Saturday, October 25, 2008

ನೀ ಬಂದು ನಿಂದಿಲ್ಲಿ ದೀಪ ಹಚ್ಚಾ

ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ  ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್‌ ಲೈಟ್‌ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ'ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್‌ಫ್ಯೂಸ್‌. `ವಾಟ್ಸ್‌ ದಿ ಆಯಿಲ್‌ ಯಾರ್‌'. ಎಣ್ಣೆ ಎರೆದು ತಲೆ ಮೀಸಲು ಮೊಮ್ಮಗ ಕುಳಿತುಕೊಳ್ಳುತ್ತಿಲ್ಲ, ಮಗನಿಗೆ ಪ್ರಾಜೆಕ್ಟ್‌ ಕೆಲಸ ಇನ್ನೂ ಮುಗಿದಿಲ್ಲ. ಸೊಸೆಗೆ ಇಂಪಾರ್ಟೆಂಟ್‌ ಮೀಟಿಂಗ್‌ ಇದೆ.
ಪ್ರತಿ ದೀಪಾವಳಿಗೆ ದೇಶದಲ್ಲಿ ಏನೋ ಆಗುತ್ತದೆ. ಈ ಸಲ ಬಾಂಬ್‌ ಹೊಟ್ಟುತ್ತಿರುವ ಸುದ್ದಿ, ಕರ್ನಾಟಕವೇ ಬಾಂಬ್‌ ತಯಾರಿ ಕಾರ್ಖಾನೆಯಾಗುತ್ತಿರುವ ಸುದ್ದಿ. ಬಾಂಬ್‌ ಹೊಟ್ಟಿಸುವ ಕೆಲಸ ಮಾಡುವವರಿಗೆ ಪಟಾಕಿ ಹೊಡೆಯಲು ಟೈಂ ಇಲ್ಲ, ಸುರ್‌ಸುರ್‌ ಬತ್ತಿಯಂಥ ನಿರುಪದ್ರವಿ ಬೆಳಕು, ಹಣತೆಯೆಂಬ `ತಮಸೋಮಾ ಜೋತಿರ್ಗಮಯ' ನೆನಪು, ಹೂರಣ ಹೋಳಿಗೆಯೆಂಬ ಸಿಹಿ ಹಾರೈಸುವ ತಿನಿಸು... ಯಾರಿಗೂ ಬೇಡ. ಈ ನಡುವೆ ಮತಾಂತರ ಚರ್ಚೆಯೂ ಕರ್ನಾಟಕದಲ್ಲಿ ಸೇರಿಕೊಂಡಿದೆ.
ಹಾಗೆ ನೋಡಿದರೆ ಪೇಟೆಗೆ ಹಬ್ಬ ಎಂದರೆ ಒಂದು ಅಥವಾ ಎರಡು ದಿನದ ರಜೆ. ರಜೆಯಲ್ಲಿ ಟೀವಿಯ ಕಾರ್ಯಕ್ರಮಗಳು. ಹೊಚ್ಚ ಹೊಸತೆಂದು ಹೇಳಿಕೊಂಡು ಪ್ರಸಾರ ಮಾಡುವ ಹಳೆಯದಾದ ಸಿನಿಮಾಗಳನ್ನು, ಹಬ್ಬವನ್ನು ಸುಳ್ಳು ಸುಳ್ಳೇ ವಿವರಿಸಿ ಸಂಭ್ರಮಿಸುವ ನಾಯಕ, ನಾಯಕಿಯರನ್ನೂ, ಸಿಂಗರಿಸಿಕೊಂಡು ಬರುವ ನಿರೂಪಕ/ಕಿಯರನ್ನೂ, ಹಬ್ಬ ಎಂಬ ಹೆಸರನ್ನು ದಿನಕ್ಕೆ ನೂರಾರು ಸಲ ಹೇಳಿಕೊಂಡು ಓಡಾಡುವ ಉದ್ಘೋಷಕರನ್ನೂ ನಾವು ಬೈದುಕೊಳ್ಳದೇ ಸ್ವಾಗತಿಸುತ್ತಿರುತ್ತೇವೆ. ನಮ್ಮ ಈ ನಿರ್ಭಾವುಕ ಹಬ್ಬಾಚರಣೆಯೇ ನಿಧಾನವಾಗಿ ನಮ್ಮನ್ನು ಎಲ್ಲಾ ವಿಚಾರದಲ್ಲೂ ನಿರ್ಭಾವುಕವಾಗಿಸುತ್ತಾ ಹೋಗುತ್ತದಾ ಎಂದು ಗಾಬರಿಯಾಗುತ್ತದೆ.
