Sunday, January 4, 2009

ಇವತ್ತೇ `ಆಮೀರ್‌' ನೋಡಿ

still3ಮೊನ್ನೆ ನಡೆದ ಮುಂಬೈ ಭಯೋತ್ಪಾದಕ ದಾಳಿಯನ್ನು ಮುಖ್ಯ ವಿಷಯವಾಗಿಟ್ಟುಕೊಂಡು ಜಗತ್ತಿನ ಇಡೀ ಭಯೋತ್ಪಾದನೆಯನ್ನು ವಿಶ್ಲೇಷಿಸಲಾಗುತ್ತಿದೆ. ಮಾಧ್ಯಮಗಳ ಕುಲುಮೆಯಲ್ಲಿ `ಜ್ವಲಿಸುತ್ತಿರುವ ತಾಜ್‌ ಹೊಟೇಲ್‌' ಭಯೋತ್ಪಾದನೆಯ ಸಂಕೇತವಾಗಿ ಹೋಗಿದ್ದೂ ಆಗಿದೆ. ಆದರೆ ಭಯೋತ್ಪಾದನೆ ಜಗತ್ತನ್ನು ಸುಡುತ್ತಾ ಬಂದು ಎಷ್ಟೋ ವರ್ಷಗಳಾದವು. ಅದರ ಬಿಸಿ ಮುಂಬೈ, ದೆಹಲಿ, ಬೆಂಗಳೂರುಗಳನ್ನು ತಟ್ಟಿದ್ದೂ ಇತ್ತೀಚೆಗೇನಲ್ಲ.
ಆದರೆ ಕಳೆದ ಒಂದು ವರ್ಷದಿಂದೀಚೆ ಭಯೋತ್ಪಾದಕ ಕೃತ್ಯದ ಮೇಲೆ ಹಿಂದಿಯಲ್ಲಿ ಒಂದೇ ಸಮನೆ ಚಿತ್ರಗಳು ತಯಾರಾಗುತ್ತಿವೆ. `ಮುಂಬೈ ಮೇರಿ ಜಾನ್‌', `ಎ ವೆಡ್ನೆಸ್‌ಡೇ', `ಆಮೀರ್‌' ಹಾಗೂ `ಶೂಟ್‌ ಆನ್‌ ಸೈಟ್‌' ಅಂಥ ನಾಲ್ಕು ಸಿನಿಮಾಗಳು. ಅವುಗಳಲ್ಲಿ `ಎ ವೆಡ್ನೆಸ್‌ಡೇ' ಚಿತ್ರವನ್ನು ನಮ್ಮ ಗಾಂನಗರವೂ ನೋಡಿಬಿಟ್ಟಿದೆ. ಮೇಕಿಂಗ್‌ ದೃಷ್ಟಿಯಿಂದ ಉತ್ತಮ ಚಿತ್ರವನ್ನಾಗಿ ಅದನ್ನು ನೋಡಬಹುದಾದರೂ ಅದು ಪ್ರತಿಪಾದಿಸುವ ಮೌಲ್ಯ, ಅಂತರಂಗದಲ್ಲಿ ಅದಕ್ಕಿರುವ ರಂಜಕ ಗುಣ, ಪ್ರಚೋದಿಸುವ ಮನಸ್ಥಿತಿಯನ್ನು ಯಾರಾದರೂ ಪ್ರಶ್ನಿಸಿಯಾರು.
