ಕೃಷ್ಣನಾ ಕೊಳಲಿನ ಕರೆ
ತೊಟ್ಟಿಲ ಹಸುಗೂಸು ಮರೆ ಮರೆ
ೃಂದಾವನಕೆ ತ್ವರೆ ತ್ವರೆ
ಕೃಷ್ಣನ... ಕೊಳಲಿನ... ಕರೆ...
***
`ಮಿಂಚು'ವಿನ ಜಗದೀಶ ಆರಾಮಾಗಲಿ, ಅಲ್ಲಿನ ರಾಜೀವನಿಗೆ ಜೈಲಾಗಲಿ, ಕಾತ್ಯಾಯಿನಿ ಮತ್ತೆ ಹುಟ್ಟಿ ಬರಲಿ, ಸಂಜನಾಗೆ ಇನ್ನೊಂದು ಮದುವೆಯಾಗಲಿ, `ಮುಗಿಲು'ಗಳೇ ಎಂಬ ಟೈಟಲ್ ಸಾಂಗ್ ಅನ್ನು ದಿನವೂ ಸಂಪೂರ್ಣ ಹಾಕುತ್ತಿರಲಿ, ಪಟ್ರೆ ಅವನಿಗೆ ಅನ್ಯಾಯ ಮಾಡಿದವರ ವಿರುದ್ಧ ಸೇಡು ತೀರಿಸಿಕೊಳ್ಳಲಿ, ಮೇಘಕ್ಕನಿಗೆ, ತಂಗಿ ವರ್ಷಾಗೆ ನ್ಯಾಯ ಸಿಗಲಿ, ಸುರಭಿಗೆ ಇನ್ನೊಂದು ಮದುವೆ ಆಗದಿರಲಿ, ಸುರಭಿ- ಶಶಿ ಒಂದಾಗಲಿ, `ಮಣ್ಣ ತಿಂದು ಸಿಹಿ ಹಣ್ಣ ಕೊಡುವ ಮರ ನೀಡಿ ನೀಡಿ ಮುಕ್ತ...' ಹಾಡಂತೆ ಟಿ ಎನ್ ಸೀತಾರಾಂ ಹೆಣ್ಣು ಮಕ್ಕಳ ಜೀವ ತಿಂದು ಕತೆಯನ್ನು ಮುಂದುವರಿಸುತ್ತಾ ಹೋಗಲಿ, ಬೇಗ ಬೇಗ ಕೋರ್ಟ್ ಸೀನ್ ಬರಲಿ, ಸೀತಾರಾಂ ಆಗಾಗ ಕಾಣಿಸಿಕೊಂಡು ಯಾರನ್ನಾದರೂ ಬೈಯ್ಯುತ್ತಿರಲಿ...
ಮುಗಿಲು ಮೂಕವಾಗಿ
ಯುಗವೇ ತಾಪವಾಗಿ
ಕತ್ತಲು ಬಿರಿದು ಮಿಂಚೀತೇ ಇಂದು
ಮಿಂಚು ಮಿಂಚು ಸುಳಿ ಮಿಂಚು
ಅದು ಬೇಟೆಯಾಡುವ ಮಿಂಚು...
