ಮೊನ್ನೆ ಬಿಸಿಲ ಝಳ ಕಡಿಮೆಯಾಗುತ್ತಿರುವ ಒಂದು ಸಂಜೆ ಸಣ್ಣ ಬ್ಯಾಗ್ ಹೆಗಲಿಗೇರಿಸಿಕೊಂಡು, ಉಡುಪಿ ಬಸ್‌ಸ್ಟಾಪ್‌ನಲ್ಲಿ ಇಳಿದೆ. ಒಂದು ಕಾಲಕ್ಕೆ ಆ ಜಾಗ ನನ್ನ ಅತ್ಯಂತ ಪರಿಚಿತ ಜಾಗವಾಗಿತ್ತು ಎಂಬುದನ್ನು ಆಗ ನನಗೆ ನಂಬಲೇ ಆಗಲಿಲ್ಲ. ಅದೇ ರಸ್ತೆ, ಅದೇ ಒಳದಾರಿ, ಅದೇ ಬಂಗಾರದಂಗಡಿ, ಅದೇ ಬ್ಯಾಂಕ್, ಅದೇ ರಥಬೀದಿ, ಅದೇ ಶಾಲೆ, ಅದೇ ಆಟದ ಬಯಲು. ಹೀಗೆ ಭೌತಿಕವಾಗಿ ಅದೇ ಶಹರ, ಅದೇ ವಿವರ. ಬಸ್‌ಸ್ಟ್ಯಾಂಡ್ ಜಾಗ ಬದಲಿಸಿಕೊಂಡಿತ್ತು, ರಸ್ತೆಗಳು ಕೆಲವೆಡೆ ಒನ್‌ವೇ, ಕೆಲವೆಡೆ ಟೂ ವೇ ಆಗಿದ್ದವು ಎಂಬಂಥ ಒಂದಷ್ಟು ವ್ಯತ್ಯಾಸಗಳಿದ್ದರೂ ಅವು ಒಂದು ಕಾಲದ ಆ ನಗರದ ಹಳಬರನ್ನು ದಿಕ್ಕು ತಪ್ಪಿಸುವಂತೇನೂ ಇರಲಿಲ್ಲ.
ಸುಮಾರು ಹನ್ನೆರಡು ವರ್ಷಗಳ ಹಿಂದೆ ಇದೇ ಉಡುಪಿಯಲ್ಲಿ ನಾನು ಚಡ್ಡಿ ಹಾಕಿಕೊಂಡು ರಸ್ತೆ ರಸ್ತೆಗಳನ್ನು ಅಲೆದಿದ್ದೆ. ಏಳರಿಂದ ಎಸ್ಸೆಸ್ಸೆಲ್ಸಿವರೆಗೆ ಅಲ್ಲಿನ ಶಾಲೆಯೊಂದರಲ್ಲೇ ಕಲಿತಿದ್ದೆ, ಅಲ್ಲಿನ ಮಠಗಳಲ್ಲೇ ವಾಸ್ತವ್ಯ ಹೂಡಿದ್ದೆ. ಅಲ್ಲಿನ ಕೃಷ್ಣನ ಮನೆಯಲ್ಲೇ ಉಂಡಿದ್ದೆ. ಅಲ್ಲಿನ ಪುಷ್ಕರಣಿಗಳಲ್ಲಿ ಈಜು ಬರದ ನನ್ನಂಥವರ ಜತೆ ಕಡಿಮೆ ನೀರು ಇರುವಲ್ಲಿ ಸ್ನಾನ ಮಾಡಿದ್ದೆ. ಏಕಾದಶಿ ಬಂದಾಗ ಮಠದವರು ಊಟ ಹಾಕುವುದಿಲ್ಲವಾದ್ದರಿಂದ ಆಗ ನಾನೇ ಉಪ್ಪಿಟ್ಟು ಮಾಡಿಕೊಂಡು, ದೋಸೆ ಹೊಯ್ದುಕೊಂಡು ಹೊಟ್ಟೆ ಹೊರೆದುಕೊಂಡಿದ್ದೆ.
