`ಮೂರು ವರ್ಗ'ಗಳಾಗಿ ಹೀಗೆ ನಾವು ಸಾವನ್ನು ವಿಂಗಡಿಸಿ ನೋಡುತ್ತಿದ್ದರೂ ಮುಂಬಯಿಯಲ್ಲಿ ಎರಡೂವರೆ ದಿನಗಳ ಕಾಲ ನಡೆದ ಭಯೋತ್ಪಾದಕ ಕೃತ್ಯದಲ್ಲಿ ಘಟಿಸಿದ ಎಲ್ಲಾ ಸಾವೂ ಒಂದೇ. ನಿಂತಿದ್ದು ಉಸಿರು, ಸ್ತಬವಾಗಿದ್ದು ಎದೆಬಡಿತ, ಚೆಲ್ಲಿದ್ದು ರಕ್ತ, ಮುಚ್ಚಿದ್ದು ಕಣ್ಣು. ಆತಂಕವಾದಿಗಳ ಹತ್ಯೆ ಆ ಕ್ಷಣಕ್ಕೆ ಮಾನ್ಯವಾದರೂ ವ್ಯಕ್ತಿಯನ್ನು ಆವರಿಸಿಕೊಳ್ಳುತ್ತಾ ವ್ಯಾಪಿಸುತ್ತಿರುವ `ಆತಂಕವಾದಿತನ'ದ ಹತ್ಯೆಯಿಂದ ಮಾತ್ರ ಬಹುಶಃ ಎಲ್ಲವೂ ಸರಿಯಾಗಲು ಸಾಧ್ಯ.
ಈವರೆಗೆ ನೂರರೊಳಗೆ ಲೆಕ್ಕಕ್ಕೆ ಸಿಗುತ್ತಿದ್ದ ಭಯೋತ್ಪಾದಕ ಸಾವಿನ ಸಂಖ್ಯೆ ಇದೀಗ ನೂರನ್ನು ದಾಟಿದೆ. ಗಡಿಯಲ್ಲಿ ನಡೆಯುತ್ತಲೇ ಬಂದ ಯುದದ ಸಂಖ್ಯೆಯೂ ಹೀಗೇ ಸಣ್ಣ ಮಟ್ಟದಲ್ಲಿ ಪ್ರಾರಂಭವಾಗಿ ದೊಡ್ಡ ಸಂಖ್ಯೆಯಲ್ಲಿ ಯೋಧರನ್ನು, ಶ್ರೀಸಾಮಾನ್ಯರನ್ನು ಬಲಿ ತೆಗೆದುಕೊಳ್ಳುತ್ತಾ ಸಾಗಿತು. ಈಗ ಅದೂ ಮಾಮೂಲಿ ಸುದ್ದಿಗಳಲ್ಲಿ ಒಂದಾಗಿಬಿಟ್ಟಿದೆ. ಮುಂದೆ ಭಯೋತ್ಪಾದಕ ಕೃತ್ಯವೂ ಸಾರ್ವಜನಿಕರ ಮನಸ್ಸಲ್ಲಿ ಹೀಗೆ ನಿರ್ಭಾವುಕತೆಯನ್ನು ಬಿತ್ತಿಬಿಟ್ಟರೆ ಕಷ್ಟ.
ಈಗ ನಾವಿಡುವ ಹೆಜ್ಜೆ ಎಷ್ಟು ಎಚ್ಚರಿಕೆಯಿಂದ ಕೂಡಿರಬೇಕು ಎನ್ನುವುದು ಬಹಳ ಮುಖ್ಯ. ಯಾಕೆಂದರೆ ಹಿಂದೂ ಸಮುದಾಯದ ಮನಸ್ಸಲ್ಲಿ ಆಳವಾಗಿ (ಒಬ್ಬರಿಗೂ ತಮ್ಮ ಅರಿವಿಗೇ ಬಾರದಂತೆ) ಬೇರೂರಿರುವುದು ಮುಸ್ಲಿಂ ದ್ವೇಷ. ಹೀಗಾದರೆ ಶ್ರೀಸಾಮಾನ್ಯನಾಗಿ, ಇದಾವುದರ ಪರಿವೆ, ಹರಕತ್ತು ಇಲ್ಲದಂತೆ ಬದುಕುತ್ತಿರುವ ಅಸಂಖ್ಯ ಭಾರತೀಯ ಮುಸ್ಲಿಂ ಸಮುದಾಯ ಎಲ್ಲಿಗೆ ಹೋಗಬೇಕು? ನಮ್ಮ ನಿಮ್ಮ ಗೆಳಯ ಮುಸ್ಲಿಂ ಆಗಿದ್ದಾನೆ, ನಮ್ಮ ಅಕ್ಕ ಪಕ್ಕ ಅಂಥ ಅನೇಕ ನಿರುಪದ್ರವಿ ಮುಸ್ಲಿಂ ಕುಟುಂಬಗಳಿವೆ. ಭಯೋತ್ಪಾದಕ ಕೃತ್ಯ ಎಂದರೆ ಅದು ಮುಸ್ಲಿಂ ಸಮುದಾಯದ ಕೃತ್ಯ ಎಂದೇ `ಪ್ರತಿಪಾದನೆ' ಆಗಿಬಿಟ್ಟರೆ ಅದಕ್ಕಿಂತ ದೊಡ್ಡ `ಭಾವನಾತ್ಮಕ ಭಯೋತ್ಪಾದನೆ' ಇನ್ನೊಂದಿಲ್ಲ. ಅದನ್ನು ಬಹಳ ಸೂಕ್ಷ್ಮವಾಗಿ, ಹುಷಾರಾಗಿ ಹೋಗಲಾಡಿಸದೇ ಹೋದರೆ ಸ್ವಸ್ಥ ಸಮಾಜವೊಂದಕ್ಕೆ ದೊಡ್ಡ ಗಂಡಾಂತರ ಕಾದಿದೆ.
