Tuesday, December 9, 2008

`ನನ್ನಪ್ಪ ಸಾಯದೇ ಇರುತ್ತಿದ್ದರೆ...'

princess02ಮುಂಬೈಯ ಎಷ್ಟು ಮನೆಗಳು ಯಜಮಾನರನ್ನು, ಯಜಮಾನರು ತಮ್ಮ ಹೆಂಗಸರನ್ನು, ಹೆಂಗಸರು ಮಕ್ಕಳನ್ನು, ಮಕ್ಕಳು ಅಪ್ಪ ಅಮ್ಮಂದಿರನ್ನು, ಅಮ್ಮಂದಿರು ಬಂಧು ಬಳಗವನ್ನು ಕಳೆದುಕೊಂಡಿವೆಯೋ- ಗೊತ್ತಿಲ್ಲ. ನಾವು ಸಿದಾಂತವನ್ನು, ನೀತಿಯನ್ನು, ಕ್ರೌರ್ಯವನ್ನೂ ಮಾತಾಡುತ್ತಾ, ಲೇಸ್‌ ತಿನ್ನುತ್ತಾ ಟೀವಿ ನೋಡುತ್ತಾ ಕುಳಿತಿದ್ದೇವೆ.
ಬ್ಲಾಗ್‌ಗೆ ಯಾವುದೇ ಹೊಸ ವಿಚಾರವನ್ನೂ ಹಾಕಲು ಮನಸ್ಸಾಗುತ್ತಿಲ್ಲ. ಏನೇ ವಿಚಾರ ಬಂದಾಗಲೂ ಮತ್ತೆ ಹೊಗೆಯಾಡುತ್ತಿರುವ ಮುಂಬೈ, ಓಡುತ್ತಿರುವ ಭಯಭೀತ ಕಾಲುಗಳು, ಸಂದೀಪ್‌ ಉನ್ನಿಕೃಷ್ಣನ್‌, ಆಸ್ಪತ್ರೆಯ ಹೆಣಗಳು, ಹರಿದುಕೊಂಡು ಬಿದ್ದ ಚಪ್ಪಲಿಗಳು ಕಣ್ಣಿಗೆ ಕಟ್ಟುತ್ತಿವೆ.
ಹಿಂದೆ ಅಮೆರಿಕಾ ಅವಳಿ ಕಟ್ಟದ ಮೇಲೆ ಆದ ಬಾಂಬ್‌ ದಾಳಿಯಲ್ಲೂ ಹೀಗೇ ಆಗಿತ್ತು, ಸುನಾಮಿಯಲ್ಲೂ ಹೀಗೇ. ಆದರೆ ಅದಕ್ಕೂ ಹಿಂದೆ ಹಿರೋಷೀಮಾ, ನಾಗಸಾಕಿಯಲ್ಲಿ ಹೀಗೇ ಆಗಿತ್ತಲ್ಲಾ? ಒಂದು ಕಾಲದ ಆ ದುರಂತ ಈಗಲೂ ಮತ್ತಷ್ಟು ಹತಭಾಗ್ಯರನ್ನು ಹಡೆಯುತ್ತಲೇ ಇದೆ. ಮಕ್ಕಳಿಗೆ ಅಪ್ಪ ಇಲ್ಲದೇ, ತಮ್ಮನಿಗೆ ತಂಗಿಯಿಲ್ಲದೇ ಈಗ ಹಿರೋಷಿಮಾದಲ್ಲಿ ಹಡೆದ ಮಕ್ಕಳ ಬಾಯಲ್ಲೆಲ್ಲಾ ಪ್ರಶ್ನೆಗಳೇ.
ಅಲ್ಲಿನ ಶಾಲಾ ಮಕ್ಕಳು ಬರೆದ ಒಂದಿಷ್ಟು ಕವಿತೆಗಳನ್ನು ಓದಿದರೆ ಕರುಳು ಕಿವುಚುತ್ತದೆ. ಅಂಥ ಮೂರು ಕವಿತೆಗಳ ಭಾವಾನುವಾದ ಇಲ್ಲಿವೆ, ಓದಿ.


