆಲಸ ಕಳೆದು ನಿರ್ಗತಿಕರನ್ನಾಗಿ ಮಾಡಬಾರದೆಂಬ ಅಪೇಕ್ಷೆಗಾಗಿ, ರಸ್ತೆ, ಮನೆ, ಶಾಲೆ, ಹೊಟೇಲ್‌, ರೈಲ್ವೇ ನಿಲ್ದಾಣ, ರೈಲುಗಳು ರಕ್ತಸಿಕ್ತವಾಗಬಾರದೆಂಬ ಕಾಳಜಿಗಾಗಿ.

Monday, December 1, 2008

ಇದೀಗ ಬಂದ ಪ್ರತಿಕ್ರಿಯೆ

ಪ್ರಿಯ ವಿಕಾಸ,

IND2771Bಮುಂಬೈ ದುಷ್ಕೃತ್ಯದ ಹಿನ್ನೆಲೆಯಲ್ಲಿ ಹೃದಯದಿಂದ ಮಾತನಾಡಿದ್ದೀರಿ. ಹಾಗೆಂದೆ ನನ್ನ ಹೃದಯವೂ ಹಗರಾಗಿದೆ, ಆತಂಕದ ಸಂದರ್ಭದಲ್ಲಿ ಅಪ್ಪಿಕೊಳ್ಳುವಷ್ಟು. ಆ ಎರಡು ದಿನ ಒಳಗೊಳಗೆ ಅತ್ತವನು ನಾನು. ಇಸ್ಲಾಮಿನ ಹೆಸರಿನಲ್ಲಿ ಮನುಷ್ಯವಿರೋಧಿ ರಕ್ಕಸರು ಮಾಡಿದ ಹೇಯ ಕೃತ್ಯವದು. ಅವರು ತಮ್ಮನ್ನು ಇಸ್ಲಾಮಿಯರು ಎಂದು ಭ್ರಮಿಸಿಕೊಂಡಿದ್ದಾರೆ. ಅವರಷ್ಟೆ ಅಲ್ಲಾ, ಹಾಗೇ ಯೋಚಿಸುವ ಮತಾಂಧರು ಆಳದಲ್ಲಿ ಸೈತಾನರೇ ಆಗಿರುತ್ತಾರೆ. ಇಂತಹ ಕಲ್ಪಿತ
ಜೆಹಾದ್‌ನಲ್ಲಿ ಸತ್ತು ಸ್ವರ್ಗ ಸೇರುತ್ತೇನೆಂಬ ಭ್ರಮೆ ಅವರಿಗಿದ್ದರೆ ನಂಬದಿದ್ದರೂ ನಾನು ಹೇಳುತ್ತೇನೆ. ಅವರು ನರಕಕ್ಕೆ ಮಾತ್ರ ಯೋಗ್ಯರು. ಧರ್ಮದಮಲಿನ ಮತ್ತನ್ನು ನೆತ್ತಿಗೆರಿಸಿಕೊಂಡ ಹಿಂದೂ, ಮುಸ್ಲಿಂ ಇತ್ಯಾದಿ ಅತಿರೇಕಗಳೇ ಚರಿತ್ರೆಯಿಂದ ಇವರೆಗೂ ರಾಕ್ಷಸರನ್ನು ಸೃಷ್ಠಿಸಿರುವುದು. ದೇಶಭಕ್ತಿ, ಧರ್ಮ ಭಕ್ತಿಗಳ ತೋರುಗಾಣಿಕೆಯ ಹಿಂದಿನ ಅಧಿಕಾರ ರಾಜಕಾರಣ ಇಂತಹ ಮತಾಂಧ ಸಾಮಾಜಿಕತೆಯನ್ನು ಸೃಷ್ಠಿಸುತ್ತದೆ. ಜಿನ್ನಾ, ಗೊಲ್ವಾಲ್ಕರ ಮೊದಲಾದವರ
ಚಿಂತನೆಗಳಲ್ಲಿ ಇವತ್ತಿನ ಸಂದರ್ಭದ ಬೀಜಗಳಿವೆ. ಜಿನ್ನಾ ಧಾರ್ಮಿಕನಾಗಿರಲಿಲ್ಲ. ಆದರೆ ಧಾರ್ಮಿಕವೆಂಬ ದೇಶವನ್ನು ಸೃಷ್ಠಿಸಿದ, ಅದು ಶುದ್ಧ ಸ್ಮಶಾನದ ಮೇಲೆ. ಪಾಕಿಸ್ತಾನ ನಿಜಕ್ಕೂ ಬೇಯುತ್ತಿರುವುದೇ ಖಬರಸ್ತಾನ ಮೇಲೆ. ಇತ್ತ ಕಡೆ ಚಿಂತನಗಂಗಾದ ಮಾರ್ಗದರ್ಶನದಲ್ಲಿ ಹಿಂದೂ ಮತೀಯ ರಾಷ್ಟ್ರೀಯ ನಿರ್ಮಾಣಕ್ಕೆ ಗೊಡ್ಸೆ ಮಾಡಿದ್ದು ಅದನ್ನೆ.
ನನಗೀತ ಭಾರತದ ಧಾರ್ಮಿಕ ಭಯೋತ್ಪಾದನೆಯ ಸಂಸ್ಥಾಪಕನೆಂದು ಕಾಣುತ್ತಾನೆ. ಈ ಯಾವ ಅರಿವಿಲ್ಲದೆ ಭಯೋತ್ಪಾದನೆ ಎಂದರೆ ಮುಸ್ಲಿಂರು ಎನ್ನುವುದು. ಮಕ್ಕಳನ್ನು ಹಡೆದು ಜನಸಂಖ್ಯೆ ಹೆಚ್ಚುಸುತ್ತಿದ್ದಾರೆ ಎನ್ನುವುದು. ನೆಮ್ಮದಿಯಿಂದ ದುಡಿದು ಬದುಕುತ್ತಿರುವ ನಿಷ್ಪಾಪಿ ಮುಸ್ಲಿಂರನ್ನು ಸಾಮೂಹಿಕವಾಗಿ ಶಂಕಿಸುವಂತೆ ಹಿಂದೂ ದೇಶಭಕ್ತಿಯ ಸನ್ನಿ ಸೃಷ್ಠಿಯಾಗುತ್ತಿರುವುದು ಇದು ಇನ್ನೊಂದು ಬಗೆಯ ಅತಿರೇಕದ ಅಪಾಯ.
ಲದ್ದಿಜೀವಿಗಳೆಂದು ಲೇವಡಿ ಮಾಡುವುದು, ನಕಲಿ ಜಾತ್ಯಾತೀತರೆನ್ನುವುದು ಇಂತಹ ಬಳಕೆಗಳ ಹಿಂದೆ ವಿವೇಕವನ್ನು ಸಮೂಹ ಸನ್ನಿಯ ಕೈಗೆ ಒಪ್ಪಿಸಿದ ಆಪಾಯವಿದೆ. ಇಂತಹ ಸಂದರ್ಭದಲ್ಲಿ ಇಸ್ಲಾಂ ಕಾಫಿರರನ್ನು ಕೊಲ್ಲು ಎನ್ನುತ್ತದೆ ಇತ್ಯಾದಿ... ಇಸ್ಲಾಮಿನ ಅಪವ್ಯಾಖ್ಯಾನ ಓದಿನ ಕೊರತೆಗಿಂತ ರಾಜಕೀಯ ಅಪಪ್ರಚಾರವೇ ಆಗಿರುತ್ತದೆ.
ಕುರಾನ ಆಗಲಿ, ಭಗವದ್ಗೀತೆಯಾಗಲಿ ಇವತ್ತಿನ ಸಮಸ್ಯೆಗಳಿಗೆ ಉತ್ತರಿಸುತ್ತವೆ ಎನ್ನುವುದೇ ಮೂರ್ಖತನ. ಈ ಮೂರ್ಖರು ಎದರುಬದರು ನಿಂತು ಗುಜರಾತನ್ನು, ಮುಂಬೈಯನ್ನು ಭಯೋತ್ಪಾದಕ ನಕಾಶೆಯಲ್ಲಿ ಗುರುತಿಸಿದ್ದಾರೆ. ಮುಖ್ಯವಾದದ್ದನ್ನು ಹೇಳಿ ಮುಗಿಸುತ್ತೇನೆ. ಈ ಹೊತ್ತಿನ ದುರಂತ ಮತ್ತು ಆಪಾಯವೆಂದರೆ ಭಯೋತ್ಪಾದನೆಯ ವಿರೋಧದ ನೆಪದಲ್ಲಿ ಮುಸ್ಲಿಂ ಜನಸಮುದಾಯ ವಿರೋಧಿ, ಹಿಂದೂ ರಾಜಕಾರಣಕ್ಕೆ ಪೂರಕವಾಗಿ ನಮ್ಮ ಕೆಲ ಬರಹಗಾರ ಮಿತ್ರರು ಆವೇಶವನ್ನು
ಅಪವ್ಯಾಖ್ಯಾನವನ್ನು, ಸುಳ್ಳನ್ನು ಪರಿಣಾಮದಲ್ಲಿ ಅಮೇರಿಕಾದ ಸಾಮ್ರಾಜ್ಯಷಾಹಿ ಏಜೆಂಟರಾಗಿ ಬರಹಕ್ಕೆ ಇಳಿದಿರುವುದು. ಲಾಡೆನ ಬೆಳೆದಿದ್ದು ಹೀಗೆಯೇ, ಅಂತೆಯೇ ಇಂದಿನ ಇಂಡಿಯಾದ ಸೋಕಾಲ್ಡ ಹಿಂದೂ ದೇಶಭಕ್ತ (ನಿಜ ಹಿಂದೂವಲ್ಲದ) ಪತ್ರಕರ್ತರು ಇವರ ಅಪ್ರೋಚ ಬಗ್ಗೆ ನನಗೆ ಖೇದವಿದೆ. ಲಷ್ಕರೆ ಕ್ರಿಮಿಗಳಿಗೂ, ಗೊಡ್ಸೆ, ಮುತಾಲಿಕ ಮೊದಲಾಗಿ ಯಾವ ವ್ಯತ್ಯಾಸವೂ ಆಳದಲ್ಲಿ ಇಲ್ಲ.
ಥ್ಯಾಂಕ ಯೂ ವಿಕಾಸ. ಬರೆಯುತ್ತಾ ದೊಡ್ಡದಾಯಿತು. ನನ್ನದೆಯೂ ಕುದಿಯುತ್ತಿದೆ. ಈ ದೇಶ ತಣ್ಣಗಾಗಿಸಲು.
ಹಿಂದೂ, ಮುಸ್ಲಿಂ ಅತಿರೇಕಗಳಿಂದ ಹೊರ ಬಂದು ಯೋಚಿಸಲು ಸಾಕಷ್ಟು ಇದೆ. ಇಲ್ಲದಿದ್ದರೆ ಭಯೋತ್ಪಾದನೆಯನ್ನು ಖಂಡಿತ ನಿವಾರಿಸಲು ಆಗದು.
ಅಮೇರಿಕಾದ ಗಿಡುಗ ನಮ್ಮ ನೆತ್ತಿಯ ಮೇಲೆ ಹಾರುತ್ತಲೇ ಇದೆ. ಇಂಡಿಯಾದ ಅಸ್ತಿತ್ವದ ಸೂತ್ರವೇ ಇದರ ಪಂಜಿನಲ್ಲಿ ಸಿಕ್ಕು ಹಾಕಿಕೊಂಡಿರುವಾಗ ಕವಿ, ಪತ್ರಕರ್ತ, ಬರಹಗಾರರ ವಿವೇಕ ಸರಿದಾರಿಗೆ ಬರಬೇಕಿದೆ.
ನಿಮ್ಮೊಳಗಿನ ಪ್ರಾಮಾಣಿಕ ಮಿಡಿತಕ್ಕೆ, ಮಾನವೀಯತೆ ಜೊತೆ ನಾನಿದ್ದೇನೆ ವಿಕಾಸ ಕೈಚಾಚಿ ನನ್ನೊಂದಿಗೆ.
ನಿಜ ಹೇಳಲೇ ಆಸರೆಯೂ ಬೇಕಿದೆ ಈ ಹೊತ್ತು. ಬೀಸಿ ಬರುವ ಕಲ್ಲುಗಳಿಂದ ಮರೆಯಾಗಲು, ಮನುಷ್ಯತ್ವದ ತಾಣಬೇಕಿದೆ ನನ್ನಂತವರಿಗೆ.
- ಬಿ. ಪೀರಭಾಷ

ಬಾಂಬು, ಬುಲೆಟ್ಸ್‌, ಭಗವದ್ಗೀತೆ!

IND3092B`ಕಳ್ಳ ಕುಳ್ಳ'ನ ಮನೆಯಲ್ಲಿ ಎರಡು ದಿನಗಳ ಹಿಂದೆ ಬರೆದ `ತೊಳೆಯಲಿ ರಕ್ತ ತೊಡೆಯಲಿ ಕಣ್ಣೀರು' ಲೇಖನಕ್ಕೆ ಮಿಶ್ರ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಆ ಎಲ್ಲಾ ಪ್ರತಿಕ್ರಿಯೆಯಲ್ಲೂ ಭಯೋತ್ಪಾದನೆಗೆ ಒಕ್ಕೊರಲಿನ `ಕ್ಕಾರ' ವ್ಯಕ್ತವಾಗಿದೆ ಎನ್ನುವುದು ಸಮಾಧಾನಕರ. ಆದರೆ ಒಂದು ಮಾತು, ಮುಂಬೈ ಸೇರಿದಂತೆ ಅನೇಕ ಕಡೆ ಇಷ್ಟು ವರ್ಷಗಳಿಂದ ನಡೆದುಕೊಂಡೇ ಬಂದ ಭಯೋತ್ಪಾದಕ ದಾಳಿಗೆ ಆ ಲೇಖನ ಒಂದು ಪ್ರತಿಕ್ರಿಯೆಯಾಗಿತ್ತು ಅಷ್ಟೇ.
ಆದರೆ ಇಲ್ಲಿ ಕೆಲವು ಅಂಶಗಳನ್ನು ಸ್ಪಷ್ಟಪಡಿಸಬೇಕು. ಒಂದು, ಮುಸ್ಲಿಂ ಸಮುದಾಯದ ಮೇಲೆ ಇರುವ ಅನುಮಾನ ಅಮಾನವೀಯ ಎನ್ನುವುದು. ಈ ಮಾತುಗಳನ್ನು ಕೆಲವರ ಸಣ್ಣ ಆಕ್ಷೇಪದೊಂದಿಗೆ ನೋಡಿಯಾರು. ಆದರೆ ಒಂದಂತೂ ಸತ್ಯ. ಭಯೋತ್ಪಾದಕತೆಯನ್ನು ಎಲ್ಲರೂ ಒಕ್ಕೊರಲಿನಿಂದ ವಿರೋಸಬೇಕು. ಭಯೋತ್ಪಾದನೆ ನಿಗ್ರಹಕ್ಕೆ ಕಾನೂನಿನ, ರಕ್ಷಣಾ ತಂತ್ರ ಮಟ್ಟದ ಪರಿಹಾರ ಸಿಗಬೇಕು. ಹಾಗಂತ ಭಯೋತ್ಪಾದನೆ ಎನ್ನುವ ಒಂದು `ಹಿಂಸಾನಿಲುವಿ'ಗೆ ಯಾವುದೇ ಕೋಮನ್ನು ಆರೋಪಿಸುವುದು ಸರಿಯಾದ ಅಭಿಪ್ರಾಯ ಅಲ್ಲ. ಒಂದು ಊರಲ್ಲಿ ಭ್ರೂಣ ಹತ್ಯೆ ಜಾಸ್ತಿ ಆಯಿತು ಎಂದ ಕೂಡಲೇ ಆ ಊರಲ್ಲಿರುವ ಹೆಂಗಸರೆಲ್ಲಾ `ಶಿಶುಹತ್ಯೆ' ಮಾಡುವವರು, ಕಟುಕರು ಎಂದು ಅಭಿಪ್ರಾಯಪಡುವಂತಿಲ್ಲ. ಯಾಕೆಂದರೆ ಅಲ್ಲಿರುವ ಹೆಂಗಸರಲ್ಲಿ ನಿಮ್ಮ ಅಮ್ಮನೂ ಇರಬಹುದಲ್ಲಾ?

Friday, November 28, 2008

ತೊಳೆಯಲಿ ರಕ್ತ, ತೊಡೆಯಲಿ ಕಣ್ಣೀರು

IND2760Bಸಾಮಾನ್ಯ ಜನರ ಸಾವು, ಕಮಾಂಡೋಗಳ ವೀರ ಮರಣ ಮತ್ತು ಆತಂಕವಾದಿಗಳ ಹತ್ಯೆ.
`ಮೂರು ವರ್ಗ'ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ'ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
IND27164Bಮುಂಬಯಿ, ಬೆಂಗಳೂರು, ದೆಹಲಿ, ಹೀಗೆ ದೊಡ್ಡ ದೊಡ್ಡ ನಗರಗಳಲ್ಲಿ ವ್ಯಾಪಕವಾಗಿ ತಲೆ ಎತ್ತಿರುವ ಭಯೋತ್ಪಾದಕತೆ ಒಂದು ಲೆಕ್ಕದಲ್ಲಿ ಪರಸ್ಪರ ದ್ವೇಷದ ಕತೆ ಅಷ್ಟೇ. `ಮುಸ್ಲೀಮರಿಗೆ ಯಾವುದೇ ತೊಂದರೆಯಾಗಬಾರದು' ಎಂದು ಎಚ್ಚರಿಕೆ ನೀಡಲು ಮೊನ್ನೆಯ `ಬ್ಲ್ಯಾಕ್‌ ವೆಡ್ನೆಸ್‌ಡೇ' ಕಾರ್ಯಾಚರಣೆ ನಡೆಯಿತು ಎಂಬ ಮಾತನ್ನು ಭಯೋತ್ಪಾದಕ ಸಂಘಟನೆಗಳು ಹೇಳಿವೆ. ಇತ್ತೀಚಿನ ಸ್ವಾ ಪ್ರಕರಣ `ಹಿಂದೂ ಭಯೋತ್ಪಾದನೆ'ಯನ್ನು ಪ್ರತಿಪಾದಿಸಿತು. ಅಲ್ಲಿಗೆ ದ್ವೇಷಕ್ಕೆ ದ್ವೇಷದ, ಹಿಂಸೆಗೆ ಹಿಂಸೆಯ ಉತ್ತರವೇ ಸಾಗಬೇಕಾಗುತ್ತದೆ. ಇದೇ ತೀವ್ರಗೊಂಡರೆ ಮುಂದೊಂದು ದಿನ ಉಳಿಯುವುದು ಶಾಂತಿಯಲ್ಲ, ಹೊರತಾಗಿ ಅಲ್ಲಿ ಉಳಿಯುವುದು ದ್ವೇಷ ಮಾತ್ರ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ' ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ' ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ'ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್‌ ನ್ಯೂಸ್‌' (ಸುದಿ ಸೋಟ) ಎನ್ನುವುದು `ಬ್ಲಾಸ್ಟ್‌ ನ್ಯೂಸ್‌' ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.

Tuesday, November 25, 2008

ಪತ್ರಕರ್ತನ ಪತ್ರಕತೆ



[caption id="attachment_183" align="aligncenter" width="500" caption="ಚಿತ್ರ: ಮನೋಹರ್‌"]ಮನೋಹರ್‌[/caption]

ಸುರೇಶ್‌ ಕೆ `ಉದಯವಾಣಿ'ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ' ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್‌ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್‌.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್‌ ಅಚಾನಕ್‌ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್‌ ಲೇಖನಕ್ಕೆ ಬಂದು ನಿಂತಿರುವ ನಮ್ಮ ಕುಶಲವಿನಿಮಯ ಪ್ರತಿಭೆ, ಸಂಬಂಧಗಳ ಅರ್ಥವನ್ನೇ ಸಂಕುಚಿತಗೊಳಿಸಿರಬಹುದಾದ ಸಾಧ್ಯತೆ ಇದೆ. `ಒಂದಿಷ್ಟು ವ್ಯಾವಹಾರಿಕ ಪತ್ರಗಳ ನಡುವೆ ಒಂದು ಹಸಿರು ಅಂತರ್ದೇಶಿ ಪತ್ರ ಇದ್ದರೆ ಒಣ ತರಗೆಲೆಯ ನಡುವೆ ಒಂದು ಹಸಿರು ಎಲೆ ಸಿಕ್ಕಷ್ಟು ಖುಷಿಯಾಗುತ್ತದೆ' ಎಂದು ಲೇಖಕ ಜಯಂತ ಕಾಯ್ಕಿಣಿ ಬರೆದಿದ್ದರು.
ಅಂಥ ಅಂತರ್ದೇಶಿ ಪತ್ರಗಳ ಸಂಭ್ರಮದ ದಿನಗಳಲ್ಲೇ ಹುಟ್ಟಿ ಬೆಳೆದು ಬಂದ ಸುರೇಶ್‌, `ಕಾಗದ ಬಂದಿದೆ' ಕತೆಯ ಮೂಲಕ ಸಂಬಂಧಕ್ಕಿರುವ ಅನೇಕ ಸೂಕ್ಷ್ಮಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ನಾವು `ಕಳ್ಳಕುಳ್ಳ' ಬ್ಲಾಗ್‌ನಲ್ಲಿ ಈಗಷ್ಟೇ ಪ್ರಾರಂಭಿಸಿರುವ `ತಿಳಿಯ ಹೇಳುವೆ ಇಷ್ಟಕತೆಯನು' ಮಾಲಿಕೆಯಲ್ಲಿ `ಕಾಗದ' ಕತೆಯನ್ನು ಪ್ರಕಟಿಸುತ್ತಿದ್ದೇವೆ. ಓದಿ.

ಅಲ್ಲಿ ನಿಂತರೆ ಅಪ್ಪ, ಇಲ್ಲಿ ನಿಂತರೆ ನಾವು



[caption id="attachment_180" align="aligncenter" width="500" caption="ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ"]ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ[/caption]

ದೊ
ಡ್ಡ ಮನೆಯಲ್ಲಿ ಅಪ್ಪ ಇದ್ದಾನೆ. ಅವನ ಸಂಗಡ ಅವನ ಕೊನೆಯ ಮಗ ಇದ್ದಾನೆ. ಅಪ್ಪನಿಗೆ ಆ ಹಳೆಮನೆಯ ಮಾಸಲು ಗೋಡೆಗಳ ಮಧ್ಯೆ ಬದುಕಿದರೆ ಮಾತ್ರ ಜೀವ ಆಡುತ್ತದೆ. ಅವನ ಕೊನೆಯ ಮಗನಿಗೆ ಸಂಗೀತ ಎಂದರೆ ಪ್ರಾಣ. ಗಂಡ ತೀರಿಕೊಂಡ ನಂತರ ಅಪ್ಪನ ಮನೆಯಲ್ಲೇ ಉಳಿದಿರುವ ಹೆಣ್ಣು ಮಗಳೊಬ್ಬಳು ಈ ಹುಡುಗನಿಗೆ ಸಂಗೀತಪಾಠ ಮಾಡುತ್ತಾಳೆ. ಆದರೆ ಅವಳ ತಮ್ಮನಿಗೆ ಇದು ಸರಿಬರುವುದಿಲ್ಲ. ಆ ತಮ್ಮ ಯಾವುದೋ ಬಿಸಿನೆಸ್‌ ಎಂದು ಓಡಾಡುತ್ತಾನೆ. ಮೊಬೈಲ್‌ ತೆಗೆದುಕೊಂಡು, ಅಪ್ಪ ಅಮ್ಮನಿಗೆ ಅದನ್ನು ತೋರಿಸಿ `ನೋಡು ಈ ಅಡುಗೆ ಮನೆಯಲ್ಲೂ ನೆಟ್‌ವರ್ಕ್‌ ಎಷ್ಟು ಚೆನ್ನಾಗಿ ಸಿಗುತ್ತದೆ ನೋಡು. ಅಷ್ಟೂ ಕಡ್ಡಿ ಇದೆ' ಎಂದು ತೋರಿಸಿ ಮನೆಯವರನ್ನು ತಬಜಿಲ್‌ ಮಾಡುತ್ತಾನೆ. ಕಾರಿಗಾಗಿ ಸಾಲ ಮಾಡುತ್ತೇನೆ, ಒಂದಿಪ್ಪತ್ತೈದು ಸಾವಿರ ಕೊಡು ಎಂದು ದುಂಬಾಲು ಬೀಳುತ್ತಾನೆ.

ತೀರ್ಥಹಳ್ಳಿ ಸಮೀಪದ ಯಾವುದಾದರೂ ಹಳ್ಳಿಯಲ್ಲಿ ಆ ಕತೆ ಸಾಗುತ್ತಿದೆ.

ಇತ್ತ ಪಟ್ಟಣ. ಲ್ಯಾಪ್‌ಟಾಪ್‌, ಸ್ಟೆತೋಸ್ಕೋಪ್‌, ಮೊಬೈಲ್‌, ಕರೆನ್ಸಿ, ಬ್ರೇಕ್‌ಫಾಸ್ಟ್‌, ಡಿನ್ನರ್‌ಗಳ ಜಗತ್ತಲ್ಲಿ ಎಲ್ಲರಿಗೂ ಹಗಲಾಗುತ್ತದೆ, ಇರುಳಾಗುತ್ತದೆ. ಅಪ್ಪನನ್ನು ದೂರದ ಹಳ್ಳಿಯಲ್ಲಿ ಬಿಟ್ಟು ಬಂದಿರುವ ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆಯಂದಿರು `ಅಣ್ಣ(ಅಪ್ಪ)ನಿಗೆ ಆರೋಗ್ಯ ಹ್ಯಾಗಿದೆಯೋ' ಎಂದು ಆತಂಕಿತರಾಗುತ್ತಾರೆ. ಅತ್ತ ವಿಧುರ ಅಪ್ಪನಿಗೆ ಈ ಮಕ್ಕಳ ಮೇಲೆ ಸಿಟ್ಟು. ತಮ್ಮನ್ನು ಬಿಟ್ಟು ಪೇಟೆ ಸೇರಿಕೊಂಡಿದ್ದಾರೆಂಬ ಅಸಹನೆ. ಅವರು ಫೋನ್‌ ಮೂಲಕವೋ, ಖುದ್ದಾಗಿಯೋ ವಿಚಾರಿಸಿಕೊಂಡಾಗೆಲ್ಲಾ ಅಪ್ಪ ರೇಗಾಡುತ್ತಾನೆ. ನಿದ್ದೆ ಮಾತ್ರೆ ತೆಗೆದುಕೊಂಡು ಮಧ್ಯಾಹ್ನ ಸಮೀಪಿಸಿದರೂ ಏಳದೇ, ಕೋಣೆಯ ಬಾಗಿಲು ಬೇರೆ ಹಾಕಿಕೊಂಡು ಮಕ್ಕಳ ಹೆದರಿಕೆಗೆ ಕಾರಣನಾಗುತ್ತಾನೆ.

