Wednesday, February 6, 2008

ಚಾಪ್ಲಿನ್ ಬದಲಾದ!

ಚಾಪ್ಲಿನ್‌ಗೆ ತಾನು ನಿರ್ದೇಶಕನಾಗಿ, ಕತೆಗಾರನಾಗಿ ಯಾವತ್ತಾದರೂ ಬದಲಾಗಬೇಕು ಅಂತ ಅನಿಸಿತ್ತೋ ಇಲ್ಲವೋ ಗೊತ್ತಿಲ್ಲ. ಹಾಗೇನಾದರೂ ಹಾಗೇ ಅನಿಸಿದ್ದರೆ, ಆತ ಬದಲಾಗುವುದಕ್ಕೆ ಏನೇನು ಮಾಡಿದನೋ ಅದು ಗೊತ್ತಿಲ್ಲ. ಒಂದು ಪಕ್ಷ ಅವನಿಗೆ ಬದಲಾಗಬೇಕು ಎಂದು ದಟ್ಟವಾಗಿ ಅನಿಸಿದರೆ ಮತ್ತು ಆತ ಬದಲಾದರೆ ಹೇಗೆ? ಎಂಬ ಕಲ್ಪನೆ ಬಂದಾಗ ಹೊಳೆದಿದ್ದೇ ಈ ಕತೆ. ಕತೆಯಾದ್ದರಿಂದ ಇಲ್ಲಿ ಕಲ್ಪನೆಗೆ ಹೆಚ್ಚು ಜಾಗ. ಇಲ್ಲಿ ಆತ್ಮಚರಿತ್ರೆಯ ಅಂಶಗಳಿಲ್ಲ. ಆದರೆ, ಚರಿತ್ರೆಯ ಅಂಶಗಳಂತೂ ಖಂಡಿತಾ ಇದೆ. ಕಲ್ಪನೆ, ಚರಿತ್ರೆ ಎಲ್ಲಾ ಒಟ್ಟುಗೊಡಿದಾಗ ಚಾಪ್ಲಿನ್ ಬದಲಾದ ...


ನ್ನು ಮೂರು ಗಂಟೆ ಹೊಡೆದರೆ ಆರಾಗುತ್ತದೆ. ಅಷ್ಟಾದರೂ ಆ ರಾತ್ರಿ ಚಾಪ್ಲಿನ್ ಕಣ್ಣುಗಳಿಗೆ ನಿದ್ದೆ ಹತ್ತಿಲಿಲ್ಲ. ‘ನಾನೇನು ಮಾಡುತ್ತಿದ್ದೇನೆ?’ ಎಂಬ ಪ್ರಶ್ನೆ ಹೊಳೆದ ಈ ೧೫ ರಾತ್ರಿಗಳಲ್ಲಿ ಚಾಪ್ಲಿನ್ ಮಲಗಿದ್ದು ಸ್ವಲ್ಪ ಕಡಿಮೆಯೇ ಸರಿ. ಆದರೂ ಇಷ್ಟು ರಾತ್ರಿಗಳಲ್ಲಿ ಆಯಾಸಕ್ಕಾದರೂ ಒಂದೆರೆಡು ತಾಸು ನಿದ್ದೆ ಹೀಗೆ ಬಂದು ಹಾಗೆ ಹೋಗುತಿತ್ತು. ಆದರೆ, ಇವತ್ತು ಅದೂ ಇಲ್ಲ.


‘ನಾನೇನು ಮಾಡುತ್ತಿದ್ದೇನೋ?’, ‘ನಾನೇನು ಮಾಡಬೇಕು?’ ಅಥವಾ ‘ನಾನೇನು ಮಾಡಬಹದು?’ ಎಂಬ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ಖಂಡಿತಾ ಕಷ್ಟವಲ್ಲ. ಆದರೆ, ಆ ಉತ್ತರ ಚಿತ್ರರಂಗದೆಡೆಗೆ ತನಗಿರುವ ನಂಬಿಕೆಯನ್ನೇ ತಿರುಚಿ ಹಾಕುವುದಾದರೇ ಅಂಥ ಉತ್ತರ ಬೇಕಾ? ಇದು ಚಾಪ್ಲಿನ್ ಪ್ರಶ್ನೆ. ಕಳೆದ ೧೫ ದಿನಗಳಿಂದ ಅವನು ಇದೇ ಬಗ್ಗೆ ಯೋಚಿಸುತ್ತಿದ್ದ. ಇಷ್ಟಕ್ಕೂ ಯಾರೋ ಅವನನ್ನು ಪುಸಲಾಯಿಸಿದ್ದಾಗಲೀ, ಕೆಣಕಿದ್ದಾಗಲೀ ಅಲ್ಲ. ಇದು ತನ್ನಿಂತಾನೇ ಅತ್ಯಂತ ಸಹಜವಾಗಿ ಮೂಡಿ ಬಂದ ಪ್ರಶ್ನೆ. ಇನ್ನೆಷ್ಟು ದಿನ ಇದೇ ಕಣ್ಣಾಮುಚ್ಚಾಲೆಯಾಟ? ಇನ್ನೆಷ್ಟು ದಿನ ಬಫೂನರಿ?



