ಅಮ್ಮ ಯಾವತ್ತೂ ಬದಲಿಗೆ ತರಲಾಗದ ಪದ, ಭಾವ, ಸಂಗ. ಅಮ್ಮನ ಬಗ್ಗೆ ಬರೆದರೆ ಎಲ್ಲರಿಗೂ ಅವರಮ್ಮ, ಅಮ್ಮನ ಥರ ಕಂಡ ಒಂದಿಷ್ಟು ಸಂಬಂಧಗಳು, ಅಮ್ಮನಂತೆ ಕಾಯ್ದ ಗೆಳೆಯ/ಗೆಳತಿ ನೆನಪಾಗುತ್ತಾರೆ. ಈ ಈ `ಕಳ್ಳಕುಳ್ಳ'ರ ಬ್ಲಾಗಂಗಡಿಯಲ್ಲಿ ಇತ್ತೀಚಿಗೆ ಅಮ್ಮ ಅಮ್ಮ ಎಂಬ ಕಳ್ಳು ಸಂಬಂಧದ ಬಗ್ಗೆ ಬರೆದ ಕವಿತೆಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವ. ಅನೇಕರು ಕಣ್ಣೀರಿಟ್ಟ ಪ್ರಸಂಗವನ್ನೂ ವಿವರಿಸಿದ್ದಾರೆ. ಪ್ರತಿಕ್ರಿತಿಸಿ, ಅಮ್ಮನ ಕವಿತೆಗೆ ಕೃತಜ್ಞರಾಗಿದ್ದಾರೆ.
ಧನ್ಯವಾದಗಳು.
ಇದೀಗ ಅಮ್ಮನ ಬದುಕು, ಬವಣೆಗಳ ಹಿನ್ನೆಲೆಯಲ್ಲಿ ಸಾಗುವ ಒಂದು ಕತೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. `ಉದಯವಾಣಿ'ಯಲ್ಲೇ ಪ್ರಕಟಣೆ ಕಂಡ ಈ ಕತೆ ಹಿಂದೊಮ್ಮೆ `ಪಿಚ್ಚರ್' ಬ್ಲಾಗ್ನಲ್ಲೂ ಪ್ರಕಟವಾಗಿತ್ತು. ಇದೀಗ `ಕಳ್ಳಕುಳ್ಳ' ಬ್ಲಾಗ್ನಲ್ಲಿ ಆ ಕತೆಯ ಮರು ಪ್ರಸಾರ.
ಓದಿ, ಪ್ರತಿಕ್ರಿಯಿಸಿ. ಅಂದಹಾಗೆ ಕತೆಯ ಹೆಸರು: ಕೆಂಪು ರಕ್ತ ಕಣಗಳು.
ಕೆಂಪು ರಕ್ತ ಕಣಗಳು
ನನಗೆ ಅಪ್ಪನನ್ನು ನೋಡಿದ್ದು ನೆನಪಿಲ್ಲ. ಆದರೆ ಬುದ್ಧಿ ತಿಳಿದಾಗಿನಿಂದ ಅವನ ವಿಷಯ ಅಸ್ಪಷ್ಟವಾಗಿ, ಮುಜುಗರ ಹುಟ್ಟಿಸುವ ಅಸ್ತ್ರವಾಗಿ ಪ್ರಸ್ತಾಪವಾಗಿದೆ. ಆಶ್ಚರ್ಯ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ, ನನಗೆ ಅಪ್ಪನ ನೆನಪು ಆಗುತ್ತಲೇ ಇಲ್ಲ. ನೆನಪಾಗುವುದಕ್ಕೆ ಏನಾದರೂ ಘಟನೆಗಳು ನಮ್ಮ ನಡುವೆ ನಡೆದಿರಬೇಕಲ್ಲಾ. ನನಗೆ ತಿಳಿದ ಹಾಗೆ ಅಂಥದ್ದೊಂದೂ ನಡೆಯಲಿಲ್ಲ. ಒಂದು ಸಾರಿ ಅವನ ಮಸುಕು ಮಸುಕಾದ ಮುಖಭಾವ ನನಗೆ ಕಂಡಿತ್ತು. ಅದು ಮನೆಯ ಬೀರುವಿನಲ್ಲಿ. ಆ ಬೀರುವನ್ನು ಒಂದು ದಿನ ಸ್ವಚ್ಛ ಮಾಡುವ ತರಾತುರಿಯಲ್ಲಿ ನಾನಿದ್ದೆ. ಆಗ ಒಂದು ಫೋಟೋ ಕಂಡಿತು. ಗಟ್ಟಿಮುಟ್ಟಾದ ಚೌಕಟ್ಟಿನೊಳಗಿದ್ದ ಫೋಟೋ ಅದು. ಸಾಕಷ್ಟು ದೊಡ್ಡದಾಗಿತ್ತು. ಮಗುಚಿ ಇಡಲಾಗಿತ್ತು. ನಾನು ಪ್ರಯಾಸಪಟ್ಟು ಅದನ್ನು ಮೇಲೆತ್ತಿ, ನನ್ನತ್ತ ತಿರುಗಿಸಿಕೊಂಡೆ. ಅದರಲ್ಲಿ ಅತ್ಯಂತ ಚೆನ್ನಾಗಿ ಕಂಡವಳು ನನ್ನ ಅಮ್ಮ. ಕಿವಿಯಲ್ಲಿ ಅವಳ ಮದುವೆ ಕಾಲಕ್ಕೆ ಫ್ಯಾಷನ್ ಆಗಿರಬಹುದಾದ ಲೋಲಾಕು, ಮೂಗಿನಲ್ಲಿ ನತ್ತು, ಕೊರಳಲ್ಲಿ ಎರಡೆಳೆ ಕರಿಮಣಿ. ಬಲ ಭಾಗದಲ್ಲಿ ಬೈತಲೆ ತೆಗೆದ ಅಮ್ಮ ಲಕ್ಷಣವಾಗಿ ಕಾಣುತ್ತಿದ್ದಳು. ಪಕ್ಕದಲ್ಲಿ ಅಪ್ಪ. ಆ ಜಾಗ ನೀರು ಸೋರಿ ಹೋಗಿದ್ದರಿಂದ ಸರಿಯಾಗಿ ಗ್ರಹಿಸಲು ಆಗುತ್ತಿರಲಿಲ್ಲ. ಚಿತ್ರದಲ್ಲಿ ಅಪ್ಪ ಸ್ಫುರದ್ರೂಪಿಯಾಗಿ ಇದ್ದನಾದರೂ ಅವನ ಮೇಲೆ ಸಿಟ್ಟಿದ್ದರಿಂದ ಸಿನಿಮಾಗಳಲ್ಲಿ ಬರುವ ಚೆಂದ ಮುಖದ ಕ್ರೂರ ಕೇಡಿಯ ಹಾಗೆ ಕಂಡು ಥಟ್ಟನೆ ಮುಚ್ಚಿಟ್ಟೆ. ಆಮೇಲೆ ಬೀರು ಸ್ವಚ್ಛ ಮಾಡಲು ಹೋಗಲಿಲ್ಲ.
ಅಮ್ಮನನ್ನು ನಾನು ನೋಡಿದ್ದು ಬಹುಪಾಲು ಕೆಲಸ ಮಾಡುವಾಗ. ಅವಳಿಗೆ ಕೆಲಸ ಬಿಟ್ಟರೆ ಬೇರೇನೂ ಕಾಣುವುದಿಲ್ಲವೇ ಎಂದು ನಾನು ಯೋಚಿಸಿದ ಹಗಲು ಇರುಳುಗಳು ಬಹಳ. ಆಗೆಲ್ಲಾ ಅವಳ ಮೇಲೆ ಕನಿಕರ, ಪ್ರೀತಿ ಬರುವುದು. ರಾತ್ರಿ ಮಂಚದ ಮೇಲೆ ಕುಳಿತು ಇಳಿಬಿಟ್ಟ ಕಾಲನ್ನು ನೀವುತ್ತಾ, ಒಡೆದ ಹಿಮ್ಮಡಿಗೆ ವ್ಯಾಸಲಿನ್ ಹಚ್ಚುವುದನ್ನು ನಾನು ಕೆಳಗಿನ ಹಾಸಿಗೆಯಲ್ಲಿ ಮಲಗಿಕೊಂಡು ಎವೆಯಿಕ್ಕದೆ ನೋಡುತ್ತಿದ್ದೆ. ಹಾಗೆ ನೋಡುತ್ತಿರುವುದು ಅರಿವಾದ ಕೂಡಲೇ ಅವಳು ಏನೋ ಮಾತಾಡಿ ಬೆಡ್ಶೀಟ್ ಎಳೆದುಕೊಂಡು ಮಲಗಿಬಿಡುತ್ತಿದ್ದಳು. ಸೀಮೆಎಣ್ಣೆ ಬುಡ್ಡಿ ಆರಿದ ಮೇಲೂ ಅಮ್ಮನ ಬಳೆಯ ಸದ್ದು, ವಿಪರೀತ ಕೆಲಸದಿಂದುಂಟಾದ ಸೊಂಟ ನೋವಿಗೆ ಹೊಂದಿಕೊಳ್ಳಲಾಗದೇ ಆಗಾಗ ಅವಳು ಹೊರಳುವ ಸದ್ದು, ಮಂಚದ ದಡ್ ದಡ್ ಸದ್ದು, ನರಳಿಕೆ, ಬುಸ್ಸಂತ ಉಸಿರು ನನಗೆ ನಿದ್ದೆ ಬರುವವರೆಗೆ ಕೇಳಿಸುತ್ತಿತ್ತು.
