Friday, January 9, 2009

`ಬಿದ್ದು ಸಾಯಲು ನೀರಿದ್ದ ಬಾವಿಯೇ ಆಗಬೇಕಿಲ್ಲ'

singingಶಾ. ಬಾಲುರಾವ್‌. ಅನೇಕ ಅಂತಾರಾಷ್ಟ್ರೀಯ ಕವಿತೆಗಳನ್ನು ಕನ್ನಡಕ್ಕೆ ತಂದುಕೊಟ್ಟ ಕವಿ. `ಸೂರ್ಯ ಇವನೊಬ್ಬನೇ' ಎಂದು ಒಂದು ಸಂಕಲನವನ್ನು ಹೊರತಂದು, ಬರೀ ಸೂರ್ಯನ ಮೇಲೆ ಒಂದು ಸಂಕಲನವಿಡೀ ಕವಿತೆಗಳನ್ನು ಬರೆದುಕೊಟ್ಟಿದ್ದರು. `ಸೂರ್ಯ, ಇನ್ನೊಂದು ಲೋಕದ ಕಿಂಡಿ', `ಸೂರ್ಯ- ಇಡೀ ಲೋಕದ ಕಸವನ್ನು ಕಿರಣಗಳ ಕಸಬರಿಕೆಯಿಂದ ಗುಡಿಸುವ ಜಾಡಮಾಲಿ' ಎಂಬಂಥ ಹೊಳಹುಗಳಿದ್ದ ಸಂಕಲನ ಅದು.
ಆದರೆ ಶಾ ಬಾಲುರಾವ್‌ ಅವರು ಬಹಳ ಚೆಲುವಾದ ಕವಿತೆಗಳನ್ನು ಬಹಳ ಹಿಂದೆ ಪ್ರಕಟಿಸಿದ್ದರು. `ನಡೆದದ್ದೇ ದಾರಿ' ಎನ್ನುವುದು ಆ ಸಂಕಲನದ ಹೆಸರು. ಒಟ್ಟು ನಲವತ್ತೆಂಟು ಕವಿತೆಗಳಿವೆ ಅದರಲ್ಲಿ. 1998ರಲ್ಲಿ `ಅಕ್ಷರ ಪ್ರಕಾಶನ' ಪ್ರಕಟಿಸಿದ ಆ ಸಂಕಲನದ ಕವಿಯ ಮಾತು ಈಗಿನ ಕಾವ್ಯ ಜಗತ್ತಿಗೂ ಒಂದು ದಾರಿದೀಪದಂತೆ ಕಾಣಬಹುದು. ಅವರು ಬರೆಯುವ ಕಾಲಕ್ಕೆ ಕಾವ್ಯ ಹೇಗಿತ್ತು ಎಂದು ಅವರು ಹೇಳಿಕೊಂಡಿದ್ದಾರಾದರೂ ಅದರಲ್ಲಿ ನಮ್ಮ ಕಾಲದ ಕಾವ್ಯಭೂಮಿಯ ಸ್ಥಿತಿಗತಿಯನ್ನೂ ಹೇಳುತ್ತಿದೆಯೇನೋ- ಅನಿಸುತ್ತದೆ. ಆ ಮಾತಿನ ಕೆಲವು ಭಾಗಗಳು, ಅವರ ಮಾತಿನಂತೆ ನಡೆದುಕೊಂಡಿರುವ ಒಂದಿಷ್ಟು ಕವಿತೆಗಳು ಇಲ್ಲಿವೆ. ನಿಮ್ಮ ಓದಿಗಾಗಿ. ದಯವಿಟ್ಟು ಕೊಂಡು ಓದಿ ಸಂಕಲನವನ್ನು. ಬೆಲೆ 50 ರೂಪಾಯಿಗಳು.

