Thursday, February 21, 2008

ಬಾರ್ಬರ್ ಕುಚೇಲ


ಅದು ಆಖ್ಯಾನ, ಇದು ವ್ಯಾಖ್ಯಾನ



ಬಂದು ನಿಂತಿದ್ದಾನೆ ಕುಚೇಲ. ಎದುರಿಗೆ ಶ್ರೀಕೃಷ್ಣಪರಮಾತ್ಮನ ದೊಡ್ಡ ಅರಮನೆ. ಕಾವಲಿಗೆ ನೂರಾರು ಕಾಲಾಳುಗಳು. ಕಾಲಾಳುಗಳಿಗೂ ಹೊಳೆಹೊಳೆವ ಬಟ್ಟೆ. ಆದರೆ, ಕುಚೇಲ ತೊಟ್ಟ ತೊಡುಗೆ ಹರಿದಿದೆ, ಮಣ್ಣು ಮೆತ್ತಿದೆ. ಹಾಗಾಗಿ ಅವನ ಹರಕು ಬಟ್ಟೆ ಕೊಳೆಯಾದ ಕಾಲನ್ನೂ, ಕಾಲು ಹರಿದ ಬಟ್ಟೆಯನ್ನೂ ಮರೆಮಾಚಲು ನಾಮುಂದು ತಾಮುಂದು ಎಂದಿದೆ. ಆದರೆ, ಅವನ ಕೊಳೆಕಾಲೂ, ಹರಿದ ಶಾಲೂ ಸಂಕೋಚದಿಂದ ಮುಚ್ಚಿಟ್ಟುಕೊಳ್ಳಲು ಪ್ರಯತ್ನಿಸುತ್ತಿರುವುದು ಹರಿದ ವಸ್ತ್ರಗಳಲ್ಲಿ ಕಟ್ಟಿ ತಂದ ಅವಲಕ್ಕಿಯನ್ನು.


ರಾಜಭಟ ಅವನನ್ನು ನೋಡಿದ, ನೋಡಿ ಕೇಳಿದ: ಯಾರೋ ನೀನು, ಏನು ಬೇಕು ನಿನಗೆ?


ಶ್ರೀಮಂತಿಕೆಯನ್ನು ಕಾಣುವುದೋ, ತನ್ನ ಬಡತನವನ್ನು ಮುಚ್ಚಿಟ್ಟುಕೊಳ್ಳುವುದೋ ಎಂದು ತಿಳಿಯದೇ ಗಾಬರಿಯಾಗಿರುವ ಕುಚೇಲ ರಾಜಭಟನ ಮಾತಿಗೆ ಬೆಚ್ಚಿ ತಡವರಿಸುತ್ತಾನೆ. ಕೃಷ್ಣನನ್ನು ನೋಡಬೇಕಿತ್ತು.



ದಿನವೂ ತನ್ನ ಪಕ್ಕವೇ ಕೃಷ್ಣ ಹಾದು ಹೋಗುತ್ತಾನೆ ಎಂಬ ಕಾರಣಕ್ಕೆ ಕೃಷ್ಣನ ಮೇಲಿನ ನಿರಾಸಕ್ತಿಯೋ, ನನ್ನ ಭಾಗ್ಯ ನಿನಗಿಲ್ಲ ಎಂಬ ದರ್ಪವೋ? ರಾಜಭಟ ಕೇಳುತ್ತಾನೆ: ಓಹೋ, ನಿನಗೆ ಕೃಷ್ಣ ಬೇಕೋ? (ಅವನ ವಸ್ತ್ರ ವಿನ್ಯಾಸವನ್ನು ಅಪಾದಮಸ್ತಕದಿಂದ ಗಮನಿಸಿ) ನಿನಗೆ ಕೃಷ್ಣ ನೆಂಟನೋ, ಇಷ್ಟನೋ? (ಹಾಗೆನ್ನುವಾಗ ಅವನ ತುಟಿಯಲ್ಲಿ ಮೀರಿ ಬರುವ ನಗುವಿದೆ).