ಮನೆಯ ತೋಟ ಮತ್ತು ಗದ್ದೆಯ ವ್ಯವಹಾರ ಅಮ್ಮನ ಅನಿವಾರ್ಯವಾಗಿತ್ತು. ಬೆಳಿಗ್ಗೆ ಅಡುಗೆ, ಆಮೇಲೆ ತೋಟದ ಕೆಲಸ, ಮಧ್ಯಾಹ್ನ 12ರ ಮೇಲೆ ದಡಬಡ ತೋಟ ಹತ್ತಿ ಬಂದು ಅಡುಗೆ ಕೆಲಸ, ಊಟಾದ ಮೇಲೊಂದು ಕೋಳಿ ನಿದ್ದೆ, ಬಿಸಿಲು ನೆತ್ತಿಯಿಂದ ಇಳಿಯುವ ಮೊದಲೇ ಹಿತ್ತಲ ಗಿಡಗಳ ವಾಗಾಯ್ತಿ, ಆಮೇಲೆ ಕೊಟ್ಟಿಗೆಯ ಕೆಲಸದೊಂದಿಗೆ ದುಡಿಮೆ ಮುಗಿಯುತ್ತಿತ್ತು. ನಾನು ಒಮ್ಮೆಯೂ ಅಮ್ಮನ ಕೆಲಸದ ವಿಷಯದಲ್ಲಿ ತಲೆಕೆಡಿಸಿಕೊಂಡವನಲ್ಲ. ಬೆಳಿಗ್ಗೆ ಎದ್ದಾಗ ಕಾಫಿ ಕೊಡುವುದರಿಂದ ಹಿಡಿದು ಸ್ಕೂಲಿಗೆ, ಕಾಲೇಜಿಗೆ ಅಡುಗೆ ಸಿದ್ಧ ಮಾಡಿ ಕಳಿಸಿ ಕೊಡುವವರೆಗೆ, ಸಂಜೆ ಬಂದಾಗ ತಿಂಡಿ ಕಾಫಿ ಒದಗಿಸುವವರೆಗೆ ಅಮ್ಮ ಚಾಚೂ ತಪ್ಪದೆ ನನ್ನ ಆರೈಕೆ ಮಾಡುತ್ತಿದ್ದಳು. ಹಾಗಾಗಿ ನನ್ನ ಕಣ್ಣಿಗೆ ಅಮ್ಮನ ಕೆಲಸದಲ್ಲಿ ಯಾವ ಒಜ್ಜೆಯೂ ಕಾಣಲಿಲ್ಲ. ಆದರೆ ಆವಾಗಾವಾಗ ಅಮ್ಮ ತಲೆ ನೋವೆಂದು ಬೆಳಿಗ್ಗೆ ಏಳುವುದು ತಡ ಮಾಡಿದಾಗ ನನ್ನ ದಿನಚರಿ ಅಸ್ತವ್ಯಸ್ತವಾಗುತ್ತಿತ್ತು. ಆಗ ಅಮ್ಮನ ಬಗ್ಗೆ ಕನಿಕರ ಮೂಡಿ ಹಾಸಿಗೆ ಹತ್ತಿರ ನಿಂತು, ಹಸ್ತವನ್ನು ಅವಳ ಹಣೆಯ ಮೇಲಿಟ್ಟು ಅಕ್ಕರೆ ತೋರುತ್ತಿದ್ದೆ. ಅವಳ ಮೈ ಬಿಸಿ ನನಗೂ ಪ್ರೀತಿ ಎನಿಸುತ್ತಿತ್ತು.
ಹಾಗೇ ಸಾಗುತ್ತಿತ್ತು ಜೀವನ. ಮನೆಗೆ ಅಪ್ಪ ಯಾಕೆ ಬರುವುದಿಲ್ಲ ಎಂದು ಕೇಳಬೇಕೆಂದು ತಾಲೀಮು ಮಾಡಿದಷ್ಟೂ ಅಮ್ಮನೆದುರು ಬರುವಾಗ ತಡಬಡ ಆಗುತ್ತಿತ್ತು. ಶಾಲೆಗೆ ಸೇರಿದ ಶುರುವಲ್ಲಿ ಹೆಚ್ಚಿನ ಹುಡುಗರನ್ನು ಅವರವರ ಅಪ್ಪ ಂದಿರು ಶಾಲೆಗೆ ಬಿಟ್ಟು ಹೋಗುತ್ತಿದ್ದರು. ನಾನು ಮಾತ್ರ ಕೆಲಸದ ಮಂಜನ ಜತೆ, ಸುಬ್ಬಿಯ ಜತೆ ಶಾಲೆಗೆ ಬರುವಾಗ ಬೇಸರವೆನಿಸುತ್ತಿತ್ತು. ಆದರೆ ಮನೆಗೆ ಬಂದಾಗ ಅಮ್ಮನಿಗೆ ಆ ಪ್ರಶ್ನೆ ಕೇಳುವುದು ಸರಿ ಕಾಣುತ್ತಿರಲಿಲ್ಲ.
ಹೀಗಿರುವಾಗ ಒಂದು ಘಟನೆ ನಡೆಯಿತು. ಶಾಲೆಯಲ್ಲಿ ಪೇರೆಂಟ್ಸ್ ಮೀಟಿಂಗ್ ಮಾಡುವ ನಿರ್ಧಾರವಾಯಿತು. ಪ್ರತಿಯೊಬ್ಬರೂ ತಂದೆಯನ್ನು ಕರೆದುಕೊಂಡು ಬರಬೇಕೆಂದು ಟೀಚರ್ ಹೇಳಿದರು. ನನಗೆ ದಿಗಿಲಾಯಿತು. ಸಂಜೆ ಮನೆಗೆ ಮರಳಿದ ಮೇಲೆ ಗಿಡಗಳಿಗೆ ನೀರು ಹೊಯ್ಯುತ್ತಿದ್ದ ಅಮ್ಮನಲ್ಲಿ ಹಾಗೆಂದು ಹೇಳಿದೆ. ಅಮ್ಮನ ಮುಖ ಬಿಳಿಚಿಕೊಂಡಿತು. ಯಾವತ್ತೂ ಅವಳು ಅಷ್ಟು ಬೇಸರಗೊಂಡಿದ್ದು ನನಗೆ ನೆನಪಿಲ್ಲ. ಅಂದು ರಾತ್ರಿ ಅವಳು ಎರಡೇ ಹಾಡಿನಲ್ಲಿ ಭಜನೆ ನಿಲ್ಲಿಸಿದಳು. ದೀಪದ ಬೆಳಕಲ್ಲಿ ಬಿರುಗಣ್ಣಿನಿಂದ ಊಟ ಬಡಿಸಿದಳು. ಒಂದೂ ಮಾತಾಡಲಿಲ್ಲ, ನನಗೆ ಹಿಂಸೆಯಾಯಿತು. ಏನು ಹೇಳಬೇಕೆಂದು ನನಗೆ ತೋಚದೆ, ಮಾತಾಡದೆ ಓಡಾಡಿದೆ. ರಾತ್ರಿ ದೀಪ ಆರಿದ ಮೇಲೆ ಅಮ್ಮ ಅಳುವುದು, ಮೂಗು ಸೊರಸೊರ ಮಾಡುವುದು, ಮಗ್ಗುಲು ಪದೇ ಪದೇ ಬದಲಿಸುವುದು ನಡೆಯಿತು. ತಡವಾಗಿ ನಿದ್ದೆ ಬಂದು ಎಚ್ಚರಾದಾಗ ಮುಖಕ್ಕೆ ಬೆಳಕು ಹೊಡೆಯುತ್ತಿತ್ತು.
