Saturday, November 17, 2007

ನೀ ಕೊಡೆ ನಾ ಬಿಡೆ

ಕೊಡೆಯೆಂದರೆ ಬಾಲ್ಯ, ಕೊಡೆಯೆಂದರೆ ನೆನಪು, ಕೊಡೆಯೆಂದರೆ ತಾಯಿ, ಕೊumbrella1.jpgಡೆಯೇ ನಮ್ಮನು ಕಾಯಿ! ಮಲೆನಾಡಿನಿಂದ ಬಂದ ಎಲ್ಲಾ ಜನರ ಕನಸಲ್ಲೂ ಒಂದು ಕೊಡೆ ಇದ್ದೇ ಇದೆ. ಅದು ತೀವ್ರ ಗಾಳಿ ಬೀಸುವ ಗದ್ದೆ ಬಯಲಲ್ಲಿ ಆಚೆ ಈಚೆ ಮಗಚಿಕೊಳ್ಳುತ್ತಾ, ಕೆಲವೊಮ್ಮೆ ತಲೆ ಕೆಳಗಾಗುತ್ತಾ ನಮ್ಮನ್ನು ಹಿಂಬಾಲಿಸುತ್ತಿದೆ. ಮಲೆನಾಡಿನ ಕಡೆ ಈಗಲೂ ಬಿಚ್ಚಿಟ್ಟ ಕೊಡೆಗಳೆಲ್ಲಾ ಮನೆಯ ಜಗಲಿಯಲ್ಲಿ ರಾತ್ರಿ ಪೂರ್ತಿ ಗಾಳಿಗೆ ಒಣಗುತ್ತಾ, ಬೆಳಗಿನ ಎಳೆ ಬಿಸಿಲಿಗೆ ಕನಸು ಕಾಣುತ್ತಿವೆ. ಮಳೆಗಾಲ ಮುಗಿದು, ಚಳಿ ಪ್ರಾರಂಭವಾಗಿರುವಾಗ ಮಳೆಯ, ಮಳೆಗೆ ಹಿಡಿಯುವ ಕೊಡೆಯ ಮೇಲೆ ಒಂದು ಸಣ್ಣ ನೆನಪಿನ ಬರಹ.

 ನಾವೆಲ್ಲಾ ಹೈಸ್ಕೂಲ್‌ನಲ್ಲಿರುವಾಗ ಒಂದು ಪಾಠವಿತ್ತು. ಹೆಸರು `ಕೊಡೆ ಪುರಾಣ' ಇರಬೇಕು. ಬರೆದವರು ಪಡುಕೋಣೆ ರಮಾನಂದರಾಯರು. ಒಂದು ಲಲಿತ ಪ್ರಬಂಧವದು. ಕೊಡೆಯನ್ನು ಹೆಣ್ಣಿನಂತೆ ಹಾಗೆಂದು ಹೀಗೆಂದು ವರ್ಣಿಸುವ ಲೇಖಕರು ನಗೆಯುಕ್ಕುವಂತೆ ಕೊಡೆ ವ್ಯಾಖ್ಯಾನಕ್ಕೆ ತೊಡಗಿದ್ದರು. ಅಂತಿಮವಾಗಿ ಕೊಡೆಯನ್ನು `ತಾಯಿಯಂತೆ' ಎಂದು ಬಣ್ಣಿಸಿದಾಗಂತೂ ಆ ಲೇಖನದ ಔನ್ನತ್ಯ ಅರ್ಥವಾಗಿತ್ತು. ಆ ಲೇಖನದೊಂದಿಗೆ ಬಾಲ್ಯದ ಕೊಡೆ ಗೆಳೆತನದ ನೆನಪು ಆಗಾಗ ಹಸಿರಾಗಿದ್ದಿದೆ. ಕೊಡೆಯೆಂದರೆ ಎಲ್ಲರಿಗೂ ತಂತಮ್ಮ ಬಾಲ್ಯ ನೆನಪಾಗುತ್ತದೆ. ಅನೇಕ ಚಿತ್ರಕಾರರು ಕೊಡೆ ಹಿಡಿದು ಸಾಗುವ ಮನುಷ್ಯಾಕೃತಿಯಿಂದಲೇ, ದೋ ಎಂದು ಸುರಿಯುವ ಮಳೆಯಿಂದಲೇ ಮಲೆನಾಡನ್ನು ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ. ಕೊಡೆ ಮಲೆನಾಡಿನ, ಮಳೆಗಾಲದ ಅನಿವಾರ್ಯ ಅಂಗವೇ ಆಗಿಹೋಗಿದೆ. ಅದು ಹೆಚ್ಚಾಗಿ ಪೇಟೆಗಳಲ್ಲಿ ಮಾತ್ರ ಬೇಸಿಗೆಯ ಆಯುಧ ಕೂಡ.



