[caption id="attachment_180" align="aligncenter" width="500" caption="ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ"]
ದೊಡ್ಡ ಮನೆಯಲ್ಲಿ ಅಪ್ಪ ಇದ್ದಾನೆ. ಅವನ ಸಂಗಡ ಅವನ ಕೊನೆಯ ಮಗ ಇದ್ದಾನೆ. ಅಪ್ಪನಿಗೆ ಆ ಹಳೆಮನೆಯ ಮಾಸಲು ಗೋಡೆಗಳ ಮಧ್ಯೆ ಬದುಕಿದರೆ ಮಾತ್ರ ಜೀವ ಆಡುತ್ತದೆ. ಅವನ ಕೊನೆಯ ಮಗನಿಗೆ ಸಂಗೀತ ಎಂದರೆ ಪ್ರಾಣ. ಗಂಡ ತೀರಿಕೊಂಡ ನಂತರ ಅಪ್ಪನ ಮನೆಯಲ್ಲೇ ಉಳಿದಿರುವ ಹೆಣ್ಣು ಮಗಳೊಬ್ಬಳು ಈ ಹುಡುಗನಿಗೆ ಸಂಗೀತಪಾಠ ಮಾಡುತ್ತಾಳೆ. ಆದರೆ ಅವಳ ತಮ್ಮನಿಗೆ ಇದು ಸರಿಬರುವುದಿಲ್ಲ. ಆ ತಮ್ಮ ಯಾವುದೋ ಬಿಸಿನೆಸ್ ಎಂದು ಓಡಾಡುತ್ತಾನೆ. ಮೊಬೈಲ್ ತೆಗೆದುಕೊಂಡು, ಅಪ್ಪ ಅಮ್ಮನಿಗೆ ಅದನ್ನು ತೋರಿಸಿ `ನೋಡು ಈ ಅಡುಗೆ ಮನೆಯಲ್ಲೂ ನೆಟ್ವರ್ಕ್ ಎಷ್ಟು ಚೆನ್ನಾಗಿ ಸಿಗುತ್ತದೆ ನೋಡು. ಅಷ್ಟೂ ಕಡ್ಡಿ ಇದೆ' ಎಂದು ತೋರಿಸಿ ಮನೆಯವರನ್ನು ತಬಜಿಲ್ ಮಾಡುತ್ತಾನೆ. ಕಾರಿಗಾಗಿ ಸಾಲ ಮಾಡುತ್ತೇನೆ, ಒಂದಿಪ್ಪತ್ತೈದು ಸಾವಿರ ಕೊಡು ಎಂದು ದುಂಬಾಲು ಬೀಳುತ್ತಾನೆ.
ತೀರ್ಥಹಳ್ಳಿ ಸಮೀಪದ ಯಾವುದಾದರೂ ಹಳ್ಳಿಯಲ್ಲಿ ಆ ಕತೆ ಸಾಗುತ್ತಿದೆ.
ಇತ್ತ ಪಟ್ಟಣ. ಲ್ಯಾಪ್ಟಾಪ್, ಸ್ಟೆತೋಸ್ಕೋಪ್, ಮೊಬೈಲ್, ಕರೆನ್ಸಿ, ಬ್ರೇಕ್ಫಾಸ್ಟ್, ಡಿನ್ನರ್ಗಳ ಜಗತ್ತಲ್ಲಿ ಎಲ್ಲರಿಗೂ ಹಗಲಾಗುತ್ತದೆ, ಇರುಳಾಗುತ್ತದೆ. ಅಪ್ಪನನ್ನು ದೂರದ ಹಳ್ಳಿಯಲ್ಲಿ ಬಿಟ್ಟು ಬಂದಿರುವ ಇಬ್ಬರು ಗಂಡು ಮಕ್ಕಳು, ಇಬ್ಬರು ಸೊಸೆಯಂದಿರು `ಅಣ್ಣ(ಅಪ್ಪ)ನಿಗೆ ಆರೋಗ್ಯ ಹ್ಯಾಗಿದೆಯೋ' ಎಂದು ಆತಂಕಿತರಾಗುತ್ತಾರೆ. ಅತ್ತ ವಿಧುರ ಅಪ್ಪನಿಗೆ ಈ ಮಕ್ಕಳ ಮೇಲೆ ಸಿಟ್ಟು. ತಮ್ಮನ್ನು ಬಿಟ್ಟು ಪೇಟೆ ಸೇರಿಕೊಂಡಿದ್ದಾರೆಂಬ ಅಸಹನೆ. ಅವರು ಫೋನ್ ಮೂಲಕವೋ, ಖುದ್ದಾಗಿಯೋ ವಿಚಾರಿಸಿಕೊಂಡಾಗೆಲ್ಲಾ ಅಪ್ಪ ರೇಗಾಡುತ್ತಾನೆ. ನಿದ್ದೆ ಮಾತ್ರೆ ತೆಗೆದುಕೊಂಡು ಮಧ್ಯಾಹ್ನ ಸಮೀಪಿಸಿದರೂ ಏಳದೇ, ಕೋಣೆಯ ಬಾಗಿಲು ಬೇರೆ ಹಾಕಿಕೊಂಡು ಮಕ್ಕಳ ಹೆದರಿಕೆಗೆ ಕಾರಣನಾಗುತ್ತಾನೆ.
ಆಫೀಸಿನ ಕಿರಿಕಿರಿಗಳು, ಎದುರಾಗುತ್ತಿರುವ ಸವಾಲುಗಳು, ಆಸ್ಪತ್ರೆಯ ವಾಣಿಜ್ಯೀಕರಣದ ಅನಿವಾರ್ಯ ಸೇರಿದಂತೆ ತಮ್ಮದೇ ಆದ ವೃತ್ತಿ ಗಂಡಾಂತರಗಳಿಂದ ಬಳಲುತ್ತಿರುವ ಮಕ್ಕಳು, ಅತ್ತ ಅಪ್ಪನ ಆಣತಿಯಂತೆ ಊರಿಗೆ ಮರಳಲೂ ಆಗದೇ ಇತ್ತ ಇಲ್ಲೇ ಇರಲೂ ಆಗದೇ ತೊಳಲಾಡುತ್ತಿದ್ದಾರೆ.
***
ಇತ್ತೀಚೆಗೆ ಝೀ ಕನ್ನಡದಲ್ಲಿ ಪ್ರಸಾರವಾಗುತ್ತಿರುವ `ಇಲ್ಲಿರುವುದು ಸುಮ್ಮನೆ' ಧಾರಾವಾಹಿಯ ಕೆಲವು ಕಂತುಗಳಿವು. ಎಲ್ಲಾ ಧಾರಾವಾಹಿಗಳಿಗಿಂತ ಸಂವೇದನೆಯಲ್ಲಿ, ದೃಶ್ಯೀಕರಣದಲ್ಲಿ, ಸಂಭಾಷಣೆ, ಪಾತ್ರ ಪೋಷಣೆ, ವಾಸ್ತವಾಂಶಗಳಲ್ಲಿ ಭಿನ್ನವಾಗಿ ನಿಂತಿರುವ ಈ ಧಾರಾವಾಹಿಯನ್ನು ನಿರ್ದೇಶಿಸುತ್ತಿರುವರು ಪ್ರಕಾಶ್ ಬೆಳವಾಡಿ. ಈಗಾಗಲೇ `ಗರ್ವ' ಧಾರಾವಾಹಿಯ ಮೂಲಕ ತಮ್ಮದೇ ಆದ ಪ್ರತ್ಯೇಕ ಪ್ರೇಕ್ಷಕ ಅಭಿಮಾನಿಗಳನ್ನು ಸಂಪಾದಿಕೊಂಡಿರುವ ಪ್ರಕಾಶ್, `ಇಲ್ಲಿರುವುದು ಸುಮ್ಮನೆ'ಯಲ್ಲಿ ಬೇರೆಯದೇ ಭಾವ ಜಗತ್ತನ ಜೊತೆ ಹಾಜರಾಗಿದ್ದಾರೆ.
