Friday, October 31, 2008

speak everyday KANNADA!

ಟೀವಿ, ಎಫೆಮ್‌, ಇಂಟರ್‌ನೆಟ್‌, ಬ್ಲೂಟೂತ್‌, ಐಪಾಡ್‌, ಎಂಪಿಥ್ರೀ, ಕ್ಯಾಬ್‌, ಐಟಿ ಫರ್ಮ್‌0ಗಳ ಸಂತೆಯೊಳಗೆ ಒಂದು ಇನ್ನೊಮ್ಮೆ ಕನ್ನಡ ರಾಜ್ಯೋತ್ಸವ ಆಗಮಿಸಿದೆ. `ರಾಜ್ಯೋತ್ಸವಕ್ಕೆ ನಾವೊಂದು ಕಾಂಟೆಸ್ಟ್‌ ಮಾಡಿದ್ದೇವೆ. ನಿನೀವು ವಿನ್‌ ಆದರೆ ಲಾಟ್ಸ್‌ ಆಫ್‌ ಪ್ರೈಸಸ್‌ ಇದೆ. ಪಾರ್ಟಿಸಿಪೇಟ್‌ ಮಾಡಿ' ಎಂಬಂಥ ಭಾಷಾಪ್ರಪಂಚದಲ್ಲಿ ನಾವು ಅನಿವಾರ್ಯವಾಗಿ ರಾಜ್ಯೋತ್ಸವ ಆಚರಿಸಬೇಕು.
ಇದರ ಜವಾಬ್ದಾರಿಯನ್ನು ನಾವು ನೀವು ಜಾಗತೀಕರಣದ ಮೇಲೆ ಹಾಕಿ ಕುಳಿತುಕೊಳ್ಳಬಹುದು. ಆದರೆ ನಮ್ಮಲ್ಲಿ ಪ್ರತಿಯೊಬ್ಬರೂ ಇದರಲ್ಲಿ ಜವಾಬ್ದಾರರು. ಕನ್ನಡದವರೇ ಅಂಗಡಿಗಳ ಮಾಲೀಕರಾದರೂ ಬಂದ ಗಿರಾಕಿಗಳ ಜೊತೆ ಅವರದೇ ಭಾಷೆಯಲ್ಲಿ ವ್ಯವಹರಿಸಿ, ಕನ್ನಡವನ್ನು `ವ್ಯವಹಾರ ಭಾಷೆ'ಯಾಗಿ ಮಾಡದೇ ಹೋದವರು ನಾವು. ಹಾಗಿರುವಾಗ ಕನ್ನಡವನ್ನು ವ್ಯವಹಾರ ಭಾಷೆಯಾಗಿಸುವಂತೆ ಸರ್ಕಾರ ಕಾಯ್ದೆ ಕಾನೂನು ತರಲಿ ಎಂದು ಹ್ಯಾಗಾದರೂ ಅಪೇಕ್ಷಿಸುವುದು?

Wednesday, October 29, 2008

ನೀ ಬಂದು ನಿಂದಿಲ್ಲಿ ಪಟಾಕಿ ಹಚ್ಚಾ!