ಇವತ್ತು ಸಕಲ ಬಡವರ, ಧೀನರ, ಸಾಮಾನ್ಯ ಪ್ರಜೆಗಳ ಸಿಂಬಲ್ ಆಗಿ ಚಾರ್ಲಿ ಎಂಬ ಟ್ರಾಂಪ್ ರೂಪುಗೊಂಡಿದ್ದಾನೆ. ಹಾಗಾದರೆ ಚಾಪ್ಲಿನ್‌ಗೆ ಚಾರ್ಲಿ ಹೊರತಾದ ಅಸ್ತಿತ್ವವೇ ಇಲ್ಲವೇ? ಚಾಪ್ಲಿನ್‌ನನ್ನು ಒಂದೇ ಸಮನೆ ಚಾರ್ಲಿಯಾಗಿ, ಟ್ರಾಂಪ್ ಆಗಿ ನೋಡಿರುವ ಜನರಿಗೆ ಸಾಕಾಗಿಲ್ಲವೇ? ಮೂಕ ಜಗತ್ತಿನ ಪಿಸುಮಾತಾಗಿರುವ ತನಗೆ ಕೊನೆಯವರೆಗೂ ಮಾತೇ ಬರುವುದಿಲ್ಲವೇ? ... ಹೀಗೆ ಪ್ರಶ್ನೆ ಮೇಲೆ ಪ್ರಶ್ನೆ. ಜಗತ್ತಿನಾದ್ಯಂತ ಹೊಸ ಹೊಸ ತಂತ್ರಜ್ಞಾನವನ್ನ, ಹೊಸ ಹೊಸ ಶೈಲಿಯ ಸಿನಿಮಾಗಳನ್ನ ಜನ ನಿರ್ಮಿಸುತ್ತಿರುವಾಗ ತಾನಿನ್ನೂ ಎಷ್ಟು ದಿನ ಅದೇ ಬಫೂನರಿ ಮಾಡುತ್ತಾ ಕೂಡುವುದು? ಇಟಲಿಯಂಥ ದೇಶ ಎರಡನೆಯ ಮಹಾಯುದ್ಧದಲ್ಲಿ ಸುಸ್ತಾಗಿ ಕುಳಿತಿರುವಾಗ, ಅಲ್ಲೊಬ್ಬ ವಿಕ್ಟೋರಿಯಾ ಡಿಸಿಕ್ಕಾ ಎಂಬೋನು ‘ದಿ ಬೈಸಿಕಲ್ ಥೀಪ್’ ಎಂಬ ಚಿತ್ರ ಮಾಡುತ್ತಾನೆ. ಜಾಗತಿಕ ಸಿನಿಮಾರಂಗದಲ್ಲಿ ಮಿಂಚುತ್ತಾನೆ. ಇನ್ನೆಲ್ಲೋ ಜಪಾನ್‌ನಲ್ಲಿ ಅಕಿರಾ ಕುರೋಸಾವಾ ಅಂತೆ. ಅವನು ‘ರೋಶೋಮನ್’ ತರಹದ ವಿಭಿನ್ನ ನೆಲೆಯ ಸಿನಿಮಾ ಮಾಡುತ್ತಾನಂತೆ. ಅಷ್ಟೇಕೆ ಹಾಲಿವುಡ್‌ನಲ್ಲೇ ಆರ್ಸನ್ ವೆಲ್ಲೀಸ್. ಆಲ್ಫ್ರೆಡ್ ಹಿಚ್‌ಕಾಕ್, ಡೇವಿಡ್ ಲೀನ್, ವಿಲಿಯಂ ವೈಲರ್, ಸೆಸಿಲ್ ಬಿ. ಡೆಮಿಲ್ ಮುಂತಾದವರು ಒಂದೇ ಸಮನೆ ಬೇರೆ ಬೇರೆ ತರಹದ ಚಿತ್ರಗಳನ್ನು ಮಾಡುತ್ತಿದ್ದಾರೆ.

ಆದರೆ, ತಾನು? ಅದೇ ಟ್ರಾಂಪ್, ಅದೇ ದುಃಖ ... ‘ದಿ ಗ್ರೇಟ್ ಡಿಕ್ಟೇಟರ್’ ತನ್ನ ಕಡೆಯ ಅತ್ಯುತ್ತಮ ಚಿತ್ರವಾಗಿ ಬಿಡುತ್ತದಾ? ಇಷ್ಟಕ್ಕೇ ತನ್ನ ತಲೆ ಖಾಲಿಯಾಯಿತಾ? ಸಿಗರೇಟ್ ಬಟ್ ಕೈಸುಡುವವರೆಗೂ ಪ್ರಶ್ನೆ ಮೇಲೆ ಪ್ರಶ್ನೆ.ಆ ಬಟ್ ತನ್ನ ಕೈಯ್ಯಷ್ಟೇ ಸುಟ್ಟಿದ್ದಲ್ಲ. ತನ್ನ ಯೋಚನೆಯನ್ನೂ ಸುಟ್ಟು ಹಾಕಿತು. ಇಲ್ಲ ನನ್ನ ತಲೆ ಮಾತ್ರ ಖಾಲಿಯಾಗಿಲ್ಲ. ಖಚಿತಪಡಿಸಿಕೊಂಡ ಚಾಪ್ಲಿನ್. ತನಗೆ ವಯಸ್ಸಾಗಿರಬಹುದು, ಹಿಂದಿನ ತೀಕ್ಷ್ಣತೆ ಸ್ವಲ್ಪ ಕಡಿಮೆಯಾಗಿರಬಹುದು. ಆದರೆ, ಚಾಪ್ಲಿನ್ ಈಸ್ ಚಾಪ್ಲಿನ್. ಇಷ್ಟು ದಿನ ಮೂಕಿ ಬಿಟ್ಟು ಟಾಕಿ ಚಿತ್ರ ಮಾಡು ಅಂತ ನನಗೆ ಬುದ್ಧಿ ಹೇಳಿದವರೆಷ್ಟೋ ಮಂದಿ. ಮೌನಕ್ಕಿರುವ ತಾಖತ್ತು ನಾಲಗೆಗಿಲ್ಲ ಎಂದು ನಾನೇ ಸುಮ್ಮನಿದ್ದೆ. ಇಲ್ಲ ಹಾಗೆ ಯೋಚಿಸಿದವನು ಹೀಗೂ ಯೋಚಿಸುವುದಕ್ಕೂ ಸಾಧ್ಯ. ಮಾತು, ಶಬ್ಧಗಳನ್ನಿಟ್ಟುಕೊಂಡೇ ಒಂದು ಚಿತ್ರ ಮಾಡುತ್ತೇನೆ. ಚಾಪ್ಲಿನ್ ಚಾರ್ಲಿಗಷ್ಟೇ ಸೀಮಿತವಲ್ಲ ಎಂದು ತೋರಿಸುತ್ತೇನೆ.

