ನಮ್ಮಲ್ಲಿ ಹೆಚ್ಚಿನವರಿಗೆ `ಅಲ್ಲಿದೆ ನಮ್ಮನೆ'. ಹೊಟ್ಟೆ ಪಾಡಿನ ಹೆಸರು ಹೇಳಿಕೊಂಡು ನಮ್ಮ ಪಾಡಿಗೆ ನಾವು ಪಟ್ಟಣವಾಸಿಗಳಾದವರು. ಇಲ್ಲಿನ ಬಾಡಿಗೆ, ಭೋಗ್ಯದ ಮನೆಯಾಚೆ ನಮಗಿರುವುದು ಸೋಗೆ ಮನೆ, ನಾಡ ಹೆಂಚಿನ ಮನೆ, ಹೊಗೆ ತುಂಬಿದ ಮನೆ, ಮಳೆ ಬಂದರೆ ಮನೆ ಸೋರುವ ಮನೆ, ರಾತ್ರಿ ಪೂರ್ತಿ ಧೋ ಎಂದು ಮಳೆಯ ಸದ್ದು ಕೇಳಿದ ಮನೆ, ನಾಟಿ ಮಾಡಲು ಬೆಳಿಗ್ಗೆ ಬೇಗ ಸಜ್ಜಾದ ಮನೆ, ತೋಟಕ್ಕೆ ಔಷಧ ಹೊಡೆಸಬೇಕೆಂದು ಗಡಿಬಿಡಿ ಮಾಡಿದ ಮನೆ, ಅಮ್ಮನಿಗೆ ಅಪ್ಪ ಪೆಟ್ಟು ಕೊಟ್ಟಿದ್ದನ್ನು ರಾತ್ರಿ ಎವೆಯಿಕ್ಕದೇ ನೋಡಿದ ಮನೆ, ನೆಂಟರು ಬಂದಾಗ ಸಂಭ್ರಮಿಸಿದ ಮನೆ, ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮಗ ಪಾಸ್ ಆದಾಗ ಕುಣಿದು ಕುಪ್ಪಳಿಸಿದ ಮನೆ, ಅಜ್ಜಿ ಸತ್ತಾಗ ಅತ್ತ ಮನೆ.
ಮನೆ ಮನೆ ನಮ್ಮ ಮನೆ, ನಾನು ಅವನು ಬೆಳೆದ ಮನೆ, ಅಪ್ಪ, ಅಮ್ಮ ಇರುವ ಮನೆ...
ವರ್ಷಕ್ಕೆ ಎರಡೋ ಮೂರೋ ಬಾರಿ ನಾವು ಆ ಮನೆಗೆ ಹೋದರೂ ಆ ಮನೆಗೆ ಮತ್ತು ಮನೆಯೊಳಗಿನವರಿಗೆ ಸಂತೋಷ. ಆ ಮನೆಯ ಕೋಣೆ, ಬಾಗಿಲು, ಕಿಟಕಿ, ಹೆಂಚು, ಮಾಡು, ಪ್ರಧಾನ ಬಾಗಿಲು, ದೇವರ ಕೋಣೆ, ಬಚ್ಚಲು ಮನೆ, ಅಂಗಳ, ಜಗುಲಿಗಳು ನಮ್ಮನ್ನು ಮೌನ ಭಾಷೆಯಲ್ಲಿ ಮಾತಾಡಿಸುತ್ತವೆ. ಬಾಲ್ಯದ ನೆನಪುಗಳನ್ನು ನೆನಪು ಮಾಡಿ ಮಾಡಿ ನಮ್ಮನ್ನು ಬೆಚ್ಚಗೆ ಕೌದಿಯೊಳಗೆ ಕೂರಿಸುತ್ತವೆ. ಮನೆಯ ಯಾವ ಮೂಲೆಯಲ್ಲಿ ಏನೇ ವ್ಯತ್ಯಾಸವಾದರೂ ನಾವು `ಅಯ್ಯೋ ಇದೇನಾಯಿತು', `ಅರೆ ಇದ್ಯಾಕಾಯಿತು' ಎಂದು ವಿಚಾರಿಸಿಕೊಳ್ಳುತ್ತೇವೆ. ಆ ಮನೆಯ ನಾಡಿ ಮಿಡಿತವನ್ನು, ಉಸಿರಾಟವನ್ನೂ, ಎದೆ ಬಡಿತವನ್ನೂ ನಾವು ಅರಿಯುತ್ತೇವೆ, ಕೊಂಚ ಏರುಪೇರಾಗಿದ್ದರೂ ನಾಡಿ ಹಿಡಿದು ಗೋಳಾಡುತ್ತೇವೆ.