ನಾನು ತೀರ್ಥಹಳ್ಳಿಯ ಹುಡುಗ. ಉಡುಪಿಗೆ ಕಲಿಯಲಿ ಎಂದು ಅಮ್ಮ ನನ್ನನ್ನು ಕಳಿಸಿಕೊಟ್ಟಳು. ಉಡುಪಿಯಲ್ಲಿ ನನ್ನ ಜೀವನ ಶುರುವಾದ ಮೊದಲ ವರ್ಷ ನನ್ನ ಕಣ್ಣು ಪಟ್ಟಣ ನೋಡುವುದಕ್ಕಿಂತ ಹೆಚ್ಚು ಕಣ್ಣೀರನ್ನೇ ನೋಡಿತ್ತು. ಮನೆ ಬಿಟ್ಟು ಬಂದ ದುಃಖದಲ್ಲಿ ಕಂತು ಕಂತುಗಳಲ್ಲಿ ಅತ್ತು ಕರೆದು ಊರನ್ನು ನೆನಪು ಮಾಡಿಕೊಳ್ಳತೊಡಗಿದ್ದೆ. ಆದರೆ ನಿಧಾನವಾಗಿ ನನ್ನ ದೇಹ ಮತ್ತು ಮನಸ್ಸು ಆ ನಗರವನ್ನು ನನ್ನ ಬೆಳವಣಿಗೆಯ ಭಾಗವಾಗಿ ಸ್ವೀಕರಿಸಿತು. ಸಿನಿಮಾಗಳನ್ನು ಕದ್ದು ನೋಡುವ ಮೂಲಕ, ರಾಜಾಂಗಣದ ಯಕ್ಷಗಾನಗಳನ್ನು, ಬೀದಿಬೀದಿಗಳ ಆರ್ಕೆಷ್ಟ್ರಾಗಳನ್ನು, ಗಣೇಶ ಹಬ್ಬದ ತೊದಲು ಬೊಂಬೆಯಾಟವನ್ನು ಗುಂಪು ಗುಂಪಾಗಿ ನೋಡುವ ಮೂಲಕ ನಾನು ಉಡುಪಿಯ ಮನೆ ಮಗನಾಗಿದ್ದೆ, ತೀರ್ಥಹಳ್ಳಿ ಭಾಷೆಯನ್ನು ನಿಧಾನವಾಗಿ ಮರೆತು, ಮಂಗಳೂರು ಕನ್ನಡವನ್ನು ರೂಢಿಸಿಕೊಳ್ಳತೊಡಗಿದ್ದೆ.
ಅದೆಲ್ಲಾ ಕೊನೆಗೊಂಡು, ಉಜಿರೆಗೆ ಹೋಗಿ ಅಲ್ಲಿ ಡಿಗ್ರಿವರೆಗೆ ಕಲಿತು, ಆಮೇಲೆ ಬೆಂಗಳೂರು ಸೇರಿ ವೃತ್ತಿ ಪ್ರಾರಂಭಿಸಿ ಬೆಂಗಳೂರೇ ನನ್ನ ಮನೆ ಎಂದು ನನ್ನನ್ನು ನಾನು ನಂಬಿಸಿಕೊಂಡ ಹೊತ್ತಲ್ಲಿ ಮೊನ್ನೆ ಉಡುಪಿಗೆ ಹೋಗಿದ್ದು. ಒಂದೂವರೆ ದಿನ ಅಲ್ಲೇ ಉಳಿದುಕೊಂಡೆ. ಅಲ್ಲೇ ಸಿನಿಮಾ ನೋಡಿದೆ. ಏನನ್ನೋ ಕಳೆದುಕೊಂಡವನಂತೆ ದಿಕ್ಕು ನೋಡುತ್ತಾ ರಸ್ತೆ ರಸ್ತೆಗಳನ್ನು ಅಲೆದೆ. ಕೃಷ್ಣ ಮಠ ಸುತ್ತಿ ಬಂದೆ. ಅಷ್ಟಮಠ ಅಳೆದು ಬಂದೆ. ಅಲ್ಲಿ ಕೊಟ್ಟ ತೀರ್ಥ, ಪ್ರಸಾದ, ಗಂಧಗಳಲ್ಲಿ ಹಳೆಯ ದಿನಗಳನ್ನು ಮೆಲುಕು ಹಾಕಿದೆ. ಅನಂತೇಶ್ವರ ದೇವಸ್ಥಾನಕ್ಕೆ ಎಣ್ಣೆ ಬತ್ತಿ ಸೇವೆ ಸಲ್ಲಿಸಿದೆ. ಕುಂಕುಮ ಹಚ್ಚಿಕೊಳ್ಳುವಾಗ ಈಗಿನ ಪೆಡಸು ಹಣೆಯ ಜಾಗದಲ್ಲಿ ಹಿಂದೊಮ್ಮೆ ನೆಲೆಸಿದ್ದ ನನ್ನ ಎಳಸು ಹಣೆಯನ್ನು ಸವರಿ ಸವರಿ ಹುಡುಕಿಕೊಂಡೆ. ರಥಬೀದಿಯನ್ನು ಸುತ್ತುವಾಗ ಕಟ್ಟಿಗೆ ರಥ ಹಾಗೆಯೇ ಇತ್ತು. ರಥಬೀದಿಯನ್ನು ಸದಾ ಸಲಹುವ ಸೆಗಣಿಯ ಘಂ ವಾಸನೆ ಹಾಗೇ ಇತ್ತು, ಮಠದಿಂದ ಮಠಕ್ಕೆ ಸಾಲು ಸಾಲು ವಟುಗಳು ದಂಡೆತ್ತಿ ಹೋಗುವಾಗ ಅವರಲ್ಲೊಬ್ಬ ನಾನೇ ಆದಂತೆ ರೋಮಾಂಚಿತನಾದೆ. `ಓಹೋ ಅದೇ ಉಡುಪಿ' ಎಂದು ಒಂದು ಕ್ಷಣ ಮನಸ್ಸು ಪ್ರಫುಲ್ಲವಾಯಿತು.
