Monday, September 22, 2008

ನಗರ ಚಳಿಯಲ್ಲೊಂದು ಅಡ್ರೆಸ್ಟಿಕೆ!

[caption id="attachment_92" align="alignleft" width="438" caption="curtacy: flickr"]flickr[/caption]

ಊರು ಬಿಟ್ಟು ಪಟ್ಟಣ ಸೇರಿದ ಮನುಷ್ಯರು ಬೆಳಿಗ್ಗೆ ಬಸ್‌ಸ್ಟ್ಯಾಂಡ್‌ನಲ್ಲಿ ಅಡ್ರೆಸ್‌ ಇಲ್ಲದೇ ನಿಲ್ಲುತ್ತಾರೆ. ತಿಕ್ಕದ ಹಲ್ಲು, ಬಾಚದ ಕೂದಲು, ಅರ್ಧಂಬರ್ಧ ಇನ್‌ಷರ್ಟ್‌, ಎತ್ತೆತ್ತಲೋ ಎತ್ತಿ ಹಾಕುವ ಕಾಲ್ಗಳು, ಭವಿಷ್ಯದ ಬಗ್ಗೆ ಆತಂಕ, ಹಿಂಬದಿ ಪಾಕೀಟಿನಲ್ಲಿರುವ ಹಣದ ಸುರಕ್ಷೆಯ ಬಗ್ಗೆ ಭಯ, ಬಸ್‌ ತಪ್ಪಿಹೋದರೆ ಎಂಬ ಚಡಪಡಿಕೆ, ಡಾಯ್ಲೆಟ್‌ಗೆ ಹೋಗುವ ಅವಸರ.

ಆಗಷ್ಟೇ ನಾವು ನಂನಮ್ಮ ಊರಲ್ಲಿ ಡಿಗ್ರಿ ಮುಗಿಸಿ, ಯಾವುದೋ ವಿಶ್ವವಿದ್ಯಾಲಯದಲ್ಲಿ ಪಿಜಿ ಪೂರೈಸಿ ನಮ್ಮ ಕೈ ಮೇಲೆ ಕೆಲಸ ಇಟ್ಟು, ತಿಂಗಳಿಗೊಂದಾವರ್ತಿ ಸಂಬಳ ನೀಡುವ ಸಾಹುಕಾರರಿಗಾಗಿ ಕಾಯುತ್ತಿರುತ್ತೇವೆ. ಕೆಲಸ ಸಿಕ್ಕಿ, ಒಂದಷ್ಟು ತಿಂಗಳು ದುಡ್ಡು ಕೂಡಿ ಹಾಕಿ ನಮ್ಮ ಮನೆಯ ಬಾಡಿಗೆಯನ್ನು ನಾವೇ ತುಂಬುವಂತಾಗುವ ಹಂತ ತಲುಪುವವರೆಗೆ, ಅಡ್ವಾನ್ಸ್‌ ಅನ್ನು ನಾವೇ ಕೂಡಿಟ್ಟುಕೊಳ್ಳುವ ಸಾಮರ್ಥ್ಯ ಬರುವವರೆಗೆ ನಮಗೆ ನಗರದ ನಂಟರ ಮನೆಯೇ ಅಡ್ರೆಸ್‌.

