ಪವರ್‌ಕಟ್‌ನ ನಂತರ
ಬೆಳಗಿದ ಬಲ್ಬೇ,
ಹೊತ್ತಿಕೊಂಡ ಸ್ಟೆಬಿಲೈಜರ್ ದೀಪವೇ
ಕರೆಂಟ್ ಹೋದ ಕೂಡಲೇ
ಆರಿಸಬಾರದಿತ್ತೇ
ಎಂದು ಬೈಸಿಕೊಳ್ಳುತ್ತಾ
ಪಕ್ಕನೆ ಬೆಳಕಾದ ಟೀವಿ ಪರದೆಯೇ,
ಅಡುಗೆ ಮನೆಯ
ಎಲೆಕ್ಟ್ರಿಕ್ ಒಲೆಯೇ,
ಕೋಣೆಯೊಳಗಿನ ಕಂಪ್ಯೂಟರ್ರೇ...
ನಿನ್ನ ದೀಪಾವಳಿಗೆ ನನ್ನ ಶುಭಾಶಯಗಳು
***
ಅಮ್ಮಾ ಪಟಾಕಿ ಸಿಡಿಯಿತು
ಪಟಾಕಿ ಹೊಡೀತೀನಿ
ಎನ್ನುತ್ತಾ ಒಳಬರುವ ಮಗನೇ,
ಒಳಗೆ ಆಗಷ್ಟೇ ಪ್ರತ್ಯಕ್ಷವಾದ ಕತ್ತಲೇ,
ಕಣ್ಣಲ್ಲಿ
ಈಗ ತಾನೇ ಟೀವಿಯಲ್ಲಿ ತೋರಿಸಿದ
ಬಾಂಬ್ ಪಟಾಕಿ ಹೊಡೆದ ಹೊಗೆಯ ಚಿತ್ತಾರವೇ,
ಪೇಪರ್‌ನಲ್ಲಿ
ಪಟಾಕಿಯಂತೆ ಸಿಡಿದ
ಸಿಡಿಮದ್ದಿನ
ಮಧ್ಯೆ
ಸಿಡಿದು ಹೋದ ಬದುಕುಗಳೇ,
ಈ ನಿಮ್ಮ ಹಬ್ಬ ಹೇಗಿತ್ತು?
***
ಆಫೀಸಿನಲ್ಲಿ
ಎರಡು ದಿನ ಕೇಳಿದ್ದಕ್ಕೆ
ಒಂದೇ ದಿನ ಸಿಕ್ಕ ಹಬ್ಬದ ರಜೆಯೇ,
ಸಿಕ್ಕ ಒಂದು ದಿನದ
ರಜೆಯೂ
ಕಸ ಗುಡಿಸುತ್ತಾ, ಬಟ್ಟೆ ತೊಳೆಯುತ್ತಾ
ಟೀವಿಯಲ್ಲಿ ಸಿನಿಮಾ ನೋಡುತ್ತಾ
ಮಧ್ಯಾಹ್ನದ ಹೊತ್ತಿಗೆ ಹೊಟೆಲ್‌ನಲ್ಲೂ
ಸಂಜೆಯ ಹೊತ್ತಿಗೆ ಪಿವಿಆರ್‌ನಲ್ಲೂ
ರಾತ್ರಿ ತಾರೆಗಳ `ಲೈವ್` ಮಾತುಕತೆಯಲ್ಲೂ
ಕಳೆಯುತ್ತಿರುವ ಆಯುಷ್ಯವೇ,
ಅಂದಹಾಗೆ
ಹಬ್ಬಕ್ಕೆ ನೀವೆಲ್ಲಾ ಎಲ್ಲಿ ಹೋಗಿದ್ದಿರಿ?
***
ಬೆಳಿಗ್ಗೆ ಕಸದ ಗಾಡಿಗೆ
ಬಿದ್ದ ಪಾರ್ಸೆಲ್‌ನ ಪಳೆಯುಳಿಕೆಯೇ,
ದೇವಸ್ಥಾನದ ಹೊರಗೆ ಬಿದ್ದ
ಹಳೆಹೂವು, ಊದುಬತ್ತಿ ಕಡ್ಡಿ
ಕುಂಕುಮಧೂಳು, ಅರಿಶಿಣ ಪುಡಿಯೇ,
ಕಸ ಹಾಕುವವನು
ಆಚೆ ಈಚೆ ನೋಡಿ ಎತ್ತಿಕೊಂಡ
ಸಿಡಿದಿರದ ಪಟಾಕಿ ಸರವೇ,
ಆಸ್ಪತ್ರೆಯ ಹಾಸಿಗೆ ಮೇಲೆ
ಕಣ್ಣಿಗೆ ಬ್ಯಾಂಡೇಜ್ ಕಟ್ಟಿಕೊಂಡು
ಮಲಗಿದ ಪುಟಾಣಿ ಕಂದನೇ,
ಹೇಗಿತ್ತು ನಿನ್ನ ನಿನ್ನೆಯ ಹಬ್ಬ?
No comments:
Post a Comment