[caption id="attachment_183" align="aligncenter" width="500" caption="ಚಿತ್ರ: ಮನೋಹರ್"]
ಸುರೇಶ್ ಕೆ `ಉದಯವಾಣಿ'ಯ ಸಹೋದ್ಯೋಗಿ. ಶುಕ್ರವಾರದ `ಸುಚಿತ್ರ' ಸಿನಿಪುರವಣಿಯನ್ನು ನಿರ್ವಹಿಸುವವರು. ಅಂದವಾದ ಮುಖಪುಟ ರೂಪಿಸುವಲ್ಲಿ, ವಿಶೇಷವಾಗಿ ಪುರವಣಿಗಳಿಗೆ ಅಂದ, ಆಕಾರವನ್ನು ನೀಡುವಲ್ಲಿ ನುರಿತಿರುವ ಲೇಔಟ್ ತಜ್ಞ. ಸಿನಿಮಾಗಳನ್ನು ಖಚಿತವಾಗಿ ವಿಮರ್ಶಿಸಬಲ್ಲ, ಮೊನಚಾಗಿ ಬರೆಯಬಲ್ಲ, ಯಾವುದೇ ಕಲೆಯನ್ನು ಸುಲಭವಾಗಿ ಗ್ರಹಿಸಿ, ಬರವಣಿಗೆಗೆ ಇಳಿಸಬಲ್ಲವರು ಸುರೇಶ್.
ಆದರೆ ಕತೆ, ಕವಿತೆಗಳ ಬರವಣಿಗೆಗೆ ಈವರೆಗೂ ತೊಡಗದೇ ಇದ್ದ ಸುರೇಶ್ ಅಚಾನಕ್ ಒಂದು ಕತೆ ಬರೆದು ಅಚ್ಚರಿ ಮೂಡಿಸಿದ್ದಾರೆ. ಕತೆಯ ಹೆಸರು: ಕಾಗದ ಬಂದಿದೆ. ಪತ್ರಲೇಖನ ಹೋಗಿ ಎಸ್ಸೆಮ್ಮೆಸ್ ಲೇಖನಕ್ಕೆ ಬಂದು ನಿಂತಿರುವ ನಮ್ಮ ಕುಶಲವಿನಿಮಯ ಪ್ರತಿಭೆ, ಸಂಬಂಧಗಳ ಅರ್ಥವನ್ನೇ ಸಂಕುಚಿತಗೊಳಿಸಿರಬಹುದಾದ ಸಾಧ್ಯತೆ ಇದೆ. `ಒಂದಿಷ್ಟು ವ್ಯಾವಹಾರಿಕ ಪತ್ರಗಳ ನಡುವೆ ಒಂದು ಹಸಿರು ಅಂತರ್ದೇಶಿ ಪತ್ರ ಇದ್ದರೆ ಒಣ ತರಗೆಲೆಯ ನಡುವೆ ಒಂದು ಹಸಿರು ಎಲೆ ಸಿಕ್ಕಷ್ಟು ಖುಷಿಯಾಗುತ್ತದೆ' ಎಂದು ಲೇಖಕ ಜಯಂತ ಕಾಯ್ಕಿಣಿ ಬರೆದಿದ್ದರು.
ಅಂಥ ಅಂತರ್ದೇಶಿ ಪತ್ರಗಳ ಸಂಭ್ರಮದ ದಿನಗಳಲ್ಲೇ ಹುಟ್ಟಿ ಬೆಳೆದು ಬಂದ ಸುರೇಶ್, `ಕಾಗದ ಬಂದಿದೆ' ಕತೆಯ ಮೂಲಕ ಸಂಬಂಧಕ್ಕಿರುವ ಅನೇಕ ಸೂಕ್ಷ್ಮಗಳನ್ನು ಹೇಳಲು ಪ್ರಯತ್ನಿಸಿದ್ದಾರೆ.
ನಾವು `ಕಳ್ಳಕುಳ್ಳ' ಬ್ಲಾಗ್ನಲ್ಲಿ ಈಗಷ್ಟೇ ಪ್ರಾರಂಭಿಸಿರುವ `ತಿಳಿಯ ಹೇಳುವೆ ಇಷ್ಟಕತೆಯನು' ಮಾಲಿಕೆಯಲ್ಲಿ `ಕಾಗದ' ಕತೆಯನ್ನು ಪ್ರಕಟಿಸುತ್ತಿದ್ದೇವೆ. ಓದಿ.
ಪೋಸ್ಟ್ಮ್ಯಾನ್ ವೆಂಕಟಪ್ಪನ ಹೆಸರು ಮೊದಲು ವೆಂಕಟಪ್ಪ ಅಂತಿರಲಿಲ್ಲ. ಅವನ ಹೆಂಡತಿ, ತಾಯಿ, ತಂಗಿ ಮತ್ತು ಆ ಊರಿನ ಒಂದಷ್ಟು ಹಳೆಯ ತಲೆಗಳನ್ನು ಕೆದಕಿದರೆ ಅವನ ಮೂಲ ಹೆಸರು ಮಣಿಕಂಠ ಎಂಬುದು ನೆನಪಾದೀತು. ಮನೆಯೊಳಗಿನ ಈ ಮಣಿಕಂಠ ಊರವರ ಬಾಯಲ್ಲಿ ವೆಂಕಟಪ್ಪನಾಗಿದ್ದರ ಹಿಂದೊಂದು ಕತೆಯೇ ಇದೆ.