ಒಮ್ಮೆ ಬಾಲ್ಯಕ್ಕೆ ಹೋಗೋಣ. ಶಾಲೆಗೆ ಸೇರುವ ಮುಂಚಿನ ದಿನಗಳವು. ಆಗ ಕಂಡಿದ್ದು ನಡುಮನೆಯ ಮೊಳೆಗೆ ನೇತು ಹಾಕಿದ ಉದ್ದನೆಯ ಛತ್ರಿ. ಅದಕ್ಕೆ ಒಂದು ಭಾರವಾದ ಮರದ ಹಿಡಿಕೆ. ಅದನ್ನು ಪಕ್ಕನೆ ಬಿಡಿಸುವುದಕ್ಕೂ ಬಾರದಂತೆ ಬಟನ್‌. ಅದು ಬೇರೇ ಅಜ್ಜನ ಸ್ವತ್ತು. ನಾವೇನಾದರೂ ಅಜ್ಜ ಮಲಗಿದ ಹೊತ್ತಲ್ಲಿ ಅದನ್ನು ಬಿಡಿಸಲು ಹೊರಟರೆ ಅದು ಬಿಚ್ಚಿಕೊಳ್ಳಬೇಕಲ್ಲಾ? ಅಷ್ಟರಲ್ಲೂ ನಾವು ಬಿಡಿಸುವ ಹರಪ್ರಯತ್ನ ಮಾಡಿದ್ದುಂಟು. ಆದರೆ ಆ ಕಾಮಗಾರಿ ಸುಮಾರು ಹೊತ್ತು ಹಿಡಿದು, ನಮ್ಮ ಪಾಳ್ಯದ ಯಾವುದಾದರೂ ಕಮಂಗಿ ಮಕ್ಕಳು ಕಿಸಕ್ಕನೆ ನಗಾಡಿ, ಅಜ್ಜ ಎದ್ದು ಬಂದು ಕೆಲಸ ಪೂರ್ತಿ ಕೆಡುತ್ತಿತ್ತು. ಆಮೇಲೆ ಬೈಗುಳ, ಹೊಡೆತಗಳ ಸಹಸ್ರ ನಾಮಾರ್ಚನೆ. ಆ ರೀತಿ ನಮ್ಮನ್ನು ನಿರ್ಬಂಧಿಸುವ ಮೂಲಕ ಕೊಡೆಯ ಬಗ್ಗೆ ನಮಗಿದ್ದ ಭ್ರಮೆ, ವಿಸ್ಮಯ, ಅಚ್ಚರಿಗಳಿಗೆ ಪರೋಕ್ಷ ಕುಮ್ಮಕ್ಕು ನೀಡುತ್ತಿದ್ದರು ಪೋಷಕರು. ಅನಂತರ ಶಾಲೆಗೆ ಹೋಗಲಿಕ್ಕಾದರೂ ಕೊಡೆ ಸಿಗುತ್ತದೋ ಎಂದು ಕಾದಿರುತ್ತಿದ್ದೆವು. ಆದರೆ ದುರಾದೃಷ್ಟವಶಾತ್‌, ಸಂತೆಗೆ ಹೋದ ಅಪ್ಪ- ಅಮ್ಮ ಒಂದು ಪ್ಲಾಸ್ಟಿಕ್‌ ಕವರ್‌ ತಂದು, ಅದಕ್ಕೆ ಮುಖ ಕಾಣುವಂಥ ಕಿಂಡಿ ಬಿಟ್ಟು ಅದರಲ್ಲಿ ನಮ್ಮ ದೇಹವನ್ನು ತೂರಿಸಿ ಶಾಲೆಗೆ ಕಳಿಸುತ್ತಿದ್ದರು. ಆಗ ನಮಗೆ ಚೂರುಪಾರು ಮಳೆಯಲ್ಲಿ ನೆನೆಯುವ ಅವಕಾಶ ತಪ್ಪಿಹೋಗುತ್ತಿತ್ತು ಮಾತ್ರವಲ್ಲ ಕೊಡೆ ಹಿಡಿದು ಜಂಭ ಮಾಡುವುದಕ್ಕೂ ಸಾಧ್ಯವಾಗುತ್ತಿರಲಿಲ್ಲ. ಆಗ ಟೀಚರುಗಳು, ಹೈಸ್ಕೂಲು ಮಕ್ಕಳು, ಊರಿನವರು ಕೊಡೆ ಹಿಡಿದುಕೊಂಡು ಹೋಗುವುದನ್ನು ನೋಡುವಾಗೆಲ್ಲಾ ನಾವ್ಯಾವಾಗ ದೊಡ್ಡವರಾಗುವುದು ಎಂದು ಕಾಯುತ್ತಿದ್ದೆವು!

