Sunday, December 14, 2008

ದಿವಂಗತ ಶ್ರೀಸಾಮಾನ್ಯ!

IND20109Bಸಿದಾಂತಗಳ ಕತ್ತಿಗೆ ಶ್ರೀಸಾಮಾನ್ಯ ಕತ್ತು ಕತ್ತರಿಸಿಹೋಗುತ್ತಿದೆ. ಭಯೋತ್ಪಾದಕ ದಾಳಿ, ನಕ್ಸಲೀಯ ವಾದ, ಎಲ್‌ಟಿಟಿಇ- ಎಂಬ ಹೆಸರಿನ, ರಕ್ತ ಹರಿಸುವುದೇ ಉದ್ದೇಶವಾದ ನಾನಾ ಸಿದಾಂತಗಳ ಜಗತ್ತಿನಲ್ಲಿ ಒಬ್ಬ ಮಾಮೂಲಿ ಮನುಷ್ಯ ಈಗ ನೆಮ್ಮದಿಯಾಗಿ ನಿದ್ರಿಸಲಾರ. ಹೊರಗೆ ಹೋದ ಗಂಡ, ಹೆಂಡತಿ, ಶಾಲೆಗೆ ಹೋದ ಕಂದಮ್ಮಗಳು ಸುರಕ್ಷಿತವಾಗಿ ವಾಪಾಸು ಬರುತ್ತಾರೆ ಎಂದು ಹೇಳಲು ಸಾಧ್ಯವಿಲ್ಲ. `ಕೊನೆಗೊಂಡಿತೋ ಓರ್ವೋರ್ವರ ಗರ್ವದ ಕಾಲ, ಇದು ಸರ್ವರ ಕಾಲ' ಎಂದು ಕುವೆಂಪು `ಶ್ರೀಸಾಮಾನ್ಯಗೀತೆ'ಯನ್ನು ಬರೆದರು. ಆದರೆ ಶ್ರೀಸಾಮಾನ್ಯನ ಗೀತೆ ಇದೀಗ ವಿಷಾದ ರಾಗದಲ್ಲೇ ಕೇಳಿಬರಲು ಪ್ರಾರಂಭವಾಗಿದೆ.
(ಉದಯವಾಣಿಯ ಸಾಪ್ತಾಹಿಕ ಸಂಪದದಲ್ಲಿ  14-12-2008ರಂದು ಪ್ರಕಟವಾದ ಲೇಖನ)

ಉಗ್ರವಾದ, ನಕ್ಸಲ್‌ ಸಿದಾಂತ ಎನ್ನುತ್ತಾ ಒಂದಿಷ್ಟು ವರ್ಗಗಳು ಕಂಬನಿಯ ಕುಯಿಲಿಗೆ ಹೊರಟಿವೆ. ಆ ಸಮಗ್ರ ಕುಯಿಲಿನ ಕುಡುಗೋಲಿಗೆ ಗೋಣಾಗುತ್ತಿರುವವನ ಹೆಸರು: ಶ್ರೀಸಾಮಾನ್ಯ. ಈತನದು ಯಾವ ದೇಶ, ಯಾವ ಭಾಷೆ, ಯಾವ ವರ್ಗ, ಯಾವ ಲಿಂಗ, ಯಾವ ಕೋಮು, ಯಾವ ಧರ್ಮ ಎಂಬ ಪ್ರಶ್ನೆಗಲ್ಲಿ ಅರ್ಥವಿಲ್ಲ, ಕುಡುಗೋಲು ಪಿಡಿದವಗೆ ಅದು ಮುಖ್ಯವೂ ಅಲ್ಲ. ಎಲ್ಲಾ ಸಿದಾಂತಕ್ಕೂ ತನ್ನನ್ನು ತಾನು ಪ್ರಯೋಗಿಸಿಕೊಳ್ಳಲು ಒಂದು ನವಿರಾದ, ಪ್ರತಿಭಟನೆ ಮಾಡದ, ಬೇರೆ ದಾರಿ ಕಂಡುಕೊಳ್ಳಲಾರದ ಗೋಣು ಬೇಕು.
