Friday, January 2, 2009

ಮತ್ತೊಂದು ವರ್ಷ: ಹೊಸ ವರ್ಷನ್‌!

IND0160Bಗೋಡೆಯ ಮೇಲೆ ಹೊಸ ಕ್ಯಾಲೆಂಡರ್‌ ಹಾಕಬೇಕು, ಎಲ್ಲಾದರೂ ಡೇಟ್‌ ಬರೆಯಬೇಕಾಗಿ ಬಂದಾಗ ಬದಲಾದ ಇಸ್ವಿಯನ್ನು ನೆನಪು ಮಾಡಿ ನೆನಪಿಟ್ಟುಕೊಳ್ಳಬೇಕು. ಜನವರಿಯಿಂದಾದರೂ ಸರಿಯಾಗುತ್ತೇನೆ ಎಂದು ಮತ್ತೊಂದು ವರ್ಷ ಹೊಸ ರೆಸಲ್ಯೂಷನ್‌ ತೆಗೆದುಕೊಳ್ಳಬೇಕು. ಈ ವರ್ಷದಿಂದ ಕುಡಿತವನ್ನು ಬಿಟ್ಟೆ, ಇನ್ನು ಸಿಗರೇಟು ಮುಟ್ಟುವುದೇ ಇಲ್ಲ ಎಂದೆಲ್ಲಾ ನೆಂಟರಿಷ್ಟರ ಹತ್ತಿರ ಜನವರಿ ಮೊದಲ ವಾರದಲ್ಲೇ ಕೊಚ್ಚಿಕೊಳ್ಳುವುದಾದರೆ ಕೊಚ್ಚಿಕೊಳ್ಳಿ. ಇಲ್ಲದಿದ್ದರೆ ಜನವರಿ ಮುಗಿಯುತ್ತಲೇ ಜಾರಿಗೆ ಬಂದ ಆ ರೆಷಲ್ಯೂಷನ್‌ ಜಾರಿ ಹೋಗಿಬಿಡಬಹುದು.
ಜನವರಿ ಒಂದು ಥರ ಸ್ಟಾಕ್‌ ಕ್ಲಿಯರೆನ್ಸ್‌ ತಿಂಗಳು. ಕಳೆದ ವರ್ಷ ಬಾಕಿ ಇಟ್ಟುಕೊಂಡ ವಿಷಯಗಳನ್ನೆಲ್ಲಾ ಮುಗಿಸಲೇಬೇಕಾಗುತ್ತದೆ. ತೆಗೆದುಕೊಳ್ಳಬೇಕಾದ ಹೊಸ ವಸ್ತು, ಹಣ ತೊಡಗಿಸಬೇಕಾದ ಮ್ಯೂಚುವಲ್‌ ಫಂಡ್‌, ಪ್ರಾರಂಭಿಸಬೇಕಾದ ಹೊಸ ವ್ಯಾಪಾರ, ನಿಲ್ಲಿಸಲು ನಿರ್ಧರಿಸಿದ ಜಗಳ, ತೆಗೆದುಕೊಳ್ಳಬೇಕೆಂದುಕೊಂಡ ಸೈಟ್‌, ಕೊಂಡ ಸೈಟ್‌ನಲ್ಲಿ ಕಟ್ಟಿಸಲು ಶುರುಮಾಡಬೇಕಾದ ಮನೆ, ತುಂಬಬೇಕಾದ ಸಾಲ, ಭರಿಸಬೇಕಾದ ಬಡ್ಡಿ ಇತ್ಯಾದಿ ಇತ್ಯಾದಿ. ಹಳೆಯ ವರ್ಷದಲ್ಲಿ ಬಿಡುಗಡೆ ಮಾಡಬೇಕಾಗಿದ್ದ ಚಿತ್ರವನ್ನು ಬೇಕೆಂದೇ ಮುಂದೂಡಿ, ಹೊಸ ವರ್ಷದಲ್ಲಿ ಬಿಡುಗಡೆ ಮಾಡಲಾಗುತ್ತದೆ. ಅಂದುಕೊಂಡಿದ್ದೆಲ್ಲಾ ಆಗುತ್ತದಾ, ಬಿಡುಗಡೆಯಾದ ಚಿತ್ರ ಹಿಟ್‌ ಆಗುತ್ತದಾ ಎಂದೇ ಚಿಂತಿಸುತ್ತಾ ಜನವರಿ ಪ್ರತಿ ಹೊಸವರ್ಷಕ್ಕೂ ಒಂದು ಥರದ ಜನ`ವರಿ'ಯೇ ಆಗುತ್ತದೆ.