ಹಾಗೆ ನೋಡಿದರೆ ಹಬ್ಬಕ್ಕೆ ಹಳ್ಳಿ ಸೂಕ್ತ ಸ್ಥಳ. ಅಲ್ಲಿ ಆಚರಣೆಗಳು ಒಂದು ಮಟ್ಟಿಗೆ ಭಾವುಕವಾಗಿರುತ್ತವೆ. ಮಲೆನಾಡಿನ ಹಳ್ಳಿಗಳಲ್ಲಿ ನರಕಚತುರ್ದಶಿಯಂದು ಎಲ್ಲರಿಗೂ ಎಣ್ಣೆಸ್ನಾನ ಮಾಡಿಸಲಾಗುತ್ತದೆ. ಗಂಡನಿಗೂ, ಮಕ್ಕಳಿಗೂ ಅಮ್ಮ ಎಣ್ಣೆ ಎರೆದು ನೀರೆರೆಯುತ್ತಾಳೆ. ಇನ್ನೂ ಹರಿದಿರದ ಬೆಳಕಿನಲ್ಲಿ, ಬಚ್ಚಲೊಲೆಯ ಬೆಂಕಿಯ ಕೆಂಬಣ್ಣದ ಎರಕದಲ್ಲಿ, ಹಬೆಯಲ್ಲಿ, ಬೆಚ್ಚನೆಯ ಅಮ್ಮ ಮತ್ತು ನೀರಿನ ಸಂಗದಲ್ಲಿ ನಾವೆಲ್ಲಾ ಹಬ್ಬಕ್ಕಾಗಿ ಸದ್ದಿಲ್ಲದೇ ಮೈಚಳಿ ಬಿಟ್ಟು ರೆಡಿಯಾಗಿಬಿಟ್ಟಿರುತ್ತೇವೆ.
ಆಮೇಲೆ ಅಮ್ಮನ ಹಿಂದು ಮುಂದಿನಲ್ಲಿ ಮಕ್ಕಳಿಗೆಲ್ಲಾ ಓಡಾಟ. ಅಮ್ಮ ಗಂಗೆ ತಂದು, ದೇವರ ಪೀಠದಲ್ಲಿ ಪ್ರತಿಷ್ಠಾಪನೆ ಮಾಡುತ್ತಾಳೆ. ಅಲ್ಲಿಂದ ಅಡುಗೆ ಮನೆಯಲ್ಲಿ ಸುವಾಸನೆಯ ಸಪ್ಪಳ, ಅಪ್ಪ ಅಣ್ಣನದು ಹಬ್ಬಕ್ಕೆ ಮಾವಿನೆಲೆ, ಗಿಲಿಗಿಚ್ಚೆ ಕಾಯಿ, ಉಗ್ಗಣೆ ಕಾಯಿ, ಪಚ್ಚೆತೆನೆ, ಸಿಂಗಾರ, ಅಡಿಕೆಕಾಯಿಗಳನ್ನು ತರುವ ಕೆಲಸ. ಮನೆ ಖಾದ್ಯಗಳಿಂದಲೂ, ಮಾವಿನೆಲೆ ಎಂಬಿತ್ಯಾದಿ ಸುಗಂಧದ್ರವ್ಯಗಳಿಂದಲೂ ಕೂಡಿಕೊಂಡು ಮುಂದೆ ಬರಲಿರುವ ದೀಪಾವಳಿ ಹಬ್ಬಕ್ಕೆ ಒಳ್ಳೆಯ `ಓಪನಿಂಗ್‌'ಅನ್ನು ದಯಪಾಲಿಸಿರುತ್ತದೆ.