ನನಗೆ ಈಗ ಭಯ ಆರಂಭವಾಯಿತು. ಶಾಲೆಯಲ್ಲಿ ಟೀಚರ್ ಬೇರೆ ಸ್ಟ್ರಿಕ್ಟ್. ಅವರು ಎಷ್ಟೋ ಜನರಿಗೆ ಹೊಡೆದು ಕೈ ಕೆಂಪಾಗಿದ್ದಿತ್ತು. ಈ ಪೆಟ್ಟಿಗೆ ನಾನು ಕೈ ಒಡ್ಡುವ ಚಿತ್ರಣ ಮನಸ್ಸಲ್ಲಿ ಮೂಡಿ, ಮೈ ಅದುರಿತು. ಮಾತಾಡದೇ ಕಾಫಿ, ತಿಂಡಿ, ಸ್ನಾನ, ಬಟ್ಟೆ ಆಯಿತು. ಹೊರಡುವ ಹೊತ್ತಿಗೆ ಅಮ್ಮನೂ ಸ್ನಾನ ಮಾಡಿಕೊಂಡು ಬಂದಳು. ಬೇಗ ಬೇಗ ರೆಡಿಯಾಗಿ `ಬಾ ಸೂರಿ, ನಾನೂ ನಿನ್ ಜತೆ ಬರ್ತೀನಿ ಹೋಗೋಣ' ಎಂದಾಗ ಖುಷಿಯಾದೆ. ಅಮ್ಮನ ಜತೆ ಹೊರಟ ನನ್ನ ಮೌನ ಮೆರವಣಿಗೆ ಶಾಲೆಯ ಹತ್ತಿರ ಕೊನೆಯಾಯಿತು. `ನೋಡು ನಾನು ಟೀಚರ್ ಹತ್ತಿರ ಮಾತಾಡ್ತೇನೆ. ನೀನು ಯೋಚನೆ ಮಾಡ್ದೇ ಶಾಲೆಗೆ ಹೋಗು. ತಲೆ ಕೆಡಿಸ್ಕೋಬೇಡ' ಎಂದು ಭುಜ ತಟ್ಟಿ ಕಳಿಸಿಕೊಟ್ಟಳು. ನನ್ನೆಲ್ಲಾ ಸಹಪಾಠಿಗಳು ಅಮ್ಮನ ಜತೆ ಬಂದಿದ್ದ ನನ್ನನ್ನು ಸಖೇದಾಶ್ಚರ್ಯದಿಂದ ಕಂಡಿದ್ದು ನನಗೆ ಜೀವಮಾನದ ಹೆಮ್ಮೆಯಾಗಿ ತೋರಿತು. ಖುಷಿಯೊಂದಿಗೆ ತರಗತಿಗೆ ಹೋಗಿ ಅಪ್ಪನನ್ನು ಕರೆತರುವ ವಿಷಯ ಮರೆತೆ.
ಮಧ್ಯಾಹ್ನ ಊಟಕ್ಕೆ ಬಿಡುವಿದ್ದಾಗ ಅಮ್ಮ ಹೊರಗೆ ಕೂತಿರುವುದನ್ನು ಕಂಡೆ. ಟೀಚರ್ರ ಕೋಣೆಯೊಳಗೆ ಬರೀ ಅಪ್ಪಂದಿರೇ ತುಂಬಿದ್ದರು. ಅಮ್ಮನೊಬ್ಬಳೇ ಹೊರಗೆ ತಬ್ಬಲಿಯಂತೆ ಕೂತಿದ್ದಳು. ಹೋಗಿ ನಾನೂ ಅಮ್ಮನ ಜತೆ ನಿಂತೆ. ಕೆಲವು ಹೊತ್ತಿನ ನಂತರ ಅಮ್ಮನ ಸರದಿ ಬಂತು. ಹೋದರೆ ಒಂದಿಬ್ಬರು ಮೇಷ್ಟ್ರು ಇದ್ದರು. ಟೀಚರ್ರು ಜೋರು ದನಿಯಲ್ಲಿ `ಅಪ್ಪ ಬರಬೇಕು ಅಂದಿದ್ದಲ್ಲ, ನೀವ್ಯಾಕೆ ಬಂದಿದ್ದೀರಿ?' ಎಂದು ಕೇಳಿದರು. ಅಮ್ಮ `ಅವ್ರು ಊರಲ್ಲಿರುವುದಿಲ್ಲ ಅಂತ ನಿಮಗೇ ಗೊತ್ತಿದೆಯಲ್ಲಾ, ಅವ್ರನ್ನ ಎಲ್ಲಿಂದ ಕರ್ಕೊಂಡು ಬರ್ಲಿ. ಯಾವ ಕಾಲ ಆಯ್ತು, ಅವ್ರು ಮನೇಗೆ ಬಂದಿದ್ದೇ ನೆನಪಿಲ್ಲ. ಒಂದು ಸಾರಿ ಬಂದಿದ್ದರು. ಒಂದೇ ಹಗಲು, ಒಂದೇ ರಾತ್ರಿ. ಮತ್ತೆ ಬೆಳಕು ಹರಿದ ಮೇಲೆ ಹೋದವರು ತಿರುಗಿ ಬರಲಿಲ್ಲ. ಇದ್ದಾರೋ, ಇಲ್ಲವೋ. ನೋಡಿ, ಇವನ ಬಗ್ಗೆ ನೀವೇನೂ ಆತಂಕ ಪಡ್ಬೇಕಾಗಿಲ್ಲ. ಇವ್ನ ದೊಡ್ಡಪ್ಪನ್ಹಂಗೇ ಬಹಳ ಸೂಟು ಇದಾನೆ, ಚೆನ್ನಾಗಿ ಕಲೀತಾನೆ' ಎಂದು ಮೊದಲ ಬಾರಿಗೆ ಅಪ್ಪನ ವಿಷಯವನ್ನು ಹೇಳಿದಳು. ನನ್ನನ್ನು ಹೊಗಳಿದಳು, ಖುಷಿ ಆಯಿತು. ಅಮ್ಮನ ಅಸಹಾಯಕ ಸ್ಥಿತಿಯಲ್ಲಿ ಟೀಚರ್, ಮೇಸ್ಟ್ರು ಎರಗಲು ಸಿದ್ಧವಾದ ಹುಲಿಯಂತೆ ನನಗೆ ಕಂಡು ಬಂದರು. ಅಲ್ಲಿಗೆ ಎಲ್ಲರೂ ಸುಮ್ಮನಾದರು. ಅಮ್ಮ ಕಣ್ಣು ಒರೆಸಿಕೊಂಡು, ಸೀರೆ ಸೆರಗನ್ನು ಎರಡೂ ಭುಜದ ಮೇಲೆ ಹೊದ್ದುಕೊಂಡು ಮುದುರುತ್ತಾ ಮನೆಗೆ ಹೋಗಿದ್ದು ಇನ್ನೂ ನೆನಪಿದೆ. ಆಮೇಲೆ ಟೀಚರ್ರ್ ಬಗ್ಗೆ ಅಸಾಧ್ಯ ಭಯ ಹುಟ್ಟಿಕೊಂಡಿತು. ರಾತ್ರಿ ಕನಸಿನಲ್ಲೆಲ್ಲಾ ಎರಗಲು ಸಿದ್ಧವಾದ ಹುಲಿಯೊಂದು ಕಾಣಿಸಿಕೊಂಡು ಅದು ಟೀಚರ್ರಂತೆ ಇದೆಯೇ ಎಂಬ ತರ್ಕ ತಲೆಯನ್ನು ಸೇರಿಕೊಂಡಿತು.
* * *
ನಡುವೆ ಶಾಲೆಯಲ್ಲೊಂದು ಗೆಳೆತನವಾಯಿತು. ಅವನ ಹೆಸರು ಅಚ್ಯುತ. ಅವನು ಪಕ್ಕದ ಹಳ್ಳಿಯ ಹುಡುಗ. ಇಡೀ ಶಾಲೆಯಲ್ಲಿ ನನ್ನನ್ನು ಪ್ರೀತಿಯಿಂದ ಮಾತಾಡಿಸುತ್ತಿದ್ದ ಏಕೈಕ ವ್ಯಕ್ತಿ ಎಂದು ನಾನು ಭಾವಿಸಿದ್ದೆ. ಏಕೆಂದರೆ ಅವನು ಎಲ್ಲರಂತೆ ಅಪ್ಪನ ಬಗ್ಗೆ ಕೇಳಲಿಲ್ಲ. ಮೊದಲು ಪರಿಚಯವಾದ ದಿನವೇ ನನ್ನ ಪಕ್ಕ ಬಂದು ಕುಳಿತುಕೊಂಡ. `ನಿನಗೆ ಯಾರೂ ಗೆಳಯರೇ ಇಲ್ಲವೇ?' ಎಂದು ಮೊದಲ ಪ್ರಶ್ನೆ ಕೇಳಿದ. ನನಗೆ ಆಶ್ಚರ್ಯವಾಯಿತು. `ನೀನು ಬಹಳ ಒಳ್ಳೆಯವನಿದ್ದೀಯ ಮಾರಾಯ' ಎಂದ. ನನಗೆ ಹೆಮ್ಮೆಯಾಯಿತು. ಹಿಂದೆ ನನ್ನೊಡನೆ ಮಾತಾಡಲು ಬಂದವರಲ್ಲಿ ಹೆಚ್ಚಿನವರು `ನಿನ್ನಮ್ಮ ಯಾಕೋ ಒಬ್ಬಳೇ ಇದ್ದಾಳೆ', `ಅಪ್ಪ ಇಲ್ವಾ ನಿಂಗೆ' ಎಂದೇ ಮಾತು ಆರಂಭ ಮಾಡುತ್ತಿದ್ದಿದ್ದರಿಂದ ನನಗೆ ಅವರ ಬಗ್ಗೆ ಸಿಡುಕು ಹುಟ್ಟತೊಡಗಿತ್ತು. ಬರಬರುತ್ತಾ ನಾನು ಒಂಟಿಯಾದೆ, ಮಾತು ಕಡಿಮೆಯಾಯಿತು, ಓದಿನಲ್ಲಿ ಹೆಚ್ಚು ಗಮನ ನೆಟ್ಟಿತು. ಮನೆಯಲ್ಲಿ ಅಮ್ಮನೂ ಅಷ್ಟು ಮಾತೇನನ್ನೂ ಆಡುತ್ತಿರಲಿಲ್ಲ. ಆಗಾಗ ಪಾಠದ ವಿಷಯ ಕೇಳುತ್ತಿದ್ದಳು, `ನಿನ್ನ ದೊಡ್ಡಪ್ಪ ಪೇಟೇಲಿದ್ದಾರಲ್ಲಾ ಅವರು ಪತ್ರ ಬರೆದಿದ್ದಾರೆ, ನಿನ್ನನ್ನು ಕೇಳಿದ್ದಾರೆ' ಎಂದು ಒಂದಿಷ್ಟು ಮಾತು ಆಡುತ್ತಿದ್ದಳು. ಅದು ಬಿಟ್ಟರೆ, ಮೌನ ತುಂಬಿದ ಅಮ್ಮನ ಆಕಾರ ನನ್ನೊಳಗೂ ಮಡುಗಟ್ಟಿದ ಮೌನವಾಗಿ ತುಂಬಿಕೊಳ್ಳತೊಡಗಿತು. ಆಗ ಪರಿಚಯವಾದವ ಅಚ್ಯುತ.
