Friday, December 19, 2008

ಗೆಳೆತನದ ಸುವಿಶಾಲ ಆಲದಡಿ ಪಸರಿಸಿಹ

diwali_2ನಿಜವಾಗಿಯೂ ಗೆಳೆತನ ಎಂದರೇನು? ಒಟ್ಟಿಗೆ ತಿರುಗಾಡುವುದೇ, ಐಸ್‌ಕ್ರೀಮ್‌ ತಿನ್ನುವುದೇ, ನೋಟ್ಸ್‌ ಕೇಳುವುದೇ, ದುಬಾರಿ ಉಡುಗೊರೆ ಕೊಡುವುದೇ? ಸ್ನೇಹ ಇರುವುದು ಪ್ರೀತಿಯಲ್ಲಾ, ನಿಕಟ ಒಡನಾಟದಲ್ಲಾ, ತ್ಯಾಗದಲ್ಲಾ, ಸ್ವಾರ್ಥದಲ್ಲಾ ನಿಃಸ್ವಾರ್ಥದಲ್ಲಾ? ಈ ಮಾತಿಗೆ ಕಾಲಮಾನಕ್ಕೊಂದು ವ್ಯಾಖ್ಯೆ ಬಂದುಹೋಗಿವೆ. ಸ್ನೇಹದಲ್ಲಿ ನಿಸ್ವಾರ್ಥ ಇರಬೇಕು ಎಂಬ ಹಳಸಲು ಮಾತುಗಳು ಸದಾ ನಮ್ಮ ನಡುವೆ ಹಾದು ಹೋಗಿವೆ. ಆದರೆ ಗೆಳೆತನ ಈ ಎಲ್ಲಾ ಹಂಗನ್ನೂ ತೊರೆದು ಎರಡು ಜೀವಗಳ ಮಧ್ಯೆ ಲಿಂಗ, ವಯಸ್ಸು, ಜಾತಿ, ವರ್ಚಸ್ತು, ಅಂತಸ್ತು, ಮತಾತೀತವಾಗಿ ಹುಟ್ಟಿಕೊಂಡಿದೆ. ಸ್ನೇಹ ಮತ್ತೊಬ್ಬನನ್ನು ಇತ್ಯಾತ್ಮಕ(ಪಾಸಿಟಿವ್‌)ವಾಗಿ ಬದಲಿಸಬೇಕು ಎಂಬ ಒಂದು ಹಿತ ನುಡಿಯ ಮೇಲೆ ಇಲ್ಲೊಂದು ಕತೆ ಇದೆ. ಅದು ಅತ್ಯಂತ ಜನಪ್ರಿಯ ಕತೆ. ಆದರೆ ಓದಿದ ಪ್ರತಿ ಸಲವೂ ಅದು ನಮ್ಮನ್ನು ಆರ್ದ್ರಗೊಳಿಸುತ್ತದೆ. ಪ್ರತಿ ಓದಿನಲ್ಲೂ ಅದು ನಿಮಗೆ ಏನೇನನ್ನೋ ಹೇಳುತ್ತದೆ. ನಿಮಗೇ ಗೊತ್ತು, ಅದು ಓ ಹೆನ್ರಿ ಕತೆ. ಹೆಸರು:  ಆಫ್ಟರ್‌  20 ಈಯರ್ಸ್‌ (ಇಪ್ಪತ್ತು ವರ್ಷಗಳ ನಂತರ). ಅನುವಾದ: ಚಿತ್ರಾಂಗದ.
ನಮ್ಮ `ತಿಳಿಯ ಹೇಳುವ ಇಷ್ಟಕತೆಯನು' ಮಾಲಿಕೆಯಲ್ಲಿ ಈ ಬಾರಿ ಒಂದು ಅನುವಾದಿತ ಕತೆ. ಓದಿ, ಪ್ರತಿಕ್ರಿಯಿಸಿ.