ಬಲಿಪಾಡ್ಯಮಿ ಇನ್ನೂ ಸಂಭ್ರಮದ ಗಳಿಗೆ. ಮನೆಯಲ್ಲಿ ಸಂಭ್ರಮ ಇಮ್ಮಡಿ. ಬಾಗಿಲಲ್ಲಿ `ಕೆರ್ಕ' ಇಡುವುದಕ್ಕೆ ಎಲ್ಲರೂ ನಾ ಮುಂದು ತಾಮುಂದು. ಅಡಿಕೆ ಕಾಯಿಯನ್ನು ಮಣ್ಣ ಮುದ್ದೆಯ ಆಧಾರದಲ್ಲಿ ಬಾಗಿಲಿನ ಎರಡೂ ಕಡೆ ಇಟ್ಟು ಪಕ್ಕದಲ್ಲಿ ಒಂದು ಚಂಡು ಹೂವನ್ನು ಇಡುತ್ತಾರೆ. ಇದರ ಜೊತೆಗೆ ಮನೆಯ ಪೀಠೋಪಕರಣಗಳನ್ನೆಲ್ಲಾ ತೊಳೆದು, ಬೇಸಾಯದ ಹತ್ಯಾರಗಳನ್ನೆಲ್ಲಾ ಒಂದೆಡೆ ಜೋಡಿಸಿ `ಬಲೀಂದ್ರ' ಕೂರಿಸುತ್ತಾರೆ. ಅದಕ್ಕೆಲ್ಲಾ ಪೂಜೆ ಪುನಸ್ಕಾರಗಳ ಅರ್ಪಣೆ.
ಈ ಹಂತದಲ್ಲಿ ಹೊಸ ಬಟ್ಟೆ, ಹೊಸ ಮುಗುಳ್ನಗೆ, ನೆಲದಲ್ಲಿ ಚಕ್ರ, ಬಿರುಸಿನ ಕುಡಿಕೆ, ಕಿವಿಯಲ್ಲಿ ದೊಡ್ಡ ಪಟಾಕಿ, ಕಣ್ಣಲ್ಲಿ ನಕ್ಷತ್ರ ಕಡ್ಡಿ, ಮೂಗಲ್ಲಿ ದೀಪದೆಣ್ಣೆ, ಹೋಳಿಗೆ, ಬತ್ತಿ ಕಮಟು, ಪಟಾಕಿ ಹೊಗೆಗಳ ಸಮ್ಮಿಶ್ರ ಸುಗಂಧ. ಮಧ್ಯಾಹ್ನ ಹೊಟ್ಟೆ ಬಿರಿಯೆ ಉಂಡು, ಸಣ್ಣ ನಿದ್ರೆಗೆ ಜಾರಿ, ಎದ್ದು, ಹಬ್ಬ ಕಳಿಸಿ, `ದಿಪ್‌ ದಿಪ್‌ ಹೋಳಿಗೆ' ಎಂದು ಕೂಗಿ, ಪುಂಡಿಕೋಲಿನ ಮೇಲೆ ಎಣ್ಣೆಯ ಬಟ್ಟೆಯನ್ನಿಟ್ಟು ದೀಪ ಬೆಳಗಿ ಹಬ್ಬವನ್ನು ಬೀಳ್ಕೊಡಲಾಗುತ್ತದೆ.
ಎಲ್ಲಾ ಆದ ರಾತ್ರಿ ಮಾಡಿಗೆ ಆಕಾಶಬುಟ್ಟಿ, ನೆಲದ ಮೇಲೆ ಪಟಾಕಿ ಸಿಡಿತ, ಹೊಸ್ತಿಲಲ್ಲಿ ಹಣತೆ ಸಾಲು, ಮಕ್ಕಳ ಮುಖದ ಮೇಲೆ ದೀಪೋತ್ಸವ, ಅಮ್ಮನ ಕಣ್ಣಲ್ಲಿ ಮಿನುಗೆಲೆ ಮಿನುಗೆಲೆ ನಕ್ಷತ್ರ. ಹಳ್ಳಿಗೆ ಹಬ್ಬವೇ ಸಂಭ್ರಮ. ಪೇಟೆಗೆ ಹಬ್ಬವೊಂದು ಬಿಟ್ಟು ಮಿಕ್ಕೆಲ್ಲಾ ದಿನ ಸಡಗರ. ಎಣ್ಣೆ ಬಾಟಲಿಯಲ್ಲಿದ್ದಾಗ ಉತ್ಸವ, ಹೊಟೇಲ್‌ನಲ್ಲಿ ಹಬ್ಬದಡುಗೆ ಸಿಗುವಷ್ಟು ಹೊತ್ತು ಅಮ್ಮಂದಿರಿಗೆ ಉತ್ಸಾಹ, ಟೀವಿಯಲ್ಲಿ ಹ್ಯಾರಿ ಪಾಟರ್‌ ಇರುವಷ್ಟು ದಿನ ಮಕ್ಕಳಿಗೆ ಹರಿದಿನ.
