Saturday, December 6, 2008

ಕಾಪಾಡು ಶ್ರೀ ಡಿಸೆಂಬರ್‌ ಮಾರಾಯನೇ

hands-folded-in-prayerಈ ಡಿಸೆಂಬರ್‌ ತಿಂಗಳು ಯಾರಿಗೂ ಸುಖಕರವಾಗಿಲ್ಲ. ಆರ್ಥಿಕ ಕುಸಿತದಿಂದ ಕೆಲಸ ಕಳೆದುಕೊಳ್ಳುವ ಭಯದಲ್ಲಿ ಇಡೀ ದೇಶ ಬದುಕುತ್ತಿದೆ. ಭಯೋತ್ಪಾದಕ ಕೃತ್ಯಗಳಿಂದಾಗಿ ಯಾರೂ ನೆಮ್ಮದಿಯಾಗಿ ಆಫೀಸಿಗೆ, ಸಿನಿಮಾಕ್ಕೆ, ಶಾಪಿಂಗ್‌ಗೆ ಹೋಗುತ್ತಿಲ್ಲ. ಚಿತ್ರಮಂದಿರಗಳಿಗೆ, ಮಾಲ್‌ಗಳಿಗೆ ವ್ಯಾಪಾರವಿಲ್ಲ. ಜನ ಸಂಚಾರದಲ್ಲಿ ಒಂದು ಬಗೆಯ ದುಗುಡ.
ಎಲ್ಲಕ್ಕೂ ಮುಖ್ಯವಾಗಿ ಡಿಸೆಂಬರ್‌ ಮಹಾ ಚಳಿಯ ತಿಂಗಳು. ಬೆಂಗಳೂರಿನಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇದ್ದಂತಿಲ್ಲ. ಬೆಳಿಗ್ಗೆ ಎದ್ದರೆ ಚಳಿಯಿಂದ ಹೊರ ಬರುವುದಕ್ಕೆ ಎರಡು- ಮೂರು ತಾಸಾದರೂ ಬೇಕು. ಆಮೇಲೆ ಬಿಸಿಲಿಗೆ ಮೈ, ಕೈ ಒಡೆದುಕೊಂಡು ಇಡೀ ದಿನ ದೂಡಬೇಕು. ಸಂಜೆಯಾಗುತ್ತಲೇ ಬಹಳ ಬೇಗ ಆವರಿಸಿಕೊಳ್ಳುತ್ತದೆ ಕತ್ತಲು. ಸಂಜೆ ರಾತ್ರಿಯಲ್ಲಿ ಸೇರಿಕೊಂಡು ಯಾವುದು ಸಂಜೆ, ಯಾವುದು ರಾತ್ರಿ ಎಂದೇ ಗುರುತಿಸುವುದು ಕಷ್ಟ. ಹೀಗಾಗಿ ಚಳಿ ನಮ್ಮೆಲ್ಲರನ್ನೂ ಮಂಕಾಗಿಸುತ್ತಿದೆ, ಮೂಡ್‌ ಹಾಳು ಮಾಡುತ್ತಿದೆ.
ಹಿಂದೊಮ್ಮೆ ನವೆಂಬರ್‌ ತಿಂಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯ ನಡೆದದ್ದು ಅಮೆರಿಕಾದ ಅವಳಿ ಕಟ್ಟಡದ ಮೇಲೆ. ಅಲ್ಲಿಂದ ಶುರುವಾದ ಭಯ ಬೆಳೆಯುತ್ತಲೇ ಇದೆ. ಈ ನವೆಂಬರ್‌ನಲ್ಲಂತೂ ಮುಂಬೈ ಭಯೋತ್ಪಾದಕ ಕೃತ್ಯ ಇಡೀ ದೇಶವನ್ನು ನಡುಗಿಸಿದೆ. ಇನ್ನಷ್ಟು ದಾಳಿಯ ಭೀತಿ ಎಲ್ಲಾ ಕಡೆ ಇರುವುದರಿಂದ ಈ ಡಿಸೆಂಬರ್‌ ಆ ಭಯದಲ್ಲೇ ತಿಂಗಳು ದೂಡುವ ಅನಿವಾರ್ಯತೆ ಇದೆ. ಡಿಸೆಂಬರ್‌ ತಿಂಗಳಲ್ಲೇ ಬಾಬ್ರಿ ಮಸೀದಿ ಮೇಲೆ ದಾಳಿ ನಡೆದಿದ್ದರಿಂದ ಆ ಬಗ್ಗೆ ಭೀತಿ ಮುಂದುವರಿದಿದೆ. ಆ ಘಟನೆಯ ನೆನಪು ಸಹಜವಾಗಿ ಒಂದು ತಳಮಳವನ್ನು ಸಣ್ಣಗೆ ಹುಟ್ಟು ಹಾಕಿದೆ.
