Saturday, November 1, 2008

ಜೋಡು ಹಾದಿ, ಹೂ ಹಾದಿ

ನಮ್ಮ ಮನಸಲ್ಲಿ ಹೂ ಇರುವುದಕ್ಕಿಂತ ಚಪ್ಪಲಿ ಇರುವುದು ಒಳಿತು. ಯಾಕೆಂದರೆ ಹೂವಿನಂಗಡಿಯಲ್ಲಿ ಅರಳಿದ್ದು ಹೂವಾಗಿರುತ್ತದೆ, ಮೊಗ್ಗೂ ಮಾಲೆಯಾಗಿರುತ್ತದೆ, ಎಲ್ಲರ ಮುಡಿಯ ಶ್ಯಾಂಪೂಗಂಪು, ಎಣ್ಣೆಗಂಪಿನಲ್ಲಿ ಮೊಗ್ಗು, ಹೂಗಳ ಪರಿಮಳವೆಲ್ಲವೂ ಆತ್ಮಹತ್ಯೆ ಮಾಡಿಕೊಳ್ಳುತ್ತಾ ಹೋಗುತ್ತದೆ. ಆ ಎಣ್ಣೆಗಂಪಿನ ನಡುವಲೂ ಅದು ತನ್ನ ಪರಿಮಳವನ್ನು ಕೊಂದುಕೊಳ್ಳದಿದ್ದರೆ ಏನೋ ಪುಣ್ಯ. ಆದಕ್ಕಾಗಿ ಒಂದೇ ಕ್ಷಣ `ಅಬ್ಬಾ, ಸದ್ಯ' ಎಂಬ ನಿಟ್ಟುಸಿರು. ಆ ಕ್ಷಣದಿಂದಲೇ ಬಾಡತೊಡಗುತ್ತದೆ ಪರಿಮಳದೊಂದಿಗೆ ಮಲ್ಲಿಗೆಯ ತನುಮನ. ಬಿಳಿ ಕಂದಾಗುತ್ತದೆ, ಕೆಂಪಾಗುತ್ತದೆ, ಎಳೆದರೂ ಜಗ್ಗದ ರಬ್ಬರಾಗುತ್ತದೆ, ತನ್ನ ಸೂತ್ರವನ್ನು ಕಿತ್ತುಕೊಂಡು ಕಸವಾಗುತ್ತದೆ.

ಅಸಂಖ್ಯ ಕಸಗಳ ಮಧ್ಯೆ ಮರುದಿನ ಯಾರೋ ಏನೋ ಅರಿಯದ ಒಂದು ಹೆಸರಿಲ್ಲದ ಚೂರು ಅದು. ನಿನ್ನೆಯಿದ್ದ ಸುಗಂಧ, ನಿನ್ನೆಯಿದ್ದ ಅಂದ, ನಿನ್ನೆಯ ಮುಡಿಸು, ನಿನ್ನೆಯಿಡೀ ಅದರೊಡನೆ ಕಳೆದ ಪರಿಮಳದ ಬದುಕು, ಆ ಪರಿಮಳ ಕೊಟ್ಟ ಸುಗಂಧ ಸಂಚಾರ, ಅದು ದೇಹ- ಜೀವವೊಂದಕ್ಕೆ ಹೆಚ್ಚಿಸಿ ಕೊಟ್ಟ ಸೌಂದರ್ಯ- ಊಹೂಂ ನೆನಪಿಲ್ಲ.

ಅದಕ್ಕೊಂದು ಶ್ರದಾಂಜಲಿ ಸಭೆ ಮಾಡಲಿಲ್ಲ, ಒಂದು ಕ್ಷಣ ಎದ್ದು ನಿಂತು ಶಾಂತಿ ಕೋರಲಿಲ್ಲ.