ಆಮೇಲೆ ಒಂದೆರಡು ತರಗತಿ ಮೇಲೆ ಹೋದೆವು. ಆಗಲೂ ಕೊಡೆಯ ಭಾಗ್ಯವಿಲ್ಲ. ಪೇಟೆಯಿಂದ ತಂದ ರೈನ್‌ಕೋಟ್‌ ಹಾಕಿಕೊಂಡು ನಾವು ಕಾಲು ಕಟ್ಟಿ ಕಳಿಸಿದಂತೆ ಹತ್ತಿರತ್ತಿರ ಹೆಜ್ಜೆ ಇಡುತ್ತಾ ಓಡಾಡುವುದನ್ನು ಎಣಿಸಿಕೊಂಡಾಗ ಅಳುವೇ ಬರುತ್ತಿತ್ತು. ಒಂದೆರಡು ಸಲ ಮನೆಯಲ್ಲಿ ಕೊಡೆಗಾಗಿ ಉಪವಾಸ ಸತ್ಯಾಗ್ರಹ ನಡೆಸಿ, ಘೋಷಣೆ ಕೂಗಿದರೂ ಅಂತಿಮವಾಗಿ ಅಪ್ಪ ಅಮ್ಮನ ಲಾಠೀ ಚಾರ್ಜ್‌, ಅಶ್ರುವಾಯುಗೆ ಸಿಕ್ಕಿ ಅಳುವಿನಲ್ಲಿ ಪರ್ಯವಸನಗೊಳ್ಳುತ್ತಿತ್ತು. ಕೊಡೆ ನಮ್ಮ ಪಾಲಿಗೆ ದೊರಕದ ಮಾಣಿಕ್ಯವೇನೋ ಎಂದೆಣಿಸಿ ನಾವು ಆಗಾಗ ದುಃಖದ ಮಡುವನ್ನು ಮನಸ್ಸಲ್ಲಿ ಮುಚ್ಚಿಟ್ಟುಕೊಳ್ಳಲಾಗದೇ ಬಿಕ್ಕುತ್ತಿದ್ದೆವು. ನಂತರ ಹೈಸ್ಕೂಲ್‌ ಮೆಟ್ಟಿಲು ಹತ್ತಿದಾಗ ಎಂಥದೋ ಖುಷಿ. ಹೊಸ ಪುಸ್ತಕ, ಹೊಸ ಕೊಡೆ, ಹೊಸ ಬಟ್ಟೆ ಮತ್ತು ಹೊಸ ಚೀಲಗಳು ಒಂದಾಗಿ ಬಂದು ನಮ್ಮನ್ನು ಸೇರಲಿ ಎಂದು ಹಾರೈಸುವ ಹೊತ್ತದು. ಒಂದು ಸುಮುಹೂರ್ತದಲ್ಲಿ ಅಮ್ಮನ ಅಡುಗೆ ಮನೆಯಲ್ಲಿ ನಮ್ಮ ಬೇಡಿಕೆಯ ಪಟ್ಟಿ ಸಲ್ಲಿಸಿ, ಅವಳ ನಗುವಿನ ಮೂಲಕ ಅದಕ್ಕೆ ಗ್ರೀನ್‌ ಸಿಗ್ನಲ್‌ ಸಿಕ್ಕಿ, ಅಮ್ಮ ರಾತ್ರಿ ಅಪ್ಪನಲ್ಲಿ ಬೇಡಿಕೆಯ ಪತ್ರವನ್ನು ಫಾರ್ವರ್ಡ್‌ ಮಾಡಿ ಬೆಳಿಗ್ಗೆ ಎದ್ದಾಗ ಅಪ್ಪ ತನ್ನ ಸಮ್ಮತಿ ಸೂಚಿಸಿದ್ದ. ಆಗ ಈ ಜಗತ್ತಿನ ಅತ್ಯಂತ ಖುಷಿಯ ಕ್ಷಣ ಏನಾದರೂ ಇದ್ದರೆ ಇದೇ ಇರಬೇಕು ಎಂದುಕೊಂಡಿದ್ದೆವು.