ಆಕಳು ಹಾಕಿದ ಇನ್ನೊಂದು ಕರು, ಸತ್ತ ಇನ್ನೊಂದು ನಾಯಿ, ಸಾಕಲಾಗಿರುವ ಮತ್ತೊಂದು ಹೊಸ ಬೆಕ್ಕು, ತೋಟಕ್ಕೆ ಹೊಡೆಸಲಿರುವ ಇನ್ನೂ ಒಂದು ಸುತ್ತು ಔಷಧ, ಅಮ್ಮನ ಕೆಮ್ಮು, ಅಪ್ಪನ ದಮ್ಮು, ತಮ್ಮನ ವಿದ್ಯಾಭ್ಯಾಸ, ಅಕ್ಕನ ಮದುವೆಗಳು ಸುರಿವ ಮಳೆ, ಕೊರೆವ ಚಳಿ ಅಥವಾ ಸುಡುವ ಬಿಸಿಲಿನ ನಡುವೆ ಮಾತಾಗಿ, ಕತೆಯಾಗಿ ಹೊರಹೊಮ್ಮುತ್ತವೆ. ಪಟ್ಟಣದ ಮಗ/ ಮಗಳು ಬಂದ ದಿನ ರಾತ್ರಿ ಎಷ್ಟು ಹೊತ್ತಾದರೂ ದೀಪ ಆರುವುದಿಲ್ಲ, ಕಾಡ ಮಧ್ಯೆ ಆಗಾಗ ದೊಡ್ಡ ಸ್ವರದ ಮಾತು, ನಗು, ಕೇಕೆ ಅನುರಣಿಸುತ್ತದೆ.
ಮಕ್ಕಳು ಮನೆಗೆ ಬಂದಾಗ ಅಮ್ಮ ಹೋಳಿಗೆ ಕೆಲಸ ಹಚ್ಚಿಕೊಳ್ಳುತ್ತಾಳೆ, ಒಬ್ಬಳೇ ಇದ್ದರೂ ಕಷ್ಟಪಟ್ಟುಪಟ್ಟುಕೊಂಡು ಹೋಳಿಗೆ ಲಟ್ಟಿಸಿಕೊಂಡು, ಕಾವಲಿಯ ಹೋಳಿಗೆ ಜತೆ ತಾನೂ ಬೇಯುತ್ತಾಳೆ. ಕೆಸುವಿನ ಎಲೆ ಹಿರಿದು ತಂದು ಪತ್ರೊಡೆ ಮಾಡುತ್ತಾಳೆ, ಚಕ್ಕುಲಿ ಹಿಟ್ಟನ್ನು ಎಣ್ಣೆಯಲ್ಲಿ ಎಳೆ ಎಳೆಯಾಗಿ ತೇಲಿ ಬಿಡುತ್ತಾಳೆ. ಪಲ್ಯ, ಪಳದ್ಯ, ಹಸಿಗಂಚಿ, ಉಪ್ಪಿನಕಾಯಿ, ಹಪ್ಪಳ, ಸಂಡಿಗೆ, ಕೋಸಂಬರಿ, ಹೆಸರು ಬೇಳೆ ಪಾಯಸ, ಉಂಡೆ, ಕಡುಬು, ಹಲಸಿನ ಇಡ್ಲಿಗಳನ್ನು ಮಾಡಿ ಮಾಡಿ, ಮಕ್ಕಳ ಮುಂದೆ ನೈವೇದ್ಯಕ್ಕೆ ಇಡುತ್ತಾಳೆ.
ತಿಂಡಿ ಮಾಡುತ್ತಾ, ತಿನ್ನಲು ಮಕ್ಕಳ ಮುಂದೆ ತಿಂಡಿ ಇಡುತ್ತಾ ಅಮ್ಮ ಮಾತಾಡುತ್ತಾ ಹೋಗುತ್ತಾಳೆ. ಅವಳ ಮಾತು ಮುಗಿಯುವುದಿಲ್ಲ. ಫೋನಿನಲ್ಲಿ ಮಗನಿಗೆ/ಳಿಗೆ ಒಪ್ಪಿಸಿದ್ದ ಸಂಕ್ಷಿಪ್ತ ಸುದ್ದಿಯನ್ನೇ ಇನ್ನೊಮ್ಮೆ ಸವಿಸ್ತಾರವಾಗಿ ಒಪ್ಪಿಸುತ್ತಾಳೆ. ಯಾರ ಮನೆಯ ಹುಡುಗಿಗೋ ಮದುವೆಯಾಗಿದ್ದು, ಯಾವುದೋ ಅಜ್ಜಿ ಸತ್ತದ್ದು, ಅಜ್ಜನಿಗೆ ಕಣ್ಣಾಪ್ರೇಷನ್ನು ಆಗಿದ್ದು, ಮಠದ ಗುರುಗಳು ಎಲ್ಲಿಗೋ ಬಂದಿದ್ದು, ಯಾವುದೋ ಮನೆಯ ಆಸ್ತಿ ಗಲಾಟೆ, ಬೇರೆಯಾದ ಮಗ- ಅಪ್ಪ- ಅಮ್ಮ... ಮಗ ಈ ಮಾತನ್ನು ಕೇಳಿಸಿಕೊಳ್ಳಲೂ ಹೋಗುವುದಿಲ್ಲ ಹಲವು ಬಾರಿ. ಕಿರಿಕಿರಿ ಎಂದು ಎದ್ದು ಹೋಗಿಯೋ, ಗೊತ್ತಮ್ಮಾ ಎಂದು ಇರಿಟೇಟ್ ಆಗಿಯೋ ಅವಳ ಕತೆಯನ್ನು ಕೇಳಿಸಿಕೊಳ್ಳುತ್ತಾನೆ/ಳೆ ಮಗ/ಳು.
