Tuesday, March 30, 2010

ಕವಿತೆ ಕೇಳಿದೆ, ಧೂಳು ಹಿಡಿದು ಎಷ್ಟು ದಿನಗಳಾದವು?

ಲೇಖನ, ಕತೆ, ವಿಮರ್ಶೆ, ವಾದ, ವಿವಾದ, ಪ್ರಮಾದ, ವಿಷಾದ ಪತ್ರಗಳ ರಾಶಿಯ ಮಧ್ಯೆ ಮುಗ್ಧವಾಗಿ ಸಿಗುವುದು ಹಾಗೂ ಹಾಯಾಗಿ ನಗುವುದು ಎಂದರೆ ಅದು ಕವಿತೆ ಮಾತ್ರ. ಅಂಥ ಹೊಸ ಕವಿತೆ, ನಿಮಗಾಗಿ...


 


ನಾನು ನಾನಾಗಿಯೇ

ಈ ಬೀದಿಗಳಲ್ಲಿ ಓಡಾಡುವುದಿಲ್ಲ.

ನನ್ನ ಕಾಲ್ಗಳು ಒಂದೆಡೆ,

ನನ್ನ ಭಾವನೆ ಒಂದೆಡೆ

ನನ್ನ ಬುದ್ಧಿ ಒಂದು ಕಡೆ,

ನನ್ನ ಸಂಬಂಧ, ನನ್ನ ಪ್ರೀತಿ

 ನನ್ನ ದ್ವೇಷ, ನನ್ನ ರೋಷ,

ನನ್ನ ಅರ್ಧ ಕನಸು,

ನನ್ನ ಪಾಪಪ್ರಜ್ಞೆ ಒಂದೊಂದು ಬೀದಿಗಳಲ್ಲಿ

ರಾತ್ರೋರಾತ್ರಿ

ಅಥವಾ

ಹಾಡ ಹಗಲು ತಿರುಗುತ್ತಿರುತ್ತವೆ.

ನೀವು ಹೇಳುತ್ತೀರಿ: ನೋಡಲ್ಲಿ

ಅವನೊಬ್ಬನೇ ಹೋಗುತ್ತಿದ್ದಾನೆ

ಅಥವಾ

ಅರೆ, ಅವನು ಯಾರ ಜೋಡಿನೋ ಹೋಗ್ತಾ ಇದಾನೆ?

ಪ್ಯಾಂಟ್ ಜೇಬಲ್ಲಿ ಕೀಲಿಕೈ,

ಷರ್ಟ್ ಜೇಬಲ್ಲಿ ಪೆನ್ನು, ಪಾಸು,

ದೇಹದ ಸಕಲ ಸ್ಥಳಗಳಲ್ಲಿ ನಮ್ಮ ಅಸ್ತಿತ್ವದ ದಾಖಲೆ,

ಪತ್ರಗಳೊಡನೆ ಉಣ್ಣುವ, ಉಸುರುವ,

ಚೀರುವ, ಕಾರುವ, ನಗುವ,

ಸುಳ್ಳು, ಸತ್ಯಗಳ ಗೊತ್ತಾಗದಂತೆ

ಮಾತುಗಳ ಗ್ಲಾಸ್ ನಲ್ಲಿಟ್ಟು

ಮಿಶ್ರಣ ಮಾಡಿ ಕುಡಿವ, ಕುಡಿಸುವ

ನಮ್ಮನ್ನು ನೋಡಿ ನೀವ್ಯಾರಿಗೋ ಪರಿಚಯಿಸುತ್ತೀರಿ:

ನೋಡಿ, ಇವನು ಒಳ್ಳೆ ಹುಡುಗ,

ಒಳ್ಳೆ ಕಂಪನಿಯಲ್ಲಿದ್ದಾನೆ, ಕೈ ತುಂಬ ಸಂಬಳ.

 ಬಾಗಿಲು, ಕಿಟಕಿ, ಗೋಡೆ,

ಸೂರು, ಡೋರ್ ಲಾಕ್, ಗ್ರಿಲ್,

ಕರ್ಟನ್, ಸರಳು, ಅಡುಗೆ ಮನೆ ಹೊಗೆ ನಳಿಕೆ,

ಪೀಪ್ ಹೋಲ್, ಗೇಟುಗಳುಂಟು ಮನೆಗಳಿಗೆ,

ಅದಕ್ಕೇ ಈ ಜಗತ್ತಲ್ಲಿ ನಾನು ಒಳ್ಳೆಯವ,

ಅವರು ಉತ್ತಮರು, ಇವರು ದೇವರಂಥವರು,

ಮತ್ತವನು ಸಜ್ಜನ, ಸನ್ನಡತೆಯ ಸುಕುಮಾರ,

ಸುಸಂಸ್ಕೃತ, ಮುಗ್ಧ ನಗು, ವ್ಯಕ್ತಿತ್ವ ಸಾದಾಸೀದ,

ನೇರ ನಡೆನುಡಿಯ ಪ್ರೀತಿಪಾತ್ರ,

ಸನ್ಮಿತ್ರ.

ಓಟಲ್ ಲಿಸ್ಟ್, ಟೆಲಿಫೋನ್ ಡೈರೆಕ್ಟರ್

ತೆಗೆದರೆ ತಲೆ ತಿರುಗುತ್ತದೆ,

ಎಲ್ಲಾ ಹೆಸರುಗಳೂ ಅಂಗಿ, ಚೆಡ್ಡಿ ತೆಗೆದಂತೆ

ಬೆತ್ತಲಾಗಿ,

ಎಲ್ಲವನ್ನೂ ಒತ್ತೆಯಿಟ್ಟಂತೆ

ಕತ್ತಲಾಗಿ

ಒಂದಾದ ಮೇಲೆ ಒಂದು ಬರುತ್ತಾ ಹೋಗುತ್ತವೆ

ಅಕಾರಾದಿಯಾಗಿ.

ಟೇಬಲ್ ಮೇಲೆ ಅಕ್ಷಾಂಶ ರೇಖಾಂಶದ

ಭೂಗೋಳ ಸುತ್ತುತ್ತದೆ,

ಗೋಡೆಯಲ್ಲಿ ಅರಬ್ಬೀಸಮುದ್ರ, ಪೆಸಿಫಿಕ್ ಸಾಗರದ

ಭೂಪಟ ಗಾಳಿಗೆ ಹಾರುತ್ತಿದೆ,

ಅಪ್ಪ, ಅಜ್ಜ, ಮುತ್ತಜ್ಜನ ಫೋಟೋಗಳ

ಮೇಲೆಲ್ಲಾ ಧೂಳು ಹಿಡಿದು ಎಷ್ಟು ದಿನಗಳಾದವು?

Tuesday, March 16, 2010

ಅರ್ಧಕ್ಕೇ ಎದ್ದು ಬಂದಿರಾ, ಕತೆಯ ಒಳಗಿಂದ?

