(ಧರ್ಮಾಂಧತೆಗೆ ಬಲಿಯಾದ ಜಗತ್ತಿನ ಎಲ್ಲಾ ಅಮಾಯಕರಿಗೆ ಮಿಡಿಯುವ ಬರಹ)
ತುಂಬ ದಿನಗಳಿಂದ ನೋಡಬೇಕೆಂದು ಅಂದುಕೊಂಡರೂ ನೋಡಲಾಗದೇ ಉಳಿದು ಹೋಗಿತ್ತು. ಅದು `ಪರ್ಜಾನಿಯಾ' ಎಂಬ ಚಿತ್ರ.ಅಹ್ಮದಾಬಾದ್ನ ಗುಲ್ಬರ್ಗಾ ಕಾಲೋನಿಯಲ್ಲಿ ನಡೆದ ನಿಜ ಘಟನೆ, ಆ ಘಟನೆಯಲ್ಲಿ ಕಾಣೆಯಾದ ಬಾಲಕನೊಬ್ಬನ ಕತೆ ಇದು. ಬಹುಶಃ ತುಂಬ ಚರ್ಚೆಯಾದ, ತುಂಬ ಆಕ್ಷೇಪಗಳಿಗೆ ಒಳಗಾದ ಚಿತ್ರ ಅದು. ಯಾವುದೋ ಸಿಡಿ ಸೆಂಟರ್ನಿಂದ ಇದರ ವಿಸಿಡಿ ಕೊಂಡು ತಂದು ನೋಡತೊಡಗಿದಾಗ ಗೊತ್ತಾಯಿತು, ಅದು ಅಂಥ ದುಃಸ್ವಪ್ನ ಅಂತ ನಾನು ಅಂದುಕೊಂಡಿರಲೇ ಇಲ್ಲ. ನೋಡು ನೋಡುತ್ತಾ ಕೈ ಬೆವರಿತು, ಕಣ್ಣುಗಳು ಅದುರಿದವು, ನೀರು ತುಂಬಿ ಕಣ್ಣಿಂದ ತುಳುಕಿತು. ನಿಧ ನಿಧಾನವಾಗಿ ನಿಜಕ್ಕೂ ಅದೊಂದು ಸಿನಿಮಾ ಎಂದು ಅನಿಸದೇ ನಾನು ನನ್ನ ಮನೆಯ ಪಕ್ಕದಲ್ಲೇ ಕಂಡ ಒಂದು ಭೀತ ಸನ್ನಿವೇಶದಂತೆ ಆಘಾತವಾಯಿತು. ಜಗತ್ತು ಮಲಗಲು ಹೊರಡುವ ಹೊತ್ತಿಗೆ ಶುರುವಾದ ಈ ಘಟನೆ ನನ್ನನ್ನು ನಿಧಾನವಾಗಿ ಅಸ್ವಸ್ಥನನ್ನಾಗಿಸಿತು.
`ಪರ್ಜಾನಿಯಾ' ಕತೆ ಗೋಧ್ರಾ ದುರಂತದ ನಂತರ ನಡೆಯುವ ಅಹ್ಮದಾಬಾದ್ನ ಒಂದು ಘಟನೆ. ನಾಸಿರುದ್ದೀನ್ ಶಾ- ಸಾರಿಕಾ ದಂಪತಿ ತಮ್ಮ ಇಬ್ಬರು ಮಕ್ಕಳ ಜೊತೆ ಸಂತೃಪ್ತ ಬದುಕು ಸಾಗಿಸುತ್ತಿದ್ದಾರೆ. ಅವರಿರುವ ಜಾಗದಲ್ಲೇ ಅನ್ಯ ಕೋಮು, ಅನ್ಯ ಧರ್ಮದವರೂ ಇದ್ದಾರೆ. ಇವರು ಅವರನ್ನು ಆದರಿಸುತ್ತಲೂ, ಅವರು ಇವರಿಗೆ ಅಡುಗೆ ತಂದುಕೊಡುತ್ತಲೂ, ಮಕ್ಕಳನ್ನು