Sunday, August 10, 2008

ಅಳು ಬರುವ ಹಾಗಿದೆ...


ಮಳೆಗಾಲ ಉತ್ಕರ್ಷ ಸ್ಥಿತಿಯಲ್ಲಿ ಇರಬೇಕಾಗಿದ್ದ ಈ ಆಗಸ್ಟ್‌ ತಿಂಗಳ ಆರಂಭ ಭಾಗದಲ್ಲಿ `ಮಳೆ ಬರುವ ಸೂಚನೆ'ಯಲ್ಲೇ ದಿನಾ ಬೆಳಗಾಗುತ್ತಿದೆ. ಬರುವ ಸ್ವಾತಂತ್ರ್ಯ ದಿನಾಚರಣೆ, ಬರುವ ವರಮಹಾಲಕ್ಷ್ಮೀ ಹಬ್ಬ, ಬರುವ ಚೌತಿ, ಬರುವ ಕೃಷ್ಣಾಷ್ಟಮಿಗಳನ್ನು ಬರಮಾಡಿಕೊಳ್ಳಲು ಯಾಕೆ ಯಾರಿಗೂ ಮನಸೇ ಇಲ್ಲ?
`ಒಂದು ಕಾಲಕ್ಕೆ ಹಬ್ಬ ಎಂದರೆ ಎಂಥ ಗೌಜು, ಎಂಥ ಗದ್ದಲ, ಎಂಥ ಮೋಜು, ಎಂಥ ಮಸ್ತಿ...' ಎಂದು ಹಳೆಯ ರಾಗವನ್ನು ಹಾಡಬೇಕೆಂದಿಲ್ಲ. ಆದರೆ ಈ ಸಲ ಒಂದು ಕಡೆ ಮಳೆಯ ಅಬ್ಬರ, ಮತ್ತೊಂದು ಕಡೆ ಮಳೆ ಬರುವ ಸೂಚನೆ. ಇದರ ನಡುವೆ ದೀಪಾವಳಿಗೆ ಮಕ್ಕಳು ಪಟಾಕಿ ಸಿಡಿಸಿದಂತೆ ಬೆಂಗಳೂರಿನಲ್ಲಿ ಎಲ್ಲೆಲ್ಲೂ ಬಾಂಬ್‌ ಸಿಡಿತದ ಸದ್ದು. ಮಕ್ಕಳನ್ನು ಪೇಟೆಯಲ್ಲಿ ಬಿಟ್ಟ ಅಪ್ಪ ಅಮ್ಮಂದಿರು ಊರಿನಿಂದ ದಿನಕ್ಕೊಂದಾವರ್ತಿ ಫೋನ್‌ ಮಾಡುತ್ತಾರೆ. `ಹ್ಯಾಗಿದೀಯೋ, ಬಾಂಬ್‌ ಬ್ಲಾಸ್ಟ್‌ ಆಯ್ತಂತೆ' ಎಂದು ಆತಂಕದ ಮಾತುಗಳ ನಡುವೆ ಕಂಪಿಸುತ್ತಿದ್ದಾರೆ.
ಆದರೆ ಹಬ್ಬ ಎಂದರೆ ಊರಿಗೆ ಹೋಗಲು ರಜೆ ಸಿಗಬೇಕು, ಬಸ್‌ಸ್ಟ್ಯಾಂಡ್‌ಗೆ ಹೋಗಲು ಮಳೆ ಬಿಡಬೇಕು, ಟಿಕೇಟು ಮೊದಲೇ ಮಾಡಿಸಿಟ್ಟುಕೊಂಡಿರಬೇಕು. ಸಿಗುವ ನಾಲ್ಕು ದಿನದ ರಜೆಯ ಹೊತ್ತಿಗೆ ಆಫೀಸಲ್ಲಿ ಆಗಬೇಕಾದ ಕೆಲಸವನ್ನು ಮೊದಲೇ ಮುಗಿಸಿಕೊಳ್ಳಬೇಕು. ಇದೆಲ್ಲಾ ಆದ ಮೇಲೂ ರಜೆ ಸಿಕ್ಕ ಮೇಲೂ, ಅಬ್ಬಾ ಎಂದು ನಿಟ್ಟುಸಿರು ಬಿಟ್ಟಂತೆ ಊರಿನ ಬಸ್‌ ಇಳಿದ ಮೇಲೂ ಹಬ್ಬದ ಕಳೆ ಬರುವುದಿಲ್ಲ. ಅಡಕೆ ತೋಟಕ್ಕೆ ಔಷ ಹೊಡೆಸಿಲ್ಲ, ಬಿತ್ತನೆ ಬೀಜದ ರೇಟು ಜಾಸ್ತಿ ಆಯ್ತು, ಮಳೆ ಕಡಿಮೆಯಾಗದೇ ಹೋದರೆ ಯಾ ಮಳೆ ಬರದೇ ಹೋದರೆ ಎಂಬ ಆತಂಕ. ಹಬ್ಬದ ದಿನ ದೇವರಿಗೆ ಮಹಾಮಂಗಳಾರತಿ ನಡೆಯುವಾಗಲೂ ಅಮ್ಮನ ಮುಖದಲ್ಲಿ ಸಣ್ಣ ಆತಂಕ, ಅದರ ನಡುವೆಯೂ ಊರಿಗೆ ಅಪರೂಪಕ್ಕೆ ಬಂದಿರುವ ಮಗ- ಸೊಸೆಯರನ್ನು ವಿಚಾರಿಸಿಕೊಳ್ಳಬೇಕಾದ ಅನಿವಾರ್ಯ.
ಬೆಂಗಳೂರಿನ ಆತಂಕಕ್ಕಿಂತ ಹಳ್ಳಿಯ ಅಪ್ಪ ಅಮ್ಮನ ಆತಂಕ ಹೆಚ್ಚೋ ಕಡಿಮೆಯೋ ಎನ್ನುವ ಆಲೋಚನೆಯಲ್ಲಿ ಮಗ- ಸೊಸೆಯ ನಾಲ್ಕು ದಿನಗಳ ರಜೆ ಮುಗಿದು ಹೋಗುತ್ತದೆ. ಜಿನಿಗುಡುವ ಮಳೆ. ಸರ್ಕಾರ ದಯೆಪಾಲಿಸಿದ ಪವರ್‌ಕಟ್‌. ಯಾರಿಗೋ ಹಬ್ಬದ ದಿನವೇ ಹುಷಾರಿಲ್ಲ. ಫೋನ್‌ ಡೆಡ್‌ ಆಗಿದೆ, ದನ ಕರು ಹಾಕಿದೆ, ಆದರೆ ಕಸ ಬಿದ್ದಿಲ್ಲ. ಆ ಕರು ಇಷ್ಟು ರಾತ್ರಿ ಆದರೂ ಮನೆಗೆ ಬಂದಿಲ್ಲ ನೋಡೋ ಮಾರಾಯ. ಈ ಊರಲ್ಲಿ ಯಾವಾಗಲೂ ಫೋನು ಕೆಟ್ಟು ಹೋಗುತ್ತದೆ, ಒಂದು ಮೊಬೈಲು ಕೊಡಿಸಿಬಿಡಲಾ? ಮೊಬೈಲ್‌ ತೆಗೆದುಕೊಳ್ಳಬೇಕಾದರೆ ಇಬ್ಬರ ಆಥರೈಜೇಷನ್‌ ಬೇಕು ಎಂಬ ಸರ್ಕಾರದ ಹೊಸ ಕಾನೂನು. ಬೆಂಗಳೂರಿನಲ್ಲಿ ಮತ್ತೆ ಬಾಂಬ್‌ ಸ್ಪೋಟ, ಯಾರಿಗೂ ಗಾಯಗಳಾಗಿಲ್ಲ. ನಿಮ್ಮ ಟಾಯ್ಲೆಟ್‌ ಬೆಳ್ಳಗಾಗಬೇಕಾದರೆ ಹಾರ್ಪಿಕ್‌ ಬಳಸಿ. ನಿಮ್ಮ ಮಕ್ಕಳು ಪ್ಯೂರಿಫೈಯರ್‌ನ ನೀರನ್ನೇ ಕುಡಿಯುತ್ತಾರಾ. ಮಾತಾಡೋನೇ ಮಹಾಶೂರ. ಈ ಇಪ್ಪತ್ತೈದು ವರ್ಷದ ಯುವತಿ ಕಾಣೆಯಾಗಿದ್ದಾಳೆ, ಇನ್ನೂ ಮನೆಗೆ ಬಂದಿಲ್ಲ. ಈ ಬಗ್ಗೆ ಸಂಪೂರ್ಣ ಮಾಹಿತಿ ಟಿವಿ 9ನಲ್ಲಿ ಮಾತ್ರ. ಹೆಣ್ಣು ಭ್ರೂಣ ಹತ್ಯೆ ಮಹಾಪಾಪ.
ಮಳೆ ಬರುವ ಹಾಗಿದೆ, ಮನವೀಗ ಹಾಡಿದೆ, ಹೃದಯದಲ್ಲಿ ಕೂತು ನೀನು ನನ್ನ ಕೇಳಬೇಕಿದೆ...
ಅಳು ಬರುವ ಹಾಗಿದೆ...

No comments:

Post a Comment