ಶಿಲ್ಪವಾದಾಗಲೇ ಶಿಲೆಗೆ ಪಾಪ ವಿಮೋಚನೆ. ದೇವರ ಮುಡಿ ಸೇರುವುದೇ ಹೂವಿನ ನಿಜವಾದ ಮುಕ್ತಿ ಕಲ್ಪನೆ. ಮುಡಿ ಏರದ ಹೂವೂ, ಶಿಲ್ಪವಾಗದ ಕಲ್ಲೂ ಶಪಿತ ಗಂಧರ್ವರಿಗೆ ಸಮ. ಇಂಥ ಶಪಿತ ಗಂಧರ್ವ ಶಿಲಾತಪಸ್ವಿಗಳಿರುವ ಹಂಪಿಗೆ ಇತ್ತೀಚೆಗೆ `ಉತ್ಸವ'ದ ಉತ್ಸಾಹ.
ಮಂತ್ರಿಗಳ ಭಾಷಣವೂ, ಸ್ಥಳೀಯ ಮುಖಂಡರ ಪ್ರತಿಷ್ಠೆಯೂ, ಅವ್ಯವಸ್ಥೆಯ ಆಗರವೂ ಆದ ಈ `ಉತ್ಸವ' ನಿಜವಾಗಿಯೂ ಖುಷಿ ಕೊಟ್ಟಿದ್ದು ಕಲ್ಲುಗಳಿಗೆ ಮಾತ್ರ. ಮೂರು ದಿನಗಳ ಕಾಲ ಅವುಗಳಿಗೆ ಯಾತ್ರಿಕರ ಜೊತೆ ಓಡಾಟ, ಮೌನ ಸಂಭಾಷಣೆಯ ಒಡನಾಟ. ಮೂರು ದಿನ `ಕಲ್ಲು ಕರಗಿದ ಸಮಯ'ದ ಗುಟ್ಟಾದ ವರದಿಯ ಮುದ್ರಿತ ಪ್ರಸಾರ, ಇಲ್ಲಿದೆ.
ಕಲ್ಲಾಗಿ ಹೋಗು!
ಹೀಗೆಂದು ಋಷಿ ಮುನಿಗಳು ಯಾರ ಮೇಲಾದರೂ ಕೋಪಗೊಂಡರೆ ಶಪಿಸಿಬಿಡುತ್ತಿದ್ದರು. ಅಹಲ್ಯೆ ಕಲ್ಲಾದದ್ದು ನಮಗೆಲ್ಲಾ ಗೊತ್ತಿರುವ ಒಂದು ಜನಪ್ರಿಯ ಪೌರಾಣಿಕ ಪ್ರಕರಣ. ನಮ್ಮ ಪುರಾಣಗಳನ್ನು ಜಾಲಾಡಿದರೆ ಇಂಥ ಅನೇಕ ಪ್ರಸಂಗಗಳು ನಮಗೆ ಕಾಣಸಿಗುತ್ತವೆ. ಕಲ್ಲಾಗಿದ್ದ ಅಹಲ್ಯೆಯನ್ನು ಹೆಣ್ಣಾಗಿ ಮಾಡಿದ್ದು ರಾಮನ ಹೆಚ್ಚುಗಾರಿಕೆಯೋ, ಅಹಲ್ಯೆಯ ಪಾತಿವ್ರತ್ಯದ ಹೆಚ್ಚುಗಾರಿಕೆಯೋ- ಇಷ್ಟು ವರ್ಷ ಕಳೆದರೂ ಇನ್ನೂ ತೀರ್ಮಾನವಾಗಿಲ್ಲ.
