Saturday, November 8, 2008

ಬಾಲ ದಾರಿಯಲ್ಲಿ ಸೂರ್ಯ ಜಾರಿಹೋದ

slumbala2ಬೀದೀಲಿ ಬಿದ್ದೋರು, ಸದ್ದಿಲ್ಲದೇ ಇದ್ದೋರು, ಒಳಗೊಳಗೇ ಅತ್ತೋರು ನನ್ನ ಜನಗಳು...
`ನನ್ನ ಜನಗಳು' ಎಂಬ ಸಿದಲಿಂಗಯ್ಯ ಅವರ ಕವಿತೆಯಲ್ಲಿ ಬರುವ ಮೇಲ್ಕಂಡ ಸಾಲಲ್ಲಿ ಇರುವ ಸಂಕಟ ಅಸಾಧಾರಣವಾದುದು. `ಸ್ಲಂ ಬಾಲಾ' ಚಿತ್ರದಲ್ಲೂ ಆ ವೇದನೆ, ಸಂಕಟ ಇದೆ. `ಸೈಜುಗಲ್ಲು ಹೊತ್ತೋರು' ದಲಿತರಾದರೆ ಮಂತ್ರಿಗಳ ಸಾಮ್ರಾಜ್ಯಕ್ಕೆ `ಸೈಜುಗಲ್ಲಾಗಿ' ಹೋಗುವವ ಸ್ಲಂ ಬಾಲಾ. ಅವರ ರಾಜಕೀಯ ಹಾದಿಯನ್ನು ವಿರೋದಿಗಳಿಂದ ಮುಕ್ತ ಮಾಡುತ್ತಾ, ತನ್ನ `ದೊಡ್ಡೋರ' ಉದ್ದಾರಕ್ಕಾಗಿ ತನ್ನ ಸರ್ವಸ್ವವನ್ನೂ ಬಲಿ ಕೊಡುತ್ತಾ, ಅವರ ಚುನಾವಣಾ ಸಾಫಲ್ಯಕ್ಕಾಗಿ ಕೊಲೆಗಿಲೆ ಮಾಡುತ್ತಾ ಬಾಲಾ ಬೆಳೆಯುತ್ತಾನೆ. ಬೆಳೆಯುತ್ತಾ ಬೆಳೆಯುತ್ತಾ ತನ್ನ ಮುಂದಿನ ದಿನಗಳನ್ನು ಕನಸಿನಿಂದ ಸಿಂಗರಿಸುತ್ತಾನೆ. `ಮೈ ಪಾರ್ವತವ್ವ, ಮೈ ಸ್ಲಂ, ಮೈ ಪೀಪಲ್‌' ಎನ್ನುತ್ತಾ ಕುಡಿದ ಮತ್ತಲ್ಲಿ ತನ್ನವರನ್ನು ಪ್ರೀತಿಸುತ್ತಾನೆ. ಹೀಗೆ ಬೆಳೆಯುತ್ತಾ ಹೋದವನು ಬಳಸಿಕೊಂಡವರಿಂದಲೇ ಹತನಾಗುತ್ತಾನೆ.