`ಆವುದೋ ಭಯ ಎಂಥದೋ ಭಯ' ಎಂಬ ಸಾಲಿನ ಗೀತೆಯೊಂದು ಪು. ತಿ. ನರಸಿಂಹಾಚಾರ್‌ ಅವರ `ಗೋಕುಲ ನಿರ್ಗಮನ' ಗೀತ ನಾಟಕದಲ್ಲಿ ಬರುತ್ತದೆ. ಹಾಗೆಯೇ ಈ ಡಿಸೆಂಬರ್‌ನಲ್ಲಿ ನಮ್ಮೆಲ್ಲರಿಗೂ ಕೂಡ ಆವುದೋ ಭಯ. ಮೇಲಕಾರಿಗಳು ಉದ್ಯೋಗಿಯನ್ನು ಚೇಂಬರ್‌ಗೆ ಕರೆದರೆ ಕೆಲಸ ಕಳೆದುಬಿಡುತ್ತಾರೋ ಎಂಬ ಭಯ. ನಮ್ಮ ಏರಿಯಾದಲ್ಲಿ ಯಾವುದೋ ಪಟಾಕಿ ಸಿಡಿದರೆ ಬಾಂಬ್‌ ಇಟ್ಟರೋ ಎಂಬ ಭಯ. ಬೆಂಗಳೂರಿನಲ್ಲಿರುವ ಮಗ/ ಮಗಳು ಊರಲ್ಲಿರುವವರ ಸಂಪರ್ಕಕ್ಕೆ ಎರಡು ದಿನ ಸಿಗಲಿಲ್ಲವೆಂದರೆ ಊರಲ್ಲಿ ಅಪ್ಪ, ಅಮ್ಮಂದಿರಿಗೆ ಆತಂಕ. ಆಫೀಸಿನಿಂದ ಗಂಡ ಬರುವುದು ಸ್ವಲ್ಪ ತಡವಾದರೆ ಹೆಂಡತಿಗೂ, ಮಗ/ಗಳು ಶಾಲೆ, ಕಾಲೇಜಿನಿಂದ ಬರುವುದು ಸ್ವಲ್ಪ ತಡವಾದರೂ ಅಪ್ಪ- ಅಮ್ಮನಿಗೆ ಜೀವವೇ ಬಾಯಿಗೆ ಬಂದ ಹಾಗೆ.
ಬಿವಿ ಕಾರಂತರು `ಗೋಕುಲ ನಿರ್ಗಮನ'ವನ್ನು ರಂಗ ರೂಪಕ್ಕಿಳಿಸಿದಾಗ ಕೊನೆಯಲ್ಲಿ ಒಂದು ದೃಶ್ಯ ತಂದಿದ್ದರು. ಗೋಕುಲ ತೊರೆದು ಹೋದ ಕೃಷ್ಣನಿಗಾಗಿ ಎಲ್ಲರೂ ದೀಪ ಇಟ್ಟುಕೊಂಡು ಕಾಯುತ್ತಾ ಮರಳಿ ಬರುವಂತೆ ಪ್ರಾರ್ಥಿಸಿ ಹಾಡುತ್ತಾರೆ. ಹಾಗೇ ನಾವೆಲ್ಲಾ ಹಾಡಬೇಕು, ನಮ್ಮನ್ನು ಕಾಪಾಡಲು ಬರಲಿರುವ ಆವುದಾದರೂ ಶಕ್ತಿಗಾಗಿ, ನಮ್ಮನ್ನು ಬಿಟ್ಟು ಹೋಗಲಿರುವ ಭೀತಿಗಾಗಿ, ನಮ್ಮನ್ನು ಮತ್ತೆ ಆವರಿಸಿಕೊಳ್ಳಲಿರುವ ನೆಮ್ಮದಿಗಾಗಿ, ನಮ್ಮವರು ರಾತ್ರಿ ಮನೆಗೇ ಬರಬೇಕೆಂಬ ಬೇಡಿಕೆಗಾಗಿ, ಕೆಲಸ ಕಳೆದು ನಿರ್ಗತಿಕರನ್ನಾಗಿ ಮಾಡಬಾರದೆಂಬ ಅಪೇಕ್ಷೆಗಾಗಿ, ರಸ್ತೆ, ಮನೆ, ಶಾಲೆ, ಹೊಟೇಲ್‌, ರೈಲ್ವೇ ನಿಲ್ದಾಣ, ರೈಲುಗಳು ರಕ್ತಸಿಕ್ತವಾಗಬಾರದೆಂಬ ಕಾಳಜಿಗಾಗಿ.