ಈ ಗೋಣು ಯಾವಾಗಲೂ ಯಾವುದಕ್ಕೂ ಸುಲಭದಲ್ಲಿ ಶರಣು. ಆತನಿಗೆ ಈ ಸಿದಾಂತಗಳ್ಯಾವುದೂ ಗೊತ್ತಾಗುವುದಿಲ್ಲ. ಅಗ್ರಿಮೆಂಟ್‌ ಫಾರ್ಮ್‌ ಅನ್ನು ಓದದೇ ಸೈನ್‌ ಮಾಡಿಬಿಡುವಂತೆ ಈ ಸಿದಾಂತಗಳಿಗೂ ಆತ ಮುಗತೆಯಿಂದ ಬದ.
dying107ಅವನಿಗೆ ಗೊತ್ತಿರುವುದು ಬೆಳಿಗ್ಗೆ ಎದ್ದವನೇ ತನ್ನ ಮತ್ತು ತನ್ನ ಸಂಸಾರಕ್ಕೆ ಬೇಕಾದ ಆಹಾರವನ್ನು ಕಂಡುಕೊಳ್ಳುವುದು. ಅಂಥ ಕೊಟ್ಯಂತರ ಮಾನವಜಂತುಗಳು ಈ ಜಗತ್ತಿನ ಗುಡಿಸಲೊಳಗೆ, ಮನೆಮಾರುಗಳಲ್ಲಿ ಅವಿತುಕೊಂಡಿವೆ. ಅವುಗಳಿಗೆ ಭ್ರಮರಗಳಂತೆ ಕೇವಲ ಬಂಡುಂಬರ ಚಿಂತೆ, ಒಂದು ಸಣ್ಣ ಸೂರು ಕಟ್ಟಿಕೊಳ್ಳುವ ಕನಸು, ಮಡಿಲಿನ ಹಸುಗೂಸಿಗೆ ಎದೆ ಹಾಲು ಕಡಿಮೆಯಾಗದಿರಲಿ ಎಂಬ ಬಯಕೆ. ಈ ಜಗತ್ತಿನ ಅಖಂಡ ಹಸಿವನ್ನು ಸೋಲಿಸಿ ಸಂಜೆ ಮಾಡುತ್ತಾರೆ, ನಿದ್ದೆ ಜಯಿಸಿ ಬೆಳಗು ಮಾಡುತ್ತಾರೆ.
ಅಂಥ ಶ್ರೀಸಾಮಾನ್ಯ ರೇಷನ್‌ಗಾಗಿ ಕ್ಯೂ ನಿಲ್ಲುತ್ತಾನೆ, ಟಿಕೆಟ್‌ ಪಡೆದು ಬಸ್ಸಿನ ಫುಟ್‌ಬೋರ್ಡ್‌ನಲ್ಲಿ ಜೋಲಿ ಹೊಡೆಯುತ್ತಾನೆ, ಆಸ್ಪತ್ರೆಯಲ್ಲಿ ಖಾಲಿಯಾಗಲಿರುವ ಬೆಡ್‌ಗಾಗಿ ಎಷ್ಟು ಹೊತ್ತಾದರೂ ಕಾಯುತ್ತಾ ನಿಂತಿರುತ್ತಾನೆ, ಮಕ್ಕಳ ಶಾಲೆಯ ಫೀಸಿಗಾಗಿ ದುಡ್ಡು ಹೊಂದಿಸುವ ಕಾರ್ಯ ಮುಂದುವರಿಯುತ್ತಿರುತ್ತದೆ. ಬ್ಯಾಂಕ್‌ ಬ್ಯಾಲೆನ್ಸ್‌ ಎಷ್ಟಿದೆ ಎಂದು ಅವನು ಆಗಾಗ ಪಾಸ್‌ಬುಕ್‌ ಚೆಕ್‌ ಮಾಡಿಸುತ್ತಾನೆ. ಟಿ.ವಿ.ಗಾಗಿ ಮಾಡಿದ ಸಾಲ, ಮಗನ ಓದಿನ ಹಣಕ್ಕೆ ಕಟ್ಟಬೇಕಾದ ಬಡ್ಡಿ, ಹೆಂಡತಿಯ ಖಾಯಿಲೆಯ ಚಿಕಿತ್ಸೆಗಳ ಜಂಜಡದಲ್ಲಿ ಅವನ ಕಿವಿ ಬದಿಯ ಕೂದಲು ತನಗೆ ಗೊತ್ತಿಲ್ಲದಂತೆ ಬೆಳ್ಳಗಾಗುತ್ತದೆ, ದೂರದ ಬಸ್‌ಬೋರ್ಡ್‌ ಇತ್ತೀಚೆಗೆ ಸರಿಯಾಗಿ ಕಾಣದೇ ಕನ್ನಡಕಕ್ಕೆ ಹಣ ಹೊಂದಿಸಬೇಕೆಂದು ಚಿಂತೆಯಾಗುತ್ತದೆ.