ಪರಸ್ಪರ ಮುದ್ದು ಮಾಡುತ್ತಲೂ ಬರುತ್ತಿದ್ದಾರೆ. ಪರಸ್ಪರರಿಗೆ ತಮ್ಮ ಕೋಮು ಮರೆತು ಹೋಗುತ್ತದೆ ಪ್ರತಿ ಬಾರಿಯೂ, ನೆನಪಾಗುತ್ತದೆ ನಿಕಟ ಸ್ನೇಹ ಯಾವಾಗಲೂ. ಈ ಮಧ್ಯೆ ಅವರಿರುವ ಗೃಹ ಸಮೂಹದಲ್ಲಿ ಒಬ್ಬ ಅಮೆರಿಕನ್ ಪ್ರಜೆ ವಾಸವಾಗಿದ್ದಾನೆ. ಆತ ಗಾಂ ತತ್ವದ ಬಗೆಗಿನ ಸಂಶೋಧನೆಗಾಗಿ ಇಲ್ಲಿ ತಂಗಿದ್ದಾನೆ. ಹಲವು ಕೋಮು, ಧರ್ಮ, ಆಲೋಚನೆ, ಸಂವೇದನೆಗಳು ಅಲ್ಲಿ ಯಾವುದೇ ತಕರಾರಿಲ್ಲದೇ ಉಳಿದುಕೊಂಡಿವೆ.
ಅಂಥ ಒಳ್ಳೆಯ ದಿನಗಳು ಕಳೆದು ಒಂದು ದುರ್ದಿನ ಕಾಲಿಡುತ್ತದೆ.
ಅಷ್ಟರಲ್ಲಿ ನಾಸಿರುದ್ಧೀನ್ ಶಾ ಆಫೀಸಿನಲ್ಲಿದ್ದಾರೆ. ಇಲ್ಲಿರುವುದು ಇಬ್ಬರು ಮಕ್ಕಳ ಜೊತೆ ಸಾರಿಕಾ ಮಾತ್ರ. ಹಾಕಿದ ಬಾಗಿಲಲ್ಲೇ ದೊಡ್ಡ ಕಿಡಿಗೇಡಿ, ಮತಾಂಧ ಗುಂಪು ಸಿಕ್ಕ ವ್ಯಕ್ತಿಯೊಬ್ಬನನ್ನು ಬಟ್ಟೆ ಬಿಚ್ಚಿಸಿ, ಹಿಂದೂವಾ ಎಂದು ಪರೀಕ್ಷಿಸುತ್ತದೆ. ಕೊನೆಗೆ ಬಾಗಿಲು ಒಡೆದು ಅವರೆಲ್ಲಾ ಸಾವಿರ ಸಾವಿರ ಸಂಖ್ಯೆಯಲ್ಲಿ ದಾಳಿ ಮಾಡುತ್ತಾರೆ. ನೋಡು ನೋಡುತ್ತಿದ್ದಂತೇ ಬೆಂಕಿ ಹಚ್ಚುತ್ತಾರೆ, ಘೋಷಣೆ ಕೂಗುತ್ತಾರೆ. ಮಹಡಿ ಮೇಲಿದ್ದವರನ್ನು ಕೆಳಗೆ ಎಳೆತಂದು ಸಾಯಿಸುತ್ತಾರೆ. ಏನಾಗುತ್ತಿದೆ, ಎಲ್ಲಿ ಹೋಗಬೇಕು ಎಂಬೆಲಾಲ ಆಲೋಚನೆ ಬರುವ ಮೊದಲೇ ನೂರಾರು ಮಂದಿ ಬೆಂಕಿಗೆ ಉರಿದು ಬೀಳುವ ಇರುವೆಗಳೆಂತೆ ಸಾವಿಗೀಡಾಗುತ್ತಾರೆ. ಅಪಾರ್ಟ್ಮೆಂಟ್ ಸುಟ್ಟು ಕರಕಲಾಗುತ್ತಾ ಸ್ಮಶಾನದಂತೆ ಹೊಗೆ, ಧಗೆ, ಬೂದಿಗಳಿಂದ ತುಂಬಲಾರಂಭಿಸುತ್ತದೆ.