ಕಲ್ಲೆಂದರೆ ನಮ್ಮಲ್ಲಿ `ನಿರರ್ಥಕ' ಎಂಬ ಅರ್ಥ. ಹಾಗಾಗಿ ಕಲ್ಲು ಎದೆ, ಕಲ್ಲು ಹೃದಯ, ಅಭಿನಯ ಬರೋಲ್ಲ, ಸ್ಟೋನ್ ಫೇಸ್ ಎಂಬಿತ್ಯಾದಿ ಬೈಗುಳಗಳಿಂದ ನಾವು ದಿನ ನಿತ್ಯ ಪ್ರತಿಕ್ರಿಯಿಸುತ್ತೇವೆ. ಕಲ್ಲೂ ಕವಿತೆಯ ಹಾಡುವುದು ಎಂದರೆ ನಮಗೆ ಕವಿ ಸಮಯ. ಕಲ್ಲು ಕರಗುವ ಸಮಯ ಎಂದರೆ ವಿಸ್ಮಯ. ಕೇಳಿಸಿದೇ ಕಲ್ಲು ಕಲ್ಲಿನಲಿ ಕನ್ನಡ ನುಡಿ, ಹಂಪೆಯ ಗುಡಿ ಎಂದರೆ ಕನ್ನಡಿಗರಿಂದ ಕರತಾಡನ.
ನಿರರ್ಥಕ ಎಂದು ಕರೆಸಿಕೊಂಡ ಇಂಥ ಕಲ್ಲುಗಳೇ ಕಿಲೋ ಮೀಟರ್‌ಗಟ್ಟಲೆ ಬಿದ್ದುಕೊಂಡಿರುವ ಹಂಪಿ ಇತ್ತೀಚೆಗೆ ನಾಡಿನ ಗಮನ ಸೆಳೆಯಿತು. ಕಾರಣ `ಹಂಪಿ ಉತ್ಸವ-2008'. ವಿದೇಶಿ ಪ್ರವಾಸಿಗರು ಸೇರಿದಂತೆ ನೂರಾರು ಮಂದಿ ಹಂಪಿಯ ಕಲ್ಲುಗಳ ಪಾದಸ್ಪರ್ಶ ಮಾಡಿ ಪುನೀತರಾದರು. ತಮ್ಮವರ್ಯಾರೋ ಯಾವತ್ತೋ ಅಲ್ಲಿ ಕಲ್ಲಾಗಿದ್ದಾರೋ ಎಂಬಂತೆ, ಅಂಥವರನ್ನು ಹುಡುಕುತ್ತಿದ್ದಾರೇನೋ ಎಂಬಂತೆ ಹಂಪಿಯ ಕಲ್ಲ ಗುಡಿ, ಕಲ್ಲ ಮಂಟಪ, ಕಲ್ಲ ಪಾವಟಿಕೆ, ಪುಷ್ಕರಣಿಗಳನ್ನು ಸುತ್ತಿದರು. ಕಲ್ಲು ಹೀಗೆ ಮೂರು ದಿನಗಳ ಕಾಲ ದೇಶ, ವಿದೇಶದವರನ್ನು ತನ್ನ ಜೊತೆ ಕೂರಿಸಿಕೊಂಡು ಮಾತಾಡಿತು, ಅತ್ತಿತು, ಕುಶಲ ವಿಚಾರಿಸಿತು. ಕಲ್ಲು ಕವಿತೆಯ ಹಾಡಿತು!
ಅಲ್ಲಿನ ಕಲ್ಲುಗಳಿಗೂ ನಾವು ನೀವು ಬೇರೆ ಕಡೆ ಕಂಡ ಕಲ್ಲುಗಳಿಗೂ ಬಹಳ ವ್ಯತ್ಯಾಸ. ಅಲ್ಲಿನ ಕಲ್ಲುಗಳಿಗೆ ಅನೇಕ ಸಾಮ್ರಾಜ್ಯವನ್ನು ಕಂಡ ಅನುಭವವಿದೆ, ರಾಜ ರಾಣಿಯರ ಏಕಾಂತವನ್ನು ಕಂಡ ಗುಟ್ಟಿದೆ, ಯಾರ್ಯಾರೋ ರಾಜರ ವಿರುದ ಪಿತೂರಿ ಮಾಡಿದ್ದನ್ನು ಕಂಡೂ, ಈವರೆಗೂ ಹೇಳಲಾದ ನೋವಿದೆ. ನಮಗೆ ನಿಮಗೆ ಬರೀ ಕಟ್ಟುಕತೆಯಂತೆ ಕಂಡ ಮುತ್ತು ರತ್ನಗಳನ್ನು ಪಳ್ಳಗಳಲ್ಲಿ ಬೀದಿ ಬದಿ ಮಾರುತ್ತಿದ್ದರೆಂಬ ಹಂಪಿಯ ಸತ್ಯವನ್ನು ತಾವು ಸ್ವತಃ ಕಂಡಿದ್ದೇವೆಂಬ ಹೆಮ್ಮೆ, ಗರ್ವ ಇದೆ. ಅಲ್ಲಿಗೆ ನೀವೊಮ್ಮೆ ಭೇಟಿ ಕೊಟ್ಟರೆ ಪ್ರತಿ ಕಲ್ಲೂ ಒಂದು ಶಿಲ್ಪದಂತೆ ಕಾಣುತ್ತದೆ. ಕಲ್ಲೇ ಸೇರಿ ಗುಡಿಯಾಗಿದೆ, ಕಲ್ಲು ಒಟ್ಟಾಗಿ ನಂದಿಯ ಸ್ವರೂಪ ಪಡೆದುಕೊಂಡಿದೆ. ಯಾರ್ಯಾರೋ ಯುದದಲ್ಲಿ ಹತರಾದಂತೆ, ಹತರಾದವರ ಹೆಣವನ್ನು ಎತ್ತದೇ ಅಲ್ಲೇ ಬಿಟ್ಟಂತೆ, ಆ ಹೆಣಗಳು ಅಲ್ಲೇ ಮರಗಟ್ಟಿ ಮಲಗಿದಂತೆ ಕಾಣುತ್ತದೆ.