Friday, November 21, 2008

ಒಂದು ಅನಾಮಧೇಯ ಮನವಿ

seedಈ ಜಗತ್ತು
ಇಷ್ಟು ಸಂವತ್ಸರಗಳ ಕಾಲ
ಬದುಕಿಕೊಂಡಿರಲು
ಕಾರಣವಾದ
ಒಂದು ಸಣ್ಣ ಉಸಿರಂತೆ
ನಾನು ಬದುಕಲು
ಬಯಸುತ್ತೇನೆ-
ಸದ್ದಿಲ್ಲದೇ, ಸುದ್ದಿಯೇ ಆಗದೇ
ಗದ್ದಲದ ನಡುವೆ ಜಾಗ ಕಂಡುಕೊಂಡ
ಮೌನದಂತೆ...

ಆದರೆ ನಾಗರಿಕ ಬದುಕಿಗೆ
ನಾನು ತಾಗಿಕೊಳ್ಳಬೇಕೆಂದರೆ
ಅಡ್ರಸ್‌ ಪ್ರೂಫ್‌ ಕೇಳುತ್ತಾರೆ,
ನನಗೇನೋ ಕಳಿಸಿಕೊಡಲು
ನನ್ನ ಅಡ್ರಸ್‌ ಬರೆದುಕೊಳ್ಳುತ್ತಾರೆ,
ನಾನು ಮತ ಹಾಕುತ್ತಿದ್ದೇನಾ
ಎಂದು ಗೆಳೆಯರು ವಿಚಾರಿಸುತ್ತಾರೆ.

Wednesday, November 19, 2008

ಅಂತೂ ಇಂತೂ ಕತೆ ಬಂತು!

[caption id="attachment_170" align="alignleft" width="360" caption="ಚಿತ್ರಕೃಪೆ: ಫ್ಲಿಕರ್‌"]ಫ್ಲಿಕರ್‌[/caption]

`ಕಳ್ಳಕುಳ್ಳ' ಬ್ಲ್ಯಾಗ್‌ನ ಸಹವರ್ತಿ ಚೇತನ್‌ ನಾಡಿಗೇರ್‌ ಹಿಂದೊಮ್ಮೆ ಇದೇ ಬ್ಲ್ಯಾಗ್‌ನಲ್ಲಿ `ನೀನಾನಾದ್ರೆ ನಾನೀನೇನಾ' ಎಂಬ ಕತೆಯೊಂದನ್ನು ಬರೆದಿದ್ದರು. ಕತೆ ಬರೆಯುವ ಸಾಮರ್ಥ್ಯ ಇದ್ದೂ ಬರೆಯದ ವ್ಯಕ್ತಿಗಳಲ್ಲಿ ಚೇತನ್‌ ಒಬ್ಬರು. ಅನೇಕ ಕತೆಯ ಎಳೆಯನ್ನು ತಮ್ಮ ಸ್ನೇಹಿತರ ಬಳಿ ಆಗಾಗ ಹೇಳುತ್ತಾ, `ಬರೆದುಬಿಡುತ್ತೇನೆ, ಬರೆದೇಬಿಡುತ್ತೇನೆ' ಎಂದು ಹೆದರಿಸುವ ಇವರು, ಇತ್ತೀಚೆಗೆ ಹಾಗೇ ಹೇಳಿ, ಹೆದರಿಸಿ ಅನಂತರ ಕತೆಯೊಂದನ್ನು ಬರೆದುಕೊಂಡೇ ಬಂದು ಅಚ್ಚರಿ ಮೂಡಿಸಿದ್ದಾರೆ.
ಈ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟಕತೆಯನು' ಮಾಲಿಕೆಯ ಮೊದಲ ಕತೆಯಾಗಿ ಚೇತನ್‌ಬರೆದ `ಗುರುವಿನ ಗುಲಾಮನಾಗುವತನಕ'ವನ್ನು ಪ್ರಕಟಿಸಲಾಗುತ್ತದೆ. ವ್ಯಂಗ್ಯವೇ ಕತೆಯಾಗಿರುವ ಇದು ತನ್ನ ಲಲಿತಗುಣದಿಂದ, ಅದೆಷ್ಟೋ `ಆಡದ ಮಾತು'ಗಳಿಂದ ಇಷ್ಟವಾಗಬಹುದು. ಅಂದಹಾಗೆ ಮುಂದೆ ಈ ಮಾಲಿಕೆಯಲ್ಲಿ ಹೀಗೇ ಕತೆ ಪ್ರಕಟಗೊಳ್ಳುತ್ತಾ ಹೋಗುತ್ತದೆಂಬುದನ್ನು ನಿರೀಕ್ಷಿಸಲಡ್ಡಿಯಿಲ್ಲ. ಈ ಕತೆಗೆ ನಿಮ್ಮ ಪ್ರತಿಕ್ರಿಯೆ ಸದಾ ಇರಲಿ. ಇನ್ನು ನೀವು ಮತ್ತು ನಮ್ಮೀ `ಗುರು'ಕತೆ.



ಒಂದು ಕ್ಷಣ ಬೆಚ್ಚಿ ಬಿದ್ದರು ಸುಭದ್ರಮ್ಮ!
ಅವರೆಂದೂ ತನ್ನ ಮಗನ ಬಾಯಲ್ಲಿ ಅಂಥ ಮಾತು ಕೇಳಿರಲಿಲ್ಲ ಅಥವಾ ಅವನು ಹಾಗೆ ಪ್ರತಿಕ್ರಿಯಿಸಬಹುದು ಎಂದು ಯೋಚಿಸಿರಲಿಲ್ಲ. ಮನೆ ಮುರಿಯುವ ಮಾತೋ ಆಸ್ತಿ ಮಾರುವ ಮಾತೋ ಆಗಿದ್ದರೆ... ಅವರು ಅರಗಿಸಿಕೊಳ್ಳುತ್ತಿದ್ದರೇನೋ? ಆದರೆ ವತ್ಸ ಆಡಿದ್ದು ಬೇರೆಯದೇ ಮಾತು. ಅಲ್ಲಿಂದ ಸುಭದ್ರಮ್ಮ ಮುಂಚಿನಂತಿರಲಿಲ್ಲ. ಅವರ ಜೀವನವೇ ಬದಲಾಗಿ ಹೋಯಿತು. ಅವರ ಯೋಚನೆಯೇ ಬೇರೆಯಾಯಿತು. ಯಾಕೋ ಶ್ರೀವತ್ಸ ಕ್ರಮೇಣ ಬದಲಾಗುತ್ತಿದ್ದಾನೆ ಎಂದನಿಸಿತು. ತಮ್ಮಿಂದ ಕೈ ಜಾರುತ್ತಿದ್ದಾನೆಂದು ಕೊರೆಯುತ್ತಿತ್ತು. ಅದೆಲ್ಲಾ ಇತ್ತೀಚಿನ ಮಾತು...

Tuesday, November 18, 2008

ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ



jogula



ಜೋಗುಳ ಎನ್ನು­ವುದು ಒಂದು ಅತ್ಯಂತ ಮಾನ­ವೀಯ ಕಲ್ಪನೆ. ಅಮ್ಮ ತನ್ನ ಕೈ ಬಳೆ ಸದ್ದಿನ ಲಯದ ಮೂಲಕ ಮಗು­ವಿನ ಉಸಿ­ರಾ­ಟದ ಲಯ­ವನ್ನು ಮಾತಾ­ಡಿ­ಸುವ ಪರಿ ಅದು. ಅಲ್ಲಿ ಅಮ್ಮನ ಮಮತೆ, ಮಗು­ವಿನ ಅರ್ಪ­ಣಾ­ಭಾವ, ವಾತಾ­ವ­ರ­ಣದ ತಾದಾತ್ಮ್ಯ, ಮಗುವಿನ ನೆತ್ತಿಯ ಸುವಾ­ಸ­ನೆ­ಗಳು ಒಂದಾ­ಗು­ತ್ತವೆ. ಪ್ರತಿ ಹೆಣ್ಣಿಗೂ ತಾಯ್ತನ ವರ, ಪ್ರತಿ ಮಗು­ವಿಗೂ ಜೋಗುಳ ವರ.
ಹಾಗೆ ನೋಡಿ­ದರೆ ಜೋಗುಳ ಎಲ್ಲರ ಎದೆ­ಯೊ­ಳ­ಗಿ­ರುವ ಒಂದು ಆಕಾ­ರ­ವಿ­ಲ್ಲದ ಭಾವ. ಅಲ್ಲಿ ರಾಗ­ಜ್ಞಾನ ಚೆನ್ನಾ­ಗಿ­ರ­ಬೇ­ಕಾ­ಗಿಲ್ಲ, ಸಾಹಿ­ತ್ಯದ ಹಂಗಿಲ್ಲ, ಜೋಗುಳ ಹಾಡು­ವು­ದನ್ನು ಯಾರಾ­ದರೂ ಮೆಚ್ಚಿ ಅಭಿ­ನಂ­ದಿ­ಸಲಿ ಎಂಬ ಅಪೇ­ಕ್ಷೆ­ಯಿಲ್ಲ. ತನ್ನ ಕರು­ಳಿನ ಕೊಡು­ಗೆ­ಯನ್ನು ಅಮ್ಮ ಮಲ­ಗಿ­ಸು­ತ್ತಾಳೆ, ಮಲ­ಗಿ­ಸು­ತ್ತು­ನು­ನುನು' ಅಂತ ಹಾಡು­ತ್ತಾಳೆ, ರಾಗ ಬದ­ಲಾ­ದು­ದನ್ನೂ ಗಮ­ನಿ­ಸ­ದಾ­ಗು­ತ್ತಾಳೆ. ಇಲ್ಲಿ ಬೇಕಾ­ಗಿ­ರು­ವುದು ಎರಡು ಮನ­ಸ್ಸ­ಗಳ ನಡು­ವಿನ ಒಂದು ಭಾವ ಮಾತ್ರ.

ಅಷ್ಟೇ ಆಲ್ಲ, ಜೋಗುಳ ತಾಯ್ತ­ನದ ಪ್ರತೀಕ. ಮಗು ಹುಟ್ಟಿ ಬೆಳೆ­ಯು­ವ­ರೆಗೆ ಆಮ್ಮ ಜೊಗುಳ ಹೇಳು­ತ್ತಾಳೆ. ಜೋಗುಳ ಕೇಳಿ ಮಗು ಬೆಳೆದು, ಜೋಗು­ಳ­ವನ್ನು ಮರೆ­ಯ­ಬ­ಹುದು. ಒಂದು ಕಾಲ­ಕ್ಕೆ­ಅ­ಮ್ಮನ ಜೋಗು­ಳಕ್ಕೆ ಹಠ ಮಾಡು­ತ್ತಿದ್ದ ಮಗ/ಳು ನಿಧಾ­ನ­ವಾಗಿ ಬದು­ಕಿನ ಕುಲು­ಮೆ­ಯಲ್ಲಿ ಬದ­ಲಾ­ಗುತ್ತಾ ಹೋಗು­ತ್ತಾನೆ/ಳೆ. ಆಗ ತನ್ನ ಮಗ/ಳು ತನ್ನ ಅಂತ್ಯ­ಕಾ­ಲದ ಹೊತ್ತಿಗೆ ಹಾಡ­ಬ­ಹು­ದಾದ ಮೌನ ಜೋಗು­ಳ­ಕ್ಕಾಗಿ ಕಾಯು­ತ್ತಾಳೆ ಅಮ್ಮ. ತನ್ನ ಕೆನ್ನೆಯ ಮೇಲೆ ನೇವ­ರಿ­ಸುವ ತನ್ನ ಕುಡಿಯ ಕೈಗಾಗಿ ಅಮ್ಮ ಈ ಜಗದ ತೊಟ್ಟಿ­ಲಲ್ಲಿ ಮಲಗಿ ಮೌನ­ವಾಗಿ ಅಳು­ತ್ತಾಳೆ.
ಅಮ್ಮ­ನಿಗೆ ಮಗು ತಾಯಿ
ಮಗುವೇ ಆಮ್ಮನ ಕಾಯಿ!
***
ಇದೀಗ ಅಮ್ಮನ ರೀತಿ ಬೇರೆ, ಮಗು­ವಿನ ರೀತಿ ಬೇರೆ. ಜೋಗುಳ ಇಲ್ಲೀಗ ಇನ್ನಷ್ಟು ಸಾಂಕೇ­ತಿಕ. ಬೇಬಿ­ಸಿ­ಟಿಂ­ಗ್‌­ನಲ್ಲಿ ತನ್ನ ಮಗು­ವನ್ನು ಬಿಟ್ಟ ಆಮ್ಮ, ಗಡಿ­ಬಿ­ಡಿ­ಯಲ್ಲಿ ಕಂದ­ನನ್ನು ಮುದ್ದಿಸಿ ಹೊರ­ಟರೆ ಅದೇ ಮಗು­ವಿನ ಪಾಲಿನ ಜೋಗುಳ. ರಾತ್ರಿ ಆಯಾಳ ಕೈಯಲ್ಲಿ ಮಗು­ವನ್ನು ಬಿಟ್ಟು ಗಂಡ, ಹೆಂಡತಿ ನೈಟ್‌ ಶಿಫ್ಟ್‌ಗೆ ಹೊರಟು ನಿಂತಾಗ ಮಗು­ವಿ­ನೆಡೆ ಆ ಪೋಷ­ಕರು ಎಸೆದ ಒಮದು ಮಮ­ತೆಯ ನೋಟವೇ ಆ ಮಗು­ವಿನ ಪಾಲಿಗೆ ಜೋಗುಳ. ಸರೋ­ಗೇಟ್‌ ಮದರ್‌, ಸಿಂಗಲ್‌ ಪೇರೆಂ­ಟಿಂಗ್‌ ಎಂಬೆಲ್ಲಾ ತಂತ್ರ­ಜ್ಞಾ­ನ­ಪ್ರೇ­ರಿತ ತಾಯ್ತ­ನದ ಜಗತ್ತಲ್ಲಿ ಮನೆ ಮನೆಯ ರಾಮ, ಕೃಷ್ಣ, ಚಂದ್ರ­ಹಾ­ಸರು ದಿಕ್ಕೆಟ್ಟು ನೋಡು­ತ್ತಿ­ದ್ದಾರಾ? ಮಡಿ­ಲಲ್ಲಿ ಮಗು ನಲಿಯೇ, ನಲಿದ ಮಗುವೂ ಮಡಿ­ಲಲ್ಲಿ ನಿಲ್ಲದೇ ಯಶೋದೆ, ದೇವ­ಕಿ­ಯರು ಕಂಗಾ­ಲಾ­ಗಿ­ದ್ದಾರಾ?

ತಾಯ್ತ­ನದ ಹಲವು ಮುಖ­ಗ­ಳನ್ನು ಹೊತ್ತ ಧಾರಾ­ವಾ­ಹಿ­ಯೊಂದು ಇದೇ ನವೆಂ­ಬರ್‌ 24ರಿಂದ ಝೀ ಚಾನ­ಲ್‌ನಲ್ಲಿ ಪ್ರಸಾ­ರ­ವಾ­ಗು­ತ್ತಿದೆ. `ಪ್ರೀತಿ ಇಲ್ಲದ ಮೇಲೆ' ಎಂಬ ಜನ­ಪ್ರಿಯ ಧಾರಾ­ವಾ­ಹಿಯ ಚುಕ್ಕಾಣಿ ಹಿಡಿ­ದಿದ್ದ ವಿನು ಬಳಂಜ ಅವರೇ ಈ ಧಾರಾ­ವಾ­ಹಿಯ ನಿರ್ದೇ­ಶಕ. ಹೆಸರು: ಜೋಗುಳ. `ನ­ಚಿ­ಕೇತ್‌' ಬರೆದ ಕತೆಗೆ ಚಿತ್ರ­ಕತೆ ಸಿದ­­ಪ­ಡಿ­ಸಿ­ರು­ವ­ವರು ಪತ್ರ­ಕರ್ತ ಸತ್ಯ­ಮೂರ್ತಿ ಆನಂ­ದೂರು. ಕರ್ನಾ­ಟಕ ಶಾಸ್ತ್ರೀಯ ಸಂಗೀತ ಪರಂ­ಪ­ರೆಯ ದೊಡ್ಡ ವಿದ್ವಾಂಸ ಆನೂರು ಅನಂ­ತ­ಕೃಷ್ಣ ಶರ್ಮ (ಶಿವು) ಈ ಧಾರಾ­ವಾ­ಹಿಗೆ ಸಂಗೀತ ನೀಡುವ ಮೂಲಕ ಕಿರುತೆ­ರೆಗೆ ಕಾಲಿ­ಟ್ಟಿ­ದ್ದಾರೆ. 24ರಿಂದ ಸೋಮ­ವಾ­ರ­ದಿಂದ ಶುಕ್ರ­ವಾ­ರ­ದ­ವ­ರೆಗೆ ರಾತ್ರಿ 8.30ಕ್ಕೆ ಪ್ರಸಾ­ರ­ವಾಗುವ ಈ ಧಾರಾ­ವಾ­ಹಿಯ ಶೀರ್ಷಿಕೆ ಗೀತೆ­ಯನ್ನು ಬರೆ­ದಿದ್ದು ವಿಕಾಸ ನೇಗಿ­ಲೋಣಿ.
ಆದರ ಪೂರ್ಣ­ಪದ್ಯ ಇಲ್ಲಿದೆ:
ಭಾವ­ಗಳ ತೊಟ್ಟಿ­ಲಲ್ಲಿ ಮನಸೇ ಮಗು­ವಾಗಿ
ಲಾಲಿಯ ಹಾಡಲಿ ಜಗ­ವೆಲ್ಲಾ
ಜೋಜೋ ಜೋಜೋ...

ಕಿಲ­ಕಿಲ ನಗು­ವಿನ ಶ್ಯಾಮನೇ
ತೆರೆ­ಸಲಿ ಹೃದ­ಯದ ಕಣ್ಣನೇ
ಮನೆ ಮನದ ಕನ­ಸಾಗು
ಕನಸೇ ನೀ ಉಸಿ­ರಾ­ಗು
ಕನ­ಸಿನ ತೇರಲಿ ಬಯ­ಕೆ­ಗಳ ಆಗ­ಮನ
ಪಯ­ಣದ ದಾರಿ­ಯಲಿ ಹೆಜ್ಜೆ ಹೆಜ್ಜೆಯೂ ರೋಮಾಂ­ಚ­ನ
ಎಲ್ಲರ ಎದೆ­ಯೊ­ಳಗೆ ಮಗು­ವೊಂದು ಮಲ­ಗಲಿ
ಸದ್ದು ಮಾಡದೇ ಅಮ್ಮ ಮುದ್ದಿ­ಸಲಿ
ಜೋ ಜೋ ಎಂದರೆ ಕಂದ­ನಿಗೆ ಸವಿ­ಹಾಲು
ಜೋಗು­ಳದ ಪ್ರೀತಿ­ಯಲಿ ಎಲ್ಲ­ರಿಗೂ ಸಮ­ಪಾಲು
ಕಿರು­ಗೆಜ್ಜೆ ಲಜ್ಜೆಗೆ ಜೋ ಜೋ
ಬೆಳೆಯೋ ಹೆಜ್ಜೆಗೆ ಜೋ ಜೋ

Friday, November 14, 2008

ನೋವುಗಳ ದಾರದಲಿ ಸುರಿದ ಮುತ್ತು

hoffman11ಯುದ್ಧ- ಶಾಂತಿಯ ವಿರುದ್ಧದ ಪದ. ಯುದಕ್ಕೆ ಮೊದಲು ಉತ್ಸಾಹ, ನಡೆದಾದ ಮೇಲೆ ಅನಾಥ ಪ್ರಜ್ಞೆ. ಈಗ ಜಗತ್ತು ಯಾವುದೇ ಘೋಷಿತ ಯುದ್ಧದಿಂದ ಬಳಲುತ್ತಿಲ್ಲವಾದರೂ ನಡೆಯುತ್ತಿರುವ ಜಗತ್ತಿನ ಪ್ರತಿ ವಿಪ್ಲವಗಳೂ ಒಂದು ರೀತಿಯಲ್ಲಿ ಯುದ್ಧದ ರೂಪವೇ ಆಗಿ ಕಾಣುತ್ತಿವೆ.
ಯುದ್ಧಾನಂತರದ ಕುರುಕ್ಷೇತ್ರದ ಕುರಿತು ಕುವೆಂಪು `ಸ್ಮಶಾನ ಕುರುಕ್ಷೇತ್ರ' ಬರೆದರು. ಜಗತ್ತಿನ ಯಾವುದೇ ಯುದ್ಧ ಮುಗಿಯಲಿ, ಅಲ್ಲಿ ನಮಗೆ ಕಾಣುವುದು `ಸ್ಮಶಾನ ಕುರುಕ್ಷೇತ್ರ'. ಆದರೆ ಜಗತ್ತು ಎಷ್ಟು ಯುದ್ಧಗಳನ್ನು ಕಂಡಿಲ್ಲ? ಎಷ್ಟು ಯುದ್ಧಗಳ ನಂತರ ಅದೆಷ್ಟು ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡಿಲ್ಲ? ಅಂಥ ನಿರ್ವಸಿತ, ಮಮತೆವಂಚಿತ, ದಿಕ್ಕುಗೆಟ್ಟ ಶಿಶುಗಳ ಹಣೆಯ ಮೇಲೆ, ಕಣ್ಣೀರಿಗೆ ಮಾತ್ರ ಜಾಗವಿರುವ ಅವರ ಕೆನ್ನೆಯ ಮೇಲೆ, ಅತ್ತು ಅತ್ತು ಕೆಂಪಗಾದ ಕಿವಿ, ಮೂಗಿನ, ಕೊಂಕು ತುಟಿಯ ಮೇಲೆ ಯಾರಾದರೂ ನೇವರಿಕೆ ತಂದಾರೇ?
ಇರಾನಿ ಕವಿ ಆಶಿಶ್‌ ತಾಕೂರ್‌ ತನ್ನ `ಯುದ್ಧಪೀಡಿತ ಶಿಶುವಿಗೊಂದು ಓಲೆ' ಕವಿತೆಯಲ್ಲಿ ಅಂಥ ಮಕ್ಕಳನ್ನು ಪದಗಳಿಂದ ನೇವರಿಸಿದ್ದಾರೆ. `ಹವಳದ ಕುಡಿಯಂಥ ಅಳುವ ಕಂದನ ತುಟಿ'ಗೆ ಸಾಂತ್ವನದ ಗುಟುಕು ಹನಿಸಿದ್ದಾರೆ. ಆ ಕವಿತೆಯ ಭಾವಾನುವಾದ ಇಲ್ಲಿದೆ.

Thursday, November 13, 2008

ಕತೆ ಹೇಳುವೆ, ಕೇಳುವಂತವನಾಗು



[caption id="attachment_158" align="aligncenter" width="500" caption="ಚಿತ್ರಕೃಪೆ: ಪ್ರದೀಪ್‌ ರಘುನಾಥನ್‌"]ಪ್ರದೀಪ್‌ ರಘುನಾಥನ್‌[/caption]

ಈ ದಾರಿ ಸುಸ್ತು ಕಡಿಮೆ ಮಾಡಲು ನಿನಗೆ ನಾನೊಂದು ಕತೆ ಹೇಳುತ್ತೇನೆ.
ಹೀಗೆ ನಮ್ಮ ಅನೇಕ ಜನಪದ ಕತೆಗಳು ಶುರುವಾಗುತ್ತವೆ. ಗಿಳಿ ಕತೆ ಹೇಳಿದ್ದು, ಬೇತಾಳ ಕತೆ ಹೇಳಿದ್ದು ನಮಗೆಲ್ಲಾ ಗೊತ್ತು.
ಆದರೆ ಇಲ್ಲಿ ಸ್ವಲ್ಪ ತಾಂತ್ರಿಕವಾಗಿ ಅಪ್‌ಡೇಟ್‌ ಆಗಿ `ಬ್ಲಾಗ್‌' ಕತೆ ಹೇಳುತ್ತದೆ. ಕಳ್ಳಕುಳ್ಳ ಬ್ಲಾಗ್‌ನ `ತಿಳಿಯ ಹೇಳುವೆ ಇಷ್ಟ ಕತೆಯನು' ಮಾಲಿಕೆಯಲ್ಲಿ ಕತೆ ಶುರುವಾಗುತ್ತದೆ ಎಂದು ನಿನ್ನೆ ಹೇಳಲಾಗಿತ್ತಲ್ಲಾ, ಹೌದು ಕತೆ ಶುರುವಾಗುತ್ತದೆ.
ಅದಕ್ಕಾಗಿ ಚಕ್ಕಳಮಕ್ಕಳ ಹಾಕಿಕೊಂಡು ಕುಳಿತುಕೊಳ್ಳಿ. ಕತೆ ಹೇಳುವವರು ಈಗ ರೆಡಿ ಆಗುತ್ತಿದ್ದಾರೆ. ನೆಟ್‌ ಡೌನ್‌ ಇದ್ದರೆ, ಮಂತ್ರಿಗಳು ಉದ್ಘಾಟನೆಗೆ ತಡವಾದರೆ, ಬಸ್‌ ಬರಬೇಕಾಗಿದ್ದು ಇನ್ನೂ ಬಸ್‌ಸ್ಟ್ಯಾಂಡ್‌ಗೆ ಬರದಿದ್ದರೆ, ಸಿಗ್ನಲ್‌ ಬಿಟ್ಟರೂ ತಾಂತ್ರಿಕ ಕಾರಣದಿಂದ ಟ್ರಾಫಿಕ್‌ ಪೊಲೀಸ್‌ ಆ ದಾರಿಯನ್ನು ಸುಗಮಗೊಳಿಸದಿದ್ದರೆ, ಪವರ್‌ಕಟ್‌ ಆಗಿ, ಇನ್ನೂ ಕರೆಂಟ್‌ ಬರದಿದ್ದರೆ ಕಣ್ಣರಳಿಸಿ, ತಲೆ ತುರಿಸಿಕೊಂಡು, ಕೈ ಕಾಲು ಬಡಿದು, ಬಂದೇ ಬರುತ್ತದೆ ಎಂದು ತಾಳ್ಮೆಯಿಂದ ಕಾಯುವ ನೀವು ನಮ್ಮ `ಕತೆ'ಗೂ ಕಾಯುತ್ತೀರಲ್ಲಾ?
ಇನ್ನೇನು ಬಂದೇ ಬಿಡುತ್ತದೆ, ಕತೆ.