ದೀಪಾವಳಿ ಮುಗಿದಿದೆ. ಆದರೆ ಆಗಸದಲ್ಲಿ ಪಟಾಕಿ, ರಾಕೇಟು, ಮೂಡೆಗಳ ಸಿಡಿತ ಬಡಿತ. ಎಲ್ಲರ ಕಣ್ಣಲ್ಲೂ ಮಿಂಚು, ಕಿವಿಯಲ್ಲಿ ಗುಡುಗು, ಪಟಾಕಿ ಹೊಡೆದು ಕಣ್ಣು ಗಾಯ ಮಾಡಿಕೊಂಡವರ ಸಂಸಾರಕ್ಕೆ ಸಿಡಿಲು. ಮೋಡದ ಮಧ್ಯೆ ಪಟಾಕಿ ಹೊಗೆಯೂ ಮುಗಿಲಾಗಿ ತೇಲುತಿದೆ...
ಪಟಾಕಿ ಇದೀಗ ಸಂತಸವೂ ವಿಘ್ನ ಸಂತಸವೂ ಪರಪೀಡನಾ ತಂತ್ರವೂ ಆಗುತ್ತಾ ಹೋಗುತ್ತಿದೆ. ದೀಪಾವಳಿ ಹಬ್ಬವೆಂದರೆ ಪಟಾಕಿ ಮಾತ್ರ ಆಗಿ, ಪಟಾಕಿ ಹೊಡೆಯುವುದೆಂದರೆ ಸಿಡಿಸುವುದರಲ್ಲಷ್ಟೇ ಖುಷಿಪಡುವ, ಸದ್ದುಗಳಲ್ಲೇ ಉನ್ಮಾದಗೊಳ್ಳುವ ಮನುಜ ಕುಲವಾಗಿ ಇವತ್ತು ಎಲ್ಲರೂ ಬದಲಾಗುತ್ತಿದ್ದಾರೆ. ಪಟಾಕಿ ಬಗ್ಗೆ ಜಯಂತ್‌ ಕಾಯ್ಕಿಣಿ ಅವರು `ಹಾಲಿನ ಮೀಸೆ' ಕತೆಯಲ್ಲಿ ಬರೆದ ಒಂದು ವಿವರ ಮತ್ತು ಪಟಾಕಿ ಸಿಡಿತದ ಒಂದೆರಡು ಅಮಾನವೀಯ ಘಟನೆಗಳನ್ನು ಇಲ್ಲಿ ನೀಡಲಾಗುತ್ತಿದೆ.
ಸ್ಟಾಕ್‌ ಉಳಿದಿದೆ ಎಂದು ನೀವ್ಯಾರಾದರೂ ಪಟಾಕಿ ಹಿಡಿದುಕೊಂಡು, ಗೇಟ್‌ ಎದುರು ನಿಂತು, ರಸ್ತೆ ಮೇಲೆ ಪಟಾಕಿ ಇಟ್ಟು, ಬೆಂಕಿ ಹತ್ತಿಸಿದರೆ ಈ ಘಟನೆಗಳು ನೆನಪಾಗಲಿ, ರಸ್ತೆಯಲ್ಲಿ ಹೋಗುತ್ತಿರುವವರು ದಾಟಿ ಹೋದ ಮೇಲೆ ನಿಮ್ಮ ಪಟಾಕಿಗೆ ಬೆಂಕಿ ತಗುಲಲಿ.

Saturday, October 25, 2008

ನೀ ಬಂದು ನಿಂದಿಲ್ಲಿ ದೀಪ ಹಚ್ಚಾ

ದೀಪಗಳು ಕಕ್ಕಾಬಿಕ್ಕಿಯಾಗಿವೆ. ಹೋಳಿಗೆಗೆ ಮಾತೇ  ಹೊರಡುತ್ತಿಲ್ಲ. ಪಟಾಕಿಗೆ ಅಕಾಲ ಮಳೆಯಿಂದ ಚಳಿ, ತಂಡಿ. ದೀಪಕ್ಕೆ ವರ್ಷವಿಡೀ ಬೆಳಗುವ ಸೀರಿಯಲ್‌ ಲೈಟ್‌ ಜೊತೆಗೂ, ಹೋಳಿಗೆಗೆ `ಹಳ್ಳಿತಿಂಡಿ'ಯ ಜೊತೆಗೂ, ಪಟಾಕಿಗೆ ಬಾಂಬ್‌ಗಳ ಜೊತೆಗೂ ಸ್ಪರ್ಧೆ ಮತ್ತು ಆ ಸ್ಪರ್ಧೆಯಲ್ಲಿ ಸೋಲು.
ಹಣತೆಗೆ ಬತ್ತಿ ಹೊಸೆಯುತ್ತಿದ್ದ ಅಜ್ಜಿ ತೀರಿಕೊಂಡಿದ್ದಾರೆ, ಅಮ್ಮನಿಗೆ ಕೊಂಚವೂ ಕುಳಿತುಕೊಳ್ಳಲಾಗುತ್ತಿಲ್ಲ, ಬತ್ತಿ ಹೊಸೆಯಲು. ಕಾರಣ: ಕಾಲುನೋವು. ದೀಪಕ್ಕೆ ಕೊಬ್ಬರಿ ಎಣ್ಣೆ ಹಾಕುತ್ತಾರಾ, ಒಳ್ಳೆಣ್ಣೆಯಾ- ಈಗಿನ ಸೊಸೆಯರಿಗೆ ಕನ್‌ಫ್ಯೂಸ್‌. `ವಾಟ್ಸ್‌ ದಿ ಆಯಿಲ್‌ ಯಾರ್‌'. ಎಣ್ಣೆ ಎರೆದು ತಲೆ ಮೀಸಲು ಮೊಮ್ಮಗ ಕುಳಿತುಕೊಳ್ಳುತ್ತಿಲ್ಲ, ಮಗನಿಗೆ ಪ್ರಾಜೆಕ್ಟ್‌ ಕೆಲಸ ಇನ್ನೂ ಮುಗಿದಿಲ್ಲ. ಸೊಸೆಗೆ ಇಂಪಾರ್ಟೆಂಟ್‌ ಮೀಟಿಂಗ್‌ ಇದೆ.
ಪ್ರತಿ ದೀಪಾವಳಿಗೆ ದೇಶದಲ್ಲಿ ಏನೋ ಆಗುತ್ತದೆ. ಈ ಸಲ ಬಾಂಬ್‌ ಹೊಟ್ಟುತ್ತಿರುವ ಸುದ್ದಿ, ಕರ್ನಾಟಕವೇ ಬಾಂಬ್‌ ತಯಾರಿ ಕಾರ್ಖಾನೆಯಾಗುತ್ತಿರುವ ಸುದ್ದಿ. ಬಾಂಬ್‌ ಹೊಟ್ಟಿಸುವ ಕೆಲಸ ಮಾಡುವವರಿಗೆ ಪಟಾಕಿ ಹೊಡೆಯಲು ಟೈಂ ಇಲ್ಲ, ಸುರ್‌ಸುರ್‌ ಬತ್ತಿಯಂಥ ನಿರುಪದ್ರವಿ ಬೆಳಕು, ಹಣತೆಯೆಂಬ `ತಮಸೋಮಾ ಜೋತಿರ್ಗಮಯ' ನೆನಪು, ಹೂರಣ ಹೋಳಿಗೆಯೆಂಬ ಸಿಹಿ ಹಾರೈಸುವ ತಿನಿಸು... ಯಾರಿಗೂ ಬೇಡ. ಈ ನಡುವೆ ಮತಾಂತರ ಚರ್ಚೆಯೂ ಕರ್ನಾಟಕದಲ್ಲಿ ಸೇರಿಕೊಂಡಿದೆ.

