Wednesday, February 6, 2008

ನೀನ್ ನಾನಾದ್ರೆ ನಾನ್ ನೀನೇನಾ? ...

chess.gifಏನೋ ಮಸುಕು ಮಸುಕು. ಎಲ್ಲಾ ಅಸ್ಪಷ್ಟ. ಇಷ್ಟು ಹೊತ್ತಿನಲ್ಲಿ ಅದೂ ನನ್ನ ರೂಮಿನಲ್ಲಿ ಅದ್ಯಾರು? …

ಮಲಗಿದ್ದಲ್ಲೇ ಸ್ವಲ್ಪ ತಲೆ ಎತ್ತಿ ಕಣ್ಣುಜ್ಜಿಕೊಂಡರು ಶಾಂತವೇರಿ ಸಿದ್ದಪ್ಪನವರು. ಹೆಂಡತಿ ಕನಕಲಕ್ಷ್ಮೀ ಸತ್ತ ಮೇಲೆ ಅವರಿಗೆ ಒಬ್ಬರೇ ಮಲಗುವುದು ವಾಡಿಕೆ. ಊಟ ಮುಗಿದ ಮೇಲೆ ಮಗ ಚಂದ್ರಮೋಹನ್ ಬಂದು ಒಂದೈದು ನಿಮಿಷ ಅವರೊಂದಿಗೆ ಉಭಯಕುಶಲೋಪರಿ ಹರುಟುತ್ತಾ ಕುಳಿತು ಹೋಗುವುದು ಬಿಟ್ಟರೆ, ಮತ್ತೆ ಅವರ ಕೋಣೆಗೆ ಬೆಳಗ್ಗಿನವರೆಗೂ ಯಾರೂ ಬರುವುದಿಲ್ಲ. ಹೀಗಿರುವಾಗ ಅದ್ಯಾರು ತಮ್ಮ ರೂಮಿನಲ್ಲಿ ಇಷ್ಟು ಹೊತ್ತಿನಲ್ಲಿ ಕೂತಿದ್ದಾರೆ? ಸಿದ್ದಪ್ಪನವರಿಗೆ ಆಶ್ಚರ್ಯವಾಯಿತು. ಅರೆ, ಅವರೊಬ್ಬರೇ ಅಲ್ಲ. ಅವರೆದುರು ಇನ್ನೂ ಯಾರೋ ಒಬ್ಬರು ಕುಳಿತಿದ್ದಾರೆ. ಈ ಕೆಂಪು ದೀಪದ ಜೀರೋ ಕ್ಯಾಂಡಲ್ ಬಲ್ಬಿನಲ್ಲಿ ಅವರ ಮುಖ ಕೊಣಲೊಲ್ಲದು. ಮೆಲ್ಲಗೆ ತಡವರಿಸಿ ಎದ್ದರು ಸಿದ್ದಪ್ಪ. ಹಾಸಿಗೆ ಪಕ್ಕದಲ್ಲಿದ್ದ ಟೇಬಲ್ಲಿಗೆ ಒರಗಿಸಿದ್ದ ತಮ್ಮ ಊರುಗೋಲನ್ನು ಆಶ್ರಯಿಸಿದರು. ಮೆತ್ತಗೆ ಕಾಲು ಹಾಕುತ್ತಾ ಮಂಚದ ತುದಿಗೆ ನಡೆದು ಬಂದರು.