ಬಿಡುಗಡೆಯಾಗಿರುವ `ಸ್ಲಂ ಬಾಲಾ' ಅನೇಕ ಕಾರಣಕ್ಕೆ ನೋಡಲೇಬೇಕಾದ ಸಿನಿಮಾ. ಅತ್ಯಂತ ಮಂದಗತಿಯ ಚಲನೆ, ಅನೇಕ ಕಡೆ ವಸ್ತುವಿನ ನಿರ್ವಹಣೆ ವಿಚಾರದಲ್ಲಾಗಿರುವ ಔಟ್‌ ಆಫ್‌ ಫೋಕಸ್‌ ಮೊದಲಾದ ಸಮಸ್ಯೆಗಳು ಚಿತ್ರದುದ್ದಕ್ಕೂ ಕಾಡಿದರೂ ಇವೆಲ್ಲಾ ಆಕ್ಷೇಪಗಳನ್ನೂ ಮೀರಿದ ಕಾರಣಕ್ಕಾಗಿ ನಾವೆಲ್ಲಾ `ಸ್ಲಂ'ಗೆ ಒಮ್ಮೆ ಹೋಗಿ ಬರಬೇಕು. ನಾವು ದಲಿತ ಸಾಹಿತ್ಯದ ಮೂಲಕ ಅನಾದಿ ಕಾಲದಿಂದಲೂ ಕಾಣುತ್ತಲೇ ಬಂದ ಶೋಷಣೆಯ ಇನ್ನೊಂದು ರಾಜಕೀಯ ರೂಪವಾಗಿ `ಬಾಲಾ' ಕಾಣುತ್ತಾನೆ.
ದೇವನೂರು ಮಹಾದೇವರ `ಡಾಮರು ಬಂದುದು' ಕತೆಯ ಕೊನೆಯಲ್ಲಿ ಶ್ರೀಸಾಮಾನ್ಯನೊಬ್ಬ ಡಾಮರು ಡಬ್ಬಿಯೊಳಗೆ ಬೀಳುವ ದಾರುಣ ಘಟನೆಗೂ ಬಾಲಾನನ್ನು ಎನ್‌ಕೌಂಟರ್‌ ಮಾಡಿ ಮುಗಿಸುವ `ಸ್ಲಂ ಬಾಲಾ' ಚಿತ್ರದ ಕ್ಲೈಮ್ಯಾಕ್ಸ್‌ಗೂ ಸಂಬಂಧವೊಂದು ಕಾಣುತ್ತದೆ. ಬಾಲಾನಂತೆ ಚೋಮ ಇತ್ಯಾದಿ ನಮ್ಮ ದಲಿತ ಪಾತ್ರಗಳೂ ಕಾಣುತ್ತವೆ. ಎಲ್ಲಾ ದಲಿತ ಲೋಕದ ಕತೆಗಳೂ `ಬಾಲಾ'ನಲ್ಲಿ ಪ್ರತಿಫಲಿತವಾಗುತ್ತವೆ. ಸತ್ತ ಬಾಲಾನ ಹೆಣದ ಮುಂದೆ ಗೋಳಿಡುತ್ತಿರುವ ಅವನವ್ವ ಪಾರ್ವತಿ, ಪ್ರಿಯತಮೆ ಮಲ್ಲಿಗೆ, ಅವನ ಸ್ಲಂ ಜನಗಳು, ಅವನ ಜೊತೆ ಸತ್ತ ಸ್ನೇಹಿತ ರಜ್ಜುವಿನ ಅಮ್ಮ, ತಂಗಿ- ಎಲ್ಲರೂ ದೇಶ, ಕಾಲ, ಭಾಷೆ, ಪ್ರದೇಶಗಳನ್ನೂ ಮೀರಿ ರೋದಿಸುತ್ತಲೇ ಇದ್ದಾರೆ ಎಂಬ ಭಾವದಲ್ಲಿ `ಬಾಲಾ' ಒಂದು ವರ್ತಮಾನ ಕಾಲದಂತೆ ಕಾಣುತ್ತಾ ಹೋಗುತ್ತದೆ.