ಮೊದಲ ಮಾತು, ನನ್ನನ್ನು ಆಧರಿಸಿದ ರೀತಿ, ಅವನ ನೋಟದಲ್ಲಿನ ಅರ್ಥಗರ್ಭಿತ ಭಾವನೆ ನನ್ನನ್ನು ಸೆಳೆಯಿತು. ಅಲ್ಲಿಂದ ನನ್ನ ಮುಖದಲ್ಲಿ ಒಂದು ನಗು ಅವನು ಬಂದಾಗೆಲ್ಲಾ ಸಿದ್ಧವಿರುತ್ತಿತ್ತು. ಅದು ಒಂದು ಮಾತು, ಒಂದು ಜೋಕು, ಒಂದು ನಗೆಯೊಂದಿಗೆ ಬಲಿಯತೊಡಗಿತು. ನನಗೆ ಶಾಲೆಗೆ ಹೋಗುವುದರಲ್ಲಿ ಒಂದು ಅರ್ಥ ಬಂದಿದ್ದು ಅಚ್ಯುತನ ಪರಿಚಯವಾದ ಮೇಲೆ. ಆತ ನನ್ನ ವಯಸ್ಸಿನವನೇ ಆದರೂ ಅವನ ನಿಲುವಿನಲ್ಲಿ ಒಂದು ಗಾಂಭೀರ್ಯ ಇತ್ತು. ಕಲಿಯುವುದರಲ್ಲಿ ಹುಶಾರಿದ್ದ. ಶಾಲಾ ವಾರ್ಷಿಕೋತ್ಸವದಲ್ಲಿ ಭಕ್ತಿಗೀತೆಯನ್ನು ಮನಸ್ಸಿಗೆ ನಾಟುವಂತೆ ಹಾಡುತ್ತಿದ್ದ. ಒಂದು ದಿನವಂತೂ ಮೊದಲೇ ತಿಳಿಸದೆ ಅನಿರೀಕ್ಷಿತವಾಗಿ ಮನೆಗೆ ಬಂದು ನನಗೆ ಮುಜುಗರ ಉಂಟುಮಾಡಿದ. ಈ ಎಲ್ಲಾ ಸಂಪರ್ಕಗಳು ಒಂದಕ್ಕೊಂದು ಕೂಡಿಕೊಂಡು ಪರಿಪೂರ್ಣ ಸ್ನೇಹ ನಮ್ಮ ನಡುವೆ ಬೆಳೆಯಿತು.
ಬುದ್ಧಿ ತಿಳಿಯುತ್ತಾ ಹೋದಂತೆ ಅಮ್ಮನ ಕೆಲಸದಲ್ಲಿ ಒಂದು ದಾರುಣತೆ ಕಾಣಿಸತೊಡಗಿತು. ಕೋಣೆಯ ಬೀರುವಿನ ಬಗ್ಗೆ ದ್ವೇಷ ಬೆಳೆಯಿತು. ಶಾಲೆ ಬಿಟ್ಟರೂ ಶಾಲೆಯ ಟೀಚರ್ ಬಗ್ಗೆ ಸಿಟ್ಟು ಬಲಗೊಂಡಿತು. ನಾನು ಜತೆಗಾರರ ಬಗ್ಗೆ ಅಸಡ್ಡೆ ರೂಢಿಸಿಕೊಂಡೆ. ಬಸ್ನಲ್ಲಿ ಹೋಗುವಾಗೆಲ್ಲಾ ಅದೆಷ್ಟೋ ಕ್ಲಾಸ್ಮೇಟ್ಗಳು ಸಿಕ್ಕರೂ ಮುಖ ತಿರುಗಿಸಿಕೊಂಡು ಹೋಗುವುದನ್ನು ಅಭ್ಯಾಸ ಮಾಡಿಕೊಂಡೆ. ಬೇಕೆಂದೇ ಪರಿಚಯಸ್ಥರ ಎದುರು ಇನ್ಷರ್ಟ್ ಮಾಡಿಕೊಂಡು ಓಡಾಡುತ್ತಿದ್ದೆ. ಈ ಎಲ್ಲಾ ಹಿನ್ನೆಲೆಯೊಂದಿಗೆ ನನ್ನ ಹದಿಹರೆಯ ಕಾಲಿಟ್ಟಿತು. ಮನೆಯ ಹಿತ್ತಲ ತುಂಬಾ ತರಕಾರಿಗಳು ತೊನೆದವು. ತೋಟದ ಅಡಿಕೆ ಗೊನೆಗಳ ಸಂಖ್ಯೆ ಹೆಚ್ಚಾಯಿತು. ಅಮ್ಮನ ಮುಖದಲ್ಲಿ ಸುಕ್ಕುಗಳು ಅಲ್ಲಲ್ಲಿ ಕಾಣಿಸಿಕೊಂಡವು. ಅವಧಿಗೆ ಮೊದಲೇ ಅವಳ ನೋಟ, ನಿಲುವು, ಜೀವನ ಕ್ರಮದಲ್ಲಿ ಒಂದು ಥರದ ಬಲವಂತ ಉದಾಸೀನ ನೆಲೆ ನಿಂತಿತು. ಅಪ್ಪನ ನೆರಳು ಕಾಣಿಸಿಕೊಳ್ಳದೆಯೇ ಅದರ ಅಸ್ತಿತ್ವ, ನಾಸ್ತಿತ್ವದ ಬಗ್ಗೆ ಅನುಮಾನಗಳು ಬಲವಾಗತೊಡಗಿತು.
