Wednesday, October 29, 2008

ನೀ ಬಂದು ನಿಂದಿಲ್ಲಿ ಪಟಾಕಿ ಹಚ್ಚಾ!

ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ...
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್‌ ಕಾಯ್ಕಿಣಿ ಅವರು `ಹಾಲಿನ ಮೀಸೆ' ಕತೆಯಲ್ಲಿ ಬರೆದ ಒಂದು ವಿವರ ಮತ್ತು ಪಟಾಕಿ ಸಿಡಿತದ ಒಂದೆರಡು ಅಮಾನವೀಯ ಘಟನೆಗಳನ್ನು ಇಲ್ಲಿ ನೀಡಲಾಗುತ್ತಿದೆ.
ಸ್ಟಾಕ್‌ ಉಳಿದಿದೆ ಎಂದು ನೀವ್ಯಾರಾದರೂ ಪಟಾಕಿ ಹಿಡಿದುಕೊಂಡು, ಗೇಟ್‌ ಎದುರು ನಿಂತು, ರಸ್ತೆ ಮೇಲೆ ಪಟಾಕಿ ಇಟ್ಟು, ಬೆಂಕಿ ಹತ್ತಿಸಿದರೆ ಈ ಘಟನೆಗಳು ನೆನಪಾಗಲಿ, ರಸ್ತೆಯಲ್ಲಿ ಹೋಗುತ್ತಿರುವವರು ದಾಟಿ ಹೋದ ಮೇಲೆ ನಿಮ್ಮ ಪಟಾಕಿಗೆ ಬೆಂಕಿ ತಗುಲಲಿ.
**
`ಹಾಲಿನ ಮೀಸೆ' ಕತೆಯ ಪುಂದು (ಪುಂಡಲೀಕ ಎನ್ನುವುದು ಅವನ ಹೆಸರು, ಪುಂಡು ಎಂದು ಆ ಮನೆಯ ಯಜಮಾನರು ಕರೆಯುತ್ತಾರೆ. ಆದರೆ ಅವನು ನೋಡಿಕೊಳ್ಳುತ್ತಿರುವ ಹುಡುಗಿ ಪಿಂಕಿ ಕರೆಯಲು ಬರದೇ `ಪುಂದು' ಎಂದೇ ಕರೆಯುತ್ತಾಳೆ) ಪಿಂಕಿಗೆ ಪಟಾಕಿ ಕಲಿಸಿಕೊಟ್ಟ.
ಪ್ರಾರಂಭದಲ್ಲಿ ಪಿಂಕಿಗೆ ಪಟಾಕಿ ಎಂದರೆ ಮಾರುದೂರ ಓಡುತ್ತಿದ್ದಳಂತೆ. ಮಹಾ ಹೆದರುಪುಕ್ಕಿ. ಅವಳಪ್ಪ ಅಮ್ಮ ಎಷ್ಟೇ ಪಟಾಕಿ ತಂದರೂ ಅದನ್ನು ಕೆಲಸದ ಹುಡುಗ ಪುಂಡುವೇ ಹೊಡೆದು ಖಾಲಿ ಮಾಡಬೇಕಾಗಿತ್ತು. ಆದರೆ ನಿಧಾನವಾಗಿ ಪುಂಡು, ಪಿಂಕಿಯನ್ನು ಸಮಾಧಾನಿಸಿ ಪಟಾಕಿ ಹೊಡೆಯುವುದನ್ನು ಹೇಳಿಕೊಡುತ್ತಾ ಬಂದ. ಕೊನೆಗೊಮ್ಮೆ ಆಕೆ ಧೈರ್ಯ ಮಾಡಿ ನಕ್ಷತ್ರಕಡ್ಡಿ ಹೊತ್ತಿಸಲು ಕಲಿತಳು. ಆ ವಿಷಯವನ್ನು ಪುಂಡು ಮನೆಯವರೆಲ್ಲರಿಗೂ ಹೇಳಿಕೊಂಡು ಸಂಭ್ರಮಿಸಿದನಂತೆ.