ಶುಭಾಶಯಗಳು (ಕವಿತೆ)

ದೀಪಾವಳಿ ಹಬ್ಬ ಬಂದಿದೆ. ಎಲ್ಲೆಡೆಯೂ ಪಟಾಕಿ, ಆಕಾಶಬುಟ್ಟಿ, ಹಣತೆ, ಸೊಡರುಗಳ ಉತ್ಸವ. ಇತ್ತೀಚೆಗೆ ತಾನೇ `ತರಂಗ' ವಾರಪತ್ರಿಕೆಯಲ್ಲಿ ಪ್ರಕಟವಾದ `ಶುಭಾಶಯಗಳು' ಕವಿತೆಯನ್ನು ಈ ದೀಪಾವಳಿಗೆ ಉಡುಗೊರೆಯಾಗಿ ನೀಡಲಾಗುತ್ತಿದೆ. ಓದಿ.

ಪವರ್‌ಕಟ್‌ನ ನಂತರ
ಬೆಳಗಿದ ಬಲ್ಬೇ,
ಹೊತ್ತಿಕೊಂಡ ಸ್ಟೆಬಿಲೈಜರ್‌ ದೀಪವೇ
ಕರೆಂಟ್‌ ಹೋದ ಕೂಡಲೇ
ಆರಿಸಬಾರದಿತ್ತೇ
ಎಂದು ಬೈಸಿಕೊಳ್ಳುತ್ತಾ
ಪಕ್ಕನೆ ಬೆಳಕಾದ ಟೀವಿ ಪರದೆಯೇ,
ಅಡುಗೆ ಮನೆಯ
ಎಲೆಕ್ಟ್ರಿಕ್‌ ಒಲೆಯೇ,
ಕೋಣೆಯೊಳಗಿನ ಕಂಪ್ಯೂಟರ್ರೇ...

ನಿನ್ನ ದೀಪಾವಳಿಗೆ ನನ್ನ ಶುಭಾಶಯಗಳು

Monday, October 20, 2008

ಅಮ್ಮನಿಗೆ ಮಗು ತಾಯಿ, ಶಿಶುವೆ ಅಮ್ಮನ ಕಾಯಿ!

