Thursday, August 12, 2010

ಕಿರಂ ಮಾತು ನಿಲ್ಲಿಸಿದ್ದಾರೆ, ನಾವು ಬರಹ ಶುರು ಮಾಡೋಣ!


ಎಣ್ಣೆ ಹಾಕಿದ ಇಳಿಗೂದಲು, ಹೆಗಲಿಗೆ ಹಾಕಿದ ಚೀಲ ಮಾಸಲು. ಕಾಲಲ್ಲಿ ಇದ್ದ ಚಪ್ಪಲಿಯಲ್ಲಿ ಯಾರಿಗೂ ಅರಿವಿಗೆ ಬಾರದ ಸವೆತ, ಕಣ್ಣಲ್ಲಿ ಸಣ್ಣ ನಾಚಿಕೆ, ಬೆರಳುಗಳಿಗೆ ಆಗಾಗ ಸಿಗರೇಟು ಹಿಡಿದುಕೊಳ್ಳುವ ಚಡಪಡಿಕೆ, ತೆಗೆದುಕೊಂಡ ಕನ್ನಡಕಕ್ಕೆ ಎಷ್ಟು ವರುಷಗಳಾಗಿದ್ದವೋ, ಅವರ ತಲೆಯೊಳಗೆ ಪೇರಿಸಿಟ್ಟ ಅಸಂಖ್ಯ ಹೊತ್ತಿಗೆಗಳ ಜ್ಞಾನದ ರ್ಯಾಕ್ಗೆ ಎಷ್ಟು ಸಂವತ್ಸರಗಳಾಗಿದ್ದವೋ? ಕುಗ್ಗಿದಂತೆ ನಡೆದು ಬರುತ್ತಿದ್ದ, ಉಬ್ಬಿ ಉಬ್ಬಿ ಮಾತಾಡುತ್ತಿದ್ದ, ಪ್ರೀತಿಯಿಂದ ಕೀಟಲೆಗಳಿಗೀಡಾಗುತ್ತಿದ್ದ, ಶಿಷ್ಯರ ಕಣ್ಣುಗಳನ್ನು ತಮ್ಮ ಬರುವಿಕೆಯಿಂದ ಅರಳಿಸುತ್ತಿದ್ದ, ಹೊಸ ಅಭಿಮಾನಿಗಳ ಕಣ್ಣಲ್ಲಿ ಅಭಿಮಾನವನ್ನು ಉಕ್ಕಿಸುತ್ತಿದ್ದ, ಅಸ್ಖಲಿತ ಪಾಂಡಿತ್ಯ ಮತ್ತು ಅಪರಿಮಿತ ಕಾವ್ಯಪ್ರೀತಿಯಿಂದ ಮಾತಿನಲ್ಲೇ ಕವನ ಸಂಕಲನ, ಕಥಾ ಸಂಕಲನ, ವಿಮಶರ್ಾ ಸಂಕಲನಗಳನ್ನು ಬರೆದು ಬರೆದು ಓದುಗರ ಕಿವಿಗಳನ್ನು ತುಂಬುತ್ತಿದ್ದ ಅವರು ಇನ್ನಿಲ್ಲ.
ಅವರು ಕಿರಂ ಎಂಬ ಮುಖ, ಕಿರಂ ಎಂಬ ಸಖ.
ಯಾವುದೇ ದೊಡ್ಡ ಸಮಾರಂಭಗಳ ನೈತಿಕ ಬೆಂಬಲದಂತೆ ಕಿರಂ ನಮಗೆ ಇದ್ದರು. ಕನ್ನಡದ ಹೊಸ ಓದುಗ ಮತ್ತು ಬರಹಗಾರರನ್ನು ಪ್ರಭವಿಸಿದ ಅಸ್ತಂಗತ ನಾಯಕರ ಬಗ್ಗೆ ಸಮಾರಂಭ ನಡೆದರೆ ಅಲ್ಲಿ ಹಾಜರಿರುತ್ತಿದ್ದವರು ಕಿರಂ. ಅಡಿಗರ ಬಗ್ಗೆ ಸಮಾರಂಭ ನಡೆದರೆ ಅಡಿಗರನ್ನು ಅಧಿಕೃತವಾಗಿ ಅರ್ಥ ಮಾಡಿಸಲು ಬರುತ್ತಿದ್ದವರು ಕಿರಂ. ಬೇಂದ್ರೆಯ ಕವಿತೆ ಅರ್ಥವಾಗಲಿಲ್ಲವೆಂದರೆ ಅದಕ್ಕೆ ಕಿರಂ ಒಬ್ಬ ಅದ್ಭುತ ರೆಫರೆನ್ಸ್ ಆಗಿರುತ್ತಿದ್ದರು. ಲಂಕೇಶ್ ಎಂದರೆ ಅವರನ್ನು ಹತ್ತಿರದ ಒಡನಾಟ ಮತ್ತು ಅವರ ಆಳ ಅಧ್ಯಯನದಿಂದ ನಮಗೆ ಅರ್ಥ ಮಾಡಿಸಲು ಬರುತ್ತಿದ್ದವರು ಕಿರಂ. ಎಂಥ ಗೊಂದಲ ಏರ್ಪಟ್ಟರೂ ಕಿರಂ ಬರಬಹುದು, ನಮ್ಮ ಗೊಂದಲವನ್ನು ನಿವಾರಿಸಿ ಹರಸಬಹುದೆಂಬ ಭರವಸೆಯಂತೆ ಅವರಿದ್ದರು. ಸಭೆಯಲ್ಲಿ ಯಾವುದೋ ಮೂಲೆಯ, ಯಾವುದೋ ಕುಚರ್ಿಯಲ್ಲಿ ಅವರು ಕೂತಿದ್ದಾರೆ ಎಂದರೂ ಸಾಕಿತ್ತು, ಬಂದು ಮೈಕ್ ಎದುರು ನಿಂತು ಭಷಣ ಮಾಡಬೇಕೆಂದೇ ಇರಲಿಲ್ಲ.
ಕಿರಂ ಕನ್ನಡ ಸಾಹಿತ್ಯಲೋಕದ ಒಬ್ಬ ದ್ರೋಣಾಚಾರ್ಯ. ಅವರು ಕ್ಲಾಸ್ರೂಂನಲ್ಲಿ ಮಾಡುವುದಕ್ಕಿಂತ ಹೆಚ್ಚು ಪಾಠವನ್ನು ಹೊರಗೆ ಮಾಡಿದರು, ಕ್ಲಾಸ್ರೂಂನೊಳಗಿನ ವಿದ್ಯಾಥರ್ಿಗಳಿಗಿಂತ ಇಪ್ಪತ್ತು ಪಟ್ಟು ಹೆಚ್ಚು ವಿದ್ಯಾಥರ್ಿಗಳು ಅವರಿಗೆ ಹೊರಗೆ ಇದ್ದರು. ಕಿರಂ ಮಾತು ಕೇಳಿಕೊಂಡು ಬೇಂದ್ರೆ ಓದುವುದಕ್ಕೆ ಹೊರಟರು, ಅವರ ಭಷಣಗಳಿಂದ ಪ್ರೇರೇಪಿತರಾಗಿ ಅಡಿಗರ ಓದಿಗೆ ಹೊರಟರು. ಲಂಕೇಶ್ ಅವರ ಕಾವ್ಯದ ಗುಹೆಯೊಳಗೆ ಸಾಗಲು ಕಿರಂ ಒಂದು ಹಿರಿ ದೊಂದಿಯಂತೆ ಕಾಣುತ್ತಿದ್ದರು. ಕಿರಂ ಹೊಸಬರ ನಾಟಕಗಳ ಪ್ರದರ್ಶನಕ್ಕೆ ಬರುತ್ತಿದ್ದರು, ಹೊಸಬರ ಸಂಕಲನ ಬಿಡುಗಡೆಗೆ ಬರುತ್ತಿದ್ದರು, ಹೊಸಬರು ಬರೆದರೆ ಆಸಕ್ತಿಯಿಂದ ಓದಿ ವಿಶ್ಲೇಷಿಸುತ್ತಿದ್ದರು. ತಿದ್ದುತ್ತಿದ್ದರು, ತೀಡುತ್ತಿದ್ದರು. ಎಷ್ಟೋ ಸಲ ಶಿಷ್ಯರ ಪ್ರೀತಿಗೆಂದು ಬಂದು, ನಾಟಕ ಪ್ರದರ್ಶನ ಚೆನ್ನಾಗಿಲ್ಲದಾಗ, ಅತ್ತ ಆ ಪ್ರಯೋಗವನ್ನು ಕಟು ವಿಮಶರ್ಿಸಲೂ ಆಗದೇ, ಇತ್ತ ಶಿಷ್ಯರ ಪ್ರಯತ್ನವನ್ನು ಮನಃಪೂರ್ವಕವಾಗಿ ಬಣ್ಣಿಸಲೂ ಆಗದೇ ಸಭ್ಯ ಗೊಂದಲದಲ್ಲೇ, ನಾಲ್ಕಾರು ಪ್ರಿತಿಯ ಮಾತುಗಳನ್ನು ವೇದಿಕೆಯ ಮೇಲೆ ಬಿತ್ತಿ, ವೇದಿಕೆ ಇಳಿಯುತ್ತಿದ್ದರು.