ಸದರಿ ವೆಂಕಟಪ್ಪ ಉರ್ಫ್ ಮಣಿಕಂಠನ ಅಪ್ಪನ ಹೆಸರೂ ವೆಂಕಟಪ್ಪ ಅಂತಾನೇ! ಅಪ್ಪ ವೆಂಕಟಪ್ಪ ಆ ಹಳ್ಳಿಯಲ್ಲಿ ಪೋಸ್ಟ್ಮ್ಯಾನ್ ಆಗಿದ್ದವನು. ಯಾವುದೋ ಕಾಯಿಲೆ ಅಮರಿಕೊಂಡು ಆತ ವಿವಶನಾದಾಗ ಅನುಕಂಪದ ಆಧಾರದ ಮೇಲೆ ಮಗ ಮಣಿಕಂಠನಿಗೆ ಅದೇ ಪೋಸ್ಟಾಫೀಸಿನಲ್ಲಿ ಪೋಸ್ಟ್ಮ್ಯಾನ್ ಕೆಲಸ ಸಿಕ್ಕಿತು. ಈ ಮಣಿಕಂಠ ಪಕ್ಕಾ ಅಪ್ಪ ವೆಂಕಟಪ್ಪನ ಥರವೇ ಇದ್ದುದರಿಂದ ಆ ಊರಿನಲ್ಲಿ ಪೋಸ್ಟ್ ಪಡೆಯುತ್ತಿದ್ದವರಿಗೆ ಅಪ್ಪನಿಗೂ ಮಗನಿಗೂ ಯಾವುದೇ ವ್ಯತ್ಯಾಸ ಗೋಚರಿಸಲಿಲ್ಲ. ಮೊದ ಮೊದಲು ಕೆಲಸದ ಬಗ್ಗೆ, ಸತ್ತುಹೋದ ತನ್ನ ತಂದೆಯ ಬಗ್ಗೆ ತೀರಾ ನಿರ್ಲಕ್ಷ್ಯ ವಹಿಸಿದ್ದ ಮಣಿಕಂಠನಿಗೆ ಪೋಸ್ಟ್ಮ್ಯಾನ್ ಕೆಲಸ ಮಾಡುತ್ತಿದ್ದಾಗ ನಿಧಾನವಾಗಿ ಅಪ್ಪನ ಒಳ್ಳೆಯತನಗಳ ಅರಿವಾಗಿ, ತಾನೂ ಅಪ್ಪನ ಗುಣಗಳನ್ನು ಅಳವಡಿಸಿಕೊಳ್ಳತೊಡಗಿದ. ಮಣಿಕಂಠನಲ್ಲಾದ ಈ ಬದಲಾವಣೆ ಎಷ್ಟು ತೀವ್ರವಾಗಿತ್ತೆಂದರೆ, ಬರಬರುತ್ತಾ ಮಣಿಕಂಠ ಕೈಯಲ್ಲಿ ಅಂಚೆ ಪತ್ರ ಹಿಡಿದು ಬರುತ್ತಿದ್ದರೆ ಥೇಟ್ ಅಪ್ಪ ವೆಂಕಟಪ್ಪನೇ ಬರುತ್ತಿರುವಂತೆ ಊರವರಿಗೆ ಗೋಚರಿಸತೊಡಗಿತು. ಅಲ್ಲಿಂದ ನಿಧಾನವಾಗಿ ಮಣಿಕಂಠ ಮರೆಯಾಗಿ, ವೆಂಕಟಪ್ಪ ಮರುಹುಟ್ಟು ಪಡೆಯತೊಡಗಿದ.
ಇಂತಿಪ್ಪ ಮಣಿಕಂಠ ಉರ್ಫ್ ವೆಂಕಟಪ್ಪನಿಗೆ ಈಗ ನಲುವತ್ತೈದರ ಆಸುಪಾಸು. ತಲೆಕೂದಲು ಅಲ್ಲಲ್ಲಿ ಬೆಳದಿಂಗಳು ಬಿದ್ದಂತೆ ಹೊಳೆಯತೊಡಗಿದೆ. ಊರೂರಿಗೆ ಹೋಗಿ ಪತ್ರ ತಲುಪಿಸಿ ಬರಲು ಸೈಕಲ್ ಇದ್ದರೂ ಮೊದಲಿನ ಹುರುಪು, ಶಕ್ತಿ ಕುಂದತೊಡಗಿದೆ. ಆದರೆ, ಆ ವೆಂಕಟಪ್ಪನ ಗುಣಗಳು ಮಾತ್ರ ಈ ವೆಂಕಟಪ್ಪನಲ್ಲಿ ಕುಂದಿಲ್ಲ. ಇಷ್ಟಾಗಿಯೂ, ನಗುನಗುತ್ತಾ ಊರೂರಿಗೆ ಹೋಗಿ ಪತ್ರ ತಲುಪಿಸಿ ಬರುವ ವೆಂಕಟಪ್ಪ ತನ್ನ ಪೋಸ್ಟಾಫೀಸಿನ ವ್ಯಾಪ್ತಿಯಿಂದ ನಾಲ್ಕೈದು ಕಿಲೋಮೀಟರ್ ದೂರದಲ್ಲಿರುವ ಆ ಒಂಟಿ ಮನೆಗೆ ಹೋಗುವ ದಾರಿ ಕಂಡೊಡನೆಯೇ ಇತ್ತೀಚೆಗೆ ಯಾಕೋ ವ್ಯಘ್ರನಾಗುತ್ತಿದ್ದಾನೆ. ಆ ಮನೆಗೆ ಬಂದ ಪತ್ರವನ್ನು ಕೈಯಲ್ಲಿ ಹಿಡಿದು, ಸೈಕಲ್ ಏರಿ, ಆ ಮಾರ್ಗವಾಗಿ ಬಂದನೆಂದರೆ ವೆಂಕಟಪ್ಪನ ಬಾಯಲ್ಲಿ ಥೇಟ್ `ಶ್' ಸಿನಿಮಾದ ಪೊಲೀಸ್ ಅಕಾರಿ ಥರ ಬೈಗುಳದ ಪದಗಳು ಹೊರಬೀಳತೊಡಗುತ್ತವೆ. ಈ ಬೈಗುಳಗಳು ಎಷ್ಟು ತೀವ್ರವಾಗಿರುತ್ತವೆಂದರೆ, ವೆಂಕಟಪ್ಪನ ಸೈಕಲ್ ಬರುತ್ತಿರುವುದನ್ನು ಆ ಮಾರ್ಗವಾಗಿ ಸಾಗುವ ಯಾರಾದರೂ ನೋಡಿದರೆ ತಕ್ಷಣ ಕಿವಿ ಮುಚ್ಚಿಕೊಳ್ಳುತ್ತಾರೆ! ಒಂದರೆಕ್ಷಣ ಅಕ್ಕಪಕ್ಕದ ಮರಗಳ ಮೇಲಿನ ಪಕ್ಷಿಗಳೂ ಕಲರವ ನಿಲ್ಲಿಸಿಬಿಡುತ್ತವೆ.
