ಶುಭಂ, ದಿ ಎಂಡ್, ಸಮಾಪ್ತಿ
ಹೀಗೆ ಸಿನಿಮಾಗಳು ಮುಗಿಯುತ್ತಿದ್ದ ಕಾಲಕ್ಕೆ ಎಲ್ಲರೂ ತಮ್ಮ ತಮ್ಮ ಕೆಲಸಕ್ಕೆ ಹೋರಡಲನುವಾಗುತ್ತಿದ್ದರು, ಮಕ್ಕಳಿಗೆ `ಸಾಕಿನ್ನು, ಟೀವಿ ಆರಿಸಿ' ಎಂಬ ಬುಲಾವ್ ಬರುತ್ತಿತ್ತು. ಆಟ ಬಿಟ್ಟು, ಟೀವಿ ಹಚ್ಚಿದ್ದ ಮಕ್ಕಳಿಗೆ ಆಡಲು ಮತ್ತೆ ಮನಸ್ಸಾಗುತ್ತಿತ್ತು. ಒಲೆಯ ಮೇಲಿಟ್ಟ ಅನ್ನದ ತಪ್ಪಲೆ ನೆನಪಾಗುತ್ತಿತ್ತು. ಬಿಟ್ಟ ಕೆಲಸಗಳೆಲ್ಲಾ ಎಲ್ಲರಿಗೂ ಅದೇ ಕ್ಷಣದಲ್ಲಿ ನೆನಪಿಗೆ ಬಂದು `ಥೂ ಎಲ್ಲಾ ಹಾಳಾಯಿತು' ಎಂದು ಚಿಂತೆ ಮೂಡುತ್ತಿತ್ತು.
ಆದರೆ ಸಿನಿಮಾಗಳು ಮಾರ್ಡ್ರನ್ ಆಗತೊಡಗಿದ ಮೇಲೆ `ದಿ ಎಂಡ್' ಎಂದೆಲ್ಲಾ ಯಾರೂ ಹೇಳಿ, ಸಿನಿಮಾ ಮುಗಿಸುವುದಿಲ್ಲ. ಚಿತ್ರದ ಎರಡು, ಮೂರನೇ ಸ್ತರದ ತಂತ್ರಜ್ಞರ ಹೆಸರುಗಳು ತೆರೆಯ ಮೇಲೆ ಸ್ಕ್ರೋಲ್ ಆಗುತ್ತಲೇ ಸಿನಿಮಾ ಮುಗಿಯಿತು ಎಂಬ ಅನುಭವ ಎಲ್ಲರಿಗಾಗುತ್ತದೆ. `ತರ್ಕ', `ಹೆಂಡ್ತಿಗ್ಹೇಳ್ತೀನಿ', `ಪಾಂಡುರಂಗ ವಿಠಲ' ಮೊದಲಾದ ಸಿನಿಮಾಗಳು ಕನ್ನಡದಲ್ಲಿ `ಮಾಡಿದರೆ ಹೀಗೆ ಸಿನಿಮಾವನ್ನು ಎಂಡ್ ಮಾಡಬೇಕು' ಎಂದು ತೋರಿಸಿಕೊಡುವಷ್ಟು ಅದ್ಭುತವಾಗಿವೆ. `ಸೈ' ಎಂಬ ಜಪಾನಿ ಸಿನಿಮಾವನ್ನು ನೀವ್ಯಾವಾಗಾದರೂ ನೋಡಿದರೆ `ಅಂತ್ಯ ಹೀಗಿರಬೇಕು' ಎಂದು ನೀವೆಲ್ಲರೂ ಸಂಭ್ರಮಿಸುತ್ತೀರಿ.