ಅಂಥ ಕಲ್ಲುಗಳಿಗೆ ಕಣ್ಣಿದೆ, ಕಿವಿಯಿದೆ, ಬಾಯಿಲ್ಲ. ಅವುಗಳಿಗೆ ಬಾಯಿ ಕೊಟ್ಟ ದಿನ ಹಂಪಿಯ ಕಲ್ಲುಗಳಲ್ಲಿ ಬರೆಯುತ್ತವೆ ದೊಡ್ಡ ಇತಿಹಾಸವನ್ನು. ನಾವೆಂದೂ ಕೇಳದ ಸತ್ಯವನ್ನು, ನಾವೆಂದೂ ತಿಳಕೊಳ್ಳದ ವಿಷಯವನ್ನು. ಮನುಷ್ಯರ ಒಳಗಿನ ಗುಟ್ಟುಗಳು ರಟ್ಟಾದರೆ ಧರೆ ಉಳಿಯುವುದು ಕಷ್ಟ, ಇನ್ನು ಕಲ್ಲಿನ ಗುಟ್ಟು ರಟ್ಟಾದರೆ ನಾವು ಉಳೀಯುವುದು ಕಷ್ಟ.
ಮೊನ್ನೆ ನಡೆದ ಹಂಪಿ ಉತ್ಸವದಲ್ಲಿ ಅಂಥ ಪ್ರತಿ ಕಲ್ಲುಗಳಿಗೆ ಕಣ್ಣು ಕೊಟ್ಟಿದ್ದು ವಿದ್ಯುಚ್ಛಕ್ತಿ. ಕೆಲವು ಪ್ರದೇಶದ ಅಲ್ಲಿನ ಕಲ್ಲುಗಳಿಗೆ ಮಾತ್ರ ವಿದ್ಯುದ್ದಾಲಂಕಾರ ಮಾಡುತ್ತಿದ್ದ ಹಳೆ ಪರಂಪರೆಯನ್ನು ಮುರಿದು ಹಂಪೆಯ ಬಹುತೇಕ ಕಲ್ಲುಗಳಿಗೆ ದೀಪಾಲಂಕಾರ ಮಾಡಿದ್ದರು. ಬೆಳಗೆಲ್ಲಾ ಆ ದೀಪಗಳನ್ನು ಕಾಯುತ್ತಾ ಗುಡ್ಡದ ಬಿಸಿಲಲ್ಲಿ ನಿಂತೇ ಇರುತ್ತಿದ್ದ ಆ ಬಂಡೆಗಳು ರಾತ್ರಿಯಾಗುತ್ತಲೇ ಉಲ್ಲಸಿತವಾದವು, ಎಲ್ಲರ ಎದುರು ಎದೆ ಎತ್ತಿ ನಿಂತವು. ಬರುವ ಯಾತ್ರಿಕರನ್ನು `ಚೆನ್ನಾಗಿದ್ದೀರಾ' ಎಂದು ವಿಚಾರಿಸಿದವು. `ನೋಡಿ, ನಾವು ಹೇಳೋದನ್ನು ಇಲ್ಲೊಂಚೂರು ಕೇಳಿ' ಎಂದು ಕೂಗಿಕೊಂಡವು, ಮನುಷ್ಯರಿಗೆ ಕಾಣಿಸಿಕೊಳ್ಳುವ ಶಕ್ತಿಯನ್ನು ಕಳೆದುಕೊಂಡ ಆತ್ಮಗಳಂತೆ.