ಟೀಚರ್‌ಗಾದ ಗಾಯ
(ಹಿರೋಷಿಮಾ ನಗರದ ಎರಡನೇ ಕ್ಲಾಸ್‌ ಹುಡುಗ ನೋಬುಕೋ ಕಕುತಾನಿ ಬರೆದದ್ದು)
ನನ್ನ ಟೀಚರ್‌
ಕುತ್ತಿಗೆಯ ಮೇಲೆ
ಬಾಂಬ್‌ನದಂತೆ, ಗಾಯ.
ಛೇ ಛೇ ಹಾಗಾಗಬಾರದಿತ್ತು
ನಾನಂದುಕೊಂಡೆ ಅವತ್ತು.

ಡ್ಯಾನ್ಸ್‌ ಹೇಳಿಕೊಡುವಾಗ
ಕೂಡ ಕಂಡೆ, ಗಾಯ.
ಈ ಬಾರಿ ಮೊಣಕೈ ಮೇಲೆ,
ಈ ಸಲ ಅಂದುಕೊಂಡೆ
ಪಾಪ ತುಂಬ ಉರಿಯುತ್ತಿರಬೇಕು...

ಅನಾಮಧೇಯ ಕವಿತೆ
(ಹಿರೋಷಿಮಾ ನಗರದ ಶಾಲೆಯೊಂದರ ಐದನೇ ಈಯತ್ತೆ ವಿದ್ಯಾರ್ಥಿ ಟೊಮೋಕೋ ಸಾಟೋ ಬರೆದದ್ದು)

ಪುಟಾಣಿ ಯೋಶಿಕೋ
ಗಾಯಗೊಂಡು
ಹಾಸಿಗೆ ಮೇಲಿದ್ದ,
ಟೊಮೇಟೋ ತಿನ್ನಬೇಕಂತೆ
ಒಂದೇ ಹಠ.

ಅದನ್ನು ತರೋಣವೆಂದು
ಅಮ್ಮ ಹೊರಹೋಗಿದ್ದಳು,
ಅಷ್ಟರಲ್ಲಿ
ಕಂದ ಯೋಶಿಕೋ
ತೀರಿಯೇ ಹೋದ.

ನನ್ನಮ್ಮ ಹೇಳಿದಳು,
ಅವಳಿಗೆ ಕೊಡಲು ನಮ್ಮ ಹತ್ತಿರ ಇದ್ದದ್ದು
ಆಲೂಗೆಡ್ಡೆ ಮಾತ್ರಾ.
ಅಯ್ಯೋ, ನಾವೆಲ್ಲಾ ಸೇರಿ ಅವಳನ್ನು ಕೊಂದೆವು.

ಅಮ್ಮ ಅತ್ತಳು
ನಾನು ಅತ್ತೆ
ಎಲ್ಲರೂ ಅಳುತ್ತಿದ್ದಾರೆ...

ನನ್ನಪ್ಪ
(ಹಿರೋಶಿಮಾ ನಗರೆದ ಶಾಲೆಯೊಂದರ ಮೂರನೇ ಕ್ಲಾಸ್‌ನ ಕಾಯ್ಕೋ ಕಕೀತಾ ಬರೆದದ್ದು)

ಹಿರೋಶಿಮಾ ಬಹಳ ಒಳ್ಳೆಯ ನಗರ,
ನನ್ನಪ್ಪ ಸತ್ತದ್ದು ಅಲ್ಲೇ,
ಪರಮಾಣುವಿನ ಮೋಡದೊಳಗೆ ಅಪ್ಪ ಹೋಗಿದ್ದು ಅಲ್ಲೇ,
ನನ್ನಪ್ಪ ಸತ್ತಿದ್ದು ಆ ಕೋಟೆಯಲ್ಲೇ,
ನನ್ನನ್ನು ಒಂಟಿಯಾಗಿಸಿದ ಚಿಕ್ಕಂದಿನಲ್ಲೇ.
ನನ್ನಪ್ಪನ ಮುಖ ನಾ ನೋಡಲಿಲ್ಲ,
ನನ್ನಪ್ಪನ ಮುಖ ನೋಡುವುದಕ್ಕೆ ತುಂಬ ಆಸೆ,
ಕನಸಲ್ಲಾದರೂ ನನ್ನಪ್ಪನನ್ನು ಕಾಣುವಾಸೆ.
ನನ್ನಪ್ಪನನ್ನು ಕಾಣಬೇಕು, ಒಮ್ಮೆ ಕೈ ಹಿಡಿಯಬೇಕು...