ಆ ತಾತ್ಕಾಲಿಕ ಅಡ್ರೆಸ್‌ನ ಅಗ್ಗಷ್ಟಿಕೆ ಹಚ್ಚಿಕೊಂಡು, ನಮ್ಮ ವಸತಿ ಚಳಿಯನ್ನು ಶಮನ ಮಾಡಿಕೊಳ್ಳುತ್ತಾ ಕೂರುತ್ತೇವೆ. ಅವರ ದಿನಚರಿಗೆ ನಮ್ಮ ದಿನಚರಿಯನ್ನು ಹೊಂದಿಸಿಕೊಂಡು, ಅವರ ಊಟದ ರುಚಿಗೆ ನಮ್ಮ ನಾಲಗೆ ಸರಿಮಾಡಿಕೊಂಡು, ಅವರ ಟಿವಿ ರಿಮೋಟ್‌ ಯಾವ ಬಟನ್‌ನಲ್ಲಿ ಯಾವಾಗಲೂ ಸ್ಥಿರವಾಗಿ ನಿಲ್ಲುತ್ತದೆ ಎಂಬುದನ್ನು ನೋಡಿಕೊಂಡು, ಅವರ ಕಾಯಿಲ್‌ ಬಿಸಿಗೆ ಒಗ್ಗಿಕೊಂಡು, ಅವರು ಹಾಸಿಗೆ ಸೇರುವುದು ಯಾವಾಗಲೋ ಆಗಲೇ ನಾವೇ ಹಾಸಿಗೆ ಸೇರಿಕೊಂಡು- ಅಡ್ರೆಸ್‌ ಇದ್ದೂ ಇಲ್ಲದವರಾಗುತ್ತೇವೆ.

ಈ ತಾತ್ಕಾಲಿಕ ಅಡ್ರೆಸ್‌ನಿಂದ ನಮ್ಮದೇ ಆದ ಅಡ್ರೆಸ್‌ಗೆ ಕೆಲವೇ ದಿನಗಳಲ್ಲಿ ಶಿಪ್ಟ್‌ ಆಗಿದ್ದೇವೆ. ಆ ಅಡ್ರೆಸ್‌ನ ವಸತಿಯಲ್ಲಿ ಬೇಕಾದಷ್ಟು ಮೌನ ಇದೆ, ಬೇಕಾದಾಗ ಮಲಗುವ ಸ್ವಾತಂತ್ರವಿದೆ, ಸ್ನಾನ ಮಾಡಿದ ಮೇಲೂ ಕಾಯಿಸಿದ ನೀರು ಹಾಗೇ ಹಾಯಾಗಿ ಉಳಿದಿದೆ. ಅನ್ನ ಮಿಕ್ಕರೂ ಬೈಯುವುದಕ್ಕೆ ಅಲ್ಲಿ ನಮ್ಮನ್ನು ಬಿಟ್ಟರೆ ಯಾರೂ ಇಲ್ಲ. ಬಲುಬೇಗ ಟೀವಿ ಬಂದಿದ್ದರೆ ರಾತ್ರಿ ಎಷ್ಟು ಹೊತ್ತೂ ಉರಿಯಬಹುದು. ಬೆಳಿಗ್ಗೆವರೆಗೆ ದೀಪ ಆರದೇಹೋಗಬಹುದು. ಓನರ್‌ ಕೀಲಿ ಹಾಕದೇ ಇದ್ದರೆ ಸಿನಿಮಾ ನೋಡಿಕೊಂಡು ಬಂದು ಸರಿರಾತ್ರಿ ಬಾಗಿಲು ಕಿರ್‌ಗುಡಿಸಿ ತೆರೆದು ಒಳಸೇರಿಕೊಳ್ಳಬಹುದು.