ಈಗ ಅಲ್ಲೇ ಸಾರಿಕಾ ಮತ್ತು ಮಕ್ಕಳಿರುವ ಪಾರ್ಸಿ ಕುಟುಂಬವೂ ಜೀವ ಉಳಿಸಿಕೊಳ್ಳಲು ಪರದಾಡುತ್ತಿದೆ. ಮಹಡಿಯಲ್ಲಿರುವ ಈ ಮೂವರು ಆಶ್ರಯಕ್ಕಾಗಿ ಅಲೆದರೂ ಸಾಧ್ಯವಾಗುವುದಿಲ್ಲ. ಕೊನೇ ಪಕ್ಷ ತನ್ನಿಬ್ಬರು ಮಕ್ಕಳಿಗೆ ಆಶ್ರಯ ನೀಡುವಂತೆ ಸಾರಿಕಾ ಬೇಡಿಕೊಳ್ಳುತ್ತಾಳೆ. ಬಾಗಿಲು ಬಡಿದು, ಅತ್ತು ಗೋಗರೆದು ಬೇಡಿಕೊಳ್ಳುತ್ತಾಳೆ. ಆದರೆ ಯಾವ ಮುಚ್ಚಿದ ಬಾಗಿಲೂ ಅರೆಯಷ್ಟೂ ತೆರೆದುಕೊಳ್ಳುವುದಿಲ್ಲ. ಅಷ್ಟರಲ್ಲಿ ಕಿಡಿಗೇಡಿ ಗುಂಪು ಇವರನ್ನು ಅಟ್ಟಿಸಿಕೊಂಡು ಮಹಡಿಗೇ ಬಂದುಬಿಡುತ್ತದೆ. ಈಗ ಬೇರೆ ದಾರಿ ಇಲ್ಲದೇ ಕೈಕೂಸಿನಂತೆ ಮಗಳನ್ನು ಅವುಚಿಕೊಂಡು ಸಾರಿಕಾ ಮಹಡಿಯಿಂದ ಹಾರಿ ಕೆಳಗೆ ಬೀಳುತ್ತಾಳೆ. ಆದರೆ ಅಷ್ಟರಲ್ಲಿ ಮಗ ಪರ್ಜಾನ್ ಅಲ್ಲೇ ಉಳಿದುಬಿಟ್ಟಿರುತ್ತಾನೆ. ಮಗಳನ್ನು ಕಾಪಾಡುತ್ತಾ, ಕಿಡಿಗೇಡಿಗಳಿಂದ ತಪ್ಪಿಸಿಕೊಳ್ಳುತ್ತಾ ಮಗ ಎಲ್ಲಾದರೂ ಇದ್ದಾನಾ ಎಂದು ಹುಡುಕುತ್ತಾ ಸಾರಿಕಾ ಓಡುತ್ತಾಳೆ. ಅಷ್ಟರಲ್ಲಿ ಕಿಡಿಗೇಡಿಗಳ ಕೋಮಿನ ಹುಡುಗನೊಬ್ಬ ಸಹಾಯ ಮಾಡಿ, ಅವರಿಂದ ಇವರಿಬ್ಬರು ತಪ್ಪಿಸಿಕೊಳ್ಳಲು ಸಹಾಯ ಮಾಡುತ್ತಾನೆ. ದೂರದಲ್ಲಿ ಮಗ ಕಾಣೆಯಾಗಿರುತ್ತಾನೆ, ತನ್ನ ಕುಟುಂಬವನ್ನು ನೋಡದೇ ಕಂಗಾಲಾಗಿ ನಾಸಿರುದ್ದೀನ್ ಶಾ ಅಲೆಯುತ್ತಿರುತ್ತಾರೆ.