ನಮಗೆ ಯುದ ಇರದೇ ಇರುತ್ತಿದ್ದರೆ
ನನ್ನಪ್ಪ ಸಾಯುತ್ತಿರಲಿಲ್ಲ,
ನಾವು ಹುಟ್ಟಿದೂರಲ್ಲೇ
ವಾಸ ಮಾಡಲು ಅಡ್ಡಿ ಇರಲಿಲ್ಲ
ಮತ್ತು ಅಣ್ಣ ಕೇಳಿದ ಸೈಕಲ್ಲನ್ನು
ಅಪ್ಪ ತಂದುಕೊಡದೇ ಇರುತ್ತಿರಲಿಲ್ಲ...

10 comments:

  1. ನಮಗೆ ಹತ್ತನೆಯ ತರಗತಿಯಲ್ಲಿ ಹಿರೋಷಿಮಾ ಎಂಬ ಒಂದು ಪಾಠವಿತ್ತು. ಅದು ಇನ್ನೂ ನನಗೆ ಕಣ್ಣಿಗೆ ಕಟ್ಟುವಂತಿದೆ.. ಹಾಗೆ ಅದು ನೆನಪಾದಾಗಲೆಲ್ಲ ಮನ ಕಲಕುತ್ತದೆ.

    ReplyDelete
  2. ತುಂಬಾ ಬೇಜಾರಾಯಿತು...
    ಬದುಕಿರುವಷ್ಟು ನಾಲ್ಕು ದಿನ ನಗುತ್ತ...ಇರಲಾಗದೇ... ನಮ್ಮಿಂದ..?

    ReplyDelete
  3. ವಿಕಾಸ,
    ತುಂಬ ಹೊತ್ತು ದುಃಖಿಸಿದೆ. ಅಯ್ಯೊ, ಅದು ಹೇಗೆ ಜೀವ ಕಲಕುವ ಹಾಗೆ ಬರೆದಿವೆ ಪುಟಾಣಿಗಳು? ಇನ್ನೆಂದೂ ಮಕ್ಕಳು ಹೀಗೆಲ್ಲ ಬರೆಯಲು ಆಗುವುದು ಬೇಡ ದೇವರೆ, ನೀನಿರುವುದಾದರೆ.

    ReplyDelete
  4. ಕರುಳು ಕಿವುಚಿದಂತಾಗುತ್ತಿದೆ..

    ReplyDelete
  5. ವಿಕಾಸ್,
    ಈ ಭಾವ ನಿವೇದನೆಗಳನ್ನು ಓದುತ್ತಿದ್ದರೆ ಕರುಳು ಹಿಂಡಿದಂತೆ ನೋವು ಬಿಟ್ರೆ ಇನ್ನೇನಿಲ್ಲ..
    ಅಂದ ಹಾಗೆ ನೀನಿನ್ನೂ ಅದೇ ಹಳೆಯ ವಿಕಾಸನೇ... ಒಂಚೂರೂ ಬದಲಾಗಿಲ್ಲ ಅನಿಸುತ್ತೆ.. ಅದೇ ಹಳೆಯ ಸಂವೇದನೆಗಳು..
    ಈ ಕ್ಷಣ ಸಿಧ್ಧವನದಲ್ಲಿ ಕಥಾ ಕಾರ್ಯಾಗಾರದಲ್ಲಿ ನೀನು "ನೀ ಹೀಂಗ" ಹಾಡಿದ್ದು ... ನಿನ್ನ ಭಾವಪೂರ್ಣ ಹಾಡಿಗೆ ನಾ ಅತ್ತಿದ್ದು ಎಲ್ಲ ನೆನಪಾಯಿತು..
    "ಲಕ್ಷ್ಮಣ ಬರಲಿಲ್ಲ".. ಇನ್ನೂ ಮರೆತಿಲ್ಲ..
    ಶಮ, ನಂದಿಬೆಟ್ಟ.

