Saturday, October 11, 2008

ಮೌನವಾಗಿರು ಸಾಕು, ಮಾತು ಬಿಸಾಕು

ಇತ್ತೀಚೆಗೆ ಮುಂಬೈನಲ್ಲಿ ಬಾಂಬ್‌ ಬ್ಲಾಸ್ಟ್‌ ಆದ ಹೊತ್ತಿಗೆ ನಟ ಅಭಿಷೇಕ್‌ ಬಚ್ಚನ್‌ಗೆ ಶೂಟಿಂಗ್‌ ಇತ್ತಂತೆ. ಆದರೆ ಬ್ಲಾಸ್ಟ್‌ ಪ್ರೀತ್ಯರ್ಥವಾಗಿ ಒಂದು ವಾರದ ಶೂಟಿಂಗ್‌ ರದ್ದಾಯಿತಂತೆ.
`ಹಾಗಾಗಿ ನನಗೆ ಅಚಾನಕ್‌ ರಜೆ ಸಿಕ್ಕಿತು. ಯಾವಾಗಲೂ ಬರೀ ಕೆಲಸ ಕೆಲಸ ಶೂಟಿಂಗೇ ಆಗಿತ್ತು. ಈ ಬ್ಲಾಸ್ಟ್‌ ರಜೆಯ ಕಾಲದಲ್ಲಿ ನಾನು ನನ್ನ ಸಂಸಾರದ ಜೊತೆ ಕಾಲ ಕಳೆದೆ'
-ಹೀಗೆಂದು ಅಭಿಷೇಕ್‌ ಬಚ್ಚನ್‌ `ಖುಷಿ ಖುಷಿ'ಯಾಗಿ ಹೇಳಿಕೊಂಡಿದ್ದನ್ನು ಇತ್ತೀಚೆಗೆ ಪತ್ರಿಕೆಯೊಂದರ ಪಟ್ಟಣ ಪುರವಣಿಯೊಂದು ಅಷ್ಟೇ ಖುಷಿಯಿಂದ ಪ್ರಕಟಿಸಿತ್ತು. ವರದಿ ಓದಿ ಕೆಲವರಾದರೂ ಗಾಬರಿಯಾದಾರು. ಅಂದರೆ ರಜೆ ಸಿಕ್ಕಿತು ಎಂಬ ಕಾರಣಕ್ಕೆ ಅಭಿಷೇಕ್‌ ಖುಷಿಪಡುತ್ತಾ, ಅದೇ ಹೊತ್ತಿಗೆ ಬಾಂಬ್‌ ಬ್ಲಾಸ್ಟ್‌ನ ಬೇಜಾರನ್ನು ಲೆಕ್ಕಕ್ಕೂ ತೆಗೆದುಕೊಳ್ಳದೇ ಮಾತಾಡಿದ. ಅದನ್ನು ವರದಿಗಾರ/ರ್ತಿ ಅಷ್ಟೇ ನಿರ್ಭಾವುಕವಾಗಿ ವರದಿ ಮಾಡಿದ್ದ/ಳು. ಎಷ್ಟೋ ಓದುಗರು ಅದನ್ನು ಓದುವಾಗ `ಬಿಟ್ವೀನ್‌ ದಿ ಲೈನ್‌' ಅರ್ಥ ಮಾಡಿಕೊಂಡಿರಲೇ ಇಲ್ಲ.
ಹಾಗಾದರೆ ನಮಗೆ ಬಾಂಬ್‌ ಬ್ಲಾಸ್ಟ್‌ ಕೂಡ ಒಂದು ಸುದ್ದಿ ಅಷ್ಟೇ ಆಗುತ್ತಿರಬಹುದು. ನಗರ ನಗರಗಳ ಬಾಂಬ್‌ ಸೋಟ ರಜೆಯನ್ನು ದಯಪಾಲಿಸುವ ಒಂದು `ಜಯಂತಿ'ಯೋ, `ಡೇ'ನೋ ಆಗುತ್ತಿರಬಹುದು. `ದಿನಾ ಸಾಯುವನಿಗೆ ಅಳುವವರ್ಯಾರು' ಎಂಬ ಅಮಾನವೀಯ ಗಾದೆಯೊಂದು ಇವತ್ತು ಸತ್ಯವೇ ಆಗುತ್ತಿದೆ, ಫ್ಲ್ಯಾಷ್‌ ನ್ಯೂಸ್‌ಗಳು ಯಾರೊಳಗೂ ಯಾವ ಮಾನವೀಯತೆಯನ್ನೂ ಫ್ಲ್ಯಾಷ್‌ ಮಾಡುತ್ತಿಲ್ಲ.