ಚಪ್ಪಲಿ ಹಾಗಲ್ಲ. ಯಾರದೋ ಕಾಲಿಗೆ ಬೀಳುವ ಮುಂಚೆ, ಕಾಲಿನಿಂದ ಜಾರಿಬಿದ್ದ ದಿನದಾಚೆ ಅದಕ್ಕೊಂದು ಅಸ್ತಿತ್ವವಿದೆ, ಪೂರ್ವಾಶ್ರಮವಿದೆ. ಯಾರದೋ ಚರ್ಮವಾಗಿದ್ದು, ದೇಹದೊಳಗಿನ ಜೀವಸಂಚಾರಕ್ಕೆ, ಎಲ್ಲಾ ಅಲ್ಲಲ್ಲೇ ಹಾಗೆ ಹಾಗೇ ಇದ್ದು ಜೀವನ ಸುಸೂತ್ರವಾಗಿ ನಡೆಯುವುದಕ್ಕೆ ಅದರ ಸಹಕಾರ ಇತ್ತು. ಆ ಸಹಕಾರ ಮುಗಿದ ದಿನದಿಂದ ಅದು ದೇಹದಿಂದ ಬೇರ್ಪಟ್ಟು, ಬೇರ್ಪಟ್ಟ ಮೇಲೆ ಪರಿಷ್ಕರಣೆಗೆ ಸಿಕ್ಕಿ, ಯಾವುದ್ಯಾವುದೋ ದ್ರವ್ಯ, ರಸಾಯನಿಕಗಳ ಜೊತೆ ಗುದ್ದಾಡಿ ಹೊಸ ಜನ್ಮಕೆ ದಾಟಿಕೊಂಡು ಚಪ್ಪಲಾಯಿತು. ಕಾಲಿಗೆ ಬಿದ್ದು ಬಚಾವಾಯಿತು.

ಆದರೆ ಅದಕ್ಕೂ ಅಲ್ಲೂ ಸೀಮಿತ ಆಯುಷ್ಯವಿದೆ. ಉಂಗುಷ್ಠ ತುಂಡಾಗಿಯೋ, ಹಿಮ್ಮಡಿ ಹರಿದೋ ಅದೂ ಆ ಕಾಲಿಂದ ಬೇರ್ಪಡುತ್ತದೆ. ಅದರ ಪಾಲಿಗೆ ಬೇರ್ಪಡುವುದೆಂದರೆ ಮಾರ್ಪಡುವುದು. ದೇಹದಿಂದ ಬೇರ್ಪಟ್ಟು, ಚಪ್ಪಲಾಗಿ ಮಾರ್ಪಾಡಾದ ಇದು ಚಪ್ಪಲಾಗಿ ಬೇರ್ಪಟ್ಟ ಮೇಲೂ ಭಿಕ್ಷುಕ, ತಬ್ಬಲಿಗಳ ಕಾಲಾಳಾಗಿ ಮಾರ್ಪಡುತ್ತದೆ. ಬೇರ್ಪಟ್ಟರೂ ಸಾಯುವುದಿಲ್ಲ. ಮತ್ತೆ ಇನ್ನೊಂದು ಹೆಜ್ಜೆಯನ್ನು ಹುಡುಕಿ ಅದು ಹೊರಡಬಹುದು. ಆ ಹೆಜ್ಜೆಯಲ್ಲಿ ಒಂದಿಷ್ಟು ದಿನ ಇರಬಹುದು. ಆ ಪಾದ ತಿರಸ್ಕರಿಸಿದ ಹೊತ್ತಿಂದ ಆ ಚಪ್ಪಲಿ ತ್ರಿಲೋಕ ಸಂಚಾರಿ. ಮಣ್ಣಾಗದೇ, ಇಲ್ಲವಾಗದೇ, ಹೆಸರೂ ಇಲ್ಲದಂತೆ ಆಗದೇ ಆ ಚಪ್ಪಲಿ ಗಲ್ಲಿ ಗಲ್ಲಿಗಳಿಗೆ ಹೊರಡುತ್ತದೆ.

