[caption id="attachment_236" align="aligncenter" width="500" caption="ಚಿತ್ರಕೃಪೆ: ಸ್ಪ್ರಾಗ್ ಫೋಟೋ ಸ್ಟಾಕ್"]
ಪ್ರತಿ ಸಲವೂ ಹೊಸ ವರ್ಷ ಬಂದರೆ ಸಾಕು ಎನಿಸುತ್ತದೆ. ಹಳೆ ವರ್ಷ ಹೋದರೆ ಸಾಕು ಎನಿಸುತ್ತದೆ. ಹೊಸ ವರ್ಷವೆಂದರೆ ಹೊಸ ಭರವಸೆ, ಹೊಸ ನಿರೀಕ್ಷೆ, ಕಾತರದ ಕಣ್ಣುಗಳು. ಪ್ರತಿ ವರ್ಷ ಕಳೆಯುವಾಗಲೂ ಆ ವರ್ಷ `ಸಾಕಪ್ಪಾ' ಎನಿಸಿರುತ್ತದೆ, ಅಯ್ಯೋ ಈ ವರ್ಷದಷ್ಟು ಕೆಟ್ಟದಾಗಿ ಯಾವುದೂ ಇರಲಿಲ್ಲ ಎಂಬ ಭ್ರಮೆ ಮೂಡುತ್ತದೆ. ಅಂದರೆ ಮನೆಯ ಅಜ್ಜಿಯಂತೆ ಆಕೆ ಯಾರಿಗೂ ಬೇಡ. ಹೊಸ ವರ್ಷ ಮನೆಗೆ ಬರುತ್ತಿರುವ ಹೊಸ ಹೆಣ್ಣಂತೆ, ಎಲ್ಲರಿಗೂ ಕುತೂಹಲ.
ಗೋಡೆಯ ಮೇಲೆ ಕ್ಯಾಲೆಂಡರ್ ಬದಲಾಗಿ, ಸಹಿ ಕೆಳಗೆ ಬರೆಯುವ ದಿನಾಂಕಗಳು ಬದಲಾಗಿ, ಇಸವಿಗೆ ಒಂದು ವರ್ಷ ಹೆಚ್ಚು ವಯಸ್ಸಾಗಿ ಜಗತ್ತು ಮುಂದಡಿ ಇಡುತ್ತಿದೆ. ಡಿಸೆಂಬರ್‌ನ ಚಳಿ, ನವೆಂಬರ್‌ನ ಬಾಂಬ್ ದಾಳಿ, ಈ ವರ್ಷದ ಕೊನೆಯ ರಿಸೆಷನ್ ಭೂತ, ಸಮರ ಭೀತಿ-ಗಳ ಮಧ್ಯೆ ಬೆಳಗ್ಗೆ ಬರುವ ಸೂರ್ಯನಂತೆ ಹೊಸ ವರ್ಷ ಬರುತ್ತಿದೆ. ಆದರೆ ಆ ಹೊತ್ತಿಗೆ ಕಳೆದ `ಹಳೆಯ ವರ್ಷ' ನಮ್ಮ ಬ್ಲಾಗ್‌ನ ಕವಿತೆಗೆ ಕಂಡಿದ್ದು ಹೀಗೆ.
ಹೇಗೆ?
`ಅ-ಮೃತವರ್ಷಿಣಿ' ಕವಿತೆ ಏನನ್ನುತ್ತಿದೆಯೋ, ಹಾಗೆ.
ಒಂದೇ ವರ್ಷದ ಹಿಂದೆ
ವರ್ಷಾರಂಭದ ತಾರೀಕುಗಳ,
ವಾರಗಳ,
ದಿವಾ, ಗಳಿಗೆಗಳ
ಮನೆಗೆ ನಗುನಗುತ್ತಾ ಕಾಲಿಟ್ಟವಳು
ಆಕೆ, ವರ್ಷಿಣಿ.
ಹಳೆಯ ಕಸಗಳ
ಒಂದೂ ಬಿಡದೇ ಎತ್ತಿ ಎಸೆದು
ಹೊಸ ಸರಸಗಳ
ಮೆಲ್ಲ ಮೆಲ್ಲ ಎತ್ತಿಟ್ಟು
ಎಲ್ಲರನ್ನೂ ಮುತ್ತಿಟ್ಟಳು,
ಹಸಿದ ಬಾಯಿಗಳಿಗೆ ತುತ್ತಿತ್ತಳು.