ಅಷ್ಟು ಯೋಚಿಸಿದ್ದ ಚಾಪ್ಲಿನ್‌ಗೆ ತನ್ನ ಕಲ್ಪನೆಗೆ ಎಂಥಾ ಚಿತ್ರ ಮಾಡಬೇಕೆಂದು ಖಚಿತವಾಗಿತ್ತು. ಆ ಬಗ್ಗೆ ಹಿಂದೆಯೇ ಯೋಚಿಸಿದ್ದ. ಒಂದೊಮ್ಮೆ ಲಂಡನ್‌ಗೆ ಹೋದಾಗ, ಪ್ರಧಾನಿ ವಿನ್‌ಸ್ಟನ್ ಚರ್ಚಿಲ್ ಲೈಬ್ರರಿಗೆ ಹೋದಾಗ, ಅಲ್ಲಿ ನೆಪೋಲಿಯನ್ ಬಗ್ಗೆ ಸಾಕಷ್ಟು ಪುಸ್ತಕಗಳನ್ನು ನೋಡಿದಾಗ, ಚಾಪ್ಲಿನ್ ನೀವೇಕೆ ನೆಪೋಲಿಯನ್ ಬಗ್ಗೆ ಒಂದು ಚಿತ್ರ ಮಾಡಬರದ್ರೀ ಅಂತ ಚರ್ಚಿಲ್ ಪುಕ್ಕಟ್ಟೆ ಸಲಹೆ ಇಟ್ಟಾಗ ...ಆಗಲೇ ಚಾಪ್ಲಿನ್‌ಗೆ ಯಾವಾಗಲೊಮ್ಮೆ ನೆಪೋಲಿಯನ್ ಬಗ್ಗೆ ಚಿತ್ರ ಮಾಡಬೇಕು ಅಂತನಿಸಿತ್ತು. ಆದರೆ, ಚರ್ಚಿಲ್, ಚಾಪ್ಲಿನ್‌ನನ್ನು ಗಮನದಲ್ಲಿಟ್ಟುಕೊಂಡು ಕಾಮಿಡಿ ಚಿತ್ರ ಮಾಡಿ ಎಂದು ಸಲಹೆ ಮಾಡಿದ್ದರು. ಚಾಪ್ಲಿನ್‌ಗೆ ಕಾಮಿಡಿ ಚಿತ್ರ ಮಾಡುವುದು ಉಗುರು ಕಚ್ಚಿ ಬಿಸಾಡಿದಷ್ಟೇ ಸುಲಭ. ಆದರೆ, ಬೇಡ. ಈ ಸಾರಿ ಕಾಮಿಡಿ ಬೇಡ. ಚಿತ್ರರಂಗ ಹಿಂದಿನಂತೆ ಉಳಿದಿಲ್ಲ. ಶಬ್ಧ ಬಂದಿದೆ, ಕಲರ್ ಬಂದಿದೆ, ತಂತ್ರಜ್ಞಾನ ದಿನೇ ದಿನೇ ಪ್ರಖರವಾಗುತ್ತಿದೆ. ಇವೆಲ್ಲವನ್ನೂ ಇಟ್ಟುಕೊಂಡು ಒಂದು ದೊಡ್ಡ ಬಜೆಟ್ಟಿನ, ಗಂಭೀರವಾದಂಥ ಚಿತ್ರ ಮಾಡಿದರೆ ಹೇಗೆ?

ಈ ಪ್ರಶ್ನೆ ಏಳುತ್ತಿದ್ದಂತೆಯ ಚಾಪ್ಲಿನ್ ಬದಲಾಗಿ ಹೋದ. ಒಂದು ಚಿತ್ರದ ಚಿತ್ರಕತೆ ಮಾಡುವುದು ತನಗೆಂದಿಗೂ ಇಷ್ಟದ ಕೆಲಸವೇ. ಅದಕ್ಕಾಗಿ ಈ ಹಿಂದೆ ಎರಡು ರೀಲ್‌ಗಳ ಮೂಕಿ ಚಿತ್ರಕ್ಕಾಗಿಯೇ ತಿಂಗಳುಗಟ್ಟಲೆ ಕೆಲಸ ಮಾಡಿದ್ದು ಇದೆ. ಹಾಗಿರುವಾಗ ಇಂಥದೊಂದು ವರ್ಣಾರಂಜಿತ ಚಿತ್ರ ಮಾಡುವಾಗ? ಚಾಪ್ಲಿನ್ ತಾನಾಗಿಯೇ ಉಳಿಯಲಿಲ್ಲ. ಆತ ಮೊದಲು ಮಾಡಿದ ಕೆಲಸವೆಂದರೆ ಚಾರ್ಲಿಯನ್ನು ಮನಸ್ಸಿನಿಂದ ಕಿತ್ತು ಹಾಕಿದ್ದು. ಟ್ರಾಂಪ್ ಡ್ರೆಸ್ ಅನ್ನು ಅಟ್ಟದ ಮೇಲೆ ಎಸೆದಿದ್ದು. ಇವೆರೆಡೂ ಆಚೆ ಹೋಗುತ್ತಿದ್ದಂತೆಯ ಚಾಪ್ಲಿನ್ ಎದೆ ಭಾರ ಅರ್ಧ ಕಡಿಮೆಯಾಯಿತು. ಇನ್ನು ಸ್ಕ್ರಿಪ್ಟ್, ಚಿತ್ರೀಕರಣ ... ಎಂದು ಹಗಲು-ರಾತ್ರಿ ಮರೆತ. ಎಷ್ಟೋ ದಿನಗಳ ಮನೆಯಿಂದ ದೂರವಾದ. ಇದಕ್ಕೆ ಸರಿಯಾಗಿ, ಟಾಕಿ ಚಿತ್ರದ ಸಹವಾಸವೇ ಬೇಡ ಎನ್ನುತ್ತಿದ್ದವ, ಇಂಥದೊಂದು ಕಾನ್ಸಪ್ಟು ತಂದಿರುವಾಗ ಬಿಡುವುದುಂಟೆ ಎಂದು ಚಿತ್ರದ ನಿರ್ಮಾಪಕರಾದ ಯುನೈಟೆಡ್ ಆರ್ಟಿಸ್ಟ್ ಸಂಸ್ಥೆಯು ಚಾಪ್ಲಿನ್ ಕೇಳಿದಷ್ಟು ದುಡ್ಡು ಸುರಿಯುವುದಕ್ಕೆ ಒಪ್ಪಿಕೊಂಡಿತು.

