Friday, November 14, 2008

ನೋವುಗಳ ದಾರದಲಿ ಸುರಿದ ಮುತ್ತು

hoffman11ಯುದ್ಧ- ಶಾಂತಿಯ ವಿರುದ್ಧದ ಪದ. ಯುದಕ್ಕೆ ಮೊದಲು ಉತ್ಸಾಹ, ನಡೆದಾದ ಮೇಲೆ ಅನಾಥ ಪ್ರಜ್ಞೆ. ಈಗ ಜಗತ್ತು ಯಾವುದೇ ಘೋಷಿತ ಯುದ್ಧದಿಂದ ಬಳಲುತ್ತಿಲ್ಲವಾದರೂ ನಡೆಯುತ್ತಿರುವ ಜಗತ್ತಿನ ಪ್ರತಿ ವಿಪ್ಲವಗಳೂ ಒಂದು ರೀತಿಯಲ್ಲಿ ಯುದ್ಧದ ರೂಪವೇ ಆಗಿ ಕಾಣುತ್ತಿವೆ.
ಯುದ್ಧಾನಂತರದ ಕುರುಕ್ಷೇತ್ರದ ಕುರಿತು ಕುವೆಂಪು `ಸ್ಮಶಾನ ಕುರುಕ್ಷೇತ್ರ' ಬರೆದರು. ಜಗತ್ತಿನ ಯಾವುದೇ ಯುದ್ಧ ಮುಗಿಯಲಿ, ಅಲ್ಲಿ ನಮಗೆ ಕಾಣುವುದು `ಸ್ಮಶಾನ ಕುರುಕ್ಷೇತ್ರ'. ಆದರೆ ಜಗತ್ತು ಎಷ್ಟು ಯುದ್ಧಗಳನ್ನು ಕಂಡಿಲ್ಲ? ಎಷ್ಟು ಯುದ್ಧಗಳ ನಂತರ ಅದೆಷ್ಟು ಮಕ್ಕಳು ಅಪ್ಪ ಅಮ್ಮಂದಿರನ್ನು ಕಳೆದುಕೊಂಡಿಲ್ಲ? ಅಂಥ ನಿರ್ವಸಿತ, ಮಮತೆವಂಚಿತ, ದಿಕ್ಕುಗೆಟ್ಟ ಶಿಶುಗಳ ಹಣೆಯ ಮೇಲೆ, ಕಣ್ಣೀರಿಗೆ ಮಾತ್ರ ಜಾಗವಿರುವ ಅವರ ಕೆನ್ನೆಯ ಮೇಲೆ, ಅತ್ತು ಅತ್ತು ಕೆಂಪಗಾದ ಕಿವಿ, ಮೂಗಿನ, ಕೊಂಕು ತುಟಿಯ ಮೇಲೆ ಯಾರಾದರೂ ನೇವರಿಕೆ ತಂದಾರೇ?
ಇರಾನಿ ಕವಿ ಆಶಿಶ್‌ ತಾಕೂರ್‌ ತನ್ನ `ಯುದ್ಧಪೀಡಿತ ಶಿಶುವಿಗೊಂದು ಓಲೆ' ಕವಿತೆಯಲ್ಲಿ ಅಂಥ ಮಕ್ಕಳನ್ನು ಪದಗಳಿಂದ ನೇವರಿಸಿದ್ದಾರೆ. `ಹವಳದ ಕುಡಿಯಂಥ ಅಳುವ ಕಂದನ ತುಟಿ'ಗೆ ಸಾಂತ್ವನದ ಗುಟುಕು ಹನಿಸಿದ್ದಾರೆ. ಆ ಕವಿತೆಯ ಭಾವಾನುವಾದ ಇಲ್ಲಿದೆ.


ನಿನ್ನ ಉಗುರುಬೆಚ್ಚನೆಯ ಕಣ್ಣೀರು ನನ್ನದು
ಚಿಟ್ಟೆಯಂತೆ ಫಡಫಡಿಸುವ ನನ್ನ ನಗು ನಿನ್ನದು
ಕನಸು, ಹೂಗಳ ನನ್ನೀ ಜಗತ್ತಿನಿಂದ
ನಿನಗೆ ಚಾಕೋಲೇಟುಗಳ
ಕಿನ್ನರ ಕತೆಗಳ ಕಳಿಸುವಾಸೆ;
ಮತ್ತು ಕಳಿಸುವಾಸೆ
ತಂಗಾಳಿಯ ರೆಕ್ಕೆಯ ಮೇಲೆ
ಈಗ ತಾನೇ ಕುಡಿಯೊಡೆಯುತಿರುವ
ಕಾಳುಗಳ ಗಂಧವನ್ನು.
ಆದರೆ ನಾನು ಹಂಚಿಕೊಳ್ಳಲಾರೆ,
ಒಣ ರೊಟ್ಟಿಯ ತರಹದ
ನಿನ್ನ ಹಾಳು ಪ್ರಾರಾಬವನ್ನು.

ಹಳ್ಳಿಯ ಅನಾಮಿಕ ಶಾಲೆಗಳಿಂದ
ಕುಣಿಕುಣಿದು ಬರುತ್ತಿದ್ದ ಕಿಲಕಿಲ ನಗುವೇ,
ಹೊಳೆವ ಸೂರ್ಯನಂಥ ಭವಿಷ್ಯ,
ತಣ್ಣಗಿರುವ ಬೆಳದಿಂಗಳ ಭಾಷ್ಯ-
ನಿನ್ನ ಮುಡಿಯೇರಲಿ ಮಗುವೇ.
ನೋವುಗಳ ದಾರದಲಿ ಸುರಿದ ಮುತ್ತೇ
ಬಾ ನನ್ನ ಕೊರಳಲಿ ಮಾಲೆಯಾಗು,
ಖುಷಿಯ ಗಂಟಲಲ್ಲುಳಿದ ಒಡಕು ಪದವೇ
ನನ್ನ ಕವಿತೆಯ ಆಭರಣ ತೊಟ್ಟು ನಿಲ್ಲು.

No comments:

Post a Comment