ಅಲ್ಲಿದ್ದವರು ಯಾರೂ ಎಂದು ಸೂಕ್ಷ್ಮವಾಗಿ ಗಮನಿಸಿದ ಅವರಿಗೆ ಮೈ ಜುಮ್ ಆಯಿತು. ಅಲ್ಲಿದ್ದ ಇಬ್ಬರು ಅವರೇ. ಒಂದು ಸಾಮಾನ್ಯ ಮನುಷ್ಯ ಸಿದ್ದಪ್ಪ. ಮತ್ತೊಬ್ಬ ಮಾಜಿ ಮುಖ್ಯಮಂತ್ರಿ ಸಿದ್ದಪ್ಪ. ಇಬ್ಬರೂ ಆ ಕತ್ತಲಿನಲ್ಲೇ ತಲೆ ಬಗ್ಗಿಸಿ ಕೂತಿದ್ದಾರೆ. ಎದುರಿಗಿದ್ದ ಚೆಸ್ ಬೋರ್ಡನ್ನು ಸೂಕ್ಷ್ಮವಾಗಿ ಗಮನಿಸುತ್ತಿದ್ದಾರೆ. ಸಾಮಾನ್ಯ ಮನುಷ್ಯ ಸಿದ್ದಪ್ಪ ಸೋಲುತ್ತಿದ್ದಾನೆ. ಮಾಜಿ ಮುಖ್ಯಮಂತ್ರಿ ಸಿದ್ದಪ್ಪ ಮೇಲುಗೈ ಸಾಧಿಸುತ್ತಿದ್ದಾನೆ.



ಸಹಜವಾಗಿಯೇ ಸೋಲುತ್ತಿದ್ದ ಸಿದ್ದಪ್ಪನಿಗೆ ಊರುಗೋಲಾಗಬೇಕೆಂದು ಕೊಂಡರು ಸಿದ್ದಪ್ಪ. ಅದು ಅವರ ಬಹಳ ವರ್ಷಗಳ ಆಸೆ. ಅವರು ವಿದ್ಯಾರ್ಥಿಯಾಗಿದ್ದಾಗ, ಗಾಂಧೀ ತತ್ವವನ್ನು ತಲೆಗೆ ಹಚ್ಚಿಕೊಂಡು ಓಡಾಡುವಾಗ, ನಂತರ ಲೋಹಿಯಾ ವಾದಕ್ಕೆ ತಲೆದೂಗಿದಾಗ ಈ ಸಿದ್ದಪ್ಪ, ಆ ಸಿದ್ದಪ್ಪನ ಜತೆಗೇ ಇದ್ದರು. ಆಗ ಇಬ್ಬರೂ ಬಹಳ ದೋಸ್ತಿಗಳು. ಒಂದೇ ದೇಹ ಎರಡು ಆತ್ಮದಂಥವರು. ಆ ಸ್ನೇಹಕ್ಕೆ ಮೊದಲು ಏಟು ಬಿದ್ದಿದ್ದು ಸಿದ್ದಪ್ಪ ಮೂವತ್ತು ವರ್ಷಗಳ ಹಿಂದೆ ಚುನಾವಣೆಗೆ ನಿಂತಾಗ.