Wednesday, November 12, 2008

ತಿಳಿಯ ಹೇಳುವೆ ಇಷ್ಟಕತೆಯನು

[caption id="attachment_155" align="aligncenter" width="500" caption="ಚಿತ್ರ ಕೃಪೆ: ರಾಬರ್ಟ್‌ ಡಾಸನ್‌"]ರಾಬರ್ಟ್‌ ಡಾಸನ್‌[/caption]

`ಎಲ್ಲರೊಳಗೂ ಒಂದೆ ಕತೆ ಇರುತ್ತದೆ' ಎಂದಿದ್ದರು ಹಿಂದೊಮ್ಮೆ ಖ್ಯಾತ ಕತೆಗಾರ ಯಶವಂತ ಚಿತ್ತಾಲ. `ಅಮ್ಮಾ ಇವತ್ತು ಶಾಲೆಯಲ್ಲಿ ಏನಾಯ್ತು ಗೊತ್ತಾ' ಎಂದು ಹೇಳುತ್ತಾ ಶಾಲೆಯಿಂದ ಕಣ್ಣರಳಿಸಿಕೊಂಡು ಓಡಿ ಬರುವ ಮಗುವಿನಲ್ಲೂ ಒಂದು ಕತೆ ಇರುತ್ತದೆ ಎಂದು ಅವರು ಒಂದು ಸಲ ಹೇಳಿದ್ದರು.
ಕತೆ ಯಾರಲ್ಲೂ ಇರಬಹುದು. ಅಂಥ ಕತೆಗಳನ್ನು ಆಗಾಗ ನೀಡುವ ಪ್ರಯತ್ನವನ್ನು `ಕಳ್ಳಕುಳ್ಳ' ಮಾಡಲಿದೆ. ಒಂದಿಷ್ಟು ರೀಮೇಕ್‌, ಒಂದಿಷ್ಟು ಸ್ವಮೇಕ್‌ ಕತೆಗಳು ಹಾಗೇ ಹರಿದು ಬರಲಿವೆ ಈ ಬ್ಲಾಗಂಗಡಿಯಲ್ಲಿ. ಆ ಮಾಲಿಕೆಯ ಮೊದಲ ಕತೆಯ ಹೆಸರು: ಗುರುವಿನ ಗುಲಾಮನಾಗುವ ತನಕ.
ಅದನ್ನು ಬರೆದವರು ಯಾರು, ಹ್ಯಾಗಿದೆ, ಎಂಥ ಕತೆ, ರೀಮೇಕಾ, ಸ್ವಮೇಕಾ ಎಂಬೆಲ್ಲಾ ಪ್ರಶ್ನೆಗಳಿಗೆ ಆ ಕತೆಯ ಪ್ರಕಟಣೆಯಲ್ಲೇ ಉತ್ತರ ಸಿಗುತ್ತದೆ.
ಕಾಯೋಣ ಕತೆ ಕೇಳೋದ್ಯಾವಾಗ ಅಂತ?

Saturday, November 8, 2008

ಬಾಲ ದಾರಿಯಲ್ಲಿ ಸೂರ್ಯ ಜಾರಿಹೋದ

slumbala2ಬೀದೀಲಿ ಬಿದ್ದೋರು, ಸದ್ದಿಲ್ಲದೇ ಇದ್ದೋರು, ಒಳಗೊಳಗೇ ಅತ್ತೋರು ನನ್ನ ಜನಗಳು...
`ನನ್ನ ಜನಗಳು' ಎಂಬ ಸಿದಲಿಂಗಯ್ಯ ಅವರ ಕವಿತೆಯಲ್ಲಿ ಬರುವ ಮೇಲ್ಕಂಡ ಸಾಲಲ್ಲಿ ಇರುವ ಸಂಕಟ ಅಸಾಧಾರಣವಾದುದು. `ಸ್ಲಂ ಬಾಲಾ' ಚಿತ್ರದಲ್ಲೂ ಆ ವೇದನೆ, ಸಂಕಟ ಇದೆ. `ಸೈಜುಗಲ್ಲು ಹೊತ್ತೋರು' ದಲಿತರಾದರೆ ಮಂತ್ರಿಗಳ ಸಾಮ್ರಾಜ್ಯಕ್ಕೆ `ಸೈಜುಗಲ್ಲಾಗಿ' ಹೋಗುವವ ಸ್ಲಂ ಬಾಲಾ. ಅವರ ರಾಜಕೀಯ ಹಾದಿಯನ್ನು ವಿರೋದಿಗಳಿಂದ ಮುಕ್ತ ಮಾಡುತ್ತಾ, ತನ್ನ `ದೊಡ್ಡೋರ' ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನೂ ಬಲಿ ಕೊಡುತ್ತಾ, ಅವರ ಚುನಾವಣಾ ಸಾಫಲ್ಯಕ್ಕಾಗಿ ಕೊಲೆಗಿಲೆ ಮಾಡುತ್ತಾ ಬಾಲಾ ಬೆಳೆಯುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕನಸಿನಿಂದ ಸಿಂಗರಿಸುತ್ತಾನೆ. `ಮೈ ಪಾರ್ವತವ್ವ, ಮೈ ಸ್ಲಂ, ಮೈ ಪೀಪಲ್‌' ಎನ್ನುತ್ತಾ ಕುಡಿದ ಮತ್ತಲ್ಲಿ ತನ್ನವರನ್ನು ಪ್ರೀತಿಸುತ್ತಾನೆ. ಹೀಗೆ ಬೆಳೆಯುತ್ತಾ ಹೋದವನು ಬಳಸಿಕೊಂಡವರಿಂದಲೇ ಹತನಾಗುತ್ತಾನೆ.

ಬಿಡುಗಡೆಯಾಗಿರುವ `ಸ್ಲಂ ಬಾಲಾ' ಅನೇಕ ಕಾರಣಕ್ಕೆ ನೋಡಲೇಬೇಕಾದ ಸಿನಿಮಾ. ಅತ್ಯಂತ ಮಂದಗತಿಯ ಚಲನೆ, ಅನೇಕ ಕಡೆ ವಸ್ತುವಿನ ನಿರ್ವಹಣೆ ವಿಚಾರದಲ್ಲಾಗಿರುವ ಔಟ್‌ ಆಫ್‌ ಫೋಕಸ್‌ ಮೊದಲಾದ ಸಮಸ್ಯೆಗಳು ಚಿತ್ರದುದ್ದಕ್ಕೂ ಕಾಡಿದರೂ ಇವೆಲ್ಲಾ ಆಕ್ಷೇಪಗಳನ್ನೂ ಮೀರಿದ ಕಾರಣಕ್ಕಾಗಿ ನಾವೆಲ್ಲಾ `ಸ್ಲಂ'ಗೆ ಒಮ್ಮೆ ಹೋಗಿ ಬರಬೇಕು. ನಾವು ದಲಿತ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ ಕಾಣುತ್ತಲೇ ಬಂದ ಶೋಷಣೆಯ ಇನ್ನೊಂದು ರಾಜಕೀಯ ರೂಪವಾಗಿ `ಬಾಲಾ' ಕಾಣುತ್ತಾನೆ.

Friday, November 7, 2008

ಕಲ್ಲು ಕಲ್ಲೆಂದೇಕೆ ಬೀಳುಗಳೆವರು?

dsc_1287-apsಶಿಲ್ಪವಾದಾಗಲೇ ಶಿಲೆಗೆ ಪಾಪ ವಿಮೋಚನೆ. ದೇವರ ಮುಡಿ ಸೇರುವುದೇ ಹೂವಿನ ನಿಜವಾದ ಮುಕ್ತಿ ಕಲ್ಪನೆ. ಮುಡಿ ಏರದ ಹೂವೂ, ಶಿಲ್ಪವಾಗದ ಕಲ್ಲೂ ಶಪಿತ ಗಂಧರ್ವರಿಗೆ ಸಮ. ಇಂಥ ಶಪಿತ ಗಂಧರ್ವ ಶಿಲಾತಪಸ್ವಿಗಳಿರುವ ಹಂಪಿಗೆ ಇತ್ತೀಚೆಗೆ `ಉತ್ಸವ'ದ ಉತ್ಸಾಹ.
ಮಂತ್ರಿಗಳ ಭಾಷಣವೂ, ಸ್ಥಳೀಯ ಮುಖಂಡರ ಪ್ರತಿಷ್ಠೆಯೂ, ಅವ್ಯವಸ್ಥೆಯ ಆಗರವೂ ಆದ ಈ `ಉತ್ಸವ' ನಿಜವಾಗಿಯೂ ಖುಷಿ ಕೊಟ್ಟಿದ್ದು ಕಲ್ಲುಗಳಿಗೆ ಮಾತ್ರ. ಮೂರು ದಿನಗಳ ಕಾಲ ಅವುಗಳಿಗೆ ಯಾತ್ರಿಕರ ಜೊತೆ ಓಡಾಟ, ಮೌನ ಸಂಭಾಷಣೆಯ ಒಡನಾಟ. ಮೂರು ದಿನ `ಕಲ್ಲು ಕರಗಿದ ಸಮಯ'ದ ಗುಟ್ಟಾದ ವರದಿಯ ಮುದ್ರಿತ ಪ್ರಸಾರ, ಇಲ್ಲಿದೆ.


ಕಲ್ಲಾಗಿ ಹೋಗು!
ಹೀಗೆಂದು ಋಷಿ ಮುನಿಗಳು ಯಾರ ಮೇಲಾದರೂ ಕೋಪಗೊಂಡರೆ ಶಪಿಸಿಬಿಡುತ್ತಿದ್ದರು. ಅಹಲ್ಯೆ ಕಲ್ಲಾದದ್ದು ನಮಗೆಲ್ಲಾ ಗೊತ್ತಿರುವ ಒಂದು ಜನಪ್ರಿಯ ಪೌರಾಣಿಕ ಪ್ರಕರಣ. ನಮ್ಮ ಪುರಾಣಗಳನ್ನು ಜಾಲಾಡಿದರೆ ಇಂಥ ಅನೇಕ ಪ್ರಸಂಗಗಳು ನಮಗೆ ಕಾಣಸಿಗುತ್ತವೆ. ಕಲ್ಲಾಗಿದ್ದ ಅಹಲ್ಯೆಯನ್ನು ಹೆಣ್ಣಾಗಿ ಮಾಡಿದ್ದು ರಾಮನ ಹೆಚ್ಚುಗಾರಿಕೆಯೋ, ಅಹಲ್ಯೆಯ ಪಾತಿವ್ರತ್ಯದ ಹೆಚ್ಚುಗಾರಿಕೆಯೋ- ಇಷ್ಟು ವರ್ಷ ಕಳೆದರೂ ಇನ್ನೂ ತೀರ್ಮಾನವಾಗಿಲ್ಲ.

Saturday, November 1, 2008

ಜೋಡು ಹಾದಿ, ಹೂ ಹಾದಿ

ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು ಕೊಂದುಕೊಳ್ಳದಿದ್ದರೆ ಏನೋ ಪುಣ್ಯ. ಆದಕ್ಕಾಗಿ ಒಂದೇ ಕ್ಷಣ `ಅಬ್ಬಾ, ಸದ್ಯ' ಎಂಬ ನಿಟ್ಟುಸಿರು. ಆ ಕ್ಷಣದಿಂದಲೇ ಬಾಡತೊಡಗುತ್ತದೆ ಪರಿಮಳದೊಂದಿಗೆ ಮಲ್ಲಿಗೆಯ ತನುಮನ. ಬಿಳಿ ಕಂದಾಗುತ್ತದೆ, ಕೆಂಪಾಗುತ್ತದೆ, ಎಳೆದರೂ ಜಗ್ಗದ ರಬ್ಬರಾಗುತ್ತದೆ, ತನ್ನ ಸೂತ್ರವನ್ನು ಕಿತ್ತುಕೊಂಡು ಕಸವಾಗುತ್ತದೆ.

ಅಸಂಖ್ಯ ಕಸಗಳ ಮಧ್ಯೆ ಮರುದಿನ ಯಾರೋ ಏನೋ ಅರಿಯದ ಒಂದು ಹೆಸರಿಲ್ಲದ ಚೂರು ಅದು. ನಿನ್ನೆಯಿದ್ದ ಸುಗಂಧ, ನಿನ್ನೆಯಿದ್ದ ಅಂದ, ನಿನ್ನೆಯ ಮುಡಿಸು, ನಿನ್ನೆಯಿಡೀ ಅದರೊಡನೆ ಕಳೆದ ಪರಿಮಳದ ಬದುಕು, ಆ ಪರಿಮಳ ಕೊಟ್ಟ ಸುಗಂಧ ಸಂಚಾರ, ಅದು ದೇಹ- ಜೀವವೊಂದಕ್ಕೆ ಹೆಚ್ಚಿಸಿ ಕೊಟ್ಟ ಸೌಂದರ್ಯ- ಊಹೂಂ ನೆನಪಿಲ್ಲ.

ಅದಕ್ಕೊಂದು ಶ್ರದಾಂಜಲಿ ಸಭೆ ಮಾಡಲಿಲ್ಲ, ಒಂದು ಕ್ಷಣ ಎದ್ದು ನಿಂತು ಶಾಂತಿ ಕೋರಲಿಲ್ಲ.

ಚಪ್ಪಲಿ ಹಾಗಲ್ಲ. ಯಾರದೋ ಕಾಲಿಗೆ ಬೀಳುವ ಮುಂಚೆ, ಕಾಲಿನಿಂದ ಜಾರಿಬಿದ್ದ ದಿನದಾಚೆ ಅದಕ್ಕೊಂದು ಅಸ್ತಿತ್ವವಿದೆ, ಪೂರ್ವಾಶ್ರಮವಿದೆ. ಯಾರದೋ ಚರ್ಮವಾಗಿದ್ದು, ದೇಹದೊಳಗಿನ ಜೀವಸಂಚಾರಕ್ಕೆ, ಎಲ್ಲಾ ಅಲ್ಲಲ್ಲೇ ಹಾಗೆ ಹಾಗೇ ಇದ್ದು ಜೀವನ ಸುಸೂತ್ರವಾಗಿ ನಡೆಯುವುದಕ್ಕೆ ಅದರ ಸಹಕಾರ ಇತ್ತು. ಆ ಸಹಕಾರ ಮುಗಿದ ದಿನದಿಂದ ಅದು ದೇಹದಿಂದ ಬೇರ್ಪಟ್ಟು, ಬೇರ್ಪಟ್ಟ ಮೇಲೆ ಪರಿಷ್ಕರಣೆಗೆ ಸಿಕ್ಕಿ, ಯಾವುದ್ಯಾವುದೋ ದ್ರವ್ಯ, ರಸಾಯನಿಕಗಳ ಜೊತೆ ಗುದ್ದಾಡಿ ಹೊಸ ಜನ್ಮಕೆ ದಾಟಿಕೊಂಡು ಚಪ್ಪಲಾಯಿತು. ಕಾಲಿಗೆ ಬಿದ್ದು ಬಚಾವಾಯಿತು.

ಆದರೆ ಅದಕ್ಕೂ ಅಲ್ಲೂ ಸೀಮಿತ ಆಯುಷ್ಯವಿದೆ. ಉಂಗುಷ್ಠ ತುಂಡಾಗಿಯೋ, ಹಿಮ್ಮಡಿ ಹರಿದೋ ಅದೂ ಆ ಕಾಲಿಂದ ಬೇರ್ಪಡುತ್ತದೆ. ಅದರ ಪಾಲಿಗೆ ಬೇರ್ಪಡುವುದೆಂದರೆ ಮಾರ್ಪಡುವುದು. ದೇಹದಿಂದ ಬೇರ್ಪಟ್ಟು, ಚಪ್ಪಲಾಗಿ ಮಾರ್ಪಾಡಾದ ಇದು ಚಪ್ಪಲಾಗಿ ಬೇರ್ಪಟ್ಟ ಮೇಲೂ ಭಿಕ್ಷುಕ, ತಬ್ಬಲಿಗಳ ಕಾಲಾಳಾಗಿ ಮಾರ್ಪಡುತ್ತದೆ. ಬೇರ್ಪಟ್ಟರೂ ಸಾಯುವುದಿಲ್ಲ. ಮತ್ತೆ ಇನ್ನೊಂದು ಹೆಜ್ಜೆಯನ್ನು ಹುಡುಕಿ ಅದು ಹೊರಡಬಹುದು. ಆ ಹೆಜ್ಜೆಯಲ್ಲಿ ಒಂದಿಷ್ಟು ದಿನ ಇರಬಹುದು. ಆ ಪಾದ ತಿರಸ್ಕರಿಸಿದ ಹೊತ್ತಿಂದ ಆ ಚಪ್ಪಲಿ ತ್ರಿಲೋಕ ಸಂಚಾರಿ. ಮಣ್ಣಾಗದೇ, ಇಲ್ಲವಾಗದೇ, ಹೆಸರೂ ಇಲ್ಲದಂತೆ ಆಗದೇ ಆ ಚಪ್ಪಲಿ ಗಲ್ಲಿ ಗಲ್ಲಿಗಳಿಗೆ ಹೊರಡುತ್ತದೆ.

ಕಂಡವರಿಗೆ ತಮ್ಮ ಚಪ್ಪಲಿಯ ನೆನಪು, ಇಲ್ಲದವರಿಗೆ ತನಗೆ ಇದ್ದಿದ್ದರೆ ಎಂಬ ಕೊರಗು, ಕಾಲಿಲ್ಲದವರಿಗೆ ದೇವರು ಕಾಲನ್ನು ಕೊಡಲಿ, ಆಮೇಲೆ ನಾನೇ ಚಪ್ಪಲು ಸಂಪಾದಿಸಿಕೊಳ್ಳುವೆ ಎಂಬ ಪ್ರಾರ್ಥನೆ.. ಆಗುತ್ತದೆ. ಜಿ ಎಸ್‌ ಸದಾಶಿವ ಅವರಿಗೆ ಅದರಿಂದ `ಚಪ್ಪಲಿಗಳು' ಕತೆ ಹುಟ್ಟಿಕೊಳ್ಳುತ್ತದೆ. ಜಯಂತ ಕಾಯ್ಕಿಣಿ ಅವರಿಗೆ ಮುಂಬಯಿಯಲ್ಲಿ ಸಿಕ್ಕ ಒಂಟಿಕಾಲಿನ ಶೂ ಕತೆಯಾಗುತ್ತದೆ.

ಚಪ್ಪಲಿ ಹೀಗೆ ಜನ್ಮ ಬದಲಾಯಿಸುತ್ತಾ, ಜನುಮ ಜನುಮದಲ್ಲೂ ಏನೇನೋ ಆಗುತ್ತಾ ಹೋಗುತ್ತದೆ, ಯಾರದೋ ದಾರಿಯಲ್ಲಿ ಥಟ್ಟನೆ ಒಂದೇ ಆಗಿಯೋ, ಜೊತೆಯಾಗಿಯೋ ಸಿಕ್ಕು ಮಾತಾಡಿಸುತ್ತದೆ. ಶಾಪ್‌ನಲ್ಲಿ ಕುಳಿತು `ಕೊಳ್ಳು ಬಾ' ಎನ್ನುತ್ತದೆ. ಮಾಲ್‌ನಲ್ಲಿ
ಕುಳಿತುಕೊಂಡು `ಪಡೆದುಕೋ' ಎನ್ನುತ್ತದೆ. ಜಾಹೀರಾತುಗಳಲ್ಲಿ ಕ್ಯಾಟ್‌ವಾಕ್‌ ಮಾಡಿ `ಹ್ಯಾಗಿದೆ ನನ್ನ ಡಿಸೈನ್‌' ಎನ್ನುತ್ತದೆ. ಹಾಕಿಕೊಂಡರೆ ಹರಿಯುವವರೆಗೆ ನಿಯತ್ತಿನಿಂದ ನಿಮ್ಮ ಪಾದಸೇವೆ ಮಾಡುತ್ತದೆ, ಪಾದದಿಂದ ಬೇರ್ಪಟ್ಟ ನಂತರ ಹೀಗೇ ಮತ್ತೊಂದು ಜನ್ಮಕ್ಕೆ ಹೊರಟು ನಿಂತ ಚರ್ಮದಾರಿ.

ಅದಕೋ ನೂರೆಂಟು ಹಾದಿ, ಹೂವಂಥ ನಾವೋ ಸೌಂದರ್ಯ, ಪರಿಮಳ ಇರುವಷ್ಟು ದಿನ ಮಾತ್ರ ವಾದಿ, ಸಂವಾದಿ!

Friday, October 31, 2008

speak everyday KANNADA!

ಟೀವಿ, ಎಫೆಮ್‌, ಇಂಟರ್‌ನೆಟ್‌, ಬ್ಲೂಟೂತ್‌, ಐಪಾಡ್‌, ಎಂಪಿಥ್ರೀ, ಕ್ಯಾಬ್‌, ಐಟಿ ಫರ್ಮ್‌0ಗಳ ಸಂತೆಯೊಳಗೆ ಒಂದು ಇನ್ನೊಮ್ಮೆ ಕನ್ನಡ ರಾಜ್ಯೋತ್ಸವ ಆಗಮಿಸಿದೆ. `ರಾಜ್ಯೋತ್ಸವಕ್ಕೆ ನಾವೊಂದು ಕಾಂಟೆಸ್ಟ್‌ ಮಾಡಿದ್ದೇವೆ. ನಿನೀವು ವಿನ್‌ ಆದರೆ ಲಾಟ್ಸ್‌ ಆಫ್‌ ಪ್ರೈಸಸ್‌ ಇದೆ. ಪಾರ್ಟಿಸಿಪೇಟ್‌ ಮಾಡಿ' ಎಂಬಂಥ ಭಾಷಾಪ್ರಪಂಚದಲ್ಲಿ ನಾವು ಅನಿವಾರ್ಯವಾಗಿ ರಾಜ್ಯೋತ್ಸವ ಆಚರಿಸಬೇಕು.
ಇದರ ಜವಾಬ್ದಾರಿಯನ್ನು ನಾವು ನೀವು ಜಾಗತೀಕರಣದ ಮೇಲೆ ಹಾಕಿ ಕುಳಿತುಕೊಳ್ಳಬಹುದು. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಜವಾಬ್ದಾರರು. ಕನ್ನಡದವರೇ ಅಂಗಡಿಗಳ ಮಾಲೀಕರಾದರೂ ಬಂದ ಗಿರಾಕಿಗಳ ಜೊತೆ ಅವರದೇ ಭಾಷೆಯಲ್ಲಿ ವ್ಯವಹರಿಸಿ, ಕನ್ನಡವನ್ನು `ವ್ಯವಹಾರ ಭಾಷೆ'ಯಾಗಿ ಮಾಡದೇ ಹೋದವರು ನಾವು. ಹಾಗಿರುವಾಗ ಕನ್ನಡವನ್ನು ವ್ಯವಹಾರ ಭಾಷೆಯಾಗಿಸುವಂತೆ ಸರ್ಕಾರ ಕಾಯ್ದೆ ಕಾನೂನು ತರಲಿ ಎಂದು ಹ್ಯಾಗಾದರೂ ಅಪೇಕ್ಷಿಸುವುದು?

Wednesday, October 29, 2008

ನೀ ಬಂದು ನಿಂದಿಲ್ಲಿ ಪಟಾಕಿ ಹಚ್ಚಾ!

ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ...
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್‌ ಕಾಯ್ಕಿಣಿ ಅವರು `ಹಾಲಿನ ಮೀಸೆ' ಕತೆಯಲ್ಲಿ ಬರೆದ ಒಂದು ವಿವರ ಮತ್ತು ಪಟಾಕಿ ಸಿಡಿತದ ಒಂದೆರಡು ಅಮಾನವೀಯ ಘಟನೆಗಳನ್ನು ಇಲ್ಲಿ ನೀಡಲಾಗುತ್ತಿದೆ.
ಸ್ಟಾಕ್‌ ಉಳಿದಿದೆ ಎಂದು ನೀವ್ಯಾರಾದರೂ ಪಟಾಕಿ ಹಿಡಿದುಕೊಂಡು, ಗೇಟ್‌ ಎದುರು ನಿಂತು, ರಸ್ತೆ ಮೇಲೆ ಪಟಾಕಿ ಇಟ್ಟು, ಬೆಂಕಿ ಹತ್ತಿಸಿದರೆ ಈ ಘಟನೆಗಳು ನೆನಪಾಗಲಿ, ರಸ್ತೆಯಲ್ಲಿ ಹೋಗುತ್ತಿರುವವರು ದಾಟಿ ಹೋದ ಮೇಲೆ ನಿಮ್ಮ ಪಟಾಕಿಗೆ ಬೆಂಕಿ ತಗುಲಲಿ.

Saturday, October 25, 2008

ನೀ ಬಂದು ನಿಂದಿಲ್ಲಿ ದೀಪ ಹಚ್ಚಾ

ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ  ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್‌ ಲೈಟ್‌ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ'ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್‌ಫ್ಯೂಸ್‌. `ವಾಟ್ಸ್‌ ದಿ ಆಯಿಲ್‌ ಯಾರ್‌'. ಎಣ್ಣೆ ಎರೆದು ತಲೆ ಮೀಸಲು ಮೊಮ್ಮಗ ಕುಳಿತುಕೊಳ್ಳುತ್ತಿಲ್ಲ, ಮಗನಿಗೆ ಪ್ರಾಜೆಕ್ಟ್‌ ಕೆಲಸ ಇನ್ನೂ ಮುಗಿದಿಲ್ಲ. ಸೊಸೆಗೆ ಇಂಪಾರ್ಟೆಂಟ್‌ ಮೀಟಿಂಗ್‌ ಇದೆ.
ಪ್ರತಿ ದೀಪಾವಳಿಗೆ ದೇಶದಲ್ಲಿ ಏನೋ ಆಗುತ್ತದೆ. ಈ ಸಲ ಬಾಂಬ್‌ ಹೊಟ್ಟುತ್ತಿರುವ ಸುದ್ದಿ, ಕರ್ನಾಟಕವೇ ಬಾಂಬ್‌ ತಯಾರಿ ಕಾರ್ಖಾನೆಯಾಗುತ್ತಿರುವ ಸುದ್ದಿ. ಬಾಂಬ್‌ ಹೊಟ್ಟಿಸುವ ಕೆಲಸ ಮಾಡುವವರಿಗೆ ಪಟಾಕಿ ಹೊಡೆಯಲು ಟೈಂ ಇಲ್ಲ, ಸುರ್‌ಸುರ್‌ ಬತ್ತಿಯಂಥ ನಿರುಪದ್ರವಿ ಬೆಳಕು, ಹಣತೆಯೆಂಬ `ತಮಸೋಮಾ ಜೋತಿರ್ಗಮಯ' ನೆನಪು, ಹೂರಣ ಹೋಳಿಗೆಯೆಂಬ ಸಿಹಿ ಹಾರೈಸುವ ತಿನಿಸು... ಯಾರಿಗೂ ಬೇಡ. ಈ ನಡುವೆ ಮತಾಂತರ ಚರ್ಚೆಯೂ ಕರ್ನಾಟಕದಲ್ಲಿ ಸೇರಿಕೊಂಡಿದೆ.

