Monday, August 25, 2008

ಈ ಮನೆಯಲ್ಲಿ ಯಾವಾಗಲೂ (ಕವಿತೆ)

ಹಲವು ಲೇಖನಗಳ ನಡುವೆ ಹೀಗೊಂದು ಕವಿತೆ ನಿಮ್ಮ ಮುಂದೆ. ಈ ಬೆಂಗಾಳಿ ಕವಿತೆ ಹಲವು ಕಾರಣಕ್ಕೆ ನಿಮ್ಮನ್ನು ತಲ್ಲಣಗೊಳಿಸುತ್ತಾ ಹೋಗುತ್ತದೆ, ಅದರ ನಡುವೆಯೇ ಸಣ್ಣ ಭರವಸೆಯನ್ನೂ ಮೂಡಿಸುತ್ತದೆ. ಬಹಳ ಸೂಕ್ಷ್ಮವಾದ ಈ ಕವಿತೆಯ `ಅನುವಾದ'ದ ಪ್ರಯತ್ನ ಮಾತ್ರ ಇಲ್ಲಿದೆ. ಮೂಲ ಕವಿತೆಯ ಸತ್ವವನ್ನು ಈ ಅನುವಾದ ತಾರದೇ ಹೋದರೆ ಕ್ಷಮೆ ಇರಲಿ.

ಯಾವಾಗಲೂ ಈ ಮನೆಯಲ್ಲಿ ಹೀಗೇ
ಬೆಳಗಿನ ಹೊಗೆ ಮನೆಯ ಮಾಡಿಂದ ಮೇಲೆ ಮೇಲೆ
ಬಾಗಿಲು, ಕಿಟಕಿಗಳ ಕಿಂಡಿಯಲ್ಲೂ
ಅವುಗಳ ನಿಟ್ಟುಸಿರ ಮಾಲೆ.
ಅಮ್ಮನ ಕಣ್ಣೀರಿನ ಮುಖವನ್ನು
ಅನ್ನದ ತಪ್ಪಲೆ,
ನೀರಿನ ಹೂಜಿಗಳು ಖಾಲಿಖಾಲಿಯಾಗಿ
ಪ್ರತಿಬಿಂಬಿಸುತ್ತಿವೆ.
ಬೀದಿಯಲ್ಲಿ ಬಿದ್ದ ಒಣ ದೂಳುಗಳ ನೋಡಿದರೆ
ಕಳೆದ ರಾತ್ರಿ ಸುರಿದದ್ದು ಮಳೆಯೋ
ರಕ್ತದ ಹೊಳೆಯೋ
ಹೇಳಲು ದುಸ್ಸಾಧ್ಯ...

ಕಿನ್ನರರ ಕತೆ ಕೇಳುತ್ತಾ
ಒಳಮನೆಯಲ್ಲಿ ನಿದ್ದೆಹೋದ
ಕಂದಮ್ಮಗಳು
ಈಗ ಕಣ್ಣುಜ್ಜುತ್ತಾ
ಖಚಿತಪಡಿಸಿಕೊಳ್ಳುತ್ತಿವೆ;
ಇದು ಕಿನ್ನರರ ಲೋಕವಲ್ಲ,
ತಮ್ಮನ್ನು ಈ ಜಗದಿಂದ ಕೊಂಡೊಯ್ಯುವ
ಯಾವ ಗಾಳಿಯೂ ಇಲ್ಲ.
ಮೆಲ್ಲ ಎದ್ದು ನಿಲ್ಲಲು ಪ್ರಯತ್ನಿಸಿದರೆ
ಎತ್ತಿದ ಕೈಗಳು
ಕಪ್ಪು ಆಕಾಶಕ್ಕೆ ಮುಖ,
ದೃಷ್ಟಿ ಮೂಕ, ಶಕ್ತಿ ಮೂಕ.
ಹೌದೇ, ಅವು ಇಷ್ಟೊತ್ತು
ಹೊಗೆ ತುಂಬಿದ ಎದೆಯಲ್ಲಿ
ಮಲಗಿಬಿಟ್ಟಿದ್ದವೇ?

ಇದೀಗ ದನಿ ಎತ್ತೆತ್ತರಕ್ಕೆ ಏರುತ್ತಿದೆ
ಅದು ನೆರೆಯ ಕೂಗೇ, ನೆರೆಮನೆಯ ಕೂಗೇ
ಸಮುದ್ರ ಮೊರೆವ ಕೂಗೇ
ಹುಡುಕುವ ಮೊದಲೇ ಉತ್ತರ,
ಕೂಗು ಏರುತ್ತದೆ ಎತ್ತರ ಎತ್ತರ..
ಮರದ ಎಲೆಗಳು ಈಗ ಅದುರುತ್ತಲೇ ಇಲ್ಲ
ಹೊಗೆ ಮಾತ್ರ ಎಂದಿನಂತೆ ಸುರುಳಿ ಸುರುಳಿಯಾಗುತ್ತಿವೆ
ಅಳುವ ಕಣ್ಣಲ್ಲೂ ಮುಖ ಎತ್ತುತ್ತಾಳೆ
ಅರೆ ಕ್ಷಣ ತಾಯಿ,
ಹೊಗೆಮನೆಯಿಂದ
ಹೊರಗಿಣುಕುವ
ಮಕ್ಕಳ ನೀನೇ ಕಾಯಿ!

ಮೂಲ: ಅರುಣ್‌ ಮಿತ್ರ (ಬೆಂಗಾಳಿ ಕವಿ)

1 comment:

  1. ಚೆಂದದ ಭಾವಾನುವಾದ ವಿಕಾಸ್. ಮತ್ತಷ್ಟು ಬರೆಯಿರಿ. ಕಾಯುತ್ತಿದ್ದೇವೆ ಓದಲು...

    ReplyDelete