ಅದ್ಯಾಕೋ ಈ ಸಿದ್ದಪ್ಪ ಒಲ್ಲದ ಮನಸ್ಸಿನಿಂದ, ಯಾರದೋ ಮಾತುಗಳನ್ನು ಕೇಳಿ ವೋಟುಗಳನ್ನು ಖರೀದಿಸುವಾಗ, ಎದುರಾಳಿ ಪಕ್ಷದವನಿಗೆ ಚೆಳ್ಳೇ ಹಣ್ಣು ತಿನಿಸಿದಾಗ, ವೋಟು ಹಾಕದವರ ಮೇಲೆ ಇಷ್ಟವಿಲ್ಲದಿದ್ದರೂ ದೌರ್ಜನ್ಯವೆಸಗಬೇಕಾದಾಗ ಆ ಸಿದ್ದಪ್ಪ ಮೊದಲು ಇವನಿಂದ ಸ್ವಲ್ಪ ದೂರವಾದ. ಅಷ್ಟರಲ್ಲಾಗಲೇ ರಾಜಕಾರಣಿ ಸಿದ್ದಪ್ಪ ಇವನಿಗೆ ಹತ್ತಿರವಾಗಿದ್ದ. ಈ ಸಿದ್ದಪ್ಪನಿಗೂ ಸಾಮಾನ್ಯನಿಗಿಂಥ, ರಾಜಕಾರಣಿಯ ಸೌಖ್ಯ ಹೆಚ್ಚು ಇಷ್ಟವಾಗಿತ್ತು. ನೀನಿಲ್ಲದಿದ್ದರೆ ನಿಮ್ಮಪ್ಪ ಎಂದು ಸಿದ್ದಪ್ಪನೂ ಮೀಸೆ ತಿರುವಿದ. ನಂತರ ಶಾಸಕ ಸಿದ್ದಪ್ಪ ಮಂತ್ರಿಯಾದ. ಮಂತ್ರಿಯಾದವನು ಮುಖ್ಯಮಂತ್ರಿಯ ಗಾದಿಯವರೆಗೂ ಹೋಗಿ ಬಂದ. ಆಗೆಲ್ಲಾ ಅವನಿಗೆ ಸಾಮಾನ್ಯ ಸಿದ್ದಪ್ಪ ನೆನಪಾಗಲೇ ಇಲ್ಲ. ತೀರಾ ಒಮ್ಮೊಮ್ಮೆ ಮನಸ್ಸಿಗೆ ಹೀಗೆ ಬಂದು ಹಾಗೆ ಹೋದರೂ, ಅದು ಹೆಚ್ಚು ಹೊತ್ತು ನಿಲ್ಲದಂತೆ ಮಾಡುವ ಶಕ್ತಿ ರಾಜಕಾರಣಿ ಸಿದ್ದಪ್ಪನಿಗಿತ್ತು.

ಅವರಿಬ್ಬರು ಚೆಸ್ ಆಡುತ್ತಾ ಆಡುತ್ತಾ ಹೋದಂತೆ ಸಿದ್ದಪ್ಪನಿಗೆ ಅದೇ ನೆನಪಾಗುತಿತ್ತು. ಸಾಮಾನ್ಯ ಒಂದೊಂದು ಕಾಯಿ ಆಡುತ್ತಿದ್ದಂತೆಯೇ ತನ್ನ ಹೋರಾಟ ನೆನಪಾಗುತಿತ್ತು. ದಲಿತರಿಗೆ ಪಾಠ ಹೇಳಿಕೊಟ್ಟಿದ್ದು, ಅವರೂ ಊರೊಳಗೆ ಹೋಗುವಂತೆ ಮಾಡಿದ್ದು, ಕ್ರಮೇಣ ಬಡವರ, ಕೂಲಿ-ಕಾರ್ಮಿಕರ ಕನಿಷ್ಠ ಹಕ್ಕಿಗೆ ಹೋರಾಟ ಮಾಡಿದ್ದು, ಎಲ್ಲರಿಗೂ ಶಿಕ್ಷಣ ಸಿಗಬೇಕೆಂದು ಧರಣಿ ಕೂತಿದ್ದು, ವಿದೇಶಿ ಕಂಪನಿಗಳ ಮೇಲೆ ದಂಡೆತ್ತಿ ಹೋಗಿ ಜೈಲು ಪಾಲಾಗಿದ್ದು …