ಅವುಗಳಲ್ಲಿ `ಮುಂಬೈ ಮೇರಿ ಜಾನ್‌' ಮತ್ತು `ಆಮೀರ್‌' ಹೆಚ್ಚು ಸಂವೇದನೆಯ ಸಿನಿಮಾ. ಅದರಲ್ಲೂ `ಆಮೀರ್‌' ಒಂದು ಘಟನೆಯ ಕತೆಯಾಗುತ್ತಲೇ ಸಾಮಾನ್ಯರ ಜಗತ್ತಿನ ತಲ್ಲಣದ ನೇರ ಪ್ರಸಾರವೂ ಆಗುತ್ತಾ ಹೋಗುತ್ತದೆ. ಒಬ್ಬ ವ್ಯಕ್ತಿಯ ಒಂದು ದಿನದ ಬದುಕಲ್ಲಿ ಎದುರಾಗುವ ಹಠಾತ್‌ ಬೆಳವಣಿಗೆ, (ಈಗಿನ ಭಯೋತ್ಪಾದಕ ವಾತಾವರಣದಲ್ಲಿ)ನಮ್ಮ ನಿಮ್ಮ ಮನೆಯಲ್ಲಿ ಕೂಡ ಆಗಬಹುದಾದ ವಾತಾವರಣವಾಗಿ ಕಾಣುತ್ತದೆ. ಆ ಚಿತ್ರದ ವ್ಯಕ್ತಿ ಹಂತಹಂತವಾಗಿ ನಾವೆಲ್ಲರೂ ಆಗಿ ಬದಲಾಗುವುದರಲ್ಲೇ ಚಿತ್ರದ ಯಶಸ್ಸಿದೆ. ಏನಿಲ್ಲ, ಇವತ್ತು (ಭಾನುವಾರ, 4,ಜನವರಿ 2009) `ಆಮೀರ್‌' `ಎನ್‌ಡಿಟೀವಿ ಕಲರ್ಸ್‌'ನಲ್ಲಿ ರಾತ್ರಿ 8ಕ್ಕೆ ಪ್ರಸಾರವಾಗುತ್ತಿದೆ. ನೋಡಿ. ಇಲ್ಲದಿದ್ದರೆ ಆ ಚಿತ್ರದ ಡಿವಿಡಿ ಮಾರುಕಟ್ಟೆಯಲ್ಲಿ ಸಿಗುತ್ತದೆ. ಹುಡುಕಿದರೆ ಕಷ್ಟವೇನಿಲ್ಲ.
ಸಿನಿಮಾ ಹ್ಯಾಗಿದೆ? ಮುಂದೆ ಓದಿ.`ಆಮೀರ್‌', ಡಾ. ಅಮೀರ್‌ ಆಲಿ ಎಂಬ ಡಾಕ್ಟರ್‌ನ ಕತೆ. ಅಮೆರಿಕಾದಲ್ಲಿ ಓದುತ್ತಿದ್ದ ಯುವಕ ಕಾರ್ಯ ನಿಮಿತ್ತ ತನ್ನ ತವರಾದ ಮುಂಬೈಗೆ ಮರಳುತ್ತಾನೆ. ಅಷ್ಟರಲ್ಲಿ ಮುಂಬೈನ ಮೂಲಭೂತವಾದ ಗುಂಪೊಂದು ಆತನ ಇಡೀ ಕುಟುಂಬದ ಸದಸ್ಯರನ್ನು ಅಪಹರಿಸಿರುತ್ತದೆ. ಆತನ ಎಲ್ಲಾ ಸಂಪರ್ಕ ಸಾಧ್ಯತೆಯನ್ನೂ ಮುಚ್ಚಿ, ಒಬ್ಬ ಅನಾಮಿಕ ಮುಖಂಡ ಒಂದು ಫೋನ್‌ ನೀಡಿ ಆಮೀರ್‌ನನ್ನು ನಿರ್ದೇಶಿಸತೊಡಗುತ್ತಾನೆ. ಅನಂತರ ಅಲ್ಲಿರುವುದು ಆಮೀರ್‌, ಹೊರಹೋಗುವ ಕರೆಯನ್ನು ನಿಷೇಸಿಕೊಂಡು ಅವನ ಕೈಯಲ್ಲಿ ಕುಳಿತ ಮೊಬೈಲ್‌ ಮತ್ತು ಅವನನ್ನು ಹೆಜ್ಜೆ ಹೆಜ್ಜೆಗೂ ನಿರ್ದೇಶಿಸುವವನ ದನಿ.