ಅಮ್ಮ ಯಾವತ್ತೂ ಬದಲಿಗೆ ರಲಾಗದ ಪದ, ಭಾವ, ಸಂಗ. ಅಮ್ಮನ ಬಗ್ಗೆ ಬರೆದರೆ ಎಲ್ಲರಿಗೂ ಅವರಮ್ಮ, ಅಮ್ಮನ ಥರ ಕಂಒಂದಿಷ್ಟು ಸಂಬಂಧಗಳು, ಅಮ್ಮನಂತೆ ಕಾಯ್ದ ಗೆಳೆಯ/ಗೆಳತಿ ನೆನಪಾಗುತ್ತಾರೆ. ಈ ಈ `ಕಳ್ಳಕುಳ್ಳ'ರ ಬ್ಲಾಗಂಗಡಿಯಲ್ಲಿ ಇತ್ತೀಚಿಗೆ ಅಮ್ಮ ಅಮ್ಮ ಎಂಬ ಕಳ್ಳು ಸಂಬಂಧದ ಬಗ್ಗೆ ಬರೆದ ಕವಿತೆಗೆ ಬಂದ ಪ್ರತಿಕ್ರಿಯೆ ಅಭೂತಪೂರ್ವ. ಅನೇಕರು ಕಣ್ಣೀರಿಟ್ಟ ಪ್ರಸಂಗವನ್ನೂ ವಿವರಿಸಿದ್ದಾರೆ. ಪ್ರತಿಕ್ರಿತಿಸಿ, ಅಮ್ಮನ ಕವಿತೆಗೆ ಕೃತಜ್ಞರಾಗಿದ್ದಾರೆ.
ಧನ್ಯವಾದಗಳು.
ಇದೀಗ ಅಮ್ಮನ ಬದುಕು, ಬವಣೆಗಳ ಹಿನ್ನೆಲೆಯಲ್ಲಿ
ಸಾಗುವ ಒಂದು ಕತೆಯನ್ನು ಇಲ್ಲಿ ಪ್ರಕಟಿಸಲಾಗುತ್ತಿದೆ. `ಉದಯವಾಣಿ'ಯಲ್ಲೇ ಪ್ರಕಟಣೆ ಕಂಡ ಈ ಕತೆ ಹಿಂದೊಮ್ಮೆ `ಪಿಚ್ಚರ್‌' ಬ್ಲಾಗ್‌ನಲ್ಲೂ ಪ್ರಕಟವಾಗಿತ್ತು. ಇದೀಗ `ಕಳ್ಳಕುಳ್ಳ' ಬ್ಲಾಗ್‌ನಲ್ಲಿ ಆ ಕತೆಯ ಮರು ಪ್ರಸಾರ.
ಓದಿ, ಪ್ರತಿಕ್ರಿಯಿಸಿ. ಅಂದಹಾಗೆ ಕತೆಯ ಹೆಸರು: ಕೆಂಪು ರಕ್ತ ಕಣಗಳು.