ಕಳ್ಳ ಕುಳ್ಳ ಮತ್ತು ಈ ಬ್ಲಾಗರ್ ಗಳ ಕಳ್ಳುಬಳ್ಳಿ ಸಂಬಂಧ ಆಗಾಗ ತಪ್ಪುತ್ತದೆ, ಆಗಾಗ ಅಪ್ಪುತ್ತದೆ. ಅನೇಕ ಅಡೆತಡೆಗಳ ಮಧ್ಯೆಯೂ ಮತ್ತೆ ಬರೆಯುವ ಆಸೆ, ಉತ್ಸಾಹ, ಪ್ರೀತಿ ಕಾಡುತ್ತಲೇ ಇದೆ. ಸದ್ಯ ‘ಸುವರ್ಣ ನ್ಯೂಸ್’ ಚಾನೆಲ್ ನಲ್ಲಿ ಕೆಲಸದಲ್ಲಿರುವ ನಾವಿಬ್ಬರು, ಮತ್ತೆ ಏನಾದರೂ ಬರೆಯುವ ಆಸೆಯೊಂದಿಗೆ ಮರಳಿದ್ದೇವೆ. ಇತ್ತೀಚೆಗೆ ಕಾಡಿದ, ಕೆಣಕಿದ ಒಂದಿಷ್ಟು ಸಂಗತಿಗಳ ಬರೆವಣಿಗೆಯ ಫಲ, ಈ ಮೊದಲ ಪೋಸ್ಟ್. ಮುಂದೆ ನಿಮ್ಮ ಜೊತಂ ಕವಿತೆ, ಕತೆಗಳನ್ನೆಲ್ಲಾ ಹಂಚಿಕೊಳ್ಳಿಕ್ಕಿದೆ. ನಾವು ಮತ್ತೆ ಫೀಲ್ಡಿಗಿಳಿದಿದ್ದೇವೆ. ಇನ್ನು ನಿರಂತರ ಆಡುತ್ತೇವೆ. ರನ್, ರನ್ ಆಂಡ್ ರನ್ ಫಾರ್ ನಾಟ್ ಔಟ್!



1.

ಅಲ್ಲಿ ಇಡೀ ಗೋಕುಲವೇ ನೆರೆದಿದೆ. ಕೃಷ್ಣನ ಕೊಳಲನ್ನು ಆಲಿಸಿ ಮುಪ್ಪಿನ ಕೀಲುಗಳೂ, ದವಡೆಯ ಜೋಲುಗಳೂ ಉತ್ಸಾಹಗೊಂಡಿವೆ. ಮಗ್ಗುಲ ಹಸುಗೂಸ ಮರೆತ, ಪಕ್ಕದ ಗಂಡನ್ನ ತೊರೆದ ಗೋಪಿಕೆಯರೆಲ್ಲಾ ಕೃಷ್ಣನಿಗಾಗಿ ಹೊರಟು ಬಂದಿದ್ದಾರೆ. ಕೃಷ್ಣ ಮಥುರೆಗೆ ಹೋಗುವುದಕ್ಕೆ ಮುನ್ನ ಅವನನ್ನೊಮ್ಮೆ ಕಣ್ತುಂಬ ನೋಡತೊಡಗಿದ್ದಾರೆ. ಸಭೆಯ ಗೋಪಿಕೆಯರ ಮನಸ್ಸೂ ಆ ಕೃಷ್ಣನ ಪ್ರೀತಿಗೆ ಒಳಗೊಳಗೇ ಕೈಚಾಚುತ್ತದೆ, ಅವನ ಭಕ್ತಾನುಕಂಪೆಗೆ ಜೋಂಪಿನಂತೆ ಪ್ರತಿಕ್ರಿಯಿಸುತ್ತಿದೆ. ಆದರೆ ಆ ಗೋಕುಲದ,ಆ ಬೃಂದಾವನದ ಕೃಷ್ಣನನ್ನು ಕೂಡುವುದಕ್ಕೆ ಐಹಿಕವಾದ ಅಡ್ಡಿಗಳಿವೆ ಸಾಕಷ್ಟು. ಆ ಪಾರಮಾರ್ಥಿಕದ ಪ್ರೀತಿಗೆ ಸೋತು ಓಡಿಹೋಗುವುದಕ್ಕೆ ನಮ್ಮ ಪ್ರಾಪಂಚಿಕ ಅಡಚಣೆಗಳು ತಡೆಯುತ್ತಿವೆ. ಗೋಕುಲದ ಸುಖದಲ್ಲಿ ಮೈಮರೆತ ಅಂಥ ಜಗನ್ನಿಯಾಮಕ ಕೃಷ್ಣನನ್ನೇ ಮಧುರೆಯ ಬಿಲ್ಲಹಬ್ಬ ನೆಪವಾಗಿ ಕರೆಯಿತು, ನಮ್ಮ ಮನೆ, ಮಠ, ಮಗು, ಮೊಬೈಲು, ಸೀರಿಯಲ್ಲು ಇತ್ಯಾದಿ ಸಕಲ ಆಕರ್ಷಣೆಗಳು ಕೈ ಹಿಡಿದೆಳೆಯವೇ, ಚಕ್ಕಳಮಕ್ಕಳ ಕುಳಿತ ನಮ್ಮೀ ಆಸಕ್ತಿಯನ್ನು ವಿಚಲಿತಗೊಳಿಸವೇ?