ಶುಭಾಶಯಗಳು (ಕವಿತೆ)

ದೀಪಾವಳಿ ಹಬ್ಬ ಬಂದಿದೆ. ಎಲ್ಲೆಡೆಯೂ ಪಟಾಕಿ, ಆಕಾಶಬುಟ್ಟಿ, ಹಣತೆ, ಸೊಡರುಗಳ ಉತ್ಸವ. ಇತ್ತೀಚೆಗೆ ತಾನೇ `ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾದ `ಶುಭಾಶಯಗಳು' ಕವಿತೆಯನ್ನು ಈ ದೀಪಾವಳಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಓದಿ.

ಪವರ್‌ಕಟ್‌ನ ನಂತರ
ಬೆಳಗಿದ ಬಲ್ಬೇ,
ಹೊತ್ತಿಕೊಂಡ ಸ್ಟೆಬಿಲೈಜರ್‌ ದೀಪವೇ
ಕರೆಂಟ್‌ ಹೋದ ಕೂಡಲೇ
ಆರಿಸಬಾರದಿತ್ತೇ
ಎಂದು ಬೈಸಿಕೊಳ್ಳುತ್ತಾ
ಪಕ್ಕನೆ ಬೆಳಕಾದ ಟೀವಿ ಪರದೆಯೇ,
ಅಡುಗೆ ಮನೆಯ
ಎಲೆಕ್ಟ್ರಿಕ್‌ ಒಲೆಯೇ,
ಕೋಣೆಯೊಳಗಿನ ಕಂಪ್ಯೂಟರ್ರೇ...

ನಿನ್ನ ದೀಪಾವಳಿಗೆ ನನ್ನ ಶುಭಾಶಯಗಳು

Monday, October 20, 2008

ಅಮ್ಮನಿಗೆ ಮಗು ತಾಯಿ, ಶಿಶುವೆ ಅಮ್ಮನ ಕಾಯಿ!

ಅಮ್ಮ ಯಾವತ್ತೂ ಬದಲಿಗೆ ರಲಾಗದ ಪದ, ಭಾವ, ಸಂಗ. ಅಮ್ಮನ ಬಗ್ಗೆ ಬರೆದರೆ ಎಲ್ಲರಿಗೂ ಅವರಮ್ಮ, ಅಮ್ಮನ ಥರ ಕಂಒಂದಿಷ್ಟು ಸಂಬಂಧಗಳು, ಅಮ್ಮನಂತೆ ಕಾಯ್ದ ಗೆಳೆಯ/ಗೆಳತಿ ನೆನಪಾಗುತ್ತಾರೆ. ಈ ಈ `ಕಳ್ಳಕುಳ್ಳ'ರ ಬ್ಲಾಗಂಗಡಿಯಲ್ಲಿ ಇತ್ತೀಚಿಗೆ ಅಮ್ಮ ಅಮ್ಮ ಎಂಬ ಕಳ್ಳು ಸಂಬಂಧದ ಬಗ್ಗೆ ಬರೆದ ಕವಿತೆಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವ. ಅನೇಕರು ಕಣ್ಣೀರಿಟ್ಟ ಪ್ರಸಂಗವನ್ನೂ ವಿವರಿಸಿದ್ದಾರೆ. ಪ್ರತಿಕ್ರಿತಿಸಿ, ಅಮ್ಮನ ಕವಿತೆಗೆ ಕೃತಜ್ಞರಾಗಿದ್ದಾರೆ.
ಧನ್ಯವಾದಗಳು.
ಇದೀಗ ಅಮ್ಮನ ಬದುಕು, ಬವಣೆಗಳ ಹಿನ್ನೆಲೆಯಲ್ಲಿ
ಸಾಗುವ ಒಂದು ಕತೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. `ಉದಯವಾಣಿ'ಯಲ್ಲೇ ಪ್ರಕಟಣೆ ಕಂಡ ಈ ಕತೆ ಹಿಂದೊಮ್ಮೆ `ಪಿಚ್ಚರ್‌' ಬ್ಲಾಗ್‌ನಲ್ಲೂ ಪ್ರಕಟವಾಗಿತ್ತು. ಇದೀಗ `ಕಳ್ಳಕುಳ್ಳ' ಬ್ಲಾಗ್‌ನಲ್ಲಿ ಆ ಕತೆಯ ಮರು ಪ್ರಸಾರ.
ಓದಿ, ಪ್ರತಿಕ್ರಿಯಿಸಿ. ಅಂದಹಾಗೆ ಕತೆಯ ಹೆಸರು: ಕೆಂಪು ರಕ್ತ ಕಣಗಳು.

ಕೆಂಪು ರಕ್ತ ಕಣಗಳು



ನಗೆ ಅಪ್ಪನನ್ನು ನೋಡಿದ್ದು ನೆನಪಿಲ್ಲ. ಆದರೆ ಬುದ್ಧಿ ತಿಳಿದಾಗಿನಿಂದ ಅವನ ವಿಷಯ ಅಸ್ಪಷ್ಟವಾಗಿ, ಮುಜುಗರ ಹುಟ್ಟಿಸುವ ಅಸ್ತ್ರವಾಗಿ ಪ್ರಸ್ತಾಪವಾಗಿದೆ. ಆಶ್ಚರ್ಯ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ, ನನಗೆ ಅಪ್ಪನ ನೆನಪು ಆಗುತ್ತಲೇ ಇಲ್ಲ. ನೆನಪಾಗುವುದಕ್ಕೆ ಏನಾದರೂ  ಘಟನೆಗಳು ನಮ್ಮ ನಡುವೆ ನಡೆದಿರಬೇಕಲ್ಲಾ. ನನಗೆ ತಿಳಿದ ಹಾಗೆ ಅಂಥದ್ದೊಂದೂ ನಡೆಯಲಿಲ್ಲ. ಒಂದು ಸಾರಿ ಅವನ ಮಸುಕು ಮಸುಕಾದ ಮುಖಭಾವ ನನಗೆ ಕಂಡಿತ್ತು. ಅದು ಮನೆಯ ಬೀರುವಿನಲ್ಲಿ. ಆ ಬೀರುವನ್ನು ಒಂದು ದಿನ ಸ್ವಚ್ಛ ಮಾಡುವ ತರಾತುರಿಯಲ್ಲಿ ನಾನಿದ್ದೆ. ಆಗ ಒಂದು ಫೋಟೋ ಕಂಡಿತು. ಗಟ್ಟಿಮುಟ್ಟಾದ ಚೌಕಟ್ಟಿನೊಳಗಿದ್ದ ಫೋಟೋ ಅದು. ಸಾಕಷ್ಟು ದೊಡ್ಡದಾಗಿತ್ತು. ಮಗುಚಿ ಇಡಲಾಗಿತ್ತು. ನಾನು ಪ್ರಯಾಸಪಟ್ಟು ಅದನ್ನು ಮೇಲೆತ್ತಿ, ನನ್ನತ್ತ ತಿರುಗಿಸಿಕೊಂಡೆ. ಅದರಲ್ಲಿ ಅತ್ಯಂತ ಚೆನ್ನಾಗಿ ಕಂಡವಳು ನನ್ನ ಅಮ್ಮ. ಕಿವಿಯಲ್ಲಿ ಅವಳ ಮದುವೆ ಕಾಲಕ್ಕೆ ಫ್ಯಾಷನ್‌ ಆಗಿರಬಹುದಾದ ಲೋಲಾಕು, ಮೂಗಿನಲ್ಲಿ ನತ್ತು, ಕೊರಳಲ್ಲಿ ಎರಡೆಳೆ ಕರಿಮಣಿ. ಬಲ ಭಾಗದಲ್ಲಿ ಬೈತಲೆ ತೆಗೆದ ಅಮ್ಮ ಲಕ್ಷಣವಾಗಿ ಕಾಣುತ್ತಿದ್ದಳು. ಪಕ್ಕದಲ್ಲಿ ಅಪ್ಪ. ಆ ಜಾಗ ನೀರು ಸೋರಿ ಹೋಗಿದ್ದರಿಂದ ಸರಿಯಾಗಿ ಗ್ರಹಿಸಲು ಆಗುತ್ತಿರಲಿಲ್ಲ. ಚಿತ್ರದಲ್ಲಿ ಅಪ್ಪ  ಸ್ಫುರದ್ರೂಪಿಯಾಗಿ ಇದ್ದನಾದರೂ ಅವನ ಮೇಲೆ ಸಿಟ್ಟಿದ್ದರಿಂದ ಸಿನಿಮಾಗಳಲ್ಲಿ ಬರುವ ಚೆಂದ ಮುಖದ ಕ್ರೂರ ಕೇಡಿಯ ಹಾಗೆ ಕಂಡು ಥಟ್ಟನೆ ಮುಚ್ಚಿಟ್ಟೆ. ಆಮೇಲೆ ಬೀರು ಸ್ವಚ್ಛ ಮಾಡಲು ಹೋಗಲಿಲ್ಲ.
ಅಮ್ಮನನ್ನು ನಾನು ನೋಡಿದ್ದು ಬಹುಪಾಲು ಕೆಲಸ ಮಾಡುವಾಗ. ಅವಳಿಗೆ ಕೆಲಸ ಬಿಟ್ಟರೆ ಬೇರೇನೂ ಕಾಣುವುದಿಲ್ಲವೇ ಎಂದು ನಾನು ಯೋಚಿಸಿದ ಹಗಲು ಇರುಳುಗಳು ಬಹಳ. ಆಗೆಲ್ಲಾ ಅವಳ ಮೇಲೆ ಕನಿಕರ, ಪ್ರೀತಿ ಬರುವುದು. ರಾತ್ರಿ ಮಂಚದ ಮೇಲೆ ಕುಳಿತು ಇಳಿಬಿಟ್ಟ ಕಾಲನ್ನು ನೀವುತ್ತಾ, ಒಡೆದ ಹಿಮ್ಮಡಿಗೆ ವ್ಯಾಸಲಿನ್‌ ಹಚ್ಚುವುದನ್ನು ನಾನು ಕೆಳಗಿನ ಹಾಸಿಗೆಯಲ್ಲಿ  ಮಲಗಿಕೊಂಡು ಎವೆಯಿಕ್ಕದೆ ನೋಡುತ್ತಿದ್ದೆ. ಹಾಗೆ ನೋಡುತ್ತಿರುವುದು ಅರಿವಾದ ಕೂಡಲೇ ಅವಳು ಏನೋ ಮಾತಾಡಿ ಬೆಡ್‌ಶೀಟ್‌ ಎಳೆದುಕೊಂಡು ಮಲಗಿಬಿಡುತ್ತಿದ್ದಳು. ಸೀಮೆಎಣ್ಣೆ ಬುಡ್ಡಿ ಆರಿದ ಮೇಲೂ ಅಮ್ಮನ ಬಳೆಯ ಸದ್ದು, ವಿಪರೀತ ಕೆಲಸದಿಂದುಂಟಾದ ಸೊಂಟ ನೋವಿಗೆ ಹೊಂದಿಕೊಳ್ಳಲಾಗದೇ ಆಗಾಗ  ಅವಳು ಹೊರಳುವ ಸದ್ದು, ಮಂಚದ ದಡ್‌ ದಡ್‌ ಸದ್ದು, ನರಳಿಕೆ, ಬುಸ್ಸಂತ ಉಸಿರು ನನಗೆ ನಿದ್ದೆ ಬರುವವರೆಗೆ ಕೇಳಿಸುತ್ತಿತ್ತು.

Tuesday, October 14, 2008

ಅಮ್ಮನ ಕೈ ಬಳೆ ಸದ್ದಿಲ್ಲ

ದೇವರ ಪಟದ ಹೂವು
ಬಾಡಿ ಬೀಳುವಾಗ
ಹೊಲಕೆ ಹೋಗಿ ಬಂದ
ಅಮ್ಮ  ಜ್ವರವೆಂದು
ಮಲಗಿದವಳು ಏಳಲೇ ಇಲ್ಲ!
ಅವಳ ಮೈ ತಣ್ಣಗಾದ ಹೊತ್ತಿನಿಂದ
ಒಳ ಮನೆ ಕತ್ತಲಲ್ಲಿ
ಹಚ್ಚಿಟ್ಟ ಹಣತೆ ಆರಲಿಲ್ಲ,
ಬೊಂಬು ಬಂತು
ಗಡಿಗೆ ಬಂತು
ಯಾರೋ ದಾನ ಕೊಡಲು
ಕುಂಬಳಕಾಯಿ ತಂದರು
ಪೇಟೆಯಲ್ಲಿದ್ದ ಮಗ ಬಂದ
ತೊಲ ಬಂಗಾರದ ಮಗಳು ಬಂದಳು
ನೆಂಟ-ಬೀಗ-ಸೋದರಳಿಯ
ಏನೂ ತಿಳಿಯದ ಮೊಮ್ಮಕ್ಕಳು
ಬಂದರು... ಹೋದರು....

Saturday, October 11, 2008

ಮೌನವಾಗಿರು ಸಾಕು, ಮಾತು ಬಿಸಾಕು

ಇತ್ತೀಚೆಗೆ ಮುಂಬೈನಲ್ಲಿ ಬಾಂಬ್‌ ಬ್ಲಾಸ್ಟ್‌ ಆದ ಹೊತ್ತಿಗೆ ನಟ ಅಭಿಷೇಕ್‌ ಬಚ್ಚನ್‌ಗೆ ಶೂಟಿಂಗ್‌ ಇತ್ತಂತೆ. ಆದರೆ ಬ್ಲಾಸ್ಟ್‌ ಪ್ರೀತ್ಯರ್ಥವಾಗಿ ಒಂದು ವಾರದ ಶೂಟಿಂಗ್‌ ರದ್ದಾಯಿತಂತೆ.
`ಹಾಗಾಗಿ ನನಗೆ ಅಚಾನಕ್‌ ರಜೆ ಸಿಕ್ಕಿತು. ಯಾವಾಗಲೂ ಬರೀ ಕೆಲಸ ಕೆಲಸ ಶೂಟಿಂಗೇ ಆಗಿತ್ತು. ಈ ಬ್ಲಾಸ್ಟ್‌ ರಜೆಯ ಕಾಲದಲ್ಲಿ ನಾನು ನನ್ನ ಸಂಸಾರದ ಜೊತೆ ಕಾಲ ಕಳೆದೆ'
-ಹೀಗೆಂದು ಅಭಿಷೇಕ್‌ ಬಚ್ಚನ್‌ `ಖುಷಿ ಖುಷಿ'ಯಾಗಿ ಹೇಳಿಕೊಂಡಿದ್ದನ್ನು ಇತ್ತೀಚೆಗೆ ಪತ್ರಿಕೆಯೊಂದರ ಪಟ್ಟಣ ಪುರವಣಿಯೊಂದು ಅಷ್ಟೇ ಖುಷಿಯಿಂದ ಪ್ರಕಟಿಸಿತ್ತು. ವರದಿ ಓದಿ ಕೆಲವರಾದರೂ ಗಾಬರಿಯಾದಾರು. ಅಂದರೆ ರಜೆ ಸಿಕ್ಕಿತು ಎಂಬ ಕಾರಣಕ್ಕೆ ಅಭಿಷೇಕ್‌ ಖುಷಿಪಡುತ್ತಾ, ಅದೇ ಹೊತ್ತಿಗೆ ಬಾಂಬ್‌ ಬ್ಲಾಸ್ಟ್‌ನ ಬೇಜಾರನ್ನು ಲೆಕ್ಕಕ್ಕೂ ತೆಗೆದುಕೊಳ್ಳದೇ ಮಾತಾಡಿದ. ಅದನ್ನು ವರದಿಗಾರ/ರ್ತಿ ಅಷ್ಟೇ ನಿರ್ಭಾವುಕವಾಗಿ ವರದಿ ಮಾಡಿದ್ದ/ಳು. ಎಷ್ಟೋ ಓದುಗರು ಅದನ್ನು ಓದುವಾಗ `ಬಿಟ್ವೀನ್‌ ದಿ ಲೈನ್‌' ಅರ್ಥ ಮಾಡಿಕೊಂಡಿರಲೇ ಇಲ್ಲ.

Monday, October 6, 2008

ಬಂದೇ ಬರತಾವ ಕಾಲ್‌

ಮಿಸ್ಡ್‌ ಕಾಲ್‌ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.

ಹಠಾತ್‌ ಸಿಗ್ನಲ್‌ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್‌ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ'

Wednesday, October 1, 2008

ಗಾಂೀಸ್ಮೃತಿ

ಮತ್ತೊಮ್ಮೆ `ಅಕ್ಟೋಬರ್‌ 2' ಬಂದಿದೆ. ಕೆಲವರು ಆ ದಿನವನ್ನು ಅಕ್ಟೋಬರ್‌ ತಿಂಗಳಲ್ಲಿ ರಜೆ ಒದಗಿಸುವ ದಿನವಾಗಿ ನೋಡಿದ್ದಾರೆ. ಕೆಲವರು ಆ ದಿನ ಮದ್ಯ ಸರಬರಾಜಿಲ್ಲ ಎಂದು ಬೇಜಾರಾಗಿದ್ದಾರೆ. ಕೆಲವರು ಆ ದಿನ ಸತ್ಯಾಗ್ರಹದ ಡೇಟ್‌ ಆಗಿ ಇಟ್ಟುಕೊಂಡಿದ್ದಾರೆ. ಕೆಲವರಿಗೆ ಆ ದಿನ ಸರ್ಕಾರಕ್ಕೆ ತಮ್ಮ ಆಗ್ರಹ ನೀಡಲು ಪುಣ್ಯದಿನ.
ಕೆಲವರಿಗೆ ಮಾತ್ರ ಅದು ಗಾಂೀಜಿಯನ್ನು ನಿಜವಾಗಿ ನೆನಪು ಮಾಡಿಕೊಳ್ಳುವ ಸುದಿನ.
ಗಾಂೀಜಿ ಒಂದು ದಿನದ ಮಟ್ಟಿಗೆ ನೆನಪಾಗಬೇಕೇ ಎನ್ನುವುದು ಮತ್ತೂ ಕೆಲವರ ನೋವು. ಗಾಂೀಜಿ ಭಾರತ- ಪಾಕಿಸ್ತಾನವನ್ನು ಒಡೆದರು ಎಂಬುದು ಹಲವರ ದೂರು. ಅವರ ಎಡಬಲ ಇಬ್ಬರು ಹೆಂಗಸರು ಯಾವಾಗಲೂ ಇರುತ್ತಿದ್ದರಂತೆ ಎಂದು ಬಾಯಿ ಚಪ್ಪರಿಸಿದ ಮಂದಿ ನೂರು. ಅವರ ಬದುಕಿನ ಸೆನ್ಸೇಷನಲ್‌ ಸುದ್ದಿ ಇನ್ನೂ ಏನಾದರೂ ಸಿಗುತ್ತದಾ ಎಂದು `ಇನ್‌ವೆಸ್ಟಿಗೇಟಿವ್‌ ಜರ್ನಾಲಿಸಂ'ನಲ್ಲಿ ತೊಡಗಿರುವವರು ಕೆಲವರು.
`ಲಗೇ ರಹೋ ಮುನ್ನಾಭಾಯಿ' ಚಿತ್ರದ `ಗಾಂೀಗಿರಿ'ಯ ಮೂಲಕ ಗಾಂ ಅವರ ತತ್ವ ಮತ್ತೆ ಹುಟ್ಟು ಪಡೆದುಕೊಂಡಿತು ಎನ್ನುವ ವಾದ ಕೆಲವರದು. ಗಾಂೀಗಿರಿ ಎಂಬ ರೊಮ್ಯಾಂಟಿಕ್‌ ಕಲ್ಪನೆಯನ್ನು ಕಾಯಿನ್‌ ಮಾಡಿ, ಗಾಂೀಜಿಯವರನ್ನೇ ಅಲ್ಪ ದೃಷ್ಟಿಕೋನದಲ್ಲಿ ಯುವಜನತೆಯನ್ನು ಹಾದಿ ತಪ್ಪಿಸಲಾಗುತ್ತಿದೆ ಎನ್ನುವುದು ಇನ್ನೂ ಮುಂತಾದವರ ಅಳಲು. ಈ ಚರ್ಚೆಗಾಗಿ ವಿಚಾರ ಸಂಕಿರಣಗಳು, ಚರ್ಚಾಕೂಟಗಳು, ಕಾಲೇಜಿನಲ್ಲಿ ವಾದ ವಿವಾದ, ಮಾತಿನ ಜಟಾಪಟಿ.
ಇಷ್ಟಾದರೂ ಗಾಂೀಜಿ ತಮ್ಮೆಲ್ಲಾ ಫೋಟೋಗಳಲ್ಲಿ ಹಸನ್ಮುಖಿ. ರಾಮಾಯಣ, ಮಹಾಭಾರತದ ಥರದ ಪುಣ್ಯ ಪುರಾಣದ ಥರ. ಸೀತಾ ಲಕ್ಷ್ಮಣರ ಜತೆಯ ರಾಮನಂತೆ, ರಾಧೆ, ರುಕ್ಮಿಣಿ, ಸತ್ಯಭಾಮೆ, ಯಶೋದೆಯರ ಜತೆಯ ಕೃಷ್ಣನಂತೆ ಮುಗುಳ್ನಗುತ್ತಾ ಚಿತ್ರಪಟವಾಗಿದ್ದಾರೆ ಗಾಂೀಜಿ ಕೂಡ. ಅವರಿಗೆ ತಮ್ಮ ದೋತಿ, ಕೋಲು, ಕನ್ನಡಕಗಳೇ ಜೊತೆ. ಮೌನ ಕವಿತೆಯೊಳಗೇ ಅವಿತಂತೆ, ಮೌನವೇ ಆ ಕವಿತೆಯ ಶಕ್ತಿಶಾಲಿ ಮಾತಂತೆ.
ಅವರ ತತ್ವಗಳ ಮೇಲೆ ಮತ್ತೆ ಮತ್ತೆ ಪಿಎಚ್‌ ಡಿ ಆಗುತ್ತಿದೆ. ಅವರ ಫೋಟೋಗಳು ನೆಟ್‌ನಲ್ಲಿ ಪಾಪ್ಯುಲರ್‌. ಸಿನಿಮಾಗಳು ಅವರನ್ನು ಮತ್ತೆ ಮತ್ತೆ ಹುಟ್ಟುಸಿ, ಜೋಗುಳ ಹಾಡಿ ಅವರ ವ್ಯಕ್ತಿತ್ವಕ್ಕೆ ಹೊಸ ಜನ್ಮ ನೀಡುತ್ತಿವೆ. ಗಾಂೀಜಿ ಜಗತ್ತಿನ ಕಣ್ಣಲ್ಲಿ ವಿಸ್ಮಯ, ಸಂಶೋಧಕರ ಪಾಲಿಗೆ ಮುಗಿಯದ ಗಣಿ. ಸಾಧಕರಿಗೆ ಸೂರ್ತಿ ತುಂಬುವ ದಣಿ. ಸತ್ಯಸಾಧಕರಿಗೆ `ವೈಷ್ಣವ ಜನತೋ' ಹಾಡು ಮತ್ತು ಖಾದಿಯಂಥ ದೇಸಿ ವಸ್ತ್ರಗಳನ್ನು ಮಾರ್ಕೆಟಿಂಗ್‌ ಮಾಡಹೊರಟವರಿಗೆ ಅದರ ಪ್ರಚಾರ ರಾಯಭಾರಿ.
ಏನಾದರಾಗಲಿ, ಗಾಂೀ ತಾತನಿಗೆ ಪ್ರತಿ ತಲೆಮಾರಿನ ಜನರೂ ಆಭಾರಿ.ಙ

Monday, September 29, 2008

ಶ್ರೀಸಾಮಾನ್ಯನಿಗೆ ನಮಸ್ಕಾರ!

ಆತ ತೀರಿಕೊಂಡ ಸುದ್ದಿ ನಮ್ಮ ಊರಿಗೆ ಒಂದೆರಡು ದಿನಗಳ ನಂತರ ಗೊತ್ತಾಯಿತು, ನಮ್ಮಂಥ ಪೇಟೆವಾಸಿ ಹುಡುಗರಿಗೆ ಇಪ್ಪತ್ತು, ಮೂವತ್ತು ದಿನಗಳ ನಂತರ ಗೊತ್ತಾಯಿತು.

ಆತನ ಹೆಸರು: ಶೇಷ ಅಲಿಯಾಸ್‌ ಶೇಷ ನಾಯ್ಕ.

ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ'ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್‌ ತಂದುಕೊಡುತ್ತಿದ್ದ, ಪೇಪರ್‌ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ ಹಿಂಡಿ, ಹತ್ತಿಕಾಳು ತರುತ್ತಿದ್ದ. ಆತ ಪೋಸ್ಟ್‌ ಮ್ಯಾನ್‌ ಆಗುವ ಜತೆಜತೆಗೇ ನಗರಕ್ಕೂ ಊರಿಗೂ ಒಂದು ಕೊಂಡಿಯೇ ಆಗಿದ್ದ. ಊರ ಮದುವೆ, ತಿಥಿ ಊಟದ ಖಾಯಂ ಅತಿಥಿಯಾಗಿ, ಯಾರ ಆರೋಗ್ಯವೇ ಹದಗೆಡಲಿ ಅವರಿಗೆ ಔಷಧ ಒದಗಿಸುವ ವ್ಯಕ್ತಿಯಾಗಿ ಶೇಷ ನಾಯ್ಕ ಕಾರ್ಯ ನಿರ್ವಹಿಸುತ್ತಿದ್ದ.