ಕೆಂಪು ರಕ್ತ ಕಣಗಳು



ನಗೆ ಅಪ್ಪನನ್ನು ನೋಡಿದ್ದು ನೆನಪಿಲ್ಲ. ಆದರೆ ಬುದ್ಧಿ ತಿಳಿದಾಗಿನಿಂದ ಅವನ ವಿಷಯ ಅಸ್ಪಷ್ಟವಾಗಿ, ಮುಜುಗರ ಹುಟ್ಟಿಸುವ ಅಸ್ತ್ರವಾಗಿ ಪ್ರಸ್ತಾಪವಾಗಿದೆ. ಆಶ್ಚರ್ಯ ಎನ್ನಬೇಕೋ, ದುರಾದೃಷ್ಟ ಎನ್ನಬೇಕೋ, ನನಗೆ ಅಪ್ಪನ ನೆನಪು ಆಗುತ್ತಲೇ ಇಲ್ಲ. ನೆನಪಾಗುವುದಕ್ಕೆ ಏನಾದರೂ  ಘಟನೆಗಳು ನಮ್ಮ ನಡುವೆ ನಡೆದಿರಬೇಕಲ್ಲಾ. ನನಗೆ ತಿಳಿದ ಹಾಗೆ ಅಂಥದ್ದೊಂದೂ ನಡೆಯಲಿಲ್ಲ. ಒಂದು ಸಾರಿ ಅವನ ಮಸುಕು ಮಸುಕಾದ ಮುಖಭಾವ ನನಗೆ ಕಂಡಿತ್ತು. ಅದು ಮನೆಯ ಬೀರುವಿನಲ್ಲಿ. ಆ ಬೀರುವನ್ನು ಒಂದು ದಿನ ಸ್ವಚ್ಛ ಮಾಡುವ ತರಾತುರಿಯಲ್ಲಿ ನಾನಿದ್ದೆ. ಆಗ ಒಂದು ಫೋಟೋ ಕಂಡಿತು. ಗಟ್ಟಿಮುಟ್ಟಾದ ಚೌಕಟ್ಟಿನೊಳಗಿದ್ದ ಫೋಟೋ ಅದು. ಸಾಕಷ್ಟು ದೊಡ್ಡದಾಗಿತ್ತು. ಮಗುಚಿ ಇಡಲಾಗಿತ್ತು. ನಾನು ಪ್ರಯಾಸಪಟ್ಟು ಅದನ್ನು ಮೇಲೆತ್ತಿ, ನನ್ನತ್ತ ತಿರುಗಿಸಿಕೊಂಡೆ. ಅದರಲ್ಲಿ ಅತ್ಯಂತ ಚೆನ್ನಾಗಿ ಕಂಡವಳು ನನ್ನ ಅಮ್ಮ. ಕಿವಿಯಲ್ಲಿ ಅವಳ ಮದುವೆ ಕಾಲಕ್ಕೆ ಫ್ಯಾಷನ್‌ ಆಗಿರಬಹುದಾದ ಲೋಲಾಕು, ಮೂಗಿನಲ್ಲಿ ನತ್ತು, ಕೊರಳಲ್ಲಿ ಎರಡೆಳೆ ಕರಿಮಣಿ. ಬಲ ಭಾಗದಲ್ಲಿ ಬೈತಲೆ ತೆಗೆದ ಅಮ್ಮ ಲಕ್ಷಣವಾಗಿ ಕಾಣುತ್ತಿದ್ದಳು. ಪಕ್ಕದಲ್ಲಿ ಅಪ್ಪ. ಆ ಜಾಗ ನೀರು ಸೋರಿ ಹೋಗಿದ್ದರಿಂದ ಸರಿಯಾಗಿ ಗ್ರಹಿಸಲು ಆಗುತ್ತಿರಲಿಲ್ಲ. ಚಿತ್ರದಲ್ಲಿ ಅಪ್ಪ  ಸ್ಫುರದ್ರೂಪಿಯಾಗಿ ಇದ್ದನಾದರೂ ಅವನ ಮೇಲೆ ಸಿಟ್ಟಿದ್ದರಿಂದ ಸಿನಿಮಾಗಳಲ್ಲಿ ಬರುವ ಚೆಂದ ಮುಖದ ಕ್ರೂರ ಕೇಡಿಯ ಹಾಗೆ ಕಂಡು ಥಟ್ಟನೆ ಮುಚ್ಚಿಟ್ಟೆ. ಆಮೇಲೆ ಬೀರು ಸ್ವಚ್ಛ ಮಾಡಲು ಹೋಗಲಿಲ್ಲ.
ಅಮ್ಮನನ್ನು ನಾನು ನೋಡಿದ್ದು ಬಹುಪಾಲು ಕೆಲಸ ಮಾಡುವಾಗ. ಅವಳಿಗೆ ಕೆಲಸ ಬಿಟ್ಟರೆ ಬೇರೇನೂ ಕಾಣುವುದಿಲ್ಲವೇ ಎಂದು ನಾನು ಯೋಚಿಸಿದ ಹಗಲು ಇರುಳುಗಳು ಬಹಳ. ಆಗೆಲ್ಲಾ ಅವಳ ಮೇಲೆ ಕನಿಕರ, ಪ್ರೀತಿ ಬರುವುದು. ರಾತ್ರಿ ಮಂಚದ ಮೇಲೆ ಕುಳಿತು ಇಳಿಬಿಟ್ಟ ಕಾಲನ್ನು ನೀವುತ್ತಾ, ಒಡೆದ ಹಿಮ್ಮಡಿಗೆ ವ್ಯಾಸಲಿನ್‌ ಹಚ್ಚುವುದನ್ನು ನಾನು ಕೆಳಗಿನ ಹಾಸಿಗೆಯಲ್ಲಿ  ಮಲಗಿಕೊಂಡು ಎವೆಯಿಕ್ಕದೆ ನೋಡುತ್ತಿದ್ದೆ. ಹಾಗೆ ನೋಡುತ್ತಿರುವುದು ಅರಿವಾದ ಕೂಡಲೇ ಅವಳು ಏನೋ ಮಾತಾಡಿ ಬೆಡ್‌ಶೀಟ್‌ ಎಳೆದುಕೊಂಡು ಮಲಗಿಬಿಡುತ್ತಿದ್ದಳು. ಸೀಮೆಎಣ್ಣೆ ಬುಡ್ಡಿ ಆರಿದ ಮೇಲೂ ಅಮ್ಮನ ಬಳೆಯ ಸದ್ದು, ವಿಪರೀತ ಕೆಲಸದಿಂದುಂಟಾದ ಸೊಂಟ ನೋವಿಗೆ ಹೊಂದಿಕೊಳ್ಳಲಾಗದೇ ಆಗಾಗ  ಅವಳು ಹೊರಳುವ ಸದ್ದು, ಮಂಚದ ದಡ್‌ ದಡ್‌ ಸದ್ದು, ನರಳಿಕೆ, ಬುಸ್ಸಂತ ಉಸಿರು ನನಗೆ ನಿದ್ದೆ ಬರುವವರೆಗೆ ಕೇಳಿಸುತ್ತಿತ್ತು.