ಅಂಥವನ ಮನೆಯಲ್ಲಿ ದುಃಖ, ದುಗುಡಗಳು ಅತಿಥಿಯಾಗಿ ಬಂದ ದಿನ ತುಂಬ ಹೊತ್ತು ಆ ಯಜಮಾನ ತನ್ನ ಹೆಂಡತಿ ಮಕ್ಕಳ ಜೊತೆ ಕುಳಿತು ಪರಿಹಾರಕ್ಕಾಗಿ ಚಿಂತಿಸುತ್ತಾನೆ. ಯಾವ ಯಾವ ಕೀಲಿಗಳ ಮೂಲಕ ತನ್ನ ಸಂಕಷ್ಟದ ಕೋಟೆಯ ಬಾಗಿಲನ್ನು ತೆಗೆದು ಹೊರ ಹೋಗುವುದೆಂದು ಆಲೋಚಿಸುತ್ತಾನೆ. ತಾಲೂಕಾಫೀಸು, ಮಂಡಲ ಪಂಚಾಯಿತಿ, ರಾಷ್ಟ್ರೀಯ ಅಥವಾ ಖಾಸಗಿ ಬ್ಯಾಂಕ್‌ಗಳ ಎದುರು ತನ್ನ ಸಂಕಷ್ಟವನ್ನು ತೋಡಿಕೊಳ್ಳುತ್ತಾನೆ. ನೆಂಟರಿಷ್ಟರಲ್ಲಿ, ಧಣಿಗಳಲ್ಲಿ ಹಣವನ್ನು ಯಾಚಿಸುತ್ತಾನೆ. ಇದೆಲ್ಲದರ ನಂತರ ಅವನಿಗೆ ಅನಿವಾರ್ಯ ಆಯ್ಕೆಯಾಗಿ ಕಾಣಿಸುವುದು ಆತ್ಮಹತ್ಯೆ. ಆದರೆ ಆತ್ಮಹತ್ಯೆ ಒಬ್ಬನ ಆಯ್ಕೆ. ಇಂಥ ಆಯ್ಕೆಯನ್ನೂ ಕೊಡದೇ ಸಾಮಾನ್ಯರನ್ನು ಕೊಂದು ಕಳೆಯಲು ಸಿದಾಂತಗಳು ಯಾವತ್ತೂ ಶ್ರಮಿಸಿವೆ.
