ಪ್ರಿಯ ವಿಕಾಸ,

ಮುಂಬೈ ದುಷ್ಕೃತ್ಯದ ಹಿನ್ನೆಲೆಯಲ್ಲಿ ಹೃದಯದಿಂದ ಮಾತನಾಡಿದ್ದೀರಿ. ಹಾಗೆಂದೆ ನನ್ನ ಹೃದಯವೂ ಹಗರಾಗಿದೆ, ಆತಂಕದ ಸಂದರ್ಭದಲ್ಲಿ ಅಪ್ಪಿಕೊಳ್ಳುವಷ್ಟು. ಆ ಎರಡು ದಿನ ಒಳಗೊಳಗೆ ಅತ್ತವನು ನಾನು. ಇಸ್ಲಾಮಿನ ಹೆಸರಿನಲ್ಲಿ ಮನುಷ್ಯವಿರೋಧಿ ರಕ್ಕಸರು ಮಾಡಿದ ಹೇಯ ಕೃತ್ಯವದು. ಅವರು ತಮ್ಮನ್ನು ಇಸ್ಲಾಮಿಯರು ಎಂದು ಭ್ರಮಿಸಿಕೊಂಡಿದ್ದಾರೆ. ಅವರಷ್ಟೆ ಅಲ್ಲಾ, ಹಾಗೇ ಯೋಚಿಸುವ ಮತಾಂಧರು ಆಳದಲ್ಲಿ ಸೈತಾನರೇ ಆಗಿರುತ್ತಾರೆ. ಇಂತಹ ಕಲ್ಪಿತ
ಜೆಹಾದ್‌ನಲ್ಲಿ ಸತ್ತು ಸ್ವರ್ಗ ಸೇರುತ್ತೇನೆಂಬ ಭ್ರಮೆ ಅವರಿಗಿದ್ದರೆ ನಂಬದಿದ್ದರೂ ನಾನು ಹೇಳುತ್ತೇನೆ. ಅವರು ನರಕಕ್ಕೆ ಮಾತ್ರ ಯೋಗ್ಯರು. ಧರ್ಮದಮಲಿನ ಮತ್ತನ್ನು ನೆತ್ತಿಗೆರಿಸಿಕೊಂಡ ಹಿಂದೂ, ಮುಸ್ಲಿಂ ಇತ್ಯಾದಿ ಅತಿರೇಕಗಳೇ ಚರಿತ್ರೆಯಿಂದ ಇವರೆಗೂ ರಾಕ್ಷಸರನ್ನು ಸೃಷ್ಠಿಸಿರುವುದು. ದೇಶಭಕ್ತಿ, ಧರ್ಮ ಭಕ್ತಿಗಳ ತೋರುಗಾಣಿಕೆಯ ಹಿಂದಿನ ಅಧಿಕಾರ ರಾಜಕಾರಣ ಇಂತಹ ಮತಾಂಧ ಸಾಮಾಜಿಕತೆಯನ್ನು ಸೃಷ್ಠಿಸುತ್ತದೆ. ಜಿನ್ನಾ, ಗೊಲ್ವಾಲ್ಕರ ಮೊದಲಾದವರ
ಚಿಂತನೆಗಳಲ್ಲಿ ಇವತ್ತಿನ ಸಂದರ್ಭದ ಬೀಜಗಳಿವೆ. ಜಿನ್ನಾ ಧಾರ್ಮಿಕನಾಗಿರಲಿಲ್ಲ. ಆದರೆ ಧಾರ್ಮಿಕವೆಂಬ ದೇಶವನ್ನು ಸೃಷ್ಠಿಸಿದ, ಅದು ಶುದ್ಧ ಸ್ಮಶಾನದ ಮೇಲೆ. ಪಾಕಿಸ್ತಾನ ನಿಜಕ್ಕೂ ಬೇಯುತ್ತಿರುವುದೇ ಖಬರಸ್ತಾನ ಮೇಲೆ. ಇತ್ತ ಕಡೆ ಚಿಂತನಗಂಗಾದ ಮಾರ್ಗದರ್ಶನದಲ್ಲಿ ಹಿಂದೂ ಮತೀಯ ರಾಷ್ಟ್ರೀಯ ನಿರ್ಮಾಣಕ್ಕೆ ಗೊಡ್ಸೆ ಮಾಡಿದ್ದು ಅದನ್ನೆ.