ಸಂಕೋಚ ಇನ್ನಷ್ಟು ಹೆಚ್ಚಿ ಕುಚೇಲ ತಪ್ಪೆಪ್ಪಿಕೊಳ್ಳುವಂತೆ ಹೇಳುತ್ತಾನೆ: ನನಗೆ ಕೃಷ್ಣ ಬಾಲ್ಯ ಸ್ನೇಹಿತ.


 ತುಟಿ ಮೀರಿದ ರಾಜಭಟನ ನಗು ಇದೀಗ ಹೊರ ಹೊರಟು ಅರಮನೆಯ ಕಂಬ ಕಂಬಗಳಲ್ಲಿ ಅಣುರಣಿಸುತ್ತದೆ. ಆತ ತನ್ನ ನಗುವನ್ನು ದ್ವಿಗುಣಗೊಳಿಸುವವನಂತೆ ದೂರದ ಇನ್ನಷ್ಟು ಭಟರಿಗೆ ಇಲ್ಲಿಂದಲೇ ಕೂಗಿ ಹೇಳುತ್ತಾನೆ. ಕೇಳಿರೋ ಇವನು ಅವನ ಗೆಳೆಯನಂತೆ! ನಗು ಹತ್ತಾಗುತ್ತದೆ. ಹಲವಾಗುತ್ತದೆ. ಮತ್ತೆ ಕುಚೇಲನ ಕಡೆ ತಿರುಗಿ ಹೇಳುತ್ತಾನೆ: ಏನು, ನಮ್ಮ ಕೃಷ್ಣನ ಜತೆ ಕಾರಾಗೃಹದಲ್ಲಿ ಒಟ್ಟಿಗೆ ಇದ್ದೆಯೇನೋ, ಅಲ್ಲವೇ?


ಕುಚೇಲ ಈಗ ಬಾಯಿ ಬಿಡುತ್ತಾನೆ: ಇಲ್ಲ, ಇಲ್ಲ, ಸಾಂದೀಪಿನಿ ಮುನಿಗಳ ಆಶ್ರಮದಲ್ಲಿ ಒಟ್ಟಿಗೇ ವಿದ್ಯೆ ಕಲಿತವರು.


ಹೀಗೆ ಕುಚೇಲ ನಂಬಿಸುವುದೂ, ಭಟರು ನಂಬದಿರುವುದೂ ನಡೆದು ಕೊನೆಗೆ ಕೃಷ್ಣನಿಗೆ ವರ್ತಮಾನ ಹೋಗುತ್ತದೆ. ಕೃಷ್ಣ ಗೆಳೆಯನನ್ನು ಬರಮಾಡಿಕೊಳ್ಳುತ್ತಾನೆ. ಚಿನ್ನಖಚಿತ ಸಿಂಹಾಸನದಲ್ಲಿ ಕುಳ್ಳಿರಿಸುತ್ತಾನೆ. ಕಾಲು ತೊಳೆಯುತ್ತಾನೆ. ಅದನ್ನೇ ತೀರ್ಥ ಮಾಡಿಕೊಂಡು ಕುಡಿಯುತ್ತಾನೆ. ಗಾಳಿ ಬೀಸುತ್ತಾನೆ. ಆಶ್ರಮದ ದಿನಗಳನ್ನು ನೆನಪು ಮಾಡಿಕೊಳ್ಳುತ್ತಾನೆ. ನಗುತ್ತಾನೆ. ಕಣ್ಣೀರ್ಗರೆಯುತ್ತಾನೆ. ರುಕ್ಮಿಣಿ-ಸತ್ಯಭಾಮೆಯರನ್ನು ಕರೆದು ಕತೆ ಹೇಳುತ್ತಾನೆ. ಮತ್ತೆ ನಗು. ಕೊನೆಗೆ ಅವನ ಕೈಯ್ಯ ಅವಲಕ್ಕಿಯ ಕಡೆ ಗಮನ ಹೋಗುತ್ತದೆ. ತಾನು ತಿನ್ನುತ್ತೇನೆ, ತನಗೆ ಮೊದಲು ಬೇಕು ಎನ್ನುತ್ತಾ ಗಂಡ-ಹೆಂಡಿರ ನಡುವೆ ಕಿತ್ತಾಟವಾಗುತ್ತದೆ. ಭಕ್ತನು ತಂದ ಹಿಡಿ ಅವಲಕ್ಕಿ ಭಕ್ತ ಪೋಷಕನ ಬಾಯಲ್ಲಿ ಬೆಳೆಯುತ್ತದೆ. ಅಕ್ಷಯವಾಗುತ್ತದೆ. ಮುಗಿಯುವುದೇ ಇಲ್ಲ -ಅವರ ಸ್ನೇಹದಂತೇ!