ಆದರೆ `ಎಲ್ಲರೂ ಕೊನೆಯಲ್ಲಿ ಸುಖವಾಗಿ ಬಾಳಿದರು' ಎಂಬರ್ಥದಲ್ಲಿ ಸಿನಿಮಾ ಅಂತ್ಯಗೊಂಡರೆ ಆತಂಕವಾಗುತ್ತದೆ. ಯಾಕೆಂದರೆ ಹಾಗಾಗಲು ಸಾಧ್ಯವೇ ಇಲ್ಲ. ಅಷ್ಟು ವರ್ಷ ಪ್ರಿಯತಮ- ಪ್ರಿಯತಮೆಯರು ಕಷ್ಟಪಟ್ಟು, ಕೊನೆಯಲ್ಲಿ ದಿಢೀರನೆ ಪೋಷಕರಿಂದ ಒಪ್ಪಿಗೆ ಪಡೆದುಕೊಂಡರೆ ಆ ಸಂಸಾರ ಮುಂದೆ ಸುಖವಾಗಿರುತ್ತದಾ? ಅಂತರ್ಜಾತಿ ವಿವಾಹ ಆದ ಮೇಲೆ ಇವನ ಮಾಂಸ, ಅವಳ ಸೊಪ್ಪು ಸದೆ ಒಟ್ಟಾಗಿ ಬಾಳುವುದು ಅಷ್ಟು ಸುಲಭದ ಮಾತಾ? ಸಿನಿಮಾ ಇಡೀ ಕೆಟ್ಟದ್ದನ್ನೇ ಮಾಡುವ ಖಳಭೂಪ, ಸಿನಿಮಾದ ಕೊನೆಯಲ್ಲಿ ಕ್ಷಮೆ ಯಾಚಿಸಿದ ಮೇಲೆ, ಒಳ್ಳೆಯತನವನ್ನು ಅವನ ಕಣ ಕಣದಲ್ಲೂ ರೂಢಿಸಿಕೊಂಡು ಬದುಕಲು ಸಾಧ್ಯವಾ?
ಸಿನಿಮಾಗಳ ಪಾತ್ರಗಳ ಬಣ್ಣ ನಿಜವಾಗಿಯೂ ಬಯಲಾಗಬೇಕಾದರೆ `ದಿ ಎಂಡ್'ನಿಂದ ಮತ್ತೆ ಆ ಸಿನಿಮಾ ಪ್ರಾರಂಭವಾಗಬೇಕು!
ಆಗ ಮದುವೆಯಲ್ಲಿ ಅಂತ್ಯಗೊಂಡ ಪ್ರೇಮಕತೆಗಳು ಡಿವೋರ್ಸ್ನಲ್ಲಿ ಪ್ರಾರಂಭವಾಗಬಹುದು. ಕೇಡಿಗಳನ್ನು ಜೈಲಿಗೆ ಹಾಕಿಸಿದ್ದ ಸಿನಿಮಾಗಳು ಮತ್ತೆ ಅವರ ಕೈಯಿಂದ ನಾಯಕ, ನಾಯಕಿಯರು ಕೊಲೆಯಾಗುವಲ್ಲಿ ಪ್ರಾರಂಭವಾಗಿಬಿಡಬಹುದು. ಒಡೆದು ಒಂದಾದ ಮನೆಗಳು ಮತ್ತೆ ಒಡೆಯುತ್ತಾ ಇನ್ನು ಹತ್ತಿಪ್ಪತ್ತು ಅಂಥ ಸಿನಿಮಾಗಳಿಗೆ ನಾಂದಿ ಹಾಡಬಹುದು. ಒಂದು ಕಾಲಕ್ಕೆ ಹೀನಾಮಾನ ಬೈದಾಡಿಕೊಂಡಿದ್ದ, ಶೀಲವನ್ನು ಶಂಕಿಸಿದ್ದ ಗಂಡ- ಹೆಂಡತಿಯರು ಮತ್ತೆ ಒಂದಾಗುತ್ತಾರೆ, ಆದರೆ ಪರಸ್ಪರರ ನಂಬಿಕೆಗೆ ಆ ಅವಯಲ್ಲಿ ಬಿದ್ದ ಕೊಡಲಿ ಏಟು ಮತ್ತಷ್ಟು `ಡಿವೋರ್ಸ್' ಕತೆಗಳ ಹುಟ್ಟಿಗೆ ಕಾರಣವಾಗಬಹುದಲ್ಲಾ? ನಾಯಕ ಸತ್ತ ಎಂಬಲ್ಲಿಗೆ ಕೊನೆಗೊಂಡ ಸಿನಿಮಾಗಳ ನಾಯಕಿಯರಿಗೆ ನಿಧಾನವಾಗಿ ಇನ್ನೊಬ್ಬ ಹುಡುಗನ ಜತೆ ಪ್ರೀತಿ ಪ್ರಾರಂಭವಾಗಿಬಿಡಬಹುದು.