1997ರಿಂದ 2005ರವರೆಗೆ ಒಂದೂವರೆ ಲಕ್ಷ ರೈತರು ಈ ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡರು ಎಂದು ಸರ್ವೆ ಮಾಡಿದಾಗ ಹಾಗೆ ಸತ್ತವರು ಶ್ರೀಸಾಮಾನ್ಯರಾಗಿದ್ದರು. `ಮಾನವ ಹಕ್ಕುಗಳ ಉಲ್ಲಂಘನೆ' ಎಂದು ಕರೆಸಿಕೊಂಡು ಎಲ್‌ಟಿಟಿಇ ಸಂಘಟನೆ ದೇಶದ ಹಲವಾರು ಕಡೆ ಮಾಡಿದ ದಾಳಿಯಲ್ಲಿ ಪ್ರಾಣ ತೆತ್ತವರು ಶ್ರೀಸಾಮಾನ್ಯರು. ನಕ್ಸಲ್‌ ಸಂಘಟನೆಯ ಸೈದಾಂತಿಕ ಹೋರಾಟಕ್ಕೆ 60ರ ದಶಕದಿಂದೀಚೆ ಬಲ ಬರುತ್ತಲೇ ಹೋಗಿರುವುದು ಸಾಮಾನ್ಯರ ಬಲಿಯಿಂದಲೇ. ಭಯೋತ್ಪಾದಕ ಕೃತ್ಯಕ್ಕಂತೂ ಸಾಮಾನ್ಯನೇ ಸುಲಭ ಆಹಾರ. `ಎ ವೆಡ್ನೆಸ್‌ಡೇ' ಚಿತ್ರದಲ್ಲಿ ನಾಸಿರುದ್ದೀನ್‌ ಶಾ ಪಾತ್ರ ಹೇಳುವಂತೆ ಎಲ್ಲಾ ಹೋರಾಟದಲ್ಲೂ ಸಾಯುವವರು `ಒಬ್ಬ ಸ್ಟುಪಿಡ್‌ ಕಾಮನ್‌ ಮ್ಯಾನ್‌'!
ಮೊನ್ನೆ ನಕ್ಸಲ ಸಿದಾಂತ ತನ್ನ ಏಳನೇ ಬಲಿಯನ್ನು ಮಲೆನಾಡಿನಲ್ಲಿ ತೆಗೆದುಕೊಂಡಿದೆ. ಆವರೆಗೆ ಪೊಲೀಸರ ಮತ್ತು ನಕ್ಸಲರ ಚಕಮಕಿಯಲ್ಲಿ ಎರಡೂ ಕಡೆಗಳಲ್ಲಿ ಸಾವು ನೋವುಗಳಾಗಿವೆ ಮತ್ತು ಅಲ್ಲೆಲ್ಲಾ ಸಾಮಾನ್ಯ ವ್ಯಕ್ತಿ ಸಾವಿಗೀಡಾಗಿದ್ದಾನೆ, ನೋವಿಗೀಡಾಗಿದ್ದಾನೆ. `ಮಾತುಕತೆಯ ಮೂಲಕ ಪರಿಹರಿಸಿಕೊಳ್ಳೋಣ' ಎಂಬ ಸರ್ಕಾರದ ಹೇಳಿಕೆಯ ಪುನರುಕ್ತಿ, `ಪೊಲೀಸರಿಗೆ ಸರ್ಕಾರಕ್ಕೆ ತಕ್ಕ ಶಿಕ್ಷೆ ವಿಸೋಣ' ಎಂದು ಪೋಸ್ಟರ್‌ ಹಾಕಿ ಸಾಯಿಸುವ ನಕ್ಸಲರ ದಾರ್ಷ್ಟ್ಯಗಳ ನಡುದಾರಿಯಲ್ಲಿರುವ ಸಾಮಾನ್ಯನ ಭಯ- ಪ್ರಾಣದ ಮನೆ ಬಾಗಿಲುಗಳಿಗೆ ಬಿಗಿಯಾದ ಚಿಲಕ ಇಲ್ಲ.
