ತಾವಿಬ್ಬ ಸ್ತ್ರೀಯಾಗಿ ಸ್ತ್ರೀಪರ ಕವಿತೆಯನ್ನೇ ಬರೆಯಬೇಕೆಂಬ ಹಠವಿಲ್ಲದ, ಹೆಣ್ಣು ಮಗಳ ಕವಿತೆಯಾದ ಕಾರಣ `ಸ್ವಲ್ಪ ರೋಚಕವಾಗಿರೋಣ, ಜನ ಓದುತ್ತಾರೆ' ಎಂಬ ಲೋಲುಪತೆ ಇಲ್ಲದ, ಕವಿ ಎಂದ ಕೂಡಲೇ ಘೋಷಣೆ ನಡೆಯಲಿ ಎಂಬ ಹಪಾಹಪಿ ಇಲ್ಲದ, ಕನ್ನಡದ ಅಪರೂಪದ ಕವಯಿತ್ರಿ ಸಂಧ್ಯಾದೇವಿ. `ನಾದದ ಕಡಲಲ್ಲಿ ತೇಲುವ ನಾನೊಂದು ಹಡಗು' ಎಂದು ಬರೆದ ಸಂಧ್ಯಾದೇವಿ ಅವರು ಇದೀಗ ಹೊಸ ಸಂಕಲನ `ಅಗ್ನಿದಿವ್ಯ'ದೊಂದಿಗೆ ಹಾಜರಾಗಿದ್ದಾರೆ.
ಅವರ ಕವಿತೆಗಳನ್ನು ಹೆಚ್ಚು ಹೆಚ್ಚು ವಿಶ್ಲೇಷಿಸಿ ಮೂಗು ತೂರಿಸುವ ಬದಲು ಓದಿ, ಅನುಭವಿಸುವ ಕಾಯಕವಷ್ಟೇ ನಮ್ಮದಾಗಲಿ. ಇಲ್ಲಿ ಅವರ ಸಂಕಲನದ ಕೆಲವು ಸವಿ ಸಾಲುಗಳಿವೆ. ಪ್ರಕಟಿಸಿದ್ದು `ಅಭಿನವ'ದ `ಪಿ. ಪಿ. ಗೆಳೆಯರ `ಅಂಕಣ' ಬಳಗ ಮಾಲೆ'. ಬೆಲೆ ಮೂವತ್ತು ರೂಪಾಯಿ. ಸಂಕಲನದ ಶಾಶ್ವತ ಆನಂದಕ್ಕಾಗಿ ಕೊಂಡು ಓದಿ:
*`...ಇದೀಗ ಇಲ್ಲಿದೆ ಅಚ್ಚರಿ:/ ಬಣ್ಣಗಳ ಮೇಳದಲ್ಲಿ/ ವೇಷ ಕಳಚಿದವ/ ಎಣ್ಣೆ ಹಚ್ಚಿ/ ಬಣ್ಣ ತೆಗೆದವ/ ಚೌಕಿಯಲ್ಲಿ ಒಬ್ಬನಾದರೂ ಇದ್ದೇ ಇದ್ದಾನು'
ಮತ್ತು
...`ಸತ್ತಂತಿದ್ದಾನೆ' ಎನ್ನುತ್ತಾರೆ ಕೆಲವರು/ ಮೂಡರು/ `ಇಲ್ಲ ಇಲ್ಲ'/ ಈಗಷ್ಟೇ ಅಮೃತ ಕುಡಿದು/ ಕಣ್ಣು ಮುಚ್ಚಿ ಕೂತಿದ್ದಾನೆ/ ಎನ್ನುವರು ತಿಳಿದವರು' (ಜಾತ್ರೆಯಲ್ಲಿ ಜ್ಞಾನಿ)
*...ಆಡಿ ಆಡಿ/ ಕಾಣದ ಆಟ/ ಬರೀ ಉಸಿರಾಟ/ ವ್ಯರ್ಥ ಹೋರಾಟ/ ಈ ಜಗವೊಂದು ತೆರೆದ ಕ್ರೀಡಾಂಗಣ/ ಸರ್ವಭೂತಾಂತರಾತ್ಮನಿಗೆ' (ಉಸಿರು ಅಥವಾ ಪ್ರಾಣ)