ಅದಕ್ಕೆ ಸರಿಯಾಗಿ ರಾಜಕಾರಣಿ ಒಂದೊಂದು ಕಾಯಿ ಮುಂದುವರೆದಾಗಲೂ ತನ್ನ ಪ್ರತಿ ಹೋರಾಟ ಅವನಿಗೇ ಚುಚ್ಚುತಿತ್ತು. ವೋಟು ಬ್ಯಾಂಕಿನ ಹೆಸರಲ್ಲಿ ಕೆಟ್ಟ ಜಕಾರಣ ಮಾಡಿದ್ದು, ಶಿಕ್ಷಣ ಖಾಸಗೀಕರಣ ಮಾಡಿಸಿ ದುಬಾರಿ ಮಾಡಿಸಿದ್ದು, ಸ್ಥಳೀಯ ಉತ್ಪನ್ನಗಳನ್ನು ಕಡೆಗಣಿಸಿ ವಿದೇಶಿ ಕಂಪನಿಗಳನ್ನು ಇಲ್ಲಿಗೆ ಸ್ವಾಗತಿಸಿದ್ದು … ಸಾಮಾನ್ಯ ಸಿದ್ದಪ್ಪನಿಗೆ ಹೋಲಿಸಿದರೆ ರಾಜಕಾರಣಿ ಸಿದ್ದಪ್ಪ ಎಲ್ಲಾ ರೀತಿಯಲ್ಲೂ ಗೆಲ್ಲುವ ಹಂತದಲ್ಲಿದ್ದ. ಏನಾದರೂ ಮಾಡಿ ತಾನು ಮೇಲುಗೈ ಸಾಧಿಸಬೇಕೆಂದು ಸಾಮಾನ್ಯ ಹೋರಾಟ ನಡೆಸುತ್ತಲೇ ಇದ್ದ. ಆದರೆ, ರಾಜಕಾರಣಿ ಅದಕ್ಕೆ ಬಿಡುತ್ತಿರಲಿಲ್ಲ. ಸಾಮಾನ್ಯ ತುಂಬಾ ಕಷ್ಟಪಡುತ್ತಿದ್ದಾನೆನಿಸಿದರೂ, ರಾಜಕಾರಣಿಯ ಆಟದಲ್ಲಿ ನಿಜವಾಗಲೂ ಬುದ್ಧಿವಂತಿಕೆಯಿತ್ತು. ಸಾಮಾನ್ಯನ ಆಟ ಹೆಚ್ಚು ಅಗ್ರೆಸಿವ್ ಆಗಿತ್ತು. ರಾಜಕಾರಣಿಯಲ್ಲಿ ಹೆಚ್ಚು ಚಾಣಾಕ್ಷತೆಯಿತ್ತು. ಸಾಮಾನ್ಯ ಸುಮ್ಮಗೆ ಏನೋ ಮಾಡೋವುದಕ್ಕೆ ಹೋಗಿ ಇನ್ನೇನೋ ಮಾಡಿ ಪೇಚಿಗೆ ಸಿಕ್ಕರೆ, ರಾಜಕಾರಣಿ ಮಾತ್ರ ಲೆಕ್ಕಾಚಾರದಿಂದ ವ್ಯವಸ್ಥಿತವಾಗಿ ತನ್ನ ಕಾಯಿಗಳನ್ನು ಮುಂದುವರೆಸುತ್ತಿದ್ದ.

ಸಿದ್ದಪ್ಪನಿಗೆ ಒಂದು ಹಂತದಲ್ಲಿ ಗೊಂದಲವಾಯ್ತು. ಇವನು ಸರಿಯೋ? ಅವನು ಸರಿಯೋ? ಸಾಮಾನ್ಯನ ಪ್ರಯತ್ನ ಶ್ಲಾಘನೀಯವಾದರೂ ಅಲ್ಲಿ ಬುದ್ಧಿವಂತಿಕೆಯಿಲ್ಲ. ಬುದ್ಧಿವಂತಿಕೆಯೊಂದಿದ್ದರೆ ಮಾತ್ರ ಸಾಲದು, ಸ್ವಲ್ಪ ಹಣಬಲವೂ, ಜನಬಲವೂ ಇದ್ದರೆ ಸಾಮಾನ್ಯ ಕೂಡಾ ರಾಜಕಾರಣಿಯಾಗಬಹದು, ಅವನೂ ವ್ಯವಸ್ಥಿತವಾಗಿ ಆಡಬಹುದು ಎಂದು ಆ ಹಂತದಲ್ಲಿ ಅನಿಸಿತು ಸಿದ್ಧಪ್ಪನಿಗೆ. ಆದರೆ, ಅದಕ್ಕೆ ರಾಜಕಾರಣಿ ಬಿಟ್ಟಾನೆಯೇ?