ನಾವು ಹೊರಡುತ್ತೇವೆ, ಅರ್ಧಕ್ಕೇ. ತನ್ಮಯವಾಗಿ ಕೂತ ದೇಹಗಳ, ಏಕಾಗ್ರ ಮನಸ್ಸುಗಳ ಸಂದಣಿಯಿಂದ ಒಂದೊಂದೇ ದೇಹಗಳು, ಮನಸ್ಸುಗಳು, ಅರೆ ಮನಸ್ಸುಗಳು ಎದ್ದು ಹೋರಡುತ್ತವೆ. ಒಳ್ಳೆಯ ನಾಟಕ, ಒಳ್ಳೆಯ ಸಂಗೀತ ಕಚೇರಿ, ಒಳ್ಳೆಯ ಸಿನಿಮಾ, ಒಳ್ಳೆಯ ಯಕ್ಷಗಾನ, ಒಳ್ಳೆಯ ಸಭೆ, ಪುಸ್ತಕ ಬಿಡುಗಡೆ, ಉಪನ್ಯಾಸಗಳಿಂದ ಹೀಗೆ ಕಳಚಿಕೊಳ್ಳುವ ಕ್ರಿಯೆ, ದೇಹದಿಂದ ಪ್ರಾಣ ಕಳಚಿಕೊಂಡಷ್ಟೇ ದುಃಖಕರ, ವಿಷಾದಕರ. ಆದರೂ ನಾವು ಚಿಂತಿಸುತ್ತೇವೆ, ಅರ್ಧಕ್ಕೆ ಹೋಗುವುದು ಅವರವರ ಅರಸಿಕತೆಯ ದ್ಯೋತಕವೇ? ಮುಗಿದ ಮೇಲೆ ಹೋದರಾಗದೇ ಎಂದು ನಾವು ನೀವು ವಾದಿಸಿದರೆ ಮುಗಿಯುವ ಹೊತ್ತಿಗೆ ಆ ಜನಗಳಿಗೆ ಒಂದು ಮುಖ್ಯ ಕೆಲಸ ತಪ್ಪಬಹುದು. ಮನೆಗೆ ಹೋಗುವುದಕ್ಕೆ ಬಸ್ಸು, ಸರಿಯಾದ ಸಮಯಕ್ಕೆ ಹೋಗಬೇಕಾದಲ್ಲಿಗೆ ಹೋಗದಿದ್ದರೆ ಊಟ, ವಸತಿಗಳೆಲ್ಲಾ ತಪ್ಪಬಹುದು. ಇದೊಂದೇ ಕಾರಣಕ್ಕಾಗಿ ಅರಸಿಕತೆಯ ಪಟ್ಟ ಕಟ್ಟಬಾರದು, ಪಾಪ ಪಾಪ.