ಅದು ಕೃಷ್ಣ ಕುಚೇಲರ ಕತೆ.



------------



ಇಲ್ಲಿ ಬಾರ್ಬರ್ ಬಾಲಾ ಕೂಡಾ ಮಾಡುವುದೋ ಬೇಡವೋ ಎಂಬ ಭಯ, ಆತಂಕ, ಸಂಕೋಚದಲ್ಲಿ ತನ್ನೂರಿಗೆ ಬಂದಿರುವ ಖ್ಯಾತ ನಟ ಅಶೋಕ್ ರಾಜ್‌ನ ಗೆಸ್ಟ್ ಹೌಸ್‌ಗೆ ಫೋನ್ ಮಾಡುತ್ತಾನೆ. ಅತ್ತ ಫೋನ್ ಎತ್ತಿಕೊಳ್ಳುತ್ತಾನೆ ಅಶೋಕ್ ರಾಜ್‌ನ ಒಬ್ಬ ಅಸಿಸ್ಟಂಟ್. 'ಯಾರು' ಎಂದು ಕೇಳುತ್ತಾನೆ ಆತ. 'ನನ್ನ ಹೆಸರು ಬಾಲ. ಬಾರ್ಬರ್ ಬಾಲ' ಎನ್ನುತ್ತಾನೆ ಈತ. 'ಹೇಳು ಏನಾಗಬೇಕಿತ್ತು' ಅನ್ನುತ್ತಾನೆ ಆತ ಅಸಮಾಧಾನದಿಂದ. 'ಅಶೋಕ್ ರಾಜ್ ಜತೆ ಮಾತಾಡಬೇಕಿತ್ತು' ಎನ್ನುತ್ತಾನೆ ಈತ. 'ಓಹೋ ಯಾಕೆ, ಕೆಲಸ ಇಲ್ಲವಾ?' ಎಂದು ದಬಾಯಿಸುತ್ತಾನೆ ಆತ. 'ಇಲ್ಲ, ನಾನು, ಅಶೋಕ್ ರಾಜ್ ಇಬ್ಬರೂ ಬಾಲ್ಯ ಸ್ನೇಹಿತರು' ಎನ್ನುತ್ತಾನೆ ಈತ. 'ಓಹೋ, ಬಾಲ್ಯಸ್ನೇಹಿತರಂತೆ. ತಾವು ಅಶೋಕ್ ರಾಜ್ ಅವರ ಅಪ್ಪ ಅಂತಲೂ ಹೇಳಿಕೊಂಡು ಇಲ್ಲಿ ಸುಮಾರು ಜನ ಫೋನ್ ಮಾಡುತ್ತಾರೆ. ಇಡು ಇಡು. ಫ್ರೆಂಡ್ ಅಂತೆ' ಎಂದು ವ್ಯಂಗ್ಯ ಮಾಡಿ ಫೋನ್ ಕುಕ್ಕುತ್ತಾನೆ ಆತ.