ಕಿರಂ ಸಾಹಿತ್ಯ ಲೋಕದ ಒಬ್ಬ ಸ್ಟಾರ್ ಆದರು, ಅಸಂಖ್ಯ ಅಭಿಮಾನಿಗಳನ್ನು ಗಳಿಸಿಕೊಂಡರು. ದಿನೇದಿನೇ ಸರಳವಾಗುತ್ತಾ ಹೋದರು, ಸುಲಭವಾಗುತ್ತಾ ತಟ್ಟಿದರು, ಕಾವ್ಯದ ದಾರಿಯ ಪ್ರಯಾಣವನ್ನು ಸುಗಮಗೊಳಿಸುತ್ತಾ ಸಾಗಿದರು. ಕ್ಲಿಷ್ಟ ಕಾವ್ಯಗಳು ಅವರ ದನಿಯಲ್ಲಿ ಸರಳವಾದವು, ಅರ್ಥ ಇನ್ನಷ್ಟು ಗಾಢವಾದವು, ಅಂತಃಕರಣ ಇನ್ನಷ್ಟು ತಟ್ಟುವಂಥಾದವು. ಕಾವ್ಯದ ಓದಿನ ಮಾರ್ಗವನ್ನು ಸುಗಮಗೊಳಿಸುವ ಮೇಷ್ಟ್ರಂತೆ, ಕಾವ್ಯವನ್ನು ಹಾಡಂತೆ ಹೇಳಿ ಅನಕ್ಷರನಿಗೂ ಮುಟ್ಟಿಸುವ ಗಮಕಿಯಂತೆ, ಯುಗ ಯುಗಾದಿಗೊಮ್ಮೆ ಗೋಚಾರ ಫಲವನ್ನು ಹೇಳಿ ಭರವಸೆ ಮೂಡಿಸುವ ಜ್ಯೋತಿಷಿಯಂತೆ ಕಿರಂ ಇದ್ದರು.
ಅಂಥ ಕಿರಂ ನಮ್ಮ ಪಾಲಿಗೆ ನಿಜಕ್ಕೂ ಇನ್ನಿಲ್ಲ. ಯಾಕೆಂದರೆ ಕಿರಂ ಅಂಥ ಅಗಾಧ ಪ್ರತಿಭೆಯನ್ನು ತನ್ನೊಳಗಿಟ್ಟುಕೊಂಡೂ ಬರೆಯಲಿಲ್ಲ. ಅವರ ಭಷಣಗಳನ್ನೊಂದು ತಕ್ಕಡಿಯಲ್ಲಿ, ಬರಹಗಳನ್ನೊಂದು ತಕ್ಕಡಿಯಲ್ಲಿ ಇಟ್ಟು ನೋಡಿದರೆ ಅಲ್ಲಿರುವ ತೂಕ ಭಷಣದ್ದೇ ಹೆಚ್ಚು. ಅದು ತೋಂಡಿ ಸಂಸ್ಕೃತಿ. ಅದು ಕಿಂದರಿಜೋಗಿಗಳಂತೆ, ಗೊರವರಂತೆ ಮನೆಮನೆಗಳಿಗೆ ಹಾಡುಗಳನ್ನು, ಸಂಸ್ಕೃತಿಗಳನ್ನು ತಂದುಕೊಡುವವರಂತೆ ಸಾಹಿತ್ಯವನ್ನು ತಂದುಕೊಟ್ಟರು. ಹೊಸ ಹುಡುಗರ ಸಂಕೋಚದ ಪ್ರಶ್ನೆಗಳಿಗೆ, ಪಂಡಿತರ ಸೋಲಿಸುವ ಸವಾಲಿಗೆ, ಅಧ್ಯಯನಾಥರ್ಿಯ ಪ್ರಾಮಾಣಿಕ ಗೋಜಲಿಗೆ ಕಿರಂ ಸಭೆಯಲ್ಲಿ ಉತ್ತರವಾದರು, ವೇದಿಕೆಯಲ್ಲಿ ಉತ್ತರವಾದರು, ಬಸ್ಸಲ್ಲಿ, ಸಿಗರೇಟು ಹೊಗೆಯ ಗೂಡಂಗಡಿ, ಛಾ ಹೊಟೇಲ್, ಚಿಕ್ಕ ಕೋಣೆ, ಬಾರ್, ಬೀದಿ, ಕ್ಲಾಸ್ರೂಂ, ಸೆಮಿನಾರ್ ಹಾಲ್ಗಳಲ್ಲಿ ಉತ್ತರವಾದರು. ಅಂಥ ಪ್ರಶ್ನೆಗಳಿಗೆ ಇನ್ನು ಮುಂದೆ ಇನ್ಯಾರ ಉತ್ತರವೂ ಉತ್ತರವೇ ಅಲ್ಲ ಎಂಬಂಥ ಉತ್ತರ ಆ ಅವಧೂತನ ಜೋಳಿಗೆಯಲ್ಲಿತ್ತು.

ಆದರೆ ಇಂಥ ಜಾದೂ ಜೋಳಿಗೆಯ ಸಾಹಿತ್ಯ ಜೋಗಯ್ಯನನ್ನು ಹೇಗೆ ನೆನಪು ಮಾಡಿಕೊಳ್ಳುವುದು?
ಚೆೆನ್ನಾಗಿ ಭಷಣ ಮಾಡುತ್ತಿದ್ದರು ಎಂದರೆ ಇನ್ನೊಬ್ಬ ಅಪ್ರತಿಮ ಭಷಣಗಾರರನ್ನು ತೋರಿಸಿ ಇಂಥವರು ಪಯರ್ಾಯವಾಗಬಹುದು ಎಂದು ಜನ ಹೇಳಿಬಿಡಬಹುದು. ಒಳ್ಳೆಯ ಚಿಂತಕ ಎಂದರೆ ಮತ್ತೊಬ್ಬ ಚಿಂತಕನನ್ನು ತೋರಿಸಿ, ಅವನಂತೆ ಎಂದು ಯಾರಾದರೂ ಸರಳೀಕರಿಸಬಹುದು. ಭಷಣಗಾರನಾದರೂ ಪಾಂಡಿತ್ಯಪ್ರದರ್ಶಕನಾಗದ, ಜ್ಞಾನಿಯಾದರೂ ಅಹಂಕಾರಿಯಾಗಿ ಕಾಣದ, ಮಾತಿನ ಮೋಡಿಯಲ್ಲಿ ಕವಿಯಾದರೂ ಬರಹದಲ್ಲಿ ಕವಿಯಾಗದ, ಮೇಷ್ಟ್ರಾದರೂ ಪಾಠವಷ್ಟನ್ನೇ ಮಾಡದ- ವಿಶಿಷ್ಟ ತಳಿಯ ಕಿರಂ ಅವರನ್ನು ಕಾಣದ ಹೊಸ ಜನರೇಷನ್ ಒಂದಕ್ಕೆ ಪರಿಚಯಿಸುವುದು ಕಷ್ಟ, ಅರ್ಥ ಮಾಡಿಸುವುದು ಕಷ್ಟ. ನಮ್ಮ ಜನರೇಷನ್ಗೆ ಕಿರಂ ಗೊತ್ತು, ಪುಣ್ಯವಂತರು ನಮಗೆ ಕಿರಂ ಅವರು ಗೊತ್ತು, ಅವರು ನಮ್ಮ ಪಕ್ಕ ಹಾದು ಹೋಗಿದ್ದಾರೆ, ಅವರು ನಮ್ಮ ಭುಜಕ್ಕೆ ತಾಗಿಕೊಂಡು ಸ್ಪರ್ಶಪುಣ್ಯ ದಯಪಾಲಿಸಿದ್ದಾರೆ, ಮಾತಾಡಿ ನಮ್ಮ ಕಿವಿಗಳಿಗೆ ಸ್ಪರ್ಶಭಗ್ಯ ಕರುಣಿಸಿದ್ದಾರೆ, ನಮ್ಮ ಕಣ್ಣುಗಳು ಅವರನ್ನು ಕಾಣುವ, ಆಸ್ವಾದಿಸುವ ಸ್ಪರ್ಶಯೋಗ ಕಲ್ಪಿಸಿದ್ದಾರೆ. ವಿಷಾದನೀಯ ವಿಷಯ ಏನೆಂದರೆ ಅದು ಒಂದು ದಾಖಲೆಯಾಗುವ, ಇನ್ನೊಂದು ನಾಲ್ಕು ಜನರೇಷನ್ಗೆ ಅಕ್ಷರದ ಮೂಲಕ ತಲುಪುವ ಜ್ಞಾನ, ಪ್ರತಿಭೆ ಆಗಲೇ ಇಲ್ಲ. ಅಂದರೆ ಕಿರಂ ಅವರು ತಮ್ಮ ಅತ್ಯಲ್ಪ ಬರಹ ಸಾಹಿತ್ಯದ ಮೂಲಕ ನಮ್ಮ ಮುಂದಿನ ಜನರೇಷನ್ಗೆ ಗೊತ್ತಾದರೆ ಅದರಿಂದ ಅಷ್ಟೇನೂ ಉಪಯೋಗ ಆಗಲಾರದು. ಯಾಕೆಂದರೆ ಅದು ಕಿರಂ ಅವರ ಇಪ್ಪತ್ತೈದು ಶೇಕಡ ಮಾತ್ರ. ಇನ್ನು ಎಪ್ಪತ್ತೈದು ಶೇ. ಕಿರಂ ನಮಗೆ ಅತ್ಯುತ್ತಮ ದಾರ್ಶನಿಕರಾಗಿ ಪರಿಚಿತರಾಗಿದ್ದರು.