ಹೊಸ ವರ್ಷ ಎಂದರೆ ಸಂಭ್ರಮ. ಅಲ್ಲಿ ಇರುವುದು ಭರವಸೆ. ಆದರೆ ಆ ಭರವಸೆ ಹೆಚ್ಚಿನ ಸಂದರ್ಭದಲ್ಲಿ ಕ್ಷಣಿಕ, ಕೆಲವೊಂದು ಶಾಶ್ವತ. ಕಾಲೇಜಿನ ಎಷ್ಟೋ ಹುಡುಗ, ಹುಡುಗಿಯರು ಮಾತು ಬಿಟ್ಟಿದ್ದರೂ ಹೊಸ ವರ್ಷದಂದು ದೋಸ್ತರಾಗುತ್ತಾರೆಂಬುದು ಒಂದು ಶಾಶ್ವತ ಭರವಸೆ. ಬೈಯುವ ಮಾಸ್ತರು, ಲೆಕ್ಚರರ್‌ಗಳು ವಿದ್ಯಾರ್ಥಿಗಳನ್ನು ಹೊಸ ವರ್ಷದ ದಿನವಾದರೂ ಚೆನ್ನಾಗಿ ಮಾತಾಡಿಸುತ್ತಾರೆ ಎಂಬ ಭರವಸೆ ಕಾಲೇಜಿನ ಕ್ಲಾಸ್‌, ಪಿರಿಯಡ್‌ಗಳಿಗೆ. ಇದು ಕ್ಷಣಿಕ ಆಗಿರಲೂಬಹುದು. ರೇಗುವ ಕಂಡಕ್ಟರ್‌, ಸರಿಯಾಗಿ ಮಾತಾಡಿಸದೇ ದಿನಾ ಟೆಕ್ಕಿಗಳನ್ನು ತುಂಬಿಸಿಕೊಳ್ಳುವ ಕ್ಯಾಬ್‌ಡ್ರೈವರ್‌, ಪ್ರಾಜೆಕ್ಟ್‌ ಹೆಡ್‌, ಸರ್ಕಾರಿ ಆಸ್ಪತ್ರೆ ಡಾಕ್ಟರ್‌, ಮಹಾನಗರ ಪಾಲಿಕೆಯ ಸಿಬ್ದಂದಿಗಳು, ಬ್ಯಾಂಕ್‌ ಮ್ಯಾನೇಜರ್‌ಗಳೆಲ್ಲಾ ಆ ಒಂದು ದಿನವಾದರೂ `ಹ್ಯಾಪಿ ನ್ಯೂ ಈಯರ್‌' ಸ್ವೀಕರಿಸಿ, ನಗುತ್ತಾ `ವಿಶ್‌'ವಾಸ ತೋರಿಸಬಹುದು ಎಂಬುದು ಶಾಶ್ವತವೋ, ಕ್ಷಣಿಕವೋ- ನಿರ್ಧರಿಸಲಾಗದ ಭರವಸೆ.
ಹೊಸ ವರ್ಷದ ಮೊದಲ ದಿನ ಹಳ್ಳಿ, ಕುಗ್ರಾಮಗಳ ಪಾಲಿಗೆ ಎಂದಿನಂತೆ ಮತ್ತೊಂದು ದಿನ ಅಷ್ಟೇ. ಆದರೆ ನಗರಕ್ಕೆ ಅದು ವಿಶೇಷ ದಿನ. ಆ ದಿನದ ಹಿಂದಿನ ರಾತ್ರಿ ಅವರು ತಮ್ಮ ದೇಹ, ಮನಸ್ಸುಗಳನ್ನು ಸಂಭ್ರಮದ ಮೂಸೆಯಲ್ಲಿ ಬಿಸಿ ಮಾಡಿಕೊಂಡಿರುತ್ತಾರೆ. ಆ ಬಿಸಿಯ ಮೇಲಿಟ್ಟ ಹೆಂಚಲ್ಲಿ ಕಾಯುವ ದೋಸೆಯಂತೆ ಅವರ ಮುಂದಿನೆಲ್ಲಾ ಕನಸುಗಳು ಎರೆಯಲ್ಪಡುತ್ತವೆ. ಸಾಂಸ್ಕೃತಿಕವಾಗಿ ಹೊಸ ವರ್ಷವನ್ನು ಸ್ವಾಗತಿಸುವುದೋ, ಚಿರಾಟ, ಕುಡಿತ, ನಲಿತಗಳಲ್ಲಿ ಸಂಭ್ರಮ ಕಂಡುಕೊಳ್ಳುವುದೋ ಎಂಬುದು