ಆದರೂ ಇದು ನಾನು ನೋಡಿದ ಉಡುಪಿಯಲ್ಲ! ನನ್ನ ಉಡುಪಿ ಒಂದು ಕಾಲಕ್ಕೆ ದಯಾಮಯವಾಗಿತ್ತು. ಮನೆಗೆ ಹೋಗುವ ನೆನಪಾದಾಗಲೆಲ್ಲಾ ಬಸ್‌ಸ್ಟಾಂಡ್‌ಗೆ ಓಡಿ ಹೋಗಿ, ನಮ್ಮೂರಿಗೆ ಹೋಗುವ ಬಸ್‌ಗಳನ್ನೇ ನೋಡಿ ಸಮಾಧಾನ ಮಾಡಿಕೊಂಡಾಗ ಇದೇ ಉಡುಪಿ ನನ್ನನ್ನು `ಬುಲ್ಪೊಡ್ಚಿ' (ಅಳಬೇಡ) ಎಂದು ತುಳುವಿನಲ್ಲಿ ಸಮಾಧಾನ ಮಾಡಿತ್ತು. ಒಮ್ಮೆ ಹಾಸ್ಟೆಲ್‌ನಲ್ಲಿ ಒಬ್ಬನೇ ಇದ್ದಾಗ ಹಠಾತ್ ಹೊಟ್ಟೆನೋವು ಪ್ರಾರಂಭವಾಗಿ ಹೊರಳಾಡುತ್ತಿದ್ದವನನ್ನು ಅಲ್ಲಿನ ಪೋಸ್ಟ್ ಹಾಕುವ ಅಪರಿಚಿತ ಹೆಂಗಸೊಬ್ಬಳು ಶುಶ್ರೂಷೆ ಮಾಡಿದ್ದಳು. ರಥಬೀದಿ ಸುತ್ತಮುತ್ತಲ ಅದೆಷ್ಟೋ ಹೆಸರು ಗೊತ್ತಿಲ್ಲದವರ ಮನೆಗಗಳ ಟೀವಿ ಪರದೆಗಳು ನಮ್ಮಂಥ ಹಾಸ್ಟೆಲ್ ಹುಡುಗರಿಗೆ ಭಾನುವಾರದ ಸಿನಿಮಾ ತೋರಿಸಿ, ವರ್ಲ್ಡ್ ಕಪ್ ಮ್ಯಾಚ್ ತೋರಿಸಿ ಹರೆಯ ಬರಿಸಿದ್ದವು. ಸಾರ್ವಜನಿಕ ಗಣೇಶೋತ್ಸವ ನಡೆಸುವ ಅದೆಷ್ಟೋ ಸಮಿತಿಗಳು ಪಂಚಕಜ್ಜಾಯ ತಿನ್ನಿಸಿ, ಬಾಯಿ ಒರೆಸಿಕೋ ಮರ್ಲಾ (ಹುಚ್ಚಾ) ಎಂದು ಪ್ರೀತಿಯಿಂದ ಗದರಿದ್ದವು. ಅಲ್ಲಿನ ಬೇಕರಿ ಅಂಗಡಿಗಳು ನಮಗೆ ಕಡಿಮೆ ದುಡ್ಡಿಗೆ ರಸ್ಕ್ ಕೊಟ್ಟು ಕೊಟ್ಟು ತಿಂಡಿಯ ರುಚಿ ಹತ್ತಿಸಿದ್ದವು. ವಿದ್ಯಾಭೂಷಣ್ ಹಾಡಿರುವ `ಏಳು ನಾರಾಯಣನೇ ಏಳು ಲಕ್ಷ್ಮೀ ರಮಣ' ಎಂಬ ಹಾಡನ್ನು ದಿನಾ ಬೆಳಿಗ್ಗೆ ಐದಕ್ಕೇ ಹಾಕಿ, ಕೃಷ್ಣನನ್ನಲ್ಲ, ಇಡೀ ಉಡುಪಿಯವರನ್ನು ಕೃಷ್ಣಮಠ ಎಬ್ಬಿಸಿತ್ತು.