Tuesday, October 14, 2008

ಅಮ್ಮನ ಕೈ ಬಳೆ ಸದ್ದಿಲ್ಲ

ದೇವರ ಪಟದ ಹೂವು
ಬಾಡಿ ಬೀಳುವಾಗ
ಹೊಲಕೆ ಹೋಗಿ ಬಂದ
ಅಮ್ಮ  ಜ್ವರವೆಂದು
ಮಲಗಿದವಳು ಏಳಲೇ ಇಲ್ಲ!
ಅವಳ ಮೈ ತಣ್ಣಗಾದ ಹೊತ್ತಿನಿಂದ
ಒಳ ಮನೆ ಕತ್ತಲಲ್ಲಿ
ಹಚ್ಚಿಟ್ಟ ಹಣತೆ ಆರಲಿಲ್ಲ,
ಬೊಂಬು ಬಂತು
ಗಡಿಗೆ ಬಂತು
ಯಾರೋ ದಾನ ಕೊಡಲು
ಕುಂಬಳಕಾಯಿ ತಂದರು
ಪೇಟೆಯಲ್ಲಿದ್ದ ಮಗ ಬಂದ
ತೊಲ ಬಂಗಾರದ ಮಗಳು ಬಂದಳು
ನೆಂಟ-ಬೀಗ-ಸೋದರಳಿಯ
ಏನೂ ತಿಳಿಯದ ಮೊಮ್ಮಕ್ಕಳು
ಬಂದರು... ಹೋದರು....

Saturday, October 11, 2008

ಮೌನವಾಗಿರು ಸಾಕು, ಮಾತು ಬಿಸಾಕು

ಇತ್ತೀಚೆಗೆ ಮುಂಬೈನಲ್ಲಿ ಬಾಂಬ್‌ ಬ್ಲಾಸ್ಟ್‌ ಆದ ಹೊತ್ತಿಗೆ ನಟ ಅಭಿಷೇಕ್‌ ಬಚ್ಚನ್‌ಗೆ ಶೂಟಿಂಗ್‌ ಇತ್ತಂತೆ. ಆದರೆ ಬ್ಲಾಸ್ಟ್‌ ಪ್ರೀತ್ಯರ್ಥವಾಗಿ ಒಂದು ವಾರದ ಶೂಟಿಂಗ್‌ ರದ್ದಾಯಿತಂತೆ.
`ಹಾಗಾಗಿ ನನಗೆ ಅಚಾನಕ್‌ ರಜೆ ಸಿಕ್ಕಿತು. ಯಾವಾಗಲೂ ಬರೀ ಕೆಲಸ ಕೆಲಸ ಶೂಟಿಂಗೇ ಆಗಿತ್ತು. ಈ ಬ್ಲಾಸ್ಟ್‌ ರಜೆಯ ಕಾಲದಲ್ಲಿ ನಾನು ನನ್ನ ಸಂಸಾರದ ಜೊತೆ ಕಾಲ ಕಳೆದೆ'
-ಹೀಗೆಂದು ಅಭಿಷೇಕ್‌ ಬಚ್ಚನ್‌ `ಖುಷಿ ಖುಷಿ'ಯಾಗಿ ಹೇಳಿಕೊಂಡಿದ್ದನ್ನು ಇತ್ತೀಚೆಗೆ ಪತ್ರಿಕೆಯೊಂದರ ಪಟ್ಟಣ ಪುರವಣಿಯೊಂದು ಅಷ್ಟೇ ಖುಷಿಯಿಂದ ಪ್ರಕಟಿಸಿತ್ತು. ವರದಿ ಓದಿ ಕೆಲವರಾದರೂ ಗಾಬರಿಯಾದಾರು. ಅಂದರೆ ರಜೆ ಸಿಕ್ಕಿತು ಎಂಬ ಕಾರಣಕ್ಕೆ ಅಭಿಷೇಕ್‌ ಖುಷಿಪಡುತ್ತಾ, ಅದೇ ಹೊತ್ತಿಗೆ ಬಾಂಬ್‌ ಬ್ಲಾಸ್ಟ್‌ನ ಬೇಜಾರನ್ನು ಲೆಕ್ಕಕ್ಕೂ ತೆಗೆದುಕೊಳ್ಳದೇ ಮಾತಾಡಿದ. ಅದನ್ನು ವರದಿಗಾರ/ರ್ತಿ ಅಷ್ಟೇ ನಿರ್ಭಾವುಕವಾಗಿ ವರದಿ ಮಾಡಿದ್ದ/ಳು. ಎಷ್ಟೋ ಓದುಗರು ಅದನ್ನು ಓದುವಾಗ `ಬಿಟ್ವೀನ್‌ ದಿ ಲೈನ್‌' ಅರ್ಥ ಮಾಡಿಕೊಂಡಿರಲೇ ಇಲ್ಲ.