ಮುಮ್ಮಾತು
ನನಗೆ ತಮಾಷೆಯೆನಿಸುವ ನನ್ನ ಬದುಕಿನ ಹಲವಾರು ವ್ಯಂಗ್ಯಗಳಲ್ಲಿ ಒಂದೆಂದರೆ 1947-51ರ ಕಾಲೇಜು ದಿನಗಳಿಂದ ಹಿಡಿದು ಇವತ್ತಿನ ತನಕ ಕವಿತೆಯ ಹೆಸರಲ್ಲಿ ನನಗೆ ತೋಚಿದ್ದನ್ನು ತೋಚಿದಂತೆ ಗೀಚುತ್ತಾ ಬಂದಿದ್ದು, ಅವುಗಳಲ್ಲಿ ಅನೇಕವು ಆಗಿಂದಾಗ್ಗೆ ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟಗೊಂಡು, ನನ್ನ ಅಂತರಂಗದ ತಜ್ಞ ಮಿತ್ರರಿಗೆ ಒಪ್ಪಿಗೆಯಾಗಿದ್ದರೂ ನನ್ನ ಸರಿಯಾದ ಕವಿತಾ ಸಂಗ್ರಹವೊಂದು ಇದುವರೆಗೂ ಬಂದಿಲ್ಲ....ಇದಕ್ಕೆ ಮುಖ್ಯ ಕಾರಣವೆಂದರೆ ನನ್ನ ಸೋಮಾರಿತನದ ಜೊತೆಗೆ ನನ್ನ ರಚನೆಯ ಬಗ್ಗೆ ನನ್ನೊಳಗಿನ ತೃಪ್ತಿ- ಅತೃಪ್ತಿಗಳ ಹೊಯ್ದಾಟ, ಗೊಂದಲ.
ಈಚೆಗೊಂದು ದಿನ ಇಲ್ಲಿ ಬಂದಿದ್ದ ನನ್ನ ತರುಣ ಕವಿಮಿತ್ರ ಜಯಂತ ಕಾಯ್ಕಿಣಿ, ಅದೇ ಆಗ ಪ್ರಕಟವಾಗಿದ್ದ ನನ್ನ ಒಂದೆರಡು ಕವಿತೆಯನ್ನು ಓದಿ ಮೆಚ್ಚಿದ್ದವನು `ಕಾಕಾ, ನಿಮ್ಮ ಕವಿತೆಗಳನ್ನೆಲ್ಲಾ ನೋಡಬೇಕಾಗಿದೆ, ತೆಗೆಯಿರಿ' ಎಂದು ಹಠ ಹಿಡಿದ ಫಲವಾಗಿ ಕಪಾಟಿನ ಹಳೆಯ ಕಡತಗಳಲ್ಲಿ ಅಡಗಿದ್ದ ನೂರಕ್ಕೂ ಹೆಚ್ಚು ಕವಿತೆಗಳು ಹೊರಬಂದವು. ಅದರಲ್ಲಿ ನಲವತ್ತೆಂಟನ್ನು ಆರಿಸಿ ಈ ಸಂಗ್ರಹಕ್ಕೆ ಕೊಟ್ಟಿದೆ. ಈ ಆಯ್ಕೆಯಲ್ಲಿ ಸಮಪಾಲು ಕೀರ್ತಿ ಜಯಂತನಿಗೆ ಸಲ್ಲುತ್ತದೆ.
ಈಚಿನ ವರ್ಷಗಳಲ್ಲಿ ಕಾವ್ಯಕರ್ಮದ ಬಗ್ಗೆ ಕೆಲವು ವಿಶಿಷ್ಟ ಧೋರಣೆಗಳು ನನ್ನ ಕವಿತಾರಚನೆಯನ್ನು ನಿಯಂತ್ರಿಸಿವೆ. ಇಂದಿನ ಕನ್ನಡ ಕಾವ್ಯ ಇತ್ತ ವಸ್ತು- ವಿಷಯ, ಅತ್ತ ತಂತ್ರ- ಅಭಿವ್ಯಕ್ತಿ-ಎರಡರಲ್ಲೂ ಅತಿಯಾದ ಗಂಭೀರದೃಷ್ಟಿ ತಾಳಿ, ಏಕಮುಖವಾಗಿ ಸಾಗಿದೆ. ಕೆಲವು ಅಪವಾದದ ಹೊರತು, ಇದರಲ್ಲಿ ಹೆಚ್ಚಾಗಿ ಕಾಣುವುದು: ಆತ್ಮ ನಿರತರ ಒಳತುರಿಕೆ, ದಲಿತರ ದ್ವೇಷ- ಕ್ರೋಧ, ಸ್ತ್ರೀವಾದಿಗಳ ಸಿಟ್ಟು- ರೋದನ, ಹಸಿ- ಹುಸಿ ಮಾನವೀಯ ಕಾಳಜಿಗಳು, ಇಂದಿನ ಸಮಸ್ಯೆಗಳಿಗೆ ನಿನ್ನೆಯ ಇತಿಹಾಸ, ಪುರಾಣ, ಜಾನಪದಗಳಲ್ಲಿ ಉತ್ತರ ಹುಡುಕುವ ಪ್ರಯತ್ನ, ಇಂಥಹವೇ.