ಒಂದು ಕಾಲಕ್ಕೆ (ಅಥವಾ ಈಗಲೂ) ಶಾಲೆಗಳಿಗೆ ಹೋಗುತ್ತಿರುವ ಹೊತ್ತಿಗೆ ಮಳೆ ಜಾಸ್ತಿಯಾಗಲಿ ಒಂದು ವಾರ ರಜೆ ಕೊಡಲಿ ಎಂದು ಆಶಿಸುತ್ತಾ ಮಕ್ಕಳು ಮನೆಯಲ್ಲಿ ಒಳಗೂ ಹೊರಗೂ ಓಡಾಡುತ್ತಿದ್ದರು. `ಸಂಕ ದಾಟುವುದಕ್ಕೆ ಆಗಬಾರದು' ಎಂದು ಆಶಿಸುತ್ತಿದ್ದರು. `ಯಾರಾದರೂ ಸಂಕದಲ್ಲಿ ಬೀಳಲಿ' ಎಂದು ಕೆಲವು ಕಿಡಿಗೇಡಿಗಳು ಮನಸಲ್ಲೇ ಅಂದುಕೊಳ್ಳುತ್ತಿದ್ದರು. ಮಾಷ್ಟ್ರಿಗೆ ಹುಷಾರಿರದಿರಲಿ, ಯಾರಿಗಾದರೂ ಏನಾದರೂ ಆಗಲಿ ಎಂದು ಆಶಿಸುತ್ತಾ ರಜೆಯನ್ನು ಕೋರಿ ಮಕ್ಕಳು ಪ್ರಾರ್ಥಿಸುತ್ತಿದ್ದರು.
ಇದೆಲ್ಲಾ ಕಿರಿಯರ ಅರಿಯದ ಅಪರಾಧ.
ಆದರೆ ನಾವೆಲ್ಲಾ ಈಗ ಹಾಗೇ ಆಗುತ್ತಿದ್ದೇವೆ. ಮಾತುಗಳು ನಮಗೆ ಗೊತ್ತಿಲ್ಲದೇ ಅಮಾನವೀಯವಾಗುತ್ತಿದೆ. ದಿನ ದಿನಕ್ಕೂ ಅಮಾನವೀಯವಾಗುತ್ತಿರುವ ನಮ್ಮ ಮನಃಸ್ಥಿತಿಯನ್ನು ಮಾತುಗಳು ತೋರ್ಪಡಿಸುತ್ತಿವೆ. ಯಾರಾದರೂ ಸತ್ತರೆ ಒಂದು ನಿಮಿಷದ ಮೌನ ಆಚರಿಸುವುದು ನಮ್ಮೊಳಗಿನ ಅಪದ್ಧ ಮಾತುಗಳನ್ನು ನಿಯಂತ್ರಿಸಕೊಳ್ಳಲು ಇರಬೇಕು ಎಂದು ಈಗ ಅನಿಸುತ್ತಿದೆ.
ಮಾತು ಮೌನವಾಗಬೇಕು. ಮಾನವ ಮಾನವೀಯವಾಗಬೇಕು.
***
ಅಭಿಷೇಕ್‌ ಬಚ್ಚನ್‌ ಮಾತುಗಳಿಗೆ ಸಂವಾದಿಯಾಗಿ ಇತ್ತೀಚೆಗೆ ಒಬ್ಬ ವ್ಯಕ್ತಿಗೂ ಇಂಥ ಘಟನೆ ನಡೆಯಿತು. ಆ ವ್ಯಕ್ತಿ ಕವಿತೆಯೊಂದನ್ನು ಬರೆದಿದ್ದ. ಅದು ಚೆನ್ನಾಗಿತ್ತು ಎಂಬುದು ಸುಮಾರು ಮಂದಿಯ ಮೆಚ್ಚುಗೆ. ಆಗಷ್ಟೇ ಬಾಂಬ್‌ ಬ್ಲಾಸ್ಟ್‌ ಆಗಿದ್ದರಿಂದ ಆ ಕವಿತೆಯೂ ಅದೇ ಬಾಂಬ್‌ ಬ್ಲಾಷ್ಟ್‌ ಬಗ್ಗೆ ಇದ್ದಿದ್ದರಿಂದ ಆ ಮೆಚ್ಚುಗೆ.
ಇನ್ಯಾರೋ ಅಲ್ಲಿದ್ದವರು ಹೇಳಿದರು: ನಾವು ಇನ್ನೊಂದು ಅಂಥ ಕವಿತೆ ಬರೆಯುತ್ತೀರಿ ಅಂತ ಕಾಯುತ್ತಿದ್ದೇವೆ.
ಮತ್ತೊಬ್ಬರು ಕೂಡಲೇ ಹೇಳಿದರು: ಅಂದರೆ ಮತ್ತೊಮ್ಮೆ ಬಾಂಬ್‌ ಬ್ಲಾಷ್ಟ್‌ ಆಗಲಿ, ಅದನ್ನು ನೋಡಿ ಕವಿಮನ ನೋಯಲಿ, ಇನ್ನೊಂದು ಅಂಥ ಕವಿತೆ ಬರೆಯಲಿ ಅಂತಾನಾ?
ಈಗ ಹೇಳಿ, ನಮ್ಮ ಮಾತಿಗೆ ಏನೇನು ಅರ್ಥಗಳಿರುತ್ತವೆ ಅಥವಾ ಮಾತಿನ ಅಡಿಯಲ್ಲಿ ಎಷ್ಟು ಮೌನ ಅಪರಾಧಗಳು, ಪಾಪಗಳು ಅಡಗಿ ಕುಳಿತಿರುತ್ತವೆ?

2 comments: