ಆತನ ಹೆಸರು: ಶೇಷ ಅಲಿ
ಆತ ರಾಜ್ಯ ಮಟ್ಟದ, ಹೋಗಲಿ ಜಿಲ್ಲಾ, ತಾಲೂಕು ಮಟ್ಟದ ಪ್ರಸಿದಿಯನ್ನೂ ಪಡೆದವನಾಗಿರಲಿಲ್ಲವಾದರೂ (ಶಿವಮೊಗ್ಗ ಜಿಲ್ಲೆ, ಹೊಸನಗರ ತಾಲೂಕಿನ) `ಹಳೆನಗರ'ದಂಥ ಸಣ್ಣ ಹೋಬಳಿಗೆ, ರ್ಯಾವೆಯಂಥ ಹತ್ತು ಹಲವು ಗ್ರಾಮಗಳಿಗೆ ಬೇಕಾದವನಾಗಿದ್ದ. ಆತ ಊರಿಗೆ ಪೋಸ್ಟ್ ತಂದುಕೊಡುತ್ತಿದ್ದ, ಪೇಪರ್ ತೆಗೆದುಕೊಂಡು ಬರುತ್ತಿದ್ದ, ಅಗತ್ಯ ಬಿದ್ದರೆ ದೂರದ ಪೇಟೆಯಿಂದ ದನ ಕರುಗಳಿಗೆ ಹಿಂಡಿ, ಹತ್ತಿಕಾಳು ತರುತ್ತಿದ್ದ. ಆತ ಪೋಸ್ಟ್ ಮ್ಯಾನ್ ಆಗುವ ಜತೆಜತೆಗೇ ನಗರಕ್ಕೂ ಊರಿಗೂ ಒಂದು ಕೊಂಡಿಯೇ ಆಗಿದ್ದ. ಊರ ಮದುವೆ, ತಿಥಿ ಊಟದ ಖಾಯಂ ಅತಿಥಿಯಾಗಿ, ಯಾರ ಆರೋಗ್ಯವೇ ಹದಗೆಡಲಿ ಅವರಿಗೆ ಔಷಧ ಒದಗಿಸುವ ವ್ಯಕ್ತಿಯಾಗಿ ಶೇಷ ನಾಯ್ಕ ಕಾರ್ಯ ನಿರ್ವಹಿಸುತ್ತಿದ್ದ.