ಕುರುಕ್ಷೇತ್ರದಲ್ಲಿ ಸತ್ತ ತಮ್ಮ ಮಕ್ಕಳನ್ನು ಹುಡುಕುತ್ತಾ ರಾತ್ರಿ ಎಲ್ಲಾ ಸೈನಿಕರು ಅಲೆಯುತ್ತಿದ್ದರಂತಲ್ಲಾ, ಹಾಗೆ ಇಲ್ಲೂ ಕಾಣೆಯಾದ ಮಕ್ಕಳನ್ನು ಹೆಣಗಳ ಮಧ್ಯೆ ಅರಸುತ್ತಾ, ಮಗನಂತೆ ಕಾಣುವ ಹೆಣ ತಮ್ಮ ಮಗನದ್ದಾಗದಿರಲಿ ಎಂದು ಹಾರೈಸುತ್ತಾ ಸುಟ್ಟ ಅಪಾರ್ಟ್ಮೆಂಟ್ ಅನ್ನು ಅಲೆಯುತ್ತಾರೆ. ಕೂಗುತ್ತಾ, ಮರುಗುತ್ತಾರೆ. ಅಲ್ಲಿಂದ ಅವರ ಹುಡುಕಾಟ ಶುರುವಾಗುತ್ತದೆ. ನೂರಾರು ಮಂದಿ ಸತ್ತು, ಅದೆಷ್ಟೋ ಮಂದಿ ನಿರ್ಗತಿಕರಾಗಿರುತ್ತಾರೆ. ಆ ಮಧ್ಯೆ ಗಾಂೀಜಿ ಮೇಲೆ ಸಂಶೋಧನೆ ನಡೆಸಲು ಬಂದ ಅಮೆರಿಕನ್ ಪ್ರಜೆಗೆ ಗಾಂಯ ಅಹಿಂಸೆಗೆ ವಿರುದ್ಧವಾದ ಹಿಂಸಾತ್ಮಕ ಕೆಲಸಗಳು ದಿಗ್ಭ್ರಮೆಗೊಳಿಸಿರುತ್ತದೆ. ಆತ ನಿರ್ಗತಿಕ ಶಾ- ಸಾರಿಕಾ ಮತ್ತು ಮಗಳನ್ನು ತನ್ನ ಮನೆಗೆ ತಂದಿಟ್ಟುಕೊಂಡು ಸಲಹುತ್ತಾನೆ. ಕಳೆದ ಮಗನಿಗಾಗಿ ಹುಡುಕಾಟ ಶುರುವಾಗುತ್ತದೆ. ಆದರೆ ಹುಡುಗಾಟದ ಹಿಂದೆ ಹೆಜ್ಜೆ ಹೆಜ್ಜೆಗೂ ರಾಜಕೀಯ ಶಕ್ತಿಗಳು ಕೈವಾಡ ನಡೆಸುತ್ತವೆ, ಪೊಲೀಸ್ ಶಕ್ತಿಗಳ ಬಲವೂ ಇದಕ್ಕೆ ಸೇರಿಕೊಳ್ಳುತ್ತದೆ.
***
ಇದು ಯಾವುದೋ ಧರ್ಮವನ್ನು, ಕೋಮನ್ನು ಬೊಟ್ಟುಮಾಡಿ ಹೇಳುತ್ತಿದೆಯೆಂದು ಕಂಡುಬಂದರೂ ನಿರ್ದಿಷ್ಟ ಕೋಮನ್ನು ಮೀರಿ ಇಲ್ಲಿನ ಸತ್ಯಗಳನ್ನು ಅರ್ಥ ಮಾಡಿಕೊಳ್ಳಬೇಕು. ಯಾಕೆಂದರೆ ಇಲ್ಲಿ ದೌರ್ಜನ್ಯಕ್ಕೊಳಗಾದ ಕೋಮ ಹಾಗೂ ದೌರ್ಜನ್ಯ ಎಸಗಿದ ಕೋಮು ಅದಲು ಬದಲಾಗಬಹುದು. ಆದರೆ ಕೃತ್ಯ ಒಂದೇ, ಸ್ವರೂಪ ಒಂದೇ. ಯಾರಿಗಾದರೂ ಆಗುವ ನೋವು ಒಂದೇ, ಕೊನೆಯಲ್ಲೂ ತಮ್ಮ ಮಗನನ್ನು ಮರಳಿ ಪಡೆಯಲಾಗದ ಕುಟುಂಬವೊಂದರ ನೋವು ಹಾಗೆಯೇ ಇರುತ್ತದೆ. ಇದೂ ಒಂದು ಭಯೋತ್ಪಾದಕತೆಯ ರೂಪವಲ್ಲದೇ ಬೇರೇನಲ್ಲ.