ಅಮ್ಮ ಮಾತ್ರ ಶತಮಾನದ ಮಾತುಗಳನ್ನೆಲ್ಲಾ ಪೆಠಾರಿ, ಬೀರುಗಳಿಂದ ಎತ್ತಿ ಎತ್ತಿ ಮಕ್ಕಳ ಎದುರು ಹರಡುತ್ತಾಳೆ. ಮಾತು, ತಿಂಡಿ, ನೈವೇದ್ಯದ ನಡುವೆ ಮಕ್ಕಳು ಬೆಳೆಯುತ್ತಾರೆ, ದೊಡ್ಡದಾಗಿ, ಇನ್ನೂ ದೊಡ್ಡದಾಗಿ, ವಿಶ್ವರೂಪ ತೋರಿಸಿದ ಮಹಾವಿಷ್ಣುವಿನಂತೆ ವಿರಾಢ್ರೂಪವಾಗಿ ಬೆಳೆಯುತ್ತಾ ಹೋಗುತ್ತಾರೆ. ಎಸ್ಸೆಸೆಲ್ಸಿ ಪಾಸಾದಾಗ ಸಂಭ್ರಮಿಸಿದ ಮನೆ, ಆಟದಲ್ಲಿ ಬಿದ್ದು ಪೆಟ್ಟು ಮಾಡಿಕೊಂಡಾಗ ಅತ್ತ ಅಮ್ಮ, ರೈನ್ ಕೋಟ್ ಬೇಡವೆಂದು ಹಠ ಮಾಡಿದ್ದಾಗ ಕೊಡೆ ತಂದುಕೊಟ್ಟಿದ್ದ ಅಪ್ಪ ಬೆಳೆದು ಬೆಳೆದು ಮನೆಯ ಮಾಡಿಗಿಂತ, ಊರಿಗಿಂತ ಎತ್ತರ ಹೋಗಿರುವ ಮಕ್ಕಳನ್ನು ಎವೆಯಿಕ್ಕದೇ ನೋಡುತ್ತಿದ್ದಾರೆ.
***
ಅಂಥ ಅಪ್ಪ, ಅಮ್ಮ, ಮನೆ, ಆಕಳು, ಆನಂದ, ಪತ್ರೊಡೆ, ಹೋಳಿಗೆಗಳ ಆಸೆಗಾಗಿ ಈ ಸಲದ `ಚೌತಿ'ಗೆ ಊರಿಗೆ ಹೊರಟು ನಿಂತಿರುವ ಸಹಸ್ರ ಸಹಸ್ರ ಮಕ್ಕಳಲ್ಲಿ ನಾನೂ ಒಬ್ಬ!
ಅಲ್ಲಿದೆ ನಮ್ಮನೆ, ಇಲ್ಲಿ ಬಂದೆ ಸುಮ್ಮನೆ...
thumbaa ishtavaaytu...nanagooo ee tarahada nostalgiagalu yaavaagloo kaaduttave
ReplyDeleteಮತ್ತೆ ಮತ್ತೆ 'ನಮ್ಮನೆ' ನೆನಪು ಮಾಡಿ ಪ್ರಾಣ ತಿಂತೀರಾ.. ಚೌತಿ ಹಬ್ಬಕ್ಕೆ ಹೋಗ್ಬಾರ್ದು ಅಂದ್ಕೋತಿದ್ದೆ ಊರಿಗೆ; ಈಗ ಹೋಗೋಣ ಅನ್ಸ್ತಿದೆ.. :-(
ReplyDeleteಈ ಟೆಂಪ್ಲೆಟ್ ಬಹಳ ಚೆನ್ನಾಗಿದೆ ಮಾರಾಯಾ. ಬರಹಗಳೂ ಕೂಡಾ. ಮನೆಯೆಂಬ ಮಾಯೆಯೇ...
ReplyDelete