Saturday, August 16, 2008

ದೋಣಿ ಸಾಗಲಾ ಮುಂದೆ ಹೋಗಲಾ?

ದೆಷ್ಟೋ ಮುಖ್ಯಮಂತ್ರಿಗಳು ಪ್ರತಿ ವರ್ಷ ಕಾವೇರಿ ನದಿಗೆ ಬಾಗೀನವನ್ನು ತೇಲಿ ಬಿಡುತ್ತಿದ್ದ ಹೊತ್ತಿಗೆ ಆಗ ಬಾಲ್ಯದಲ್ಲಿದ್ದ ನನ್ನಂಥವರು ನೀರಿನಲ್ಲಿ ಕಾಗದದ ದೋಣಿ ತೇಲಿ ಬಿಡುತ್ತಿದ್ದೆವು.
ಕಾಗದದ ದೋಣಿಗಳಿಗಾಗಿ ಜೀವತೆತ್ತ ನೋರ್ಟ್ಸ್‌ ಹಾಳೆಗಳೂ, ಪತ್ರಿಕೆಯ ಪುಟಪುಗಳೂ, ಅಮ್ಮ ಕೂಡಿಟ್ಟ ಅಮೂಲ್ಯ ರಸೀತಿ ಪತ್ರಗಳೂ, ತವರುಮನೆಯಿಂದ ಅಮ್ಮನಿಗೆ ಬರುತ್ತಿದ್ದ ಕಾಗದ, ಪತ್ರಗಳೂ ದೋಣಿಯಾಗಿ ಮನೆಯ ಅಂಗಳದ ನೀರಲ್ಲಿ ತೇಲಿಸೋ ಇಲ್ಲಾ ಮುಳುಗಿಸೋ ಎಂದು ಸದ್ದಿಲ್ಲದೇ ಹುಯಿಲಿಡುತ್ತಿದ್ದವು. ದೋಣಿ ಹೆಸರಲ್ಲಿ ನೀರುಪಾಲಾದ ಕಾಗದ, ಪತ್ರಗಳನ್ನು ಕಂಡು ಕಂಗಾಲಾಗಿ ಅಮ್ಮ ರಾತ್ರಿ ಬೆತ್ತದ ಸೇವೆ ಮಾಡುತ್ತಿದ್ದಳು. ನಾವು ಇನ್ನಷ್ಟು ಪೆಟ್ಟು ಬೀಳದಿರಲಿ ಎಂದು ಪೆಟ್ಟಿಗೆ ಮುಂಚೆ ಅಳುವಿನ ಸೇವೆ ಮಾಡುತ್ತಿದ್ದೆವು.
ನಾವು ಇಲ್ಲದ ಕರೆಂಟಿನ ಬೇಜಾರನ್ನು, ಇನ್ನೂ ಹಾಕಿಸದ ಟಿವಿಯ ಬಗ್ಗೆ ನೋವನ್ನೂ, ಮಳೆ ಇದ್ದರೂ ಎರಡು ಮೂರು ಕಿಲೋಮೀಟರ್‌ಗಟ್ಟಲೆ ನಡೆದು ಶಾಲೆಗೆ ಸೇರಬೇಕಲ್ಲಾ ಎಂಬ ಮುನಿಸನ್ನೂ, ಹೋಂವರ್ಕ್‌ ಮಾಡಬೇಕೆಂಬ ಸಂಕಟವನ್ನೂ, ಮುಗಿಯದ ಪಿರಿಪಿರಿ ಮಳೆಯನ್ನು ತಡೆಯಲು ಯಾರೂ ಇಲ್ಲವೇ ಎಂಬ ಅಳುಕನ್ನೂ ಮೀರುತ್ತಿರುವಂತೆ ಕಾಗದ, ಪತ್ರ, ಪತ್ರಿಕೆಗಳನ್ನು ಒಂದೊಂದಾಗಿ ಪರಪರನೆ ಸಾಯಿಸುತ್ತಾ ದೋಣಿ ಮಾಡುತ್ತಿದ್ದೆವು. ಹೋದ ಕರೆಂಟ್‌ಗೆ, ಕಾಟ ಕೊಡುವ ತರಗತಿಗಳಿಗೆ, ನಿಲ್ಲದ ಮಳೆಗೆ, ಮುಗಿಯದ ಓದಿಗೆ ಕಂಪ್ಲೆಂಟ್‌ ಬರೆದು ಕಳಿಸುವಂತೆ ದೋಣಿರಾಯನನ್ನು ರಾಯಭಾರಿ ಮಾಡುತ್ತಿದ್ದೆವು. ಆದರೆ ಹೋದ ದೋಣಿ ಒಂದೂ ಮರಳಿ ಬರುತ್ತಿರಲಿಲ್ಲ ಅಥವಾ ಮರಳಿ ಬರಲು ಈವರೆಗೂ ಆ ದೋಣಿಗಳಿಗೆ ನಮ್ಮ ಮನೆಯ ದಾರಿ ಸಿಕ್ಕಿಲ್ಲ!
