Monday, December 22, 2008

ಕೈಗೆ ಬಂದೂಕು ಕೊಡದಿರಲಿ ದೇವರು



[caption id="attachment_217" align="aligncenter" width="500" caption="ಚಿತ್ರಕೃಪೆ: ಫ್ಲಿಕರ್‌"]ಫ್ಲಿಕರ್‌[/caption]

ಭಯೋತ್ಪಾದನೆ ಮೂಲೋತ್ಪಾಟನೆಗೆ ಹಾಗಾದರೆ ಕದನವೊಂದೇ ದಾರಿಯೇ? ಈವರೆಗೆ ಜಗತ್ತಲ್ಲಾದ ಸಮರ ಯಾವತ್ತೂ ಅಂತಿಮವಾಗಿ ಯಾವೊಂದು ರಾಷ್ಟ್ರಕ್ಕೂ ಶಾಶ್ವತ ಸಂತೋಷವನ್ನು, ಪರಿಹಾರವನ್ನು  ಕಂಡುಕೊಟ್ಟಿಲ್ಲ. ಪರಸ್ಪರ ಸೇಡು ತೀರಿಸಿಕೊಳ್ಳಲು ಮಾತ್ರ ಅದು ಬಳಕೆಯಾಗಿದೆ. ಸಮರ ಬೇಡ ಎಂದೇ ಯಾವತ್ತಿಗೂ ಜನಸಾಮಾನ್ಯರೆಲ್ಲರೂ ಪ್ರತಿಪಾದಿಸಿದರು. `ಕೈಯ್ಯಲ್ಲಿ ಬಂದೂಕು ಕೊಡುವ ದೇವರು ಹಿಂದೂಗಳಿಗೂ ಬೇಡ, ಮುಸಲ್ಮಾನರಿಗೂ ಬೇಡ' ಎಂದು ಮೊನ್ನೆ ಡಾ. ಯು ಆರ್‌ ಅನಂತಮೂರ್ತಿ ಹೇಳಿದರು. ಕೈ ಕೈ ಮಿಲಾಯಿಸಿ, ಸಾವು ತಂದುಕೊಂಡ ಯಾವುದೆ ರಾಷ್ಟ್ರವೂ ಮತ್ತೊಮ್ಮೆ ಸಮರವನ್ನು ಬಯಸುವುದಿಲ್ಲ. ಯಾಕೆಂದರೆ ಕದನದ ಅನಂತರದ ಸ್ಥಿತಿ ನಮಗೆಲ್ಲಾ ಗೊತ್ತು. ಮಹಾಭಾರತ ಸಮರ, ಅಶೋಕ ಮಾಡಿದ ಕದನ-ಗಳ ಪರಿಣಾಮವನ್ನು ತಿಳಿದ ರಾಷ್ಟ್ರ ನಮ್ಮದು.
ನಾವು ಈ ಕೈ ಕೈ ಮಿಲಾಕತ್‌ಗೂ ಮೀರಿದ ಪರಿಹಾರವನ್ನು ಸರ್ವ ರಾಷ್ಟ್ರಗಳ ಸಹಯೋಗದೊಂದಿಗೆ, ರಕ್ತರಹಿತ ಕ್ರಾಂತಿಯಂತೆ, ಮೌನಸಂಗ್ರಾಮದಂತೆ ಕಂಡುಕೊಳ್ಳುವ ಜರೂರತ್ತು ಇವತ್ತಿದೆ. ಯಾಕೆಂದರೆ ಅಮಾಯಕರನ್ನು ಕೊಲ್ಲುವುದನ್ನು ಬಿಟ್ಟು ಈ ಸಮರ ಬೇರೇನನ್ನೂ ಮಾಡುವುದಿಲ್ಲ. ಅಫ್ಗಾನ್‌ನಲ್ಲಿ ಕೆಲವೇ ವರ್ಷಗಳ ಹಿಂದೆ ಆದ ಸಮರದ ಪರಿಣಾಮ ನಮಗೆಲ್ಲರಿಗೂ ಮೊನ್ನ ಮೊನ್ನೆ ನಡೆದಂತೆ ಹಚ್ಚ ಹಸಿರಾಗಿದೆ. ಭಾರತ ನಡೆಸುವ ಸಮರದಲ್ಲೂ ಅಮೆರಿಕಾದಂಥ ರಾಷ್ಟ್ರ ಬೇಳೆ ಬೇಯಿಸಿಕೊಳ್ಳಲು ಸಜ್ಜಾಗುತ್ತಿದೆ. ಸಮರವನ್ನು ನಾವು ಅಸ್ತ್ರವನ್ನಾಗಿ ಮಾಡಿಕೊಳ್ಳಲು ಹೊರಟರೆ ಅದೇ ಅಸ್ತ್ರ  ಮುಂದೊಂದು ದಿನ ನಮ್ಮ ಕಡೆಗೇ ತಿರುಗುತ್ತದೆ.
ಸಮರವನ್ನು ಪ್ರತಿಭಟಿಸುತ್ತಾ, ಭಯೋತ್ಪಾದಕತೆ ನಿವಾರಣೆಗೆ ಆದಷ್ಟು ಹುಷಾರಾದ ಮಾರ್ಗವನ್ನು  ಕಂಡುಕೊಳ್ಳಬೇಕೆಂದು ಆಗ್ರಹಿಸುತ್ತಾ ಹಿಂದೆ ಅಫ್ಗಾನ್‌ ಸಮರದ ತರುವಾಯ ಬರೆದ
`ಅಫ್ಗಾನ್‌ಗೆ ಬನ್ನಿ ಇಫ್ತಾರ್‌ ಕೂಟಕ್ಕೆ' ಎಂಬ ಕವಿತೆಯನ್ನು ನೀಡುತ್ತಿದ್ದೇವೆ. ನಮ್ಮ ಎಲ್ಲರ ಒಂದೊಂದು ಕೂಗೂ ನಡೆಯಲು ಅನುವಾಗಿರುವ ಸಮರವನ್ನು ಪ್ರತಿಭಟಿಸಲಿ.