ಈಗ ಬಾಳೆ ಎಲೆ, ತೋರಣ, ಬಣ್ಣದ ಬಟ್ಟೆ ಬುಟ್ಟಿಗಳೆಲ್ಲಾ ಕಿತ್ತುಕೊಂಡು ಹೋದ ಹಂಪೆಯಲ್ಲಿ ಆ ಕಲ್ಲುಗಳಿಗೆ ಮತ್ತೆ ಬಿಸಿಲಿಗೆ ಬೇಯುವ, ಚಳಿಗೆ ಮರಗಟ್ಟುವ, ಮಳೆಗೆ ಥರಗುಟ್ಟುವ ಕೆಲಸ. ಪ್ರತಿ ವರ್ಷದ ಇಂಥ ಉತ್ಸವಕ್ಕೊಮ್ಮೆ ಶಾಪ ವಿಮೋಚನೆ ಪಡೆದು, ಮತ್ತೆ ಶಪಿತ ಗಂಧರ್ವರಂತೆ ಕಲ್ಲಾಗುವ ಹಂಪಿಯ ಗುಡ್ಡದ ಜೀವಗಳೇ ಈಗೇನು ಮಾಡುತ್ತಿದ್ದೀರಾ?
ಹಂಪಿ ಸಮೀಪದ ಯುವ ಕವಿ ಅರುಣ್ ಜೋಳದಕೂಡ್ಲಿಗಿ ಆಗಲೇ ಉತ್ಸವದ `ಕವಿಗೋಷ್ಠಿ'ಯಲ್ಲಿ ಒಂದು ಕವಿತೆ ವಾಚಿಸಿದ್ದಾರೆ:
...ನನ್ನಜ್ಜಿ ಹೇಳುತ್ತಿದ್ದರು
ಕಲ್ಲಿನ ಕೋಳಿ ಕೂಗಿದ ದಿನ
ಕಲ್ಲಿನ ರಥ ಚಲಿಸಲು ಪ್ರಾರಂಭಿಸಿದ ದಿನ
ಪ್ರಳಯವಾಗುತ್ತದೆ ಅಂತ.
ಹೇ ಕಲ್ಲ ಕೋಳಿಯೇ
ನಿನ್ನ ಕೂಗೇ ಪ್ರಳಯವೆಂದಾದರೆ
ಪ್ರತಿ ಮುಂಜಾವೂ ನಾ ಕಾಯುತ್ತಿರುವೆ
ಒಮ್ಮೆ ಮೈ ಕೊಡವಿ ಕೂಗಿ ಬಿಡು
ಕಲ್ಲರಥ ಚಲಿಸುವುದ ನೋಡಿ
ನಾ ಪ್ರಳಯವ ಚುಂಬಿಸುವೆ...
ಶಪಿತ ಕಲ್ಲುಗಳು ಈ ಕವಿತೆಯನ್ನೇ ಈಗ ಮತ್ತೆ ಮತ್ತೆ ಓದಿ ಪ್ರಳಯ ತರುವ ಕಲ್ಲ ಕೋಳಿ ಮುಂಜಾವು ಕೂಗುವುದನ್ನು ಕಾಯುತ್ತಿರಬಹುದೇ?
Friday, November 7, 2008
ಕಲ್ಲು ಕಲ್ಲೆಂದೇಕೆ ಬೀಳುಗಳೆವರು?
Subscribe to:
Post Comments (Atom)
ಕಲ್ಲನ್ನೇ ಮುಖ್ಯವಾಗಿ ಎಷ್ಟು ಸುಂದರವಾಗಿ ಹಂಪಿ ಉತ್ಸವವನ್ನು ಚಿತ್ರಿಸಿದ್ದೀರಿ! ಖುಷಿಯಾಯಿತು ಓದಲು.. :-)
ReplyDelete