*...ಸ್ಥಾವರ ಜಂಗಮ ವನಸ್ಪತಿ/ ಪಶುಪಕ್ಷಿ ಪಾಶಾಣ/ ಯಾವ ಯೋನಿಯಲ್ಲಿ ಯಾವ ಶರೀರ/ ಆಯ್ಕೆಯ ಸ್ವಾತಂತ್ರ್ಯ ಯಾರಿಗಿದೆ?/ ಸೃಷ್ಟಿ ಚಕ್ರದಲ್ಲಿ/ ನಮ್ಮನ್ನು ನಿಲ್ಲಿಸಿ/ ಗಿರ್ರನೆ ಒಮ್ಮೆ ಸುಮ್ಮನೆ ತಿರುಗಿಸಿ/ ಯಾವಾಗ ನಿಲ್ಲಿಸುವೆಯೋ ಯಾರಿಗೆ ಗೊತ್ತಿದೆ?/ ಮರಳಿ ಮತ್ತೆಲ್ಲಿ/ ಯಾವ ದೇಶದಲ್ಲಿ/ ಯಾವ ರೂಪದ ಯಾವ ದೇಹದಲ್ಲಿ/ ಯಾವಾಗ ಹುಟ್ಟಿಸುವೆಯೋ? (ಅಂತಿಮ ನಿರ್ಧಾರ)
*... ಕಂಡದ್ದು ಸುಳ್ಳಲ್ಲ/ ಕಾಣದಿದ್ದದ್ದು ಇಲ್ಲವೆಂದಲ್ಲ/ ಆತ್ಮನ ಅಸ್ತಿತ್ವ/ ಕಂಡೂ ಕಾಣದಂತಿರುವುದು..../ಬಿಂಬವಿದ್ದರೆ ಇದ್ದೇ ಇದೆ ಪ್ರತಿಬಿಂಬ/ ಅದಕ್ಕಾಗಿಯೇ ಇದೆ ಎನ್ನುವರು/ ದೇಹವೆಂಬ ಮಾಧ್ಯಮ (ಮಾಧ್ಯಮ)
***
ಅಂದಹಾಗೆ ಇಲ್ಲಿನ ಎಲ್ಲಾ ಕವಿತಾಪುಷ್ಪಗಳಿಗೆ ಇರುವ ಅಧ್ಯಾತ್ಮದ ಎಸಳಿಗೆ ಕಾರಣವೆಂದರೆ ಇಲ್ಲಿನ ಎಲ್ಲಾ ಕವಿತೆಯನ್ನೂ `ಕಠೋಪನಿಷತ್'ನ ಶ್ಲೋಕದ ಆಧಾರದಲ್ಲಿ ಬರೆಯಲಾಗಿದೆ. ಒಂದು ಲೆಕ್ಕದಲ್ಲಿ ಅದರ ಭಾವಾನುವಾದವಾದರೂ `ಕಠೋಪನಿಷತ್' ಅನ್ನು ಕವಯಿತ್ರಿ ತಮ್ಮ ನೆಲೆಯಲ್ಲಿ, ಇಹ- ಪರದ ನಡುವಲ್ಲಿ ಗ್ರಹಿಸಿದ್ದನ್ನು ಕವಿತೆಯಾಗಿಸಿದ್ದಾರೆ. ಆ ಬಗ್ಗೆ ಅವರು ಪುಸ್ತಿಕೆಯ ಬೆನ್ನಿನಲ್ಲಿ ಬರೆದುಕೊಂಡಿರುವುದು ಹೀಗೆ:
`ಇದು ಕಠೋಪನಿಷತ್ ಮಂತ್ರಗಳ ಅಕ್ಷರಶಃ ಅನುವಾದವಲ್ಲ. ಮಂತ್ರಗಳ ಅರ್ಥವನ್ನು ಬಿಡಿಸಿಟ್ಟು ಪದ್ಯ ಕಟ್ಟುವುದು ನನ್ನ ಉದ್ದೇಶವೂ ಅಲ್ಲ. ಇದೇನೆಂದರೆ: ಮಂತ್ರಕ್ಕೆ ನನ್ನನ್ನು ನಾನು ಒಪ್ಪಿಸಿಕೊಂಡ ಬಗೆ.
NICE....
ReplyDelete