***
ಟೀವೀಲಿ ಒಂದೊಂದು ದಿನ ಒಂದೊಂದು ಧಾರಾವಾಹೀಲಿ ಗರ್ಭಪಾತ ಮಾಡಿಸ್ಕೊಳ್ಳೋಕೆ ಹೋಗ್ತಾ ಇರ್ತಾರೆ, ಚಾನಲ್ನೋರೇ ಏನೂ ಹೇಳೋಲ್ಲ. ಇನ್ನು ನಾನು ಈ ಗರ್ಭ ತೆಗೆಸಿಕೊಂಡರೆ ಏನಾಗುತ್ತದೆ ಅಮ್ಮ ಎಂದು ಐಟಿ ಫರ್ಮ್ ಒಂದಕ್ಕೆ ರಾತ್ರಿ ಪಾಳಿಗೆ ಹೋಗುವ ಮಗಳು ಅಮ್ಮನನ್ನು ಕೇಳುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲೆಲ್ಲಾ ಕಾಲು ಊನ, ಕೈ ಊನ ಮಾಡಿಕೊಂಡ ಹೆಣ್ಣು ಮಕ್ಕಳು ಇದ್ದೇ ಇರ್ತಾರೆ ಎಂದು ಗಾಲಿಕುರ್ಚಿ ಮೇಲೆ ಕುಳಿತು ಇಡೀ ದಿನ ಕಳೆಯುವ ಹುಡುಗಿ `ಟೀವಿ ಆರಿಸು'ವಂತೆ ಹಠ ಹಿಡಿಯುತ್ತಾಳೆ. ಸೀತಾರಾಂ ಧಾರಾವಾಹಿಗಳಲ್ಲಿ ಗಂಡಸರಲ್ಲಿ ಒಬ್ಬರಿಲ್ಲಾ ಒಬ್ಬರು ಬೇಜವಾಬ್ದಾರರಿರುತ್ತಾರಲ್ಲಾ ಎಂದು ಒಬ್ಬ ಮಗ ಮನೆಯಲ್ಲೇ ಪಿ ಎಚ್ಡಿ ಮಾಡುತ್ತಾನೆ.
ತನ್ನಾವರಣವೇ ಸೆರೆ ಮನೆಯಾದರೆ
ಜೀವಕೆ ಎಲ್ಲಿಯ ಮುಕ್ತಿ...
ಬೆಳಕಿನ ಬಟ್ಟೆಯ ಮುಟ್ಟುವ ಜ್ಯೋತಿಗೆ
ಬಯಲೇ ಜೀವನ್ಮುಕ್ತಿ...
***
ಪ್ರೇಕ್ಷಕ ಪರಮಾತ್ಮನ ಕೈಯ್ಯಲ್ಲಿ ರಿಮೋಟ್ ಎಂಬ ಸುದರ್ಶನ ಚಕ್ರ. ಬಟನ್ಗಳು ಒತ್ತುತ್ತಾ ಹೋದಂತೆ `ಸುವರ್ಣ ನ್ಯೂಸ್ಗೆ ಸ್ವಾಗತ, ಮುಖ್ಯಾಂಶಗಳು... ಬಾಂಬ್ ದಾಳಿ ಬಗ್ಗೆ ನಿಮಗೇನನ್ನಿಸುತ್ತದೆ... ನೀವು ತುಂಬ ಚೆನ್ನಾಗಿ ಹಾಡಿದಿರಿ, ಆದರೆ ಶ್ರುತಿ ಬಗ್ಗೆ ಸ್ವಲ್ಪ ಗಮನ ಕೊಡಿ. ಸಾಹಿತ್ಯ ಸ್ಪಷ್ಟವಾಗಿರಲಿಲ್ಲ. ಎರಡನೇ ಪ್ಯಾರಾ ಎರಡನೇ ಲೈನ್ನಲ್ಲಿ ಶಾರ್ಪ್ ಹಾಡಿದಿರಿ, ಆದರೆ ಅದು ಫ್ಲಾಟ್. ಆದರೆ ಓವರ್ ಆಲ್ ಒಳ್ಳೆಯ ಪರ್ಫಾರ್ಮೆನ್ಸ್... ಇವತ್ತು ನಮ್ಮ ಜತೆಗಿದ್ದಾರೆ ಕನ್ನಡ ಚಿತ್ರರಂಗದ ಖ್ಯಾತ ಕತೆಗಾರ ಅಜ್ ಕುಮಾರ್. ಇವರ ಈವರೆಗಿನ ಚಿತ್ರಗಳ ಮೌಲ್ಯಗಳ ಬಗ್ಗೆ ಇಲ್ಲಿ ಒಂದು ಗಂಟೆಗಳ ಕಾಲ ಡಿಸ್ಕಷನ್... ಬಾಳೇ ಬಂಗಾರ ಕಾರ್ಯಕ್ರಮಕ್ಕೆ ಆತ್ಮೀಯ ಸ್ವಾಗತ... ನೀವು ಗೆದ್ದಿರೋದು ಎರಡು ಸಾವಿರ ರೂಪಾಯಿಗಳ ಚಿನ್ನ, ಚಪ್ಪಾಳೆ...