ಗೋಧ್ರಾ ಘಟನೆಯಿಂದ ಹಿಡಿದು ಮುಂಬೈನಲ್ಲಿ ಇತ್ತೀಚೆಗಾದ ಭಯೋತ್ಪಾದಕ ಕೃತ್ಯದವರೆಗೆ ಎಲ್ಲವೂ ಮಾಡಿದ್ದೊಂದೇ- ಹಿಂಸೆ. ಒಂದು ಹಿಂಸೆಯ ಹಿಂದೆ ರಾಜಕೀಯ ನಡೆಯುವುದು ಮತ್ತು ಶ್ರೀಸಾಮಾನ್ಯನ ರಕ್ಷಣೆಗಾಗಿ ಇರುವ ಎಲ್ಲಾ ಶಕ್ತಿಗಳೂ ಈ ಹಿಂಸಾಚಾರಿಗಳ ಆಶ್ರಯಕ್ಕೆ ನಿಲ್ಲುವುದು ಪ್ರಜಾಸತ್ತಾತ್ಮಕತೆಯ ದೊಡ್ಡ ಕ್ರೌರ್ಯ. ಕೋಮು, ಧರ್ಮಗಳೆಲ್ಲವನ್ನೂ ಮೀರಿ ಮಾನವೀಯತೆ ಮುಖ್ಯವಾದಾಗಲಷ್ಟೇ ಒಂದು ಸಮಾಜ ಶಾಂತಿಯುತವಾಗಿ ನಿಲ್ಲಲು ಸಾಧ್ಯ.
ಮುಂಬೈ ಘೋರ ದುರಂತದ ನಂತರ ಇದೀಗ ಅಲ್ಲಿ ಕೃತ್ಯ ಎಸಗಿದ್ಯಾರು, ಪಾಕಿಸ್ತಾನ, ಯುದ್ಧ, ರಕ್ಷಣಾ ವ್ಯವಸ್ಥೆಯ ವೈಫಲ್ಯ, ಬೇಹುಗಾರಿಕೆ ಸಂಸ್ಥೆಗಳು ನೀಡಿಲ್ಲದ ಮುನ್ಸೂಚನೆ, ಎಲ್ಲೆಲ್ಲಿ ಎಷ್ಟರ ಮಟ್ಟಿಗೆ ರಕ್ಷಣೆ ಇದೆ... ಎಂಬಿತ್ಯಾದಿ ಚರ್ಚೆಯೇ ನಡೆಯುತ್ತಿದೆ. ಮಾಧ್ಯಮಗಳೂ ಅದೇ ಮುಖದಲ್ಲಿ ಚರ್ಚೆ ನಡೆಸಿ ಸುಸ್ತಾಗಿವೆ. ಆದರೆ ಮುಂಬೈನಲ್ಲಿ ಪರ್ಜಾನ್ನಂಥ ಅದೆಷ್ಟು ಹುಡುಗರು ಇದ್ದಾರು, ಇನ್ನೂ ಅದೆಷ್ಟೋ ಮಂದಿ ಬದುಕಿದ್ದಾರೋ ಇಲ್ಲವೋ ಎಂದು ಯಾರೂ ಕೇಳುತ್ತಿಲ್ಲ. ತಾಜ್ ಹೊಟೇಲ್ನ ಕತೆಯಾಯ್ತು, ರೈಲ್ವೇ ನಿಲ್ದಾಣದಲ್ಲಿ ಸತ್ತ, ತಮ್ಮವರನ್ನು ಕಳೆದುಕೊಂಡ ಅಮಾಯಕರ ಕತೆ ಏನಾಯಿತು ಎಂದೇ ಗೊತ್ತಾಗುತ್ತಿಲ್ಲ.
`ಪರ್ಜಾನಿಯಾ' ಅಂಥ ಕಾಣೆಯಾದ ಅದೆಷ್ಟೋ ಹತಭಾಗ್ಯರನ್ನು ನಮಗೆ ನೆನಪು ಮಾಡಿಕೊಡುತ್ತದೆ. ಅವರಿಗಾದ ಅನ್ಯಾಯಕ್ಕೆ ನಮ್ಮ ರಕ್ತ ಕುದಿಯುತ್ತದೆ. ಅದರ ಜೊತೆ ನಮ್ಮ ಕಣ್ಣೀರು ಅವರಿಗಾಗಿ ತುಳುಕುತ್ತದೆ.
