-ಹಾಗೆಂದು ಸಿ ಡಿ ಮೋರ್ಲೆ ಎಂಬ ಲೇಖಕ `ಡೋರ್' ಎಂಬ ಲೇಖನದಲ್ಲಿ ಬಾಗಿಲನ್ನು ಬಹಳ ಅದ್ಭುತವಾಗಿ ತೆರೆದು ತೋರಿಸುತ್ತಾ ಹೋಗುತ್ತಾನೆ. ಬಾಗಿಲಿನ ಹಿಂದೆ ಏನೆಲ್ಲಾ ಇರಬಹುದು. ಬಾಗಿಲು ನಮ್ಮೆಲ್ಲಾ ರಹಸ್ಯಕ್ಕೂ ಊಹೋಪೋಹಕ್ಕೂ, ಅರ್ಧ ಸತ್ಯಕ್ಕೂ ಒಳ್ಳೆಯ ಉದಾಹರಣೆ.
ಹಿಂದೊಮ್ಮೆ ಆ ಲೇಖನದಿಂದ ತುಂಬ ಪ್ರೇರಣೆ ಹೊಂದಿ ಕಾಲೇಜು ಓದುವ ಹೊತ್ತಿಗೆ ಬರೆದ ಕವಿತೆ `ಬಾಗಿಲು'. ಸ್ವಲ್ಪ ದೀರ್ಘವಾಯಿತು ಎಂದು ನೀವು ಬೇಕಾದರೆ ಬೈಯಬಹುದು. ಮುಚ್ಚಿದ ಬಾಗಿಲು ನಮಗೆಲ್ಲಾ ನೀಡಿದ ವಿಸ್ಮಯಕ್ಕಾಗಿ ನಮಿಸುತ್ತಾ ಇಲ್ಲಿ ಆ ಕವಿತೆ ಹಾಜರಾಗುತ್ತಿದೆ.
1
ಸುಟ್ಟಿಟ್ಟಿಗೆಗೆ ಮೆದು ಮಣ್ಣು ಮೆತ್ತಿ,
ಪಂಚಾಂಗದ ಇಂಚಿಂಚೂ ನೀರೆರಚಿದಾಗ
ಸೂರಿನ ಹನಿಸುಗಳ ತಡೆಗೆ
ಪರದೆ ಕಣ್ಣ ಗೋಡೆ:
ಹೊಸಮಣ್ಣ ಪ್ರಾಕಾರದಲ್ಲಿ ಅವಿತರೆ
ಬಿಟ್ಟೀತೇ ಹುಚ್ಚು ಗಾಳಿ
ಮಳೆಯ ನಡುವೆ ಗೂಳಿ ನುಗ್ಗುವ ಪರಿ?
ಪಾಗರದ ನಡುವಿನಲಿ ನಮ್ಮನ್ನೇ ಕಳಕೊಂಡಾಗ
ನುಸುಳಿ ಹೊರ ಹೊರಡಲಿಕ್ಕೆ,
ಎಳೆ ಬಿಸಿಲಿನ ಅಂಬೆಗಾಲಿಡುವ ನಾಳೆಗಳ
ರಂಗವಲ್ಲಿ ಚುಕ್ಕೆ ಇಟ್ಟು ಸ್ವಾಗತಿಸುವುದಕ್ಕೆ
ಬೇಕಲ್ಲವೇ?-
ಕಾವಲು ಕಣ್ಣ ಮುಚ್ಚಿಸಿ
ತಿಂಗಳ ಬೆಳಕ ರಾತ್ರಿಗಳ ಅಟ್ಟಿ
ನಿಲ್ಲಿಸುವ ನಂದಿ-ಬೀಟೆ ಸಾಗವಾನಿಯ ಗಟ್ಟಿ
ಬಾಗಿಲು,
ಮತ್ತು
ಬಿಡುವ ನೆಮ್ಮದಿಯ ನಿಟ್ಟುಸಿರು.
2
ಆಫೀಸಿನ ಸದಾ ಮುಚ್ಚು ಬಾಗಿಲು,
ಅಂಗಡಿಯ ನಗೆ ತೆರೆದ ಬಾಗಿಲು,
ಕಾಲ್ತಲೆ ತೋರಿ-ಎದೆ ಹೊಟ್ಟೆಯ ಬಚ್ಚಿಟ್ಟ
ಆಸ್ಪತ್ರೆಯ ಅರೆ ಬಾಗಿಲು,
ಇದ್ದಂತೇ ತೋರ್ಪಡಿಸಹೊರಟ
ಗಾಜು ಹಲಗೆಯ ಧೈರ್ಯದ ಬಾಗಿಲು,
ಮುರಿವ-ಮುರಿಯದ-ಮೆರುಗಿನ
ಕದಗಳ ಬಗೆ-ಬಿನ್ನಾಣ
ಕೂಲಿ ದುಡಿತದ ತಿರುಕನಿಗೆ
ಬಿದಿರ ತಡಿಕೆಯೇ ಬಿರುಗಾಳಿ ತಡೆವ ಕಡಿವಾಣ!?