(Now In afgan everything is was- ಅಫ್ಘಾನ್‌ ಗೈಡ್‌ ಒಬ್ಬ ಹೇಳಿದ್ದು.)

ಕಾಬೂಲ ವಿರಳ ಪ್ರಾಚ್ಯ ಸಂಗ್ರಹಾಲಯ,
ದರುಲಮನ್‌ ಅರಮನೆ ಆವರಣ
ಝೂನ ಮುಗ್ಧ ಜೀವಿ ಜಗತ್ತು
ಮದ್ದುಗುಂಡಿನಡಿ ಮುದ್ದೆಯಾಗಿ
ಕಾಬೂಲಿನ
ಆಲಯಗಳೆಲ್ಲಾ ಈಗ ಬಟಾ ಬಯಲು!
ಬಬೂರು ಗಾರ್ಡನಿನ ಹೊಸ ಹೂಗಳು,
ಆ ಹೂವಿನಂಥ ಜನಗಳು
ಒಟ್ಟುಗೂಡಿಸಿಟ್ಟಿದ್ದ ಅಷ್ಟೋ ಇಷ್ಟೋ ಅಗುಳು-
ನಜ್ಜುಗುಜ್ಜಾಗಿದೆ ಈಗ...

ಲೂಟಿಯಾದ ಮೇಲೆ ಕೋಟೆಯ ಬಾಗಿಲು
ಇಕ್ಕಿಕೊಂಡು
ಹಿರಿಯರ ಬಣ
ಘನ ಸರಕಾರದ ಚೌಕಟ್ಟು ಚಾಚಿತು
ನಾವು... ಇದನ್ನು
ನೀವು... ಅದನ್ನು
ನಾವೆಲ್ಲರೂ... ನಿಮ್ಮೆಲ್ಲರನ್ನೂ
ನೋಡಿಕೊಳ್ಳುತ್ತೇವೆಂದು
ಕರ್ಝಾಯಿ ಡಂಗುರ ಹೊರಡಿಸುತ್ತಿದ್ದಂತೇ-
ಕಿವಿಗೊಟ್ಟು ಆಲಿಸಿ
ಕೇಳುತ್ತಿಲ್ಲವೇ ನಿಮಗೆ-
`ಪ್ರಭು ಪ್ರಭುತ್ವವನ್ನು ಹೇರಿ
ತೋರಾಬೋರಾದಲ್ಲಿ ಈಗಾಗಲೇ
ಸೇರಿಕೊಂಡಿದ್ದಾನೆ...'
ಎಂಬ
ನಿರಾಶ್ರಿತರ ಪಿಸು ನಿಟ್ಟುಸಿರು!

ರಮ್ಜಾನ್‌ನ ಪೂರ್ಣಚಂದ್ರ ಕಾಣಿಸಿಕೊಂಡ,
ಓ ಚಂದ್ರ
ಎಲ್ಲಿ ಬೆಳುದಿಂಗಳು?
ಎಲ್ಲಾ ಮತ್ತದೇ ಧರ್ಮಾಂಧರ ತಂಗಳು
ಇನ್ನೆಲ್ಲಿ ಖುಷಿ ತಿಂಗಳು?
ಬುರ್ಖಾ ಕಿತ್ತೊಗೆದರೇನು ಬಂತು
ಯಾರಿಗೆ
ಎಲ್ಲಿಗೆ
ಮತ್ತೆ... ಯಾತಕ್ಕೆ
ಬಂದತಾಯ್ತು ಅಸಂತುಷ್ಟ ಸ್ವಾತಂತ್ರ್ಯ?

ವಿಚ್ಛಿದ್ರ ಬದುಕಿನ ಮೃತಯಾಚನೆ
ಅಬ್ಬಾ!
ಈ ಹಬ್ಬ!
ಮಾಯದ ಅಮಾಯಕರ ಮರುಕ
ನಮಾಜ್‌
ವ್ರಣ, ಹೆಣಗಳುರುಳಿದ ಕಣದಲ್ಲಿ
ರಕ್ತಸಿಕ್ತ ಇಫ್ತಾರ್‌...
ಈ ಸಾರಿ
ಅಫ್ಘಾನಿಗೆ ಬನ್ನಿ ಇಫ್ತಾರ್‌ಗೆ
ಬೇಕಾದಷ್ಟು ಉಂಡು
ಸಾಧ್ಯವಾದರೆ
ಕೊಂಡೂ ಹೋಗಿ
ಈ ರೌರವ ಔತಣ!

ಅಫ್ಘಾನಿನ ಸುತ್ತಾ
ಈಗೆಲ್ಲಾ

ಗತ... ಗತ... ಗತ...

No comments:

Post a Comment