ಹೊಸ ಬೆಳಗಿನ ಕವಿ, ಕತೆಗಾರ ಎನ್ ಕೆ ಹನುಮಂತಯ್ಯ ಅವರು ಆಸ್ಪತ್ರೆಗೆ ದಾಖಲಾಗಿರುವ ವಿಷಯ ಶನಿವಾರ ಸಂಜೆ ಮತ್ತು ತೀರಿಕೊಂಡ ವಿಷಯ ಮರುದಿನ ಬೆಳಿಗ್ಗೆ ಗೊತ್ತಾದಾಗ ಯಾಕೋ ಬೇಸರದ ಮಂಜು ಇಡೀ ದಿನ ಕವಿದುಕೊಂಡೇ ಇತ್ತು. ಹಾಗಂತ ಕವಿತೆಗಳ ಹೊರತಾಗಿ ಯಾವತ್ತೂ ಅವರನ್ನು ಭೇಟಿಯಾಗಿಲ್ಲ, ಫೋನ್ ನಲ್ಲೂ ಸಂಪರ್ಕಿಸುವ ಪ್ರಮೇಯ ಬಂದಿರಲಿಲ್ಲ. ಆದರೆ ವಿಶೇಷವಾಗಿ ಅವರ ಕವಿತೆಗಳ ಓದು ನಮ್ಮ ನಿಮ್ಮನ್ನು ವಿವಶರಾಗಿಸುತ್ತಿತ್ತು, ನಮ್ಮ ನೋವುಗಳು, ಸಣ್ಣ ಸಣ್ಣ ನಲಿವುಗಳು ಅವರ ಕವಿತೆಗಳಲ್ಲಿ ಸಶಕ್ತವಾಗಿ ಮೂಡುತ್ತಿದ್ದವು.
ಕವಿ ಎನ್ನುವ ಟ್ಯಾಗ್ ಗೂ ಮೀರಿ ಎನ್ ಕೆ ಹನುಮಂತಯ್ಯ ಎಂಬ ಒಬ್ಬ ವ್ಯಕ್ತಿಯ ಸಾವು ನಿಜಕ್ಕೂ ದಿಗಿಲು ಹುಟ್ಟಿಸುತ್ತದೆ. ಇತ್ತೀಚೆಗೆ ಕೇಳಿಬಂದ ಸಣ್ಣವಯಸ್ಸಿವರ ಸಾವಿನ ಸುದ್ದಿಗೆ ಇದು ಮೂರನೇ ಸೇರ್ಪಡೆ. ಮೊದಲು ಕೇಳಿದ ಅಂಥ ಸಾವು ಮಲೆನಾಡ ಕಡೆಯ ಜನಪ್ರಿಯ ಗಾಯಕ, ಪ್ರತಿಭಾವಂತ ಸುಭಾಷ್ ಹಾರೆಗೊಪ್ಪ. ಮೂವತ್ತೈದು ಮುಟ್ಟಿದ್ದ ಆ ಗಾಯಕ ಒಂದು ಬೆಳಿಗ್ಗೆ ಇದ್ದಕ್ಕಿದ್ದಂತೇ ತೀರಿಕೊಂಡ. ಪುಟ್ಟ ಮಗು ಮತ್ತು ಮುದ್ದಿನ ಮಡದಿಯರನ್ನು ಹಿಂದೆ ಬಿಟ್ಟು ಸಾವಿನ ಮನೆಗೆ ತೆರಳಿದ ಸುಭಾಷ್, ಕುಡಿತಕ್ಕೆ ಬಲಿಯಾದ ಎಂದು ಮಲೆನಾಡು ಮಾತಾಡಿತು, ಅದು ಆತ್ಮಹತ್ಯೆ ಎಂಬ ಅನುಮಾನದ ಮಾತೂ ತೂರಿ ಬಂತು. ಏನೇ ಮಾತಾದರೂ ಅದರೊಳಗೆಲ್ಲಾ ಇರುವ ಸಾಮಾನ್ಯ ಸಂಗತಿ ಒಂದೇ, ಸಾವು.