ಭಯೋತ್ಪಾದಕ ಕೃತ್ಯದಲ್ಲಾದ ಸಾವು ಕ್ಷಣಕ್ಷಣಕ್ಕೂ `ನೇರ ಪ್ರಸಾರ' ಕಾಣುತ್ತಿರುವುದರಿಂದ ಆ ಬಗ್ಗೆ ಇನ್ನಷ್ಟು ವಿವರಣೆ ಅಗತ್ಯವಿಲ್ಲ. ಆದರೆ ಜಮ್ಮು- ಕಾಶ್ಮೀರ, ಮಧ್ಯಪ್ರದೇಶ, ಒರಿಸ್ಸಾ, ಮುಂಬೈ, ಬೆಂಗಳೂರು, ಅಹಮದಾಬಾದ್‌, ಹೈದರಾಬಾದ್‌ ಸೇರಿದಂತೆ ದೇಶದ ಹಲವು ಕಡೆಗಳಲ್ಲಿ ನಡೆದ ಭಯೋತ್ಪಾದಕ ದಾಳಿಯ ನಿಜವಾದ ಬಲಿಪಶು ಅದೇ ಸಾಮಾನ್ಯ ಎನ್ನುವುದನ್ನು ಮಾತ್ರ ನಾವೆಲ್ಲಾ ಅರ್ಥ ಮಾಡಿಕೊಳ್ಳಬೇಕಾಗಿದೆ. ಮುಂಬೈಯಲ್ಲಿ ಮೊನ್ನೆ ನವೆಂಬರ್‌ 26ಕ್ಕೆ ನಡೆದ ಭಯೋತ್ಪಾದಕ ದಾಳಿ ಈವರೆಗೂ ವರದಿಯಾಗುತ್ತಿರುವುದು `ಹೊಟೇಲ್‌ ತಾಜ್‌, ಒಬೇರಾ್‌ ಸೇರಿದಂತೆ ಮುಂಬೈನ ಹಲವು ಕಡೆಗಳಲ್ಲಿ ಆದ ಭಯೋತ್ಪಾದಕ ದಾಳಿ...' ಎಂದು. ಅದೇ `ರೈಲ್ವೇ ಸ್ಟೇಷನ್‌ ಸೇರಿದಂತೆ...' ಎಂದು ಯಾಕೆ ವರದಿಯಾಗಬಾರದು?
ಸಾವು ಎಲ್ಲರಿಗೂ ಸಮಾನ ಎಂಬುದು ಸತ್ಯ. ಆದರೆ ತಾಜ್‌ ಅಥವಾ ಒಬೇರಾ್‌ ಹೊಟೇಲ್‌ನಲ್ಲಿ ಆಗಿದ್ದು ಮಾತ್ರ ಸಾವು ಎಂದು ನಾವು ಪರೋಕ್ಷವಾಗಿ ಒತ್ತಿ ಒತ್ತಿ ಹೇಳುತ್ತಿದ್ದೇವಾ? ಇವತ್ತಿನ ವಾಣಿಜ್ಯೀಕರಣದ ಯುಗದಲ್ಲಿ ಸಾವಿಗೂ ಅಂತಸ್ತು, ಗ್ಲಾಮರ್‌ ಬೇಕಾಗಿದೆಯಾ? ಮಾಧ್ಯಮಗಳು ತಮ್ಮ ನೋಡುಗ ವರ್ಗವನ್ನು ಹೆಚ್ಚು ಮಾಡಿಕೊಳ್ಳಬೇಕಾದರೆ ಇಂಥ ಗ್ಲಾಮರೀಕರಣ ಅತಿ ಮುಖ್ಯವೇ? ಭಯೋತ್ಪಾದಕ ದಾಳಿಗೆ `ಹೊತ್ತಿ ಉರಿಯುತ್ತಿರುವ ತಾಜ್‌ ಹೊಟೇಲ್‌' ರೂಪಕವಾಗಿ, ಪ್ರತಿಮೆಯಾಗಿ ಕಾಣಲು ಪ್ರಾರಂಭವಾದರೆ ಮುಂದೇನು? ಈ ಜಗತ್ತಿನ ಶ್ರೀಸಾಮಾನ್ಯ ರೂಪಕ ಶಕ್ತಿಯನ್ನು ಕಳೆದುಕೊಳ್ಳುತ್ತಿದ್ದಾನಾ? ಸಾಮಾನ್ಯನ ಸಾವಿಗೆ ಗ್ಲಾಮರ್‌, ಅಂತಸ್ತು ಹೊರಟು ಹೋಗುತ್ತಿದೆಯೇ?