ಇನ್ನೊಂದು ದಿನ ಮುಗಿದರೆ ೧೮೧ ದಿನಗಳ ಚಿತ್ರೀಕರಣ ಕೊನೆಗೂ ಖತಂ. ಅಷ್ಟರಲ್ಲಿ ಸುಸ್ತಾಗಿ ಹೋಗಿತ್ತು ಚಿತ್ರತಂಡ. ಇನ್ನೊಂದೆರೆಡು ದಿನ ಹೆಚ್ಚು ಕೂಡಾ ಚಾಪ್ಲಿನ್ ಜತೆ ಕೆಲಸ ಮಾಡುವುದಕ್ಕೆ ಯಾರೂ ಸಿದ್ಧರಿರಲಿಲ್ಲ. ಅಷ್ಟೊಂದು ಹೈರಾಣು ಮಾಡಿಸಿಬಿಟ್ಟಿದ್ದ ಚಾಪ್ಲಿನ್ ಅವರನ್ನ. ಹೊತ್ತು-ಗೊತ್ತು ಇಲ್ಲ, ಊಟ-ನಿದ್ರೆ ಇಲ್ಲ. ರಜವಂತೂ ದೇವರಾಣೆ ಕೊಟ್ಟಿರಲಿಲ್ಲ. ಯಾವಾಗ ಈ ಪಿಶಾಚಿ ಬೆನ್ನು ಬಿಡುತ್ತದೋ ಎಂದು ತುದಿಗಾಲಲ್ಲಿ ನಿಂತಿದ್ದರು ಬಹುತೇಕ ಚಿತ್ರತಂಡದವರು. ಹಾಗೆ ಲೆಕ್ಕ ಹಾಕುತ್ತಾ ಕುಳಿತಿದ್ದವರಿಗೆ ಕೊನೆಗೂ ಬಂತು ಕೊನೆಯ ದಿನ.

ಅವತ್ತು ಚಿತ್ರೀಕರಿಸಬೇಕಾಗಿದ್ದು ಹೆಚ್ಚೇನೂ ಇರಲಿಲ್ಲ. ಕ್ಲೈಮ್ಯಾಕ್ಸ್‌ನಲ್ಲಿ ಯುದ್ಧದ ದೃಶ್ಯಾವಳಿಯಾದ್ದರಿಂದ ಒಂದೆರೆಡು ಪ್ಯಾಚಪ್ ಶಾಟ್ಸ್‌ಗಳನ್ನು ಅವತ್ತು ಚಿತ್ರೀಕರಿಸಬೇಕು. ನೆಪೋಲಿಯನ್ ಕುದುರೆ ಮೇಲೆ ಕೂತು ಪೌರುಷದಿಂದ ಬರಬೇಕು. ಹಾಗೆ ಬರುತ್ತಾ ಬರುತ್ತಾ ಪಕ್ಕದಲ್ಲೇ ಅಷ್ಟೇ ವೇಗದಲ್ಲಿ ಬರುತ್ತಿರುವ ಸವಾರನ ಕುದುರೆ ಮೇಲೆ ಹಾರಿ ಕುಳಿತುಕೊಳ್ಳಬೇಕು. ಶಾಟ್ ಸ್ವಲ್ಪ ರಿಸ್ಕಿಯೆಂದು ಗೊತ್ತಾದಾಕ್ಷಣ ನಾಯಕ ಡ್ಯೂಪ್ ಕೇಳಿದ. ಇಷ್ಟವಿಲ್ಲದಿದ್ದರೂ ಚಾಪ್ಲಿನ್ ಅವನಿಗೊಂದು ಡ್ಯೂಪ್ ಹಾಕಿಸಿ ಚಿತ್ರೀಕರಣ ಪ್ರಾರಂಭಿಸಿದ.ದೂರದಲ್ಲಿ ಕ್ಯಾಮೆರಾ ಇಟ್ಟು ಪಕ್ಕದಲ್ಲೇ ನಿಂತ ಚಾಪ್ಲಿನ್. ಇಡೀ ತಂಡಕ್ಕೆ ಕೇಳಿಸುವಂತೆ ಸ್ಟಾರ್ಟ್, ಆಕ್ಷನ್ ... ಎಂದ. ಎರಡು ಕುದುರೆಗಳು ಒಂದೇ ಸ್ಪೀಡಿನಲ್ಲಿ ಚಲಿಸುವುದಕ್ಕೆ ಶುರು ಮಾಡಿದವು. ಒಂದು ಹಂತಕ್ಕೆ ಬರುತ್ತಿದ್ದಂತೆ, ನಾಯಕ ಅಥವಾ ಅವನ ಡ್ಯೂಪ್ ತನ್ನ ಕುದುರೆಯಿಂದ ಪಕ್ಕದಲ್ಲಿರುವ ಕುದುರೆಗೆ ಜಂಪ್ ಮಾಡಬೇಕು. ಅದಕ್ಕೆ ಡ್ಯೂಪ್ ತಯಾರಾಗ ತೊಡಗಿದ. ಅವನು ತನ್ನ ಬಲಗಾಲನ್ನು ಎತ್ತಿ ಇನ್ನೊಂದು ಪಕ್ಕಕ್ಕೆ ಹಾಕಿಕೊಂಡು ಪೊಸಿಷನ್ ತೆಗೆದುಕೊಂಡ. ತಂಡದ ಎಲ್ಲರಿಗೂ ಗಾಬರಿಯಿಂದ ಇದೇ ದೃಶ್ಯವನ್ನು ನೋಡುತ್ತಿದ್ದರು. ಅಷ್ಟರಲ್ಲಿ ಅದೇನು ಯಡವಟ್ಟಾಯಿತೋ ಗೊತ್ತಿಲ್ಲ. ಓಡುತ್ತಿದ್ದ ಕುದುರೆ ಕಾಲು ತಪ್ಪಿ ಮುಂದಕ್ಕೆ ಉರಳಿ ಬಿಟ್ಟಿತು. ಆಯ ತಪ್ಪಿದ ಡ್ಯೂಪ್ ಸಹ ವಿಚಿತ್ರ ರೀತಿಯಲ್ಲಿ ಎಸೆಯಲ್ಪಟ್ಟ. ಅವನು ನೆಲಕ್ಕೆ ಅಪ್ಪಳಿಸುವುದಕ್ಕೂ, ಕುದುರೆ ಬಿದ್ದು ಅವನ ಮೇಲೆ ಹೊರಳಿದ್ದಕ್ಕೂ ... ಇಬ್ಬರೂ ಸ್ಪಾಟ್ ಔಟ್.ಈ ದೃಶ್ಯ ನೋಡಿ ಸುಸ್ತಾಗಿ ಹೋದ ಚಾಪ್ಲಿನ್. ಇಂಥದೊಂದು ದುರ್ಘಟನೆ ನಡೆಯಬಹುದಾದ ಚಿಕ್ಕಾಸಿನ ಕಲ್ಪನೆಯೂ ಅವನಿಗಿರಲಿಲ್ಲ. ತನ್ನ ಇಷ್ಟೂ ವರ್ಷಗಳ ಸರ್ವೀಸಿನಲ್ಲಿ ಒಮ್ಮೆಯೂ ಹೀಗಾಗಿದ್ದಿಲ್ಲ.

ಇಂಥದೊಂದು ದುರ್ಘಟನೆ ಸಹಜವಾಗಿರಬಹುದು. ಆದರೆ, ಇಬ್ಬರು ಅಮಾಯಕರು ಹೆಣವಾಗಿದ್ದು? ಸಾವು ಸಾವೇ ಆದರೂ ಡ್ಯೂಪ್‌ನ ಸಂಬಂಧಿಕರಿಗೋ ಅಥವಾ ಸಂಬಂಧಪಟ್ಟವರಿಗೋ ಒಂದಿಷ್ಟು ಸಹಾಯಧನ ಕೊಟ್ಟು ಪ್ರಾಯಶ್ಚಿತ್ತ ಮಾಡಿಕೊಳ್ಳಬಹುದು. ಆದರೆ, ಆ ಕುದುರೆ? ತಾನೇನೆಂದುಕೊಂಡಿದ್ದೆನೋ ಅದೇ ನಿಜವಾಗಿ ಹೋಯಿತು. ಶೂಟಿಂಗ್ ಮುಗಿಸಿ ನ್ಯೂಯಾರ್ಕ್‌ಗೆ ವಾಪಸ್ಸಾಗುತ್ತಿದ್ದಂತೆಯೇ ತಾನೆಂಥಾ ತಪ್ಪು ಮಾಡಿಬಿಟ್ಟೆ ಎಂದು ಅವನಿಗೆ ಅರ್ಥವಾಯಿತು. ಪತ್ರಕರ್ತರು ಮುಗಿಬಿದ್ದರು. ಆಗದವರು ಬಾಯಿಗೆ ಬಂದ ಹಾಗೆ ಮಾತನಾಡಿದರು. ಹಿಂದೊಮ್ಮೆ ರಷ್ಯಾ ಪರವಾಗಿ ಮಾತಾಡಿದ್ದಕ್ಕೇ ಕಮ್ಯುನಿಸ್ಟ್ ಎಂದು ಹಣೆಪಟ್ಟಿ ಕಟ್ಟಿದ್ದವರೆಲ್ಲಾ ಮತ್ತೆ ಚುರುಕಾದರು, ಈ ಚಿತ್ರ ಯಾಕಪ್ಪಾ ಮಾಡಿದೆ ಎನ್ನುವಷ್ಟು ಚಾಪ್ಲಿನ್ ಸುಸ್ತಾಗುವಂತೆ ಮಾಡಿದರು. ಹೆಜ್ಜೆ ಹೆಜ್ಜೆಗೂ ತೊಂದರೆ, ಅಡಿಗಡಿಗೂ ನೋವು ...