***
ಮಲೆಯಾಳಂನಲ್ಲಿ `ರೀ ರಿಟರ್ನ್ಡ್' ಪುರಾಣಗಳು ತುಂಬ ಬಂದಿವೆ. `ಕಂಸಾಯಣ', `ಚಿಂತಾವಿಷ್ಠಯಾ ಸೀತಾ' ಮೊದಲಾದ ಪುರಾಣದ ಮರು ವ್ಯಾಖ್ಯೆಗಳು ಅಲ್ಲಿ ಬಂದಿವೆ. `ಚಿಂತಾವಿಷ್ಠಯಾ ಶ್ಯಾಮಲಾ' ಎಂಬ ಸಿನಿಮಾವೊಂದನ್ನೂ ನಿರ್ದೇಶಕ ಶ್ರೀನಿವಾಸನ್ ಮಾಡಿ, ಎಲ್ಲರ ಪ್ರಶಂಸೆಗೆ ಪಾತ್ರರಾಗಿದ್ದಾರೆ. ನಮ್ಮ ಎಲ್ಲಾ ಜನಪ್ರಿಯ ಸಿನಿಮಾಗಳನ್ನೂ ಹೀಗೆ ಅಂತ್ಯದಿಂದ ಆರಂಭಿಸಿದರೆ, ಇರುವ ಕತೆಗೆ ಮರು ವ್ಯಾಖ್ಯಾನವನ್ನು ನೀಡಲು ಸಾಧ್ಯವಾದರೆ ಕತೆ ಇಲ್ಲ ಎನ್ನುವವರ ಬಾಯಿ ಒಂದಷ್ಟು ದಿನವಾದರೂ ಬಂದ್ ಆಗಬಹುದು.
ರೀಮಿಕ್ಸ್ ಮಾಡುವವರು ಹ್ಯಾಗೆ ಇರುವ ಹಾಡನ್ನು `ಇಲ್ಲವಾಗಿಸುವಂತೆ' ಹಾಡುತ್ತಾರೋ ಹಾಗೆ ಇರುವ ಕತೆಯನ್ನು ಅದೇ ಅಲ್ಲ ಎನ್ನುವಂತೆ ಹೊಸದಾಗಿಯೇ ಹೇಳಲು ಪ್ರಯತ್ನಪಡಬಹುದು. ಹಾಗೆ ಒಂದಿಷ್ಟು ಪ್ರಯತ್ನಗಳು ನಡೆದರೆ ಒಂದಿಷ್ಟು ಹೊಸತನವಾದರೂ ಬರುತ್ತದೆ. ಹಾಗೆ ನೋಡಿದರೆ ಕನ್ನಡದಲ್ಲಿ ಎರಡನೇ ಭಾಗಗಳೇ ಅಷ್ಟು ಯಶಸ್ವಿಯಾಗಿ ಮೂಡಿ ಬಂದಿಲ್ಲ. ಆ ಬಗ್ಗೆ ಆಲೋಚಿಸುವುದು ಚಿತ್ರರಂಗದ ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು.
***
ಹೀಗೆ ಒಂದು ಆಲೋಚನೆಯನ್ನು ಹುಟ್ಟುಹಾಕಿದ್ದು ಬೆಂಗಳೂರಿನಲ್ಲಿ ಇತ್ತೀಚೆಗೆ ನಡೆಯುತ್ತಿರುವ `ಏಕವ್ಯಕ್ತಿ ನಾಟಕೋತ್ಸವ'. ಕೃಷ್ಣಮೂರ್ತಿ ಕವತ್ತಾರ್ ಎನ್ನುವ ನಿರ್ದೇಶಕ, ನಟರ `ಸಾಯುವನೇ ಚಿರಂಜೀವಿ' ನಾಟಕ ನೂರು ಪ್ರದರ್ಶನದ ಗಡಿಯನ್ನು ಮುಟ್ಟಿದೆ. ಆ ಕಾರಣಕ್ಕೆ ಏಳು ದಿನಗಳ `ಒನ್ ಮ್ಯಾನ್ ಶೋ' ಉತ್ಸವ ಬೆಂಗಳೂರಿನ `ನಯನ' ಸಭಾಂಗಣದಲ್ಲಿ ನಡೆಯುತ್ತಿದೆ. ಬರುವ ಭಾನುವಾರ (ಆಗಸ್ಟ್ 24ರವರೆಗೆ) ನಡೆಯುವ ಈ ಉತ್ಸವದಲ್ಲಿ ನಮ್ಮ ಎಲ್ಲಾ ಪುರಾಣ ಪಾತ್ರಗಳ ಮರು ವ್ಯಾಖ್ಯಾನದ ಪ್ರಸಂಗಗಳೇ ಹೆಚ್ಚಿವೆ. ಈಗಾಗಲೇ ಮಂಗಳಾ ಅವರು ನಡೆಸಿಕೊಟ್ಟ `ಊರ್ಮಿಳಾ' ಪ್ರದರ್ಶನ ರಾಮಾಯಣದ `ಊರ್ಮಿಳಾ' ಪಾತ್ರವನ್ನು ಕುರಿತಾದ್ದು.
ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ರಚಿಸಿದ ಈ ನಾಟಕ ಪ್ರಾರಂಭವಾಗುವುದೇ 14 ವರ್ಷ ವನವಾಸ ಮುಗಿದ ದಿನದಿಂದ. ಆವರೆಗೆ ಊರ್ಮಿಳಾ ಅನುಭವಿಸಿದ ನೋವು, ನಿರಾಶೆ, ಹತಾಶೆ, ಒಂಟಿತನ, ಆಕೆ ರಾಮಾಯಣವನ್ನು ವಸ್ತುನಿಷ್ಠವಾಗಿ, ಕಟುವಾಗಿ ವಿಶ್ಲೇಷಿಸುವ ರೀತಿ ತುಂಬ ಅರ್ಥಗರ್ಭಿತ. ಗುರುವಾರ `ಅಲೆಗಳಲ್ಲಿ ಅಂತರಂಗ' ನಾಟಕವಿದೆ. ವೈದೇಹಿ ಅವರು ಬರೆದ ಕತೆಯ ಆಧಾರವಿರುವ ಆ ನಾಟಕದಲ್ಲಿ ಶಾಕುಂತಲಾ ಕೇಂದ್ರ ಪಾತ್ರ. ಆಕೆ ಇಡೀ `ಅಭಿಜ್ಞಾನ ಶಾಕುಂತಲ' ಪ್ರಕರಣವನ್ನು ತನ್ನ ದೃಷ್ಟಿಕೋನದಲ್ಲಿ ನೋಡುತ್ತಾಳೆ. ಆ ಪಾತ್ರವನ್ನು ಸೀತಾ ಕೋಟೆ ನಿರ್ವಹಿಸುತ್ತಾರೆ. ಅದೇ ಥರ ಬಿ ಜಯಶ್ರೀ ಅವರ `ಉರಿಯ ಬೇಲಿ' ಏಕವ್ಯಕ್ತಿ ಪ್ರದರ್ಶನ ಶುಕ್ರವಾರ ಇದೆ. ಅದೂ ಒಂದು ಪುರಾಣ ಪಾತ್ರದ ವಿಶ್ಲೇಷಣೆಯಂತೆ. ಡಾ ಎಚ್ ಎಸ್ ವೆಂಕಟೇಶ ಮೂರ್ತಿ ಅವರು ಬರೆದ ನಾಟಕ ಇದೂ ಕೂಡ. ಆಮೇಲೆ ಕೈಲಾಸಂ ಅವರೇ ತಮ್ಮ ಜೀವನ, ಪಾತ್ರಗಳನ್ನು ವಿಶ್ಲೇಷಿಸುವ `ಟಿಪಿಕಲ್ ಟಿಪಿ ಕೈಲಾಸಂ' ನಾಟಕ ಶನಿವಾರ ಇದೆ. ಟಿ ಎನ್ ನರಸಿಂಹನ್ ಬರೆದ ಈ ನಾಟಕವನ್ನು ಸಿ ಆರ್ ಸಿಂಹ ನಿರ್ವಹಿಸುತ್ತಾರೆ. ಕಡೆಯಲ್ಲಿ ಅಶ್ವತ್ಥಾಮನ್ನ ಆಂತರಿಕ ತೊಳಲಾಟದ ನಾಟಕ: ಸಾಯುವನೇ ಚಿರಂಜೀವಿ. ಕೃಷ್ಣಮೂರ್ತಿ ಕವತ್ತಾರ್ ನಾಟಕ ಅದು.
ಪ್ರತಿ ದಿನ ಸಂಜೆ ಏಳಕ್ಕೆ ಬೆಂಗಳೂರಿನ ಟೌನ್ಹಾಲ್ ಪಕ್ಕದ ರವೀಂದ್ರ ಕಲಾಕ್ಷೇತ್ರದ ಪಕ್ಕದಲ್ಲಿರುವ `ಕನ್ನಡ ಭವನ'ದ ತಳಮನೆ `ನಯನ'ದಲ್ಲಿ ಈ ನಾಟಕಗಳ ಪ್ರದರ್ಶನ. ನೆನಪಿರಲಿ. ಎಲ್ಲಾ ನಾಟಕಗಳ ಪ್ರವೇಶ ದರ ಮೂವತ್ತು ರೂಪಾಯಿಗಳು.
Wednesday, August 20, 2008
ಡೆಡ್ ಎಂಡ್, ಟರ್ನ್ ಲೆಫ್ಟ್!
Subscribe to:
Post Comments (Atom)
black is disturbing too much
ReplyDeletehindrance to read
-g n mohan