ಕವಿತೆ ಒಟ್ಟು ಬದುಕಿನ ಪ್ರತಿಧ್ವನಿ ಎನ್ನುವುದಾದರೆ ಬದುಕಿನಲ್ಲಿ ಸಲ್ಲುವುದೆಲ್ಲವೂ ಕವಿತೆಯಲ್ಲೂ ಸಲ್ಲಬೇಕು. ಗಂಭೀರ ವಿಷಯಗಳ ಜೊತೆಗೆ ಮೇಲ್ಮೈಗೆ ಸಾಧಾರಣ, ಅಲ್ಪ, ಕ್ಷೆಲ್ಲಕ ಎಂದು ಅನಿಸುವುದು ಸಹ, ಅದು ಬದುಕಿಗೆ ಸಂಗತವಾದರೆ, ಕಲ್ಪನಾಶೀಲನಾದ ಕವಿಯ ಕೈಯಲ್ಲಿ ಕವಿತೆಯಾಗಿ ಮಾರ್ಪಟ್ಟು ಓದುಗನಿಗೆ ಖುಷಿ ಕೊಡುವಂತಾಗಬೇಕು. `ಕವಿಜೀವದ ಬ್ಯಾಸರ ಹರಿಸಾಕ...ಹೂತ ಹುಣಸಿ ಮರ ಸಾಕ' ಎಂದು ಬೇಂದ್ರೆ ಅಂದದ್ದು ಇದೇ ಅರ್ಥದಲ್ಲೇನೋ!
indian-womanಅಭಿವ್ಯಕ್ತಿಯ ವಿಷಯದಲ್ಲಿ ಕೂಡ ನಾವಿನ್ನೂ ಪೂರ್ಣ ಮುಕ್ತರಾಗಿಲ್ಲ. ಇವತ್ತಿಗೂ ನಮ್ಮ ಹೆಚ್ಚಿನ ಕವಿತೆಗಳು ಹಿಂದಿನ ನವೋದಯ ಅಥವ ನವ್ಯ ಕಾಲದ, ಇಲ್ಲವೇ ಇಂಗ್ಲಿಷ್‌ ಕಾವ್ಯಪರಂಪರೆಯಿಂದ ಎರವಲು ತಂದ ಎರಕದಲ್ಲೇ ತೊಳಲುತ್ತಿವೆ. ಕೆಲವು ಕವಿಗಳಲ್ಲಿ ಕವಿತೆ ಒಗಟಾಗಿಯೇ ಉಳಿದು, ಕವಿಗಳೇ ಕವಿಗಳನ್ನು `ಈ ನಿಮ್ಮ ಪದ್ಯದ ಅಥವೇನು?' ಎಂದು ಕೇಳುವಂತಾಗಿದೆ. ಈ ಕಾರಣಗಳಿಂದಾಗಿ ಕನ್ನಡ ಕವಿತೆಗೆ ಓದುಗರು ಕಡಿಮೆಯಾಗಿ, ಅದು ಆತ್ಮಹತ್ಯೆಯ ದಾರಿ ಹಿಡಿದಿದೆ ಎಂದು ನನಗನಿಸುತ್ತದೆ.
ವಿಷಯ, ವಸ್ತುಗಳಲ್ಲಿ ಹೊಸ ಹೊಸದನ್ನು ಅರಸುವುದು, ಅಭಿವ್ಯಕ್ತಿಯಲ್ಲಿ ಹೊಸ ಧ್ವನಿ, ವರ್ಣ, ಲಯಗಳನ್ನು ಆಕರಿಸಿಕೊಂಡು (ಉದಾ. ಅಲಂಕಾರ ತೊರೆದ ತೀರ ಸರಳ ಮಾತುಗಳಲ್ಲಿ ಕವಿತೆಗಳನ್ನು ಹೊರಡಿಸುವುದು, ಗಂಭೀರ ವಿಷಯವನ್ನು ಸಹ ಹಗುರವಾಗಿ ಹೇಳಿಓದುಗರ ಮನಮುಟ್ಟಿಸುವುದು), ಹತ್ತು ಮಂದಿಯ ಮುಂದೆ ಓದಲು ಬರುವಂತೆ ಅದರ ನಡೆ ನುಡಿಗಳಲ್ಲಿ ಅಭಿನಯಶೀಲತೆ ತರುವುದು ನನ್ನ ಪ್ರಯತ್ನ. ಈ ಸಂಕಲನದ, ಹೆಚ್ಚಾಗಿ ಈಚಿನ, ಕವಿತೆಗಳಲ್ಲಿ ಅದರ ಸುಳಿವು ಕಂಡೀತು.
ಶಾ ಬಾಲುರಾವ್‌
ಡಿಸೆಂಬರ್‌, 1997
***
ನಮ್ಮಂಗಳದ ಬಾವಿಗಳು