ನನಗೀತ ಭಾರತದ ಧಾರ್ಮಿಕ ಭಯೋತ್ಪಾದನೆಯ ಸಂಸ್ಥಾಪಕನೆಂದು ಕಾಣುತ್ತಾನೆ. ಈ ಯಾವ ಅರಿವಿಲ್ಲದೆ ಭಯೋತ್ಪಾದನೆ ಎಂದರೆ ಮುಸ್ಲಿಂರು ಎನ್ನುವುದು. ಮಕ್ಕಳನ್ನು ಹಡೆದು ಜನಸಂಖ್ಯೆ ಹೆಚ್ಚುಸುತ್ತಿದ್ದಾರೆ ಎನ್ನುವುದು. ನೆಮ್ಮದಿಯಿಂದ ದುಡಿದು ಬದುಕುತ್ತಿರುವ ನಿಷ್ಪಾಪಿ ಮುಸ್ಲಿಂರನ್ನು ಸಾಮೂಹಿಕವಾಗಿ ಶಂಕಿಸುವಂತೆ ಹಿಂದೂ ದೇಶಭಕ್ತಿಯ ಸನ್ನಿ ಸೃಷ್ಠಿಯಾಗುತ್ತಿರುವುದು ಇದು ಇನ್ನೊಂದು ಬಗೆಯ ಅತಿರೇಕದ ಅಪಾಯ.
ಲದ್ದಿಜೀವಿಗಳೆಂದು ಲೇವಡಿ ಮಾಡುವುದು, ನಕಲಿ ಜಾತ್ಯಾತೀತರೆನ್ನುವುದು ಇಂತಹ ಬಳಕೆಗಳ ಹಿಂದೆ ವಿವೇಕವನ್ನು ಸಮೂಹ ಸನ್ನಿಯ ಕೈಗೆ ಒಪ್ಪಿಸಿದ ಆಪಾಯವಿದೆ. ಇಂತಹ ಸಂದರ್ಭದಲ್ಲಿ ಇಸ್ಲಾಂ ಕಾಫಿರರನ್ನು ಕೊಲ್ಲು ಎನ್ನುತ್ತದೆ ಇತ್ಯಾದಿ... ಇಸ್ಲಾಮಿನ ಅಪವ್ಯಾಖ್ಯಾನ ಓದಿನ ಕೊರತೆಗಿಂತ ರಾಜಕೀಯ ಅಪಪ್ರಚಾರವೇ ಆಗಿರುತ್ತದೆ.