Wednesday, September 24, 2008

ಕವಿತೆಯ ಕಣ್ಣೀರು

ಕೋಮು ಗಲಬೆ ಎಂಬ `ಚಿಕುನ್‌ ಗುನ್ಯಾ' ರೋಗ ಸಾಂಕ್ರಾಮಿಕವಾಗಿ ದಿನೇ ದಿನೇ ಕರ್ನಾಟಕವನ್ನು ಆವರಿಸಿಕೊಳ್ಳುತ್ತಿದೆ. ಮತಾಂತರಕ್ಕೆ ಕಾಯ್ದೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಹಿಂಸಾಚಾರದಿಂದಲೇ ಪರಿಹರಿಸಿಕೊಳ್ಳಲು ಎಲ್ಲರೂ ಉತ್ಸುಕರಾದಂತೆ ಕಾಣುತ್ತಿದ್ದಾರೆ.
ಅವರು ಹೊಡೆದರೆಂದು ಇವರೂ, ಇವರು ಬೈದರೆಂದು ಅವರೂ ಗುದ್ದಾಟ ನಡೆಸಿ ರಸ್ತೆ, ಬೀದಿ, ಮನೆ, ಕಾಂಪೋಂಡ್‌ಗಳು ಅನಾಥವಾಗುತ್ತಿವೆ. ಇದಕ್ಕೆ ಸರಿಯಾಗಿ ಉಪ್ಪು ಖಾರ ಹಚ್ಚಿ, ಒಗ್ಗರಣೆ ಹಾಕಿ, ರಾಜಕೀಯ ನಡೆಸಲೂ ಎಲ್ಲಾ ಪಕ್ಷಗಳೂ ನಾಚಿಕೆ ಬಿಟ್ಟು ಮುಂದಾಗಿವೆ.
ಇದರ ನಡುವೆ ಸಾಮಾನ್ಯನ ನೋವು- ಆತಂಕವನ್ನು ಕೇಳುವವರು, ಬಹುಸಂಖ್ಯಾತ- ಅಲ್ಪಸಂಖ್ಯಾತರ ಬಾಂಧವ್ಯವನ್ನು ಮತ್ತೆ ಕಟ್ಟಿ ನಿಲ್ಲಿಸಿ ಸಮಾಜವನ್ನು ಸಮಸ್ಥಿತಿಗೆ ತರುವವರು ಯಾರು ಎಂಬುದು ಪ್ರಶ್ನೆ. ಗುಜರಾತಿನ ಗಲಬೆ ವೇಳೆ ಕವಿ ಅಶೋಕ್‌ ಗುಪ್ತಾ ಬರೆದ ಒಂದು ಗುಜರಾತಿ ಕವಿತೆಯನ್ನು ಇಲ್ಲಿ ಅನುವಾದಿಸಿ ನೀಡಿದರೆ ಅದು ನಮ್ಮ ಗಲಬೆಯನ್ನೂ ಪ್ರತಿಬಿಂಬಿಸುವುದು ಇಲ್ಲಿ ಪರಿಸ್ಥಿತಿಯ ವ್ಯಂಗ್ಯ.

ಓಡು ಗೆಳತಿ ಓಡು

ಸತ್ತವರ ಆತ್ಮ ಖಂಡಿತ ಶಾಂತಿಯಿಂದಿಲ್ಲ,
ಬಹಳ ಮುಖ್ಯವಾಗಿ ರಾತ್ರಿ ಹೊತ್ತು.
ನನಗೆ ಎಷ್ಟೋ ಸಲ ಕೇಳುತ್ತದೆ,
ಅವನು ಮಹಡಿ ಮೇಲೆ ಹೋಗಿ
ಕೋಣೆ ಬಾಗಿಲು ಹಾಕಿಕೊಳ್ಳುತ್ತಾನೆ,
ಬಾಗಿನ್ನು ಯಾರೂ ತಳ್ಳಿ ಒಳಬರದಿರಲೆಂದು
ಮಂಚ, ಬೆಂಚುಗಳನ್ನು ಅಡ್ಡ ಇಡುತ್ತಾನೆ.
ಕೆಲವೊಮ್ಮೆ ಗಾಢ ಮೌನ,
ಸಿಡಿದು ಹಾರುವ ಬೆಂಕಿ, ಹೆಣ ಸುಟ್ಟ ವಾಸನೆ
ನೆನೆದು ಆ ಮೌನವನ್ನೂ ಒಡೆದು ಅರಚುತ್ತಾನೆ
`ಓಡು ಗೆಳತಿ ಓಡು'.

ನಾನವನನ್ನು ಸಮಾಧಾನಿಸುತ್ತೇನೆ-
`ವರ್ಷಗಳಾದವು ಗೆಳೆಯ ಅವರು ಹೋಗಿ.
ನನಗೇನೂ ಆಗಿಲ್ಲ,
ನೀನಂತೂ ಸತ್ತಾಗಿದೆ'.
ಆದರೂ ಅವನು ಕನವರಿಕೆಯಂತೆ ಕೂಗುತ್ತಾನೆ:
`ಇಲ್ಲ, ಅವರು ಬರುತ್ತಿದ್ದಾರೆ,
ಓಡು ಗೆಳತಿ ಓಡು'.

Monday, September 22, 2008

ನಗರ ಚಳಿಯಲ್ಲೊಂದು ಅಡ್ರೆಸ್ಟಿಕೆ!

[caption id="attachment_92" align="alignleft" width="438" caption="curtacy: flickr"]flickr[/caption]

ಊರು ಬಿಟ್ಟು ಪಟ್ಟಣ ಸೇರಿದ ಮನುಷ್ಯರು ಬೆಳಿಗ್ಗೆ ಬಸ್‌ಸ್ಟ್ಯಾಂಡ್‌ನಲ್ಲಿ ಅಡ್ರೆಸ್‌ ಇಲ್ಲದೇ ನಿಲ್ಲುತ್ತಾರೆ. ತಿಕ್ಕದ ಹಲ್ಲು, ಬಾಚದ ಕೂದಲು, ಅರ್ಧಂಬರ್ಧ ಇನ್‌ಷರ್ಟ್‌, ಎತ್ತೆತ್ತಲೋ ಎತ್ತಿ ಹಾಕುವ ಕಾಲ್ಗಳು, ಭವಿಷ್ಯದ ಬಗ್ಗೆ ಆತಂಕ, ಹಿಂಬದಿ ಪಾಕೀಟಿನಲ್ಲಿರುವ ಹಣದ ಸುರಕ್ಷೆಯ ಬಗ್ಗೆ ಭಯ, ಬಸ್‌ ತಪ್ಪಿಹೋದರೆ ಎಂಬ ಚಡಪಡಿಕೆ, ಡಾಯ್ಲೆಟ್‌ಗೆ ಹೋಗುವ ಅವಸರ.

ಆಗಷ್ಟೇ ನಾವು ನಂನಮ್ಮ ಊರಲ್ಲಿ ಡಿಗ್ರಿ ಮುಗಿಸಿ, ಯಾವುದೋ ವಿಶ್ವವಿದ್ಯಾಲಯದಲ್ಲಿ ಪಿಜಿ ಪೂರೈಸಿ ನಮ್ಮ ಕೈ ಮೇಲೆ ಕೆಲಸ ಇಟ್ಟು, ತಿಂಗಳಿಗೊಂದಾವರ್ತಿ ಸಂಬಳ ನೀಡುವ ಸಾಹುಕಾರರಿಗಾಗಿ ಕಾಯುತ್ತಿರುತ್ತೇವೆ. ಕೆಲಸ ಸಿಕ್ಕಿ, ಒಂದಷ್ಟು ತಿಂಗಳು ದುಡ್ಡು ಕೂಡಿ ಹಾಕಿ ನಮ್ಮ ಮನೆಯ ಬಾಡಿಗೆಯನ್ನು ನಾವೇ ತುಂಬುವಂತಾಗುವ ಹಂತ ತಲುಪುವವರೆಗೆ, ಅಡ್ವಾನ್ಸ್‌ ಅನ್ನು ನಾವೇ ಕೂಡಿಟ್ಟುಕೊಳ್ಳುವ ಸಾಮರ್ಥ್ಯ ಬರುವವರೆಗೆ ನಮಗೆ ನಗರದ ನಂಟರ ಮನೆಯೇ ಅಡ್ರೆಸ್‌.

Wednesday, September 17, 2008

ಹುಟ್ಟಿ ಹಬ್ಬವಾಗುವ ಕ್ರಿಯೆ!

ಗುರುವಾರ ಕನ್ನಡ ಚಿತ್ರರಂಗದಲ್ಲಿ ಹುಟ್ಟುಹಬ್ಬಗಳ ಹರಿದಿನ. ಡಾ ವಿಷ್ಣುವರ್ಧನ್‌ ಹಾಗೂ ಸೂಪರ್‌ ಸ್ಟಾರ್‌ ಉಪೇಂದ್ರ ಅವರಿಗೆ ಗ್ರಾಂಡ್‌ ಹುಟ್ಟುಹಬ್ಬ. ಹಾರಗಳೂ, ತುರಾಯಿಗಳೂ, ಕೇಕುಗಳೂ, ಬಾಕುಗಳೂ ಈ ಸಂದರ್ಭದಲ್ಲಿ ಗಾಂನಗರದಲ್ಲಿ ಓಡಾಡುತ್ತವೆ. ಒಬ್ಬರು ರೆಸಲ್ಯೂಷನ್‌ ಪಾಸ್‌ ಮಾಡಬಹುದು. ಮತ್ತೊಬ್ಬರು `ನನಗೆ ಯೋಗ ಇದೆ, ಯೋಗ್ಯತೆ ಇಲ್ಲ. ಆದರೂ ನನ್ನನ್ನು ಇಷ್ಟು ವರ್ಷ ಬೆಳೆಸಿದ್ದೀರಿ. ಧನ್ಯವಾದಗಳು' ಎಂದು ಭಾಷಣ ಮಾಡಬಹುದು.
ಉಪೇಂದ್ರ ಅವರ `ಬುದ್ಧಿವಂತ' ಚಿತ್ರ ಇದೇ ದಿನ ಬಿಡುಗಡೆಯಾಗಬೇಕಾಗಿದ್ದರೂ ಸೆನ್ಸಾರ್‌ ಮಂಡಳಿ ಸೆನ್ಸಾರ್‌ ಸರ್ಟಿಫಿಕೆಟ್‌ ನೀಡದಿರುವುದರಿಂದ ಒಂದು ವಾರ ಮುಂದೆ ಹೋಗಿದೆ. ಈ ಬಗ್ಗೆ ವಾದ ವಿವಾದ, ಚರ್ಚೆ ಮಂಥನಗಳಿಗೂ ಈ ಜನ್ಮದಿನ ವೇದಿಕೆಯಾಗಬಹುದು. ಆ ಕಡೆ ವಿಷ್ಣುವರ್ಧನ್‌ ಅವರ ಹೊಸ ಚಿತ್ರ `ನಾನೇ ಬೇರೆ ನನ್ನ ಸ್ಟೈಲೇ ಬೇರೆ' ಚಿತ್ರ ಘೋಷಣೆಯಾಗುತ್ತಿದೆ. `ನಂಯಜಮಾನ್ರು' ಚಿತ್ರದ ಧ್ವನಿಸುರುಳಿ ಬಿಡುಗಡೆಯಾಗುತ್ತಿದೆ.

Tuesday, September 16, 2008

ದೇವರು ಕೋಣೆಯಲ್ಲಿರಲಿ

ಡೀ ಮಂಗಳೂರು ಮನೆ ಬಾಗಿಲು ಹಾಕಿಕೊಂಡು, ಕಿಟಕಿಯಲ್ಲಿ ಆಗಾಗ ಹಣಕಿ ಹಣಕಿ ನೋಡುತ್ತಿದೆ. ಚೆಲ್ಲಾಪಿಲ್ಲಿಯಾದ ಕಲ್ಲು, ಮಣ್ಣು, ರಕ್ತದ ಕಲೆ, ಕೋಲು, ಚಪ್ಪಲಿ, ಕನ್ನಡಕದ ಗ್ಲಾಸ್‌, ಒಡೆದ ಗಾಜು, ಮುರಿದ ಗೇಟುಗಳು ರಸ್ತೆಗಳನ್ನು ಕುಶಲ ಕೇಳುತ್ತಿವೆ.



ಆಸ್ಪತ್ರೆಗೆ ಹೋಗುವವರೂ, ಮೆಡಿಕಲ್‌ ಶಾಪ್‌ನಲ್ಲಿ ಕ್ರೋಸಿನ್‌, ಜೆಲುಸಿನ್‌ ತೆಗೆದುಕೊಂಡು ಬರಲು ಅಂದುಕೊಂಡವರೂ, ಭಾನುವಾರ ಹೊಸ ಸಿನಿಮಾ ನೊಡಿಕೊಂಡು ಬರೋಣ ಎಂದು ಆಸೆಪಟ್ಟವರೂ, ಈಶ್ವರ ದೇವಸ್ಥಾನದಲ್ಲಿ ಸೋಮವಾರ ಪೂಜೆ ಮಾಡಿಸೋಣ ಎಂದು ಭಾವಿಸಿದವರೂ ಟೀವಿಯಲ್ಲಿ ನ್ಯೂಸ್‌ ಫ್ಲಾಷ್‌ ನೋಡುತ್ತಾ ತಟಸ್ಥವಾಗಿದ್ದಾರೆ.

Tuesday, August 26, 2008

ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ

ನಾವೆಲ್ಲಾ `ಇಲ್ಲಿ ಬಂದೆ ಸುಮ್ಮನೆ'ಗಳು!
ನಮ್ಮಲ್ಲಿ ಹೆಚ್ಚಿನವರಿಗೆ `ಅಲ್ಲಿದೆ ನಮ್ಮನೆ'. ಹೊಟ್ಟೆ ಪಾಡಿನ ಹೆಸರು ಹೇಳಿಕೊಂಡು ನಮ್ಮ ಪಾಡಿಗೆ ನಾವು ಪಟ್ಟಣವಾಸಿಗಳಾದವರು. ಇಲ್ಲಿನ ಬಾಡಿಗೆ, ಭೋಗ್ಯದ ಮನೆಯಾಚೆ ನಮಗಿರುವುದು ಸೋಗೆ ಮನೆ, ನಾಡ ಹೆಂಚಿನ ಮನೆ, ಹೊಗೆ ತುಂಬಿದ ಮನೆ, ಮಳೆ ಬಂದರೆ ಮನೆ ಸೋರುವ ಮನೆ, ರಾತ್ರಿ ಪೂರ್ತಿ ಧೋ ಎಂದು ಮಳೆಯ ಸದ್ದು ಕೇಳಿದ ಮನೆ, ನಾಟಿ ಮಾಡಲು ಬೆಳಿಗ್ಗೆ ಬೇಗ ಸಜ್ಜಾದ ಮನೆ, ತೋಟಕ್ಕೆ ಔಷಧ ಹೊಡೆಸಬೇಕೆಂದು ಗಡಿಬಿಡಿ ಮಾಡಿದ ಮನೆ, ಅಮ್ಮನಿಗೆ ಅಪ್ಪ ಪೆಟ್ಟು ಕೊಟ್ಟಿದ್ದನ್ನು ರಾತ್ರಿ ಎವೆಯಿಕ್ಕದೇ ನೋಡಿದ ಮನೆ, ನೆಂಟರು ಬಂದಾಗ ಸಂಭ್ರಮಿಸಿದ ಮನೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗ ಪಾಸ್‌ ಆದಾಗ ಕುಣಿದು ಕುಪ್ಪಳಿಸಿದ ಮನೆ, ಅಜ್ಜಿ ಸತ್ತಾಗ ಅತ್ತ ಮನೆ.
ಮನೆ ಮನೆ ನಮ್ಮ ಮನೆ, ನಾನು ಅವನು ಬೆಳೆದ ಮನೆ, ಅಪ್ಪ, ಅಮ್ಮ ಇರುವ ಮನೆ...

Monday, August 25, 2008

ಈ ಮನೆಯಲ್ಲಿ ಯಾವಾಗಲೂ (ಕವಿತೆ)

ಹಲವು ಲೇಖನಗಳ ನಡುವೆ ಹೀಗೊಂದು ಕವಿತೆ ನಿಮ್ಮ ಮುಂದೆ. ಈ ಬೆಂಗಾಳಿ ಕವಿತೆ ಹಲವು ಕಾರಣಕ್ಕೆ ನಿಮ್ಮನ್ನು ತಲ್ಲಣಗೊಳಿಸುತ್ತಾ ಹೋಗುತ್ತದೆ, ಅದರ ನಡುವೆಯೇ ಸಣ್ಣ ಭರವಸೆಯನ್ನೂ ಮೂಡಿಸುತ್ತದೆ. ಬಹಳ ಸೂಕ್ಷ್ಮವಾದ ಈ ಕವಿತೆಯ `ಅನುವಾದ'ದ ಪ್ರಯತ್ನ ಮಾತ್ರ ಇಲ್ಲಿದೆ. ಮೂಲ ಕವಿತೆಯ ಸತ್ವವನ್ನು ಈ ಅನುವಾದ ತಾರದೇ ಹೋದರೆ ಕ್ಷಮೆ ಇರಲಿ.

ಯಾವಾಗಲೂ ಈ ಮನೆಯಲ್ಲಿ ಹೀಗೇ
ಬೆಳಗಿನ ಹೊಗೆ ಮನೆಯ ಮಾಡಿಂದ ಮೇಲೆ ಮೇಲೆ
ಬಾಗಿಲು, ಕಿಟಕಿಗಳ ಕಿಂಡಿಯಲ್ಲೂ
ಅವುಗಳ ನಿಟ್ಟುಸಿರ ಮಾಲೆ.
ಅಮ್ಮನ ಕಣ್ಣೀರಿನ ಮುಖವನ್ನು
ಅನ್ನದ ತಪ್ಪಲೆ,
ನೀರಿನ ಹೂಜಿಗಳು ಖಾಲಿಖಾಲಿಯಾಗಿ
ಪ್ರತಿಬಿಂಬಿಸುತ್ತಿವೆ.
ಬೀದಿಯಲ್ಲಿ ಬಿದ್ದ ಒಣ ದೂಳುಗಳ ನೋಡಿದರೆ
ಕಳೆದ ರಾತ್ರಿ ಸುರಿದದ್ದು ಮಳೆಯೋ
ರಕ್ತದ ಹೊಳೆಯೋ
ಹೇಳಲು ದುಸ್ಸಾಧ್ಯ...

ಕಿನ್ನರರ ಕತೆ ಕೇಳುತ್ತಾ
ಒಳಮನೆಯಲ್ಲಿ ನಿದ್ದೆಹೋದ
ಕಂದಮ್ಮಗಳು
ಈಗ ಕಣ್ಣುಜ್ಜುತ್ತಾ
ಖಚಿತಪಡಿಸಿಕೊಳ್ಳುತ್ತಿವೆ;
ಇದು ಕಿನ್ನರರ ಲೋಕವಲ್ಲ,
ತಮ್ಮನ್ನು ಈ ಜಗದಿಂದ ಕೊಂಡೊಯ್ಯುವ
ಯಾವ ಗಾಳಿಯೂ ಇಲ್ಲ.
ಮೆಲ್ಲ ಎದ್ದು ನಿಲ್ಲಲು ಪ್ರಯತ್ನಿಸಿದರೆ
ಎತ್ತಿದ ಕೈಗಳು
ಕಪ್ಪು ಆಕಾಶಕ್ಕೆ ಮುಖ,
ದೃಷ್ಟಿ ಮೂಕ, ಶಕ್ತಿ ಮೂಕ.
ಹೌದೇ, ಅವು ಇಷ್ಟೊತ್ತು
ಹೊಗೆ ತುಂಬಿದ ಎದೆಯಲ್ಲಿ
ಮಲಗಿಬಿಟ್ಟಿದ್ದವೇ?

ಇದೀಗ ದನಿ ಎತ್ತೆತ್ತರಕ್ಕೆ ಏರುತ್ತಿದೆ
ಅದು ನೆರೆಯ ಕೂಗೇ, ನೆರೆಮನೆಯ ಕೂಗೇ
ಸಮುದ್ರ ಮೊರೆವ ಕೂಗೇ
ಹುಡುಕುವ ಮೊದಲೇ ಉತ್ತರ,
ಕೂಗು ಏರುತ್ತದೆ ಎತ್ತರ ಎತ್ತರ..
ಮರದ ಎಲೆಗಳು ಈಗ ಅದುರುತ್ತಲೇ ಇಲ್ಲ
ಹೊಗೆ ಮಾತ್ರ ಎಂದಿನಂತೆ ಸುರುಳಿ ಸುರುಳಿಯಾಗುತ್ತಿವೆ
ಅಳುವ ಕಣ್ಣಲ್ಲೂ ಮುಖ ಎತ್ತುತ್ತಾಳೆ
ಅರೆ ಕ್ಷಣ ತಾಯಿ,
ಹೊಗೆಮನೆಯಿಂದ
ಹೊರಗಿಣುಕುವ
ಮಕ್ಕಳ ನೀನೇ ಕಾಯಿ!

ಮೂಲ: ಅರುಣ್‌ ಮಿತ್ರ (ಬೆಂಗಾಳಿ ಕವಿ)

Wednesday, August 20, 2008

ಡೆಡ್‌ ಎಂಡ್‌, ಟರ್ನ್‌ ಲೆಫ್ಟ್‌!