ಕೊಡೆ ಬಂದ ಮೇಲೆ ಅದನ್ನು ಸಾಕುವುದು, ನೀರು ಕುಡಿಸುವುದು, ಮಡಚಿಟ್ಟು ಆರೈಕೆ ಮಾಡುವುದು, ಬೆಳಿಗ್ಗೆ ಎದ್ದ ಕೂಡಲೇ ಅಣ್ಣ ತಂಗಿಯರು ಸ್ಪರ್ಧೆಯೋಪಾದಿಯಲ್ಲಿ ಅದನ್ನು ಮಡಚಿಡಲು ಹೋಗುವುದು, ಶಾಲೆಯಲ್ಲಿ ತರಗತಿಯ ಹೊರಗೆ ಅದನ್ನು ಒಣಗಲಿಡುವುದು, ಅದನ್ನು ಯಾರಾದರೂ ಹೊತ್ತೊಯ್ದರೆ ಎಂಬ ಆತಂಕದಲ್ಲಿ ಆಗಾಗ ಹೋಗಿ ಕಾಣುವುದು... ಹೀಗೆ ಕೊಡೆಯೆಂದರೆ ತಾಯಿ, ಕೊಡೆಯೆಂದರೆ ಪ್ರಾಣ. ಕೊಡೆ ಎಂದ ಕೂಡಲೇ ಟೀವಿ ಬಂದ ಕಾಲಕ್ಕೆ ಪ್ರಸಾರವಾಗುತ್ತಿದ್ದ `ಪ್ಯಾರ್‌ ಹುವಾ ಇಕ್‌ ರಾರ್‌ ಹುವಾ...' ಹಾಡು ನೆನಪಾಗುತ್ತದೆ. ಅದರಲ್ಲಿ ಒಂದು ಕೊಡೆಯಲ್ಲಿ ಹುಡುಗ ಹುಡುಗಿ ನಿಂತು ಹಾಡುತ್ತಿದ್ದರು ಮತ್ತು ಆ ಸನ್ನಿವೇಶಕ್ಕೆ ತಂತಮ್ಮ ಪ್ರಿಯ/ ಪ್ರಿಯತಮೆಯರನ್ನು ಕಲ್ಪಿಸಿಕೊಂಡು ಆ ಕಾಲದ ಹುಡುಗ/ ಹುಡುಗಿಯರು ರೋಮಾಂಚಿತರಾಗುತ್ತಿದ್ದರು. ಪ್ರತಿಯೊಬ್ಬರಿಗೂ ಕೊಡೆ ಬಂದು, ಅದನ್ನು ಸಂಪಾದಿಸುವುದೊಂದು ದೊಡ್ಡ ವಿಚಾರವಲ್ಲ ಎಂದು ಗೊತ್ತಾದಾಗ ಒಬ್ಬರ ಕೊಡೆಯಲ್ಲಿ ಮತ್ತೊಬ್ಬರು ಹೋಗುವುದನ್ನು, ಒಬ್ಬರ ಕೊಡೆಗೆ ಹಿಂದಿನಿಂದ ಚುಚ್ಚುವುದನ್ನು, ಅದಕ್ಕಾಗಿ ಸಿಟ್ಟು ಮಾಡಿಕೊಳ್ಳುವುದನ್ನು, ಮಾತು ಬಿಡುವುದನ್ನು, ಮತ್ತೆರಡು ದಿನ ಕಳೆದರೆ ಮತ್ತೆ ದೋಸ್ತಿಯಾಗುವುದನ್ನು- ಎಲ್ಲರೂ ಸಾರ್ವತ್ರಿಕವಾಗಿ ಅನುಭವಿಸುತ್ತಿದ್ದೆವು.

