ಹಾರುವ ಯಾನ ವಿಮಾನದಲಿ ಚಿಕ್ಕವರಾಗಿದ್ದಾಗ ಬಸ್ಸೆಂದರೆ ಹತ್ತಲು ಆಸೆಪಡುವ ಕಾಲವಿತ್ತು. ಆಮೇಲೆ ಬೈಕ್ ಆಸೆ ಬಂತು, ಆಮೇಲೆ ಕಾರು, ಆಮೇಲೆ ರೈಲು, ಆಮೇಲೆ ವಿಮಾನ. ಆದರೆ ಈಗ ಎಲ್ಲವೂ ಬದಲಾಗಿದೆ. ಈಗ ವಿಮಾನವೂ ಮಕ್ಕಳಲ್ಲಿ ಚಿಕ್ಕ ಸಂಭ್ರಮವನ್ನು ಹುಟ್ಟುಹಾಕದೇ ಹೋಗಬಹುದು. ಆದರೆ ನಾನು ಮೊನ್ನೆ ಮೊನ್ನೆ ಮೊದಲ ಬಾರಿ ವಿಮಾನ ಹತ್ತಿದೆ, ಈ ನೆಲದ ಸಹವಾಸವನ್ನು ಸ್ವಲ್ಪ ಕಾಲ ತೊರೆದು ಆಕಾಶದ ಸಹವಾಸ ಮಾಡಿದ್ದೆ.
ಅದರ ಸಹವಾಸ ದೋಷ ಇಲ್ಲಿ ಅನುಭವವಾಗಿದೆ, ಓದಿ!
ರೇಣುಕಾ ಶರ್ಮ ಬಂದಿದ್ದರೆ ಇಲ್ಲಿ ಸ್ವರ್ಗದ ಸೀನ್ ಶೂಟಿಂಗ್ ಮಾಡಿಬಿಡುತ್ತಿದ್ದರು.
ಹಾಗನಿಸಿದಾಗ ನಾನು ಈ ಭೂಮಿಯಿಂದ ಅದೆಷ್ಟೋ ಕಿಲೋಮೀಟರ್ ಎತ್ತರದಲ್ಲಿದ್ದೆ. ಆಗ ವಿಮಾನದಲ್ಲಿ ಬೆಲ್ಟ್ ಹಾಕಿಕೊಂಡು ನಿರಾಳವಲ್ಲದ ಸ್ಥಿತಿಯಲ್ಲಿ ಕುಳಿತು, ತೆರೆಯಲಾಗದ ಕಿಟಕಿಯಿಂದ ಹೊರಗೆ ನೋಡುತ್ತಿದ್ದೆ. ಹೊರಗೆ ಹತ್ತಿಯನ್ನು ಬೀಜದಿಂದ ಬೇರ್ಪಡಿಸಿ, ಹಿಂಜಿ ಹಿಂಜಿ ಆಗಸದಂಗಳದಲ್ಲಿ ಹರಡಿದಂತೆ ಕಾಣುತ್ತಿದ್ದವು ಮೋಡಗಳ ಸಾಲು, ಅದನ್ನು ಯಾರೂ ಕದ್ದೊಯ್ಯದಂತೆ ಕಾಯುತ್ತಾ ಕುಳಿತಂತಿದ್ದ ದೂರ ದಿಗಂತದಲ್ಲಿ ಸೂರ್ಯ!
