ನಮ್ಮ ಕಿರು ಬಾಗಿಲು, ದೇವರಿಗೂ ಕೂರಲು ಜಾಗ ಇರದ ಆವಾಸವಾಗಿ ದೇವರಂಥ ಮಕ್ಕಳ ಜೊತೆ ಖುಷಿಯಾಗುತ್ತಿತ್ತು.
*** *** *** ***
ಬೇಸಿಗೆ ರಜೆಗೆ ಪೇಟೆಯ ಒಬ್ಬ ಮೊಮ್ಮಗ ಬರುತ್ತಾನೆ, ಬಂದವ ಅಷ್ಟೋ ಇಷ್ಟೋ ಆಡುತ್ತಾನೆ, ಕರೆಂಟ್ ಇಲ್ಲದೇ ಟಿ.ವಿ ಮುಂದೆ ಶತಪಥ ಹಾಕುತ್ತಾನೆ, ಕಂಪ್ಯೂಟರ್ ಗೇಮ್ ಇಲ್ಲವೆಂದು ಗಲಾಟೆ ಮಾಡುತ್ತಾನೆ, ನಾಲ್ಕು ದಿನಗಳ 'ಸುದೀರ್ಘ' ರಜೆ ಮುಗಿಸಿ, ರಾತ್ರಿ ಬಸ್ಸಿಗೆ ಹತ್ತಿ ಹಳ್ಳಿಯಿಂದ ಪಾರಾಗುತ್ತಾನೆ. ರಜೆಗೆಂದು ಪೇಟೆ ಸಂಸಾರ ವಾರಗಟ್ಟಲೆ ಹಳ್ಳಿಗೆ ದಾವಿಸುವುದಿಲ್ಲ. ಬಂದವರೂ ಎಲ್ಲಾ ಸೇರಿದರೂ ಒಂದು ಗುಂಪಾಗುವುದಿಲ್ಲ. ಒಂದೆರಡು ಸ್ವೀಟ್, ಹಲಸಿನಕಾಯಿ ಹುಳಿ, ಹಲಸಿನ ಹಪ್ಪಳಗಳನ್ನು ವಯಸ್ಸಾದ ಹೆಂಗಸು, ಪೇಟೆ ನೆಂಟರಿಗಾಗಿ ಮಾಡಲಾರಳು. ಮಾಡಿದರೂ ಕೊಂಡು ಹೋಗುವವರು ಎಷ್ಟು ಮಂದಿ?
ಈಗ ಬಾಗಿಲಲ್ಲಿ ಯಾವ ದಡಿಯ ದೇವರೂ ಕುಳಿತುಕೊಳ್ಳಬಹುದು!
*** *** *** ***
ಕಿರಿದಾಗಿದ್ದನ್ನು ಹಿರಿದು ಮಾಡುವುದಕ್ಕೆ ಎಲ್ಲರೂ ಮುಂದು. ಹಳ್ಳಿಯಲ್ಲಿ ಪಿಳಿಪಿಳಿ ಕಣ್ಣು ಬಿಡುತ್ತಿರುವ ವೃದ್ಧ ಅಪ್ಪ-ಅಮ್ಮ ವಾಸ ಮಾಡುವ ಮನೆ ಕಿರಿದಾಯಿತು ಎಂದು ಲ್ಯಾಪ್ಟಾಪ್ ಲೋಲ ತನಯನಿಗೆ ಅನ್ನಿಸಿ ಅದನ್ನು ಜೀಣರ್ೋದ್ಧಾರ ಮಾಡುವ ಪ್ಲ್ಯಾನು ನಡೆಯುತ್ತಿದೆ. ಅಡಿಕೆ ರೇಟು ಕಡಿಮೆ ಕಡಿಮೆ ಆದರೆ ಇರುವ ಮನೆಯನ್ನು ಮಾರಿ ಹಾಕುವ ಆಲೋಚನೆ ಮಗರಾಯನದು.