3 comments:

  1. ಹಿಂದೊಮ್ಮೆ ನವೆಂಬರ್‌ ತಿಂಗಳಲ್ಲಿ ದೊಡ್ಡ ಭಯೋತ್ಪಾದಕ ಕೃತ್ಯ ನಡೆದದ್ದು ಅಮೆರಿಕಾದ ಅವಳಿ ಕಟ್ಟಡದ ಮೇಲೆ.
    ಮಾರಾಯ್ರೇ,
    ೯/೧೧ ಅಂದ್ರೆ november 9 ಅಲ್ಲ ಸ್ವಾಮೀ september 11.
    nice article, kind concerns about the safty of everybody.
    this december chill is followed by bloody november kill. really i am afraid. hope to see tomorow.
    Venkat

    ReplyDelete
  2. tnx 4 information venkat,
    neevu heliddu sari. confuse agi heege tappagide
    -vikas negiloni

    ReplyDelete
  3. ಗೀರ್ವಾಣಿDecember 12, 2008 at 7:39 AM

    ಬೆಂಗಳೂರಲ್ಲಿ ಇರುವಷ್ಟು ಚಳಿ ಯಾವ ಮಲೆನಾಡಲ್ಲೂ ಇರಲಿಕ್ಕಿಲ್ಲ ಎನ್ನುವ ಮಾತನ್ನು ನಾನಂತೂ ಒಪ್ಪಲ್ಲ.ಮಲೆನಾಡು ಕಂಡ ವಿಕಾಸ್ ಗೆ ಅರ್ಥವಾಗಬಹುದು. ಗಂಟೆ ಹನ್ನೊಂದಾದರೂ ತೋಟ ದಾಟಿ ಬರದ ಸೂರ್ಯ, ದಾಟಿ ಬಂದರೂ ಮನೆ ಒಳಗೆ ಬಿಡದ ಅಡಿಕೆ ಅಟ್ಟ, ಪಕ್ಕದ ದರೆ, ಮನೆ ಮುಂದಿನ ಗುಡ್ಡ, ಎಲ್ಲಿಯ ಮಲೆನಾಡು? ಎಲ್ಲಿಯ ಬೆಂಗಳೂರು? ಎರಡು ಕಂಬಳಿ ಹೊದ್ದು ತಲೆಗೆ ಮಫ್ಲರ್‍ ಕಟ್ಟಿ ಬೆಂಕಿ ಹಾಕಿಕೊಂಡು ಗದ್ದೆಗಳಲ್ಲಿ ರಾತ್ರಿ ಬೆಳೆ ಕಾಯುವ ರೈತನಿಗೆ ಗೊತ್ತು ಚಳಿಯ ಅರ್ಥ. ಆದರೆ ಅವನಿಗೆ ನಾವೆಲ್ಲ ದಿಗಿಲುಬೀಳುವ ಪುಟ್ಟ ಪುಟ್ಟ ಆತಂಕಗಳ ಅನುಭವವಿರಲಿಕ್ಕಿಲ್ಲ. ಆ ನೆಮ್ಮದಿ ಅವನಿಗೆ ಶಾಶ್ವತವಿರಲಿ.
    ಕಳ್ಳಕುಳ್ಳಧ್ವಯರ ನೋಡಿ ಸಂತೋಷವಾಯಿತು. ಚೆನ್ನಾಗಿದೆ ಕೂಡ.
    ಧನ್ಯವಾದಗಳು.
    ಗೀರ್ವಾಣಿ.

    ReplyDelete