ಇನ್ನೊಂದು ಸಾವು ಖ್ಯಾತ ಚಿತ್ರ ಸಾಹಿತಿ, ಚಿತ್ರ ಕತೆಗಾರ ಬಿ. ಎ. ಮಧು ಎನ್ನುವ ಸಜ್ಜನರ ಪುತ್ರನ ಸಾವು. ಇನ್ನೂ ಇಪ್ಪತ್ತು ವರ್ಷದ ಆ ಹುಡುಗ ತೀರಿಕೊಂಡದ್ದು ಹೇಗೆ ಎಂಬ ಪ್ರಶ್ನೆಗೆ ಅದು ಸಹಜ ಸಾವಲ್ಲ, ಅಸಹಜ ಸಾವು ಎಂದಷ್ಟೇ ಹೇಳಬಹುದು. ಆದರೆ ಇದೀಗ ಮೈಸೂರಿನ ಮಧು ಮನೆಯಲ್ಲಿ ಸಾವಿನ ಸೂತಕ, ಇರುವ ಒಬ್ಬ ಮಗನನ್ನು ಕಳೆದುಕೊಂಡವನ ದುಃಖಕ್ಕೆ ಎಂಥ ಸಾಂತ್ವನವೂ ಸಾಲದೇ.
ಆ ಎರಡು ಸಾವಿಗೆ ಇನ್ನೊಂದು ದುಃಖಕರ, ಆಘಾತಕಾರಿ ಸೇರ್ಪಡೆ ಎಂದರೆ ಹನುಮಂತಯ್ಯ.
ಇಪ್ಪತ್ತರ ಹರೆಯದ ಸಾವು ಉಂಟುಮಾಡುವ, ಉಳಿಸಿ ಹೋಗುವ ನೋವು ಒಂದು ಥರ ಆದರೆ ಉಳಿದೆರಡು ಸಾವು ಉಂಟುಮಾಡುವ ಪರಿಣಾಮ ಇನ್ನೊಂದು ಥರ. ಮೂವತ್ತರ ಆಚೀಚೆಯ ವಯಸ್ಸು ಅಂದರೆ ಅವರನ್ನು ಸಂಸಾರವೊಂದು ಅವಲಂಬಿಸಿರುತ್ತದೆ. ಆ ಸಂಸಾರದ ಕುಡಿ, ಕವಲುಗಳು ಆಗಷ್ಟೇ ಒಡೆಯುವುದಕ್ಕೆ ಪ್ರಾರಂಭಿಸಿರುತ್ತವೆ. ಅವರನ್ನು ಹುಷಾರಾಗಿ ದಡ ಸೇರಿಸಬೇಕಾದ ಕುಟುಂಬವೊಂದರ ನಾವಿಕ ಹೀಗೆ ಸಾಗರ ಮಧ್ಯದಲ್ಲೇ ಅವಲಂಬಿತರನ್ನು ಬಿಟ್ಟು ಹೋದರೆ ಅವರ ಗತಿ ಏನು? ಎಲ್ಲಾ ಸಾವುಗಳಿಗೂ ಒಂದೇ ಥರದ ಪರಿಣಾಮ ಬೀರುವ ಸಾಮರ್ಥ್ಯ ಇರುವುದಿಲ್ಲವಾದರೂ ಇಂಥ ವಯಸ್ಸಿನ ಸಾವು ಉಂಟುಮಾಡುವ ಸಾವು ಘೋರ ನರಕ.
ಹನುಮಂತಯ್ಯ, ಸುಭಾಷ್ ಹಾರೆಗೊಪ್ಪ ಮತ್ತು ಹೆಸರು ತಿಳಿಯದ ಆ ಹುಡುಗನಿಗೆ ನಮ್ಮ ಅಕ್ಷರ ಶ್ರದ್ಧಾಂಜಲಿ. ಆ ಕುಟುಂಬಗಳಿಗೆಲ್ಲಾ ಸಾವು ಭರಿಸುವ ಶಕ್ತಿ ಬರಲಿ.