ದೊಂದು ತಬ್ಬಲಿ ರಾತ್ರಿ. ಕರುಳು ಕೊರೆಯುವ ಚಳಿಗಾಲ. ಗಡಿಯಾರದ ಮುಳ್ಳು ಹತ್ತರ ಹತ್ತಿರ ಬರುತ್ತಿತ್ತು. ಜನ ಸಂದಣಿ ಕಡಿಮೆ. ಒಬ್ಬ ಪೊಲೀಸ್‌ ಪೇದೆಯ ಉಪಸ್ಥಿತಿಯಿತ್ತು. ಅವನಿಗೆ ರಾತ್ರಿ ಪಾಳಿ. ಗಸ್ತು ತಿರುಗುವುದು ಅಭ್ಯಾಸವಾಗಿತ್ತು. ಆದರೆ ಯಾರನ್ನೋ ತೃಪ್ತಿಪಡಿಸುತ್ತಿದ್ದೇನೋ ಎಂಬ ಛಾತಿಯಲ್ಲಿ ಅವನ ನೈಟ್‌ ಬೀಟ್‌ ನಡೆಯುತ್ತಿತ್ತು.
ಅಲ್ಲೊಂದು ಸಣ್ಣ ಕ್ಲಬ್‌. ಅದರ ನಿರ್ಜನತೆಗೆ ವಿರುದಾರ್ಥಕ ಪದವಾಗಿ ಒಬ್ಬ ಆಸಾಮಿ ನಿಂತಿದ್ದ. ಏನೋ ಚಡಪಡಿಕೆ, ಏನೋ ಆತಂಕ, ಯಾವುದೋ ನಿರೀಕ್ಷೆ ಆ ಆಫೀಸರನ ಮುಖದಲ್ಲಿ. ಅವನ ಕಣ್ಣುಗಳು ದೂರದ ನೀರವ ಬೀದಿಗಳತ್ತ ನೆಟ್ಟಿದ್ದವು. ಅಲ್ಲಿಗೆ ಪೊಲೀಸ್‌ ಪೇದೆ ಹೋಗುವುದಕ್ಕೂ ಆ ವ್ಯಕ್ತಿ ತನ್ನ ಸಿಗಾರ್‌ಅನ್ನು ಉರಿಸಲು ಹೊರಡುವುದಕ್ಕೂ ಸರಿ ಹೋಯ್ತು. ಅಷ್ಟರಲ್ಲಿ ಒಬ್ಬರನ್ನೊಬ್ಬರು ಹಾಯ್ದರು. ಪೇದೆ `ಸಾರಿ ಸರ್‌, ಕಾಣಲಿಲ್ಲ' ಎಂದ. ಆತ ಪರವಾಗಿಲ್ಲ ಎಂಬಂತೆ ನೋಡಿ, ಪೇದೆಗೆ ಹೇಳತೊಡಗಿದ. `ನಾನು ನನ್ನೊಬ್ಬ ಗೆಳೆಯನಿಗಾಗಿ ಕಾಯ್ತಿದ್ದೇನೆ. ನಿಮಗೆ ಗೊತ್ತಾ, ಇದೊಂಥರ ವಿಚಿತ್ರ ಕೇಸ್‌' . ನಾವಿಬ್ಬರು ಪ್ರಾಣ ಸ್ನೇಹಿತರು ಇಪ್ಪತ್ತು ವರ್ಷಗಳ ಹಿಂದೆ ಒಂದು ಕರಾರು ಮಾಡ್ಕೊಂಡಿದ್ದಿ. ಅದನ್ನು ಕೇಳಿದ್ರೆ ನಿಮ್ಗೆ ಆಶ್ಚರ್ಯವೂ ಆಗ್ಬಹುದು, ನಗೆಯೂ ಬರ್ಬೊಹುದು. ನಾವು ಇಪ್ಪತ್ತು ವರ್ಷಗಳ ಹಿಂದೆ ಈ ಜಾಗದಲ್ಲಿ ಮಿಟ್‌ ಆದವರು. ನಾವಿಬ್ಬರೂ ಪ್ರಾಣ ಸ್ನೇಹಿತರು. ಆಗ ಇಲ್ಲೊಂದು ರೆಸ್ಟೋರೆಂಟ್‌ ಇತ್ತು. ಇಪ್ಪತ್ತು ವರ್ಷಗಳ ನಂತರ ಇದೇ ಸ್ಥಳದಲ್ಲಿ ಸೇರೋಣ ಎಂದು ಮಾತಾಡಿಕೊಂಡಿದ್ದೆವು'.
