ಕೋಮು ಗಲಬೆ ಎಂಬ `ಚಿಕುನ್ ಗುನ್ಯಾ' ರೋಗ ಸಾಂಕ್ರಾಮಿಕವಾಗಿ ದಿನೇ ದಿನೇ ಕರ್ನಾಟಕವನ್ನು ಆವರಿಸಿಕೊಳ್ಳುತ್ತಿದೆ. ಮತಾಂತರಕ್ಕೆ ಕಾಯ್ದೆಗಳ ಮೂಲಕ ಪರಿಹಾರ ಕಂಡುಕೊಳ್ಳುವ ಬದಲು ಹಿಂಸಾಚಾರದಿಂದಲೇ ಪರಿಹರಿಸಿಕೊಳ್ಳಲು ಎಲ್ಲರೂ ಉತ್ಸುಕರಾದಂತೆ ಕಾಣುತ್ತಿದ್ದಾರೆ.
ಅವರು ಹೊಡೆದರೆಂದು ಇವರೂ, ಇವರು ಬೈದರೆಂದು ಅವರೂ ಗುದ್ದಾಟ ನಡೆಸಿ ರಸ್ತೆ, ಬೀದಿ, ಮನೆ, ಕಾಂಪೋಂಡ್‌ಗಳು ಅನಾಥವಾಗುತ್ತಿವೆ. ಇದಕ್ಕೆ ಸರಿಯಾಗಿ ಉಪ್ಪು ಖಾರ ಹಚ್ಚಿ, ಒಗ್ಗರಣೆ ಹಾಕಿ, ರಾಜಕೀಯ ನಡೆಸಲೂ ಎಲ್ಲಾ ಪಕ್ಷಗಳೂ ನಾಚಿಕೆ ಬಿಟ್ಟು ಮುಂದಾಗಿವೆ.
ಇದರ ನಡುವೆ ಸಾಮಾನ್ಯನ ನೋವು- ಆತಂಕವನ್ನು ಕೇಳುವವರು, ಬಹುಸಂಖ್ಯಾತ- ಅಲ್ಪಸಂಖ್ಯಾತರ ಬಾಂಧವ್ಯವನ್ನು ಮತ್ತೆ ಕಟ್ಟಿ ನಿಲ್ಲಿಸಿ ಸಮಾಜವನ್ನು ಸಮಸ್ಥಿತಿಗೆ ತರುವವರು ಯಾರು ಎಂಬುದು ಪ್ರಶ್ನೆ. ಗುಜರಾತಿನ ಗಲಬೆ ವೇಳೆ ಕವಿ ಅಶೋಕ್ ಗುಪ್ತಾ ಬರೆದ ಒಂದು ಗುಜರಾತಿ ಕವಿತೆಯನ್ನು ಇಲ್ಲಿ ಅನುವಾದಿಸಿ ನೀಡಿದರೆ ಅದು ನಮ್ಮ ಗಲಬೆಯನ್ನೂ ಪ್ರತಿಬಿಂಬಿಸುವುದು ಇಲ್ಲಿ ಪರಿಸ್ಥಿತಿಯ ವ್ಯಂಗ್ಯ.
ಓಡು ಗೆಳತಿ ಓಡು
ಸತ್ತವರ ಆತ್ಮ ಖಂಡಿತ ಶಾಂತಿಯಿಂದಿಲ್ಲ,
ಬಹಳ ಮುಖ್ಯವಾಗಿ ರಾತ್ರಿ ಹೊತ್ತು.
ನನಗೆ ಎಷ್ಟೋ ಸಲ ಕೇಳುತ್ತದೆ,
ಅವನು ಮಹಡಿ ಮೇಲೆ ಹೋಗಿ
ಕೋಣೆ ಬಾಗಿಲು ಹಾಕಿಕೊಳ್ಳುತ್ತಾನೆ,
ಬಾಗಿನ್ನು ಯಾರೂ ತಳ್ಳಿ ಒಳಬರದಿರಲೆಂದು
ಮಂಚ, ಬೆಂಚುಗಳನ್ನು ಅಡ್ಡ ಇಡುತ್ತಾನೆ.
ಕೆಲವೊಮ್ಮೆ ಗಾಢ ಮೌನ,
ಸಿಡಿದು ಹಾರುವ ಬೆಂಕಿ, ಹೆಣ ಸುಟ್ಟ ವಾಸನೆ
ನೆನೆದು ಆ ಮೌನವನ್ನೂ ಒಡೆದು ಅರಚುತ್ತಾನೆ
`ಓಡು ಗೆಳತಿ ಓಡು'.
ನಾನವನನ್ನು ಸಮಾಧಾನಿಸುತ್ತೇನೆ-
`ವರ್ಷಗಳಾದವು ಗೆಳೆಯ ಅವರು ಹೋಗಿ.
ನನಗೇನೂ ಆಗಿಲ್ಲ,
ನೀನಂತೂ ಸತ್ತಾಗಿದೆ'.
ಆದರೂ ಅವನು ಕನವರಿಕೆಯಂತೆ ಕೂಗುತ್ತಾನೆ:
`ಇಲ್ಲ, ಅವರು ಬರುತ್ತಿದ್ದಾರೆ,
ಓಡು ಗೆಳತಿ ಓಡು'.
Wednesday, September 24, 2008
ಕವಿತೆಯ ಕಣ್ಣೀರು
Subscribe to:
Post Comments (Atom)
ಕಾಡುತ್ತದೆ ಪ್ರತೀ ಸಾಲು...ಈಗ ಉಳಿದಿರುವುದು ಒಂದಷ್ಟು ಭಯ, ತಲ್ಲಣ....ಓಡುವ ಕ್ರಿಯೆಯಲ್ಲಿ ಖುಷಿ ಕಾಣಬೇಕು!!....ಒಳ್ಳೆಯ ಕವಿತೆಯೊಂದನ್ನು ಅನುವಾದಿಸಿ ಕೊಟ್ಟಿದ್ದಕ್ಕೆ ಥ್ಯಾಂಕ್ಸ್..
ReplyDelete