ಬಿದ್ದು ಸಾಯಲು
ನೀರಿರುವ ಬಾವಿಗಳೇ
ಆಗಬೇಕೆಂದೇನಿಲ್ಲ.

ಹಾಗೆ ನೋಡಿದರೆ
ನೀರಿಲ್ಲದ ಬಾವಿಗಳಲ್ಲಿ
ಬಿದ್ದು ಸಾಯುವವರೇ ಹೆಚ್ಚು.

ನನ್ನ ಕಾಲದಲ್ಲಿ
ಅನೇಕ ಹುಡುಗಿಯರು
ತಮ್ಮ ಮನೆಯ ನಾಲ್ಕು ಗೋಡೆಗಳೊಳಗೆ

ಉಟ್ಟ ಸೀರೆಯ ತಲೆಮುಸುಕಿನಲ್ಲಿ
ತೊಟ್ಟ ಬುರ್ಖಾದೊಳಗೆ
ಹೀಗೆ ಅಪ್ಪ ಗಂಡಂದಿರು ತೋಡಿಟ್ಟ ಬಾವಿಗಳಲ್ಲಿ

ಸತ್ತೂ ಸಾಯದೆಯೇ
ಸಾಯದೆಯೇ ಸತ್ತದ್ದನ್ನು
ನಾನು ಕಂಡಿದ್ದೇನೆ!
***
ಕವಿಯೆಂದು ಕರೆದುಕೊಳ್ಳುವುದು

ನಾನು ಬರೆದದ್ದರಲ್ಲಿ
ಉಳಿದೆಲ್ಲಕ್ಕಿಂತ
ಕವಿತೆಗಳೇ ಹೆಚ್ಚು.

ಆದರೂ ನನ್ನನ್ನು ನಾನು
ಎಂದೂ `ಕವಿ' ಎಂದು
ಕರೆದುಕೊಳ್ಳುವುದಿಲ್ಲ.