-------------



ಇತ್ತೀಚೆಗೆ ಬಿಡುಗಡೆಯಾದ ಮಲೆಯಾಳಂನ 'ಕಥಾ ಪರೆಯಂಬೋಲ್' ಎಂಬ ಸಿನಿಮಾದಲ್ಲಿ ಬರುವ ನಟ ಅಶೋಕ್ ರಾಜ್ ಮತ್ತು ಬಾರ್ಬರ್ ಬಾಲಾರ ಸ್ನೇಹದ ಕತೆ, ಕೃಷ್ಣ-ಕುಚೇಲರ ಸ್ನೇಹದ ಕತೆಯಂತೇ. ಒಂದು ಪುರಾಣವನ್ನು ಆಧುನಿಕ ಮರು ವ್ಯಾಖ್ಯಾನದೊಂದಿಗೆ ನಟ, ಕತೆಗಾರ ಶ್ರೀನಿವಾಸನ್ ಹೇಳುತ್ತಾ ಹೋಗುತ್ತಾರೆ. ಆದರೆ, ಅಂಥ ಒಂದು ಸ್ನೇಹಕತೆಯನ್ನು ಸಿನಿಮಾಗಳು ಬಿಂಬಿಸುವ ಸಾಧಾರಣ ಸ್ನೇಹಕತೆಯಂತೆ ಹೇಳುತ್ತಾ ಹೋಗದೇ ಬೇರೆಯದೇ ಸ್ಥರದಲ್ಲಿ ಹೇಳಲು ಶ್ರೀನಿವಾಸನ್ ಪ್ರಯತ್ನಿಸಿದ್ದಾರೆ. ಆದರೆ, ಕತೆಗೆ ಬೇಕಾದ ಲಲಿತ ಗುಣ, ಹಾಸ್ಯ ಗುಣ, ರಂಜಕ ಗುಣಗಳನ್ನು ಕಡೆಗಣಿಸಿಲ್ಲ. ಎಲ್ಲಾ ಕಮರ್ಷಿಯಲ್ ಅಂಶಗಳನ್ನು ಬೆರೆಸಿ, ಹೊಸ ಆಯಾಮದೊಂದಿಗೆ ಹೇಳುವ ಪ್ರಯತ್ನ 'ಕಥಾ ಪರೆಯಂಬೋಲ್'ನಲ್ಲಿದೆ.


ಅದು ಹೇಗೆ? ಒಬ್ಬ ಬಡವ. ಕ್ಷೌರಕಾರ್ಯ ಅವನ ವೃತ್ತಿ. ಆದರೆ, ಸ್ಪರ್ಧೆ, ಸಾಲಸೋಲ, ಮಕ್ಕಳ ವಿದ್ಯಾಭ್ಯಾಸ ಮೊದಲಾದ ಅಡ್ಡಕತ್ತರಿಯಲ್ಲಿ ಸಿಲುಕಿರುವ ಕ್ಷೌರಿಕ ಮುದ್ದಿನ ಹೆಂಡತಿ, ಮೂವರು ಮಕ್ಕಳು, ಸಣ್ಣ ಗುಡಿಸಲು, ಹೆಂಡತಿ ಆಗಾಗ ಒಡೆದು ಹಾಕುವ ಪಾತ್ರೆಗಳೊಂದಿಗೆ ಜೀವನ ಸಾಗಿಸುತ್ತಿದ್ದಾನೆ. ಅವನ ಬದುಕು ಸಂಕೀರ್ಣ ಸ್ಥಿತಿಯಲ್ಲಿರುವಾಗ ಊರಿಗೆ ಶೂಟಿಂಗ್ ನಿಮಿತ್ತ ಅಶೋಕ್ ರಾಜ್ ಬಂದುಬಿಡುತ್ತಾನೆ. 'ಅರೆ, ಅಶೋಕ್ ರಾಜ್ ನಮ್ಮ ಬಾಲಾನ ಬಾಲ್ಯ ಸ್ನೇಹಿತನಂತೆ' ಎಂಬಿತ್ಯಾದಿ ಗಾಳಿ ಸುದ್ದಿಗಳಿಂದ ಊರಿಗೆ ರೋಮಾಂಚನವಾಗುತ್ತದೆ.