***

ಇಷ್ಟಾಗಿಯೂ ಅಡ್ರೆಸ್‌ ಸರಿಯಾಗಿರಬೇಕೆಂದೇನೂ ಇಲ್ಲ. ಆ ಅಡ್ರೆಸ್‌ನ ನಿಜವಾದ ಮಾಲೀಕ ಸ್ವಭಾವತಃ ರೌಡಿಯಾಗಿದ್ದರೆ ತಿಂಗಳಿಗೊಮ್ಮೆ ಜಗಳ ಸಂಭವಿಸಬಹುದು. ಬ್ಯಾಚುಲರ್‌ಗೆ ರೂಮು ಕೊಡುವ ಕಷ್ಟವನ್ನು ಆತ ನೂರಾ ಒಂದನೇ ಜನರ ಹತ್ತಿರ ಹೇಳಿಕೊಳ್ಳುವುದು ನಿಮ್ಮ ಕಿವಿ ತಲುಪಬಹುದು. ಕೊಡುವ ಬಾಡಿಗೆಯ ವಿಚಾರದಲ್ಲಿ ರಣರಂಪ ನಡೆದೀತು. ಬಾಡಿಗೆ ಜಾಸ್ತಿ ಕೊಡಬೇಕೆಂದು ಒಮ್ಮೆ, ನಾನ್‌ವೆಜ್‌ ಮಾಡುತ್ತೀರಾ ಎಂದು ಇನ್ನೊಮ್ಮೆ, ಸಿಗರೇಟು ಸೇದಿ ಡಿಸ್ಟರ್ಬ್‌ ಮಾಡುತ್ತೀರಾ ಎಂದು ಮಗದೊಮ್ಮೆ, ಕುಡಿತದ ವಾಸನೆ ಎಂದು ಮತ್ತೊಮ್ಮೆ ಬಾಡಿಗೆದಾರರಿಗೂ, ಬಾಡಿಗೆದಾನಿಗೂ ಜಗಳಬಂದಿ.

***

ಇದನ್ನೂ ಮೀರಿ ಆ ಬ್ಯಾಚುಲರ್‌ ಮ್ಯಾರೀಡ್‌ ಆಗಿದ್ದಾನೆ. ಮ್ಯಾರೇಜಸ್‌ ಆರ್‌ ಮೇಡ್‌ ಇನ್‌ ಹೆವನ್‌ ಎನ್ನುವುದು ನಿಜ ಇರಬಹುದು. ಆದರೆ ಈ ಕಾಲಕ್ಕೆ ಮ್ಯಾರೇಜಸ್‌ ಆರ್‌ ಮೇಡ್‌ ಇನ್‌ (ಒಂದೋ) ಕಲ್ಯಾಣ ಮಂಟಪ, (ಇಲ್ಲವೇ) ನೇಟೀವ್‌ ಅಡ್ರೆಸ್‌. ಮದುವೆಯಾದ ಮೇಲೆ ಮತ್ತೆ ಅಡ್ರೆಸ್‌ ಹುಡುಕಾಟ. ಆ ಮನಿ, ಈ ಮನಿ ಎನ್ನುತ್ತಾ ಮನಿ ಚೆಲ್ಲಾಟ. ಕೊನೆಗೂ ಒಂದು ಮನೆ ಸಿಕ್ಕರೆ ಪರಮನೆಂಟ್‌ ಅಡ್ರಸ್‌ ಸಿಕ್ಕಷ್ಟು ಸಂತೋಷ. ಆ ಮನೆಗೇ ಹೆಂಡತಿಯಾದವಳಿಂದ ಅಲಂಕಾರ, ಆರೈಕೆ, ಪೂರೈಕೆ.