ಈಗ ಕಿರಂ ಅವರನ್ನು ಮತ್ತೆ ಮತ್ತೆ ನಾವು ಪರಿಚಯಿಸಿಕೊಳ್ಳಬೇಕು, ಅವರ ೊಡನಾಟವನ್ನು ನೆನಪಿಸಿಕೊಳ್ಳಬೇಕು. ಕಿರಂ ಅವರ ಭಾಷಣಗಳು ೆಷ್ಟು ಧ್ವನಿ ಮುದ್ರಣಗೊಂಡಿವೆಯೋ ಅದೆಲ್ಲಾ ಪುಸ್ತಕ ರೂಪದಲ್ಲಿ ಹೊರಬರಬೇಕು. ಡಾ.ರಾಜ್ ಅವರ ಸಿನಿಮಾ ಹೊರತಾದ ಬುದಕು ದಾಖಲಾಗಿರುವುದೂ ಹಾಗೇ. ಈಗ ಡಾ.ರಾಜ್ ಅವರೆಂದರೆ ರೆಫರೆನ್ಸ್ ಗೆ ಅವರನ್ನು ಅಭ್ಯಸಿಸುವುದಕ್ಕೆ ಅನೇಕ ಗ್ರಂಥಗಳು, ಅಲೇಖಣಗಳು ಇವೆ. ಕನ್ನಡದ ಾಸಕ್ತರ ಕಣ್ಣನ್ನು, ಕನ್ನಡ ಸಾಹಿತ್ಯ- ಅದರಲ್ಲೂ ಮುಖ್ಯವಾಗಿ ಕನ್ನಡ ಕಾವ್ಯ-ದ ಕಣ್ಣನ್ನು ತೆರೆಸಿದ ಈ ಕಣ್ಣಪ್ಪನ ಬಗ್ಗೆ ನೂರಾರು ಲೇಖನಗಳು, ಪುಸ್ತಕಗಳು, ಅವರ ಆತ್ಮಚರಿತ್ರೆಗಳು ಬರಬೇಕು.
ಯಾರೇ ಸತ್ತರೂ ಅವರ ಸಾವಿನ ಕೆಲವು ತಿಂಗಳುಗಳಷ್ಟೇ ಅದರ ಸ್ಮರಣೆ ಇರುತ್ತದೆ. ಕ್ರಮೇಣ ಅದು ಅಳುವಿನ ಸದ್ದಂತೆ ಕ್ಷೀಣಿಸುತ್ತದೆ. ಕಿರಂನಂಥ ಸಾಧಕನ ವಿಷಯದಲ್ಲೂ ಹಾಗಾಗಬಾರದು. ಈಗ ಅವರ ನೆನಪುಗಳು ಹತ್ತಿರದ ಒಡನಾಟ ಇಲ್ಲದವರನ್ನೇ ಇಷ್ಟೊಂದು ಕಾಡುತ್ತಿರುವಾಗ ಪರಮಾಪ್ತನ ಮನಸ್ಸನ್ನು ಇನ್ನೆಷ್ಟು ಕಾಡಿಸಬೇಕು. ಈ ಕಾಡುವ ಹೊತ್ತಲ್ಲೇ ಏನಾದರೂ ಬರಹ ನೆನಪುಗಳು ಪುಸ್ತಕ ಲೋಕವನ್ನು ದಂಡಿದಂಡಿ ತುಂಬಬೇಕು. ಅಕ್ಷರವನ್ನು ಪ್ರೀತಿಸುವ ಜೀವಿಗೆ ಅದಕ್ಕಿಂತ ಇನ್ನೆಂಥ ಶ್ರದ್ಧಾಂಜಲಿ ಬೇಕು?
ಚಿತ್ರ ಎರವಲು: ಸುಶ್ರುತ ದೊಡ್ಡೇರಿ