ಈ ಜಗತ್ತಿನ ಎಲ್ಲಾ
ಸಂಭ್ರಮಗಳೂ
ಇವಳ ಮಡಿಲ ಮೇಲಾಡಿ,
ಸಂಕಟಗಳೆಲ್ಲಾ
ಒಡಲನ್ನು ಹುಡಿಮಾಡಿ
ಹಾರಿ ಹೋದವು ಕಾಲದ
ರೆಕ್ಕೆಯ ಮೇಲೆ...
ಈಕೆ ಕಂಪಿಸುವ ಕೈಗಳಲ್ಲಿ
ಅನ್ನಕ್ಕಿಟ್ಟು,
ಬೆಳ್ಳಗಾಗುತ್ತಿರುವ ಕೂದಲನ್ನು
ಎತ್ತಿ ಕಟ್ಟಿ
ಅಸಂಖ್ಯ ಪುಟ್ಟ ಬದುಕುಗಳನ್ನು
ಸಾಲು ಕೂರಿಸಿ ಉಣ್ಣಲಿಕ್ಕಿದಳು.
ಆ ಅನ್ನವನ್ನು ಕಳವು ಮಾಡಿದವರನ್ನು,
ಅಡುಗೆಯೊಲೆಯ ಉರಿಯಲ್ಲೇ
ಊರು ಸುಟ್ಟವರನ್ನು
ವರ್ಷಮ್ಮ ಹೊಗೆಯ ಮಧ್ಯೆ
ಸಂಕಟದಿಂದ ನೋಡಿದಳು,
ಆ ಹೊಗೆಯೇ ಆಕೆಗೆ
ಹಗೆಯಾಯಿತು,
ಹೊಗೆಯಲ್ಲಿ ಸಿಕ್ಕಿಕೊಂಡ ಮೇಲೆ
ಹಾಸಿಗೆಯೇ ಅವಳ ಪಾಲಾಯಿತು...
ಅಳಿದ ದಿನ, ವಾರ, ತಿಂಗಳುಗಳ
ಹಗ್ಗದ ಮಂಚದ ಮೇಲೆ
ಈಗ ಈ ಅಮೃತವರ್ಷಿಣಿ
ಹಣ್ಣು ಹಣ್ಣು ಮುದುಕಿ..
ಅವಳ ಕಣ್ಣಲ್ಲಿ ಆಡಲಾಗದ ಪಾಡು,
ಕಿವಿಯಲ್ಲಿ ಇರಿಸಿಕೊಳ್ಳಲಾರದ ಹಾಡು.
ಯಾರ್ಯಾರೋ
ಶತಾಯುಷಿಗಳಾಗುತ್ತಾರಂತೆ-
ಸಾವು ಕರೆಯುವುದನ್ನು ಮರೆತು.
ಹಾಗೇ ಈಕೆಯೂ
ಸಾಯದೇ ಉಳಿದುಕೊಂಡರೆ
ಅಜ್ಜಿ ಶುಷ್ರೂಷೆ ಕಳೆದು
ಎದ್ದು ನಿಲ್ಲುತ್ತಾಳೆ,
ಆ ಸಲವಾದರೂ
ಈ ಅಜ್ಜಿಯಿಂದ ಎತ್ಯಾಡಿಸಿಕೊಂಡ
ವಾರ, ತಿಂಗಳು, ಗಳಿಗೆಗಳು
ಅಜ್ಜಿಗೇ ಅಮ್ಮನಾಗಬಹುದು,
ಅವಳನ್ನು ಇನ್ನಾದರೂ
ಚೆನ್ನಾಗಿ ನೋಡಿಕೊಳ್ಳಬಹುದು.
ಐಸಿಯುಯಲ್ಲಿ
ಒರಗಿರುವ ವರ್ಷಜ್ಜಿಗೆ
ಆರೈಕೆ ಬೇಕು,
ನಮ್ಮ ನಿಮ್ಮೆಲ್ಲರ
ಹಾರೈಕೆಯಾದರೂ ಸಾಕು.
No comments:
Post a Comment