***
ಹಳ್ಳಿಗಳ ಹುಡುಗರೆಲ್ಲಾ ಮಳೆಗಾಲದಲ್ಲಿ ಒಂದೇ ಸಮನೆ ದೋಣಿ ಬಿಟ್ಟರೆ ಸುಮಾರು ಹತ್ತು ವರ್ಷಗಳಲ್ಲಿ ದೋಣಿಗಳ ಸಂಖ್ಯೆ ಅದೆಷ್ಟಾಗಿರಬೇಡ? ಹಾಗಾಗಿ ಮಕ್ಕಳೆಲ್ಲಾ ದೊಡ್ಡವರಾಗುವ ಹೊತ್ತಿಗೆ, ದೊಡ್ಡವರಾಗಿ ದೊಡ್ಡ ಪಟ್ಟಣ, ಉದ್ದ ಕಟ್ಟಡಗಳಲ್ಲಿ ಕೆಲಸ ಹುಡುಕಿಕೊಳ್ಳುವ ಹೊತ್ತಿಗೆ ಅಮ್ಮನ ಸಾಲ ಸೋಲದ ಕಾಗದ ಪತ್ರಗಳೂ ಹೆಚ್ಚಾಗಿವೆ, ಆ ಪತ್ರಗಳನ್ನೇ ದೋಣಿ ಮಾಡಿಕೊಳ್ಳುತ್ತಾ ಹೋಗುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಅರೆ, ಅರೆ. ಮಕ್ಕಳು ನೋಡು ನೋಡುತ್ತಲೇ ಆ ಕಾಗದದ ದೋಣಿಗಳನ್ನೇ ಏರಿ ಪಟ್ಟಣ ಸೇರಿದ್ದಾರೆ, ಸೇರುತ್ತಿದ್ದಾರೆ. ನಮ್ಮ ದೋಣಿಗಳಿಗಾಗಿ ಅಪ್ಪ, ಅಮ್ಮನ ಸಾಲ ಸೋಲದ ಕಾಗದ ಪತ್ರಗಳು ಆತ್ಮಹತ್ಯೆ ಮಾಡಿಕೊಂಡಿವೆ. ಅವುಗಳ ಆತ್ಮಹತ್ಯೆಯ ಸೌಧದ ಮೇಲೆ ನಮ್ಮ ಮೊಬೈಲು, ನಮ್ಮ ಲ್ಯಾಪ್‌ಟಾಪ್‌, ನಮ್ಮ ಕರೆನ್ಸಿ, ನಮ್ಮ ಕರೆಂಟ್‌ ಅಕೌಂಟ್‌, ನಮ್ಮ ಅಪಾರ್ಟ್‌ಮೆಂಟ್‌, ಕಾರು, ಮೊಬೈಕು, ಇ ಮೈಲ್‌, ಜಿ ಟಾಕ್‌, ಏರೊಪ್ಲೇನ್‌...
***
ಈಗ ನಾವು ಹಬೆಯ ಕಾಫಿ ಕುಡಿಯುತ್ತಾ ಪೇಪರ್‌ ಓದುತ್ತಿದ್ದೇವೆ. ನಮ್ಮ ಪೇಪರ್‌ನೊಳಗೆ ಮುಖ್ಯಮಂತ್ರಿ ಯಡಿಯೂರಪ್ಪನವರು ಬಾಗೀನವನ್ನು ಕಾವೇರಿಯೊಳಗೆ ತೇಲಿಬಿಟ್ಟ ಫೋಟೋ, ಮೂರು ಕಾಲಮ್ಮು ಸುದ್ದಿ. ನನಗೆ ಬೆವರು ಬರುತ್ತದೆ, ಈವರೆಗೆ ಮುಖ್ಯಮಂತ್ರಿಗಳೆಲ್ಲಾ ಬಿಟ್ಟು ಬಿಟ್ಟ ಬಾಗೀನಗಳೆಲ್ಲಾ ನಮ್ಮ ಕಾಗದದ ದೋಣಿಗಳಂತೆ ಇಡೀ ರಾಜ್ಯವನ್ನು, ರಾಷ್ಟ್ರವನ್ನು ತುಂಬಿಬಿಟ್ಟಿವೆಯೇ? ಹಾಗಾಗಿಯೇ ಊರೂರುಗಳಲ್ಲಿ ಮನೆ, ಮಠ, ಮನುಷ್ಯ, ಮಕ್ಕಳು ಮುಳುಗಿ ಹೋಗುತ್ತಿದ್ದಾರಾ?
ಇದೀಗ ಮಳೆಗೆ ಸತ್ತ ಮಕ್ಕಳು, ಮುರಿದು ಹೋದ ಮನೆ, ಕುಸಿದುಬಿದ್ದ ಛಾವಣಿ, ಎಡಕ್ಕೆ ಮಗುಚಿ ಬಿದ್ದ ಬಾಗಿಲು, ಕಿಟಕಿಗಳೆಲ್ಲಾ ನನಗೆ ಕಾಗದದ ದೋಣಿಯ ಹಾಗೆ ಕಾಣುತ್ತಿವೆ.
ಒದ್ದೆಯಾಗಿ, ಮುದ್ದೆಯಾಗಿ, ಇನ್ನಷ್ಟು ಸಾವಿನ ಸುದ್ದಿಯನ್ನು ಇನ್ನೇನು ತಂದು ಪತ್ರಿಕೆಗಳ ಕಾಗದಗಳಲ್ಲಿ ತುಂಬಲಿರುವಂತೆ... `ಬ್ರೇಕಿಂಗ್‌ ನ್ಯೂಸ್‌'ಗಳ ಹೊಟ್ಟೆಯನ್ನು ಕಷ್ಟಪಟ್ಟು ತುಂಬುತ್ತಿರುವಂತೆ...

No comments:

Post a Comment