***
ಹಬ್ಬ ಹಳ್ಳಿಯಿಂದ ಪೇಟೆಗೂ ಹಬ್ಬಲಿ. ಆಗ `ಹಬ್ಬ' ನಾಮಪದವಾಗಿದ್ದು ಕ್ರಿಯಾಪದವೂ ಆಗಿ ನಿಲ್ಲಲಿ.
ಪ್ರೀತಿಯ ಕರೆ ಕೇಳಿ
ಆತ್ಮನ ಮೊರೆ ಕೇಳಿ
ನೀ ಬಂದು ನಿಂದಿಲ್ಲಿ ದೀಪ ಹಚ್ಚಾ
ನಲ್ಲೆ ನೀ ಬಂದದ್ದು
ಮುಡಿಪಾಗಿ ನಿಂದದ್ದು
ಸೋತ ಉರಿ ಹೇಳಲೇ ದೀಪ ಹಚ್ಚಾ
ಬಾನಿನಂಗಳದಲ್ಲಿ
ಚುಕ್ಕಿ ಹೊಳೆದೆಸೆದಂತೆ
ನನ್ನ ಮನದಂಗಳದಿ ದೀಪ ಹಚ್ಚಾ
ವಿಶ್ವ ಮೋಹಿತ ಕಿರಣ
ವಿವಿಧಶ ವಿಶ್ವಾಭರಣ
ಆನಂದದ ಹೊಂಗಿರಣ ದೀಪ ಹಚ್ಚಾ

4 comments:

  1. ಗೆಳೆಯಾ ಬರೀ ದೀಪಕ್ಕಷ್ಟೇ ಅಲ್ಲ,ಜೀವವೂ ಕಕ್ಕಾಬಿಕ್ಕಿಯಾಗಿದೆ,ಬದುಕುವ ದಾರಿ ಕಾಣದೆ ಶೇರು ಪೇಟೆಯ ಅಂಕಗಳಂತೆ ಜೀವದ ಭರವಸೆಯೂ ಕೆಳಕ್ಕಿಳಿಯುತ್ತಿದೆ, ಬೆಳಕು ಬದುಕಾಗಬೇಕು,ಆದರೆ ಕತ್ತಲೆಯೆ ಬೆಳಕ ಭ್ರಮೆ ಹುಟ್ಟಿಸುತ್ತಿದೆ.
    ಕಾರ್ತೀಕವೆ,ನೀನೇನೋ ಬಂದೆ,
    ಬೆಳಕ ಬದಲು ಭೀತಿ ತಂದೆ,
    ಒಲ್ಲೆ ನಿನ್ನ ಅನ್ನಲು ನಾನ್ಯಾರು?
    ನಿನ್ನಂತೆಯೇ ಕಾಲದ ಕಾಣದ ಕೈಯ
    ತೊಗಲು ಬೊಂಬೆ,ಬಾ ಎಣ್ಣೆಯಿಲ್ಲದ ದೀಪ
    ಕಣ್ಣ ಕುಡಿಗಳಲ್ಲಿ ಅಷ್ಟೇ ಸಣ್ಣಗೆ ಭರವಸೆಯ ಬೆಳಕು
    ಚಿಮ್ಮಿಸಿ ನಿನಗಾಗಿ ಕಾಯುವೆ, ಬಹುಶ: ನಿನ್ನ ಬೆಳಕಿನಲ್ಲಿ
    ಅದು ಮತ್ತಷ್ಟು ಉಜ್ವಲವಾಗಿ ಹೊಳೆಯಬಹುದೇ?

    ReplyDelete
  2. [...] ತಮಸೋಮಾ ಜೋತಿರ್ಗಮಯ.. ನೀ ಬಂದು ನಿಂದಿಲ್ಲಿ ದೀಪ ಹಚ್ಚಾ [...]