ದಲಿತ ಎಂಬ ಪದಕ್ಕೆ ಸ್ಪಷ್ಟ ಸೈದಾಂತಿಕ ಅರ್ಥಗಳಿವೆಯಾದರೂ ಯಾವುದೇ ದೇಶದಲ್ಲಿ ಪ್ರತಿ ಶ್ರೀಸಾಮಾನ್ಯನೂ ಒಬ್ಬ ದಲಿತ. ಜಗತ್ತಿನ ಯಾವುದೇ ಕ್ರಾಂತಿ, ಹಿಂಸಾಚಾರ ನಡೆದರೂ ಅಲ್ಲಿ ಪ್ರಾಣ ತೆರುವ ವ್ಯಕ್ತಿ ಒಬ್ಬ ಶ್ರೀಸಾಮಾನ್ಯ. ಆತ ದೇವನೂರು ಮಹಾದೇವರ `ಡಾಮರು ಬಂದುದು' ಕತೆಯ ಡಾಮರಲ್ಲಿ ಬಿದ್ದು ಸತ್ತ ಅನಾಮಿಕನಾಗಿರಬಹುದು, ಗಡಿಯಲ್ಲಿ ಸತ್ತೆ ಎಂದು ಮಾಧ್ಯಮಕ್ಕೆ ತಿಳಿಸದೇ ಸತ್ತ ಲೆಕ್ಕಕ್ಕೆ ಸಿಗದ ಹುತಾತ್ಮನಾಗಿರಬಹುದು, ಚರ್ಚ್‌ ದಾಳಿಯಲ್ಲಿ ಗಾಯಗೊಂಡು ಹಾಸಿಗೆ ಹಿಡಿದಿರುವ ವ್ಯಕ್ತಿಯಾಗಿರಬಹುದು, ಜನಪ್ರಿಯನ ಅಂತ್ಯಸಂಸ್ಕಾರದ ಗಲಭೆ ವೇಳೆ ಪ್ರಾಣ ತೆತ್ತ ಅಭಿಮಾನಿಯಾಗಿರಬಹುದು, ಚುನಾವಣೆಯ ಹಿಂಸಾಚಾರಕ್ಕೆ ಬಲಿಯಾದ ಮುಗ ಮತದಾರನಿರಬಹುದು.
ಆದರೆ ಜಗತ್ತಿನ ಯಾವ ಇತಿಹಾಸ ತೆಗೆದುಕೊಂಡರೂ ಎಲ್ಲಾ ಕಡೆಗಿನ (ರಕ್ತರಹಿತ) ಕ್ರಾಂತಿಗೆ ಕಾರಣನಾದವ ಇದೇ ಮಾಮೂಲು ಮನುಷ್ಯ. ಆತ ಒಂದು ದೇಶದ ನಿಜವಾದ ದೇಶಭಕ್ತ, ನಿಜವಾದ ಸೈನಿಕ, ನಿಜವಾದ ಹೋರಾಟಗಾರ, ನಿಜವಾದ ಕರ್ಮ ಸಿದಾಂತಿ.
ಅಂಥ ಶಕ್ತಿಶಾಲಿ ಶ್ರೀಸಾಮಾನ್ಯ ದಿವಂಗತನಾಗಬಾರದು.

1 comment:

  1. ಹೌದು ಆ ಶ್ರೀಸಾಮಾನ್ಯ ದಿವಂಗತನಾಗಬಾರದು.
    ಆ ಶ್ರೀ ಸಾಮಾನ್ಯ ಎಂಬುವವನು ಕೇವಲ ಹಣ, ಅಂತಸ್ಥು, ಜೀವನ ಸ್ಥಿತಿಯಿಂದ ರೂಪು ಪಡೆಯುವವನಲ್ಲ. ಆತ ಅರಮನೆಯ ಅಂಗಳದಲ್ಲಿ ನಲಿಯುವ ರೊಕ್ಕಸ್ತನೊಳಗೂ ಇರುತ್ತಾನೆ, ಅಲ್ಲಿಯೂ ಆತ ದಿವಂಗತನಾಗಬಾರದು.
    ಉತ್ತಮ ಸಾಂದರ್ಭಿಕ ಬರಹ.

    ಸುಪ್ರೀತ್

    ReplyDelete