ಅಷ್ಟರಲ್ಲಿ ಆತ ಸಿಗಾರ್‌ ಹಚ್ಚಿದ. ಅದರ ಬೆಳಕಲ್ಲಿ ಅವನ ಮುಖ ಚಹರೆ ಕಂಡಿತು. ಅತ್ಯಂತ ಕ್ರೂರವಾಗಿ ಬಿಗಿದುಕೊಂಡ ಮುಖ, ಬಲ ಹುಬ್ಬಿನ ಮೇಲೆ ಗಾಯದ ಕಲೆ, ಮುಖಕ್ಕೆ ಕಟ್ಟಿದ ಮಫ್ಲರ್‌ನಲ್ಲಿ ಅತ್ಯಂತ ಕೆಟ್ಟದಾಗಿ ಡಿಸೈನ್‌ ಮಾಡಲಾದ ವಜ್ರದ ಹರಳುಗಳು.
ಮಾತು ಮುಂದುವರಿಯಿತು. `ಅಂದು ನಾವು ಅದೇ ರೆಸ್ಟೋರೆಂಟ್‌ನಲ್ಲಿ ಊಟ ಮಾಡಿದ್ವಿ. ಒಟ್ಟಿಗೆ ಕುಡಿದ್ವಿ. ನಾವಿಬ್ಬರೂ ಎಷ್ಟು ಆಪ್ತರು ಅದ್ರೆ, ಅಣ್ಣ ತಮ್ಮನ ಥರ. ಆಗ ನಾವು ಓಡಾಡದ ಸ್ಥಳವಿಲ್ಲ. ಅವನ ಹೆಸರು ಜಿಮ್ಮಿ ವೆಲ್ಸ್‌. ನನಗಾಗ ಹದಿನೆಂಟು, ಅವನಿಗೆ ಇಪ್ಪತ್ತು. ನಂತರ ಅವನು ನ್ಯೂಯಾರ್ಕ್‌ಗೆ ತನ್ನ ಭವಿಷ್ಯ ಅರಸಿ ಹೋದ. ಆದರೆ ನಾವು ಅಂದೇ ನಿರ್ಧರಿಸಿದ ಪ್ರಕಾರ ಎಲ್ಲೇ ಇರಲಿ, ಹೇಗೇ ಇರಲಿ, ಎಂಥ ತೊಂದರೆಯೇ ಇರಲಿ ನಾವು ಈ ದಿನ ಇದೇ ಜಾಗದಲ್ಲಿ ಇದೆ ಹೊತ್ತಿಗೆ ಸೇರಬೇಕು'.
ಅನಂತರ ತಾವು ಕೆಲವು ದಿನಗಳ ಕಾಲ ಪತ್ರ ವ್ಯವಹಾರ ನಡೆಸಿದ್ದು, ಒಂದೆರಡು ವರ್ಷದ ನಂತರ ಅದೂ ಕಡಿದದ್ದು ಮುಂತಾಗಿ ಹೇಳಿದ. ಆಗ ತನ್ನ ವಾಚ್‌ ನೋಡಿಕೊಂಡ. ಆಗ ಹತ್ತಕ್ಕೆ ಹತ್ತು ನಿಮಿಷಗಳು ಬಾಕಿ ಇತ್ತು. `ಆತ ಬಂದೇ ಬರ್ತಾನೆ ಅನ್ನೋ ನಂಬಿಕೆ ಇದೆ' ಎಂದ ಆ ವ್ಯಕ್ತಿ.