Monday, October 6, 2008

ಬಂದೇ ಬರತಾವ ಕಾಲ್‌

ಮಿಸ್ಡ್‌ ಕಾಲ್‌ ಬರೆಯುತ್ತದೆ,
ಪ್ರೀತಿಯ ಓಲೆಯನು
ಹೆಚ್ಚು, ಕಡಿಮೆ, ಮಧ್ಯಮ- ದರದ
ಹ್ಯಾಂಡ್‌ಸೆಟ್‌ಗಳ ಮೇಲೆ.
ಪ್ರೀತಿಗೆ ಎಲ್ಲವೂ ಸಮಾನ.

ಹಠಾತ್‌ ಸಿಗ್ನಲ್‌ ಬಿದ್ದರೆ
ಇರಬೇಕು ಅಕ್ಕಪಕ್ಕ
ಚೆಂದನೆಯ ಹುಡುಗಿಯರು,
ಹುಡುಗಿಗೆ ಎದುರುಗಡೆ ಸುಂದರಾಂಗ.
ಕ್ಷಣವೆಷ್ಟೇ ಕಳೆಯುತ್ತಿದ್ದರೂ
ಹಸಿರು, ಹಳದಿ, ಕೆಂಪು
ದೀಪಗಳು
ಮಧುಚಂದ್ರನ ಪ್ರತಿಫಲನ,
ಯಾರಿಗೋ ಕಾಲ್‌ ಬರುತ್ತದೆ,
`ಆಹಾ ಎಂಥ ಮಧುರ ಯಾತನೆ'