ಇಲ್ಲಿ ಅಡ್ರಸ್‌ ಹೆಂಡತಿಯರಿಗೆ ದೊಡ್ಡ ಪ್ರೆಸ್ಟೇಜ್‌ನ ವಿಚಾರ. ಊರವರು ಬಂದರೆ ಏನಂದುಕೊಳ್ಳುತ್ತಾರೋ ಎಂಬ ಆಲೋಚನೆಯಲ್ಲೇ ಅವರಿಗೆ ಆ ಅಡ್ರೆಸ್‌ ನಿದ್ದೆಗೆಡಿಸುತ್ತದೆ. ಹೀಗೆ ನಿದ್ದೆಗೆಟ್ಟುಗೆಟ್ಟು ಆ ಸಣ್ಣ ಮನೆಗೇ ಟೀವಿಯೆದುರು ದಿವಾನಾ ಕೂಡಿಸುತ್ತಾಳೆ. ಕಿಟಕಿಗೆ ಕರ್ಟನ್‌ ಎಳೆಯುತ್ತಾಳೆ. ಇರುವ ಕೋಣೆಗೇ ಸಣ್ಣದಾದರೂ ಇರಲಿ ಎಂದು ಡೈನಿಂಗ್‌ ಟೇಬಲ್‌ ತರಿಸುತ್ತಾಳೆ. ಅದರ ಮೇಲೆ ಬಣ್ಣ ಬಣ್ಣದ ಪ್ಲಾಸ್ಟೀಕ್‌ ಶೀಟ್‌ ಬರುತ್ತದೆ. ಅಲ್ಲಿ ಜೋಡಿಸಲಿಕ್ಕಾಗಿಯೇ ಹಣ್ಣು ಹಂಪಲುಗಗಳು ಮಾರುಕಟ್ಟೆಯಿಂದ ಒಳಬರುತ್ತವೆ. ಹೊರಹೋಗುವ ಬೆಳಕನ್ನು ತಡೆಯಲು ಬಾಗಿಲು ಯಾವಾಗಲೂ ಮುಚ್ಚೇ ಇರುತ್ತದೆ. ಗೋಡೆಯ ಒಡಕು ಮುಚ್ಚಲು, ಅಡುಗೆ ಮನೆಯ ಗೋಡೆಯ ಕಲೆಗಳನ್ನು ಮರೆಮಾಚಲು ಪೋಸ್ಟರ್‌ಗಳು ಬರುತ್ತವೆ.

ಹೀಗೆ ಟೆಂಪರರಿ ಅಡ್ರೆಸ್‌ ಎಂಬ ಅಗ್ಗಷ್ಟಿಕೆ ಆಗಾಗ ಬಿಸಿ, ಮರುದಿನ ಮತ್ತೆ ಚಳಿ.

***

ಇಷ್ಟಾಗಿಯೂ ಹೆಂಡತಿಯರ ಮುಖ ಸಣ್ಣ ಆಗುವಂತೆ ಈ ಅಡ್ರೆಸ್‌ ಆಗಾಗ ಮಾಡುತ್ತಲೇ ಇರುತ್ತದೆ. ಊರಿಂದ ಬಂದ ನೆಂಟರಿಗೆ ಇಲ್ಲಿನ ಯಾವ ಮನೆಗಳೂ ದೊಡ್ಡದಾಗಿ ಕಾಣುವುದಿಲ್ಲ. ಇದು ಕಿಷ್ಕಿಂದಾಕಾಂಡದ ಒಂದು ಅಧ್ಯಾಯ ಎಂಬುದನ್ನು ಅವರ ಕಣ್ಣು ಬೇಡ ಬೇಡವೆಂದರೂ ಸಾರಿ ಹೇಳುತ್ತಿರುತ್ತದೆ. ಊಟಕ್ಕೆ ತುಂಬ ಜನರನ್ನು ಕರೆಯಲಾಗದ ಸ್ಥಿತಿಯಲ್ಲಿ ಗಂಡ- ಹೆಂಡತಿ ಚಡಪಡಿಸುತ್ತಾರೆ. ಎಷ್ಟು ಜನ ನೆಂಟರು ಬಂದಾರೋ ಎಂಬ ಆತಂಕ. ಗಂಡನ ಕಡೆಯ ನೆಂಟರು ಬಂದರೆ ಹೆಂಡತಿಗೆ ಆತಂಕ, ತನಗೆ ಏನಾದರೂ ಅವಮಾನ ಆಗಿಯೇ ಆದೀತು ಎಂಬ ಊಹೆ. ಹೆಂಡತಿಯ ಕಡೆಯವರು ಬಂದಾಗೆಲ್ಲಾ ಗಂಡ ಒದ್ದಾಡುತ್ತಾನೆ, ಗಂಡನಿಗೆ ದುಡಿದು ಒಳ್ಳೆಯ ಮನೆ ಮಾಡಲಿಕ್ಕೆ ಹರಿಯುತ್ತಿಲ್ಲ ಎಂದು ಬಂದವರು ಭಾವಿಸಿದರೆ ಅಂತ!