[caption id="attachment_306" align="alignleft" width="202" caption="ತಪ್ಪಿ ಹೋಯಿತಲ್ಲೇ ಹಕ್ಕಿ"]
ತಣ್ಣಗೆ ಮತ್ತು ಅಷ್ಟೇ ಮೊನಚಾಗಿ ಬರೆಯುತ್ತಿದ್ದ ಎನ್ಕೆಎಚ್, ಅವರ ಕವನ ಸಂಕಲನಗಳಿಂದ, ಹತ್ತಿರದ ವಲಯದವರ ನೆನಪುಗಳಿಂದ, ಆಗಲೇ ಅರಳಿಸಿದ ಘಮಘಮ ಪ್ರತಿಭೆಯಿಂದ, ಹಾಯಾದ ಒಡನಾಟ ಮತ್ತು ಅವರ ಬಗ್ಗೆ ಇದ್ದ ಗೌರವ, ಪ್ರೀತಿಗಳಿಂದ ಹನುಮಂತಯ್ಯ ಯಾವತ್ತೂ ಬದುಕಿರುತ್ತಾರೆ ಪತ್ರಿಕೆಯಲ್ಲಿ ಓದಿದ್ದ, ಮೊನ್ನೆ ಮೊನ್ನೆ ‘ಸಂಚಯ’ ಸಂಚಿಕೆಯಲ್ಲಿ ಪ್ರಕಟವಾಗಿ ಮತ್ತೆ ಓದಲು ಅವಕಾಶವಾಗಿದ್ದ ‘ಹಕ್ಕಿ ಮತ್ತು ಬಲೆ’ ಎಂಬ ಹನುಮಂತಯ್ಯ ಕವಿತೆ ಇಲ್ಲಿ ತುಂಬ ನೆನಪಾಗುತ್ತಿದೆ. ಅದನ್ನು ಪ್ರಕಟಿಸಿ ಹನುಮಂತಯ್ಯ ಅವರನ್ನು ನೆನಯುವುದು ತರ.
ಹಕ್ಕಿ ಮತ್ತು ಬಲೆ
ಹಗಲು ಇರುಳಿನ ಬಲೆಯೊಳಗೆ
ಹಕ್ಕಿ ಸಿಲುಕಿದೆ
ಪಕ್ಕದಲ್ಲೇ ಬೇಟೆಗಾರರ ಬಲೆ
ಉರಿಯುತ್ತಿದೆ.
ಈಗ
ಹಾಡಲೇಬೇಕು
ಪುಟ್ಟ ಕೊಕ್ಕಿನಲ್ಲಿ
ಬೇಟೆಗಾರರು ನಿದ್ರಿಸುವಂತೆ
ಈಗ
ಈ ಪುಟ್ಟ ಕೊಕ್ಕನ್ನೇ
ಖಡ್ಗವಾಗಿಸಬೇಕು
ಬಲೆ ಹರಿದು ಬಯಲ ಸೇರುವಂತೆ.
ವಿಕಾಸ್, ತೀರಾ ನಿನ್ನ ಮೊನ್ನೆ ನವೀನ್ ಮಯೂರ್ ಇನ್ನಿಲ್ಲ ಎಂಬ 24*7 ಚಾನೆಲ್ಗಳ ಬ್ರೇಕಿಂಗ್ ನ್ಯೂಸ್ ಸ್ಕ್ರೋಲ್ ಗಳನ್ನು ನೋಡುತ್ತಿದ್ದಾಗಲೂ ಹಾಗೆಯೇ ಅನ್ನಿಸಿತು. ಈ ಸಾವೆಂಬುದು ಹೀಗೆಲ್ಲಾ ಅಪಹೊತ್ತಿನಲ್ಲಿ ಬಂದು ಯಾಕೆ ಸುತ್ತಿಕೊಂಡು ಬಿಡುತ್ತದೆ? ಹನುಂತಯ್ಯವನವರ ಸಾವಿನ ಸುದ್ದಿ ತಿಳಿದಾಗಲೂ ಮನಸಿಡೀ ಕಂಗಾಲು ಕಂಗಾಲು. ಕಾಲೇಜಿನ ದಿನಗಳಲ್ಲಿ ನನ್ನ ಗೆಳೆಯ ಗಣೇಶ ಬೇಕಂತಲೇ ಸಾವನ್ನು ಕುತ್ತಿಗೆಗೆ ಬಿಗಿದುಕೊಂಡಾಗಲೂ ತುಂಬಾ ಚಿಂತಿಸಿದ್ದೆ.
ReplyDeleteಬದುಕಿನ ಎಲ್ಲ ಜವಾಬ್ಧಾರಿ, ಹೊಣೆ ವಗೈರೆ ಚಲನೆಗಳನ್ನೆಲ್ಲಾ ನಿಲ್ಲಿಸಿ, ಜೀವ ಸುರುಳಿ ಕರ್ಚಾದ ಅಪ್ಪನ ಕೀಲಿಕೊಡುವ ವಾಚು ಸ್ತಬ್ಧವಾಗುವಂತೆ ಆಗಿಬಿಡುತ್ತದಲ್ಲಾ....
ಸಾವಿರಬಾರದಿತ್ತು.
= ವೈದ್ಯ