ತನ್ನ ಇಡೀ ರಾಜಕೀಯ ಜೀವನದಲ್ಲಿ ತಾನೇ ಎಷ್ಟು ಜನರನ್ನು ಬೆಳೆಸಿದ್ದೇನೆಂದು ತನಗೆ ತಾನೇ ಪ್ರಶ್ನೆ ಹಾಕಿಕೊಂಡರು ಸಿದ್ಧಪ್ಪ. ಒಬ್ಬರ ಹೆಸರೂ ನೆನಪಿಗೆ ಬರಲಿಲ್ಲ ಅವರಿಗೆ. ಆದರೆ, ತಾನು ಸಾಮಾನ್ಯನಾಗಿದ್ದಾಗ? ಯೂನಸ್ ಖಾನ್, ಹಯವದನ ರಾವ್, ನೀಲಕಂಠ ಜೋಷಿ, ಪೋತರಾಜು, ನೀಲೋಫರ್ ಎಷ್ಟು ಜನ ಸಾಥಿಗಳಿದ್ದರು ತನ್ನ ಜತೆಗೆ? ಎಲ್ಲರಿಗೂ ಒಂದೇ ಆಸೆ. ‘ಕಟ್ಟುವೆವು ಹೊಸ ನಾಡೊಂದನ್ನು …’ ಅಂತ. ತಾನು ರಾಜಕಾರಣಿಯಾದಾಗ ಏನಾಯಿತು? ಅವರಲ್ಲಿ ಕೆಲವರಿಗೆ ತಾನೇ ಕಾಟ ಕೊಟ್ಟು ಓಡಿಸಿದೆ. ಇನ್ನು ಕೆಲವರು ಈ ದರಿದ್ರ ರಾಜಕೀಯ ಬೇಡ ಎಂದು ಎದ್ದು ಹೋದರು.

ಈಗ ಅವರೆಲ್ಲರೂ ಎಲ್ಲಿದ್ದಾರೋ? ಯೋಚಿಸಿದರು ಸಿದ್ದಪ್ಪ. ಯಾರೂ ನೆನಪಿಗೆ ಬರಲಿಲ್ಲ. ಕೊನೆಗೆ ತಾನು ಹಿಂದೊಂದು ದಿನ ಹೇಗಿದ್ದೆ? ಅದೇ ನೆನಪಿಗೆ ಬರಲಿಲ್ಲ ಅವರಿಗೆ. ತುಂಬಾ ವಯಸ್ಸಾಗಿದೆ, ಅದಕ್ಕೇ ಇರಬೇಕು ಇತ್ತೀಚೆಗೆ ತನ್ನ ಜ್ಞಾಪಕ ಶಕ್ತಿ ತೀರಾ ಹದಗೆಟ್ಟು ಹೋಗಿದೆ ಎಂದುಕೊಂಡರು. ಇನ್ನಾದರೂ ಸ್ವಲ್ಪ ವಿಶ್ರಾಂತಿ ಪಡೆಯಬೇಕು, ನಾಳೆ ದಿಲ್ಲಿಯಲ್ಲಿ ಸಾಕಷ್ಟು ರಾಜಕಾರಣ ಮಾಡುವುದಿದೆ ಎಂದು ಹೋಗಿ ಮಲಗಿಕೊಂಡರು.

ಸಿದ್ದಪ್ಪ ಬೆಳಿಗ್ಗೆ ಏಳಲಿಲ್ಲ. ಅವರ ಅಂತಿಮ ದರ್ಶನಕ್ಕೆ ಬಂದವರಿಗೆ ಆ ಚೆಸ್ ಬೋರ್ಡ್ ಕಾಣಲಿಲ್ಲ … 

1 comment:

  1. sir kathe chennagide, nimmallu obba kathegarniddane endu nanage gottiralilla... shubhashayagalu...

    ReplyDelete