ನಮ್ಮ ಅನೇಕ ಸಿನಿಮಾಗಳಲ್ಲಿ ಸ್ವರ್ಗದ ದೃಶ್ಯವನ್ನು ಶೂಟ್ ಮಾಡುವಾಗ ಮೋಡವೆಂದು ಭ್ರಮಿಸುವಂತೆ ಧೂಪದ ಹೊಗೆ ಹಾಕುತ್ತಿದ್ದರು, ಅದರ ಮಧ್ಯೆ ಒಂದೋ ಅನಂತನಾಗ್ `ಕಮಲ ನಯನ, ಕಮಲ ವದನ' ಎನ್ನುತ್ತಾ ಹಾಡುವ ನಾರದರಾಗಿರುತ್ತಿದ್ದರು, ಇಲ್ಲದಿದ್ದರೆ ಆ ಮೋಡದಂಥ ಸೆಟ್ನಲ್ಲಿ ಬೆಳ್ಳಿಬೆಟ್ಟದಲ್ಲಿ ಕುಣಿಯುತ್ತಿದ್ದಾನೆ ಎಂದು ಫೀಲ್ ಆಗುವಂತೆ ಈಶ್ವರ ತಾಂಡವನೃತ್ಯ ಮಾಡುತ್ತಿರುತ್ತಿದ್ದ ಮತ್ತು ಹೆಚ್ಚಿನ ಸಂದರ್ಭಗಳಲ್ಲಿ ಆ ಈಶ್ವರನ ಪಾತ್ರದಲ್ಲಿ ನಟ ಶ್ರೀಧರ್ ಇರುತ್ತಿದ್ದರು. ಆಗಲೇ ಈ ಹತ್ತಿಯಂಥ ಮೋಡಗಳನ್ನು ರೇಣುಕಾ ಶರ್ಮ ಆಗಿದ್ದರೆ ಶೂಟಿಂಗ್ಗೆ ಬಳಸಿಕೊಳ್ಳುತ್ತಿದ್ದರೇನೋ ಅನಿಸಿದ್ದು.
ಒಂದು ಕಾಲಕ್ಕೆ ದೂರದಲ್ಲಿ ಕಾಣುವ ವಿಮಾನವೇ ನಮಗೆ ಒಂದು ವಿಸ್ಮಯವಾಗಿತ್ತು. ನಾನು ಬೆಂಗಳೂರಿಗೆ ಬಂದಾಗ ಹತ್ತಿರದಲ್ಲಿ ವಿಮಾನ ಕಾಣುತ್ತದೆ ಎಂಬ ಸಂಗತಿಗೆ ರೋಮಾಂಚಿತನಾಗಿದ್ದೆ. ಬೆಂಗಳೂರಿನಲ್ಲಾದರೆ ನಮ್ಮ ನಿಮ್ಮ ಹಳ್ಳಿಗಳಿಗಿಂತ ಅದೆಷ್ಟೋ ಹತ್ತಿರದಿಂದ ವಿಮಾನಗಳನ್ನು ನೋಡಬಹುದು ಎಂಬ ವಿಷಯವೇ ನಮಗೆ ಆಗ ದೊಡ್ಡ ವಿಷಯವಾಗಿತ್ತು. ಬೆಂಗಳೂರಿನಲ್ಲೇ ತಳ ಊರಿ, ನಮ್ಮ ಗಮನಗಳು ಬೇರೆ ಬೇರೆ ಅಗತ್ಯಗಳ ಮೇಲೆ ಕೇಂದ್ರೀಕೃತವಾದಾಗ ತಲೆಮೇಲೇ ಹಾರುವ ವಿಮಾನ, ಅದರ ಸದ್ದು ನಮಗೆ ರೋಮಾಂಚನಗೊಳಿಸದ ವಿಷಯವಾದವು. ನಾವು ಬೆಂಗಳೂರಿಗೆ ಬಂದಾಗ ಸಂಭ್ರಮ ತಂದುಕೊಟ್ಟಿದ್ದ `ಹತ್ತಿರದ ವಿಮಾನ' ಆಮೇಲೆ ನನ್ನ ಮಾವನ ಮಗನನ್ನು ಅದೇ ಥರ ರೋಮಾಂಚನಗೊಳಿಸಿತು ಮತ್ತು ಬೆಂಗಳೂರಿನ ಪೂರ್ವಿಕರು ನನ್ನ ಪೆದ್ದುತನವನ್ನು ನೋಡಿ ಆಗ ನಕ್ಕಂತೆ ಈಗ ನನ್ನ ಮಾವನ ಮಗನ ಪೆದ್ದುತನವನ್ನು ಕಂಡು ನಾನು ನಕ್ಕೆ.
ಅದೇ ಥರದ ಇನ್ನೊಂದು ಮುಗ್ಧ ಸಂಭ್ರಮ ಮೊನ್ನೆ ನನ್ನದಾಯಿತು. ವಿಮಾನವನ್ನು ಮೊದಲ ಬಾರಿ ಇನ್ನೂ ಹತ್ತಿರದಿಂದ ಕಂಡು, ಹತ್ತಿ ಒಂದು ಗಂಟೆಗಳ ಕಾಲ ಪ್ರಯಾಣಿಸಿ ಆನಂದಪಟ್ಟೆ. ಆದರೆ ಈ ಪ್ರಪಂಚ ಆಗಲೇ ನನ್ನಿಂದ ಅದೆಷ್ಟೋ ದೂರ ಹೋಗಿಬಿಟ್ಟಿತ್ತು. ನನ್ನ ಜತೆ ಬಂದವರಲ್ಲಿ ಒಬ್ಬರನ್ನು ಬಿಟ್ಟರೆ ಮತ್ತೆಲ್ಲಾ ವಿಮಾನವನ್ನು ಬಿಎಂಟಿಸಿ ಬಸ್ಸಂತೆ ಹತ್ತಿಳಿದು ಇಳಿದು ನಿರ್ಭಾವುಕರಾಗಿದ್ದರು. ಸಲೀಸಾಗಿ ಪ್ರಯಾಣವನ್ನು ನಿರ್ವಹಿಸುತ್ತಿದ್ದರು, ಬೇರೆ ಕಂಪನಿಯ ವಿಮಾನದ ಗಗನ ಸಖಿಯರಿಗೂ ಈ ಗಗನ ಸಖಿಯರಿಗೂ, ಅವರ ಸೌಂದರ್ಯಕ್ಕೂ ತಾಳೆ ನಡೆಯುತ್ತಿದ್ದವು. ಪ್ರಯಾಣದಲ್ಲಿರುವಾಗ ಸಿಗುವ ತಿಂಡಿ ತೀರ್ಥದ ಬಗ್ಗೆಯೂ ಚರ್ಚೆ ಇತ್ತು. ಆ ಎಲ್ಲಾ ತುಲನೆಗೆ, ಚರ್ಚೆಗೆ ನನ್ನಲ್ಲಿ ವಸ್ತುವೇ ಇಲ್ಲದೇ ದ್ರಾಬೆ ಆಗಿ ಕುಳಿತಿದ್ದೆ.
ಆದರೆ ಭೂಮಿಗೂ, ಈ ಆಕಾಶಕ್ಕೂ ಇರುವ ವ್ಯತ್ಯಾಸದ ಬಗ್ಗೆ ನನ್ನಲ್ಲಿ ತುಲನೆಗಳಿದ್ದವು. ಈ ಪ್ರಪಂಚದಿಂದ ಕಳಚಿಕೊಂಡಂತೆ ಅನಿಸುತ್ತದೆ ನಾವು ಆಕಾಶದಲ್ಲಿರುವಾಗ. ಕಾಣದ ಜಗತ್ತನ್ನು ಮನಸ್ಸು ತನ್ನ ಪಾಡಿಗೆ ತಾನು ಕಲ್ಪಿಸಿಕೊಳ್ಳುತ್ತಾ, ಎಲ್ಲಾದರೂ ಮೋಡಕ್ಕೆ ಸಿಕ್ಕು ವಿಮಾನ ಅಲ್ಲಾಡಿದರೆ ಸಣ್ಣಗೆ ಕಂಪಿಸುತ್ತಾ, ಟೇಕಾಫ್ ಆಗುವಾಗ ಮತ್ತು ಲ್ಯಾಂಡ್ ಆಗುವಾಗ ಅದು ನಮ್ಮ ಎದೆಯನ್ನು ಭಾರವಾಗಿಸುವುದನ್ನು ಅನುಭವಿಸುತ್ತಾ, ಎಲ್ಲೋ ವಿಮಾನ ತಿರುವು ತೆಗೆದುಕೊಳ್ಳುವಾಗ ಭಯಪಡುತ್ತಾ ಇರುವಾಗ ನಾವು `ಕಂಫರ್ಟ್' ಆಗಿಲ್ಲದ ಪ್ರಪಂಚವೊಂದರಲ್ಲಿರುತ್ತೇವೆ. ನಾವು ಬಸ್ಸು, ರೈಲುಗಳಿಗಿಂತ ಅದೆಷ್ಟೋ ಹೆಚ್ಚು ವೇಗದಲ್ಲಿದ್ದರೂ ಆ ವೇಗ ಮತ್ತು ಚಲನೆ ನಮ್ಮ ಕಣ್ಣಿನ ಅನುಭವಕ್ಕೆ ಬರುವುದೇ ಇಲ್ಲದಿರುವುದೇ ವಿಮಾನಯಾನದ ಒಂದು ವಿಸ್ಮಯ. ಅಲ್ಲಿಗೆ `ಕಾಣ್ಕೆ'ಗಿರುವ ನಂಬಿಕೆಯೂ ಸತ್ಯಸ್ಯ ಸತ್ಯ ಅಲ್ಲವಲ್ಲಾ, ಅದೂ ಮಾಯೆಯಲ್ಲಾ ಎಂದು ಅನಿಸಿದಾಗ ಥಟ್ಟನೆ ಭಯ ಆಗದೇ ಇರುವುದಿಲ್ಲ.
ಇದೀಗ ಭೂಮಿಯಲ್ಲಿ ಲ್ಯಾಂಡ್ ಆಗಿ, ಆಫೀಸು ಕೆಲಸಗಳಲ್ಲಿ ತೊಡಗಿಕೊಂಡಿರುವಾಗ ಮನಸ್ಸನ್ನು ಮಾತ್ರ ಇನ್ನೂ ಆಕಾಶದಲ್ಲೇ ಬಿಟ್ಟಿದ್ದೇನೆ. ಪ್ರತಿ ಕ್ಷಣ ಜಗತ್ತಿನ ಲಕ್ಷೋಪಲಕ್ಷ ಪ್ರಯಾಣಿಕರು ವಿಮಾನವನ್ನು ಹತ್ತಿ, ಇಳಿದು, ಕೆಲವರು ಆರಳುಗಣ್ಗಳಿಂದ ಹೊರ ನೋಡುತ್ತಾ, ಆ ಪ್ರಯಾಣದಲ್ಲೇ ಪಳಗಿದವರು ನಿದ್ದೆಗೆ ಜಾರುತ್ತಾ, ಗಗನ ಸಖಿಯರನ್ನು ವಾಚಾಮಗೋಚರವಾಗಿ ಬೈಯ್ಯುತ್ತಾ, ಆ ಗಗನ ಸಖಿಯರು ತಾಳ್ಮೆಯಿಂದಲೇ ಅವರನ್ನೆಲ್ಲಾ ನಿಭಾಯಿಸುತ್ತಾ ಇರುವುದನ್ನು ಮನಸ್ಸು ತನ್ನ ಲೋಕದಲ್ಲಿ ಕಲ್ಪಿಸಿಕೊಳ್ಳುತ್ತಿದೆ.
ಯಾವುದೋ ಒಂದು ರಾತ್ರಿ ನಿದ್ದೆಗಣ್ಣಲ್ಲಿ ಹೆಂಡತಿಯನ್ನು ಎಬ್ಬಿಸಿ ಥಟ್ಟನೆ ನಾನು ಕೇಳಬಹುದು: ರೇಣುಕಾ ಶರ್ಮ ಸೆಟ್ ಹಾಕೋಕಿಂತ ಇಲ್ಲಿ ಮೋಡದಲ್ಲೇ ಶೂಟಿಂಗ್ ಮಾಡ್ಬಹುದಲ್ವಾ?
Manushyanee heege. Neladalli nadedukondu hoguvaaga aakashadalli hoguva vimana noduttare. Vimaanadalli hoguvaga nela noduttare!
ReplyDeleteHey, idannu baredaddu kallano, kullano. Adannaadrooo baredu punya kattikolli. Anyway, bareha chennaagide. Nimmibbarige innenu anubhavagalaagiveyo... yaariggotthu?
ReplyDelete- godlabeelu
Heege mele kelage nodo abhyasa irodrindale manushya Chandrana hattira hogiddu,Mangalana hattira hogidddu,mathe allinada boomi nodi cheena gode kandu hidididdu...
ReplyDelete