ಅಲ್ಲಿಂದ ಬಾಲಾನ ಲೆವೆಲ್ಲೇ ಬೇರೆಯಾಗಿಬಿಡುತ್ತದೆ. ಅವನ ಮಕ್ಕಳ ಶಾಲೆಯ ವ್ಯವಸ್ಥಾಪಕರು ಬಂದು, 'ಅಶೋಕ್ ರಾಜ್‌ನನ್ನು ನಮ್ಮ ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗಿ ಕರೆಸು' ಎಂದು ದುಂಬಾಲು ಬೀಳುತ್ತಾರೆ. 'ನಾನೊಂದು ಸಿನಿಮಾ ಮಾಡುತ್ತೇನೆ, ಕಾಲ್‌ಶೀಟ್ ಕೊಡಿಸು' ಎಂದು ಆ ಊರಿನ ಶ್ರೀಮಂತ ಸಾಲಿಗ ಹಿಂದೆ ಬೀಳುತ್ತಾನೆ. ನಾವು ಅಶೋಕ್ ರಾಜ್ ಅಭಿಮಾನಿಗಳು. ನಮ್ಮನ್ನೂ ಅವನಲ್ಲಿಗೆ ಕರೆದುಕೊಂಡು ಹೋಗಿ' ಎಂದು ಹೆಂಡತಿ, ಮಕ್ಕಳು ಗೋಗರೆಯುತ್ತಾರೆ.


ಆದರೆ, ಬಾಲಾ ಯಾರಿಗೂ ಸ್ಪಂದಿಸಲಾರ. ತನ್ನ ಅಳಲು ಏನೆಂಬುದನ್ನು ಆತ ತ್ವತಃ ಹೆಂಡತಿ ಜತೆಗೂ ಹಂಚಿಕೊಳ್ಳಲಾರ. ಹಾಗಾದರೆ ಅವನಿಗೆ ಅಶೋಕ್ ರಾಜ್ ಗೆಳೆಯನಲ್ಲವೇ ಅಥವಾ ಗೆಳೆತನ ಅಷ್ಟೊಂದು ಗಾಢವಾಗಿಲ್ಲವೇ? ಗೆಳೆತನ ಯಾವತ್ತಾದರೂ ಕಡಿದುಹೋಗಿದೆಯೇ? ತನ್ನ ಸದ್ಯ ಬಡತನದ ಸಂಕೋಚವೇ? ಗೆಳೆತನವನ್ನು ಮರೆತಿರಬಹುದೆಂಬ ಅನುಮಾನವೇ? ಊರವರ ಒತ್ತಾಯ, ಒತ್ತಡದ ನಡುವೆಯೂ ಬಾಲಾ ಗಟ್ಟಿಯಾಗುತ್ತಾ ಹೋಗುತ್ತಾನೆ. ಕೊನೆಗೆ ಊರವರ ಪಾಲಿಗೆ 'ಸುಳ್ಳ' ಎಂಬ ಹಣೆಪಟ್ಟಿ ಹೊತ್ತ ಬಾಲಾ, ಅಶೋಕ್ ರಾಜ್‌ನನ್ನು ಭೇಟಿಯಾಗಲು ನಿರ್ಧರಿಸುತ್ತಾನೆ. ಅಂತೂ ಇಂತೂ ಬೇರೆ ಮೂಲಗಳಿಂದ ಆಡಳಿತ ವರ್ಗ ನಟನನ್ನು ಸಂಪರ್ಕಿಸಿ, ಶಾಲಾ ವಾರ್ಷಿಕೋತ್ಸವಕ್ಕೆ ಮುಖ್ಯ ಅತಿಥಿಯಾಗುವಂತೆ ಒಪ್ಪಿಸುತ್ತದೆ.


ಆ ದಿನ ವಾರ್ಷಿಕೋತ್ಸವ. ಮೂವರು ಮಕ್ಕಳು ಅಪ್ಪನನ್ನು ಬಾರೆಂದು ಕರೆಯದೇ, ಅಪ್ಪನಿಗೆ ವಿಶ್ ಕೂಡಾ ಮಾಡದೇ ವಾರ್ಷಿಕೋತ್ಸವಕ್ಕೆ ಹೋಗುತ್ತಾರೆ. ಹೆಂಡತಿ ಹಿಂಜರಿಯುತ್ತಾ ಹಿಂಜರಿಯುತ್ತಲೇ ಕೇಳುತ್ತಾಳೆ: ನಿಮಗೆ ನಿಜವಾಗಿಯೂ ಅಶೋಕ್ ರಾಜ್ ಗೆಳೆಯನಾ?! ಈಗ ಊರು ಪೂರಾ ಖಾಲಿಯಾಗಿದೆ. ಎಲ್ಲಾ ರಸ್ತೆಗಳೂ ಶಾಲೆಯನ್ನೇ ಮುಟ್ಟುತ್ತಿವೆ. ಶಾಲಾ ಆವರಣ ಜನಭರಿತ. 'ಬಾ, ನಾವೂ ಹೋಗೋಣ' ಎನ್ನುತ್ತಾ ಹೆಂಡತಿಯನ್ನು ಕರೆದುಕೊಂಡು ಶಾಲೆಗೆ ಹೋಗುತ್ತಾನೆ ಬಾಲಾ.