ಇದನ್ನೆಲ್ಲಾ ನೆನಪು ಮಾಡಿಕೊಳ್ಳುತ್ತಾ ಲಾಡ್ಜ್ ಒಂದರ ಮೂರನೇ ಮಹಡಿಯಲ್ಲಿ ಮೊನ್ನೆ ತಂಗಿದ್ದಾಗ ಆ ರಾತ್ರಿ ನನ್ನನ್ನು ಯೋಚನೆಗೆ ಹಚ್ಚತೊಡಗಿತು. ಮನಸ್ಸು ಹೊಸ ಉಡುಪಿಯಲ್ಲಿ ಹಳೆಯ ಉಡುಪಿಯನ್ನು ಹುಡುಕುತ್ತಾ ಹಠ ಮಾಡುವುದನ್ನು ಮುಂದುವರಿಸಿಯೇ ಇತ್ತು. ನಿಧಾನವಾಗಿ ಚಿಂತೆ, ಚಿಂತನೆ ಶುರುವಾಯಿತು. ಕಾರಣ ಕೆದಕತೊಡಗಿತು. ಒಂದು ಕಾರಣ ಇದಿರಬಹುದೇ? ಎಲ್ಲಾ ನಗರಗಳಂತೆ ಉಡುಪಿಯೂ ಸಾಕಷ್ಟು ಬೆಳೆದು ನಿಂತಿದೆ. ಇನ್ನೊಬ್ಬರ ಮನೆಗೆ ಹೋಗಿ ಟೀವಿ ನೋಡುವುದಕ್ಕೆ ಆಸ್ಪದವನ್ನೇ ಕೊಡದಂತೆ ಹಾಸ್ಟೆಲ್‌ಗೇ ಟೀವಿ ಬಂದಿದೆ. ಈ ಜನರೇಷನ್‌ನ ತಿಂಡಿ ಹುಚ್ಚು ಗಣೇಶೋತ್ಸವದ ಪಂಚಕಜ್ಜಾಯವನ್ನೂ ಮೀರಿ, ಪಿಡ್ಜಾ- ಬರ್ಗರ್‌ಗಳನ್ನು ತಾಕಿದೆ. ತಂತ್ರಜ್ಞಾನದ ಸಂಪರ್ಕ ತಂತುಗಳು ಎಲ್ಲಾ ನಗರಗಳನ್ನೂ ಸುತ್ತಿಕೊಳ್ಳುತ್ತಿವೆ. ಎಲ್ಲಾ ನಗರಗಳಂತೆ ಉಡುಪಿಯೂ ಹೆಚ್ಚು ತಾಂತ್ರಿಕವಾಗುತ್ತಿದೆ, ಯಾಂತ್ರಿಕವಾಗುತ್ತಿದೆ.
ಅಲ್ಲ, ಇದೂ ಕಾರಣವಲ್ಲ. ಪ್ರಪಂಚದ ಎಲ್ಲಾ ನಗರಗಳೂ ಒಬ್ಬನ ಬಾಲ್ಯದಲ್ಲಿ ಸಿಕ್ಕ ನಗರಗಳೇ ಆಗಿ ಯಾವತ್ತೂ ಉಳಿದಿಲ್ಲ ಮತ್ತು ಉಳಿಯುವುದಿಲ್ಲ. ಅವರ ಪಾಲಿಗೆ ಅವರ ಬಾಲ್ಯದ ನಗರ/ ಹಳ್ಳಿ/ ಮನೆ/ ಮನ ಅವರ ಯೌವನಾವಸ್ಥೆಯಲ್ಲಿ ತನ್ನ ಕೌಮಾರ್ಯವನ್ನು ಕಳೆದುಕೊಂಡಿರುತ್ತದೆ!
