ಕೊಡೆಯೆಂದರೆ ಬಾಲ್ಯ, ಕೊಡೆಯೆಂದರೆ ನೆನಪು, ಕೊಡೆಯೆಂದರೆ ತಾಯಿ, ಕೊಡೆಯೇ ನಮ್ಮನು ಕಾಯಿ! ಮಲೆನಾಡಿನಿಂದ ಬಂದ ಎಲ್ಲಾ ಜನರ ಕನಸಲ್ಲೂ ಒಂದು ಕೊಡೆ ಇದ್ದೇ ಇದೆ. ಅದು ತೀವ್ರ ಗಾಳಿ ಬೀಸುವ ಗದ್ದೆ ಬಯಲಲ್ಲಿ ಆಚೆ ಈಚೆ ಮಗಚಿಕೊಳ್ಳುತ್ತಾ, ಕೆಲವೊಮ್ಮೆ ತಲೆ ಕೆಳಗಾಗುತ್ತಾ ನಮ್ಮನ್ನು ಹಿಂಬಾಲಿಸುತ್ತಿದೆ. ಮಲೆನಾಡಿನ ಕಡೆ ಈಗಲೂ ಬಿಚ್ಚಿಟ್ಟ ಕೊಡೆಗಳೆಲ್ಲಾ ಮನೆಯ ಜಗಲಿಯಲ್ಲಿ ರಾತ್ರಿ ಪೂರ್ತಿ ಗಾಳಿಗೆ ಒಣಗುತ್ತಾ, ಬೆಳಗಿನ ಎಳೆ ಬಿಸಿಲಿಗೆ ಕನಸು ಕಾಣುತ್ತಿವೆ. ಮಳೆಗಾಲ ಮುಗಿದು, ಚಳಿ ಪ್ರಾರಂಭವಾಗಿರುವಾಗ ಮಳೆಯ, ಮಳೆಗೆ ಹಿಡಿಯುವ ಕೊಡೆಯ ಮೇಲೆ ಒಂದು ಸಣ್ಣ ನೆನಪಿನ ಬರಹ.
ನಾವೆಲ್ಲಾ ಹೈಸ್ಕೂಲ್‌ನಲ್ಲಿರುವಾಗ ಒಂದು ಪಾಠವಿತ್ತು. ಹೆಸರು `ಕೊಡೆ ಪುರಾಣ' ಇರಬೇಕು. ಬರೆದವರು ಪಡುಕೋಣೆ ರಮಾನಂದರಾಯರು. ಒಂದು ಲಲಿತ ಪ್ರಬಂಧವದು. ಕೊಡೆಯನ್ನು ಹೆಣ್ಣಿನಂತೆ ಹಾಗೆಂದು ಹೀಗೆಂದು ವರ್ಣಿಸುವ ಲೇಖಕರು ನಗೆಯುಕ್ಕುವಂತೆ ಕೊಡೆ ವ್ಯಾಖ್ಯಾನಕ್ಕೆ ತೊಡಗಿದ್ದರು. ಅಂತಿಮವಾಗಿ ಕೊಡೆಯನ್ನು `ತಾಯಿಯಂತೆ' ಎಂದು ಬಣ್ಣಿಸಿದಾಗಂತೂ ಆ ಲೇಖನದ ಔನ್ನತ್ಯ ಅರ್ಥವಾಗಿತ್ತು. ಆ ಲೇಖನದೊಂದಿಗೆ ಬಾಲ್ಯದ ಕೊಡೆ ಗೆಳೆತನದ ನೆನಪು ಆಗಾಗ ಹಸಿರಾಗಿದ್ದಿದೆ. ಕೊಡೆಯೆಂದರೆ ಎಲ್ಲರಿಗೂ ತಂತಮ್ಮ ಬಾಲ್ಯ ನೆನಪಾಗುತ್ತದೆ. ಅನೇಕ ಚಿತ್ರಕಾರರು ಕೊಡೆ ಹಿಡಿದು ಸಾಗುವ ಮನುಷ್ಯಾಕೃತಿಯಿಂದಲೇ, ದೋ ಎಂದು ಸುರಿಯುವ ಮಳೆಯಿಂದಲೇ ಮಲೆನಾಡನ್ನು ಚಿತ್ರಿಸಿದ್ದನ್ನು ನಾವು ನೋಡಿದ್ದೇವೆ. ಕೊಡೆ ಮಲೆನಾಡಿನ, ಮಳೆಗಾಲದ ಅನಿವಾರ್ಯ ಅಂಗವೇ ಆಗಿಹೋಗಿದೆ. ಅದು ಹೆಚ್ಚಾಗಿ ಪೇಟೆಗಳಲ್ಲಿ ಮಾತ್ರ ಬೇಸಿಗೆಯ ಆಯುಧ ಕೂಡ.