3
ಬಾಗಿಲೆಂದಾಕ್ಷಣ ಬೇರ್ಪಡಿಕೆಯ
ತೋರಿಕೆ ನೀಡುವರಿಗೇ
ಈ ಕೆಳಗಿನ ತುಸು ಅಂಬೋಣ:
ಒಂಟಿತನದ ಕೊಂಚ ತಿರುವಾಟಕ್ಕೆ,
ಅಂಟಿ ಕುಳಿತು ನೆನಪಿಸುವ ಬಿಡುವಿಗೆ,
ನಮ್ಮ ನಾವೇ ಅರಿತುಕೊಳ್ಳುವುದಕ್ಕೆ,
ಪಿಸು ಮಾತಾಡಿ ಬೆರೆತುಕೊಳ್ಳುವುದಕ್ಕೆ,
ಗಳಿಸಿಟ್ಟ ಮೊತ್ತಗಳ ಉಳಿಸಿಕೊಳ್ಳುವುದಕ್ಕೆ,
ಕೊಟ್ಟ ಕೋಡಂಗಿಯವನಲ್ಲಿ
ಇಸಕೊಂಡ ಈರಭದ್ರ ತಲೆ ಮರೆಸಿಕೊಳ್ಳುವುದಕ್ಕೆ...
ಹೀಗೆ ಹಲವಾಶಯ ಹೊತ್ತ
ಈ ಬಾಗಿಲುಗಳಿಗೆ
ಬಿಚ್ಚಿಡುವ ಸ್ವಚ್ಛ ಮನಕ್ಕಿಂತಾ
ಬಚ್ಚಿಡುವ,
ಹೊಳಪು-ಕೊಳಕು ಮುಚ್ಚಿಡುವ
ಕಾಯಕದಲ್ಲೇ ಭಗವಂತ ಪ್ರೀತಿ!
4
ಬಾಗಿಲೆಂದರೆ ಇಲ್ಲವೆಂಬುದರ
ಕಳ್ಳ ಸುಳಿವು,
ಎಷ್ಟೋ ತಪ್ಪಿಸಿ ಪ್ರೀತಿ ತೋಡಿಕೊಳ್ಳಲು
ಬಂದವನಿಗೆ
ಆಕೆಯ ಕ್ಕರಿಕೆಯ
ಮುಖದರಿವು,
ಸಾಲ ಕೊಡಲೊಪ್ಪದವನ ಉರಿ ಮುಖ,
ಹಣ ಕೊಡದಾದ
ಹಾಲು ಹಾಕುವವನ ಬರಿ ಮುಖ,
ಮುಖ-ಮುಖದಲ್ಲೇ ಮುಚ್ಚು ಬಾಗಿಲು.
ತೆರೆವಾಗಿನ ಬಾಗಿಲ
ಹೃದ್ಯ ಲಾಸ್ಯದ ಪ್ರಮೋದ,
ಮುಚ್ಚುವಾಗೆಲ್ಲೋ ಚುಚ್ಚುತ್ತಾ
ಮಡುಗಟ್ಟಿ ಕುಳಿತ
ವಿಷಾದ...
ಚೆನ್ನಾಗಿದೆ ವಿಕಾಸ್, ನೀವು ಏನೇ ಬರೆದರೂ ತುಂಬ ಪ್ಯಾಷನೇಟ್ ಆಗಿ ಬರೆಯುತ್ತೀರಿ. ‘ಕದಬಾಗಿಲಿರಿಸಿದ ಕಳ್ಳ ಮನೆ’ ಕತೆ ಕೂಡ ಚೆನ್ನಾಗಿತ್ತು. ಪರ್ಜಾನಿಯಾ ಕುರಿತ ಬರಹ ತುಂಬಾ ತಟ್ಟಿತು (ಸಾರಿ, ತುಸು ಲೇಟಾಗಿ ಪ್ರತಿಕ್ರಿಯಿಸಿರುವೆ).
ReplyDelete- ಹರೀಶ್ ಕೇರ
vikaas! Congratualtions. nimma blog tumbaa chennagide. ella barahagalu ishtavaadavu. kavanagalu kooda chennagive. goodluck!
ReplyDeletecollege oduvagale baredidde ee kavana? hagadre ishtottige ondu academy prashasti barbekittalri nimage....
ReplyDelete