ವೈಯಕ್ತಿಕ ಆಯ್ಕೆ. ಆದರೆ ನಗರದ ಎಲ್ಲರಿಗೂ ಒಂದು ಸಂಭ್ರಮದ ಅಭಿವ್ಯಕ್ತಿ ಬೇಕಾಗಿರುತ್ತದೆ. ಆ ಅಭಿವ್ಯಕ್ತಿಗೆ ಹೊಸ ವರ್ಷ ಎನ್ನುವುದೂ ಒಂದು ಆಪ್ಷನ್‌ ಅಷ್ಟೇ. ಮನಸ್ಸನ್ನು ಖುಷಿಗೊಳಿಸುವ ಅನೇಕ ನೆಪಗಳಲ್ಲಿ ಇದೊಂದು ಪ್ರಮುಖ ನೆಪ.
ಈ ನವ ವರ್ಷಾಚರಣೆ ಎಂಬುದು ಭಾರತದಲ್ಲಿ ಯಾವಾಗಿನಿಂದಲೂ ಒಂದು ವಿವಾದಿತ ಆಚರಣೆ. ಕಾರಣ, ಅದೊಂದು ಅನುಕರಣೆ. ಭಾರತಕ್ಕೆ ಹೊಸ ವರ್ಷ ಜನವರಿ ಒಂದು ಅಲ್ಲವೇ ಅಲ್ಲ. ಸಾಂಸ್ಕೃತಿಕವಾಗಿ ಭಿನ್ನ ಭಿನ್ನ ಆಚರಣೆಯನ್ನು ಆಶ್ರಯಿಸಿರುವ ಭಾರತದಲ್ಲಿ, ಒಂದೊಂದು ರಾಜ್ಯ ಒಂದೊಂದು ಸಂದರ್ಭವನ್ನು ಹೊಸ ವರ್ಷವೆಂದು ನಂಬಿಕೊಂಡು ಬಂದಿದೆ. ಕರ್ನಾಟಕ ಮತ್ತು ಆಂಧ್ರಕ್ಕೆ ಯುಗಾದಿ ಹೊಸ ವರ್ಷ. ಹಾಗಾಗಿ ಹೊಸ ವರ್ಷ ಈ ಭಾಗದ ಜನರಿಗೆ ಮಾರ್ಚ್‌ ಅಥವಾ ಏಪ್ರಿಲ್‌ನಲ್ಲಿ ಬರುತ್ತದೆ.
ಇನ್ನು ಮಹಾರಾಷ್ಟ್ರದ ಕಡೆ ಗುಡಿ ಪದ್ವಾ ಎಂಬ ಆಚರಣೆ ಇದೆಯಂತೆ. ಅದೂ ಹೆಚ್ಚು ಕಡಿಮೆ ನಮ್ಮ ಯುಗಾದಿ ಆಚರಣೆಯ ಹೊತ್ತಿಗೆ ಅಂದರೆ ಚೈತ್ರ ಮಾಸದಲ್ಲಿ ಬರುತ್ತದೆ. ಇನ್ನು ತಮಿಳುನಾಡಿಗೆ ಏಪ್ರಿಲ್‌ನಲ್ಲಿ ಹೊಸ ವರ್ಷ. ಏಪ್ರಿಲ್‌ 13 ಅಥವಾ 14ಕ್ಕೆ ನಡೆಯುವ ಈ ಆಚರಣೆಗೆ `ಪುತ್ತಂಡು' ಎಂದು ಕರೆಯುತ್ತಾರಂತೆ. ಮಲೆಯಾಳಿಗಳು `ವಿಶು' ಎಂಬ ಹಬ್ಬವನ್ನು ದೊಡ್ಡದಾಗಿಯೇ ಆಚರಿಸುತ್ತಾರೆ ಎಂಬುದು ನಿಮಗೆಲ್ಲಾ ಗೊತ್ತಿದೆ. ಕರ್ನಾಟಕದ ತುಳುವರು `ಬಿಸುಪರ್ಬ'ವೆಂಬ ಹಬ್ಬವನ್ನು ಹೊಸ ವರ್ಷದ ಸ್ವರೂಪದಲ್ಲೇ ಆಚರಿಸಿಕೊಳ್ಳುತ್ತಾರೆ. ಹೀಗೆ ಈ ಎಲ್ಲಾ ಕಾಲಗಳೂ ಲೆಕ್ಕದ ಪ್ರಕಾರ ನಮಗೆ ಹೊಸ ವರ್ಷಾಚರಣೆ ಆಗಬೇಕು.