ಇದು ತಪ್ಪೆಲ್ಲವೆನ್ನುವುದಕ್ಕೆ-
ಮೊನ್ನೆ ನಡುದಾರಿಯಲ್ಲೊಬ್ಬ ಗಂಡಸು
ಉಟ್ಟ ಬಟ್ಟೆ ಕಳಚಿ

`ನಾನು ಗಂಡಸು' `ನಾನು ಗಂಡಸು'
ಎಂದು ಅರಚುತ್ತಿದ್ದುದನ್ನು ಕಂಡು
ಜನ ನಕ್ಕಿದ್ದನ್ನು ನಾನು ಕಂಡಿದ್ದೇನೆ.
***
ಅರೆ ಇಲ್ಲಿ ನೋಡಿದ್ರ ಪೇಪರ್ನಲ್ಲಿ

`ಅರೆ ಇಲ್ಲಿ ನೋಡಿದ್ರ ಪೇಪರ್ನಲ್ಲಿ'
`ಅದೇನು ವಿಶೇಷ, ಓದ್ರಿ'

`ಭಾಗಲಪುರದ ಜೈಲಿನಲ್ಲಿ
ಖೈದಿಗಳ ಕಣ್ಣು ಕುಕ್ಕಿದಾರಂತೆ!'
`ಕಡೇಪುಟದಲ್ಲಿ ಕಣ್ಣು ಕುಕ್ತೀರೋ
ಆ ಫೋಟೋ ಅದು ಯಾವೋಳದ್ರಿ?'

`ಮೈನ್‌ಪುರೀಲಿ ಹರಿಜನರನ್ನ
ಜೀವ ಸಹಿತ ಸುಟ್ಟರಂತೆ!'
`ಮಂಡ್ಯ ಜಿಲ್ಲಾ ದಲಿತ ಸಮ್ಮೇಳನಕ್ಕೆ
ಅಧ್ಯಕ್ಷರು ಯಾರು ಗೊತ್ತಾಯ್ತು?'

`ಗುಲ್ಬರ್ಗದಲ್ಲಿ ಎಲ್ಲೆಲ್ಲೂ
ಮಳೆ ಇಲ್ಲದೆ ಬರ ಅಂತೆ!'
`ಮುಂದಿನ ಡಿ. ಎ. ಯಾವಾಗಂತೆ,
ಸುದ್ದಿ ಇದೆಯಾ ನೋಡಿ'.

`ಜಿನಿಂಗ್‌ ಮಿಲ್‌ನ ಕಾರ್ಮಿಕರಿಗೆ
ಎಂಟು ತಿಂಗಳಿಂದ ಸಂಬಳವಿಲ್ಲ!'
`ಎಲಿಜಬೆತ್‌ ಟೇಲರ್‌ದು
ಎಂಟನೇ ಮದುವೆ ಯಾವಾಗಂತೋ?'

`ಗುಂಡೂರಾಯ ಬಚಾವಾದ
ಅವನ ಅದೃಷ್ಟವೋ ಅದೃಷ್ಟ!'
`ಈವೊತ್ತಿನ ಅದೃಷ್ಟಸಂಖ್ಯೆ
ಎಷ್ಟೂ ಅಂತ ಕೊಟ್ಟಿದಾನೆ'.

`ಇದೇನು ಬಡ್ಜೆಟ್ಟಿಗೆ ಮೊದಲೇ
ಕರ ಏರಿಸಿದ್ದಾರಂತಲ್ಲ!'
`ಕಳ್ಳ ನನ್ಮಕ್ಕಳು, ಇನ್ನು ಮೇಲೆ
ಬೀರ್‌ ಬೆಲೆ ಎಷ್ಟಾಗುತ್ತೋ?'