ಶುಭಂ, ದಿ ಎಂಡ್‌, ಸಮಾಪ್ತಿ
ಹೀಗೆ ಸಿನಿಮಾಗಳು ಮುಗಿಯುತ್ತಿದ್ದ ಕಾಲಕ್ಕೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಹೋರಡಲನುವಾಗುತ್ತಿದ್ದರು, ಮಕ್ಕಳಿಗೆ `ಸಾಕಿನ್ನು, ಟೀವಿ ಆರಿಸಿ' ಎಂಬ ಬುಲಾವ್‌ ಬರುತ್ತಿತ್ತು. ಆಟ ಬಿಟ್ಟು, ಟೀವಿ ಹಚ್ಚಿದ್ದ ಮಕ್ಕಳಿಗೆ ಆಡಲು ಮತ್ತೆ ಮನಸ್ಸಾಗುತ್ತಿತ್ತು. ಒಲೆಯ ಮೇಲಿಟ್ಟ ಅನ್ನದ ತಪ್ಪಲೆ ನೆನಪಾಗುತ್ತಿತ್ತು. ಬಿಟ್ಟ ಕೆಲಸಗಳೆಲ್ಲಾ ಎಲ್ಲರಿಗೂ ಅದೇ ಕ್ಷಣದಲ್ಲಿ ನೆನಪಿಗೆ ಬಂದು `ಥೂ ಎಲ್ಲಾ ಹಾಳಾಯಿತು' ಎಂದು ಚಿಂತೆ ಮೂಡುತ್ತಿತ್ತು.
ಆದರೆ ಸಿನಿಮಾಗಳು ಮಾರ್ಡ್ರನ್‌ ಆಗತೊಡಗಿದ ಮೇಲೆ `ದಿ ಎಂಡ್‌' ಎಂದೆಲ್ಲಾ ಯಾರೂ ಹೇಳಿ, ಸಿನಿಮಾ ಮುಗಿಸುವುದಿಲ್ಲ. ಚಿತ್ರದ ಎರಡು, ಮೂರನೇ ಸ್ತರದ ತಂತ್ರಜ್ಞರ ಹೆಸರುಗಳು ತೆರೆಯ ಮೇಲೆ ಸ್ಕ್ರೋಲ್‌ ಆಗುತ್ತಲೇ ಸಿನಿಮಾ ಮುಗಿಯಿತು ಎಂಬ ಅನುಭವ ಎಲ್ಲರಿಗಾಗುತ್ತದೆ. `ತರ್ಕ', `ಹೆಂಡ್ತಿಗ್ಹೇಳ್ತೀನಿ', `ಪಾಂಡುರಂಗ ವಿಠಲ' ಮೊದಲಾದ ಸಿನಿಮಾಗಳು ಕನ್ನಡದಲ್ಲಿ `ಮಾಡಿದರೆ ಹೀಗೆ ಸಿನಿಮಾವನ್ನು ಎಂಡ್‌ ಮಾಡಬೇಕು' ಎಂದು ತೋರಿಸಿಕೊಡುವಷ್ಟು ಅದ್ಭುತವಾಗಿವೆ. `ಸೈ' ಎಂಬ ಜಪಾನಿ ಸಿನಿಮಾವನ್ನು ನೀವ್ಯಾವಾಗಾದರೂ ನೋಡಿದರೆ `ಅಂತ್ಯ ಹೀಗಿರಬೇಕು' ಎಂದು ನೀವೆಲ್ಲರೂ ಸಂಭ್ರಮಿಸುತ್ತೀರಿ.
ಆದರೆ `ಎಲ್ಲರೂ ಕೊನೆಯಲ್ಲಿ ಸುಖವಾಗಿ ಬಾಳಿದರು' ಎಂಬರ್ಥದಲ್ಲಿ ಸಿನಿಮಾ ಅಂತ್ಯಗೊಂಡರೆ ಆತಂಕವಾಗುತ್ತದೆ. ಯಾಕೆಂದರೆ ಹಾಗಾಗಲು ಸಾಧ್ಯವೇ ಇಲ್ಲ. ಅಷ್ಟು ವರ್ಷ ಪ್ರಿಯತಮ- ಪ್ರಿಯತಮೆಯರು ಕಷ್ಟಪಟ್ಟು, ಕೊನೆಯಲ್ಲಿ ದಿಢೀರನೆ ಪೋಷಕರಿಂದ ಒಪ್ಪಿಗೆ ಪಡೆದುಕೊಂಡರೆ ಆ ಸಂಸಾರ ಮುಂದೆ ಸುಖವಾಗಿರುತ್ತದಾ? ಅಂತರ್ಜಾತಿ ವಿವಾಹ ಆದ ಮೇಲೆ ಇವನ ಮಾಂಸ, ಅವಳ ಸೊಪ್ಪು ಸದೆ ಒಟ್ಟಾಗಿ ಬಾಳುವುದು ಅಷ್ಟು ಸುಲಭದ ಮಾತಾ? ಸಿನಿಮಾ ಇಡೀ ಕೆಟ್ಟದ್ದನ್ನೇ ಮಾಡುವ ಖಳಭೂಪ, ಸಿನಿಮಾದ ಕೊನೆಯಲ್ಲಿ ಕ್ಷಮೆ ಯಾಚಿಸಿದ ಮೇಲೆ, ಒಳ್ಳೆಯತನವನ್ನು ಅವನ ಕಣ ಕಣದಲ್ಲೂ ರೂಢಿಸಿಕೊಂಡು ಬದುಕಲು ಸಾಧ್ಯವಾ?
ಸಿನಿಮಾಗಳ ಪಾತ್ರಗಳ ಬಣ್ಣ ನಿಜವಾಗಿಯೂ ಬಯಲಾಗಬೇಕಾದರೆ `ದಿ ಎಂಡ್‌'ನಿಂದ ಮತ್ತೆ ಆ ಸಿನಿಮಾ ಪ್ರಾರಂಭವಾಗಬೇಕು!
ಆಗ ಮದುವೆಯಲ್ಲಿ ಅಂತ್ಯಗೊಂಡ ಪ್ರೇಮಕತೆಗಳು ಡಿವೋರ್ಸ್‌ನಲ್ಲಿ ಪ್ರಾರಂಭವಾಗಬಹುದು. ಕೇಡಿಗಳನ್ನು ಜೈಲಿಗೆ ಹಾಕಿಸಿದ್ದ ಸಿನಿಮಾಗಳು ಮತ್ತೆ ಅವರ ಕೈಯಿಂದ ನಾಯಕ, ನಾಯಕಿಯರು ಕೊಲೆಯಾಗುವಲ್ಲಿ ಪ್ರಾರಂಭವಾಗಿಬಿಡಬಹುದು. ಒಡೆದು ಒಂದಾದ ಮನೆಗಳು ಮತ್ತೆ ಒಡೆಯುತ್ತಾ ಇನ್ನು ಹತ್ತಿಪ್ಪತ್ತು ಅಂಥ ಸಿನಿಮಾಗಳಿಗೆ ನಾಂದಿ ಹಾಡಬಹುದು. ಒಂದು ಕಾಲಕ್ಕೆ ಹೀನಾಮಾನ ಬೈದಾಡಿಕೊಂಡಿದ್ದ, ಶೀಲವನ್ನು ಶಂಕಿಸಿದ್ದ ಗಂಡ- ಹೆಂಡತಿಯರು ಮತ್ತೆ ಒಂದಾಗುತ್ತಾರೆ, ಆದರೆ ಪರಸ್ಪರರ ನಂಬಿಕೆಗೆ ಆ ಅವಯಲ್ಲಿ ಬಿದ್ದ ಕೊಡಲಿ ಏಟು ಮತ್ತಷ್ಟು `ಡಿವೋರ್ಸ್‌' ಕತೆಗಳ ಹುಟ್ಟಿಗೆ ಕಾರಣವಾಗಬಹುದಲ್ಲಾ? ನಾಯಕ ಸತ್ತ ಎಂಬಲ್ಲಿಗೆ ಕೊನೆಗೊಂಡ ಸಿನಿಮಾಗಳ ನಾಯಕಿಯರಿಗೆ ನಿಧಾನವಾಗಿ ಇನ್ನೊಬ್ಬ ಹುಡುಗನ ಜತೆ ಪ್ರೀತಿ ಪ್ರಾರಂಭವಾಗಿಬಿಡಬಹುದು.
***
ಮಲೆಯಾಳಂನಲ್ಲಿ `ರೀ ರಿಟರ್ನ್ಡ್‌' ಪುರಾಣಗಳು ತುಂಬ ಬಂದಿವೆ. `ಕಂಸಾಯಣ', `ಚಿಂತಾವಿಷ್ಠಯಾ ಸೀತಾ' ಮೊದಲಾದ ಪುರಾಣದ ಮರು ವ್ಯಾಖ್ಯೆಗಳು ಅಲ್ಲಿ ಬಂದಿವೆ. `ಚಿಂತಾವಿಷ್ಠಯಾ ಶ್ಯಾಮಲಾ' ಎಂಬ ಸಿನಿಮಾವೊಂದನ್ನೂ ನಿರ್ದೇಶಕ ಶ್ರೀನಿವಾಸನ್‌ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಮ್ಮ ಎಲ್ಲಾ ಜನಪ್ರಿಯ ಸಿನಿಮಾಗಳನ್ನೂ ಹೀಗೆ ಅಂತ್ಯದಿಂದ ಆರಂಭಿಸಿದರೆ, ಇರುವ ಕತೆಗೆ ಮರು ವ್ಯಾಖ್ಯಾನವನ್ನು ನೀಡಲು ಸಾಧ್ಯವಾದರೆ ಕತೆ ಇಲ್ಲ ಎನ್ನುವವರ ಬಾಯಿ ಒಂದಷ್ಟು ದಿನವಾದರೂ ಬಂದ್‌ ಆಗಬಹುದು.
ರೀಮಿಕ್ಸ್‌ ಮಾಡುವವರು ಹ್ಯಾಗೆ ಇರುವ ಹಾಡನ್ನು `ಇಲ್ಲವಾಗಿಸುವಂತೆ' ಹಾಡುತ್ತಾರೋ ಹಾಗೆ ಇರುವ ಕತೆಯನ್ನು ಅದೇ ಅಲ್ಲ ಎನ್ನುವಂತೆ ಹೊಸದಾಗಿಯೇ ಹೇಳಲು ಪ್ರಯತ್ನಪಡಬಹುದು. ಹಾಗೆ ಒಂದಿಷ್ಟು ಪ್ರಯತ್ನಗಳು ನಡೆದರೆ ಒಂದಿಷ್ಟು ಹೊಸತನವಾದರೂ ಬರುತ್ತದೆ. ಹಾಗೆ ನೋಡಿದರೆ ಕನ್ನಡದಲ್ಲಿ ಎರಡನೇ ಭಾಗಗಳೇ ಅಷ್ಟು ಯಶಸ್ವಿಯಾಗಿ ಮೂಡಿ ಬಂದಿಲ್ಲ. ಆ ಬಗ್ಗೆ ಆಲೋಚಿಸುವುದು ಚಿತ್ರರಂಗದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
***
ಹೀಗೆ ಒಂದು ಆಲೋಚನೆಯನ್ನು ಹುಟ್ಟುಹಾಕಿದ್ದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ `ಏಕವ್ಯಕ್ತಿ ನಾಟಕೋತ್ಸವ'. ಕೃಷ್ಣಮೂರ್ತಿ ಕವತ್ತಾರ್‌ ಎನ್ನುವ ನಿರ್ದೇಶಕ, ನಟರ `ಸಾಯುವನೇ ಚಿರಂಜೀವಿ' ನಾಟಕ ನೂರು ಪ್ರದರ್ಶನದ ಗಡಿಯನ್ನು ಮುಟ್ಟಿದೆ. ಆ ಕಾರಣಕ್ಕೆ ಏಳು ದಿನಗಳ `ಒನ್‌ ಮ್ಯಾನ್‌ ಶೋ' ಉತ್ಸವ ಬೆಂಗಳೂರಿನ `ನಯನ' ಸಭಾಂಗಣದಲ್ಲಿ ನಡೆಯುತ್ತಿದೆ. ಬರುವ ಭಾನುವಾರ (ಆಗಸ್ಟ್‌ 24ರವರೆಗೆ) ನಡೆಯುವ ಈ ಉತ್ಸವದಲ್ಲಿ ನಮ್ಮ ಎಲ್ಲಾ ಪುರಾಣ ಪಾತ್ರಗಳ ಮರು ವ್ಯಾಖ್ಯಾನದ ಪ್ರಸಂಗಗಳೇ ಹೆಚ್ಚಿವೆ. ಈಗಾಗಲೇ ಮಂಗಳಾ ಅವರು ನಡೆಸಿಕೊಟ್ಟ `ಊರ್ಮಿಳಾ' ಪ್ರದರ್ಶನ ರಾಮಾಯಣದ `ಊರ್ಮಿಳಾ' ಪಾತ್ರವನ್ನು ಕುರಿತಾದ್ದು.
ಡಾ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರು ರಚಿಸಿದ ಈ ನಾಟಕ ಪ್ರಾರಂಭವಾಗುವುದೇ 14 ವರ್ಷ ವನವಾಸ ಮುಗಿದ ದಿನದಿಂದ. ಆವರೆಗೆ ಊರ್ಮಿಳಾ ಅನುಭವಿಸಿದ ನೋವು, ನಿರಾಶೆ, ಹತಾಶೆ, ಒಂಟಿತನ, ಆಕೆ ರಾಮಾಯಣವನ್ನು ವಸ್ತುನಿಷ್ಠವಾಗಿ, ಕಟುವಾಗಿ ವಿಶ್ಲೇಷಿಸುವ ರೀತಿ ತುಂಬ ಅರ್ಥಗರ್ಭಿತ. ಗುರುವಾರ `ಅಲೆಗಳಲ್ಲಿ ಅಂತರಂಗ' ನಾಟಕವಿದೆ. ವೈದೇಹಿ ಅವರು ಬರೆದ ಕತೆಯ ಆಧಾರವಿರುವ ಆ ನಾಟಕದಲ್ಲಿ ಶಾಕುಂತಲಾ ಕೇಂದ್ರ ಪಾತ್ರ. ಆಕೆ ಇಡೀ `ಅಭಿಜ್ಞಾನ ಶಾಕುಂತಲ' ಪ್ರಕರಣವನ್ನು ತನ್ನ ದೃಷ್ಟಿಕೋನದಲ್ಲಿ ನೋಡುತ್ತಾಳೆ. ಆ ಪಾತ್ರವನ್ನು ಸೀತಾ ಕೋಟೆ ನಿರ್ವಹಿಸುತ್ತಾರೆ. ಅದೇ ಥರ ಬಿ ಜಯಶ್ರೀ ಅವರ `ಉರಿಯ ಬೇಲಿ' ಏಕವ್ಯಕ್ತಿ ಪ್ರದರ್ಶನ ಶುಕ್ರವಾರ ಇದೆ. ಅದೂ ಒಂದು ಪುರಾಣ ಪಾತ್ರದ ವಿಶ್ಲೇಷಣೆಯಂತೆ. ಡಾ ಎಚ್‌ ಎಸ್‌ ವೆಂಕಟೇಶ ಮೂರ್ತಿ ಅವರು ಬರೆದ ನಾಟಕ ಇದೂ ಕೂಡ. ಆಮೇಲೆ ಕೈಲಾಸಂ ಅವರೇ ತಮ್ಮ ಜೀವನ, ಪಾತ್ರಗಳನ್ನು ವಿಶ್ಲೇಷಿಸುವ `ಟಿಪಿಕಲ್‌ ಟಿಪಿ ಕೈಲಾಸಂ' ನಾಟಕ ಶನಿವಾರ ಇದೆ. ಟಿ ಎನ್‌ ನರಸಿಂಹನ್‌ ಬರೆದ ಈ ನಾಟಕವನ್ನು ಸಿ ಆರ್‌ ಸಿಂಹ ನಿರ್ವಹಿಸುತ್ತಾರೆ. ಕಡೆಯಲ್ಲಿ ಅಶ್ವತ್ಥಾಮನ್‌ನ ಆಂತರಿಕ ತೊಳಲಾಟದ ನಾಟಕ: ಸಾಯುವನೇ ಚಿರಂಜೀವಿ. ಕೃಷ್ಣಮೂರ್ತಿ ಕವತ್ತಾರ್‌ ನಾಟಕ ಅದು.
ಪ್ರತಿ ದಿನ ಸಂಜೆ ಏಳಕ್ಕೆ ಬೆಂಗಳೂರಿನ ಟೌನ್‌ಹಾಲ್‌ ಪಕ್ಕದ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ `ಕನ್ನಡ ಭವನ'ದ ತಳಮನೆ `ನಯನ'ದಲ್ಲಿ ಈ ನಾಟಕಗಳ ಪ್ರದರ್ಶನ. ನೆನಪಿರಲಿ. ಎಲ್ಲಾ ನಾಟಕಗಳ ಪ್ರವೇಶ ದರ ಮೂವತ್ತು ರೂಪಾಯಿಗಳು.

Saturday, August 16, 2008

ದೋಣಿ ಸಾಗಲಾ ಮುಂದೆ ಹೋಗಲಾ?

ದೆಷ್ಟೋ ಮುಖ್ಯಮಂತ್ರಿಗಳು ಪ್ರತಿ ವರ್ಷ ಕಾವೇರಿ ನದಿಗೆ ಬಾಗೀನವನ್ನು ತೇಲಿ ಬಿಡುತ್ತಿದ್ದ ಹೊತ್ತಿಗೆ ಆಗ ಬಾಲ್ಯದಲ್ಲಿದ್ದ ನನ್ನಂಥವರು ನೀರಿನಲ್ಲಿ ಕಾಗದದ ದೋಣಿ ತೇಲಿ ಬಿಡುತ್ತಿದ್ದೆವು.
ಕಾಗದದ ದೋಣಿಗಳಿಗಾಗಿ ಜೀವತೆತ್ತ ನೋರ್ಟ್ಸ್‌ ಹಾಳೆಗಳೂ, ಪತ್ರಿಕೆಯ ಪುಟಪುಗಳೂ, ಅಮ್ಮ ಕೂಡಿಟ್ಟ ಅಮೂಲ್ಯ ರಸೀತಿ ಪತ್ರಗಳೂ, ತವರುಮನೆಯಿಂದ ಅಮ್ಮನಿಗೆ ಬರುತ್ತಿದ್ದ ಕಾಗದ, ಪತ್ರಗಳೂ ದೋಣಿಯಾಗಿ ಮನೆಯ ಅಂಗಳದ ನೀರಲ್ಲಿ ತೇಲಿಸೋ ಇಲ್ಲಾ ಮುಳುಗಿಸೋ ಎಂದು ಸದ್ದಿಲ್ಲದೇ ಹುಯಿಲಿಡುತ್ತಿದ್ದವು. ದೋಣಿ ಹೆಸರಲ್ಲಿ ನೀರುಪಾಲಾದ ಕಾಗದ, ಪತ್ರಗಳನ್ನು ಕಂಡು ಕಂಗಾಲಾಗಿ ಅಮ್ಮ ರಾತ್ರಿ ಬೆತ್ತದ ಸೇವೆ ಮಾಡುತ್ತಿದ್ದಳು. ನಾವು ಇನ್ನಷ್ಟು ಪೆಟ್ಟು ಬೀಳದಿರಲಿ ಎಂದು ಪೆಟ್ಟಿಗೆ ಮುಂಚೆ ಅಳುವಿನ ಸೇವೆ ಮಾಡುತ್ತಿದ್ದೆವು.
ನಾವು ಇಲ್ಲದ ಕರೆಂಟಿನ ಬೇಜಾರನ್ನು, ಇನ್ನೂ ಹಾಕಿಸದ ಟಿವಿಯ ಬಗ್ಗೆ ನೋವನ್ನೂ, ಮಳೆ ಇದ್ದರೂ ಎರಡು ಮೂರು ಕಿಲೋಮೀಟರ್‌ಗಟ್ಟಲೆ ನಡೆದು ಶಾಲೆಗೆ ಸೇರಬೇಕಲ್ಲಾ ಎಂಬ ಮುನಿಸನ್ನೂ, ಹೋಂವರ್ಕ್‌ ಮಾಡಬೇಕೆಂಬ ಸಂಕಟವನ್ನೂ, ಮುಗಿಯದ ಪಿರಿಪಿರಿ ಮಳೆಯನ್ನು ತಡೆಯಲು ಯಾರೂ ಇಲ್ಲವೇ ಎಂಬ ಅಳುಕನ್ನೂ ಮೀರುತ್ತಿರುವಂತೆ ಕಾಗದ, ಪತ್ರ, ಪತ್ರಿಕೆಗಳನ್ನು ಒಂದೊಂದಾಗಿ ಪರಪರನೆ ಸಾಯಿಸುತ್ತಾ ದೋಣಿ ಮಾಡುತ್ತಿದ್ದೆವು. ಹೋದ ಕರೆಂಟ್‌ಗೆ, ಕಾಟ ಕೊಡುವ ತರಗತಿಗಳಿಗೆ, ನಿಲ್ಲದ ಮಳೆಗೆ, ಮುಗಿಯದ ಓದಿಗೆ ಕಂಪ್ಲೆಂಟ್‌ ಬರೆದು ಕಳಿಸುವಂತೆ ದೋಣಿರಾಯನನ್ನು ರಾಯಭಾರಿ ಮಾಡುತ್ತಿದ್ದೆವು. ಆದರೆ ಹೋದ ದೋಣಿ ಒಂದೂ ಮರಳಿ ಬರುತ್ತಿರಲಿಲ್ಲ ಅಥವಾ ಮರಳಿ ಬರಲು ಈವರೆಗೂ ಆ ದೋಣಿಗಳಿಗೆ ನಮ್ಮ ಮನೆಯ ದಾರಿ ಸಿಕ್ಕಿಲ್ಲ!
***
ಹಳ್ಳಿಗಳ ಹುಡುಗರೆಲ್ಲಾ ಮಳೆಗಾಲದಲ್ಲಿ ಒಂದೇ ಸಮನೆ ದೋಣಿ ಬಿಟ್ಟರೆ ಸುಮಾರು ಹತ್ತು ವರ್ಷಗಳಲ್ಲಿ ದೋಣಿಗಳ ಸಂಖ್ಯೆ ಅದೆಷ್ಟಾಗಿರಬೇಡ? ಹಾಗಾಗಿ ಮಕ್ಕಳೆಲ್ಲಾ ದೊಡ್ಡವರಾಗುವ ಹೊತ್ತಿಗೆ, ದೊಡ್ಡವರಾಗಿ ದೊಡ್ಡ ಪಟ್ಟಣ, ಉದ್ದ ಕಟ್ಟಡಗಳಲ್ಲಿ ಕೆಲಸ ಹುಡುಕಿಕೊಳ್ಳುವ ಹೊತ್ತಿಗೆ ಅಮ್ಮನ ಸಾಲ ಸೋಲದ ಕಾಗದ ಪತ್ರಗಳೂ ಹೆಚ್ಚಾಗಿವೆ, ಆ ಪತ್ರಗಳನ್ನೇ ದೋಣಿ ಮಾಡಿಕೊಳ್ಳುತ್ತಾ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಅರೆ, ಅರೆ. ಮಕ್ಕಳು ನೋಡು ನೋಡುತ್ತಲೇ ಆ ಕಾಗದದ ದೋಣಿಗಳನ್ನೇ ಏರಿ ಪಟ್ಟಣ ಸೇರಿದ್ದಾರೆ, ಸೇರುತ್ತಿದ್ದಾರೆ. ನಮ್ಮ ದೋಣಿಗಳಿಗಾಗಿ ಅಪ್ಪ, ಅಮ್ಮನ ಸಾಲ ಸೋಲದ ಕಾಗದ ಪತ್ರಗಳು ಆತ್ಮಹತ್ಯೆ ಮಾಡಿಕೊಂಡಿವೆ. ಅವುಗಳ ಆತ್ಮಹತ್ಯೆಯ ಸೌಧದ ಮೇಲೆ ನಮ್ಮ ಮೊಬೈಲು, ನಮ್ಮ ಲ್ಯಾಪ್‌ಟಾಪ್‌, ನಮ್ಮ ಕರೆನ್ಸಿ, ನಮ್ಮ ಕರೆಂಟ್‌ ಅಕೌಂಟ್‌, ನಮ್ಮ ಅಪಾರ್ಟ್‌ಮೆಂಟ್‌, ಕಾರು, ಮೊಬೈಕು, ಇ ಮೈಲ್‌, ಜಿ ಟಾಕ್‌, ಏರೊಪ್ಲೇನ್‌...
***
ಈಗ ನಾವು ಹಬೆಯ ಕಾಫಿ ಕುಡಿಯುತ್ತಾ ಪೇಪರ್‌ ಓದುತ್ತಿದ್ದೇವೆ. ನಮ್ಮ ಪೇಪರ್‌ನೊಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಾಗೀನವನ್ನು ಕಾವೇರಿಯೊಳಗೆ ತೇಲಿಬಿಟ್ಟ ಫೋಟೋ, ಮೂರು ಕಾಲಮ್ಮು ಸುದ್ದಿ. ನನಗೆ ಬೆವರು ಬರುತ್ತದೆ, ಈವರೆಗೆ ಮುಖ್ಯಮಂತ್ರಿಗಳೆಲ್ಲಾ ಬಿಟ್ಟು ಬಿಟ್ಟ ಬಾಗೀನಗಳೆಲ್ಲಾ ನಮ್ಮ ಕಾಗದದ ದೋಣಿಗಳಂತೆ ಇಡೀ ರಾಜ್ಯವನ್ನು, ರಾಷ್ಟ್ರವನ್ನು ತುಂಬಿಬಿಟ್ಟಿವೆಯೇ? ಹಾಗಾಗಿಯೇ ಊರೂರುಗಳಲ್ಲಿ ಮನೆ, ಮಠ, ಮನುಷ್ಯ, ಮಕ್ಕಳು ಮುಳುಗಿ ಹೋಗುತ್ತಿದ್ದಾರಾ?
ಇದೀಗ ಮಳೆಗೆ ಸತ್ತ ಮಕ್ಕಳು, ಮುರಿದು ಹೋದ ಮನೆ, ಕುಸಿದುಬಿದ್ದ ಛಾವಣಿ, ಎಡಕ್ಕೆ ಮಗುಚಿ ಬಿದ್ದ ಬಾಗಿಲು, ಕಿಟಕಿಗಳೆಲ್ಲಾ ನನಗೆ ಕಾಗದದ ದೋಣಿಯ ಹಾಗೆ ಕಾಣುತ್ತಿವೆ.
ಒದ್ದೆಯಾಗಿ, ಮುದ್ದೆಯಾಗಿ, ಇನ್ನಷ್ಟು ಸಾವಿನ ಸುದ್ದಿಯನ್ನು ಇನ್ನೇನು ತಂದು ಪತ್ರಿಕೆಗಳ ಕಾಗದಗಳಲ್ಲಿ ತುಂಬಲಿರುವಂತೆ... `ಬ್ರೇಕಿಂಗ್‌ ನ್ಯೂಸ್‌'ಗಳ ಹೊಟ್ಟೆಯನ್ನು ಕಷ್ಟಪಟ್ಟು ತುಂಬುತ್ತಿರುವಂತೆ...

Tuesday, August 12, 2008

ಮುಕ್ತ... ಮುಕ್ತ...

ಧಾರಾವಾಹಿ ಎಂಬ ಶ್ರೀ ಕೃಷ್ಣ ಪರಮಾತ್ಮ ಸಂಜೆ ಆರರಿಂದ ಪ್ರಾರಂಭವಾಗಿ ರಾತ್ರಿ ಹತ್ತೂವರೆವರೆಗೆ ಮುಂದುವರಿಯುವ `ಮಧ್ಯಮವರ್ಗದ ಜೀವನ'ವನ್ನು ಪೊರೆಯುತ್ತಿದ್ದಾನೆ. ಆ ಹೊತ್ತಿಗೆ ಮನೆಯಲ್ಲಿರುವ ಹೆಣ್ಣುಮಕ್ಕಳು ಕೆಲಸ ಮರೆಯುತ್ತಾ, ಹೆಂಗಸರು ಒಲೆ ಮೇಲಿಟ್ಟ ಅನ್ನ ಮರೆಯುತ್ತಾ, ಗಂಡಸರು ಓದಲಿಟ್ಟ ಪೇಪರ್‌ ಮರೆಯುತ್ತಾ, ಗಂಡು ಮಕ್ಕಳು ಸಂಜೆಯಾಗುವವರೆಗೂ ಆಡುವ ಕ್ರಿಕೆಟ್‌ ಮರೆಯುತ್ತಾ ಟೀವಿ ಮುಂದೆ ಪ್ರತಿಷ್ಠಾಪಿಸಲ್ಪಡುತ್ತಾವೆ...

ಕೃಷ್ಣನಾ ಕೊಳಲಿನ ಕರೆ

ತೊಟ್ಟಿಲ ಹಸುಗೂಸು ಮರೆ ಮರೆ

ೃಂದಾವನಕೆ ತ್ವರೆ ತ್ವರೆ

ಕೃಷ್ಣನ... ಕೊಳಲಿನ... ಕರೆ...

***

`ಮಿಂಚು'ವಿನ ಜಗದೀಶ ಆರಾಮಾಗಲಿ, ಅಲ್ಲಿನ ರಾಜೀವನಿಗೆ ಜೈಲಾಗಲಿ, ಕಾತ್ಯಾಯಿನಿ ಮತ್ತೆ ಹುಟ್ಟಿ ಬರಲಿ, ಸಂಜನಾಗೆ ಇನ್ನೊಂದು ಮದುವೆಯಾಗಲಿ, `ಮುಗಿಲು'ಗಳೇ ಎಂಬ ಟೈಟಲ್‌ ಸಾಂಗ್‌ ಅನ್ನು ದಿನವೂ ಸಂಪೂರ್ಣ ಹಾಕುತ್ತಿರಲಿ, ಪಟ್ರೆ ಅವನಿಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲಿ, ಮೇಘಕ್ಕನಿಗೆ, ತಂಗಿ ವರ್ಷಾಗೆ ನ್ಯಾಯ ಸಿಗಲಿ, ಸುರಭಿಗೆ ಇನ್ನೊಂದು ಮದುವೆ ಆಗದಿರಲಿ, ಸುರಭಿ- ಶಶಿ ಒಂದಾಗಲಿ, `ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...' ಹಾಡಂತೆ ಟಿ ಎನ್‌ ಸೀತಾರಾಂ ಹೆಣ್ಣು ಮಕ್ಕಳ ಜೀವ ತಿಂದು ಕತೆಯನ್ನು ಮುಂದುವರಿಸುತ್ತಾ ಹೋಗಲಿ, ಬೇಗ ಬೇಗ ಕೋರ್ಟ್‌ ಸೀನ್‌ ಬರಲಿ, ಸೀತಾರಾಂ ಆಗಾಗ ಕಾಣಿಸಿಕೊಂಡು ಯಾರನ್ನಾದರೂ ಬೈಯ್ಯುತ್ತಿರಲಿ...

ಮುಗಿಲು ಮೂಕವಾಗಿ

ಯುಗವೇ ತಾಪವಾಗಿ

ಕತ್ತಲು ಬಿರಿದು ಮಿಂಚೀತೇ ಇಂದು

ಮಿಂಚು ಮಿಂಚು ಸುಳಿ ಮಿಂಚು

ಅದು ಬೇಟೆಯಾಡುವ ಮಿಂಚು...

***

ಟೀವೀಲಿ ಒಂದೊಂದು ದಿನ ಒಂದೊಂದು ಧಾರಾವಾಹೀಲಿ ಗರ್ಭಪಾತ ಮಾಡಿಸ್ಕೊಳ್ಳೋಕೆ ಹೋಗ್ತಾ ಇರ್ತಾರೆ, ಚಾನಲ್‌ನೋರೇ ಏನೂ ಹೇಳೋಲ್ಲ. ಇನ್ನು ನಾನು ಈ ಗರ್ಭ ತೆಗೆಸಿಕೊಂಡರೆ ಏನಾಗುತ್ತದೆ ಅಮ್ಮ ಎಂದು ಐಟಿ ಫರ್ಮ್‌ ಒಂದಕ್ಕೆ ರಾತ್ರಿ ಪಾಳಿಗೆ ಹೋಗುವ ಮಗಳು ಅಮ್ಮನನ್ನು ಕೇಳುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲೆಲ್ಲಾ ಕಾಲು ಊನ, ಕೈ ಊನ ಮಾಡಿಕೊಂಡ ಹೆಣ್ಣು ಮಕ್ಕಳು ಇದ್ದೇ ಇರ್ತಾರೆ ಎಂದು ಗಾಲಿಕುರ್ಚಿ ಮೇಲೆ ಕುಳಿತು ಇಡೀ ದಿನ ಕಳೆಯುವ ಹುಡುಗಿ `ಟೀವಿ ಆರಿಸು'ವಂತೆ ಹಠ ಹಿಡಿಯುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲಿ ಗಂಡಸರಲ್ಲಿ ಒಬ್ಬರಿಲ್ಲಾ ಒಬ್ಬರು ಬೇಜವಾಬ್ದಾರರಿರುತ್ತಾರಲ್ಲಾ ಎಂದು ಒಬ್ಬ ಮಗ ಮನೆಯಲ್ಲೇ ಪಿ ಎಚ್‌ಡಿ ಮಾಡುತ್ತಾನೆ.