ಕಂಡವರಿಗೆ ತಮ್ಮ ಚಪ್ಪಲಿಯ ನೆನಪು, ಇಲ್ಲದವರಿಗೆ ತನಗೆ ಇದ್ದಿದ್ದರೆ ಎಂಬ ಕೊರಗು, ಕಾಲಿಲ್ಲದವರಿಗೆ ದೇವರು ಕಾಲನ್ನು ಕೊಡಲಿ, ಆಮೇಲೆ ನಾನೇ ಚಪ್ಪಲು ಸಂಪಾದಿಸಿಕೊಳ್ಳುವೆ ಎಂಬ ಪ್ರಾರ್ಥನೆ.. ಆಗುತ್ತದೆ. ಜಿ ಎಸ್‌ ಸದಾಶಿವ ಅವರಿಗೆ ಅದರಿಂದ `ಚಪ್ಪಲಿಗಳು' ಕತೆ ಹುಟ್ಟಿಕೊಳ್ಳುತ್ತದೆ. ಜಯಂತ ಕಾಯ್ಕಿಣಿ ಅವರಿಗೆ ಮುಂಬಯಿಯಲ್ಲಿ ಸಿಕ್ಕ ಒಂಟಿಕಾಲಿನ ಶೂ ಕತೆಯಾಗುತ್ತದೆ.

ಚಪ್ಪಲಿ ಹೀಗೆ ಜನ್ಮ ಬದಲಾಯಿಸುತ್ತಾ, ಜನುಮ ಜನುಮದಲ್ಲೂ ಏನೇನೋ ಆಗುತ್ತಾ ಹೋಗುತ್ತದೆ, ಯಾರದೋ ದಾರಿಯಲ್ಲಿ ಥಟ್ಟನೆ ಒಂದೇ ಆಗಿಯೋ, ಜೊತೆಯಾಗಿಯೋ ಸಿಕ್ಕು ಮಾತಾಡಿಸುತ್ತದೆ. ಶಾಪ್‌ನಲ್ಲಿ ಕುಳಿತು `ಕೊಳ್ಳು ಬಾ' ಎನ್ನುತ್ತದೆ. ಮಾಲ್‌ನಲ್ಲಿ
ಕುಳಿತುಕೊಂಡು `ಪಡೆದುಕೋ' ಎನ್ನುತ್ತದೆ. ಜಾಹೀರಾತುಗಳಲ್ಲಿ ಕ್ಯಾಟ್‌ವಾಕ್‌ ಮಾಡಿ `ಹ್ಯಾಗಿದೆ ನನ್ನ ಡಿಸೈನ್‌' ಎನ್ನುತ್ತದೆ. ಹಾಕಿಕೊಂಡರೆ ಹರಿಯುವವರೆಗೆ ನಿಯತ್ತಿನಿಂದ ನಿಮ್ಮ ಪಾದಸೇವೆ ಮಾಡುತ್ತದೆ, ಪಾದದಿಂದ ಬೇರ್ಪಟ್ಟ ನಂತರ ಹೀಗೇ ಮತ್ತೊಂದು ಜನ್ಮಕ್ಕೆ ಹೊರಟು ನಿಂತ ಚರ್ಮದಾರಿ.

ಅದಕೋ ನೂರೆಂಟು ಹಾದಿ, ಹೂವಂಥ ನಾವೋ ಸೌಂದರ್ಯ, ಪರಿಮಳ ಇರುವಷ್ಟು ದಿನ ಮಾತ್ರ ವಾದಿ, ಸಂವಾದಿ!

2 comments:

  1. ವಿಕಾಸ್,
    ಅದಕೋ ನೂರೆಂಟು ಹಾದಿ, ಹೂವಂಥ ನಾವೋ ಸೌಂದರ್ಯ, ಪರಿಮಳ ಇರುವಷ್ಟು ದಿನ ಮಾತ್ರ ವಾದಿ, ಸಂವಾದಿ! ಎಂಥ ಚೆಂದ ಹೇಳಿದ್ರಿ... ಇಂಥ ಲಹರಿ ಬರಹಗಳೇ ಕಡಿಮೆಯಾಗಿವೆ ಇತ್ತೀಚೆಗೆ. ಬರೆಯಿರಿ ಮತ್ತೆ ಮತ್ತೆ..

    ReplyDelete
  2. ಅಸಂಬದ್ಧವಾಗಿದೆ. ಹೀಗೆಲ್ಲ ಬರೀಬೇಡ ಗುರುವೆ.

    ReplyDelete