ಅಲ್ಲ, ಹಾಗೂ ಅಲ್ಲವೇನೋ? ಹೀಗೆ ಅದೂ ಇದೂ ಜಿಜ್ಞಾಸೆಗಳ ಕೊನೆಯಲ್ಲಿ, ವೇದನೆ ಜತೆ ಮಧ್ಯರಾತ್ರಿ ಎಷ್ಟೋ ಹೊತ್ತಿಗೆ ನಿದ್ರೆಗೆ ಜಾರುವಾಗ ಥಟ್ಟನೆ ಅಂದುಕೊಂಡೆ: ಹಳೆಯ ಉಡುಪಿ ಹೊಸ ಉಡುಪಿಯಾಗಿ ಬದಲಾಗಿದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಹಳೆ ನಾನು ಹೊಸ ನಾನಾಗಿಯಂತೂ ಖಂಡಿತ ಬದಲಾಗಿದ್ದೇನೆ. ಮನುಷ್ಯ ತಾನು ಬದಲಾಗಿ, ಇನ್ನೊಬ್ಬರು ಬದಲಾದರು ಎಂದು ಭಾವಿಸಿಕೊಳ್ಳುತ್ತಾ ಹೋಗುತ್ತಾನೆ. ಉದಾಹರಣೆಗೆ ರಾಮಾಯಣ ಬದಲಾಗುವುದಿಲ್ಲ, ಆ ಕತೆ ಕೇಳುತ್ತಾ ಬೆಳೆದವನು ತನ್ನ ನಿಲುವುಗಳನ್ನು ವಯಸ್ಸಿಗನುಗುಣವಾಗಿ ಬದಲಾಯಿಸಿಕೊಳ್ಳುತ್ತಾ ಹೋಗುತ್ತಾನೆ ಮತ್ತು ಅವನೇ ಬದಲಾಗುತ್ತಾನೆ!
***
ಮರುದಿನ ಎದ್ದಾಗ ಸಿಕ್ಕ ಉಡುಪಿ ಹೆಚ್ಚು ಹೆಚ್ಚು ಹಳೆ ಉಡುಪಿಯೇ ಆಗಿತ್ತು. ಸ್ನಾನ ಮಾಡುವಾಗ ಮೈಮೇಲೆ ಅದೇ ಗಡಸು ನೀರು, ಕನಕನ ಕಿಂಡಿಯಲ್ಲಿ ಹಣಕಿದಾಗ ಅದೇ ಹಳೆ ಕೃಷ್ಣ, ಹೊಟೇಲ್‌ನಲ್ಲಿ ತಿಂಡಿ ತಿನ್ನುವಾಗ ಅದೇ ರುಚಿ ಕೊಡುವ ಮಸಾಲೆ ದೋಸೆ. ಹೊಟೇಲ್‌ನವನ (ಹನ್ನೆರಡು ವರ್ಷದ ಹಿಂದಿನ ಈ ಹುಡುಗನನ್ನು ನೆನಪಿಟ್ಟುಕೊಂಡ) ಅದೇ ಪರಿಚಿತ ನಗು. ಅನಂತೇಶ್ವರ ದೇವಸ್ಥಾನದಲ್ಲಿ ಸಿಕ್ಕು ಬ್ರಹ್ಮಾಂಡ ಸಂತೋಷ ಕೊಟ್ಟ ನನ್ನ ವಾರಗೆಯ ವಟು. ಅವನು ಕೊಟ್ಟ ನನ್ನ ಕ್ಲಾಸ್‌ಮೇಟ್‌ಗಳ ವಿವರ. ಬಸ್ ಹತ್ತಿದಾಗ ಅದೇ `ಏರ್ ಉಡುಪಿ- ಮಣಿಪಾಲ್, ಉಡುಪಿ- ಮಣಿಪಾಲ್' ಎಂಬ ಕಂಡಕ್ಟರ್ ಕೂಗು ಮತ್ತು ಮತ್ತು ಬಿಸಿ ಉಸಿರಿನಂತೆ ಬೀಸಿ ಬೀಸಿ ಮೈಯ್ಯಲ್ಲಿ ಬೆವರ ಹನಿ ಹುಟ್ಟಿಸುವ ಕರಾವಳಿ ಸೆಖೆ.ಙ