ತನ್ನಾವರಣವೇ ಸೆರೆ ಮನೆಯಾದರೆ

ಜೀವಕೆ ಎಲ್ಲಿಯ ಮುಕ್ತಿ...

ಬೆಳಕಿನ ಬಟ್ಟೆಯ ಮುಟ್ಟುವ ಜ್ಯೋತಿಗೆ

ಬಯಲೇ ಜೀವನ್ಮುಕ್ತಿ...

***

ಪ್ರೇಕ್ಷಕ ಪರಮಾತ್ಮನ ಕೈಯ್ಯಲ್ಲಿ ರಿಮೋಟ್‌ ಎಂಬ ಸುದರ್ಶನ ಚಕ್ರ. ಬಟನ್‌ಗಳು ಒತ್ತುತ್ತಾ ಹೋದಂತೆ `ಸುವರ್ಣ ನ್ಯೂಸ್‌ಗೆ ಸ್ವಾಗತ, ಮುಖ್ಯಾಂಶಗಳು... ಬಾಂಬ್‌ ದಾಳಿ ಬಗ್ಗೆ ನಿಮಗೇನನ್ನಿಸುತ್ತದೆ... ನೀವು ತುಂಬ ಚೆನ್ನಾಗಿ ಹಾಡಿದಿರಿ, ಆದರೆ ಶ್ರುತಿ ಬಗ್ಗೆ ಸ್ವಲ್ಪ ಗಮನ ಕೊಡಿ. ಸಾಹಿತ್ಯ ಸ್ಪಷ್ಟವಾಗಿರಲಿಲ್ಲ. ಎರಡನೇ ಪ್ಯಾರಾ ಎರಡನೇ ಲೈನ್‌ನಲ್ಲಿ ಶಾರ್ಪ್‌ ಹಾಡಿದಿರಿ, ಆದರೆ ಅದು ಫ್ಲಾಟ್‌. ಆದರೆ ಓವರ್‌ ಆಲ್‌ ಒಳ್ಳೆಯ ಪರ್‌ಫಾರ್ಮೆನ್ಸ್‌... ಇವತ್ತು ನಮ್ಮ ಜತೆಗಿದ್ದಾರೆ ಕನ್ನಡ ಚಿತ್ರರಂಗದ ಖ್ಯಾತ ಕತೆಗಾರ ಅಜ್‌ ಕುಮಾರ್‌. ಇವರ ಈವರೆಗಿನ ಚಿತ್ರಗಳ ಮೌಲ್ಯಗಳ ಬಗ್ಗೆ ಇಲ್ಲಿ ಒಂದು ಗಂಟೆಗಳ ಕಾಲ ಡಿಸ್‌ಕಷನ್‌... ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ... ನೀವು ಗೆದ್ದಿರೋದು ಎರಡು ಸಾವಿರ ರೂಪಾಯಿಗಳ ಚಿನ್ನ, ಚಪ್ಪಾಳೆ...

ಅಯ್ಯೋ ಮತ್ತೆ ಪವರ್‌ಕಟ್‌!

ದೇವರೇ ಕರೆಂಟು ಬೇಗ ಬರಲಿ, ಧಾರಾವಾಹಿಗಳ ಕತೆ ಮುಗಿಯದಿರಲಿ, ಎಷ್ಟೇ ವರ್ಷವಾಗಲೀ, ಧಾರಾವಾಹಿ ನಿಲ್ಲದಿರಲಿ, ಬಾಂಬ್‌ ಬ್ಲಾಸ್ಟ್‌ ಬಗ್ಗೆ ಒಂದೊಂದು ಚಾನಲ್‌ನವರು ಒಂದೊಂದು ವಿಶೇಷ ಕಾರ್ಯಕ್ರಮ ಮಾಡುತ್ತಿರಲಿ, ಬಾಂಬ್‌ ಬ್ಲಾಸ್ಟ್‌ ಹೀಗೇ ಮುಂದುವರಿಯಲಿ, `ಸಿಂಗರ್‌ ಹಂಟ್‌' ಕಾರ್ಯಕ್ರಮಗಳಲ್ಲಿ ಮಕ್ಕಳು ಶ್ರುತಿ ಸೇರಿಸಿ ಹಾಡಲಿ, ಜಡ್ಜ್‌ಗಳು `ಶ್ರುತಿ ಸರಿಯಿರಲಿಲ್ಲ' ಎಂದು ಕಾಮೆಂಟ್‌ ಮಾಡುತ್ತಿರಲಿ...

Sunday, August 10, 2008

ಅಳು ಬರುವ ಹಾಗಿದೆ...


ಮಳೆಗಾಲ ಉತ್ಕರ್ಷ ಸ್ಥಿತಿಯಲ್ಲಿ ಇರಬೇಕಾಗಿದ್ದ ಈ ಆಗಸ್ಟ್‌ ತಿಂಗಳ ಆರಂಭ ಭಾಗದಲ್ಲಿ `ಮಳೆ ಬರುವ ಸೂಚನೆ'ಯಲ್ಲೇ ದಿನಾ ಬೆಳಗಾಗುತ್ತಿದೆ. ಬರುವ ಸ್ವಾತಂತ್ರ್ಯ ದಿನಾಚರಣೆ, ಬರುವ ವರಮಹಾಲಕ್ಷ್ಮೀ ಹಬ್ಬ, ಬರುವ ಚೌತಿ, ಬರುವ ಕೃಷ್ಣಾಷ್ಟಮಿಗಳನ್ನು ಬರಮಾಡಿಕೊಳ್ಳಲು ಯಾಕೆ ಯಾರಿಗೂ ಮನಸೇ ಇಲ್ಲ?
`ಒಂದು ಕಾಲಕ್ಕೆ ಹಬ್ಬ ಎಂದರೆ ಎಂಥ ಗೌಜು, ಎಂಥ ಗದ್ದಲ, ಎಂಥ ಮೋಜು, ಎಂಥ ಮಸ್ತಿ...' ಎಂದು ಹಳೆಯ ರಾಗವನ್ನು ಹಾಡಬೇಕೆಂದಿಲ್ಲ. ಆದರೆ ಈ ಸಲ ಒಂದು ಕಡೆ ಮಳೆಯ ಅಬ್ಬರ, ಮತ್ತೊಂದು ಕಡೆ ಮಳೆ ಬರುವ ಸೂಚನೆ. ಇದರ ನಡುವೆ ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಿದಂತೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಬಾಂಬ್‌ ಸಿಡಿತದ ಸದ್ದು. ಮಕ್ಕಳನ್ನು ಪೇಟೆಯಲ್ಲಿ ಬಿಟ್ಟ ಅಪ್ಪ ಅಮ್ಮಂದಿರು ಊರಿನಿಂದ ದಿನಕ್ಕೊಂದಾವರ್ತಿ ಫೋನ್‌ ಮಾಡುತ್ತಾರೆ. `ಹ್ಯಾಗಿದೀಯೋ, ಬಾಂಬ್‌ ಬ್ಲಾಸ್ಟ್‌ ಆಯ್ತಂತೆ' ಎಂದು ಆತಂಕದ ಮಾತುಗಳ ನಡುವೆ ಕಂಪಿಸುತ್ತಿದ್ದಾರೆ.
ಆದರೆ ಹಬ್ಬ ಎಂದರೆ ಊರಿಗೆ ಹೋಗಲು ರಜೆ ಸಿಗಬೇಕು, ಬಸ್‌ಸ್ಟ್ಯಾಂಡ್‌ಗೆ ಹೋಗಲು ಮಳೆ ಬಿಡಬೇಕು, ಟಿಕೇಟು ಮೊದಲೇ ಮಾಡಿಸಿಟ್ಟುಕೊಂಡಿರಬೇಕು. ಸಿಗುವ ನಾಲ್ಕು ದಿನದ ರಜೆಯ ಹೊತ್ತಿಗೆ ಆಫೀಸಲ್ಲಿ ಆಗಬೇಕಾದ ಕೆಲಸವನ್ನು ಮೊದಲೇ ಮುಗಿಸಿಕೊಳ್ಳಬೇಕು. ಇದೆಲ್ಲಾ ಆದ ಮೇಲೂ ರಜೆ ಸಿಕ್ಕ ಮೇಲೂ, ಅಬ್ಬಾ ಎಂದು ನಿಟ್ಟುಸಿರು ಬಿಟ್ಟಂತೆ ಊರಿನ ಬಸ್‌ ಇಳಿದ ಮೇಲೂ ಹಬ್ಬದ ಕಳೆ ಬರುವುದಿಲ್ಲ. ಅಡಕೆ ತೋಟಕ್ಕೆ ಔಷ ಹೊಡೆಸಿಲ್ಲ, ಬಿತ್ತನೆ ಬೀಜದ ರೇಟು ಜಾಸ್ತಿ ಆಯ್ತು, ಮಳೆ ಕಡಿಮೆಯಾಗದೇ ಹೋದರೆ ಯಾ ಮಳೆ ಬರದೇ ಹೋದರೆ ಎಂಬ ಆತಂಕ. ಹಬ್ಬದ ದಿನ ದೇವರಿಗೆ ಮಹಾಮಂಗಳಾರತಿ ನಡೆಯುವಾಗಲೂ ಅಮ್ಮನ ಮುಖದಲ್ಲಿ ಸಣ್ಣ ಆತಂಕ, ಅದರ ನಡುವೆಯೂ ಊರಿಗೆ ಅಪರೂಪಕ್ಕೆ ಬಂದಿರುವ ಮಗ- ಸೊಸೆಯರನ್ನು ವಿಚಾರಿಸಿಕೊಳ್ಳಬೇಕಾದ ಅನಿವಾರ್ಯ.
ಬೆಂಗಳೂರಿನ ಆತಂಕಕ್ಕಿಂತ ಹಳ್ಳಿಯ ಅಪ್ಪ ಅಮ್ಮನ ಆತಂಕ ಹೆಚ್ಚೋ ಕಡಿಮೆಯೋ ಎನ್ನುವ ಆಲೋಚನೆಯಲ್ಲಿ ಮಗ- ಸೊಸೆಯ ನಾಲ್ಕು ದಿನಗಳ ರಜೆ ಮುಗಿದು ಹೋಗುತ್ತದೆ. ಜಿನಿಗುಡುವ ಮಳೆ. ಸರ್ಕಾರ ದಯೆಪಾಲಿಸಿದ ಪವರ್‌ಕಟ್‌. ಯಾರಿಗೋ ಹಬ್ಬದ ದಿನವೇ ಹುಷಾರಿಲ್ಲ. ಫೋನ್‌ ಡೆಡ್‌ ಆಗಿದೆ, ದನ ಕರು ಹಾಕಿದೆ, ಆದರೆ ಕಸ ಬಿದ್ದಿಲ್ಲ. ಆ ಕರು ಇಷ್ಟು ರಾತ್ರಿ ಆದರೂ ಮನೆಗೆ ಬಂದಿಲ್ಲ ನೋಡೋ ಮಾರಾಯ. ಈ ಊರಲ್ಲಿ ಯಾವಾಗಲೂ ಫೋನು ಕೆಟ್ಟು ಹೋಗುತ್ತದೆ, ಒಂದು ಮೊಬೈಲು ಕೊಡಿಸಿಬಿಡಲಾ? ಮೊಬೈಲ್‌ ತೆಗೆದುಕೊಳ್ಳಬೇಕಾದರೆ ಇಬ್ಬರ ಆಥರೈಜೇಷನ್‌ ಬೇಕು ಎಂಬ ಸರ್ಕಾರದ ಹೊಸ ಕಾನೂನು. ಬೆಂಗಳೂರಿನಲ್ಲಿ ಮತ್ತೆ ಬಾಂಬ್‌ ಸ್ಪೋಟ, ಯಾರಿಗೂ ಗಾಯಗಳಾಗಿಲ್ಲ. ನಿಮ್ಮ ಟಾಯ್ಲೆಟ್‌ ಬೆಳ್ಳಗಾಗಬೇಕಾದರೆ ಹಾರ್ಪಿಕ್‌ ಬಳಸಿ. ನಿಮ್ಮ ಮಕ್ಕಳು ಪ್ಯೂರಿಫೈಯರ್‌ನ ನೀರನ್ನೇ ಕುಡಿಯುತ್ತಾರಾ. ಮಾತಾಡೋನೇ ಮಹಾಶೂರ. ಈ ಇಪ್ಪತ್ತೈದು ವರ್ಷದ ಯುವತಿ ಕಾಣೆಯಾಗಿದ್ದಾಳೆ, ಇನ್ನೂ ಮನೆಗೆ ಬಂದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಟಿವಿ 9ನಲ್ಲಿ ಮಾತ್ರ. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ.
ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ, ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ...
ಅಳು ಬರುವ ಹಾಗಿದೆ...

ಹೊಸರುಚಿ



ಮೂರ್ನಾಲ್ಕು ದಿನಗಳಿಂದ
ನಾವು ನಮ್ಮ ನೆಂಟರ
ಕಾಲು, ಕೈ, ಹೃದಯ, ಕರುಳುಗಳನ್ನು
ಬೇಯಿಸಿಕೊಂಡು ತಿನ್ನುತ್ತಿದ್ದೇವೆ.
ಬೇಯಿಸಿದ್ದನ್ನು ತಿನ್ನುವಾಗ ಆಗುವ
ಸಂಭ್ರಮ ಹ್ಯಾಗಿರುತ್ತದೆಂದು ನನಗೆ
ತಿಳಿದೇ ಇರಲಿಲ್ಲ, ನೋಡಿ.

ಎಲ್ಲರೂ ಹೊಸ ರುಚಿ
ಮಾಡುವುದು ಹೇಗೆ ಎಂದು
ಕೇಳುತ್ತಾರೆ,
ಪತ್ರಿಕೆ, ಚಾನಲ್‌ನವರು
ಮಾಡುವ ವಿಧಾನವನ್ನಷ್ಟೇ
ಹೇಳುತ್ತಾರೆ.
ಆದರೆ ತಿನ್ನುವುದು ಹೇಗೆ?
ಈ ಸಲದ ನಮ್ಮ ಸ್ಪೆಷಲ್‌;
ನಾವು ಕಂಡುಕೊಂಡ ಆ ಹೊಸ ರುಚಿಯನ್ನು
ತಿನ್ನುವುದು ಹೇಗೆ?

ಬೆಳಿಗ್ಗೆಯಿಂದ ಸಂಜೆಯವರೆಗೆ
ಮನೆಗೆ ಫೋನು ಮಾಡಿ
ತಯಾರಾಗುತ್ತಿರುವ
ಹೊಸ ರುಚಿಯ ಬಗ್ಗೆ,
ನೆಂಟರಿಷ್ಟರ ಅವಯವಗಳು
ಖಾದ್ಯಗಳಾಗಿ ತಯಾರಾಗುತ್ತಿರುವ ಬಗ್ಗೆ
ವಿವರವಾಗಿ ತಿಳಿದುಕೊಳ್ಳಿ.
ಎಸ್ಸೆಮ್ಮೆಸ್‌ ಮೂಲಕ
ತಕ್ಷಣದ ಬೆಳವಣಿಗೆಯನ್ನು
ರವಾನಿಸಲು ಹೇಳುತ್ತಿರಿ.

ಆನಂತರ ಆಫೀಸಿನಿಂದ ಬನ್ನಿ,
ಕೈಕಾಲು ತೊಳೆದುಕೊಳ್ಳಿ,
ಬಟ್ಟೆ ಬದಲಿಸಿಕೊಳ್ಳಿ,
ಹೆಂಡತಿ ಕೊಟ್ಟ ಕಾಫಿ, ಸುದ್ದಿ, ಗಾಳಿಮಾತಿನೊಂದಿಗೆ
ಟೀವಿ ಆನ್‌ ಮಾಡಿ.
ಸತ್ತ ನಿಮ್ಮ ನೆಂಟರಿಷ್ಟರು
ಕ್ಯಾಮರಾ ಬೆಳಕಿನ ಬೆಂಕಿಯಲ್ಲಿ
ಬೇಯುತ್ತಿರುತ್ತಾರೆ,
ಹೊಗೆಯ ಮಧ್ಯೆ, ಆಸ್ಪತ್ರೆಯ ಪಿನಾಯಿಲ್‌ ಮಧ್ಯೆ
ಬೆಯ್ದ ಸಾದಿಷ್ಟ ಮಾಂಸದ ಸುತ್ತ
ಆಕ್ರಂದನಗಳ ಹಿನ್ನೆಲೆ ಸಂಗೀತ.
ಆಗಾಗ ನಿಮ್ಮನ್ನು ರಂಜಿಸಲು
`ಹೇಗೆ ಕೈ ಬೆಂದಿತು, ಏನನಿಸಿತು' ಎಂಬ
ಕ್ವಶ್ಚನ್‌ ಅವರ್‌.

ನಿಮ್ಮ ಕಣ್ಗಳನ್ನು ಬಾಯಂತೆ
ತೆರೆದುಕೊಳ್ಳಿ.
ಬೆಯ್ದ ದೇಹವನ್ನು
ಕೈ, ಕಾಲು, ಹೊಟ್ಟೆ, ಮೂಗು, ಬಾಯಿ
ರಕ್ತದ ಕಲೆ, ಮಣ್ಣಲ್ಲಿ ಮಿಂದ ತಲೆಗೂದಲು
ಎಂದು ಬೇರ್ಪಡಿಸಿ
ಎವೆಯಿಕ್ಕದೇ ತಿನ್ನತೊಡಗಿರಿ,
ತಿಂದು ತಿಂದು ಅನುಭವ ಆಗಿಹೋಗಿರುವ
ಮೈಕ್‌ಮನ್‌ಗಳು, ಗನ್‌ಮನ್‌ಗಳು
ಖಾಕಿ, ಖಾದಿ, ಕೈದಿಗಳ
ಕಣ್ಣುಗಳ ಯಾಂತ್ರಿಕ ಚಪ್ಪರಿಕೆಯ
ಕಡೆಗೂ ಆಗಾಗ ನಿಮ್ಮ ಗಮನವಿರಲಿ.

ತಿನ್ನುತ್ತಾ ತಿನ್ನುತ್ತಾ
ಚಪ್ಪರಿಸುತ್ತಾ ಸವಿಯುತ್ತಾ ಹೋದಹಾಗೇ
ಮುಂದೊಮ್ಮೆ ನಿಮ್ಮ ಮುಂದೆ
ನಿಮ್ಮ ಹೆಂಡತಿ, ಮಕ್ಕಳ
ಕೈಕಾಲುಗಳು ಬೇಯುತ್ತಿದ್ದರೂ
ನಿಮ್ಮ ಬಾಯಲಿ ನೀರೂರುತ್ತದೆ.

Friday, August 8, 2008

ಪರಿಚಿತ ನೋವೇ...

ಪರಿಚಿತನಾದದ್ದಕ್ಕೇ
ಈ ಪರಿಯ
ಫಜೀತಿ,
ನೀ ನಮ್ಮೆಲ್ಲರ ಗೊಡವೆ,
ಕೆಟ್ಟ ಕನವರಿಕೆಯ
ನೋವೇ
ಸಾವೇ!

ನೀ ಪರಿಚಿತನಲ್ಲದೇ ಇನ್ನೇನು;
ಸಾವಿರದ ಮನೆಯ
ಸಾಸಿವೆ ಕೇಳಿದರೆ
ನಾವು ಕೊಡುವುದಿಲ್ಲ,
ಅರೆ ಏಕೆ ಎನ್ನುತ್ತೀರಾ?
ಇಷ್ಟೇ ಸಾಕು ಎಂದರೂ ಬಿಡದಷ್ಟು
ಮಂದಿ
ನನ್ನ ಮುಂದೆ ಸರತಿ ನಿಂತು
ಸತ್ತಿದ್ದಾರೆ
ನಮ್ಮವರು ಅವರ ಎತ್ತಿದ್ದಾರೆ
ಬಿಕ್ಕುತ್ತಲೇ ಬೆಂಕಿ ಇಕ್ಕಿದ್ದಾರೆ...

ನನ್ನ ಸುತ್ತಮುತ್ತೆಲ್ಲಾ
ಕೆಲವರು ಇದ್ದೂ ಸತ್ತು,
ಸತ್ತೂ ಅಮರರಾದಂತೆ ಇದ್ದು,
ಮತ್ತೂ ಕೆಲವರು ಭೂತವಾಗೆದ್ದು,
ನನ್ನೊಳಗಿನ ಪ್ರಶ್ನೆಗಳ ಗುದ್ದಾಟವಾಗಿದ್ದಾಗ
ನಮ್ಮೊಂದಿಗೆ ಸುಳಿದಾಡುತ್ತಿದ್ದುದು
ನೀವೇ,
ಸಾವೇ!
ಸಾವೇ,
ನೀವೇ ಹಾಗೆ
ಶಬ್ದಕ್ಕಷ್ಟೇ ನಿಮಗೆ
ಪದ ಪರ್ಯಾಯ
ಮತ್ತೆ
ಎಲ್ಲರ ಉತ್ತರಕ್ರಿಯೆ
ಅನಿವಾರ್ಯ...

ಹಳೆ ಊರಲ್ಲಿ ಹೊಸ ಹುಡುಕಾಟ

ಮೊನ್ನೆ ಬಿಸಿಲ ಝಳ ಕಡಿಮೆಯಾಗುತ್ತಿರುವ ಒಂದು ಸಂಜೆ ಸಣ್ಣ ಬ್ಯಾಗ್‌ ಹೆಗಲಿಗೇರಿಸಿಕೊಂಡು, ಉಡುಪಿ ಬಸ್‌ಸ್ಟಾಪ್‌ನಲ್ಲಿ ಇಳಿದೆ. ಒಂದು ಕಾಲಕ್ಕೆ ಆ ಜಾಗ ನನ್ನ ಅತ್ಯಂತ ಪರಿಚಿತ ಜಾಗವಾಗಿತ್ತು ಎಂಬುದನ್ನು ಆಗ ನನಗೆ ನಂಬಲೇ ಆಗಲಿಲ್ಲ. ಅದೇ ರಸ್ತೆ, ಅದೇ ಒಳದಾರಿ, ಅದೇ ಬಂಗಾರದಂಗಡಿ, ಅದೇ ಬ್ಯಾಂಕ್‌, ಅದೇ ರಥಬೀದಿ, ಅದೇ ಶಾಲೆ, ಅದೇ ಆಟದ ಬಯಲು. ಹೀಗೆ ಭೌತಿಕವಾಗಿ ಅದೇ ಶಹರ, ಅದೇ ವಿವರ. ಬಸ್‌ಸ್ಟ್ಯಾಂಡ್‌ ಜಾಗ ಬದಲಿಸಿಕೊಂಡಿತ್ತು, ರಸ್ತೆಗಳು ಕೆಲವೆಡೆ ಒನ್‌ವೇ, ಕೆಲವೆಡೆ ಟೂ ವೇ ಆಗಿದ್ದವು ಎಂಬಂಥ ಒಂದಷ್ಟು ವ್ಯತ್ಯಾಸಗಳಿದ್ದರೂ ಅವು ಒಂದು ಕಾಲದ ಆ ನಗರದ ಹಳಬರನ್ನು ದಿಕ್ಕು ತಪ್ಪಿಸುವಂತೇನೂ ಇರಲಿಲ್ಲ.