Wednesday, October 1, 2008

ಗಾಂೀಸ್ಮೃತಿ

ಮತ್ತೊಮ್ಮೆ `ಅಕ್ಟೋಬರ್‌ 2' ಬಂದಿದೆ. ಕೆಲವರು ಆ ದಿನವನ್ನು ಅಕ್ಟೋಬರ್‌ ತಿಂಗಳಲ್ಲಿ ರಜೆ ಒದಗಿಸುವ ದಿನವಾಗಿ ನೋಡಿದ್ದಾರೆ. ಕೆಲವರು ಆ ದಿನ ಮದ್ಯ ಸರಬರಾಜಿಲ್ಲ ಎಂದು ಬೇಜಾರಾಗಿದ್ದಾರೆ. ಕೆಲವರು ಆ ದಿನ ಸತ್ಯಾಗ್ರಹದ ಡೇಟ್‌ ಆಗಿ ಇಟ್ಟುಕೊಂಡಿದ್ದಾರೆ. ಕೆಲವರಿಗೆ ಆ ದಿನ ಸರ್ಕಾರಕ್ಕೆ ತಮ್ಮ ಆಗ್ರಹ ನೀಡಲು ಪುಣ್ಯದಿನ.
ಕೆಲವರಿಗೆ ಮಾತ್ರ ಅದು ಗಾಂೀಜಿಯನ್ನು ನಿಜವಾಗಿ ನೆನಪು ಮಾಡಿಕೊಳ್ಳುವ ಸುದಿನ.
ಗಾಂೀಜಿ ಒಂದು ದಿನದ ಮಟ್ಟಿಗೆ ನೆನಪಾಗಬೇಕೇ ಎನ್ನುವುದು ಮತ್ತೂ ಕೆಲವರ ನೋವು. ಗಾಂೀಜಿ ಭಾರತ- ಪಾಕಿಸ್ತಾನವನ್ನು ಒಡೆದರು ಎಂಬುದು ಹಲವರ ದೂರು. ಅವರ ಎಡಬಲ ಇಬ್ಬರು ಹೆಂಗಸರು ಯಾವಾಗಲೂ ಇರುತ್ತಿದ್ದರಂತೆ ಎಂದು ಬಾಯಿ ಚಪ್ಪರಿಸಿದ ಮಂದಿ ನೂರು. ಅವರ ಬದುಕಿನ ಸೆನ್ಸೇಷನಲ್‌ ಸುದ್ದಿ ಇನ್ನೂ ಏನಾದರೂ ಸಿಗುತ್ತದಾ ಎಂದು `ಇನ್‌ವೆಸ್ಟಿಗೇಟಿವ್‌ ಜರ್ನಾಲಿಸಂ'ನಲ್ಲಿ ತೊಡಗಿರುವವರು ಕೆಲವರು.
`ಲಗೇ ರಹೋ ಮುನ್ನಾಭಾಯಿ' ಚಿತ್ರದ `ಗಾಂೀಗಿರಿ'ಯ ಮೂಲಕ ಗಾಂ ಅವರ ತತ್ವ ಮತ್ತೆ ಹುಟ್ಟು ಪಡೆದುಕೊಂಡಿತು ಎನ್ನುವ ವಾದ ಕೆಲವರದು. ಗಾಂೀಗಿರಿ ಎಂಬ ರೊಮ್ಯಾಂಟಿಕ್‌ ಕಲ್ಪನೆಯನ್ನು ಕಾಯಿನ್‌ ಮಾಡಿ, ಗಾಂೀಜಿಯವರನ್ನೇ ಅಲ್ಪ ದೃಷ್ಟಿಕೋನದಲ್ಲಿ ಯುವಜನತೆಯನ್ನು ಹಾದಿ ತಪ್ಪಿಸಲಾಗುತ್ತಿದೆ ಎನ್ನುವುದು ಇನ್ನೂ ಮುಂತಾದವರ ಅಳಲು. ಈ ಚರ್ಚೆಗಾಗಿ ವಿಚಾರ ಸಂಕಿರಣಗಳು, ಚರ್ಚಾಕೂಟಗಳು, ಕಾಲೇಜಿನಲ್ಲಿ ವಾದ ವಿವಾದ, ಮಾತಿನ ಜಟಾಪಟಿ.
ಇಷ್ಟಾದರೂ ಗಾಂೀಜಿ ತಮ್ಮೆಲ್ಲಾ ಫೋಟೋಗಳಲ್ಲಿ ಹಸನ್ಮುಖಿ. ರಾಮಾಯಣ, ಮಹಾಭಾರತದ ಥರದ ಪುಣ್ಯ ಪುರಾಣದ ಥರ. ಸೀತಾ ಲಕ್ಷ್ಮಣರ ಜತೆಯ ರಾಮನಂತೆ, ರಾಧೆ, ರುಕ್ಮಿಣಿ, ಸತ್ಯಭಾಮೆ, ಯಶೋದೆಯರ ಜತೆಯ ಕೃಷ್ಣನಂತೆ ಮುಗುಳ್ನಗುತ್ತಾ ಚಿತ್ರಪಟವಾಗಿದ್ದಾರೆ ಗಾಂೀಜಿ ಕೂಡ. ಅವರಿಗೆ ತಮ್ಮ ದೋತಿ, ಕೋಲು, ಕನ್ನಡಕಗಳೇ ಜೊತೆ. ಮೌನ ಕವಿತೆಯೊಳಗೇ ಅವಿತಂತೆ, ಮೌನವೇ ಆ ಕವಿತೆಯ ಶಕ್ತಿಶಾಲಿ ಮಾತಂತೆ.
ಅವರ ತತ್ವಗಳ ಮೇಲೆ ಮತ್ತೆ ಮತ್ತೆ ಪಿಎಚ್‌ ಡಿ ಆಗುತ್ತಿದೆ. ಅವರ ಫೋಟೋಗಳು ನೆಟ್‌ನಲ್ಲಿ ಪಾಪ್ಯುಲರ್‌. ಸಿನಿಮಾಗಳು ಅವರನ್ನು ಮತ್ತೆ ಮತ್ತೆ ಹುಟ್ಟುಸಿ, ಜೋಗುಳ ಹಾಡಿ ಅವರ ವ್ಯಕ್ತಿತ್ವಕ್ಕೆ ಹೊಸ ಜನ್ಮ ನೀಡುತ್ತಿವೆ. ಗಾಂೀಜಿ ಜಗತ್ತಿನ ಕಣ್ಣಲ್ಲಿ ವಿಸ್ಮಯ, ಸಂಶೋಧಕರ ಪಾಲಿಗೆ ಮುಗಿಯದ ಗಣಿ. ಸಾಧಕರಿಗೆ ಸೂರ್ತಿ ತುಂಬುವ ದಣಿ. ಸತ್ಯಸಾಧಕರಿಗೆ `ವೈಷ್ಣವ ಜನತೋ' ಹಾಡು ಮತ್ತು ಖಾದಿಯಂಥ ದೇಸಿ ವಸ್ತ್ರಗಳನ್ನು ಮಾರ್ಕೆಟಿಂಗ್‌ ಮಾಡಹೊರಟವರಿಗೆ ಅದರ ಪ್ರಚಾರ ರಾಯಭಾರಿ.
ಏನಾದರಾಗಲಿ, ಗಾಂೀ ತಾತನಿಗೆ ಪ್ರತಿ ತಲೆಮಾರಿನ ಜನರೂ ಆಭಾರಿ.ಙ