ವೆಂಕಟಪ್ಪ ಕಾಗದ ತಂದುಕೊಡುತ್ತಿದ್ದ ಆ ಒಂಟಿ ಮನೆ ನಿಜಕ್ಕೂ ಒಂಟಿಮನೆಯೇ. ಸುತ್ತಮುತ್ತ ದೃಷ್ಟಿ ನಿಲುಕುವವರೆಗೆ ಕಣ್ಣು ಹಾಯಿಸಿದರೂ ಮತ್ತೊಂದು ಮನೆ ಕಾಣಿಸುತ್ತಿರಲಿಲ್ಲ. ಸ್ವಲ್ಪ ಹಳೆ ಕಾಲದ ಮನೆ. ವೆಂಕಟಪ್ಪನ ಸೈಕಲ್ ಹೋಗುವಷ್ಟು ಇಕ್ಕಟ್ಟಾದ ದಾರಿ. ಆ ದಾರಿಯಲ್ಲಿ ವೆಂಕಟಪ್ಪ ಮತ್ತವನ ಸೈಕಲ್ ಬಿಟ್ಟು ಬೇರಾರೂ ಹೋಗುತ್ತಿರಲಿಲ್ಲವೇನೋ ಎಂಬಷ್ಟರ ಮಟ್ಟಿಗೆ ಕಲ್ಲು ತುಂಬಿಕೊಂಡಿದ್ದವು. ಮನೆ ಮುಂದೊಂದು ಬೇಲಿ. ಅದಕ್ಕೊಂದು ಮುರಿದ ಗೇಟು. ಆ ಗೇಟನ್ನು ತೆರೆದು ಬಿಟ್ಟರೆ ಮತ್ತೆ ತನ್ನಿಂತಾನೇ ಹಾಕಿಕೊಳ್ಳುತ್ತಿತ್ತು. ಬೇಲಿಯ ಒಳಗೆ ಹೇಳಿಕೊಳ್ಳುವಂಥದ್ದೇನೂ ಇರಲಿಲ್ಲ. ಒಟ್ಟಾರೆ, ಮನೆಯಲ್ಲಿ ಯಾರೂ ವಾಸವೇ ಇಲ್ಲವೇನೋ ಎಂಬಂತಿತ್ತು ಅಲ್ಲಿನ ವಾತಾವರಣ. ಆದರೂ ದಿನಕ್ಕೊಂದು ಕಾಗದ ಬರುತ್ತಿದ್ದುದರಿಂದ ಮನೆಯಲ್ಲಿ ಜನರಿದ್ದಾರೆ ಎಂದು ವೆಂಕಟಪ್ಪ ಅಂದುಕೊಂಡಿದ್ದ. ಮಧ್ಯಾಹ್ನ ಎರಡೂವರೆ ಮೂರು ಗಂಟೆ ಸಮಯದಲ್ಲಿ ವೆಂಕಟಪ್ಪ ಆ ಮನೆಗೆ ಬರುತ್ತಿದ್ದ. ಅವನು ಬಂದಾಗ ಮನೆ ಬಾಗಿಲು ಯಾವಾಗಲೂ ಹಾಕಿಕೊಂಡೇ ಇರುತ್ತಿತ್ತು. ಬಹುಶಃ ಎಲ್ಲರೂ ಊಟ ಮಾಡಿ ಮಲಗಿರಬೇಕು ಎಂದುಕೊಳ್ಳುತ್ತಿದ್ದ.
ಪ್ರತೀದಿನ ವೆಂಕಟಪ್ಪ ಹೀಗೇ ಬಂದು ಗೇಟು ತೆರೆದು ಒಳಹೋಗುತ್ತಾನೆ. ಒಂದೆರಡು ಬಾರಿ `ಪೋಸ್ಟ್' `ಪೋಸ್ಟ್' ಎಂದು ಕೂಗುತ್ತಾನೆ. ಪ್ರತಿಕ್ರಿಯೆ ಬಾರದಿದ್ದಾಗ ಅಲ್ಲಿಯೇ ಕಿಟಕಿಯೊಳಗೆ ಪತ್ರವನ್ನು ಎಸೆದು ಹೊರಟುಹೋಗುತ್ತಾನೆ.
***
ವೆಂಕಟಪ್ಪ ಆ ಮನೆಗೆ ಪೋಸ್ಟ್ ಎಸೆಯಲು ಶುರು ಮಾಡಿ ಒಂದೆರಡು ತಿಂಗಳುಗಳೇ ಕಳೆದಿವೆ. ಆದರೆ, ಎಂದೂ ಯಾವತ್ತೂ ಆ ಮನೆಯೊಳಗಿನ ಮನುಷ್ಯರ ಮುಖ ಪರಿಚಯ ಅವನಿಗಾಗಲಿಲ್ಲ. ಈ ನಡುವೆ, ವೆಂಕಟಪ್ಪನ ತಾಯಿ ಇದ್ದಕ್ಕಿದ್ದಂತೆಯೇ ಕಾಯಿಲೆ ಬಿದ್ದು, ಆಸ್ಪತ್ರೆ ಸೇರುವಂತಾಯಿತು. ತಾಯಿಯ ಶುಶ್ರೂಷೆಗಾಗಿ ವೆಂಕಟಪ್ಪ ನಾಲ್ಕೈದು ದಿನಗಳ ಕಾಲ ಕೆಲಸಕ್ಕೆ ಹಾಜರಾಗಲಿಲ್ಲ. ರಜೆ ಮುಗಿಸಿ ಡ್ಯೂಟಿಗೆ ಹಾಜರಾಗಿ ನೋಡಿದರೆ, ಆ ಒಂಟಿ ಮನೆಗೆ ಹೋಗಬೇಕಾಗಿದ್ದ ಪತ್ರಗಳು ಅಲ್ಲಿಯೇ ಇದ್ದವು. ವೆಂಕಟಪ್ಪ ರಜೆಯಲ್ಲಿದ್ದಾಗ ಅವನ ಬದಲಿಗೆ ಕೆಲಸ ಮಾಡುತ್ತಿದ್ದ ಪೋಸ್ಟ್ಮ್ಯಾನ್ ರಂಗಣ್ಣ ಆ ಒಂಟಿಮನೆಗೆ ಹೋಗುವ ರಿಸ್ಕ್ ತೆಗೆದುಕೊಂಡಿರಲೇ ಇಲ್ಲ. `ಛೆ! ಹೀಗಾಗಬಾರದಿತ್ತು' ಎಂದು ಮನಸ್ಸಿನಲ್ಲೇ ಗೊಣಗಿಕೊಂಡ ವೆಂಕಟಪ್ಪ, ಆ ಎಲ್ಲ ಪತ್ರಗಳ ಜೊತೆ ಆ ದಿನ ಬಂದ ಪತ್ರವನ್ನೂ ಹಿಡಿದುಕೊಂಡು ಒಂಟಿಮನೆಯತ್ತ ಸೈಕಲ್ನ ಮುಖ ತಿರುಗಿಸಿದ.
ಆವತ್ತು ಯಾಕೋ ವೆಂಕಟಪ್ಪನಿಗೆ ಆ ಒಂಟಿ ಮನೆ, ಅದಕ್ಕೆ ಬರುತ್ತಿರುವ ಪತ್ರಗಳ ಕುರಿತು ವಿಪರೀತ ಕುತೂಹಲ ಕೆರಳತೊಡಗಿತು. ಇಷ್ಟು ದಿನಗಳಾದರೂ ಪತ್ರ `ಸುಜಾತಾ' ಎಂಬ ಹೆಸರಿಗೆ ಬರುತ್ತಿರುವುದು ಬಿಟ್ಟರೆ ಆ ಸುಜಾತಾ ಯಾರು, ನೋಡಲು ಹೇಗಿದ್ದಾರೆ ಎಂಬುದನ್ನು ತಿಳಿದುಕೊಳ್ಳಲು ವೆಂಕಟಪ್ಪ ಹೋಗಿರಲಿಲ್ಲ. ಪತ್ರಗಳು ಎಲ್ಲಿಂದ ಬರುತ್ತವೆ ಎಂಬುದನ್ನು ತಿಳಿದುಕೊಳ್ಳುವ ಸಲುವಾಗಿ ಪತ್ರಗಳ ಹಿಂಭಾಗ ನೋಡಿದ. ಯಾರು, ಎಲ್ಲಿಂದ ಬರೆದಿದ್ದಾರೆ ಎಂಬ ವಿವರಗಳೇನೂ ಅಲ್ಲಿರಲಿಲ್ಲ. ಪತ್ರ ಡಿಸ್ಪ್ಯಾಚ್ ಆದ ಪೋಸ್ಟ್ ಆಫೀಸಿನ ಹೆಸರೂ ಸರಿಯಾಗಿ ಕಾಣಿಸಲಿಲ್ಲ. ವೆಂಕಟಪ್ಪನಿಗೆ ಯಾಕೋ ಎಲ್ಲವೂ ಗೋಜಲು ಗೋಜಲಾಯಿತು. ಆದರೆ, ಈ ಥರದ ಯೋಚನೆಗಳ ನಡುವೆ ವೆಂಕಟಪ್ಪ ಇದೇ ಮೊದಲ ಬಾರಿಗೆ ಆ ಮಾರ್ಗವಾಗಿ ಬರುವಾಗ ಯಾರನ್ನೂ ಬಯ್ಯದೆ, ಶಪಿಸದೇ ಬಂದಿದ್ದ. ಅವನ ಸೈಕಲ್ಲಿಗೆ ಎದುರಾದ ಒಂದಿಬ್ಬರು ಕಿವಿ ಬಿಟ್ಟುಕೊಂಡು, ಕಣ್ಣರಳಿಸಿಕೊಂಡು ಅವನನ್ನೇ ನೋಡಿದ್ದರು. ಹಕ್ಕಿಗಳ ಹಾಡೂ ಮುಂದುವರಿದಿತ್ತು.
ಒಂಟಿಮನೆಯ ಎದುರು ಬಂದು ನಿಂತಾಗ ಯಾಕೋ ವೆಂಕಟಪ್ಪನ ಹೃದಯದ ಬಡಿತ ಹೆಚ್ಚಾಯಿತು. ಅವನಿಗೆ ಗೊತ್ತಿಲ್ಲದಂತೆ ಕೈಕಾಲುಗಳು ನಡುಗತೊಡಗಿದವು. ಈ ಬಾರಿಯೂ ಕಿಟಕಿ ಮೂಲಕ ಪತ್ರ ಎಸೆಯಲು ಹೋದವನಿಗೆ ಆ ಮನೆಯೊಳಗೆ ಯಾರಿದ್ದಾರೆ ಎಂಬುದನ್ನು ತಿಳಿದುಕೊಳ್ಳುವ ಕುತೂಹಲ ಮೂಡಿತು. ಎಂದಿನಂತೆ ಒಂದೆರಡು ಬಾರಿ `ಪೋಸ್ಟ್', `ಪೋಸ್ಟ್' ಎಂದ. ಪ್ರತಿಕ್ರಿಯೆ ಬಾರದಿದ್ದಾಗ ಮುಂಬಾಗಿಲನ್ನು ತಟ್ಟಿದ. ತಟ್ಟಿದನೋ ದೂಡಿದನೋ ಆ ಬಾಗಿಲು ತೆರೆದುಕೊಂಡಿತು! ಇದರಿಂದ ವೆಂಕಟಪ್ಪನ ಗಾಬರಿ ಇನ್ನಷ್ಟು ಹೆಚ್ಚಾಯಿತು. `ಸುಜಾತಾ ಅವರೇ', `ಯಾರಿದ್ದೀರಿ ಮನೆಯಲ್ಲಿ?' ಎಂಬಿತ್ಯಾದಿ ಕೂಗು ಹಾಕಿದ. ಯಾರೂ ಉತ್ತರಿಸಲಿಲ್ಲ. ಬಾಗಿಲು ದಾಟಿ ಒಂದಡಿ ಮುಂದೆ ಹೋದ ವೆಂಕಟಪ್ಪನಿಗೆ ಯಾವುದೋ ಭೂತ ಬಂಗಲೆ ಹೊಕ್ಕ ಅನುಭವವಾಗಿ ತುಸು ಹಿಂದೇಟು ಹಾಕಿದ. ಆ ಹೆಂಚಿನ ಮನೆಯ ಮಾಡಿನ ತುಂಬೆಲ್ಲ ಜೇಡರ ಬಲೆಗಳು ತುಂಬಿಕೊಂಡಿದ್ದವು. ನೆಲದ ತುಂಬೆಲ್ಲ ಧೂಳು. ಆ ಜೇಡರ ಬಲೆ, ಧೂಳು ಇವುಗಳಿಂದ ವೆಂಕಟಪ್ಪನ ಉಸಿರು ಕಟ್ಟಿದಂತಾಯಿತು. ವೆಂಕಟಪ್ಪ ಕಾಲಿಟ್ಟಿದ್ದ ಆ ಹಾಲಿನ ಮೂಲೆಯಲ್ಲಿ ಒಂದು ಹಾಳಾದ ಕುರ್ಚಿ, ಒಂದೆರಡು ಕಾಲೊರೆಸುವ ಗೋಣಿಚೀಲಗಳನ್ನು ಬಿಟ್ಟರೆ ಮನೆಬಳಕೆಯ ವಸ್ತುಗಳು ಬೇರೇನೂ ಇರಲಿಲ್ಲ. ಆದರೆ ಇವೆಲ್ಲಕ್ಕಿಂತ ಅವನಿಗೆ ಅಚ್ಚರಿಯಾಗಿದ್ದು ಅಲ್ಲಿದ್ದ ಪತ್ರಗಳ ರಾಶಿ ನೋಡಿ. ತಾನು ಒಂದೆರಡು ತಿಂಗಳುಗಳಿಂದ ಎಸೆದು ಹೋಗುತ್ತಿದ್ದ ಪತ್ರಗಳು ಅಲ್ಲಿ ಹಾಗೆಯೇ ಬಿದ್ದಿದ್ದನ್ನು ಕಂಡು ವೆಂಕಟಪ್ಪ ಗಾಬರಿಯಾದ. ಇಲ್ಲಿ ತನಗೆ ಅಸಹಜವಾದದ್ದೇನೋ ಎದುರಾಗಲಿದೆ ಎಂಬ ಯೋಚನೆ ಬಂದಿದ್ದೇ ಅವನ ಕೈಕಾಲುಗಳ ನಡುಕ ಹೆಚ್ಚಿತು.
ಆದರೂ ಧೈರ್ಯ ಮಾಡಿ ಆ ಹಾಲಿಗೆ ತಾಗಿಕೊಂಡಿದ್ದ ರೂಮಿಗೆ ಹೋದ. ಅಲ್ಲೊಂದು ಪುಟ್ಟ ದೇವರ ಕೋಣೆಯಿತ್ತು. ಆ ಕೋಣೆಗೆ ತಾಗಿದಂತೆ ಗೋಡೆಯ ಮೇಲೆ ಒಂದು ದೊಡ್ಡ ಫೋಟೋ. ಧೂಳು ತುಂಬಿಕೊಂಡಿದ್ದ ಆ ಫೋಟೋದಲ್ಲಿನ ಮುಖ ಕಾಣಲಿಲ್ಲ. ವೆಂಕಟಪ್ಪ ನಿಧಾನವಾಗಿ ಆ ಫೋಟೋ ತೆಗೆದು ಧೂಳನ್ನು ಒರೆಸಿದ. ಅದು ಒಬ್ಬ ಸುಂದರ ಮುಖಲಕ್ಷಣದ ಗೃಹಿಣಿಯ ಫೋಟೋ. ಆ ಫೋಟೋ ಹಿಡಿದುಕೊಂಡು ವೆಂಕಟಪ್ಪ ಆಚೀಚಿನ ಕೋಣೆಗೆ ಹೋದ. ಅಲ್ಲೂ ಧೂಳು, ಜೇಡರ ಬಲೆ ಬಿಟ್ಟರೆ ಬೇರೆ ಏನೂ ಕಾಣಿಸಲಿಲ್ಲ. ಇದರಲ್ಲೇನೋ ರಹಸ್ಯವಿದೆ ಎಂದು ಯೋಚಿಸುತ್ತಿದ್ದ ವೆಂಕಟಪ್ಪನಿಗೆ ಪತ್ರಗಳ ನೆನಪಾಯಿತು. ಅದರಲ್ಲಿ ಏನಾದರೂ ಸಿಗಬಹುದು ಎಂದುಕೊಳ್ಳುತ್ತ ಆವತ್ತಷ್ಟೇ ಬಂದಿದ್ದ ಪತ್ರವನ್ನು ಒಡೆದು ಓದಿದ. ಅದರಲ್ಲಿ ಎರಡೇ ಎರಡು ಸಾಲುಗಳಿದ್ದವು:
`ಪ್ರಿಯೆ, ನಿನ್ನನ್ನು ಅಗಲಿ ಇರುವುದು ನನ್ನಿಂದ ಇಲ್ಲೂ ಸಾಧ್ಯವಾಗುತ್ತಿಲ್ಲ. ನಾನೂ ನಿನ್ನ ಬಳಿಗೇ ಬರಲು ನಿರ್ಧರಿಸಿದ್ದೇನೆ, ಸ್ವಾಗತಿಸು- ವಿಶ್ವನಾಥ'
ವೆಂಕಟಪ್ಪನಿಗೆ ಏನೂ ಅರ್ಥವಾಗಲಿಲ್ಲ. ಆ ಕಾಗದವನ್ನು ಮಡಚಿ ಅಂಗಿ ಜೇಬಿಗೆ ತುರುಕಿಕೊಂಡು, ಫೋಟೋ ಹಿಡಿದು ಮನೆಯಿಂದ ಹೊರಬಂದ. ಸುತ್ತಮುತ್ತ ನೋಡಿದ. ಯಾರೂ ಕಾಣಿಸಲಿಲ್ಲ. ಆ ಮನೆಯಿಂದ ಹೊರಹೋದ ಮತ್ತೊಂದು ದಾರಿಗುಂಟ ಸಾಗಿದ. ತುಂಬಾ ದೂರ ಸಾಗಿದ ಮೇಲೆ ಅಲ್ಲೊಂದು ತೋಟದಲ್ಲಿ ಒಬ್ಬ ಆಳು ಕೆಲಸ ಮಾಡುತ್ತಿದ್ದಂತೆ ಕಂಡಿತು. ಅವನ ಬಳಿ ಹೋದ. ವೆಂಕಟಪ್ಪನಿಗೆ ಆ ವ್ಯಕ್ತಿಯ ಪರಿಚಯವಿಲ್ಲದಿದ್ದರೂ ಆತ `ಏನು ವೆಂಕಟಪ್ಪನವರೇ ಇಷ್ಟು ದೂರ?' ಎಂದು ಪ್ರಶ್ನಿಸಿದ. ವೆಂಕಟಪ್ಪ ಕೇಳಲೋ ಬೇಡವೋ ಎನ್ನುತ್ತಾ ಫೋಟೋ ತೋರಿಸಿ `ಆ ಒಂಟಿ ಮನೆ...' ಎಂದು ಬಾಯಿ ತೆಗೆದ. ಅಷ್ಟರೊಳಗೆ ಆ ಆಳು `ಓ! ಆ ಮನೆಯ ವಿಷಯವೇ?' ಎಂದು ಕಣ್ಣರಳಿಸಿಕೊಂಡು ಕೇಳಿದ. ಅವನ ಪ್ರಶ್ನೆಯಲ್ಲಿ ಪ್ರತೀದಿನ ಹೋಗಿಬಂದು ಮಾಡುತ್ತಿದ್ದ ನಿಮಗೂ ಆ ಮನೆಯ ವಿಷಯ ಗೊತ್ತಿಲ್ಲವೇ ಎಂಬ ಕುಹಕ ಕಾಣಿಸಿ ವೆಂಕಟಪ್ಪ ಗಲಿಬಿಲಿಗೊಳಗಾದ.
ಆ ಆಳು ಹೇಳಿದ ವಿಷಯಗಳಿಂದ ವೆಂಕಟಪ್ಪನಿಗೆ ತಿಳಿದದ್ದಿಷ್ಟು: ಆ ಮನೆಯಲ್ಲಿ ವಿಶ್ವನಾಥ ಮತ್ತು ಸುಜಾತಾ ಹೆಸರಿನ ದಂಪತಿ ಇದ್ದರು. ತುಂಬಾ ಪ್ರೀತಿ. ಅನ್ಯೋನ್ಯವಾಗಿದ್ದವರು. ಮಕ್ಕಳಿರಲಿಲ್ಲ. ಹಾಗಾಗಿ, ಗಂಡನನ್ನು ಬಿಟ್ಟು ಹೆಂಡತಿ, ಹೆಂಡತಿಯನ್ನು ಬಿಟ್ಟು ಗಂಡ ಯಾವತ್ತೂ ಇರುತ್ತಿರಲಿಲ್ಲ. ಈ ನಡುವೆ, ಹೆಂಡತಿಗೆ ಯಾವುದೋ ವಾಸಿ ಮಾಡಲಾಗದ ಕಾಯಿಲೆ ಕಾಣಿಸಿಕೊಂಡು ಆಕೆ ಸಾವಿಗೀಡಾದಳು. ಹೆಂಡತಿಯನ್ನು ಅತಿಯಾಗಿ ಪ್ರೀತಿಸುತ್ತಿದ್ದ ವಿಶ್ವನಾಥನಿಗೆ ದಿಕ್ಕೇ ತೋಚದಂತಾಯಿತು. ಒಂದೆರಡು ಸಲ ವಿಲಕ್ಷಣವಾಗಿ ವರ್ತಿಸುತ್ತಿದ್ದ ಅವನನ್ನು ಅವನ ಸಂಬಂಕರು ಯಾರೋ ದೂರದ ಊರಿಗೆ ಕರೆದುಕೊಂಡು ಹೋದರು. ಹೆಂಡತಿಯನ್ನು ಮರೆಯಲಾಗದ ವಿಶ್ವನಾಥ ಆಕೆ ಇನ್ನೂ ಆ ಒಂಟಿ ಮನೆಯಲ್ಲಿಯೇ ಇದ್ದಾಳೆ ಅಂದುಕೊಂಡು ಅಲ್ಲಿಂದ ಪ್ರತೀದಿನ ಒಂದೊಂದು ಪತ್ರ ಪೋಸ್ಟ್ ಮಾಡುತ್ತಿದ್ದ.
ಇದನ್ನು ಕೇಳಿ ಯಾಕೋ ವೆಂಕಟಪ್ಪನ ಹೃದಯ ಭಾರವಾಯಿತು. ಪ್ರತೀದಿನ ತಾನು ಬೈದುಕೊಂಡು ತಂದುಕೊಡುತ್ತಿದ್ದ ಪತ್ರಗಳ ಹಿಂದೆ ಇಂಥದ್ದೊಂದು ಕತೆಯಿದೆ ಎಂಬುದನ್ನು ತಿಳಿದು ಅವನಿಗೇ ನಾಚಿಕೆಯಾಯಿತು. ಅಲ್ಲಿಂದ ವಾಪಸ್ ಆ ಮನೆಗೆ ಬಂದು, ಫೋಟೋವನ್ನು ಯಥಾಸ್ಥಾನದಲ್ಲಿಟ್ಟು ಹೊರಟವನು ಸೈಕಲ್ ಏರದೆ ತಳ್ಳಿಕೊಂಡೇ ಮನೆಗೆ ಬಂದ. ದಾರಿಯ ತುಂಬಾ ಅವನಿಗೆ ವಿಶ್ವನಾಥ-ಸುಜಾತಾ ಅವರ ದಾಂಪತ್ಯ ಜೀವನದ ಕುರಿತ ನೂರಾರು ಯೋಚನೆಗಳು. ಮಧ್ಯೆ ಮಧ್ಯೆ ಹೀಗಾಗಬಾರದಿತ್ತು ಎಂಬಂತೆ `ಚ್ಚು', `ಚ್ಚು' ಉದ್ಗಾರ.
ಅನ್ಯಮನಸ್ಕನಾಗಿ ಮನೆಗೆ ಬಂದ ವೆಂಕಟಪ್ಪನ ಮುಖ ಇದ್ದಕ್ಕಿದ್ದಂತೆಯೇ ಬಿಳಿಚಿಕೊಂಡಿದ್ದು ತಾನು ಅಂದು ಒಡೆದು ಓದಿದ ಪತ್ರದ ನೆನಪಾಗಿ. ಸರಸರನೆ ಜೇಬಿನಿಂದ ಆ ಪತ್ರವನ್ನು ತೆಗೆದು ಮತ್ತೊಮ್ಮೆ ಓದಿದ. ಓದಿದವನೇ ನೆಲಕ್ಕೆ ಕುಸಿದುಬಿದ್ದ. `ನಾನೂ ನಿನ್ನ ಬಳಿಗೇ ಬರಲು ನಿರ್ಧರಿಸಿದ್ದೇನೆ, ಸ್ವಾಗತಿಸು'...
ಅಂದರೆ... ಅಂದರೆ... ವಿಶ್ವನಾಥ ಆತ್ಮಹತ್ಯೆ ಮಾಡಿಕೊಂಡನೇ?
***
ಆ ಮರುದಿನದಿಂದ ಆ ಒಂಟಿಮನೆಯ `ಸುಜಾತಾ' ಹೆಸರಿಗೆ ಯಾವುದೇ ಪತ್ರಗಳು ಬರಲಿಲ್ಲ. ಒಂದಲ್ಲ, ಎರಡಲ್ಲ, ಮೂರಲ್ಲ, ನಾಲ್ಕಾರು ದಿನಗಳೇ ಕಳೆದರೂ ಪತ್ರಗಳ ಸುಳಿವಿರಲಿಲ್ಲ. ಕೊನೆಗೆ, ವೆಂಕಟಪ್ಪ ಒಲ್ಲದ ಮನಸ್ಸಿನಿಂದ ಆ ನಿರ್ಧಾರಕ್ಕೆ ಬಂದಿದ್ದ: ವಿಶ್ವನಾಥ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಮತ್ತೆ ಮೂರ್ನಾಲ್ಕು ದಿನಗಳು ಹೀಗೆಯೇ ಕಳೆದವು. ವೆಂಕಟಪ್ಪನಲ್ಲಿ ಮಾತ್ರ ಗುರುತಿಸುವಂಥ ಬದಲಾವಣೆಗಳು ಕಾಣಿಸಿಕೊಳ್ಳತೊಡಗಿದವು. ಮೊದಲು ಸಹೋದ್ಯೋಗಿಗಳೊಂದಿಗೆ, ಪತ್ರ ಸ್ವೀಕರಿಸುವ ಮನೆಯವರೊಂದಿಗೆ ನಗುನಗುತ್ತಾ ತಮಾಷೆ ಮಾಡಿಕೊಂಡು ಮಾತಾಡುತ್ತಿದ್ದ ವೆಂಕಟಪ್ಪ ಇದ್ದಕ್ಕಿದ್ದಂತೆಯೇ ಗಂಭೀರ ವದನದವನಾಗಿ, ಅನ್ಯಮನಸ್ಕನಾದ. ಯಾವಾಗಲೂ ಏನೋ ಯೋಚನೆಯಲ್ಲಿದ್ದವನಂತೆ ಕಂಡುಬರುತ್ತಿದ್ದ. ಅವನ ಮನಸ್ಸಿನೊಳಗೆ ಏನೋ ಚಡಪಡಿಕೆ ಶುರುವಾಯಿತು. ಏನೋ ಕಳೆದುಕೊಂಡವನಂತೆ ವರ್ತಿಸತೊಡಗಿದ. ಆ ಚಡಪಡಿಕೆ ಏನು ಎಂಬುದು ಮೊದ ಮೊದಲು ಅವನಿಗೇ ಗೊತ್ತಾಗದಿದ್ದರೂ ಕೊನೆಗೊಂದು ದಿನ ಆ ಒಂಟಿಮನೆಗೆ ಹೋಗುವ ದಾರಿ ನೋಡಿದಾಕ್ಷಣ, ನಾನು ಮೊದಲಿನಂತೆ ಆ ದಾರಿಯಾಗಿ ಪ್ರತೀದಿನ ಹೋಗಬೇಕಿತ್ತು ಅನಿಸಿದಾಕ್ಷಣ, ತನ್ನ ಚಡಪಡಿಕೆಯ ಕಾರಣವೇನು, ತಾನು ಕಳೆದುಕೊಂಡಿದ್ದೇನು ಎಂಬುದು ಅವನಿಗೆ ಗೊತ್ತಾಯಿತು. ಆ ದಿನ ಮನೆಗೆ ಬಂದ ವೆಂಕಟಪ್ಪ ತುಂಬಾ ಹೊತ್ತು ಯೋಚಿಸಿ ಒಂದು ನಿರ್ಧಾರಕ್ಕೆ ಬಂದ. ಆ ನಿರ್ಧಾರದಿಂದ ಅವನಿಗೇ ಖುಷಿಯಾದಂತೆ ಅವನ ಮುಖ ಪ್ರಸನ್ನವಾಯಿತು, ಆ ರಾತ್ರಿ ಕಣ್ತುಂಬಾ ನಿದ್ದೆ ಮಾಡಿದ.
ಬೆಳಿಗ್ಗೆ ಎದ್ದವನೇ ಸಮಯಕ್ಕೆ ಸರಿಯಾಗಿ ಡ್ಯೂಟಿಗೆ ಹಾಜರಾದ. ಸಹೋದ್ಯೋಗಿಗಳೊಂದಿಗೆ, ಊರ ಜನರೊಂದಿಗೆ ಮತ್ತೆ ಹಳೆಯ ವೆಂಕಟಪ್ಪನ ಥರ ಖುಷಿಯಿಂದ ಬೆರೆತ. ಅವರಿಗೆಲ್ಲ ಅವನ ಈ ಥರದ ವರ್ತನೆಯಿಂದ ಆಶ್ಚರ್ಯವಾದರೂ ತೋರಿಸಿಕೊಳ್ಳಲಿಲ್ಲ. ಎಲ್ಲರ ಮನೆಗಳಿಗೆ ಪತ್ರ ತಲುಪಿಸಿ, ಸರಿಯಾಗಿ ಮಧ್ಯಾಹ್ನ ಅದೇ ಸಮಯಕ್ಕೆ ಆ ಒಂಟಿ ಮನೆಯ ದಾರಿ ಹಿಡಿದ. ಈ ಬಾರಿಯೂ ವೆಂಕಟಪ್ಪ ಯಾರಿಗೂ ಬಯ್ಯಲಿಲ್ಲ. ಎದುರಾದ ಒಂದಿಬ್ಬರು ಕಿವಿ ಮುಚ್ಚಿಕೊಳ್ಳಲಿಲ್ಲ, ಹಕ್ಕಿಪಿಕ್ಕಿಗಳು ಕಲರವ ನಿಲ್ಲಿಸಲಿಲ್ಲ. ಆ ಒಂಟಿ ಮನೆಯ ದಾರಿಯ ತುಂಬಾ ಕಲ್ಲಿದೆ ಎಂದು ವೆಂಕಟಪ್ಪನಿಗೆ ಅನಿಸಲೇ ಇಲ್ಲ.
ಒಂಟಿಮನೆಗೆ ಹೋದವನೇ ಏನೋ ನಿರ್ಧಾರ ಮಾಡಿದವನಂತೆ ಬಾಗಿಲು ತೆರೆದು ಒಳಹೋದ. ಅಲ್ಲಿ ರಾಶಿ ರಾಶಿಯಾಗಿ ಬಿದ್ದಿದ್ದ ಪತ್ರಗಳನ್ನೆಲ್ಲ ತಾನು ತಂದಿದ್ದ ಚೀಲಕ್ಕೆ ತುಂಬಿಕೊಂಡು ನಗುನಗುತ್ತಾ ಹೊರಬಂದು ಸೈಕಲ್ ಏರಿ ಮನೆಗೆ ಹೋದ. ಮತ್ತೊಂದು ರಾತ್ರಿ ವೆಂಕಟಪ್ಪನ ಕಣ್ಣುಗಳು ಸಂಭ್ರಮದಿಂದ ನಿದ್ರಿಸಿದವು.
***
ಆ ಮರುದಿನದಿಂದ ಮಧ್ಯಾಹ್ನ ಎರಡೂವರೆ ಮೂರು ಗಂಟೆ ಸಮಯಕ್ಕೆ ಸರಿಯಾಗಿ ಒಂಟಿಮನೆಗೆ ಮತ್ತೆ ಪತ್ರಗಳು ಬರತೊಡಗಿದವು.
Kathe chennagide. dinacharigalu ommomme chatada hage. papa, venkatappa!
ReplyDeleteRajashekhar hegde
ಕತೆ ಚೆಂದ ಇದೆ. ಹಾಗೆ ಶೈಲಿ ಕೂಡ. ಮೊಬೈಲ್ ಎಸ್ಎಂಎಸ್ಗಳು ಪತ್ರ ಬರೆವಣಿಗೆಯನ್ನು ನುಂಗಿ ಹಾಕಿದೆ. ಆಧುನಿಕತೆಯನ್ನು ಅಪ್ಪಿಕೊಂಡು ಹಳೆಯದನ್ನು ಮರೆಯುತ್ತಿರುವ ಸಂದರ್ಭದಲ್ಲಿ `ಪತ್ರಕರ್ತನ ಪತ್ರಕತೆ' ಹಳೆಯ ನೆನಪುಗಳು ಮನಸ್ಸಿಗೆ ಬರುತ್ತವೆ. ಹಾಗೆ ಸುಮ್ಮನೆ!
ReplyDeleteSuresh story & ninna blog .. chennagive Vikas.
ReplyDeletekhushiyaitu..
ಒಳ್ಳೆಯ ಕತೆ. ಥ್ಯಾಂಕ್ಯೂ.
ReplyDeleteಅರೆಕ್ಷಣ ನಾನೇ ವೆಂಕಟಪ್ಪನಾಗಿದ್ದೆ. ಅವನಂತೆ ಸ್ವಲ್ಪ ಹೊತ್ತಿನ ಚಡಪಡಿಕೆಯ ನಂತರ ನಾನೂ ಸಮಾ`ಾನದಿಂದ ಕಣ್ಮುಚ್ಚಿದೆ. ಸಾಮಾನ್ಯನೊಬ್ಬನ ಅಂತರಂಗ ಹೇಗೇಗೆ ಪ್ರತಿಕ್ರಿಯಿಸುತ್ತದೆ ಎಂಬುದನ್ನು ಚೆನ್ನಾಗಿ ಹೇಳಿದ್ದೀರ.
ReplyDelete- ಯತಿರಾಜ್
ಶ್ರಿಜ್ಚಿಛಿ ಸ್ಟೋರಿ! ಒಂದೇ ಉಸಿರಿಗೆ ಓದಿಸಿಕೊಳ್ತು. ವಂಡರ್ಫುಲ್.
ReplyDelete-ಚೇತನ್
Hi,
ReplyDeleteGood story Suresh. I enjoyed every bit of it. But i did not like Rajashekhar Hegde's comment on your story.
-Nachiketha
ಹೆಗಡೆ, ಮೂರ್ತಿ, ಸುನಂದಾ, ಯತಿರಾಜ್, ಚೇತನ್, ನಚಿಕೇತ- ಪ್ರೋತ್ಸಾಹಿಸಿದ ಎಲ್ಲರಿಗೂ ಥ್ಯಾಂಕ್ಸ್.
ReplyDeleteadbhta kathe, bhasheyalli a`ta adalu hogade bhavanegala a`tavannu chennagai bannisiddiri. kutoohala moodisuva, tannage, summane mana kalakuva kathe kottiddiri. innastu bareyiri. ganiyinda giniyanta kathe barali.
ReplyDeletekathe chennagide. bhasheyalli ata adalu hogade bhavanegala atavannu chendagi bannisiddiri. innastu kathe neeriksheyalli.
ReplyDeleteSushruta and Vaiga- tumba thanks.
ReplyDeleteಚೆನ್ನಾಗಿ ಬರೆದಿದ್ದೀರಿ..
ReplyDelete