    ReplyDelete
  3. ಡಿಸೈನ್ ಡಿಸೈನಿನ ಹಣತೆಗಳು ಸಿಗುತ್ತಿವೆ ಮಾರ್ಕೆಟ್ಟಿನ ಅಂಗಡಿಗಳಲ್ಲಿ...ಆದರೆ ಅಮ್ಮ ಜತನದಿಂದ ತೆಗೆದಿಟ್ಟ, ಹಲವು ದೀಪಾವಳಿಗಳಲ್ಲಿ ಹಚ್ಚಿ ಕಪ್ಪಾದ ಮೂತಿಯ ಮಣ್ಣಿನ ತಿಬಿಲೆಗಳ ಘಮ,ಆಪ್ತತೆ ಇಲ್ಲಿನ styailish ಹಣತೆಗಳಲ್ಲಿ ಇಣುಕುವುದಿಲ್ಲ...ಮಹಾನಗರಗಳಲ್ಲಂತೂ ಬದುಕೇ ಮಾರ್ಕೆಟ್ಟು. ನಾವಿಲ್ಲಿ ಕಳೆದುಕೊಂಡದ್ದು ತಿಬಿಲೆಯ ಜ್ಯೋತಿಯ ಸುತ್ತಲಿರುವ ಸುಂದರ ಪ್ರಭಾವಳಿಯನ್ನು ಕಣ್ಣು ತುಂಬಿಕೊಳ್ಳುವ ಮನಸ್ಸನ್ನ.

    ReplyDelete
  4. ಯಾಕೋ ಸ್ವಾಮಿ, ಪೇಟೆಯಲ್ಲಿರುವವರ ಹಬ್ಬದ ಆಚರಣೆ ಬಗ್ಗೆ ಬರೆದದ್ದು ನಂಗೆ ಸರಿ ಕಾಣಲಿಲ್ಲ. ನಾನು ಪೇಟೆಯವಳೆ. ನನಗೆ ಪರಿಚಯವಿರುವ ಎಲ್ಲರೂ ಊರಿನ ತರಹವೇ ತಮ್ಮ ಕೈನಲ್ಲಿ ಆದಷ್ಟು ಸಂಪ್ರದಾಯ ಮಾಡ್ತಾರೆ. ಇನ್ನೂ ಇಲ್ಲೇ ಸ್ವಂತ ಮನೆಯಿದ್ದವರು ದೇವರನ್ನು ಕೂರಿಸಿ ಪಕ್ಕಾ ಊರ ಕಡೆ ಹಬ್ಬ ಮಾಡ್ತಾರೆ. ನೀವು ಬರೆದದ್ದು ಅಲ್ಟ್ರಾ ಮಾರ್ಡ್‌ನ್ ಎಂದು ಕರೆದು ಕೊಳ್ಳ ಬಯಸುವ ಫ್ಯಾಮೆಲಿಗಳಿರಬಹುದು!
    ಇನ್ನು, ಮಲೆನಾಡಿನ ಹಳ್ಳಿಗಳ ಮನೆಗಳಲ್ಲಿ ಇರುವ ವಾತಾವರಣ, ಮನೆ ಮುಂದಿನ ವಿಶಾಲ ಅಂಗಳ, ಮಂದ ಬೆಳಕಿನ ದೇವರ ಕೋಣೆ, ಮರದ ಅಟ್ಟ, ಹಳೆ ಕಾಲದ ಹಿತ್ತಾಳೆ-ತಾಮ್ರದ ಪಾತ್ರೆಗಳು........ ಇತ್ಯಾದಿ ಪೇಟೆಯಲ್ಲಿನ ಮಧ್ಯಮ ವರ್ಗದ ಮನೆಗಳಲ್ಲಿ ಕಾಣ ಸಿಗದು. ( ಹಳೆ ಮನೆಗಳನ್ನು ಒಡೆದು ಕಾಂಕ್ರೀಟ್ ಮಾಡದಿದ್ದಲ್ಲಿ, ಹಳೆ ಪಾತ್ರೆಗಳನ್ನು ಗುಜುರಿಗೆ ಕೊಡದಿದ್ದಲ್ಲಿ )
    ಇವರಿಬ್ಬರ ಹಬ್ಬದ ಆಚರಣೆಯ ಮನಸ್ಥಿತಿಯಲ್ಲಿ ಅಷ್ಟೆಲ್ಲಾ ವ್ಯತ್ತಾಸ ನನಗನಿಸುವುದಿಲ್ಲ.

    ReplyDelete