***

ಅಂದಹಾಗೆ ನಿಮ್ಮದು ಪರ್ಮನೆಂಟ್‌ ಅಡ್ರಸ್ಸಾ, ಟೆಂಪರ್ವರಿ ಅಡ್ರಸ್ಸಾ?

5 comments:

  1. ಹ್ಹ ಹ್ಹ ಹ್ಹ ! ಬಹಳ ಚೆನ್ನಾಗಿದೆರಿ
    - ಟೆಂಪರ್ವರಿ ಅಡ್ರೆಸ್ ನವ :D

    ReplyDelete
  2. ಕೆಲಸಕ್ಕಾಗಿ ಊರು ಬಿಟ್ಟು ಪಟ್ಟಣ ಸೇರಿ, ಕಾ೦ಕ್ರೀಟ್ ಕಾಡಿನ ಸ೦ಧಿಗಳಲ್ಲಿ ಉಸಿರು ಕಟ್ಟಿ ಬದುಕುವ ನಮ್ಮ ನಿಮ್ಮ ಜೀವನ ಜಾಲಾಡಿದ್ದೀರ ನೀವು. ಒ೦ಥರಾ ಸಿ೦ಹಾವಲೋಕನ :)

    ReplyDelete
  3. ಕೆಲಸಕ್ಕಾಗಿ ಊರು ಬಿಟ್ಟು ಇನ್ಯಾವುದೋ ಊರಿನಲ್ಲಿ ಅಡ್ರೆಸ್ಸಿಲ್ಲದಂತಾಗುವವರ ಕಷ್ಟ ಬಹಳ ಚೆನ್ನಾಗಿ , ಅಷ್ಟೇ ಫನ್ನಿಯಾಗಿ ವಿವರಿಸಿದ್ದೀರಾ.... ನಂದೂ ತೇಂಪರರಿ ಅಡ್ರೆಸ್ಟಿಕೆನೇ :)

    ReplyDelete
  4. ವಿಕಾಸ್,
    ‘ಹೊರಹೋಗುವ ಬೆಳಕನ್ನು ತಡೆಯಲು ಬಾಗಿಲು ಯಾವಾಗಲೂ ಮುಚ್ಚೇ ಇರುತ್ತದೆ. ಗೋಡೆಯ ಒಡಕು ಮುಚ್ಚಲು, ಅಡುಗೆ ಮನೆಯ ಗೋಡೆಯ ಕಲೆಗಳನ್ನು ಮರೆಮಾಚಲು ಪೋಸ್ಟರ್‌ಗಳು ಬರುತ್ತವೆ.’
    ಈ ಸಾಲುಗಳ ಒಳನೋಟ ಇಷ್ಟವಾಯ್ತು.
    ಪ್ರತಿಯೊಬ್ಬರ ಜೀವನದಲ್ಲೂ ಹಾದು ಹೋಗುವ ಅವಶ್ಯ ಮತ್ತು ಸಾಮಾನ್ಯ ವಿಷಯವೊಂದನ್ನು ಪ್ರಸ್ತಾಪಿಸುತ್ತಾ ಸಾಗಿದ ರೀತಿ ಚೆನ್ನಾಗಿದೆ.

    ReplyDelete
  5. ನಗರದ ಬದುಕಿನ ಎಲ್ಲಾ ತಲ್ಲಣಗಳನ್ನೂ ಒಟ್ಟಿಗೇ ಕಲೆ ಹಾಕಿದ್ದೀರಿ.. ನಮ್ದೇ ಕತೆ ಇದ್ದಂಗಿದೆ.. ಯಾಕೇಂದ್ರೆ, ನಮ್ದೂ ಇದೇ, ಟೆಮ್ಪರರಿ ಅಡ್ರೆಸ್ಸು! :)

    ReplyDelete