`ಆ ದಿನಗಳು' ಚಿತ್ರವನ್ನು ಇಟ್ಟುಕೊಂಡು ನಾವು `ಸ್ಲಂ ಬಾಲಾ'ನನ್ನು ವಿಶ್ಲೇಷಿಸಿದರೆ ಎರಡೂ ಕೃತಿಗಳಿಗೆ ನಾವು ಮಾಡುವ ಅವಮಾನ. ಯಾಕೆಂದರೆ ಎರಡೂ ಕತೆಯ ಹಿನ್ನೆಲೆ, ಮುನ್ನೆಲೆ, ವೇದಿಕೆ, ವೇದನೆಗಳೆರಡೂ ಬೇರೆ ಬೇರೆ. ಅಲ್ಲಿ ಒಂದು ಪ್ರೇಮಕತೆಯನ್ನು ಭೂಗತ ಜಗತ್ತಿನ ಹಿನ್ನೆಲೆಯಲ್ಲಿ ನೋಡಲಾಗಿದೆ. ಇಲ್ಲಿ ಹಾಗಲ್ಲ, ಒಂದು ಭೂಗತ ಜಗತ್ತು ಇಲ್ಲವೇ ಇಲ್ಲ. ಇಲ್ಲಿರುವುದು ಮಂತ್ರಿ, ಪೊಲೀಸ್‌ ಅಕಾರಿ. ರಾಜಕಾರಣಿ ಮಂತ್ರಿಯಾಗುವ ಮೊದಲು ಶ್ರೀಸಾಮಾನ್ಯನನ್ನು ತನ್ನ ರಾಜಕೀಯ ದಾಳವಾಗಿ ಮಾಡಿಕೊಂಡು, ಗೆದ್ದ ನಂತರ ಅವನ ಬೆಳವಣಿಗೆಯನ್ನು ಉತ್ಪಾಟನೆ ಮಾಡುತ್ತಾನೆ. ಇದರ ನಡುವೆ ಒಬ್ಬ ಸಾಮಾನ್ಯನ ಕನಸು, ಅದನ್ನು ಈಡೇರಿಸಿಕೊಳ್ಳುವ ತವಕ, ಈಡೇರಿಕೆಗೆ ಯಾವ ಮಾರ್ಗವನ್ನಾದರೂ ಮುಗವಾಗಿ ತುಳಿದುಬಿಡುವ ಅಪಾಯ, ಯಾವುದೇ ಪಿತೂರಿಗಳನ್ನೂ ಎಲ್ಲಾ ನೆಲೆಯಿಂದಲೂ ಅರ್ಥ ಮಾಡಿಕೊಳ್ಳಲಾಗದ ಅವರ ಸ್ಥಿತಿ, ನಂಬಿಕೆಯನ್ನೂ, ಅಪನಂಬಿಕೆಯನ್ನೂ ಅತ್ಯಂತ ಉದ್ದಟತನದಿಂದ ಆವಾಹಿಸಿಕೊಳ್ಳುವ ರೀತಿ- ಎಲ್ಲವೂ `ಬಾಲಾ'ನ ಕತೆಯ ಹರವನ್ನು ವಿಸ್ತರಿಸುತ್ತಾ ಹೋಗುತ್ತದೆ.

ಬಾಲಾನಾಗಿ ವಿಜ್‌ ಅವರ ಅದ್ಭುತ ಅಭಿನಯ, ಮಲ್ಲಿಗೆಯಾಗಿ ಶುಭ ಪೂಂಜಾ ಅವರ ಸ್ನಿಗ ಅಭಿನಯ, ಖಳರಾಗಿ ಶಶಿಕುಮಾರ್‌, ಬಿ ಸುರೇಶ್‌, ಅಚ್ಯುತ್‌, ಗೆಳೆಯನಾಗಿ ಸತ್ಯ, ಪಾರ್ವತಿಯಾಗಿ ಉಮಾಶ್ರೀ ನಿಮ್ಮೊಳಗೆ ನಿಧಾನವಾಗಿ ಇಳಿಯುತ್ತಾ ಹೋಗುತ್ತಾರೆ. ಅವರು ಒಳಗಿಳಿದ ನಂತರ ತುಂಬ ದಿನಗಳವರೆಗೆ ಒಳಗೊಳಗೇ ಕಾಡುತ್ತಾರೆ. ನಮ್ಮ ಭಾವಗಳನ್ನು ಮೀಟುತ್ತಾರೆ.
ಚಿತ್ರದ ಕತೆ, ಚಿತ್ರಕತೆ, ಸಂಭಾಷಣೆ ಕೊಟ್ಟ ಅಗ್ನಿ ಶ್ರೀಧರ್‌, ಮೊದಲ ಪ್ರಯತ್ನದಲ್ಲೇ ನಿರ್ದೇಶನದಲ್ಲಿ ಅಚ್ಚರಿಯ ಪ್ರತಿಭೆ ತೋರಿದ ಸುಮನ್‌ ಕಿತ್ತೂರು, ಸಂಗೀತ ನಿರ್ದೇಶಕ ಅರ್ಜುನ್‌, ಛಾಯಾಗ್ರಾಹಕ ಮಹೇಂದ್ರ, ಸಂಕಲನಕಾರ ದೀಪು ಎಸ್‌ ಕುಮಾರ್‌ ತಂತಮ್ಮ ಕೆಲಸದಿಂದ ನಮ್ಮನ್ನು ಕೃತಾರ್ಥರನ್ನಾಗಿ ಮಾಡುತ್ತಾರೆ.

5 comments:

  1. One of the best reviews about a good movie. Keep it up Vikas- Suresh K.

    ReplyDelete
  2. NaaLe night. Navarang theatre. 10PM.

    ReplyDelete
  3. http://slumbala.net/feed.php

    ReplyDelete
  4. shabaas kulla. keep it up

    ReplyDelete
  5. ಒಳ್ಳೆ ವಿಮರ್ಶೆ..

    ReplyDelete