ಎರಡು ವರ್ಷದ ಕೆಳಗೆ ಈ ಫೀಲ್ಮ್ ನೋಡಿದ್ದೆ. ಅದರ ಕೆಲ ಚಿತ್ರಗಳು ಇನ್ನೂ ನೆನಪಿವೆ. ನೋಡಿ ಒಂದು ವಾರ ನನ್ನ ತಲೆ ಸರಿ ಇರಲಿಲ್ಲ. ಧರ್ಮ ಅನ್ನೋದು ಆಫೀಮು ಅಂತ ಕೆಲವರು ಹೇಳೊದು ಯಾಕೆ ಅಂತ ಅರ್ಥವಾಯಿತು. ಹಿಂದೂಗಳು ಹೀಗೆ ಮಾಡ್ತಾರಾ/ಮಾಡಿದ್ದಾರಾ ಅಂತ ಜೀರ್ಣ ಮಾಡಿಕೊಳ್ಳೊಕೆ ನನ್ನ ಕೈಯನಲ್ಲಿ ಆಗಿಲ್ಲ. ಈ ಫಿಲ್ಮ್ ನೋಡಿ ಆದ ಮೇಲೆ ಕೇಸರಿ ಬಣ್ಣ, ಬಾವುಟ ನೋಡಿದ ಕೂಡಲೇ ಸಿಟ್ಟು, ವಾಕರಿಕೆ ಬರೋಕೆ ಪ್ರಾರಂಭ ಆಗಿದ್ದು . ಎರಡು ವರ್ಷ ಕಳೆದ್ರೂ ಇನ್ನೂ ಈ ಇಫೆಕ್ಟ್ ನಿಂದ ತಪ್ಪಿಸಿಕೊಳ್ಳೋಕೆ ನನಗೆ ಆಗಿಲ್ಲ.
ReplyDeleteನೀಲಾಂಜಲ ಅವರೆ,
ReplyDeleteಹಾಗಿದ್ರೆ "ಲಜ್ಜಾ" ಕೂಡ ಒಂದ್ಸಲ ಓದಿ.
ನಾನು ಈ ಚಿತ್ರವನ್ನು ನೋಡಿಲ್ಲ. ನಿಮ್ಮ ಬರಹದಲ್ಲಿ ಚಿತ್ರ ಕಣ್ಣಿಗೆ ಕಟ್ಟುವಂತೆಯಿದೆ. ಕೋಮುವಾದದ ಗಲಬೆಗಳಿಂದ ಒಳ್ಳೆಯದಾದದ್ದು ಇದುವರೆಗೆ ನಾನು ಕೇಳಿಲ್ಲ, ಹಿಂದೂವಾಗಲೀ ಮುಸ್ಲೀಮಾಗಲೀ ಮಾನವೀಯತೆಯನ್ನು ಮರೆತು ತನ್ನ ಕೋಮಿನ ಪರವಾಗಿ ನಿಂತಾಗ ಆಗುವ ಅನಾಹುತಗಳಿಗೆ ಕೊನೆಯೇ ಇಲ್ಲ. ನೀವು ಹೇಳಿದಂತೆ ಕೋಮು, ಧರ್ಮಗಳೆಲ್ಲವನ್ನೂ ಮೀರಿ ಮಾನವೀಯತೆ ಮುಖ್ಯವಾದಾಗಲಷ್ಟೇ ಒಂದು ಸಮಾಜ ಶಾಂತಿಯುತವಾಗಿ ನಿಲ್ಲಲು ಸಾಧ್ಯ.
ReplyDeletejagathhu e-dina jathyya neleya mele ninthide e dristikona athyantha amanaveeya lakshnagally ondu.Yare agaly jaathiyanna manassinallittu kollabeke horathu kaiyally alla. E galabegalige karana manushra jaathigalu kaigalige bandhude agiruthave.
ReplyDeletethanks