ಹಾಗೆ ನೋಡಿದರೆ ಅಲ್ಲಿರುವ ನಮ್ಮನೆಯನ್ನು ಬಿಟ್ಟು ಬಂದಿರುವ ನಾವೆಲ್ಲಾ `ಇಲ್ಲಿರುವುದು ಸುಮ್ಮನೆ'. ನಾವು ನಮ್ಮ ಅಪ್ಪಂದಿರನ್ನು ಬಿಟ್ಟು ಬಂದು ಇಲ್ಲಿ ಜಗತ್ತನ್ನು ಕಟ್ಟಿಕೊಳ್ಳುತ್ತಿದ್ದೇವೆ. ಆದರೆ ಆ ಜಗತ್ತಿನ ಸುತ್ತ ಎದ್ದಿರುವ ಗೋಡೆಗಳ ಆಚೆ ಅಪ್ಪ, ಅಮ್ಮ ಅೀರರಾಗಿ ನಿಂತುಕೊಂಡಿದ್ದಾರೆ. ನಾವು ಗೋಡೆಯನ್ನು ಒಡೆದು ಅವರಿದ್ದಲ್ಲಿಗೆ ಹೋಗಲಾರೆವು, ಅವರು ಆ ಗೋಡೆ ದಾಟಿ ಈಚೆಗೆ ಬರಲೊಲ್ಲರು. ಹೀಗೆ ಪರಸ್ಪರರ ಕೋಶವನ್ನು ಕ್ರಮಿಸಲು ಸಾಧ್ಯವಾದ ದಿನ ನಾವೆಲ್ಲಾ ಸಡಗರದ ದಿನವನ್ನು ನಿರೀಕ್ಷಿಸಬಹುದೇನೋ?
`ಇಲ್ಲಿರುವುದು ಸುಮ್ಮನೆ' ನಮ್ಮೆಲ್ಲರನ್ನೂ ಹಲವು ಕಾರಣಗಳಿಂದ ಕಾಡುವುದನ್ನು ಅನುಭವಿಸಬೇಕಾದರೆ ಸೋಮವಾರದಿಂದ ಶುಕ್ರವಾರದವರೆಗೆ ರಾತ್ರಿ ಎಂಟಕ್ಕೆ `ಝೀ ಕನ್ನಡ' ಚಾನಲ್ ನೋಡಬೇಕು. ಹಿರಿಯಣ್ಣ, ಸದಾನಂದ, ಪುಟ್ಟ, ಪೂರ್ಣಿಮಾ, ದೇಬಸಿಸ್ ದಾಸ್, ಚಿದಾನಂದ್, ಭಾವನಾ ಮೊದಲಾದ ಪಾತ್ರಗಳು ನಿಮ್ಮದೇ ಪಾತ್ರವಾಗಿ ಅನುಭವಕ್ಕೆ ದಕ್ಕುತ್ತವೆ. ಪುರಂದರ ದಾಸರ `ಅಲ್ಲಿದೆ ನಮ್ಮನೆ ಇಲ್ಲಿ ಬಂದೆ ಸುಮ್ಮನೆ' ಹಾಡನ್ನು ಎಂಡಿ ಪಲ್ಲವಿ ಮತ್ತು ಅರುಣ್ ಸಂಗೀತ ಸಂಯೋಜಿಸಿ ಈ ಧಾರಾವಾಹಿಗೆ ಶೀರ್ಷಿಕೆ ಗೀತೆಯನ್ನಾಗಿ ಮಾಡಿಕೊಟ್ಟಿದ್ದಾರೆ. ವಿದುಷಿ ಎಂ ಎಸ್ ಶೀಲ ಅವರ ವಿಶಿಷ್ಟ ದನಿಯಲ್ಲಿ `ಕದಬಾಗಿಲಿರಿಸಿಹ ಕಳ್ಳಮನೆ, ಮುದದಿಂದ ಲೋಲಾಡೋ ಸುಳ್ಳುಮನೆ, ಇದಿರಾಗಿ ವೈಕುಂಟ ವಾಸಮಾಡಿರುವ ಪದುಮನಾಭನ ದಿವ್ಯ ಭಕುತಿಯಿದು ಅಲ್ಲಿದೆ...' ಎಂಬಂಥ ಸಾಲನ್ನು ಕೇಳಿಯೇ ತಣಿಯಬೇಕು.
ನೋಡಬೇಕೆನಿಸುತ್ತಿದೆ.. ಆದರೆ ಆಗದು! :(
ReplyDelete