ಸುಮಾರು ಹನ್ನೆರಡು ವರ್ಷಗಳ ಹಿಂದೆ ಇದೇ ಉಡುಪಿಯಲ್ಲಿ ನಾನು ಚಡ್ಡಿ ಹಾಕಿಕೊಂಡು ರಸ್ತೆ ರಸ್ತೆಗಳನ್ನು ಅಲೆದಿದ್ದೆ. ಏಳರಿಂದ ಎಸ್ಸೆಸ್ಸೆಲ್ಸಿವರೆಗೆ ಅಲ್ಲಿನ ಶಾಲೆಯೊಂದರಲ್ಲೇ ಕಲಿತಿದ್ದೆ, ಅಲ್ಲಿನ ಮಠಗಳಲ್ಲೇ ವಾಸ್ತವ್ಯ ಹೂಡಿದ್ದೆ. ಅಲ್ಲಿನ ಕೃಷ್ಣನ ಮನೆಯಲ್ಲೇ ಉಂಡಿದ್ದೆ. ಅಲ್ಲಿನ ಪುಷ್ಕರಣಿಗಳಲ್ಲಿ ಈಜು ಬರದ ನನ್ನಂಥವರ ಜತೆ ಕಡಿಮೆ ನೀರು ಇರುವಲ್ಲಿ ಸ್ನಾನ ಮಾಡಿದ್ದೆ. ಏಕಾದಶಿ ಬಂದಾಗ ಮಠದವರು ಊಟ ಹಾಕುವುದಿಲ್ಲವಾದ್ದರಿಂದ ಆಗ ನಾನೇ ಉಪ್ಪಿಟ್ಟು ಮಾಡಿಕೊಂಡು, ದೋಸೆ ಹೊಯ್ದುಕೊಂಡು ಹೊಟ್ಟೆ ಹೊರೆದುಕೊಂಡಿದ್ದೆ.
ನಾನು ತೀರ್ಥಹಳ್ಳಿಯ ಹುಡುಗ. ಉಡುಪಿಗೆ ಕಲಿಯಲಿ ಎಂದು ಅಮ್ಮ ನನ್ನನ್ನು ಕಳಿಸಿಕೊಟ್ಟಳು. ಉಡುಪಿಯಲ್ಲಿ ನನ್ನ ಜೀವನ ಶುರುವಾದ ಮೊದಲ ವರ್ಷ ನನ್ನ ಕಣ್ಣು ಪಟ್ಟಣ ನೋಡುವುದಕ್ಕಿಂತ ಹೆಚ್ಚು ಕಣ್ಣೀರನ್ನೇ ನೋಡಿತ್ತು. ಮನೆ ಬಿಟ್ಟು ಬಂದ ದುಃಖದಲ್ಲಿ ಕಂತು ಕಂತುಗಳಲ್ಲಿ ಅತ್ತು ಕರೆದು ಊರನ್ನು ನೆನಪು ಮಾಡಿಕೊಳ್ಳತೊಡಗಿದ್ದೆ. ಆದರೆ ನಿಧಾನವಾಗಿ ನನ್ನ ದೇಹ ಮತ್ತು ಮನಸ್ಸು ಆ ನಗರವನ್ನು ನನ್ನ ಬೆಳವಣಿಗೆಯ ಭಾಗವಾಗಿ ಸ್ವೀಕರಿಸಿತು. ಸಿನಿಮಾಗಳನ್ನು ಕದ್ದು ನೋಡುವ ಮೂಲಕ, ರಾಜಾಂಗಣದ ಯಕ್ಷಗಾನಗಳನ್ನು, ಬೀದಿಬೀದಿಗಳ ಆರ್ಕೆಷ್ಟ್ರಾಗಳನ್ನು, ಗಣೇಶ ಹಬ್ಬದ ತೊದಲು ಬೊಂಬೆಯಾಟವನ್ನು ಗುಂಪು ಗುಂಪಾಗಿ ನೋಡುವ ಮೂಲಕ ನಾನು ಉಡುಪಿಯ ಮನೆ ಮಗನಾಗಿದ್ದೆ, ತೀರ್ಥಹಳ್ಳಿ ಭಾಷೆಯನ್ನು ನಿಧಾನವಾಗಿ ಮರೆತು, ಮಂಗಳೂರು ಕನ್ನಡವನ್ನು ರೂಢಿಸಿಕೊಳ್ಳತೊಡಗಿದ್ದೆ.
ಅದೆಲ್ಲಾ ಕೊನೆಗೊಂಡು, ಉಜಿರೆಗೆ ಹೋಗಿ ಅಲ್ಲಿ ಡಿಗ್ರಿವರೆಗೆ ಕಲಿತು, ಆಮೇಲೆ ಬೆಂಗಳೂರು ಸೇರಿ ವೃತ್ತಿ ಪ್ರಾರಂಭಿಸಿ ಬೆಂಗಳೂರೇ ನನ್ನ ಮನೆ ಎಂದು ನನ್ನನ್ನು ನಾನು ನಂಬಿಸಿಕೊಂಡ ಹೊತ್ತಲ್ಲಿ ಮೊನ್ನೆ ಉಡುಪಿಗೆ ಹೋಗಿದ್ದು. ಒಂದೂವರೆ ದಿನ ಅಲ್ಲೇ ಉಳಿದುಕೊಂಡೆ. ಅಲ್ಲೇ ಸಿನಿಮಾ ನೋಡಿದೆ. ಏನನ್ನೋ ಕಳೆದುಕೊಂಡವನಂತೆ ದಿಕ್ಕು ನೋಡುತ್ತಾ ರಸ್ತೆ ರಸ್ತೆಗಳನ್ನು ಅಲೆದೆ. ಕೃಷ್ಣ ಮಠ ಸುತ್ತಿ ಬಂದೆ. ಅಷ್ಟಮಠ ಅಳೆದು ಬಂದೆ. ಅಲ್ಲಿ ಕೊಟ್ಟ ತೀರ್ಥ, ಪ್ರಸಾದ, ಗಂಧಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿದೆ. ಅನಂತೇಶ್ವರ ದೇವಸ್ಥಾನಕ್ಕೆ ಎಣ್ಣೆ ಬತ್ತಿ ಸೇವೆ ಸಲ್ಲಿಸಿದೆ. ಕುಂಕುಮ ಹಚ್ಚಿಕೊಳ್ಳುವಾಗ ಈಗಿನ ಪೆಡಸು ಹಣೆಯ ಜಾಗದಲ್ಲಿ ಹಿಂದೊಮ್ಮೆ ನೆಲೆಸಿದ್ದ ನನ್ನ ಎಳಸು ಹಣೆಯನ್ನು ಸವರಿ ಸವರಿ ಹುಡುಕಿಕೊಂಡೆ. ರಥಬೀದಿಯನ್ನು ಸುತ್ತುವಾಗ ಕಟ್ಟಿಗೆ ರಥ ಹಾಗೆಯೇ ಇತ್ತು. ರಥಬೀದಿಯನ್ನು ಸದಾ ಸಲಹುವ ಸೆಗಣಿಯ ಘಂ ವಾಸನೆ ಹಾಗೇ ಇತ್ತು, ಮಠದಿಂದ ಮಠಕ್ಕೆ ಸಾಲು ಸಾಲು ವಟುಗಳು ದಂಡೆತ್ತಿ ಹೋಗುವಾಗ ಅವರಲ್ಲೊಬ್ಬ ನಾನೇ ಆದಂತೆ ರೋಮಾಂಚಿತನಾದೆ. `ಓಹೋ ಅದೇ ಉಡುಪಿ' ಎಂದು ಒಂದು ಕ್ಷಣ ಮನಸ್ಸು ಪ್ರಫುಲ್ಲವಾಯಿತು.
ಆದರೂ ಇದು ನಾನು ನೋಡಿದ ಉಡುಪಿಯಲ್ಲ! ನನ್ನ ಉಡುಪಿ ಒಂದು ಕಾಲಕ್ಕೆ ದಯಾಮಯವಾಗಿತ್ತು. ಮನೆಗೆ ಹೋಗುವ ನೆನಪಾದಾಗಲೆಲ್ಲಾ ಬಸ್‌ಸ್ಟಾಂಡ್‌ಗೆ ಓಡಿ ಹೋಗಿ, ನಮ್ಮೂರಿಗೆ ಹೋಗುವ ಬಸ್‌ಗಳನ್ನೇ ನೋಡಿ ಸಮಾಧಾನ ಮಾಡಿಕೊಂಡಾಗ ಇದೇ ಉಡುಪಿ ನನ್ನನ್ನು `ಬುಲ್ಪೊಡ್ಚಿ' (ಅಳಬೇಡ) ಎಂದು ತುಳುವಿನಲ್ಲಿ ಸಮಾಧಾನ ಮಾಡಿತ್ತು. ಒಮ್ಮೆ ಹಾಸ್ಟೆಲ್‌ನಲ್ಲಿ ಒಬ್ಬನೇ ಇದ್ದಾಗ ಹಠಾತ್‌ ಹೊಟ್ಟೆನೋವು ಪ್ರಾರಂಭವಾಗಿ ಹೊರಳಾಡುತ್ತಿದ್ದವನನ್ನು ಅಲ್ಲಿನ ಪೋಸ್ಟ್‌ ಹಾಕುವ ಅಪರಿಚಿತ ಹೆಂಗಸೊಬ್ಬಳು ಶುಶ್ರೂಷೆ ಮಾಡಿದ್ದಳು. ರಥಬೀದಿ ಸುತ್ತಮುತ್ತಲ ಅದೆಷ್ಟೋ ಹೆಸರು ಗೊತ್ತಿಲ್ಲದವರ ಮನೆಗಗಳ ಟೀವಿ ಪರದೆಗಳು ನಮ್ಮಂಥ ಹಾಸ್ಟೆಲ್‌ ಹುಡುಗರಿಗೆ ಭಾನುವಾರದ ಸಿನಿಮಾ ತೋರಿಸಿ, ವರ್ಲ್ಡ್‌ ಕಪ್‌ ಮ್ಯಾಚ್‌ ತೋರಿಸಿ ಹರೆಯ ಬರಿಸಿದ್ದವು. ಸಾರ್ವಜನಿಕ ಗಣೇಶೋತ್ಸವ ನಡೆಸುವ ಅದೆಷ್ಟೋ ಸಮಿತಿಗಳು ಪಂಚಕಜ್ಜಾಯ ತಿನ್ನಿಸಿ, ಬಾಯಿ ಒರೆಸಿಕೋ ಮರ್ಲಾ (ಹುಚ್ಚಾ) ಎಂದು ಪ್ರೀತಿಯಿಂದ ಗದರಿದ್ದವು. ಅಲ್ಲಿನ ಬೇಕರಿ ಅಂಗಡಿಗಳು ನಮಗೆ ಕಡಿಮೆ ದುಡ್ಡಿಗೆ ರಸ್ಕ್‌ ಕೊಟ್ಟು ಕೊಟ್ಟು ತಿಂಡಿಯ ರುಚಿ ಹತ್ತಿಸಿದ್ದವು. ವಿದ್ಯಾಭೂಷಣ್‌ ಹಾಡಿರುವ `ಏಳು ನಾರಾಯಣನೇ ಏಳು ಲಕ್ಷ್ಮೀ ರಮಣ' ಎಂಬ ಹಾಡನ್ನು ದಿನಾ ಬೆಳಿಗ್ಗೆ ಐದಕ್ಕೇ ಹಾಕಿ, ಕೃಷ್ಣನನ್ನಲ್ಲ, ಇಡೀ ಉಡುಪಿಯವರನ್ನು ಕೃಷ್ಣಮಠ ಎಬ್ಬಿಸಿತ್ತು.
ಇದನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಲಾಡ್ಜ್‌ ಒಂದರ ಮೂರನೇ ಮಹಡಿಯಲ್ಲಿ ಮೊನ್ನೆ ತಂಗಿದ್ದಾಗ ಆ ರಾತ್ರಿ ನನ್ನನ್ನು ಯೋಚನೆಗೆ ಹಚ್ಚತೊಡಗಿತು. ಮನಸ್ಸು ಹೊಸ ಉಡುಪಿಯಲ್ಲಿ ಹಳೆಯ ಉಡುಪಿಯನ್ನು ಹುಡುಕುತ್ತಾ ಹಠ ಮಾಡುವುದನ್ನು ಮುಂದುವರಿಸಿಯೇ ಇತ್ತು. ನಿಧಾನವಾಗಿ ಚಿಂತೆ, ಚಿಂತನೆ ಶುರುವಾಯಿತು. ಕಾರಣ ಕೆದಕತೊಡಗಿತು. ಒಂದು ಕಾರಣ ಇದಿರಬಹುದೇ? ಎಲ್ಲಾ ನಗರಗಳಂತೆ ಉಡುಪಿಯೂ ಸಾಕಷ್ಟು ಬೆಳೆದು ನಿಂತಿದೆ. ಇನ್ನೊಬ್ಬರ ಮನೆಗೆ ಹೋಗಿ ಟೀವಿ ನೋಡುವುದಕ್ಕೆ ಆಸ್ಪದವನ್ನೇ ಕೊಡದಂತೆ ಹಾಸ್ಟೆಲ್‌ಗೇ ಟೀವಿ ಬಂದಿದೆ. ಈ ಜನರೇಷನ್‌ನ ತಿಂಡಿ ಹುಚ್ಚು ಗಣೇಶೋತ್ಸವದ ಪಂಚಕಜ್ಜಾಯವನ್ನೂ ಮೀರಿ, ಪಿಡ್ಜಾ- ಬರ್ಗರ್‌ಗಳನ್ನು ತಾಕಿದೆ. ತಂತ್ರಜ್ಞಾನದ ಸಂಪರ್ಕ ತಂತುಗಳು ಎಲ್ಲಾ ನಗರಗಳನ್ನೂ ಸುತ್ತಿಕೊಳ್ಳುತ್ತಿವೆ. ಎಲ್ಲಾ ನಗರಗಳಂತೆ ಉಡುಪಿಯೂ ಹೆಚ್ಚು ತಾಂತ್ರಿಕವಾಗುತ್ತಿದೆ, ಯಾಂತ್ರಿಕವಾಗುತ್ತಿದೆ.
ಅಲ್ಲ, ಇದೂ ಕಾರಣವಲ್ಲ. ಪ್ರಪಂಚದ ಎಲ್ಲಾ ನಗರಗಳೂ ಒಬ್ಬನ ಬಾಲ್ಯದಲ್ಲಿ ಸಿಕ್ಕ ನಗರಗಳೇ ಆಗಿ ಯಾವತ್ತೂ ಉಳಿದಿಲ್ಲ ಮತ್ತು ಉಳಿಯುವುದಿಲ್ಲ. ಅವರ ಪಾಲಿಗೆ ಅವರ ಬಾಲ್ಯದ ನಗರ/ ಹಳ್ಳಿ/ ಮನೆ/ ಮನ ಅವರ ಯೌವನಾವಸ್ಥೆಯಲ್ಲಿ ತನ್ನ ಕೌಮಾರ್ಯವನ್ನು ಕಳೆದುಕೊಂಡಿರುತ್ತದೆ!
ಅಲ್ಲ, ಹಾಗೂ ಅಲ್ಲವೇನೋ? ಹೀಗೆ ಅದೂ ಇದೂ ಜಿಜ್ಞಾಸೆಗಳ ಕೊನೆಯಲ್ಲಿ, ವೇದನೆ ಜತೆ ಮಧ್ಯರಾತ್ರಿ ಎಷ್ಟೋ ಹೊತ್ತಿಗೆ ನಿದ್ರೆಗೆ ಜಾರುವಾಗ ಥಟ್ಟನೆ ಅಂದುಕೊಂಡೆ: ಹಳೆಯ ಉಡುಪಿ ಹೊಸ ಉಡುಪಿಯಾಗಿ ಬದಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಳೆ ನಾನು ಹೊಸ ನಾನಾಗಿಯಂತೂ ಖಂಡಿತ ಬದಲಾಗಿದ್ದೇನೆ. ಮನುಷ್ಯ ತಾನು ಬದಲಾಗಿ, ಇನ್ನೊಬ್ಬರು ಬದಲಾದರು ಎಂದು ಭಾವಿಸಿಕೊಳ್ಳುತ್ತಾ ಹೋಗುತ್ತಾನೆ. ಉದಾಹರಣೆಗೆ ರಾಮಾಯಣ ಬದಲಾಗುವುದಿಲ್ಲ, ಆ ಕತೆ ಕೇಳುತ್ತಾ ಬೆಳೆದವನು ತನ್ನ ನಿಲುವುಗಳನ್ನು ವಯಸ್ಸಿಗನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ಹೋಗುತ್ತಾನೆ ಮತ್ತು ಅವನೇ ಬದಲಾಗುತ್ತಾನೆ!
***
ಮರುದಿನ ಎದ್ದಾಗ ಸಿಕ್ಕ ಉಡುಪಿ ಹೆಚ್ಚು ಹೆಚ್ಚು ಹಳೆ ಉಡುಪಿಯೇ ಆಗಿತ್ತು. ಸ್ನಾನ ಮಾಡುವಾಗ ಮೈಮೇಲೆ ಅದೇ ಗಡಸು ನೀರು, ಕನಕನ ಕಿಂಡಿಯಲ್ಲಿ ಹಣಕಿದಾಗ ಅದೇ ಹಳೆ ಕೃಷ್ಣ, ಹೊಟೇಲ್‌ನಲ್ಲಿ ತಿಂಡಿ ತಿನ್ನುವಾಗ ಅದೇ ರುಚಿ ಕೊಡುವ ಮಸಾಲೆ ದೋಸೆ. ಹೊಟೇಲ್‌ನವನ (ಹನ್ನೆರಡು ವರ್ಷದ ಹಿಂದಿನ ಈ ಹುಡುಗನನ್ನು ನೆನಪಿಟ್ಟುಕೊಂಡ) ಅದೇ ಪರಿಚಿತ ನಗು. ಅನಂತೇಶ್ವರ ದೇವಸ್ಥಾನದಲ್ಲಿ ಸಿಕ್ಕು ಬ್ರಹ್ಮಾಂಡ ಸಂತೋಷ ಕೊಟ್ಟ ನನ್ನ ವಾರಗೆಯ ವಟು. ಅವನು ಕೊಟ್ಟ ನನ್ನ ಕ್ಲಾಸ್‌ಮೇಟ್‌ಗಳ ವಿವರ. ಬಸ್‌ ಹತ್ತಿದಾಗ ಅದೇ `ಏರ್‌ ಉಡುಪಿ- ಮಣಿಪಾಲ್‌, ಉಡುಪಿ- ಮಣಿಪಾಲ್‌' ಎಂಬ ಕಂಡಕ್ಟರ್‌ ಕೂಗು ಮತ್ತು ಮತ್ತು ಬಿಸಿ ಉಸಿರಿನಂತೆ ಬೀಸಿ ಬೀಸಿ ಮೈಯ್ಯಲ್ಲಿ ಬೆವರ ಹನಿ ಹುಟ್ಟಿಸುವ ಕರಾವಳಿ ಸೆಖೆ.ಙ

Thursday, February 21, 2008

ಬಾರ್ಬರ್ ಕುಚೇಲ


ಅದು ಆಖ್ಯಾನ, ಇದು ವ್ಯಾಖ್ಯಾನ



ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ ದೊಡ್ಡ ಅರಮನೆ. ಕಾವಲಿಗೆ ನೂರಾರು ಕಾಲಾಳುಗಳು. ಕಾಲಾಳುಗಳಿಗೂ ಹೊಳೆಹೊಳೆವ ಬಟ್ಟೆ. ಆದರೆ, ಕುಚೇಲ ತೊಟ್ಟ ತೊಡುಗೆ ಹರಿದಿದೆ, ಮಣ್ಣು ಮೆತ್ತಿದೆ. ಹಾಗಾಗಿ ಅವನ ಹರಕು ಬಟ್ಟೆ ಕೊಳೆಯಾದ ಕಾಲನ್ನೂ, ಕಾಲು ಹರಿದ ಬಟ್ಟೆಯನ್ನೂ ಮರೆಮಾಚಲು ನಾಮುಂದು ತಾಮುಂದು ಎಂದಿದೆ. ಆದರೆ, ಅವನ ಕೊಳೆಕಾಲೂ, ಹರಿದ ಶಾಲೂ ಸಂಕೋಚದಿಂದ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಹರಿದ ವಸ್ತ್ರಗಳಲ್ಲಿ ಕಟ್ಟಿ ತಂದ ಅವಲಕ್ಕಿಯನ್ನು.


ರಾಜಭಟ ಅವನನ್ನು ನೋಡಿದ, ನೋಡಿ ಕೇಳಿದ: ಯಾರೋ ನೀನು, ಏನು ಬೇಕು ನಿನಗೆ?


ಶ್ರೀಮಂತಿಕೆಯನ್ನು ಕಾಣುವುದೋ, ತನ್ನ ಬಡತನವನ್ನು ಮುಚ್ಚಿಟ್ಟುಕೊಳ್ಳುವುದೋ ಎಂದು ತಿಳಿಯದೇ ಗಾಬರಿಯಾಗಿರುವ ಕುಚೇಲ ರಾಜಭಟನ ಮಾತಿಗೆ ಬೆಚ್ಚಿ ತಡವರಿಸುತ್ತಾನೆ. ಕೃಷ್ಣನನ್ನು ನೋಡಬೇಕಿತ್ತು.


Wednesday, February 6, 2008

ನೀನ್ ನಾನಾದ್ರೆ ನಾನ್ ನೀನೇನಾ? ...

chess.gifಏನೋ ಮಸುಕು ಮಸುಕು. ಎಲ್ಲಾ ಅಸ್ಪಷ್ಟ. ಇಷ್ಟು ಹೊತ್ತಿನಲ್ಲಿ ಅದೂ ನನ್ನ ರೂಮಿನಲ್ಲಿ ಅದ್ಯಾರು? …

ಮಲಗಿದ್ದಲ್ಲೇ ಸ್ವಲ್ಪ ತಲೆ ಎತ್ತಿ ಕಣ್ಣುಜ್ಜಿಕೊಂಡರು ಶಾಂತವೇರಿ ಸಿದ್ದಪ್ಪನವರು. ಹೆಂಡತಿ ಕನಕಲಕ್ಷ್ಮೀ ಸತ್ತ ಮೇಲೆ ಅವರಿಗೆ ಒಬ್ಬರೇ ಮಲಗುವುದು ವಾಡಿಕೆ. ಊಟ ಮುಗಿದ ಮೇಲೆ ಮಗ ಚಂದ್ರಮೋಹನ್ ಬಂದು ಒಂದೈದು ನಿಮಿಷ ಅವರೊಂದಿಗೆ ಉಭಯಕುಶಲೋಪರಿ ಹರುಟುತ್ತಾ ಕುಳಿತು ಹೋಗುವುದು ಬಿಟ್ಟರೆ, ಮತ್ತೆ ಅವರ ಕೋಣೆಗೆ ಬೆಳಗ್ಗಿನವರೆಗೂ ಯಾರೂ ಬರುವುದಿಲ್ಲ. ಹೀಗಿರುವಾಗ ಅದ್ಯಾರು ತಮ್ಮ ರೂಮಿನಲ್ಲಿ ಇಷ್ಟು ಹೊತ್ತಿನಲ್ಲಿ ಕೂತಿದ್ದಾರೆ? ಸಿದ್ದಪ್ಪನವರಿಗೆ ಆಶ್ಚರ್ಯವಾಯಿತು. ಅರೆ, ಅವರೊಬ್ಬರೇ ಅಲ್ಲ. ಅವರೆದುರು ಇನ್ನೂ ಯಾರೋ ಒಬ್ಬರು ಕುಳಿತಿದ್ದಾರೆ. ಈ ಕೆಂಪು ದೀಪದ ಜೀರೋ ಕ್ಯಾಂಡಲ್ ಬಲ್ಬಿನಲ್ಲಿ ಅವರ ಮುಖ ಕೊಣಲೊಲ್ಲದು. ಮೆಲ್ಲಗೆ ತಡವರಿಸಿ ಎದ್ದರು ಸಿದ್ದಪ್ಪ. ಹಾಸಿಗೆ ಪಕ್ಕದಲ್ಲಿದ್ದ ಟೇಬಲ್ಲಿಗೆ ಒರಗಿಸಿದ್ದ ತಮ್ಮ ಊರುಗೋಲನ್ನು ಆಶ್ರಯಿಸಿದರು. ಮೆತ್ತಗೆ ಕಾಲು ಹಾಕುತ್ತಾ ಮಂಚದ ತುದಿಗೆ ನಡೆದು ಬಂದರು.

ಅಲ್ಲಿದ್ದವರು ಯಾರೂ ಎಂದು ಸೂಕ್ಷ್ಮವಾಗಿ ಗಮನಿಸಿದ ಅವರಿಗೆ ಮೈ ಜುಮ್ ಆಯಿತು. ಅಲ್ಲಿದ್ದ ಇಬ್ಬರು ಅವರೇ. ಒಂದು ಸಾಮಾನ್ಯ ಮನುಷ್ಯ ಸಿದ್ದಪ್ಪ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದಪ್ಪ. ಇಬ್ಬರೂ ಆ ಕತ್ತಲಿನಲ್ಲೇ ತಲೆ ಬಗ್ಗಿಸಿ ಕೂತಿದ್ದಾರೆ. ಎದುರಿಗಿದ್ದ ಚೆಸ್ ಬೋರ್ಡನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಾಮಾನ್ಯ ಮನುಷ್ಯ ಸಿದ್ದಪ್ಪ ಸೋಲುತ್ತಿದ್ದಾನೆ. ಮಾಜಿ ಮುಖ್ಯಮಂತ್ರಿ ಸಿದ್ದಪ್ಪ ಮೇಲುಗೈ ಸಾಧಿಸುತ್ತಿದ್ದಾನೆ.

ಚಾಪ್ಲಿನ್ ಬದಲಾದ!

ಚಾಪ್ಲಿನ್‌ಗೆ ತಾನು ನಿರ್ದೇಶಕನಾಗಿ, ಕತೆಗಾರನಾಗಿ ಯಾವತ್ತಾದರೂ ಬದಲಾಗಬೇಕು ಅಂತ ಅನಿಸಿತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇನಾದರೂ ಹಾಗೇ ಅನಿಸಿದ್ದರೆ, ಆತ ಬದಲಾಗುವುದಕ್ಕೆ ಏನೇನು ಮಾಡಿದನೋ ಅದು ಗೊತ್ತಿಲ್ಲ. ಒಂದು ಪಕ್ಷ ಅವನಿಗೆ ಬದಲಾಗಬೇಕು ಎಂದು ದಟ್ಟವಾಗಿ ಅನಿಸಿದರೆ ಮತ್ತು ಆತ ಬದಲಾದರೆ ಹೇಗೆ? ಎಂಬ ಕಲ್ಪನೆ ಬಂದಾಗ ಹೊಳೆದಿದ್ದೇ ಈ ಕತೆ. ಕತೆಯಾದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಜಾಗ. ಇಲ್ಲಿ ಆತ್ಮಚರಿತ್ರೆಯ ಅಂಶಗಳಿಲ್ಲ. ಆದರೆ, ಚರಿತ್ರೆಯ ಅಂಶಗಳಂತೂ ಖಂಡಿತಾ ಇದೆ. ಕಲ್ಪನೆ, ಚರಿತ್ರೆ ಎಲ್ಲಾ ಒಟ್ಟುಗೊಡಿದಾಗ ಚಾಪ್ಲಿನ್ ಬದಲಾದ ...


ನ್ನು ಮೂರು ಗಂಟೆ ಹೊಡೆದರೆ ಆರಾಗುತ್ತದೆ. ಅಷ್ಟಾದರೂ ಆ ರಾತ್ರಿ ಚಾಪ್ಲಿನ್ ಕಣ್ಣುಗಳಿಗೆ ನಿದ್ದೆ ಹತ್ತಿಲಿಲ್ಲ. ‘ನಾನೇನು ಮಾಡುತ್ತಿದ್ದೇನೆ?’ ಎಂಬ ಪ್ರಶ್ನೆ ಹೊಳೆದ ಈ ೧೫ ರಾತ್ರಿಗಳಲ್ಲಿ ಚಾಪ್ಲಿನ್ ಮಲಗಿದ್ದು ಸ್ವಲ್ಪ ಕಡಿಮೆಯೇ ಸರಿ. ಆದರೂ ಇಷ್ಟು ರಾತ್ರಿಗಳಲ್ಲಿ ಆಯಾಸಕ್ಕಾದರೂ ಒಂದೆರೆಡು ತಾಸು ನಿದ್ದೆ ಹೀಗೆ ಬಂದು ಹಾಗೆ ಹೋಗುತಿತ್ತು. ಆದರೆ, ಇವತ್ತು ಅದೂ ಇಲ್ಲ.


‘ನಾನೇನು ಮಾಡುತ್ತಿದ್ದೇನೋ?’, ‘ನಾನೇನು ಮಾಡಬೇಕು?’ ಅಥವಾ ‘ನಾನೇನು ಮಾಡಬಹದು?’ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಖಂಡಿತಾ ಕಷ್ಟವಲ್ಲ. ಆದರೆ, ಆ ಉತ್ತರ ಚಿತ್ರರಂಗದೆಡೆಗೆ ತನಗಿರುವ ನಂಬಿಕೆಯನ್ನೇ ತಿರುಚಿ ಹಾಕುವುದಾದರೇ ಅಂಥ ಉತ್ತರ ಬೇಕಾ? ಇದು ಚಾಪ್ಲಿನ್ ಪ್ರಶ್ನೆ. ಕಳೆದ ೧೫ ದಿನಗಳಿಂದ ಅವನು ಇದೇ ಬಗ್ಗೆ ಯೋಚಿಸುತ್ತಿದ್ದ. ಇಷ್ಟಕ್ಕೂ ಯಾರೋ ಅವನನ್ನು ಪುಸಲಾಯಿಸಿದ್ದಾಗಲೀ, ಕೆಣಕಿದ್ದಾಗಲೀ ಅಲ್ಲ. ಇದು ತನ್ನಿಂತಾನೇ ಅತ್ಯಂತ ಸಹಜವಾಗಿ ಮೂಡಿ ಬಂದ ಪ್ರಶ್ನೆ. ಇನ್ನೆಷ್ಟು ದಿನ ಇದೇ ಕಣ್ಣಾಮುಚ್ಚಾಲೆಯಾಟ? ಇನ್ನೆಷ್ಟು ದಿನ ಬಫೂನರಿ?