ಅಯ್ಯೋ ಮತ್ತೆ ಪವರ್ಕಟ್!
ದೇವರೇ ಕರೆಂಟು ಬೇಗ ಬರಲಿ, ಧಾರಾವಾಹಿಗಳ ಕತೆ ಮುಗಿಯದಿರಲಿ, ಎಷ್ಟೇ ವರ್ಷವಾಗಲೀ, ಧಾರಾವಾಹಿ ನಿಲ್ಲದಿರಲಿ, ಬಾಂಬ್ ಬ್ಲಾಸ್ಟ್ ಬಗ್ಗೆ ಒಂದೊಂದು ಚಾನಲ್ನವರು ಒಂದೊಂದು ವಿಶೇಷ ಕಾರ್ಯಕ್ರಮ ಮಾಡುತ್ತಿರಲಿ, ಬಾಂಬ್ ಬ್ಲಾಸ್ಟ್ ಹೀಗೇ ಮುಂದುವರಿಯಲಿ, `ಸಿಂಗರ್ ಹಂಟ್' ಕಾರ್ಯಕ್ರಮಗಳಲ್ಲಿ ಮಕ್ಕಳು ಶ್ರುತಿ ಸೇರಿಸಿ ಹಾಡಲಿ, ಜಡ್ಜ್ಗಳು `ಶ್ರುತಿ ಸರಿಯಿರಲಿಲ್ಲ' ಎಂದು ಕಾಮೆಂಟ್ ಮಾಡುತ್ತಿರಲಿ...
ತುಂಬಾ ತುಂಬಾ ಉತ್ತಮ ಬರಹ
ReplyDeleteವ್ಯಂಗ್ಯ ಹಾಸ್ಯ ಎರಡು ಮಿಳಿತವಾಗಿ ನಗಿಸುತ್ತಲೇ ಟಿ.ವಿ ಮುಂದೆ ಕೂರುವ
ನಮ್ಮಂಥವರಿಗೆ ತಿವಿಯುತ್ತದೆ
ನಮ್ಮ ಸೃಜನ ಶೀಲತೆಯನ್ನು ಟಿವಿ. ಹೇಗೆ ಮುರುಟಿ ಹಾಕುತ್ತಿದೆ ಅಂತ ಸಕಾಲಿಕವಾಗಿ ಎಚ್ಚರಿಸಿದ್ದೀರಿ ತುಂಬಾ ಇಷ್ಟವಾಯಿತು
ಧನ್ಯವಾದಗಳು
ತುಂಬಾ ಚೆನ್ನಾಗಿ ಮೂಡಿ ಬಂದಿದೆ ಈ ಬರಹ
ReplyDeleteಎಲ್ಲಾ ವಾಹಿನಿಯಲ್ಲೂ ಅದೇ ಚರ್ವಿತ ಚರ್ವಣವಾಗಿರುವ, ಒಂದೇ ಶೈಲಿಯ ಕರ್ಯಕ್ರಮಗಳು....
ನಿಜಕ್ಕೂ ಎಂದು ಆದೇವು ನಾವು ಈ ಏಕತಾನತೆ ಹುಟ್ಟಿಸುವ ಕಾರ್ಯಕ್ರಮಗಳಿಂದ?
ವಿಕಾಸ, ಚೆನ್ನಾಗಿದೆ ಕಣೋ. ಚುಚ್ಚುವ ವ್ಯಂಗ್ಯ, ಕಣ್ತೆರೆಸುವ ತುಂಬಾ ಸಾಲುಗಳಿವೆ ನಿಮ್ಮ ಬರಹದಲ್ಲಿ. ಆ ಟಿವಿ, ಈ ಟಿವಿ, ಓಂಬತ್ತು ಟಿವಿ ಧಾರಾವಾಹಿಗಳಿಂದ ಎಂದು ಆದೇವೋ ನಾವು ಮುಕ್ತ... ಮುಕ್ತ... ಮುಕ್ತ...
ReplyDelete