ಇಷ್ಟೆಲ್ಲಾ ನೋವುಗಳ ಮಧ್ಯೆಯೂ ಚಿತ್ರದ ಮಿಕ್ಕ ಕೆಲಸಗಳನ್ನು ಮುಗಿಸಿದ ಚಾಪ್ಲಿನ್. ಬಿಡುಗಡೆಗೆ ಸಾಕಷ್ಟು ಒದ್ದಾಡಿ ಎಂಪೈರ್ ಚಿತ್ರಮಂದಿರದಲ್ಲಿ ‘ದಿ ಗ್ರೇಟ್ ಕಾಂಕ್ವರರ್’ ಬಿಡುಗಡೆ ಮಾಡಿದ. ‘ದಿ ಗ್ರೇಟ್ ಡಿಕ್ಟೇಟರ್’ ನಂತರದ ಬಹಳ ದೊಡ್ಡ ಹಾಗೂ ಜನಪ್ರಿಯ ಚಿತ್ರವಾಗಬಹುದೆಂಬ ನಂಬಿಕೆ ಎರಡನೆಯ ದಿನವೇ ಸುಳ್ಳಾಯಿತು. ಚಾಪ್ಲಿನ್ ಚಿತ್ರ ಮಾಡುತ್ತಾನೆಂದರೆ ಸಾಕು ಚಿತ್ರಮಂದಿರದತ್ತ ಬರುತ್ತಿದ್ದ ಜನ, ಈ ಚಿತ್ರಕ್ಕೆ ತಲೆ ಕೂಡಾ ಹಾಕಿ ಮಲಗಲಿಲ್ಲ. ಬಂದವರದ್ದೂ ನೂರೆಂಟು ತಪ್ಪು ಹುಡುಕಾಟ. ಯಾವ ಯುನೈಟೆಡ್ ಆರ್ಟಿಸ್ಟ್ಸ್ ಸಂಸ್ಥೆಯು ತನ್ನ ಖಜಾನೆ ಹೆಚ್ಚಿಸಿಕೊಳ್ಳಬಹುದೆಂದು ಚಾಪ್ಲಿನ್‌ಗೆ ಆ ಚಿತ್ರ ಮಾಡುವುದಕ್ಕೆ ಅವಕಾಶ ಕೊಟ್ಟಿತ್ತೋ, ಅದೇ ಶಾಪ ಹಾಕುವುದಕ್ಕೆ ಪ್ರಾರಂಭಿಸಿತು. ಬೋರ್ಡ್ ಮೆಂಬರ್‌ಗಳು ಚಾರ್ಲಿಯ ಬಗ್ಗೆ, ಅವನ ಸಾಮರ್ಥ್ಯದ ಮೇಲೆ ಅವನೆದುರಿಗೆ ಮಾತನಾಡಲಾರಂಭಿಸಿದರು, ಇದರಿಂದ ಭೂಮಿಗಿಳಿದು ಹೋದ ಚಾಪ್ಲಿನ್. ಅವನಿಗೆ ಎಲ್ಲಿ ಯಡವಟ್ಟಾಯಿತು ಎಂದೇ ಅರ್ಥವಾಗಲಿಲ್ಲ. ಪದೇ ಪದೇ ಆ ಚಿತ್ರವನ್ನು ನೋಡಿದ, ಇವು ತಪ್ಪುಗಳಿರಬಹುದೆಂದು ಅಂದಾಜು ಮಾಡಿದ. ಏನೇ ಮಾಡಿದರೂ, ತಾನೊಂದು ಡಬ್ಬಾ ಚಿತ್ರ ಮಾಡಿದ್ದೇನೆ ಅಂತ ಅವನಿಗನಿಸಲೇ ಇಲ್ಲ.

ಈ ನೋವಿನಿಂದ ಆಚೆ ಬರುವುದಕ್ಕೆ ಚಾಪ್ಲಿನ್‌ಗೆ ಆರು ತಿಂಗಳು ಬೇಕಾಯಿತು. ಸೋಲು, ನೋವು ಯಾವತ್ತೂ ಚಾಪ್ಲಿನ್‌ಗೆ ಹೊಸದಲ್ಲ. ಅವನೊಂಥರಾ ನೋವಿನ ಅಕ್ಷಯ ಪಾತ್ರೆಯೇ ಆಗಿದ್ದ. ಸ್ಪೆನ್ಸರ್ ಚಾಪ್ಲಿನ್, ಚಾರ್ಲಿ ಚಾಪ್ಲಿನ್ ಆಗುವವರೆಗೂ ಅನುಭವಿಸಿದ್ದು ಬರೀ ನೋವೇ. ಅದಾದ ಮೇಲೂ ಅಷ್ಟೇ. ತಂದೆ ಸಾಯುವುದನ್ನು ನೋಡಿದ್ದ, ತಾಯಿ ಹುಚ್ಚಾಸ್ಪತ್ರೆಯಲ್ಲಿ ನರಳುವುದನ್ನು ನೋಡಿದ್ದ, ತುತ್ತು ಅನ್ನಕ್ಕೂ ಭಿಕ್ಷೆ ಬೇಡಿದ್ದ ಚಾಪ್ಲಿನ್‌ಗೆ ಅವೆಲ್ಲದರ ಮುಂದೆ ಈ ನೋವು ದೊಡ್ದದಿರಲಿಲ್ಲ. ಆದರೆ, ಚಾಪ್ಲಿನ್ ಅಧೀರನಾಗಿದ್ದು ಜನರ ವರ್ತನೆಯಿಂದ. ಯಾರು ತನ್ನವರೆಂದು ಕೊಂಡಿದ್ದನೋ ಅವರೆಲ್ಲಾ ಕಾರಣಾಂತರಗಳಿಂದ ತಿರುಗಿ ಬಿದ್ದಿದ್ದರು. ಕೊಡಬಾರದ ಹಿಂಸೆ ಕೊಟ್ಟಿದ್ದರು. ಅವರನ್ನು ಸಮಾಧಾನ ಮಾಡುವುದು ಹೇಗೆ? ಅವರೊಂದಿಗೆ ಸೇಡು ತೀರಿಸಿಕೊಳ್ಳುವುದು ಹೇಗೆ? ಅವರಿಗೆ ಉತ್ತರ ಕೊಡುವುದು ಹೇಗೆ? ಚಾಪ್ಲಿನ್ ಪ್ರತಿ ರಾತ್ರಿ ಆರು ಗಂಟೆ ಯೋಚಿಸುತ್ತಿದ್ದ. ಯೋಚಿಸಿ, ಯೋಚಿಸಿ ಸುಸ್ತಾದಾಗ ಒಂದು ಗಂಟೆ ನಿದ್ದೆ ತೆಗೆಯುತ್ತಿದ್ದ.