ಕುರಾನ ಆಗಲಿ, ಭಗವದ್ಗೀತೆಯಾಗಲಿ ಇವತ್ತಿನ ಸಮಸ್ಯೆಗಳಿಗೆ ಉತ್ತರಿಸುತ್ತವೆ ಎನ್ನುವುದೇ ಮೂರ್ಖತನ. ಈ ಮೂರ್ಖರು ಎದರುಬದರು ನಿಂತು ಗುಜರಾತನ್ನು, ಮುಂಬೈಯನ್ನು ಭಯೋತ್ಪಾದಕ ನಕಾಶೆಯಲ್ಲಿ ಗುರುತಿಸಿದ್ದಾರೆ. ಮುಖ್ಯವಾದದ್ದನ್ನು ಹೇಳಿ ಮುಗಿಸುತ್ತೇನೆ. ಈ ಹೊತ್ತಿನ ದುರಂತ ಮತ್ತು ಆಪಾಯವೆಂದರೆ ಭಯೋತ್ಪಾದನೆಯ ವಿರೋಧದ ನೆಪದಲ್ಲಿ ಮುಸ್ಲಿಂ ಜನಸಮುದಾಯ ವಿರೋಧಿ, ಹಿಂದೂ ರಾಜಕಾರಣಕ್ಕೆ ಪೂರಕವಾಗಿ ನಮ್ಮ ಕೆಲ ಬರಹಗಾರ ಮಿತ್ರರು ಆವೇಶವನ್ನು
ಅಪವ್ಯಾಖ್ಯಾನವನ್ನು, ಸುಳ್ಳನ್ನು ಪರಿಣಾಮದಲ್ಲಿ ಅಮೇರಿಕಾದ ಸಾಮ್ರಾಜ್ಯಷಾಹಿ ಏಜೆಂಟರಾಗಿ ಬರಹಕ್ಕೆ ಇಳಿದಿರುವುದು. ಲಾಡೆನ ಬೆಳೆದಿದ್ದು ಹೀಗೆಯೇ, ಅಂತೆಯೇ ಇಂದಿನ ಇಂಡಿಯಾದ ಸೋಕಾಲ್ಡ ಹಿಂದೂ ದೇಶಭಕ್ತ (ನಿಜ ಹಿಂದೂವಲ್ಲದ) ಪತ್ರಕರ್ತರು ಇವರ ಅಪ್ರೋಚ ಬಗ್ಗೆ ನನಗೆ ಖೇದವಿದೆ. ಲಷ್ಕರೆ ಕ್ರಿಮಿಗಳಿಗೂ, ಗೊಡ್ಸೆ, ಮುತಾಲಿಕ ಮೊದಲಾಗಿ ಯಾವ ವ್ಯತ್ಯಾಸವೂ ಆಳದಲ್ಲಿ ಇಲ್ಲ.
ಥ್ಯಾಂಕ ಯೂ ವಿಕಾಸ. ಬರೆಯುತ್ತಾ ದೊಡ್ಡದಾಯಿತು. ನನ್ನದೆಯೂ ಕುದಿಯುತ್ತಿದೆ. ಈ ದೇಶ ತಣ್ಣಗಾಗಿಸಲು.
ಹಿಂದೂ, ಮುಸ್ಲಿಂ ಅತಿರೇಕಗಳಿಂದ ಹೊರ ಬಂದು ಯೋಚಿಸಲು ಸಾಕಷ್ಟು ಇದೆ. ಇಲ್ಲದಿದ್ದರೆ ಭಯೋತ್ಪಾದನೆಯನ್ನು ಖಂಡಿತ ನಿವಾರಿಸಲು ಆಗದು.
ಅಮೇರಿಕಾದ ಗಿಡುಗ ನಮ್ಮ ನೆತ್ತಿಯ ಮೇಲೆ ಹಾರುತ್ತಲೇ ಇದೆ. ಇಂಡಿಯಾದ ಅಸ್ತಿತ್ವದ ಸೂತ್ರವೇ ಇದರ ಪಂಜಿನಲ್ಲಿ ಸಿಕ್ಕು ಹಾಕಿಕೊಂಡಿರುವಾಗ ಕವಿ, ಪತ್ರಕರ್ತ, ಬರಹಗಾರರ ವಿವೇಕ ಸರಿದಾರಿಗೆ ಬರಬೇಕಿದೆ.
ನಿಮ್ಮೊಳಗಿನ ಪ್ರಾಮಾಣಿಕ ಮಿಡಿತಕ್ಕೆ, ಮಾನವೀಯತೆ ಜೊತೆ ನಾನಿದ್ದೇನೆ ವಿಕಾಸ ಕೈಚಾಚಿ ನನ್ನೊಂದಿಗೆ.
ನಿಜ ಹೇಳಲೇ ಆಸರೆಯೂ ಬೇಕಿದೆ ಈ ಹೊತ್ತು. ಬೀಸಿ ಬರುವ ಕಲ್ಲುಗಳಿಂದ ಮರೆಯಾಗಲು, ಮನುಷ್ಯತ್ವದ ತಾಣಬೇಕಿದೆ ನನ್ನಂತವರಿಗೆ.
- ಬಿ. ಪೀರಭಾಷ