ಇಲ್ಲಿ ಆಮೀರ್‌ ಒಬ್ಬ ಮುಸಲ್ಮಾನ ಎನ್ನುವುದಷ್ಟೇ ಆ ಮೂಲಭೂತವಾದಿಗೆ ಬೇಕಾಗಿರುವ ವಿಷಯ. ಹಳೆ ಮುಂಬೈನ ಬೀದಿಯನ್ನೂ ಅಲ್ಲಿನ ಜನವಾಸದ ದುಃಸ್ಥಿತಿಯನ್ನೂ ತೋರಿಸುತ್ತಾ ಆ ಮುಖಂಡ ಫೋನಲ್ಲೇ ಚರ್ಚೆಗಾರಂಭಿಸುತ್ತಾನೆ: `ನೋಡು, ನೀನೇನೋ ಅಲ್ಲಿಗೆ ಹೋಗಿ ಡಾಕ್ಟರ್‌ ಆದೆ. ಆದರೆ ಇಲ್ಲಿ ನೋಡು, ನಿನ್ನ ಕೋಮಿನವರು ಎಂಥ ಹತಭಾಗ್ಯ ಬದುಕನ್ನು ಕಾಣುತ್ತಿದ್ದಾರೆ! ಅವರ ಉದಾರಕ್ಕೆ ನೀನು ಭಯೋತ್ಪಾದಕ ಕೃತ್ಯಕ್ಕೆ ಬರಬೇಕು. ನಿಮ್ಮವರಿಗೆ ನ್ಯಾಯ ಸಲ್ಲಬೇಕು'. ಇದನ್ನು ಒಪ್ಪಿಕೊಳ್ಳಲು ಮನಸ್ಸಿಲ್ಲದಿದ್ದರೂ ಹಲವು ರೀತಿಯಲ್ಲಿ ಆತ ಮೂಲಭೂತವಾದಿಯನ್ನು ವಿರೋಸುತ್ತಿದ್ದರೂ ತನ್ನ ಎಲ್ಲಾ ಚಲನವಲನಗಳೂ ಆ ಮೂಲಭೂತವಾದಿಯ ನಿಯಂತ್ರಣದಲ್ಲಿದೆ ಎಂದು ಗೊತ್ತಾದ ಕಾರಣ, ತನ್ನ ಕುಟುಂಬ ವರ್ಗವನ್ನು ಉಳಿಸಲು ಯಾವುದೋ ಬಸ್‌ನಲ್ಲಿ ಬಾಂಬ್‌ ಇಡಲು ಆಮೀರ್‌ ಒಪ್ಪಿಕೊಳ್ಳುತ್ತಾನೆ. ಅಲ್ಲಿಂದ ಕತೆ ಇನ್ನೊಂದು ತೀವ್ರ ಸ್ತರವನ್ನು ತಾಕುತ್ತದೆ.
ಉಸಿರು ಬಿಗಿಹಿಡಿದು ನೋಡಬೇಕಾದ ಒಂದು ಥ್ರಿಲ್ಲರ್‌ ಆಗಿ ಮೇಲ್ಮಟ್ಟಕ್ಕೆ `ಆಮೀರ್‌' ಕಾಣಿಸಿಕೊಂಡರೂ ಅದು ಅಷ್ಟೇ ಅಲ್ಲ. ಚಿತ್ರದ ಆತ್ಮವಾಗಿ ಭಯೋತ್ಪಾದನೆಯ ಅಸ್ತ್ರವಾಗುವ ಅಮಾಯಕನೊಬ್ಬನಿದ್ದಾನೆ. ಈ ಜಗತ್ತಲ್ಲಿ ನಡೆಯುತ್ತಿರುವ ಅಸಂಖ್ಯ ಭಯೋತ್ಪಾದಕ ಕೃತ್ಯದಲ್ಲಿ `ಉಗ್ರ' ಎಂಬ ಹಣೆಪಟ್ಟಿ ಹೊತ್ತು ಸಾಯುವವರಲ್ಲಿ ಇಂಥ ಎಷ್ಟೋ ಅಮಾಯಕರೂ ಇರಬಹುದು ಎಂಬ ಚರ್ಚೆಗೆ ಈ ಚಿತ್ರ ತೊಡಗುತ್ತಾ ಹೋಗುತ್ತದೆ. ಇದ್ಯಾವ ಗೊಡವೆಗೂ ಹೋಗದ, ತನ್ನ ಪಾಡಿಗೆ ತನ್ನ ಕೆಲಸದಲ್ಲಿ ತೊಡಗಿಕೊಂಡು, ಜೀವ ವಿರೋ ಭಯೋತ್ಪಾದಕತೆಯನ್ನು ಖಂಡಿಸುತ್ತಿದ್ದ `ಆಮೀರ್‌'ನಂಥ ಯುವಕನೇ ಭಯೋತ್ಪಾದನೆಯ ಅಸ್ತ್ರವಾಗಿಬಿಡುವ ದಿಗ್ಭ್ರಮೆಯಲ್ಲೇ ಚಿತ್ರದ ವ್ಯಂಗ್ಯವಿದೆ.
ಅಂದಹಾಗೆ `ಆಮೀರ್‌' ಕತೆಗೆ ಸೂರ್ತಿಯಾಗಿರುವುದು ಫಿಲಿಫೈನ್ಸ್‌ ಚಿತ್ರ `ಕ್ಯಾವಿಟೆ'. ಅಲ್ಲಿ ನಡೆಯುವ ಇಂಥದೇ ಒಂದು ಘಟನೆಯನ್ನು ನಿರ್ದೇಶಕ ರಾಜ್‌ಕುಮಾರ್‌ ಗುಪ್ತಾ, ನಮ್ಮ ಭಯೋತ್ಪಾದಕ ಕೃತ್ಯದ ಹಿನ್ನೆಲೆಯಲ್ಲಿ ಹೇಳಲು ಹೋಗಿದ್ದಾರೆ. ಅದರಲ್ಲಿ ಅವರು ಗೆದ್ದಿದ್ದಾರೆ ಕೂಡ. ಇಡೀ ಚಿತ್ರ ಆಮೀರ್‌ನ ಪಾತ್ರದಿಂದಲೇ ನಡೆಯುತ್ತದೆ. ಅಲ್ಲಿ ಇಲ್ಲಿ ಬಂದು ಹೋಗುವ ಒಂದಷ್ಟು ಸಣ್ಣಪುಟ್ಟ ಪಾತ್ರಗಳು, ಮೂಲಭೂತವಾದಿಯ ಮಾತು, ನೆರಳಲ್ಲಿ ಕಂಡುಬರುವ ಅವನ ಆಕಾರ ಹೊರತುಪಡಿಸಿದರೆ ಇಡೀ ಚಿತ್ರವನ್ನು ಆಮೀರ್‌ ಪಾತ್ರಧಾರಿರಾಜೀವ್‌ ಖಂಡೇಲ್‌ವಾಲ್‌ ಆಳುತ್ತಾರೆ. ಅವರ ಅಭಿನಯ, ಪಾತ್ರದ ಮನಃಸ್ಥಿತಿಯ ತೀವ್ರತೆಯನ್ನು ಮೂರ್ತಗೊಳಿಸಿಬಿಟ್ಟಿದೆ.
ದೃಶ್ಯದ ದೃಷ್ಟಿಯಿಂದ ಇದೊಂದು ಸ್ಲೋಮೋಷನ್‌ ಕಾವ್ಯ. ಹಳೆ ಮುಂಬೈಯ ಗಲ್ಲಿ ಗಲ್ಲಿಗಳು, ಅಲ್ಲಿನ ಭಯ, ಅನುಮಾನಾಸ್ಪದ ನಡೆವಳಿಕೆ, ಕೊಳಚೆ, ಕೊಂಪೆ, ಕತ್ತರಿಸುತ್ತಿರುವ ಮಾಂಸದಂಗಡಿ- ಎಲ್ಲವೂ ಇಡೀ ಚಿತ್ರದ ಆಶಯವನ್ನು ಕಟ್ಟಿಕೊಟ್ಟಿವೆ. ಇಡೀ ಚಿತ್ರ ಸ್ಲೋಮೋಷನ್‌ನಲ್ಲೇ ಸಾಗುತ್ತಾ, `ವರ್ತಮಾನ ಕಾಲ'ವಾಗಿಹೋಗುತ್ತಿರುವ ಭಯೋತ್ಪಾದನೆಯನ್ನು ದೃಶ್ಯಭಾಷೆಯಲ್ಲೇ ಹೇಳುತ್ತಿರುವಂತೆ ಕಾಣಿಸುತ್ತದೆ.
ಇನ್ನು ತಾಂತ್ರಿಕವಾಗಿ ಆ ಚಿತ್ರದ ಬಗ್ಗೆ ಮಾತಾಡುವುದಕ್ಕೆ ಇನ್ನಷ್ಟು ಪದಗಳು ಬೇಕಾಗುತ್ತದೆ.

1 comment:

  1. ಮು೦ಬೈಯ ಗಲ್ಲಿ ಗಲ್ಲಿಯ ತಿರುವುಗಳನ್ನು ತೆರೆದಿಡುವ ಈ ಸಿನೆಮಾ ತು೦ಬಾ ಚೆನ್ನಾಗಿದೆ, 10/10 :)

    ReplyDelete