    ReplyDelete
  6. ಆ ಮಕ್ಕಳ ಮುಗ್ಧ ಮನಸ್ಸಿಗೆ ಅರ್ಥವಾಗುವ ನೋವು, ವೇದನೆ ಮನುಕುಲದ ವಿನಾಶಕ್ಕೆ ಕಂಕಣ ಕಟ್ಟಿರುವ ರಕ್ತಪಿಪಾಸುಗಳಿಗೆ ಅರ್ಥವಾಗುವುದೆಂದು..?

    ReplyDelete
  7. ಕಣ್ಣೆದುರು ಕಾಣುವ ಹಾಗಿದೆ ಪದ್ಯ. ಫಸ್ಟ್‌ಕ್ಲಾಸ್

    ReplyDelete
  8. ಶಾಕ್ ಆದೆ .! ಬೀಳುವ ಏಟುಗಳು ನಮನ್ನು ಮನುಷ್ಯರನ್ನಾಗಿ ಮಾಡುತ್ತವೆಯೊ ಹೇಗೆ ? " ಅಣ್ಣ ಕೇಳಿದ ಸೈಕಲ್ ಆಪ್ಪ ಇದ್ದಿದ್ದರೆ ತ೦ದುಕೊಡದೆ ಇರುತಿರಲಿಲ್ಲ.." ಅ೦ದ ಆತನ ಮನಸ್ಸ ಸಾಲುಗಳು ಬಹು ಇಷ್ಟಆಯಿತು .

    ReplyDelete
  9. ನಮ್ಮ ನಿಮ್ಮ ಒಂದೊಂದು ಹನಿ ಕಣ್ಣೀರೂ ಈ ಜಗತ್ತಿನ ಅಂಥ ಮುಗ್ಧ ಮಾನವರಿಗೆ ಅಶ್ರುತರ್ಪಣವಾಗಬೇಕು. ಆ ಕಣ್ಣೀರಿನ ಪ್ರವಾಹದಲ್ಲಿ ಎಲ್ಲಾ ರಕ್ತದಾಹದ `ಸಿದ್ಧಾಂತ'ಗಳೂ ಕೊಚ್ಚಿ ಹೋಗಿ ಮನುಕುಲ ಶಾಂತಿಯಿಂದ ತುಂಬಬೇಕು.
    ಈ ಮಕ್ಕಳಿಗಾಗಿ ಮಾನವೀಯ ಸ್ಪಂದನೆ ನೀಡಿದ್ದಕ್ಕೆ ಥ್ಯಾಂಕ್ಸ್‌
    -ವಿಕಾಸ ನೇಗಿಲೊಣಿ

    ReplyDelete
  10. ಸಂಕಟಕ್ಕೆ ಮಾತು...ಶಬ್ದ....ವಿವರಣೆ ಯಾವುದೂ ಇರುವುದಿಲ್ಲ. ಅದನ್ನು ಅನುಭವಿಸಿದವರಿಗಷ್ಟೇ ಅದು ತಟ್ಟುವುದು. ಅನುವಾದಿತ..ಅಲ್ಲಲ್ಲ...ರೂಪಾಂತರಿಸಿದ ಪದ್ಯಗಳು ಸಂಕಟವನ್ನು ಮೂರ್ತೀಕರಿಸಿವೆ...ಮನುಷ್ಯಪರ ನಿಲುವುಗಳನ್ನು ಸಮರ್ಥಿಸಿವೆ

    ReplyDelete