ಅಚ್ಯುತ ನನ್ನ ಜೀವನದ ಭಾಗವಾದ. ಪಕ್ಕದ ಹಳ್ಳಿಯಾದರೂ ಅವನು ನಮ್ಮ ಮನೆಗೆ ಬಂದಾಗಲೇ ನಾನು ಕಾಲೇಜಿಗೆ ಹೊರಡುತ್ತಿದ್ದುದು. ಇಬ್ಬರೂ ಕಾಲೇಜಿನ ಬಗ್ಗೆ ಮಾತಾಡುತ್ತಾ, ನನ್ನ ಅವನ ಹಿನ್ನೆಲೆ ಹೇಳಿಕೊಳ್ಳುತ್ತಾ ದಾರಿ ಕಳೆಯುತ್ತಿದ್ದೆವು. ನಾನು ಯಾರೊಡನೆ ಮಾತು ಕಡಿಮೆ ಆಡಿದರೂ ಅವನ ಜತೆ ಹಾರ್ದಿಕವಾಗಿ ಹರಟುತ್ತಿದ್ದೆ. ಅಲ್ಲಿ ವಿಷಯಗಳು ಪಾಠದ ಬಗ್ಗೆ ಇರುತ್ತಿದ್ದವು. ಯಾರೋ ಒಳ್ಳೆ ತತ್ವಜ್ಞಾನಿಯ ಬಗ್ಗೆ ಇರುತ್ತಿದ್ದವು. ನಾನು ಯಾವುದೋ ಕಾಲೇಜು ಹುಡುಗಿಯ ತುಂಬಿದ ಮೊಲೆಗಳನ್ನು ಪ್ರಸ್ತಾಪಿಸಲು ಹೋಗಿ, `ಏಯ್ ನೋಡ್ ಸೂರಿ, ಅವ್ಳ ಮೊಲೆ ಕಟ್ಕೊಂಡು ನಿನ್ಗೇನಾಗ್ಬೇಕು? ದೇಶದ ಅದೆಷ್ಟೋ ಅಮ್ಮಂದಿರ ಮೊಲೆಗಳು ಆಹಾರ ಇಲ್ದೇ ಜೋಲ್ತಿವೆ. ಅವುಗಳನ್ನು ಜೋಲಿ ಬೀಳ್ಸಿದ್ದು ಯಾರು ಗೊತ್ತಾ? ಈ ತಿಂದು ಕೊಬ್ಬಿರೋ ಶ್ರೀಮಂತರು. ಅಂಥ ತುಂಬಿದ ಹೊಟ್ಟೆ ನೋಡು, ಆಗ ನಿನ್ಗೆ ಗೊತ್ತಾಗತ್ತೆ ಕಷ್ಟ ಏನು ಅಂತ. ತೆವ್ಲು... ತೆವ್ಲು ನಮ್ಮನ್ನ ಹಾಳ್ಬಾಡ್ಬಾರ್ದು' ಎಂದು ಉನ್ಮಾದನಾಗಿ ಮಾತಾಡಿ ಅಚ್ಚರಿ ಹುಟ್ಟಿಸಿದ. ಅಂದಿನಿಂದ ನಾನು ಅಮ್ಮನ ಕಷ್ಟವನ್ನೂ, ಊರಿನ ಸಾಕಷ್ಟು ಸಿರಿವಂತರ ಕೇಕೆಯನ್ನೂ ಎರಡು ತಕ್ಕಡಿಯಲ್ಲಿ ಇಡಲು ಹೋಗಿ ಅರ್ಥವಾಗದೇ ಗೋಜಲು ಗೋಜಲಾಯಿತು.
ಅಚ್ಯುತ ಅಂದಿನಿಂದ ಒಬ್ಬ ನಿಗೂಢ ವ್ಯಕ್ತಿಯಂತೆ ಕಂಡ. ಕಾಲೇಜಿನ ಭಾಷಣ ಸ್ಪರ್ಧೆ ನಡೆದಾಗಲೆಲ್ಲಾ ಅವನು ಸಿರಿವಂತರು, ಬಡವರು, ಶೋಷಣೆ, ಜೋಲುವ ಮೊಲೆಗಳು, ತೇಕುವ ನಾಲಗೆಗಳು ಮೊದಲಾದ ವಿಷಯಗಳನ್ನು ಪ್ರಸ್ತಾಪಿಸಿ ಇಡೀ ಸಭೆಯನ್ನು ದಂಗುಪಡಿಸುತ್ತಿದ್ದ. ಅವನು ಎಲ್ಲಾ ಪಾಠವನ್ನೂ ಪರಾಮರ್ಶಿಸುತ್ತಾ ಪರಾಮರ್ಶಿಸುತ್ತಾ ಮತ್ತೆ ಅರೆ ಹೊಟ್ಟೆ ತುಂಬಿದ ಹೊಟ್ಟೆಯನ್ನು ಹತ್ತಿರ ತಂದು ಮಾತಾಡುತ್ತಿದ್ದ. ಅವನ ಬಗ್ಗೆ ಶ್ರೀಮಂತ ಲಕ್ಚರರು, ಬಡವ ಲಕ್ಚರರ ನಿಲುವುಗಳು ಕೂಡಾ ಬದಲಾಗಿದ್ದು ಗಮನಕ್ಕೆ ಬಂತು. ಅವನ ಬಗ್ಗೆ ತರಗತಿಯಲ್ಲೇ ಕೆಲವು ವಿರೋಧ, ಬೆಂಬಲಗಳು ವ್ಯಕ್ತವಾಗಿ ಆತನೊಬ್ಬ ಪ್ರತಿಗಾಮಿ ನಾಯಕನಾಗಿ ರೂಪುಗೊಂಡ.
ಈ ನಡುವೆ ಮನೆಯಲ್ಲಿ ಒಂದು ಅನಿರೀಕ್ಷಿತ ಘಟನೆ ನಡೆಯಿತು. ಕಾಲೇಜಿನಿಂದ ಮನೆಗೆ ಬಂದರೆ ಒಬ್ಬ ಅಪರಿಚಿತ ಗಂಡಸು. ಅಮ್ಮ ನನ್ನನ್ನು ನೋಡಿದ್ದೇ ಚಡಪಡಿಕೆ-ಅವ್ಯಕ್ತ ಸಂತೋಷದ ನಡುವೆ ತುಯ್ಯುತ್ತಿದ್ದಳು. ಆ ವ್ಯಕ್ತಿಯನ್ನು ಎಲ್ಲೋ ನೋಡಿದ ನೆನಪಾಯಿತು. ಕಣ್ಣು, ತುಟಿ, ಮೂಗುಗಳು ಎಲ್ಲೋ ಪರಿಚಿತ ಎನಿಸಿದರೂ ಕೆದಕಿದ ಕೂದಲು, ಮಾಸಲು ಅಂಗಿ, ಕ್ಷೀಣವಾದ ಶರೀರ ಅಪರಿಚಿತವಾಗಿ ಕಂಡವು. `ನಿನ್ನ ಅಪ್ಪ ಕಣೋ' ಅಂದಳು ಅಮ್ಮ. ಥಟ್ಟನೆ ನಾನು ದ್ವೇಷಿಸುವ ಬೀರು ನೆನಪಾಯಿತು. `ಅಪ್ಪ ಬರಬೇಕು ಎಂದಿದ್ದಲ್ವಾ, ನೀವ್ಯಾಕೆ ಬಂದಿದ್ದು' ಎಂದ ಟೀಚರ್ರು ನೆನಪಾದರು. ಮತ್ತೆ ಅವನ ಮುಖವನ್ನು ನೋಡಬೇಕೆನಿಸಲಿಲ್ಲ. ನನ್ನ ಕೋಣೆ ಸೇರಿಕೊಂಡೆ. ಕೋಣೆಯಲ್ಲಿದ್ದರೂ ಅಮ್ಮ-ಅಪ್ಪನ ಮಾತು ಕೇಳಿಸದೇ ಬಿಡಲಿಲ್ಲ. ಆತ ವಿವರಿಸುತ್ತಿದ್ದ;
ಅಲ್ಲಿ ನಾಲ್ಕು ದಿನ ಉಳಿದೆವು. ಏನು ಮಾಡುವುದು ಪೊಲೀಸರ ಕಾಟ. ಆ ಜಿಗಣೆ, ಇರುವೆ ಕಾಟ. ಅವನು ಬೇರೆ ಕಂಪ್ಲೆಂಟ್ ಕೊಟ್ಟಿದ್ದ. ಪೊಲೀಸರು ನಮ್ಮ ತಾವನ್ನೇ ಹುಡುಕಿ ಹುಡುಕಿ ಅಲೆಯುತ್ತಿದ್ದರು. ರಾತ್ರಿ, ಬಹುಶಃ ಹತ್ತೋ ಹನ್ನೊಂದೋ. ಹಸಿವಿನಿಂದ ಹೊಟ್ಟೆ ಚುರುಗುಡುತ್ತಿತ್ತು. ಎದ್ದು ನಿಂತರೆ ತಲೆ ಸುತ್ತಿ ಬರುವಷ್ಟು ನಿಶ್ಯಕ್ತಿ.
ಇಲ್ಲ , ಇನ್ನು ನನಗೆ ಮಾತು ಕೇಳಿಕೊಳ್ಳಲಾಗುವುದಿಲ್ಲ ಎನಿಸಿತು. ಎಲ್ಲೋ ಹುಡುಕಿ ಹತ್ತಿ ತಂದೆ. ಎರಡೂ ಕಿವಿಗಳಿಗೆ ಉಂಡೆ ಮಾಡಿ ಇಟ್ಟುಕೊಂಡೆ. ಅದರ ಮೇಲೆ ದಿಂಬೊಂದನ್ನು ಕಿವಿಗೆ ಒತ್ತಿ ಹಿಡಿದು, ಇನ್ನೊಂದು ಕಿವಿಯನ್ನು ಹಾಸಿಗೆಗೆ ಒತ್ತಿಕೊಂಡು ಗಟ್ಟಿಯಾಗಿ ಕಣ್ಣು ಮುಚ್ಚಿಕೊಂಡೆ.