ಸಾಂಸ್ಕೃತಿಕವಾಗಿ ಭಾರತದಲ್ಲಿ ಬೇರೆ ಬೇರೆ ಕಾಲವನ್ನು ಹೊಸ ವರ್ಷವನ್ನಾಗಿ ನೋಡಿರುವುದರಿಂದ ಜನವರಿ ತಿಂಗಳ ಮೊದಲ ದಿನವನ್ನು `ಹೊಸ ವರ್ಷ'ವೆಂದು ಸಂಭ್ರಮಿಸಬೇಕೇಕೆ ಎನ್ನುವುದು ಸಂಪ್ರದಾಯವಾದಿಗಳ ಪ್ರಶ್ನೆ. ಆದರಿದನ್ನು ಯಾರು ಒಪ್ಪುತ್ತಾರೋ ಬಿಡುತ್ತಾರೋ, `ಹೊಸ ವರ್ಷ'ಕ್ಕೆ ಅದು ಸಂಬಂಧವಿಲ್ಲ. ಜಾಗತೀಕರಣದ ಪ್ರಭಾವದಿಂದ ಇಂಥ ವಿವೇಚನೆಗಳಿಗೆ ಅವಕಾಶವಿಲ್ಲ. ಜಗತ್ತಿಗೆ ಯಾವುದು ಹಬ್ಬವೋ ಆ ದಿನವೇ ಭಾರತದ ನಗರಗಳ ಜಗತ್ತಿಗೂ ಹಬ್ಬ.
ಹಾಗೆ ನೋಡಿದರೆ ಜನವರಿಯಿಂದ ಪ್ರಾರಂಭವಾಗುವ ಹೊಸ ಕ್ಯಾಲೆಂಡರ್‌ ವರ್ಷಕ್ಕೂ ಮಾನಸಿಕ ಸ್ಥಿತಿಗೂ ಸಂಬಂಧವಿದೆ. ಈ ಹೊತ್ತಿನಲ್ಲಿ ಜಗತ್ತಿನ ಎಲ್ಲಾ ಮನಸ್ಸುಗಳೂ ಪ್ರಫುಲ್ಲವಾಗಿ ವರ್ತಿಸುತ್ತವೆ. ಯಾವುದಾದರೂ ವಿಷಯ ನಮ್ಮ ಎದೆಬಡಿತವನ್ನು ಜಾಸ್ತಿ ಮಾಡಿದರೆ, ಎದೆ ಬಡಿತವನ್ನು ಸಮಸ್ಥಿತಿಗೆ ತಂದರೆ ಅದು ಒಂದು ಕೆಲಸದ ಮೇಲೆ ಉಂಟುಮಾಡುವ ಪರಿಣಾಮ ಬೇರೆ ಬೇರೆ. ಸೋಮವಾರ ಬೆಳಿಗ್ಗೆ ಈ ಜಗತ್ತಿನಲ್ಲಿ ಹಲವಾರು ಅಪಘಾತಗಳು ಸಂಭವಿಸುತ್ತವೆ ಎಂದು ಹಿಂದೊಂದು ಸಮೀಕ್ಷೆ ಮಾಡಲಾಗಿತ್ತು. ಅಂದರೆ ಭಾನುವಾರದ ರಜೆಯಂದು ಸುಸ್ಥಿತಿಯಲ್ಲಿರುವ ಮನಸ್ಸು, ಸೋಮವಾರದ ಕೆಲಸಕ್ಕೆ ಹೊರಡುತ್ತಲೇ ಉದ್ವೇಗಕ್ಕೆ, ಚಿಂತೆಗೆ ಈಡಾಗುತ್ತದೆ. ಹೀಗೆ ನಮ್ಮ ಮನಸ್ಸಿನ ಸ್ಥಿತಿಗೂ ಕೆಲಸಕ್ಕೂ ಒಂದು ಸಂಬಂಧವಿದೆ.
ಹಾಗಾಗಿ ನವ ವರ್ಷಾಚರಣೆ ಎಂಬ ಸಂಭ್ರಮ ನಮ್ಮ ಕೆಲಸವನ್ನು ಚೆಂದಗಾಣಿಸಿ ಕೊಡುತ್ತದಾದರೆ ಅದು ಯಾರಿಗೆ ಬೇಡ. ಆದರೆ ಸಂಭ್ರಮಾಚರಣೆಯಲ್ಲೇ ಯಾರಿಗಾದರೂ ಸಾಮಾಜಿಕವಾಗಿ, ವೈಯಕ್ತಿಕವಾಗಿ ತೊಂದರೆಯಾಗುವುದಾದರೆ ಅದು ನಮಗೂ ಬೇಡ, ನಿಮಗೂ ಬೇಡ.