ವೇದಿಕೆ ಮೇಲೆ ಎಲ್ಲರ ಕಣ್ಣುಗಳ ಆಕರ್ಷಣೆಯ ಬಿಂದು ಅಶೋಕ್ ರಾಜ್. ಎಲ್ಲಾ ಹೊಗಳಿಕೆಗಳನ್ನು ಸಂಕೋಚದಿಂದ ತೆಗೆದುಕೊಂಡ ನಂತರ ಆತನ ಸರದಿ ಬರುತ್ತದೆ. ಮೈಕ್ ಮುಂದೆ ನಿಂತುಕೊಳ್ಳುತ್ತಾನೆ. ತನ್ನ ಬಾಲ್ಯವನ್ನು ನೆನೆಯುತ್ತಾನೆ. ಬಡತನವನ್ನು ನೆನೆಯುತ್ತಾನೆ. 'ಸಣ್ಣವನಿದ್ದಾಗ ನನಗೊಬ್ಬ ಬಾಲಚಂದ್ರ ಅನ್ನೋ ಸ್ನೇಹಿತನಿದ್ದ. ಬಾರ್ಬರ್ ಬಾಲ ಅಂತ ನಾವು ಕರೆಯುತ್ತಿದ್ದೆವು. ಅವನು ನಾನು ಓದಲು ಸಹಾಯ ಮಾಡಿದ್ದ. ಅಪ್ಪ ಊಟಕ್ಕೆ ಹೋಗಿದ್ದನ್ನು ನೋಡಿ ನನಗೆ ಕಟಿಂಗ್ ಮಾಡುತ್ತಿದ್ದ' ಎಂದು ತನ್ನ ಮತ್ತು ಬಾಲಾನ ಸ್ನೇಹವನ್ನು ಮಾತಾಗಿಸುತ್ತಾ ಹೋಗುತ್ತಾನೆ. ಬಾಲಾ ಮಾತಾಡದೇ ಕಣ್ಣೀರಾಗುತ್ತಾನೆ. ಅಪ್ಪನನ್ನು ಬೈದುಕೊಂಡ ಮಕ್ಕಳು ಕಣ್ಣೀರಾಗುತ್ತಾರೆ. ಗಂಡನ ಸ್ನೇಹವನ್ನು ಅನುಮಾನಿಸಿದ ಹೆಂಡತಿ ಕಣ್ಣೀರಾಗುತ್ತಾಳೆ. ಊರವರು ಪಾಪಪ್ರಜ್ಞೆಯಿಂದ ನರಳುತ್ತಾರೆ.


ಕಪೋಲವನ್ನು ದಾಟಿ ಕಣ್ಣೀರು ಕೆಳೆಗುರುಳುವ ಮೊದಲೇ ಬಾಲಾ ಹೆಂಡತಿಯನ್ನು ಕರೆದುಕೊಂಡು ಮನೆಗೆ ಬಂದುಬಿಡುತ್ತಾನೆ.


ಅದಾದ ಮೇಲೆ ಸ್ನೇಹಿತರ ಸಮಾಗಮ, ವಿಚಾರಣೆ, ಬಾಲಾನ ಗುಡಿಸಲಿನ ಮುಂದೆ ಊರವರು ಜಮಾಯಿಸುವುದು, ಮಾಧ್ಯಮದವರ ಮೈಕ್, ಪೇಪರ್‌ನವರು ಪೆನ್ನು ಎತ್ತಿಕೊಳ್ಳುವುದು ಇತ್ಯಾದಿ ಇತ್ಯಾದಿ.