ಆದರೂ ಕೇಳಿಸುತ್ತಿತ್ತು; ಅವನು ಯಾವುದೋ ಗೊಂಡಾರಣ್ಯದ ವಿಷಯ ಹೇಳುತ್ತಿದ್ದ, ಯಾವುದೋ ಅಡಿಕೆ ಸಾಹುಕಾರರ ವಿಶಾಲ ಭವಂತಿ ಮನೆ ಪ್ರಸ್ತಾಪಿಸಿದ, ಯಾವುದೋ ಹೆಂಗಸು ಅಡಿಕೆ ತೋಟದಲ್ಲಿ ಅತ್ಯಾಚಾರಕ್ಕೀಡಾಗಿ ಬಿದ್ದು ಸತ್ತದ್ದನ್ನು ಹೇಳಿದ. ಅಮ್ಮ ಅದಕ್ಕೆ ಹುಂ, ಹೌದಾ, ಅಬ್ಬಾ ಎಂಬ ಉದ್ಗಾರದಲ್ಲಿ ಅವನ ಮಾತನ್ನು ಆಲಿಸುತ್ತಿದ್ದಳು. ನಾನು ಕಾಯ್ದೆ. ಈಗ ಅಮ್ಮ ಕೇಳುತ್ತಾಳೆ- `ಇಷ್ಟು ದಿನ ನಮ್ಮ ನೆನಪಾಗಲಿಲ್ಲವಾ?' ಇಲ್ಲ, ಕಿವಿಗಳು ಎದ್ದು ಕೂತಿದ್ದೇ ಬಂತು ಅಮ್ಮ ಅಂಥ ಮಾತೊಂದನ್ನೂ ಕೇಳಲಿಲ್ಲ. ಅವನು ಶ್ರೀಮಂತರು, ಬಡವರನ್ನು ಪ್ರಸ್ತಾಪ ಮಾಡುವಾಗಲೆಲ್ಲಾ ಅಚ್ಯುತ ನೆನಪಾದ! ಥತ್, ಆ ಅಚ್ಯುತನೆಂಬ ಮಹಾರಾಜನೆಲ್ಲಿ, ಈ ಇಸ್ಪೀಟ್ ರಾಜನೆಲ್ಲಿ? ಸಮೀಕರಣ ಸರಿ ಹೋಗಲಿಲ್ಲ.
ನನಗೆ ಎಷ್ಟು ಸಿಟ್ಟಿತ್ತು ಎಂದರೆ ಬಾಗಿಲು ತೆಗೆದು ಅವನನ್ನು ಕೇಳಬೇಕು, `ಇಷ್ಟೆಲ್ಲಾ ಕಡಿದು ಕೊಚ್ಚೋನಿಗೆ ಮನೇಲಿ ಅಮ್ಮ, ನಾನು ಇದೀವಿ ಅಂತ ಗೊತ್ತಾಗ್ಲಿಲ್ವಾ? ಶಾಲೇಲಿ ಮಗನ ರಿಜಿಸ್ಟ್ರೇಷನ್ ನಡೀತಿದೆ, ಅಪ್ಪ ಎಲ್ಲಿ ಅಂತ ಕೇಳ್ತಾರೆ ಅಂತ ಗೊತ್ತಾಗ್ಲಿಲ್ವಾ?' ಎಂದು. ಆದರೆ ಮಲಗಿದ ನನಗೆ ಎಷ್ಟು ಪುಕ್ಕಲುತನ ಇತ್ತು ಅಂದರೆ ಮಂಚದಿಂದ ಎದ್ದು, ಕಿವಿಯಲ್ಲಿ ತೂರಿಸಿಕೊಂಡಿರುವ ಹತ್ತಿ ಕಿತ್ತೆಸೆದು, ಬಾಗಿಲು ತೆರೆಯುವುದು ಸಾಧ್ಯವಾಗದು ಎಂದು ಅನ್ನಿಸಿ ಮಂಚದಲ್ಲೇ ಮೈ ಚೆಲ್ಲಿದೆ. ಅಮ್ಮ ಊಟಕ್ಕೆ ಕರೆದು, ಗೋಗರೆದರೂ ಹೋಗಿ ಊಟ ಮಾಡಲಿಲ್ಲ. ಹಸಿವಿಲ್ಲ ಎನ್ನುವುದಕ್ಕಿಂತ ಹೆಚ್ಚಾಗಿ ಹಗಲು ರಾತ್ರಿ ದುಡಿದು ದುಡಿದು, ಅನ್ನ ಮಾಡಿಟ್ಟ ಅಮ್ಮನೆದುರು ಊಟ ಮಾಡುವ ಆ ವ್ಯಕ್ತಿ ಮತ್ತು ನಾನು ನಾಯಿಗಳಂತೆ ಅನ್ನಿಸುತ್ತಿತ್ತು.
ಅಂದಿಡೀ ಬಾಗಿಲು ತೆರೆಯದೇ ವ್ಯಗ್ರ ಮನಸ್ಸಿನಿಂದ ನಿದ್ದೆಯಿಲ್ಲದೆ ಒದ್ದಾಡಿದೆ. ಅಮ್ಮನ ನಿಲುವಿನಲ್ಲಿ ಕಂಡ ಬದಲಾವಣೆ ಇದೆಯಲ್ಲಾ, ಅದೇ ನನ್ನ ಪ್ರತಿಕ್ರಿಯೆಯನ್ನು ತಡೆಯುತ್ತಿದೆಯೇ ಎನಿಸಿತು. ಇಲ್ಲದಿದ್ದರೆ ಅಮ್ಮನ ಮುಖದಲ್ಲಿ ಆ ನಗು, ಆ ನೆಮ್ಮದಿ, ಆ ಪುಳಕ ಇಲ್ಲದೆ ಯಾವ ಯುಗಗಳಾಗಿದ್ದವು. ತೋಟದಲ್ಲಿ ಬಿತ್ತಿದ ಬೀಜವೊಂದು ಮುಂದೆ ಲಕಲಕಿಸುವ ಬೆಳೆಯಾಗಿ ಮಾರ್ಪಟ್ಟಾಗ ಅವಳು ಖುಷಿಪಡಲಿಲ್ಲ, ದನ ಕರು ಹಾಕಿದಾಗ ಖುಷಿಪಡಲಿಲ್ಲ, ಹಲಸಿನ ಮರದಲ್ಲಿ ಹಕ್ಕಿ ಗೂಡು ಕಟ್ಟಿದಾಗ ಸುಖಪಡಲಿಲ್ಲ. ಯಾವತ್ತೂ ಇಲ್ಲದ ಮುಖದ ಗೆಲುವನ್ನು ಈ ಕ್ಷಣ ತಂದುಕೊಟ್ಟಿರುವಾಗ ನಾನೇಕೆ ಆ ಕ್ಷಣವನ್ನು ಕ್ಷಣಾರ್ಧದಲ್ಲಿ ಚಿತ್ತು ಕಾಟು ಮಾಡಲಿ? ಅವಳ ಅಕಾಲ ಮುಪ್ಪನ್ನೂ ನಾನು ನೋಡಿಕೊಂಡು ಬಂದವನು, ಈಗ ಅಕಾಲ ಹರೆಯವನ್ನೂ ನಾನು ನೋಡುತ್ತಿರುವೆ. ಓ ಈ ಕ್ಷಣವೇ, ಚಿರಾಯುವಾಗು.
ಮೆಲ್ಲ ಬಾಗಿಲು ತೆಗೆದು ಇಣುಕಿದೆ. ಅಮ್ಮನಿಗೆ ಎಷ್ಟೋ ದಿನಗಳ ಮೇಲೆ ಗಾಢ ನಿದ್ದೆ ಹತ್ತಿತ್ತು. ಅಪ್ಪ ಬಾಗಿಲು ತೆರೆದು ಹೊರ ಅಂಗಳದಲ್ಲಿ ಬೆಳದಿಂಗಳು ನೋಡುತ್ತಾ ಮಲಗಿದ್ದ.
ಬೆಳಿಗ್ಗೆ ಎದ್ದಾಗ ತಡವಾಗಿತ್ತು. ಆತನೂ ಹೋಗಿ ಆಗಲೇ ಹೊತ್ತಾಗಿದ್ದಿರಬೇಕು. ಮನೆ ತಣ್ಣಗಿತ್ತು. ಭಾವ ಬಿಣ್ಣಗಿತ್ತು. ಅದೇ ಅಡುಗೆ, ಅದೇ ಕೊಟ್ಟಿಗೆ, ಅದೇ ತಿಂಡಿ, ಕಾಫಿಯ ದಿನನಿತ್ಯಕ್ಕೆ ಅಮ್ಮ ಮರಳಿ ಬಂದಿದ್ದಳು. ರಾತ್ರಿ ನಡೆದಿದ್ದು ಒಂದು ಕಿನ್ನರ ಪ್ರಸಂಗವೋ ಎನ್ನಿಸುವಷ್ಟು ಗಳಿಗೆ ತನ್ನೆಲ್ಲಾ ಹಳೆ ನೆನಪುಗಳನ್ನು ಕಳೆದುಕೊಂಡಿತ್ತು. ಅಮ್ಮ ಕಾಫಿ ಕೊಡುವವಳು `ನಿಮ್ಮಪ್ಪನನ್ನು ಮಾತಾಡಿಸಬೇಕಿತ್ತೋ' ಎಂದು ಹೇಳಿ, ಉತ್ತರ ಕಾಯದೆ ಕೆಲಸದಲ್ಲಿ ತಲ್ಲೀನಳಾದಳು. ಅದಕ್ಕೆ ನಾನು ಉತ್ತರಿಸಬೇಕೆನಿಸಿತ್ತಾದರೂ ಅವಕಾಶ ಮತ್ತೆ ಸಿಗಲಿಲ್ಲ.