ಈ ನಡುವೆ ಮಾಧ್ಯಮಕ್ಕೂ ಕೂಡ ಜವಾಬ್ದಾರಿಯ ಅರಿವು ಇನ್ನಷ್ಟು ಹೆಚ್ಚಾಗಬೇಕು. ಹಿಂಸಾಚಾರ ಸುದ್ದಿಯ ಒಂದು ಸರಕಾಗುವುದು `ಭಯೋತ್ದಾದಕತೆ'ಗಿಂತ ದೊಡ್ಡ ದುರಂತ. ಒಂದು ಘಟನೆಯ ವರದಿ ಮಾಡುವ ಉತ್ಸಾಹದ ಮಧ್ಯೆಯೂ ಸುದ್ದಿಯನ್ನು ಸೋಸಿ, ಒಂದು ಸಮಾಜದ ಆರೋಗ್ಯಕ್ಕೆ ಯಾವುದನ್ನು ಹೇಳಿದರೆ ಹೆಚ್ಚು ಸರಿ ಎಂಬುದನ್ನು ಹೆಜ್ಜೆ ಹೆಜ್ಜೆಗೂ ಆಲೋಚಿಸಿ ವರದಿಯನ್ನು ನೀಡಬೇಕು. `ಫ್ಲಾಷ್ ನ್ಯೂಸ್' (ಸುದಿ ಸೋಟ) ಎನ್ನುವುದು `ಬ್ಲಾಸ್ಟ್ ನ್ಯೂಸ್' ಆಗದಿದ್ದರೆ ಸಾಕು. ಸುದ್ದಿಯ ಹೇಳಿಕೆಯಲ್ಲಿ ರಂಜಕತೆಯನ್ನು ತೋರದೇ, ಸುದ್ದಿಯ ನಡುವೆಯೂ ಭಾವುಕತೆಯನ್ನು ಮರೆಯದೇ ಒಬ್ಬ ವರದಿಗಾರ ವ್ಯವಹರಿಸಬೇಕು. ಮಾಧ್ಯಮದ ಕಡೆಯಿಂದ ಸತ್ತ ಅಮಾಯಕರಿಗೆ ಸಲ್ಲಿಸಬಹುದಾದ ಅತಿ ಉತ್ತಮ ಶ್ರದಾಂಜಲಿ ಬಹುಶಃ ಇದೇ ಆಗಿದ್ದೀತು.
ಕಳೆದ ಮೂರು ದಿನಗಳಿಂದ ನಡೆದ ಮುಂಬಯಿ ಹಿಂಸಾಚಾರ ಒಂದು ಭಯೋತ್ಪಾದಕ ಕೃತ್ಯದ ಹಿಂಸೆಯ ವಿರಾಟ್‌ದರ್ಶನವನ್ನು ಇಡೀ ರಾಷ್ಟ್ರಕ್ಕೆ ರವಾನಿಸಿದೆ ಎಂದರೆ ಆ ಹೇಳಿಕೆ ಅಮಾನವೀಯವಾಗಿ ಕೇಳಬಹುದು. ಆದರೆ ಈ ಅಸೀಮ ಹಿಂಸೆ ಒಬ್ಬ ಭಯೋತ್ಪಾದಕನ ಮನಸ್ಸಲ್ಲೂ ವೇದನೆಯನ್ನು, ಕಳವಳವನ್ನು ತರಲಿ. ಒಬ್ಬ ಹಿಂಸಾಚಾರಿಗೇ ಆ ಹಿಂಸೆ ದುಃಖವನ್ನು ತರುವ ದಿನ ಬಂದರೆ ಜಗತ್ತು ಶಾಂತವಾದೀತು. ಕಂಠ ಬಿಗಿದು, ಸೆರೆಯುಬ್ಬಿ, ಕಣ್ಣುಗಳಲ್ಲಿ ನೀರುದುಂಬಿಕೊಂಡವರ ಅಳು ಅಲ್ಲೇ ನಿಲ್ಲಬಹುದು. ಬೋರ್ಗರೆವ ಎದೆಯ ಕಡಲು ಉಬ್ಬರ ಇಳಿಸಿಕೊಂಡು ನಿಶ್ಚಿಂತವಾಗಬಹುದು.