ಕಿರಿ ಬಾಗಿಲು ಹಿರಿದು ಮಾಡಿ, ಕಿರು ಮನೆಯನ್ನು ಹಿರಿದಾಗಿ ಕಟ್ಟಿಸಿ, ಕಿರು ಕೆಲಸದಿಂದ ಹಿರಿ ಕೆಲಸಕ್ಕೆ ಹಾರಿ, ಕಿರು ಸಂಬಳದಿಂದ ಹಿರಿ ಸಂಬಳಕ್ಕೆ ನೆಗೆದು, ಕಡಿಮೆಯ ಮೊಬೈಲಿನಿಂದ ಜಾಸ್ತಿಯ ಮೊಬೈಲಿಗೆ ಜಿಗಿದು, ಕಾರು, ಸೈಟು, ಹೂಡಿಕೆ, ಸಾಲಗಳಲ್ಲೂ ಹಿರಿಯದಕೆ ಪ್ರಾಶಸ್ತ್ಯ.
ಈಗ ನಿಜಕ್ಕೂ ಎಂಥ ದೊಡ್ಡ ದೇವರೂ ಅವನ ಮನೆ, ಕಾರು, ಮೊಬೈಲುಗಳಲ್ಲಿ ಕುಳಿತುಕೊಳ್ಳಬಹುದು!
*** ***** ****
ಅಗಲ ಈಗ ಎಲ್ಲರ ಪ್ರಾಶಸ್ತ್ಯ. ಚಿಕ್ಕ ಜಾಗದ ಚೊಕ್ಕ ಸಂಸಾರದ ಅಚ್ಚು ಹಾಕಿದ ಫೋಟೋಗಳಿಗೆ ಎಲ್ಲಿದೆ ಜಾಗ? ಬೆಂಗಳೂರಿನ ಗಲ್ಲಿಗಳ ವಿಸ್ತೀರ್ಣ ಈಗ ಹಿಗ್ಗುತ್ತಿದೆ. ನೃಪತುಂಗ ರಸ್ತೆ ಅಗಲವಾಗಿ, ಬನ್ನೇರುಘಟ್ಟ ರಸ್ತೆ ಅಗಲವಾಗಿ, ಅರಮನೆ ರಸ್ತೆ, ಆರ್.ಸಿ. ಕಾಲೇಜು ರಸ್ತೆಗಳು ವಿಸ್ತಾರವಾಗಿ ಮಹಾರಾಣಿ ಕಾಲೇಜು ರಸ್ತೆ ವಿಸ್ತಾರಕ್ಕೆ ಸಿದ್ಧವಾಗಿ ರಸ್ತೆ ರಸ್ತೆಗಳೂ, ಸಂದು ಗುಂಡಿಗಳೂ 'ಅಗಲಿಕೆ'ಯ ಸಂಭ್ರಮಕ್ಕೆ ಸಂದಿವೆ.
ಪುಟ್ಟ ಇಕ್ಕಟ್ಟಿನ, ಬಿಕ್ಕಟ್ಟಿನ ಪ್ರಪಂಚದಲ್ಲಿ ಸಹಜವೂ ಸುಂದರವೂ ಆದ ಒಂದು ಸೌಂದರ್ಯ ಇತ್ತು ಎಂದು ಹಲುಬುವವರಿಗೆ ಇಲ್ಲಿ ವೇಕೆನ್ಸಿ ಇಲ್ಲ. ರಸ್ತೆ ಪಕ್ಕ ಬಿದ್ದ ಮರದಲ್ಲಿ ಚೆಲ್ಲಾಪಿಲ್ಲಿಯಾದ ಹಕ್ಕಿ ಗೂಡುಗಳಲ್ಲೂ ಒಂದು ಕಿರಿ ಬಾಗಿಲಿತ್ತು, ಆ ಬಾಗಿಲಲ್ಲೂ ದೇವರು ಕೂರದಂತೆ ಚಿಲಿಪಿಲಿ ತುಂಬಿತ್ತು. ಜಗದಗಲ, ಮುಗಿಲಗಲ, ಹೆದ್ದಾರಿಯಗಲ ಅಭಿವೃದ್ಧಿಯ ಕೊಡಲಿ, ಗುದ್ದಲಿ, ಪ್ರಹಾರ.
ಈಗ ಎಂಥ ದಡಿಯ ದೇವರೂ ನಗರದ, ಅಭಿವೃದ್ಧಿ ಶಹರದ ಬಾಗಿಲ ಮೇಲೆ ಕುಳಿತುಕೊಳ್ಳಬಹುದು!