ಉದಯವಾಣಿಯ `ನಮ್ಮ ಬೆಂಗಳೂರು' ಪುರವಣಿಯ ಪ್ರಕಟಿತ ಲೇಖನ

1 comment:

  1. >>ಇನ್ನು ಮಹಾರಾಷ್ಟ್ರದ ಕಡೆ ಗುಡಿ ಪದ್ವಾ ಎಂಬ ಆಚರಣೆ
    >>ಇದೆಯಂತೆ. ಅದೂ ಹೆಚ್ಚು ಕಡಿಮೆ ನಮ್ಮ ಯುಗಾದಿ ಆಚರಣೆಯ
    >>ಹೊತ್ತಿಗೆ ಅಂದರೆ ಚೈತ್ರ ಮಾಸದಲ್ಲಿ ಬರುತ್ತದೆ.

    ಸಾರ್, ಒಂದೆರಡು ತಿದ್ದುಪಡಿ.

    ಅದು ಗುಡಿ ಪಾಡ್ವಾ - ಅದು ಹೆಚ್ಚು ಕಡಿಮೆ ಅಲ್ಲ - ಸರಿಯಾಗಿ ನಾವು ಚಾಂದ್ರಮಾನ ಯುಗಾದಿ ಆಚರಿಸುವಂದೇ ಬರುತ್ತೆ.


    >>ಇನ್ನು ತಮಿಳುನಾಡಿಗೆ ಏಪ್ರಿಲ್‌ನಲ್ಲಿ ಹೊಸ ವರ್ಷ. ಏಪ್ರಿಲ್‌ 13
    >>ಅಥವಾ 14ಕ್ಕೆ ನಡೆಯುವ ಈ ಆಚರಣೆಗೆ `ಪುತ್ತಂಡು’ ಎಂದು
    >>ಕರೆಯುತ್ತಾರಂತೆ.

    ಏಪ್ರಿಲ್ ೧೪ರ ಸೌರಮಾನ ಯುಗಾದಿಗೆ ಪುತ್ತಾಂಡು (ಪುದು=ಹೊಸ, ಆಂಡು = ವರ್ಷ) ಅಂತ ಹೇಳುವುದು ಇದೆ, ಹಾಗೇ ಜನವರಿ ಒಂದಕ್ಕೂ ಪುತ್ತಾಂಡು ( ಅದೂ ಒಂದು ಹೊಸವರ್ಷವೇ ತಾನೆ) ಅನ್ನುವುದುಂಟು.

    -ನೀಲಾಂಜನ

    ReplyDelete