ಈ ನೋವಿನಿಂದ ಹೊರಬರುವುದಕ್ಕೆ ಹೊಳೆದ ಉಪಾಯ ಇನ್ನೊಂದು ಚಿತ್ರ ನಿರ್ದೇಶಿಸುವುದು. ಮುಳ್ಳನ್ನು ಮುಳ್ಳಿನಿಂದಲೇ ತೆಗೆ ಎಂಬ ಮಾತು ಅವನು ಕೇಳದಿದ್ದೇನಲ್ಲಾ. ಸರಿ ಸಿನಿಮಾದಲ್ಲಿ ಸೋತಿದ್ದನ್ನು ಸಿನಿಮಾದಲ್ಲೇ ತೆಗೆಯಬೇಕು. ಅದು ಹಣವಾದರೂ ಸರಿ, ಗೌರವವಾದರೂ ಸರಿ. ಒಟ್ಟಿನಲ್ಲಿ ಒಂದು ವಿಭಿನ್ನ ಚಿತ್ರ ಕೊಟ್ಟು ಮತ್ತೆ ಎಲ್ಲರ ಬಾಯ್ಮುಚ್ಚಿಸಬೇಕು. ಈ ಬಾರಿಯ ಚಿತ್ರ ತನ್ನ ಹಿಂದಿನ ಎಲ್ಲಾ ಚಿತ್ರಗಳಿಗಿಂಥ ತುಂಬಾ ವಿಭಿನ್ನವಾಗಿರಬೇಕು ಎಂದು ಯೋಚಿಸಿದ ಚಾಪ್ಲಿನ್. ಈ ಬಾರಿ ನೋ ಸಂದೇಶ, ನೋ ವೇದಾಂತ, ನೋ ಉಪದೇಶ. ಚಿತ್ರ ಮನರಂಜನಾತ್ಮಕವಾಗಿರಬೇಕು. ಹೃದಯಕ್ಕಿಂತ ಹೆಚ್ಚಾಗಿ ಮೆದುಳಿಗೆ ತಗುಲಬೇಕು. ಜನ ಚುಜಿದಾಲಲ್ಲಿ ಕೂತು ಚಿತ್ರ ನೋಡಬೇಕು ...

ಈ ಯೋಚನೆಯಲ್ಲಿ ಸಿದ್ಧಪಡಿಸಿಟ್ಟುಕೊಂಡ ಕತೆ ‘ದಿ ಟಾರ್ಗೆಟ್’. ಎರಡನೆಯ ವಿಶ್ವಯುದ್ಧದ ಹಿನ್ನೆಲೆಯಲ್ಲಿ ಅಮೆರಿಕನ್ ಸ್ಪೈ ಒಬ್ಬನ ಕತೆಯನ್ನು ಈ ಚಿತ್ರದಲ್ಲಿ ಹೇಳಬೇಕೆಂದುಕೊಂಡ ಚಾಪ್ಲಿನ್. ಕ್ಷಣಕ್ಷಣಕ್ಕೂ ಕುತೂಹಲ, ಹತ್ತು ನಿಮಿಷಕ್ಕೊಂದು ತಿರುವು ... ಚಿತ್ರ ನೋಡುತ್ತಿದ್ದವರು ಬೆಚ್ಚಿ ಬೀಳಬೇಕು ಎಂದು ಆ ಕಾಲದಲ್ಲಾಗಿದ್ದು ಸಾಕಷ್ಟು ತಾಂತ್ರಿಕ ಬೆಳವಣಿಗೆಗಳನ್ನು ಈ ಚಿತ್ರದಲ್ಲಿ ಸಮರ್ಪಕವಾಗಿ ಬಳಸಿಕೊಳ್ಳಬೇಕೆಂದು ಚಾಪ್ಲಿನ್ ಬಯಸಿದ. ಮತ್ತೊಂದಿಷ್ಟು ದಿನಗಳ ಕಾಲ ಸತತ ಶ್ರಮ, ಶ್ರಮ, ಶ್ರಮ ...

ಸುಮಾರು ಆರು ತಿಂಗಳ ಕಾಲ ಸತತ ಕೆಲಸ ಮಾಡಿ ಮೊದಲ ಕಾಪಿ ತೆಗೆದಿಟ್ಟ ಚಾಪ್ಲಿನ್. ಚಿತ್ರ ನೋಡುತ್ತಿದ್ದಂತೆಯೇ ಇದು ಸೂಪರ್ ಹಿಟ್ ಆಗಲಿದೆ ಎಂದು ಅವನಿಗೆ ಖಾತ್ರಿಯಾಗಿ ಹೋಯಿತು. ಈ ಚಿತ್ರ ತನ್ನ ಹಿಂದಿನ ಎಲ್ಲಾ ಚಿತ್ರಗಳನ್ನು ಜನಪ್ರಿಯತೆ ಹಾಗೂ ಕಲೆಕ್ಷನ್ ವಿಷಯದಲ್ಲಿ ಅಡ್ಡಡ್ಡ ಮಲಗಿಸಿಬಿಡುತ್ತದೆ ಎಂದು ಅರ್ಥವಾಗಿ ಹೋಯಿತು. ಚಾಪ್ಲಿನ್ ಎಣಿಕೆ ಈ ಬಾರಿ ತಪ್ಪಲಿಲ್ಲ. ಚಿತ್ರ ಬಿಡುಗಡೆಯಾಯಿತು. ಮೊದಲ ಪ್ರದರ್ಶನದಿಂದಲೇ ಹೌಸ್‌ಫುಲ್. ಆ ಜನಪ್ರಿಯತೆ ಅದೆಲ್ಲಿಗೆ ಮುಟ್ಟಿತು ಎಂದರೆ ಬೇರೆ ಬೇರೆ ರಾಷ್ಟ್ರಗಳಲಲೂ ಆ ಚಿತ್ರಕ್ಕೆ ಭಾರೀ ಬೇಡಿಕೆ ...