ಅಷ್ಟರಲ್ಲಿ ಪೊಲೀಸ್‌ ಪೇದೆ ಹೊರಡಲನುವಾದ. `ಹಾಗಾದರೆ ನಿಮ್ಮ ಗೆಳೆಯ ಬರಲಿ, ನಿಮ್ಮ ಸ್ನೇಹ ಅಮರವಾಗಲಿ' ಎಂದು ಶುಭ ಕೋರಿದ. `ಆತ ಬರೋದು ತಡ ಆದರೆ ನೀವು ಹೊರಟು ಹೋಗ್ತೀರೋ' ಎಂದ. `ಇಲ್ಲ, ಹಾಗೆನಿಲ್ಲ. ಈಗ ಹತ್ತು, ಇನ್ನೂ ಅರ್ಧ ಗಂಟೆ ಕಾಯಬಲ್ಲೆ. ಆತ ತಪ್ಪಿಸದೇ ಬಂದರೆ ನನಗಷ್ಟೇ ಸಾಕು' ಎಂದ ಆ ವ್ಯಕ್ತಿ. ಪೊಲೀಸ್‌ ಪೇದೆ `ಗುಡ್‌ ನೈಟ್‌' ಹೇಳಿದ. ಹೊರಟು ಹೋಗಿ, ತಿರುವಿನಲ್ಲಿ ಮರೆಯಾದ.
ನಂತರದ ಹೊತ್ತು ಮತ್ತಷ್ಟು ವಿಷಣ್ಣವಾಯಿತು. ಮಂದ ಬೆಳಕಿನ ಜತೆ ಚಳಿಗೆ ಮೆಲ್ಲ ಮೆಲ್ಲ ಗೆಳೆತನ ಹೆಚ್ಚತೊಡಗಿತು. ಒಂದೆರಡು ಜನ ಬಂದರು, ಚಳಿಯಿಂದಾಗಿ ಮುಖ, ಕೈಗಳನ್ನು ಕಾಲರ್‌ನಲ್ಲಿ ಮುಚ್ಚಿಕೊಳ್ಳುತ್ತಾ ಮುದುಡುತ್ತಾ ಮರೆಯಾದರು. ಆ ಅಪರಿಚಿತ ವ್ಯಕ್ತಿ ತನ್ನ ಇಪ್ಪತ್ತು ವರ್ಷ ಹಳೆಯ ಗೆಳೆಯನಿಗಾಗಿ ಕಾಯುತ್ತಾ, ಅವನೊಡನೆ ಕಳೆದ ಹೊತ್ತನ್ನು ಮೆಲುಕು ಹಾಕುತ್ತಾ ಉಳಿದ.
ಅದಾಗಿ ಇಪ್ಪತ್ತು ನಿಮಿಷ ಕಳೆಯಿತು. ಉದ್ದ ಓವರ್‌ಕೋಟ್‌ ಧರಿಸಿದ ಉದ್ದನೆಯ ವ್ಯಕ್ತಿಯೊಬ್ಬ ಕಾಲರೊಳಗೆ ತನ್ನ ಕಿವಿ ಮುಚ್ಚಿಕೊಳ್ಳುತ್ತಾ ಆಚೆ ರಸ್ತೆಯಿಂದ ಈಚೆಗೆ ಬಂದು ಆ ವ್ಯಕ್ತಿಯನ್ನು ಸಮೀಪಿಸತೊಡಗಿದ. `ನೀವು ಬಾಬ್‌ ತಾನೇ?' ಅನುಮಾನದಿಂದ ಕೇಳಿದನಾತ. ಕಾಯುತ್ತಿದ್ದವ ಸಂಭ್ರಮದಿಂದ `ಹಾಗಾದರೆ ನೀನು ಜಿಮ್ಮಿ ವೆಲ್ಸ್‌ ಅಲ್ವಾ?' ಎಂದು ಕಿರುಚಿದ. ಬಂದವ `ಹೌದು ನಾನೆ ನಾನೇ. ಅಬ್ಬ ಸಾರ್ಥಕವಾಯ್ತು' ಎಂದು ಸಡಗರದ ನಿಡುಸುಯ್ದ. ಒಬ್ಬರನೊಬ್ಬರು ಕೈ ಕೈ ಹಿಡಿದುಕೊಂಡರು. `ಬಾಬ್‌, ಸದ್ಯ ನೀನೇ ಇದ್ದೀಯಲ್ಲಾ, ನೀನು ಇರ್ತೀಯೋ ಇರಲ್ವೋ ಅಂಥ ಭಯ ಬಿದ್ದಿದ್ದೆ. ಇಪ್ಪತ್ತು ವರ್ಷಗಳು! ಎಷ್ಟು ದೀರ್ಘ, ಎಂಥ ಅಗಲಿಕೆ ಮಾರಾಯ? ಅಂದ ಹಾಗೆ ನಿನ್ನ ಪಶ್ಚಿಮ ರಾಷ್ಟ್ರ ಹೇಗಿದ್ಯಪ್ಪಾ ದೋಸ್ತಾ'. ತಮಾಷೆ ಮಾಡಿದ ಜಿಮ್ಮಿ. `ನನಗೆ ಆ ಪಶ್ಚಿಮ ಎಲ್ಲವನ್ನೂ ಕೊಟ್ಟಿದೆ. ಅದು ಸರಿ, ಮನುಷ್ಯ ಬದಲಾಗ್ತಾನೆ, ಆದ್ರೆ ಇಷ್ಟು? ನೋಡು ನೀನು ಎರಡು ಇಂಚು ಉದ್ದ ಆಗಿದೀಯಪ್ಪಾ' ಎಂದ ಬಾಬ್‌. `ಹೌದು ಮತ್ತೆ, ನಾವಿಬ್ಬರು ಗೆಳೆಯರಾಗಿದ್ದಾಗ ನನಗಿನ್ನೂ ಇಪ್ಪತ್ತು, ಬೆಳವಣಿಗೆ ಆಮೇಲೆ ಆಗಿದೆ ಅಷ್ಟೇ' ಎಂದ ಜಿಮ್ಮಿ. ಇದಕ್ಕೆ ಆತ ದೇಶಾವರಿ ನಗೆ ನಕ್ಕು `ಸರಿ, ಹೇಗಿದೆ ನಿನ್ನ ನ್ಯೂಯಾರ್ಕ್‌?' ಎಂದ. `ಓ ತುಂಬ ಚೆನ್ನಾಗಿದೆ, ನಾನೊಂದು ಸಿಟಿ ಡಿಪಾರ್ಟ್‌ಮೆಂಟ್‌ನಲ್ಲಿ ಉದ್ಯೋಗದಲ್ಲಿದ್ದೇನೆ' ಎನ್ನುತ್ತಾ `ಸರಿ ಸರಿ, ಬಾ ನಾವು ತಿರುಗಾಡಿದ ಜಾಗವನ್ನು ಮತ್ತೊಮ್ಮೆ ಸುತ್ತಿಕೊಂಡು ಬರೋಣ. ಆಗ ನಾವಿದ್ದ ಜಾಗ ಈಗ ಹೇಗಾಗಿದೆಯೋ ಅಲ್ವಾ?' ಎನ್ನುತ್ತಾ ಜಿಮ್ಮಿ ಬಾಬ್‌ನನ್ನು ಎಳೆದುಕೊಂಡು ಹೊರಟ.
ಇಬ್ಬರೂ ಕೈಯೊಳಗೆ ಕೈ ಹಾಕಿಕೊಂಡು ಬೀದಿಗೆ ಬಿದ್ದರು. ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತಾ, ತಂತಮ್ಮ ಆಸಕ್ತಿ, ಸಾಹಸ, ಕಷ್ಟ ನಷ್ಟಗಳನ್ನು ಪ್ರಸ್ತಾಪಿಸುತ್ತಾ ನಡೆಯತೊಡಗಿದರು. ದೂರದಲ್ಲಿ ಒಂದು ಮೆಡಿಕಲ್‌ ಸ್ಟೋರ್‌ ಕಂಡಿತು. ಅಲ್ಲಿ ಪ್ರಖರ ಬೆಳಕಿತ್ತು. ಇಬ್ಬರೂ ಅಲ್ಲಿ ಹೋಗಿ ನಿಂತರು. ಬಾಬ್‌ ಅಚಾನಕ್ಕಾಗಿ ಮತ್ತೊಬ್ಬನ ಕೈ ಬಿಡಿಸಿಕೊಂಡ. ದೃಢವಾದ ಅನುಮಾನದಿಂದ `ನೀನು ಜಿಮ್ಮಿ ಅಲ್ಲ' ಎಂದ. `ಇಪ್ಪತ್ತು ವರ್ಷ ಜಾಸ್ತಿ ಸಮಯವೇ ಇರ್ಬಹುದು. ಆದರೆ ಮನುಷ್ಯನೇ ಬದಲಾಗಲಿಕ್ಕೆ ಸಾದ್ಯವಾ? ನಿನ್ನ ಮೂಗು ನೋಡು, ಎಷ್ಟು ಚೇಂಜ್‌ ಇದೆ' ಎನ್ನುತ್ತಾ ಆತ ಮುಖ ಗಟ್ಟಿ ಮಾಡಿಕೊಂಡ. `ಹೌದು ಒಬ್ಬ ಒಳ್ಳೆಯವನನ್ನು ಕೆಟ್ಟವನಾಗಿ ಮಾಡುತ್ತದೆ, ಈ ಕಾಲ' ಹೀಗೆಂದ ಆ ಉದ್ದದ ಮನುಷ್ಯ. ನಂತರ ಆತ ಒಂದು ಕಾಗದವನ್ನು ತನ್ನ ಜೇಬಿನಿಂದ ಹೊರ ತೆಗೆದ. ಅದನ್ನು ಬಾಬ್‌ನ ಕೈಗಿಡುತ್ತಾ, `ಯುವರ್‌ ಅಂಡರ್‌ ಅರೆಸ್ಟ್‌' ಎಂದ ಆ ವ್ಯಕ್ತಿ.
ಬಾಬ್‌ ಗೊಂದಲದಿಂದ ಆ ಪತ್ರ ಓದತೊಡಗಿದ. `ಬಾಬ್‌, ನಾನು ಸರಿಯಾದ ಸಮಯಕ್ಕೆ ಅದೇ ಜಾಗಕ್ಕೆ ಬಂದಿದ್ದೆ. ನೀನು ಯಾವಾಗ ಸಿಗರೇಟು ಹಚ್ಚಲು ಸಿಗಾರ್‌ ಹಚ್ಚಿದೆಯೋ ಆಗ ಗೊತ್ತಾಯಿತು ನೀನು ಪೊಲೀಸ್‌ ತಂಡ ಹುಡುಕುತ್ತಿರುವ ಅತ್ಯಂತ ದೊಡ್ಡ ಕ್ರಿಮಿನಲ್‌ ಅಂತ. ನನ್ನ ಕೈಯ್ಯಾರೆ ನಿನ್ನನ್ನು ಅರೆಸ್ಟ್‌ ಮಾಡಲು ಸಿದನಿಲ್ಲ, ಅದಕ್ಕೆ ನನ್ನ ಜೊತೆ ಪೊಲೀಸನನ್ನು ಕಳಿಸುತ್ತಿದ್ದೇನೆ, ಗುಡ್‌ ಬೈ ಜಿಮ್‌'.

3 comments:

  1. ಸ್ನೇಹಕ್ಕಿಂತ ಕರ್ತವ್ಯನಿಷ್ಠೆ ದೊಡ್ಡದೆ?

    ReplyDelete
  2. ನಮ್ಗೆ ಈ ಕಥೆ ಹೈಸ್ಕೂಲ್ ನಲ್ಲಿ ಪಾಠಕ್ಕಿತ್ತು, ನಾನು ಆವಾಗ್ಲೇ ಈ ಕಥೆನ ಬಾಲಿಶವಾಗಿ ಕನ್ನಡಕ್ಕೆ ಅನುವಾದ ಮಾಡಿದ್ದೆ!:) ಈಗ ನಗು ಬರ್ತಿದೆ!

    ReplyDelete
  3. Yes.Namge ee kathe hischoolnalli ittu, Adre Jimmi madiddu Sari ennodu nanna anisike.

    ReplyDelete