--------------------------



ಅನಗತ್ಯ ತಬ್ಬುಗೆ, ಸ್ನೇಹದ ಉದ್ದುದ್ದ ಮಾತುಗಳ ರೇಜಿಗೆ, ಪರಸ್ಪರ ನಾಟಕೀಯ ಬಿನ್ನವತ್ತಳೆಗನ್ನು ಮೀರಿ 'ಕಥಾ ಪರೆಯಂಬೋಳ್' ಇಷ್ಟವಾಗುತ್ತದೆ. ದೊಡ್ಡ ಮೀಸೆಯ ಶ್ರೀಮಂತನನ್ನು ಅವನ ಕೆಲಸದವ ಪ್ರೀತಿಸುವುದು ಮತ್ತು ಅವರಿಬ್ಬರ ಸ್ನೇಹವನ್ನು ಪೇಲವ ವಿಷುಯಲ್ಸ್‌ಗಳ ಮೂಲಕ ನಿರೂಪಿಸುವುದು ದಕ್ಷಿಣ ಭಾರತದ ಸಿನಿಮಾಗಳಿಗೆ ಬಾಯಿಪಾಠವಾಗಿರುವ ಸಂದರ್ಭದಲ್ಲಿ ಸ್ನೇಹವನ್ನು ಹೊಸ ನಿಟ್ಟಿನಲ್ಲಿ ಹೇಳಲು ಶ್ರೀನಿವಾಸನ್ ಪ್ರಯತ್ನಿಸಿದ್ದಾರೆ. ಅರೆ ಸಂಕೋಚ, ಅರೆ ಸ್ವಾಭಿಮಾನಿಗಳ 'ಬಾಲಾ'ನ ವ್ಯಕ್ತಿತ್ವವನ್ನು ಸ್ವತಃ ಶ್ರೀನಿವಾಸನ್ ನಿರ್ವಹಿಸಿದ್ದಾರೆ. ಎಂದಿನಂತೆ ಲೀಲಾಜಾಲವಾಗಿ ಆ ಪಾತ್ರವನ್ನು ದಕ್ಕಿಸಿಕೊಂಡಿದ್ದಾರೆ.


ಬಾಲಾನ ಸ್ತುತಿಸುವ ಒಂದು ಹಾಡು ಚೆನ್ನಾಗಿದೆ. ರೀರೆಕಾರ್ಡಿಂಗ್, ಕ್ಯಾಮೆರಾ, ಎಡಿಟಿಂಗ್ ಕೆಲಸ ಕಾರ್ಯಗಳು ಕತೆಯ ಆಶಯವನ್ನು ಮುಟ್ಟಿಸುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಿವೆ. ಅಶೋಕ್ ರಾಜ್ ಆಗಿ ಮಮ್ಮುಟ್ಟಿ, ಬಾಲಾನ ಹೆಂಡತಿಯಾಗಿ ಮೀನಾ, ಸಾಲಿಗನಾಗಿ ಇನ್ನೋಸೆಂಟ್ ನೆನಪಿನಲ್ಲುಳಿಯುತ್ತಾರೆ.



- ವಿಕಾಸ್ ನೇಗಿಲೋಣಿ 

4 comments:

  1. ನೀನೇ ಕಳ್ಳ ಎಂದು ತಿಳಿದಿದ್ದೇನೆ. ಇಲ್ಲವಾದರೆ ನೀನು ಯಾರೆಂದು ಬಹಿರಂಗಪಡಿಸು !
    ಅಂದ ಹಾಗೆ ಕಥೆ ಚೆನ್ನಾಗಿದೆ ಸಿನಿಮಾದ್ದು, ನೀನೂ ಬರೆದದ್ದೂ ಸಹ. ಇದೇನು ಹೊಸ ಫಿಲ್ಮಾ?
    ನಾವಡ

    ReplyDelete
  2. ವಿಕಾಸ,
    ಸಿನೆಮಾ ನೋಡುವದೆ ಬೇಡ ಈ ಬ್ಲಾಗಿನಲ್ಲಿಯೆ ನೋಡಿಯಾಯಿತಲ್ಲ ಅನ್ನಿಸುವಷ್ಟು ಚೆನ್ನಾಗಿ ಕಥೆ ಹೇಳಿದೀರಿ. ಪುರಾಣಕ್ಕು ಸಿನೆಮಾಗೂ ಲಿಂಕು ಸೂಪರ್ಬ್. ಸಿನೆಮಾದ ಕೊನೆಯ ಟ್ವಿಸ್ಟು ಬಹಳ ಹಿಡಿಸಿತು.
    ಟೀನಾ.