**
ಮೊನ್ನೆ ನರಕ ಚತುರ್ದಶಿ ಮರುದಿನದ ಅಮಾವಾಸ್ಯೆಯ ದಿನ ಪಟಾಕಿ, ದೀಪಗಳಿಂದಾಗಿ ಹುಣ್ಣಿಮೆ ಬೆಳಕು. ಒಬ್ಬ ವ್ಯಕ್ತಿ ಹೋಗುತ್ತಿದ್ದಾನೆ. ಆತ ಹೋಗುವ ದಾರಿಯಲ್ಲಿ ಮಧ್ಯ ವಯಸ್ಸಿನ ವ್ಯಕ್ತಿಯೊಬ್ಬ ತಮ್ಮಿಬ್ಬರ ಮಕ್ಕಳ ಕೈಯ್ಯಲ್ಲಿ ಪಟಾಕಿ ಸಿಡಿಸುತ್ತಿದ್ದಾನೆ. ನಡೆದು ಹೋಗುತ್ತಿರುವ ವ್ಯಕ್ತಿ ಹೊತ್ತಿ ಸಿಡಿಯಲು ಸಿದವಾಗಿರುವ ಆ ಪಟಾಕಿಗಾಗಿ ಕಾದು ನಿಂತ. ಅದು ಹೊಟ್ಟಿತು. `ಸರಿ, ಇನ್ನೇನು ಇನ್ನೊಂದು ಪಟಾಕಿ ಹೊಡೆಯುವ ಮೊದಲು ಅಲ್ಲಿಂದ ದಾಟಿಕೊಳ್ಳೋಣ. ನನ್ನನ್ನು ನೋಡಿ ಆತ ಪಟಾಕಿ ಹೊತ್ತಿಸದೇ ಕಾದಾನು' ಎಂದು ಅಂದುಕೊಂಡು ಹೊರಟ. ಆದರೆ ಆ ವ್ಯಕ್ತಿ ತನ್ನ ಪಾಡಿಗೆ ತಾನು ಇನ್ನೊಂದು ಪಟಾಕಿ ಇಟ್ಟ. ಪಟಾಕಿಗೆ ಬೆಂಕಿಯನ್ನೂ ಕೊಟ್ಟ. ಈ ವ್ಯಕ್ತಿ ಅಲ್ಲಿಂದ ದಾಟುವ ಮುನ್ನ ಪಟಾಕಿ ಸಿಡಿದಿತ್ತು.
ಆ ವ್ಯಕ್ತಿ ಈತನಿಗೆ ಒದಗಬಹುದಾದ ಅಪಾಯದ ಬಗ್ಗೆ ಹ್ಯಾಗೆ ಆಲೋಚಿಸಲಿಲ್ಲವೋ ಹಾಗೇ ಆಯ ತಪ್ಪಿಸಿಕೊಂಡ ಅಪಾಯದ ಬಗ್ಗೆಯೂ ಚಿಂತಿಸಲಿಲ್ಲ. ಪಟಾಕಿ ಹೊತ್ತುತ್ತಿತ್ತು, ಸಿಡಿಯುತ್ತಿತ್ತು. ಅದರ ನಡುವೆ ಕುಂಟಾಬಿಲ್ಲೆ ಆಡುವಂತೆ ದಾರಿಹೋಕರು ಜಿಗಿಯುತ್ತಿದ್ದರು. ಯಾರೂ ದಾಟಿ ಹೋಗಲು ಆ ಪಟಾಕಿ ದಾರಿ ಮಾಡಿ ಕೊಡಲಿಲ್ಲ, ಅದಕ್ಕೆ ಆ ವ್ಯಕ್ತಿ ಅವಕಾಶವನ್ನೂ ಕೊಡಲಿಲ್ಲ.
**
ಗಾಂಬಜಾರ್‌. ಜನಸಾಗರದಲ್ಲಿ ಅದು ಆ ಹಬ್ಬದ ದಿನ ಕಿಷ್ಕಿಂದೆಯಾಗಿತ್ತು. ವಾಹನಗಳು ರಸ್ತೆಯಲ್ಲೂ, ರಸ್ತೆ ಮತ್ತು ಫುಟ್‌ಪಾತ್‌ ಮೇಲೆ ಜನ ಸಂದಣಿಯೂ ಓಡಾಡುತ್ತಿತ್ತು. ಒಂದೆಡೆ ರಸ್ತೆಗಳು ವಾಹನಗಳಿಂದ ಕ್ಷಣಕಾಲ ತಪ್ಪಿಸಿಕೊಂಡು ಖಾಲಿಯಾಗಿರಬೇಕು ಎಂದು ಎಲ್ಲರೂ ಭಾವಿಸುತ್ತಿದ್ದರೆ ಹಾಗಿಲ್ಲ. ವಾಹನಗಳು ಹಾಗೇ ನಿಂತಿದ್ದವು, ಎದುರಿಗೆ ಹೊತ್ತಿಸಿಟ್ಟ ಘರ್ನಾಲು, ಲಕ್ಷ್ಮೀ ದಡಾಕಿ, ಮೂಡೆ, ರಾಕೇಟ್‌ಗಳು. ಬೆಂಕಿ ತಗಲಿಸಿಕೊಂಡು ಹೊಟ್ಟುತ್ತಿದ್ದ ಸರಗಟ್ಟಲೆ ಪಟಾಕಿಗಳ ಎದುರು ಬೈಕ್‌ಗಳಲ್ಲಿ, ಕಾರುಗಳಲ್ಲಿ ಪ್ರೇಕ್ಷಕ ಮೂಕವಿಸ್ಮಿತ. ಪಾದಾಚಾರಿಗಳಿಗೂ ಮಾತಿಲ್ಲ, ಕತೆಯಿಲ್ಲ.
ಅಷ್ಟರಲ್ಲಿ ಪಟಾಕಿ ನಿಂತಿತು. ವಾಹನಗಳು ಸರಬರ ಹೊರಟವು. ಜನ ಬೇಗ ಬೇಗನೆ ದಾರಿ ಹುಡುಕಿಕೊಂಡರು. ಅಷ್ಟರಲ್ಲಿ ಒಂದು ಬೈಕ್‌ ಸವಾರ ಬರತೊಡಗಿದ. ಒಂದಿಷ್ಟು ಕಿಡಿಗೇಡಿಗಳ ತಂಡ ಕೇಕೆ ಹಾಕುತ್ತಾ ಪಟಾಕಿ ಸರವನ್ನು ಹಚ್ಚಿ ರಸ್ತೆಯ ಮಧ್ಯೆ ಇಟ್ಟಿತು. ಹೋ ಎಂದು ಅರಚಿತು. ಜನ ದಿಕ್ಕಾಪಾಲಾದರು. ಬೈಕ್‌ ಸವಾರ ಆ ಹೊಟ್ಟುವ ಪಟಾಕಿಗಳ ಭಯಕ್ಕೆ ವಿಚಲಿತನಾದ. ಹೋಗಿ ಬದಿಯ ಪಾರ್ಕ್‌ ಆದ ಬೈಕ್‌ಗಳ ಸಂದಿಯಲ್ಲಿ ಬಿದ್ದ. ಆ ಕಿಡಿಗೇಡಿ ಗುಂಪು ಹೋ ಎಂದು ಮತ್ತೆ ಶಂಖನಾದ ಮಾಡಿತು.
ಆತ ಬೈಯುತ್ತಾ ಬೈಯುತ್ತಾ ಬೈಕ್‌ ಎಬ್ಬಿಸಿಕೊಂಡು ಹೊರಟ. ಕೈ ತೋರಿಸಿ ಬೈದ. ಅಕ್ಕ ಪಕ್ಕದವರೂ ಅವನ ಬೈಗುಳಕ್ಕೆ ತಮ್ಮ ಗೊಣಗಾಟ ಸೇರಿಸಿದರು. ಆದರೆ ಆ ಯುವಪಡೆ ಇನ್ನಷ್ಟು ಹೋ ಎಂದಿತು. ಪಟಾಕಿ ಸರದ ಇನ್ನಷ್ಟು ಸ್ಟಾಕ್‌ಗಳನ್ನು ರಸ್ತೆಯ ಮಧ್ಯೆ ಇಟ್ಟು, ಬೆಂಕಿ ತಗುಲಿಸಲು ಮುಂದಾಯಿತು. ದೀಪಾವಳಿ ಪಟಾಕಿಗಳ ಸದ್ದಲ್ಲಿ ಆಚರಣೆಯ ಸ್ವರೂಪ ಪಡೆದುಕೊಳ್ಳುತ್ತಿತ್ತು.

2 comments:

  1. ಹಲೋ, ನೋಡ್ತಾ ಇದೀನಿ, ಹೀಗೇ ಚೆನ್ನಾಗಿ ಬರೀತಾ ಇರಪ್ಪಾ..!

    ReplyDelete
  2. ದೃಶ್ಯಗಳನ್ನ ಮಿಕ್ಸ್ ಮಾಡಿದ ರೀತಿ ಇಷ್ಟವಾಯಿತು. ಹಾಗೇ, ’ಹಾಲಿನ ಮೀಸೆ’ಯ ಪುಂದುವನ್ನು ಮತ್ತಿಲ್ಲಿ ಕರೆತಂದದ್ದೂ.

    ReplyDelete