ಇನ್ನು ಮೂರು ಗಂಟೆ ಹೊಡೆದರೆ ಆರಾಗುತ್ತದೆ. ಅಷ್ಟಾದರೂ ಆ ರಾತ್ರಿ ಚಾಪ್ಲಿನ್ ಕಣ್ಣುಗಳಿಗೆ ನಿದ್ದೆ ಹತ್ತಿಲಿಲ್ಲ. ‘ನಾನೇನು ಮಾಡುತ್ತಿದ್ದೇನೆ?’ ಎಂಬ ಪ್ರಶ್ನೆ ಇತ್ತೀಚಿನ ವರ್ಷಗಳಲ್ಲಿ ಎರಡನೆಯ ಬಾರಿಗೆ ಹೊಳೆದ ಈ ೧೫ ರಾತ್ರಿಗಳಲ್ಲಿ ಚಾಪ್ಲಿನ್ ಮಲಗಿದ್ದು ಸ್ವಲ್ಪ ಕಡಿಮೆಯೇ ಸರಿ. ಆದರೂ ಇಷ್ಟು ರಾತ್ರಿಗಳಲ್ಲಿ ಆಯಾಸಕ್ಕಾದರೂ ಒಂದೆರೆಡು ತಾಸು ನಿದ್ದೆ ಹೀಗೆ ಬಂದು ಹಾಗೆ ಹೋಗುತಿತ್ತು. ಆದರೆ, ಇವತ್ತು ಅದೂ ಇಲ್ಲ.

ಇದೆಂಥಾ ಹುಚ್ಚಾಟ? ನಾನೆಷ್ಟು ಬದಲಾಗಿ ಬಿಟ್ಟೆ. ಜನರನ್ನು ಕೂಡಿಸೋದಕ್ಕೆ ಮನರಂಜನೆ ಮುಖ್ಯ. ಆದರೆ, ಒಂದು ಚಿತ್ರದ ಉದ್ದೇಶ ಅಷ್ಟೇ ಅಲ್ಲ. ನಮ್ಮ ಸಾಮರ್ಥ್ಯಕ್ಕೆ ಮೀರಿದ, ಕಲ್ಪನೆಗೆ ನಿಲುಕದ, ಅನುಭವಕ್ಕೆ ಬರದ ಚಿತ್ರಗಳನ್ನು ಮಾಡಿದರೆ ಅದರಿಂದ ಏನು ಪ್ರಯೋಜನ? ಜನಕ್ಕೆ ಮನರಂಜನೆ ನೀಡುತ್ತಲೇ ಅವರಿಗೆ ದಿನನಿತ್ಯ ಕಷ್ಟ-ಸುಖಗಳನ್ನು ಹೇಳಬೇಕು. ಸುತ್ತಮುತ್ತಲಿನ ಪರಿಸರವನ್ನು ಬಿಚ್ಚಿಡಬೇಕು. ಎಷ್ಟೇ ಕಷ್ಟವಿದ್ದರೂ ಬದುಕು ಎಲ್ಲಕ್ಕಿಂತ ದೊಡ್ಡದು ಎಂದು ಚಿತ್ರಗಳು ಮೂಲಕ ಬಿಚ್ಚಿಡಬೇಕು. ಇಷ್ಟು ವರ್ಷಗಳ ಕಾಲ ನಾನು ಮಾಡಿದ್ದು ಅದನ್ನೇ. ಜನ ಮೆಚ್ಚಿದ್ದು ಅದನ್ನೇ. ಎಲ್ಲಕ್ಕಿಂತ ಹೆಚ್ಚಾಗಿ ನನ್ನ ಶಕ್ತಿಯೂ ಅದೇ. ಅದನ್ನೇ ಬಿಟ್ಟು ಈ ವಿಚಿತ್ರ ಚಿತ್ರಗಳನ್ನ ನಾನು ಮಾಡಬೇಕಾ?

ಬೇಡ. ತೀರ್ಮಾನಿಸಿದ ಚಾಪ್ಲಿನ್. ನಾನು ಮತ್ತೆ ಬದಲಾಗಬೇಕು. ಮತ್ತೆ ಬೆಳೆಯಬೇಕು. ಹೊಸ ಆಯಾಮ, ಕಲ್ಪನೆಗಳೊಂದಿಗೆ ವಾಪಸ್ಸು ಬರಬೇಕು. ತನಗೆ ನೋವು ಕೊಡುತ್ತಲೇ, ಬೇರೆಯವರನ್ನು ನಗಿಸಬೇಕು. ತಾನು ಅತ್ತರೂ ಬೇರೆಯವರನ್ನು ನಗಿಸುತ್ತಿರಬೇಕು. ಚಾಪ್ಲಿನ್ ಮನಸ್ಸಿಗೆ ಖುಷಿಯಾಯಿತು. ತಕ್ಷಣವೇ ತನ್ನ ಮುಂದಿನ ಚಿತ್ರಕ್ಕೊಂದು ಕತೆ, ಹೆಸರು ಹೊಳೆಯಿತು. ಅದು ‘ದಿ ಡ್ರೀಮರ್’. ಕನಸುಗಾರನ ಬಗ್ಗೆ ಕನಸು ಕಾಣುತ್ತಾ ಎಷ್ಟೋ ದಿನಗಳ ನಂತರ ನೆಮ್ಮದಿಯಾಗಿ ಮಲಗಿದ ಚಾಪ್ಲಿನ್.

ಅದು ಅವನ ಶ್ರೇಷ್ಠ ಚಿತ್ರವಾಯಿತು. ಏಕೆಂದರೆ ಅದನ್ನು ನಿರ್ದೇಶಿಸುವುದಕ್ಕೆ ಅವನು ಮತ್ತೆ ಏಳಲಿಲ್ಲ ...


 





1 comment: