Friday, November 21, 2008

ಒಂದು ಅನಾಮಧೇಯ ಮನವಿ

seedಈ ಜಗತ್ತು
ಇಷ್ಟು ಸಂವತ್ಸರಗಳ ಕಾಲ
ಬದುಕಿಕೊಂಡಿರಲು
ಕಾರಣವಾದ
ಒಂದು ಸಣ್ಣ ಉಸಿರಂತೆ
ನಾನು ಬದುಕಲು
ಬಯಸುತ್ತೇನೆ-
ಸದ್ದಿಲ್ಲದೇ, ಸುದ್ದಿಯೇ ಆಗದೇ
ಗದ್ದಲದ ನಡುವೆ ಜಾಗ ಕಂಡುಕೊಂಡ
ಮೌನದಂತೆ...

ಆದರೆ ನಾಗರಿಕ ಬದುಕಿಗೆ
ನಾನು ತಾಗಿಕೊಳ್ಳಬೇಕೆಂದರೆ
ಅಡ್ರಸ್‌ ಪ್ರೂಫ್‌ ಕೇಳುತ್ತಾರೆ,
ನನಗೇನೋ ಕಳಿಸಿಕೊಡಲು
ನನ್ನ ಅಡ್ರಸ್‌ ಬರೆದುಕೊಳ್ಳುತ್ತಾರೆ,
ನಾನು ಮತ ಹಾಕುತ್ತಿದ್ದೇನಾ
ಎಂದು ಗೆಳೆಯರು ವಿಚಾರಿಸುತ್ತಾರೆ.
ಸೈಟ್‌ ತೆಗೆದುಕೊಂಡು
ತಳ ಊರಿದೆನಾ
ಎಂದು ನೆಂಟರಿಷ್ಟರು
ಕುತೂಹಲ ತಾಳುತ್ತಾರೆ.
ಕೇಬಲ್‌, ಟೀವಿ, ಗ್ಯಾಸ್‌, ಪೋಸ್ಟ್‌,
ವಂತಿಗೆ ಎನ್ನುತ್ತಾ ನನ್ನ ಅಸ್ತಿತ್ವದ
ಬಾಗಿಲನ್ನು ತಟ್ಟುತ್ತದೆ
ನಾಗರಿಕ ಕೈ,
ತುಳಿಯುತ್ತವೆ
ಅನಾಮಿಕರ ಹೊಸ್ತಿಲು.

ಉಳಕೊಂಡ ಎಲ್ಲಾ ವಿಳಾಸಗಳ
ಮುಖ್ಯ ರಸ್ತೆ, ತಿರುವು, ಮನೆ ನಂಬರ್‌
ಲ್ಯಾಂಡ್‌ಮಾರ್ಕ್‌, ಪ್ಯಾನ್‌ನಂಬರ್‌,

ಓಟರ್‌ ಐಡಿ, ಈಮೇಲ್‌ ಐಡಿಗಳಲ್ಲಿ
ನಾನು ಉಸಿರಾಡಲಾರೆ

ಹೆಸರಿಲ್ಲದವರು
ಪೇರಿಸಿದ ತಾರಸಿಯ ಮೇಲೆ
ಬಿದ್ದಲ್ಲೇ ಒಣಗಿಹೋದ ಅತ್ತಿಯ ಹೂವೇ,
ನಿನ್ನಂತೇ ನಾನೂ ಬತ್ತಬೇಕು
ಗೊತ್ತೇ ಆಗದಂತೆ,
ಈ ಪ್ರಕೃತಿಯ ಸರ್ವ ಮಳೆ,
ಸರ್ವ ಕೊಳೆ, ಸರ್ವ ಧೂಳು ಕಳೆ
-ಗಳು ನನ್ನ ಮೇಲೂ ಅರಳಬೇಕು
ವರದಿಯೇ ಆಗದಂತೆ.
ಸಿಡಿಯಬೇಕು ಅಕ್ಕಿಯಿಂದ
ಸಿಡಿದ ಸಿಪ್ಪೆಯಂತೆ,
ಒಡೆಯಬೇಕು
ಮಧ್ಯೆರಾತ್ರಿ ಕುಡಿಯೊಡೆದ
ಬೀಜದಂತೆ,
ನುಡಿಯಬೇಕು
ಕೊಳಲ ನುಡಿಯ ಸ್ವರದಂತೆ
ಕನಸಬೇಕು
ಸುಸ್ತಲೂ ಅಮ್ಮನಿಗೆ ಬಿದ್ದ
ಮಕ್ಕಳೇಳ್ಗೆಯ ಕನಸಿನಂತೆ,
ಸುಳಿಯಬೇಕು
ಇಳೆಯ ಸುಳಿಗಾಳಿಯಂತೆ...

2 comments:

  1. "ಕನಸಬೇಕು
    ಸುಸ್ತಲೂ ಅಮ್ಮನಿಗೆ ಬಿದ್ದ
    ಮಕ್ಕಳೇಳ್ಗೆಯ ಕನಸಿನಂತೆ"

    ಈ ಸಾಲುಗಳು ಆಕರ್ಷಿಸಿದವು.

    ReplyDelete
  2. Nice kavithe...actually saddilladhe baduka bayasuva suddijeevi idhe anta gottaytu. Hecchu gaddala madadhe shubhashaya heltidini...gdlk

    ReplyDelete