ಕೊಡೆಯ ಬಗ್ಗೆ ಕನ್ನಡ ಕವಿತೆಗಳಲ್ಲಿ ಹಲವಾರು ಪ್ರಸ್ತಾಪಗಳು ಬಂದುಹೋಗಿವೆ. ಅವುಗಳಲ್ಲಿ ಮಾಸ್ತಿ ಬಗ್ಗೆ ಕೆ. ಎಸ್‌. ನಿಸಾರ್‌ ಅಹಮದ್‌ ಅವರು ಬರೆದ ಕವಿತೆ ಒಂದು. `ಸದಾ ಗಾಂಧಿ ಬಜಾರಿನ ಹಿರಿ ಚೌಕದೆದುರು ಸದ್ದಿಲ್ಲದೆ ಸಾಗಿ ಹೋಗುವ ಹಿರಿಯ ಜೀವ'ವಾದ ಮಾಸ್ತಿ ತಮ್ಮ ಕೈಯಲ್ಲಿ ಸದಾ ಒಯ್ಯುತ್ತಿದ್ದ ಕೊಡೆ, ಕಾಗೆ, ಬೀಡಾಡಿ ದನಗಳನ್ನು ಓಡಿಸುವ ಆಯುಧವಾಗಿ ಅದನ್ನು ಬಳಸುತ್ತಿದ್ದ ಬಗೆಯನ್ನು ನಿಸಾರರು ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.

ಆದರೆ ಈಗ ಆ ಚಿತ್ರಣ ಬದಲಾಗಿದೆ. ಮಳೆಗೆ ಮಲೆನಾಡಿನ ಬಗ್ಗೆ ಈ ಹಿಂದೆ ಇದ್ದಷ್ಟು ಪ್ರೀತಿ ಇಲ್ಲ. ಈಗಲ್ಲಿ ಮಳೆ ಮುನಿಸಿಕೊಂಡು ತವರಿಗೆ ಹೋದ ಹೆಂಡತಿಯ ಹಾಗೆ, ತಿಂಗಳಾದರೂ ಬರುತ್ತಲೇ ಇಲ್ಲ! ಹಾಗಾಗಿ ಕೊಡೆಗೆ ಅಕಾಲಿಕ ಅಜ್ಞಾತವಾಸ. ಈಗೇನಿದ್ದರೂ ಮಳೆ ಬಂದಾಗ ಓಡಿಹೋಗಿ ಅಂಗಡಿ ಸೂರಲ್ಲಿ ನಿಲ್ಲುವುದು, ಮಳೆ ನಿಂತ ಮೇಲೆ ಮನೆಗೆ ಹೋಗುವುದು. ಕೊಡೆಯ ಹಂಗು ಯಾರಿಗೂ ಇಲ್ಲ. ಒಂದು ಕೊಡೆ ಸಿಗುವುದು ತನ್ನ ಪಾಲಿನ ಪುಣ್ಯ ಎಂದುಕೊಂಡಿದ್ದ ಹುಡುಗ/ ಹುಡುಗಿಯರಿಗೆ ಈಗ ಕೊಡೆಯೆಂದರೆ ಅಲರ್ಜಿ. ಬೆಂಗಳೂರಿನಂಥ ಪಟ್ಟಣಗಳಲ್ಲಿ ಕೊಡೆ ಹಿಡಿಯುವ ವರ್ಗ ಇವು- ಮುದುಕರು, ಮಧ್ಯವಯಸ್ಕರು, ಮಕ್ಕಳು. ಉಳಿದವರಿಗೆ ಕೊಡೆ ಇಲ್ಲದೇ ನಡೆಯುತ್ತಾ, ಓಡುತ್ತಾ ಮನೆ ಸೇರಿದರೆ ನೆಮ್ಮದಿ, ಎಲ್ಲಾದರೂ ಕೊಡೆ ಹಿಡಿದರೋ ಅಚ್ಚರಿಯಿಂದ ಅವರನ್ನೇ ನೋಡುತ್ತದೆ ಬೀದಿ!

1 comment:

  1. kallakullarannu ellaroo thudigallalli ninthu noduvanthagali !
    -sudhanva

    ReplyDelete