ಅಚ್ಯುತ ಕಾಲೇಜು ಮುಗಿಸಿದ. ಅವನ ಜತೆ ನನ್ನದೂ ಮುಗಿಯಿತು. ಕಾಲೇಜಿನ ಕಾಲು ಹಾದಿ ಬಾಡಿದವು. ನಾನು ಮುಂದೆ ಓದುವ ಆಶೆಯನ್ನು ಇಟ್ಟುಕೊಂಡಿರಲಿಲ್ಲವಾದ್ದರಿಂದ ಅಮ್ಮ ಒತ್ತಾಯಿಸಲಿಲ್ಲ. ಅಚ್ಯುತನನ್ನು ಕಾಲೇಜು ಮುಗಿಸಿದ ಮೇಲೆ ನಾನು ಕಂಡಿದ್ದು ಒಂದು ಅಂಗಡಿಯ ಮುಂದೆ. ಅಂದು ಬಂದವನೇ ಒಂದು ಪುಸ್ತಕವನ್ನು ನನ್ನ ಕೈಗೆ ಕೊಟ್ಟ. ಕಾರ್ಲ್ಮಾರ್ಕ್ಸ್ ಎಂದು ಪುಸ್ತಕದ ಮೇಲೆ ಬರೆದಿತ್ತು. ಅದರ ಬಗ್ಗೆ ಏನೇನೋ ಮಾತಾಡಿದ. ನನಗೆ ಅವನ ಅದ್ಭುತ ವಾಗ್ಝರಿಯ ಬಗ್ಗೆ ಅಭಿಮಾನ, ವಿಸ್ಮಯಗಳು ಮೂಡಿದವಾದರೂ ಏನೇನೂ ಅರ್ಥ ಆಗಲಿಲ್ಲ. `ಕ್ರಾಂತಿ ಆಗಬೇಕು ಕ್ರಾಂತಿ' ಎಂದು ಅತ್ತಿಂದಿತ್ತ, ಇತ್ತಿಂದಿತ್ತ ಓಡಾಡಿದ. ಅವನ ಹಾವಭಾವದಲ್ಲಿ ಒಂದು ಥರದ ಉದ್ವಿಗ್ನತೆ ಇತ್ತು. ನಾನು ಕಾರ್ಲ್ ಮಾರ್ಕ್ಸ್ಗೆ ಸ್ಪಂದಿಸುತ್ತಿಲ್ಲ ಎಂಬುದು ಅವನಿಗೆ ಅರಿವಿಗೆ ಬಂದಂತೆ, `ನಿನ್ಗೆ ಇದೆಲ್ಲಾ ಯಾಕೆ ಅರ್ಥ ಆಗ್ತಿಲ್ಲ. ನಿನ್ನಮ್ಮನಂಥ ಅದೆಷ್ಟು ಹೆಂಗಸರು ತೋಟದ ಕೆಲಸ, ಯಜಮಾನರ ಕಿರುಕುಳ, ತೋಳ ಕಣ್ಣುಗಳ ಹಿಂಬಾಲಿಕೆಯಿಂದ ನರಳಿದ್ದಾರೆ ಗೊತ್ತಿದೆಯಾ? ಬಾ ಸೂರಿ ಈ ದೊಡ್ಡ ಹೊಟ್ಟೆಯ, ಅಗಲ ಕುಂಡೆಯ ಒಡೆಯರನ್ನು ನಾವು ಕಲ್ತವರು ಮಟ್ಟ ಹಾಕ್ಬೇಕು. ನನ್ಗೆ ಗೊತ್ತಿರೋ ಗುಂಪೇ ಇದೆ. ನಾವು ಗುಟ್ಟಾಗಿ ಒಟ್ಟಾಗೋಣ. ಈ ಬಗ್ಗೆ ಓದೋಣ, ಏನು ಮಾಡ್ಬಹುದು ಅಂಥ ಚರ್ಚೆ ಮಾಡೋಣ ಬಾ. ಸಾಮಾಜಿಕ ಕ್ರಾಂತಿ ಆಗ್ಬೇಕು ಕ್ರಾಂತಿ. ಇಲ್ದಿದ್ರೆ ಇನ್ ಐನೂರು ವರ್ಷವೂ ಹಾಗೇ ದುಡಿಯೋರ ಮುಂದೆ ಹೊಡೆಯೋರು ಹುಟ್ತಾನೇ ಹೋಗ್ತಾರೆ' ಎಂದು ನನ್ನ ಭುಜ ಹಿಡಿದು ಹೇಳಿದ.
ಆದರೆ ನನ್ನ ಸಮಸ್ಯೆ ಇಂಥದ್ದಂತ ಇರಲಿಲ್ಲ. ನಾನು ಶ್ರೀಮಂತರನ್ನು ದೂರದಿಂದಲೇ ಕಂಡವನು. ಅವರ ಕಾರುಗಳನ್ನು ಪೇಟೆಯಲ್ಲಿ ಅವಕಾಶ ಸಿಕ್ಕಾಗ ಸವರಿದವನು. ಅಮ್ಮನ ಕೈ ಹಿಡಿದುಕೊಂಡು ಪೇಟೆಯಲ್ಲಿ ಓಡಾಡುವಾಗ ಕಾರಿನ ಗ್ಲಾಸು ಇಳಿಸಿ ಕೈ ಸನ್ನೆಯಲ್ಲೇ ಎಳನೀರಿನವನನ್ನು ಕರೆಯುವ ಯಜಮಾನರ ಬಗ್ಗೆ ನನಗೆ ಏನೂ ಅನ್ನಿಸುತ್ತಿರಲಿಲ್ಲ. ಹಾಗೆ ನನ್ನನ್ನೂ ಕರೆದರೆ ನನ್ನ ಅನಿಸಿಕೆ ಏನಾಗಿರುತ್ತಿತ್ತು, ನನಗೆ ಆಲೋಚನೆ ಬಂದಿಲ್ಲ. ನನ್ನ ಪ್ರಕಾರ ಎಲ್ಲಾ ಅಪ್ಪಂದಿರ ಎದುರು ನಿಂತ ಒಂಟಿ ಅಮ್ಮನೇ ಅತಿ ದೊಡ್ಡ ಸಮಸ್ಯೆ. ಅಪ್ಪಂದಿರೆಲ್ಲಾ ನನ್ನ ಮಟ್ಟಿಗೆ ಘಾತುಕರು. ನ್ಯಾಯಬೆಲೆ ಅಂಗಡಿಯ ಮುಂದೆ ಸಾಲು ನಿಲ್ಲುವ ಗಂಡಸರಲ್ಲಿ ಬಡವರಾದರೇನು, ಶ್ರೀಮಂತರಾದರೇನು? ಅವರೆಲ್ಲಾ ಜಾತ್ಯಾತೀತ, ವರ್ಗಾತೀತವಾದ ಅಪ್ಪಂದಿರು. ಅಪ್ಪಂದಿರ ವಿರುದ್ಧ ಒಂದು ವ್ಯವಸ್ಥಿತ ಕ್ರಾಂತಿ ಮಾಡಬೇಕೆಂದರೆ ನಾನು ಮೊದಲು ಒಪ್ಪಿಕೊಳ್ಳುತ್ತಿದ್ದೆನೇನೋ? ಯೋಚಿಸಿ ತಲೆ ತಿರುಗಿತು. `ಅಚ್ಯುತ, ನನಗಿದೆಲ್ಲಾ ಸರಿ ಕಾಣುತ್ತಿಲ್ಲ, ಯೋಚಿಸಿ ಹೇಳುತ್ತೇನೆ' ಎಂದು ಹೇಳಿ ಓಡುವ ನಡುಗೆಯಲ್ಲಿ ಮನೆಗೆ ಬಂದುಬಿಟ್ಟೆ. ಅದೇ ಕೊನೆ ಮತ್ತವನು ಸಿಗಲಿಲ್ಲ. ಒಂದೆರಡು ಬಾರಿ ತಡೆಯದೇ ಅವನ ಮನೆಗೆ ಹೋಗಿ ಬಂದೆನಾದರೂ `ಅವನಿಲ್ಲ, ಏನೋ ಕೆಲಸದಲ್ಲಿದ್ದಾನೆ' ಎಂಬ ಉತ್ತರ ಬಂತು.
ಮನೆಯಲ್ಲಿ ಅಮ್ಮ ಮತ್ತೆ ಮೊದಲಿನಂತೆ ಇದ್ದಳು. ಅಪ್ಪ ಮನೆಗೆ ಬಂದು ಹೋದ ಮೊದಲಿದ್ದ ನಿರ್ವಿಣ್ಣತೆ. ಕೆಲಸದ ನಡುವೆ ಬಿಡುವು ಮಾಡಿಕೊಂಡು ನನ್ನ ವಿಚಾರಿಸುವುದು ನಡೆದಿತ್ತು. ಈಗ ನನಗೆ ಜವಾಬ್ದಾರಿಯ ಹೊರೆಯಿತ್ತು. ಅಮ್ಮನನ್ನು ಮನೆ ಕೆಲಸಕ್ಕೆ ಸೀಮಿತ ಮಾಡಿ ನಾನು ತೋಟ, ಗದ್ದೆ, ಪೇಟೆ ನೋಡಿಕೊಳ್ಳತೊಡಗಿದೆ. ಕೆಲಸ ಆಲೋಚನೆ ಮರೆಸಿತು, ಅಮ್ಮನೂ ನನ್ನ ಕೆಲಸದಲ್ಲಿ ತನ್ನ ನೆಮ್ಮದಿ ಹುಡುಕಿಕೊಂಡಂತಿತ್ತು. ಬೀಸಿ ಬರುವ ತೆಳು ತಂಗಾಳಿಗೆ ಇಡೀ ಶ್ರಮದ ಬೆವರು ಒಣಗುತ್ತಿತ್ತು. ಒಂದು ದಿನ ಅಮ್ಮನನ್ನು ಕೇಳಿದೆ, `ಎಲ್ಲಿ ಅಮ್ಮ, ಅಪ್ಪ?' ಅವಳು ಥಟಕ್ಕನೆ ನನ್ನ ನೋಡಿದಳು. ಅವಳ ಕಣ್ಣಲ್ಲಿ ನನ್ನದೇ ಪ್ರಶ್ನೆ ಇದ್ದಂತೆ ಕಂಡಿತು.
ಹೌದು, ಅವಳು ಮದುವೆಯಾದ ಕೆಲವೇ ವರ್ಷಗಳಲ್ಲಿ ತನ್ನ ಗಂಡನ ಸುಳಿವನ್ನು ತಪ್ಪಿಸಿಕೊಂಡಳು. ಆಮೇಲೆ ಬಂದಿದ್ದು ಒಂದೋ ಎರಡೋ ಬಾರಿ. ಆದರೆ ಅವನ ಸಾನ್ನಿಧ್ಯದ ಕೆಲವೇ ಕ್ಷಣವನ್ನು ಅವುಚಿ ಹಿಡಿದುಕೊಂಡು ಬಾಳ್ವೆಯ ತಂತಿಯ ಮೇಲೆ ಅದೆಷ್ಟು ದಿನ ದೂಡಿದಳು? ಆತ ಬಂದಾಗ ಅವಳು ಏನು ಕೇಳಿದಳು? ಕೇಳಿದ್ದನ್ನು ಕೇಳಿಸಿಕೊಳ್ಳುವ ಮನಃಸ್ಥಿತಿಯಲ್ಲಿ ಅವನಿದ್ದನೇ? ನಾನಷ್ಟೇ ಆ ಪ್ರಶ್ನೆ ಕೇಳಿಕೊಂಡು ಹೀಗೆಲ್ಲಾ ಆಲೋಚನೆ ಮಾಡಿದೆ.
ಅಮ್ಮ ಸುಮ್ಮನೆ ಎದ್ದು ಕೆಲಸಕ್ಕೆ ನಡೆದಳು. ಮತ್ತೆ ಯಾವತ್ತೂ ನಾನು ಪ್ರಶ್ನೆ ಕೇಳುವ ಸಾಹಸಕ್ಕೆ ಕೈ ಹಾಕಲಿಲ್ಲ.
ಈ ಎಲ್ಲಾ ಸಂಕೀರ್ಣ ದಿನಚರಿಯನ್ನು ಗುಡಿಸಿ ಒಗೆಯುವಂತೆ ಒಂದು ಘಟನೆ ನಡೆದುಹೋಯಿತು. ವಿಷಯ ತಿಳಿದಾಗ ನಾನು ತೋಟದಲ್ಲಿದ್ದೆ. ವಿಷಯ ಹೇಳಿದ್ದು ಕೆಲಸದ ಮಂಜ. ನಾನು ಅಮ್ಮನಿಗೆ ಹೇಳುವುದೋ ಬೇಡವೋ ಎಂಬ ಸಂದಿಗ್ಧಕ್ಕೆ ಬಿದ್ದೆ. ನನಗೆ ಮತ್ತು ನನ್ನಮ್ಮನಿಗೆ ಇದು ಜೀವನಪೂರ್ತಿ ಎದುರು ನಿಲ್ಲಬಹುದಾದ ಘಟನೆಯಾಗಿತ್ತು. ನಾನು ಕೇಳಿದೆ, `ಎಲ್ಲಿದೆ?' ಮಂಜ ಹೇಳಿದ, `ಅಲ್ಲಿ ಶಿವಪ್ಪರ ದರಕಾಸ್ತಿದೆಯಲಾ ಅದರ ಮೇಲೆ'. `ಎಷ್ಟು ಹೊತ್ತಿಗೆ ಆಗಿದ್ದು?' ನಾನು ಕೇಳಿದೆ. `ಬಹುಶಃ ಬೆಳಿಗ್ಗೆ ಆಗಿದ್ದಿರಬೇಕು, ನನಗೆ ಶಿವಪ್ಪನೋರ ಕೆಲಸದೋನು ಹೇಳಿದ' ಎಂದ ಮಂಜ.
ನಾನು ಬರಬರನೆ ಟವೆಲ್ಲು ಹೆಗಲ ಮೇಲೆ ಹಾಕ್ಕೊಂಡು ಓಡಿದೆ. ತೋಟ ದಾಟಿ ರಸ್ತೆ ಬಂತು. ರಸ್ತೆ ಕಳೆದರೆ ಏರಿ. ಅಲ್ಲಿಂದ ಅರ್ಧ ಫರ್ಲಾಂಗ್ ನಡೆದರೆ ಶಿವಪ್ಪರ ದರಕಾಸ್ತು. ಅಲ್ಲಾಗಲೇ ಜನ ಸೇರಿದ್ದರು. ನಾನು ಎಲ್ಲಿ ಬಿದ್ದೆ, ಎಲ್ಲಿ ಎದ್ದೆ, ಎಲ್ಲಿ ಮುಗ್ಗರಿಸಿದೆ ಎಂಬುದನ್ನು ಎಣಿಸದೇ ಜನರನ್ನು ತಳ್ಳಿಕೊಂಡು ಓಡಿದೆ. ಹೋಗಿ ನಿಂತರೆ ಕಾಡುಕೋಣಗಳನ್ನು ಗುಂಡು ಹೊಡೆದು ಮಲಗಿಸಿದಂತೆ ಎರಡು ಹೆಣವನ್ನು ಮಲಗಿಸಲಾಗಿತ್ತು. ನೋಡಿದರೆ ಒಂದು, ಬೀರುವಿನ ಫೋಟೋದಲ್ಲಿ ಅಮ್ಮನ ಜತೆ ಮುಖ ಅಡಿಯಾಗಿ ಮಲಗಿದವನು. ಮತ್ತೊಬ್ಬ, `ನಿನ್ನಮ್ಮನಂಥ ಅದೆಷ್ಟು ಹೆಂಗಸರ ಮೊಲೆಗಳು ಜೋತು ಬಿದ್ದಿದ್ದಾವೆ ಗೊತ್ತಾ' ಎಂದವನು. ಒಬ್ಬನನ್ನು ಬದುಕಿಡೀ ದ್ವೇಷಿಸಿದೆ, ಅವನನ್ನು ಈ ಜಗತ್ತು ನನ್ನಪ್ಪನೆಂದು ಗುರುತಿಸಿದೆ. ಮತ್ತೊಬ್ಬನನ್ನು ನಾನು ಇಡಿಯಾಗಿ ಪ್ರೀತಿಸಿದೆ, ಅವನ್ನು ಈ ಜಗತ್ತು ಏನು ತಿಳಿದಿದೆಯೋ ಗೊತ್ತಿಲ್ಲ.
ಈ ಹಿ೦ದೆ ಉದಯವಾಣಿಯಲ್ಲಿ ಓದಿದ್ದೆ. ಈಗ್ಲೂ ಓದಿದೆ.ಈ ಕಥೆ ಓದಿ almost ಕಣ್ಣೀರು ಬ೦ದಿತ್ತು.
ReplyDeleteಮನೆಗೆ ಹೋದಾಗಲೆಲ್ಲ ನಾನು ಹಳೆ ಉದಯವಾಣಿಗಳೆಲ್ಲವನ್ನು ತಿರುಗಿಸಿ 'ವಿಕಾಸ್' ಕಥೆ/ಕವನಗಳೆಲ್ಲವನ್ನು ಓದುತ್ತಾ ಇರ್ತೇನೆ :)