`ಅಯ್ಯೋ ಗೊಂದಲೂರಿನ ಗೋಲಿಬಾರ್‌ನಲ್ಲಿ
ಗುಂಡಿಗೆ ಜನ ಬಲಿಯಾದರಂತೆ!'
`ಗುಂಡು' ಎಂದರೆ ಜ್ಞಾಪಕಕ್ಕೆ ಬಂತು,
ನಿನ್ನೆ `ವೆಸ್ಟೆಂಡ್‌' ಅಲ್ಲಿ ಎಂಥ ಪಾರ್ಟಿ ಅಂತೀರ'.

`ಇವೊತ್ತು ಸಂಜೆ ಸ್ಟೇಡಿಯಂನಲ್ಲಿ
ವಿರೋಧ ಸಭೆ ಇದೆಯಂತಲ್ಲ!'
`ಹೌದೌದು ಹೋಗ್ಬೇಕು, ಶಾಂತಿ ಟಾಕೀಸಲ್ಲಿ
ಫಿಲ್ಮ್‌ ಯಾವದು, ಸ್ವಲ್ಪ ನೋಡಿ'.

`ಸಂಪಾದಕೀಯ-`ಹೊಟ್ಟೆಗೆ ಹಿಟ್ಟಿಲ್ಲ,
ಜುಟ್ಟಿಗೆ ಮಲ್ಲಿಗೆ ಹೂವು'.
`ಹೊಟ್ಟೆ ಹಸಿವು. ಇಷ್ಟು ಹೊತ್ತಾದರೂ
ಸರ್ವರ್‌ ಯಾರೂ ಬರಲಿಲ್ಲವೇ.'

`ಯಾರ್ರೀ ಇಲ್ಲಿ, ಈ ಟೇಬಲ್ಲಿಗೆ?'
`ಬಿಸಿ ಬಿಸಿ ಏನಿದೇರ್ರಿ?'

4 comments:

  1. kavanagala aayke chennagide. intha kavigalannu aagaaga oodisuttiri

    Rajashekhar Hegde

    ReplyDelete
  2. chennagide...kanri!!keep it going

    -Puneeth
    [www.haagesummane.wordpress.com]

    ReplyDelete
  3. ಹಾಯ್,

    ಪ್ರತಿ ವರ್ಷದ ಹಾಗೆ ಅಮ್ಮನ ಹುಟ್ಟು ಹಬ್ಬದ ಅಂಗವಾಗಿ ಮಾತೃ ಉತ್ಸವ ಮಾರ್ಚ್ ತಿಂಗಳ ಎರಡನೇ ಭಾನುವಾರ ಅಂದರೆ ಎಂಟನೇ ತಾರೀಖಿನಂದು ನಡೆಸಲಿದ್ದೇವೆ. ಅಂದವಾದ ಅಮ್ಮನಿಗೆ ಸಂಬಂಧಿಸಿದ ಒಳ್ಳೆಯ ಸೂಕ್ತಿಗಳು/ಕವನದ ಸಾಲುಗಳು/ quotations ಇದ್ದರೆ ಬೇಕು. ನಿಮ್ಮಲ್ಲಿದ್ದರೆ ಫೆಬ್ರವರಿ ಎರಡನೇ ತಾರೀಖಿನೊಳಗೆ ನನಗೆ ಕಳುಹಿಸುವಿರಾ ? ಬರೆದವರ ಹೆಸರೂ ಇದ್ದರೆ ಅನುಕೂಲ.

    ಧನ್ಯವಾದಗಳು,

    ಶಮ, ನಂದಿಬೆಟ್ಟ
    http://minchulli.wordpress.com

    ಅಂದ ಹಾಗೆ, ಆಹ್ವಾನ ಕಳುಹಿಸುವೆ ... ತಪ್ಪದೆ ಬನ್ನಿ

    ReplyDelete
  4. surya ivanobbane' sankalanavannu sumaru 5-6 varshada hinde odidde. ivattigu nenapu ulisikondiruvantha sangraha adu. avara ulida kavana parichayisiddu odi khushiyaytu

    ReplyDelete