    ReplyDelete
  3. ಪ್ರೀಯ ವಿಕಾಸ್ ಅವರೇ,

    ನಮಸ್ಕಾರ ಹೇಗಿದ್ದೀರಿ?


    ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

    ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

    ಡೇಟು: ೧೬ ಮಾರ್ಚ್ ೨೦೦೮
    ಟೈಮು: ಇಳಿಸಂಜೆ ನಾಲ್ಕು
    ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

    ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

    ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

    ಅಲ್ಲಿ ಸಿಗೋಣ,
    ಇಂತಿ,

    - ಅಮರ

    ReplyDelete
  4. ನೋಂದಾಯಿಸಿ-ಕನ್ನಡಸಾಹಿತ್ಯ.ಕಾಂ ೮ನೇ ವಾರ್ಷಿಕೋತ್ಸವದ ವಿಚಾರಸಂಕಿರಣ

    ಪ್ರೀತಿಯ ಅಂತರ್ಜಾಲ ಕನ್ನಡಿಗರೆ,

    ಕನ್ನಡಸಾಹಿತ್ಯ.ಕಾಂ ತನ್ನ ಎಂಟನೇ ವಾರ್ಷಿಕೊತ್ಸವದ ಅಂಗವಾಗಿ ಜೂನ್ ಎಂಟರಂದು ಕ್ರೈಸ್ಟ್ ಕಾಲೇಜಿನಲ್ಲಿ ಒಂದು ದಿನದ ವಿಚಾರ ಸಂಕಿರಣವನ್ನು ಏರ್ಪಡಿಸುತ್ತಿದೆ.
    ವಿಷಯ:
    ಅಂತರ್ಜಾಲದ ಸಂಧರ್ಭದಲ್ಲಿ, ಪ್ರಾದೇಶಿಕ ಭಾಷೆಯಲ್ಲಿ ಸೃಜನಶೀಲತೆ: ಗತಿಸ್ಥಿತಿ ಸವಾಲು.

    ಕಾರ್ಯಕ್ರಮಕ್ಕೆ ಸೀಮಿತ ಆಸನಗಳು ಲಭ್ಯವಿರುವ ಕಾರಣ ಭಾಗವಹಿಸಲು ಆಸಕ್ತಿ ಇರುವವರು ದಯಮಾಡಿ ಮುಂಚಿತವಾಗಿ ಕೆಳಗೆ ಕೊಟ್ಟಿರುವ ಲಿಂಕ್‍ನಲ್ಲಿ ರಿಜಿಸ್ಟರ್ ಮಾಡಿಕೊಳ್ಳಿ.

    http://saadhaara.com/events/index/english
    http://saadhaara.com/events/index/kannada

    ಸಮಾರಂಭದಲ್ಲಿ ಭಾಗವಹಿಸಲು ನೋಂದಾವಣೆ ಕಡ್ಡಾಯ.

    ಉತ್ಸಾಹ ಮತ್ತು ಸಮಯ ಇದ್ದರೆ ವಿಚಾರಸಂಕಿರಣದ ನಂತರ ಅನೌಪಚಾರಿಕವಾಗಿ ಬ್ಲಾಗಿಗಳಿಗೆ 'ಬ್ಲಾಗೀ ಮಾತುಕತೆ' ನಡೆಸುವ ಉದ್ದೇಶವೂ ಇದೆ.

    ನೀವೂ ಬನ್ನಿ ಮತ್ತು ಆಸಕ್ತಿಯಿರುವ ನಿಮ್ಮ ಗೆಳೆಯರನ್ನು ಕರೆತನ್ನಿ.

    -ಕನ್ನಡಸಾಹಿತ್ಯ.ಕಾಂ ಬಳಗ

    ReplyDelete