ಯಾಕೋ ಕಾಡುವುದಕ್ಕಾಗಿಯೇ ನಮಗೆ ಈ ಜಗತ್ತು ಒಂದಿಷ್ಟನ್ನ ಅರ್ಧವೇ ಉಳಿಸಿ ಹೋಗಿರುತ್ತದೆ. ಅರ್ಧಕ್ಕೇ ಹೊರಟು ಹೋಗುವುದರಲ್ಲಿ ಒಂದು ಕಲಾತ್ಮಕ ಅಪಚಾರ ಇದೆ. ನಾವು ನೋಡಿದಷ್ಟನ್ನೇ ಮನಸ್ಸಲ್ಲಿ ಮೆಲುಕು ಹಾಕುವುದಕ್ಕೆ ಪ್ರಾರಂಭ ಮಾಡುತ್ತೇವೆ. ನೋಡಿದ್ದಷ್ಟನ್ನೇ ಎಂದರೆ ಇನ್ನೂ ಇದೆ ಎಂದು ಗೊತ್ತಿರುವ, ಆದರೆ ಮುಂದೇನೆಂದು ಗೊತ್ತಿರದ ಸಂಗತಿಯನ್ನು. ಮನೆಗೆ ಹೋಗುವವರೆಗೂ ಆ ಒಂದು ಪ್ರಸಂಗ ನಮ್ಮ ಮನಸ್ಸಲ್ಲೇ ಕೊರೆಯತೊಡಗುತ್ತದೆ. ಯಾವುದೋ ಎಸ್ಸೆಮ್ಮೆಸ್ ಓದಿ ಮುಗಿದ ನಂತರವೂ, ಊಟ ಮಾಡಿದ ನಂತರವೂ, ಕಾರ್ಯಕ್ರಮದಿಂದ ತೆರಳಿ, ನಕ್ಕು, ಯಾವುದೋ ಸೀರಿಯಲ್ ನೋಡಿ, ಕಾಮಿಡಿ ದೃಶ್ಯಕ್ಕೆ ನಕ್ಕು ಮಲಗಿ, ನಿದ್ದೆ ತಿಳಿದು ಎದ್ದ ಮೇಲೂ ಆ ಕಾರ್ಯಕ್ರಮ ಮರು ಪ್ರಸಾರವಾಗುತ್ತಲೇ ಇರುತ್ತದೆ ಅನವರತ.

ಪ್ರತಿಯೊಬ್ಬರ ಬಾಲ್ಯದಲ್ಲೂ ಒಂದೊಂದು ಅರ್ಧವೇ ನೋಡಿದ ಕಲಾ ಪ್ರಕಾರಗಳಿವೆ. ಟೀವಿಯಲ್ಲಿ ಪ್ರಸಾರವಾಗುವ ಸಿನಿಮಾಗಳೆಲ್ಲಾ ಕರೆಂಟು ಕೈಕೊಟ್ಟ ಕಾರಣಕ್ಕಾಗಿ ಅರ್ಧ ಮಾತ್ರ ಗೊತ್ತಾಗಿದ್ದೆಷ್ಟೋ ಇವೆ. ಬಹಳ ಹಿಂದೆ ದೂರದರ್ಶನವೊಂದೇ ಮನರಂಜನೆಯ ಮಾಧ್ಯಮ ಆಗಿದ್ದಾಗ ದೂರದರ್ಶನದಲ್ಲೇ ಕರೆಂಟು ಹೋಗಿ, ಸಿನಿಮಾ ಪ್ರಸಾರವೇ ರದ್ದಾದ ಪ್ರಸಂಗಗಳಿವೆ. ನಿದ್ದೆಗಣ್ಣಲ್ಲೇ ಕಾಣುತ್ತಾ ಕುಳಿತ ಯಕ್ಷಗಾನ ಪ್ರಸಂಗದಿಂದ ಅಪ್ಪ ಬಲತ್ಕಾರದಿಂದ ಎಬ್ಬಿಸಿಕೊಂಡು ಬಂದು, ಹಾಸಿಗೆಗೆ ಹಾಕಿದ ಕಾರಣಕ್ಕಾಗಿ ಅಥವಾ ತನಗೇ ಗಾಢ ನಿದ್ದೆ ಹತ್ತಿ ಯಕ್ಷಗಾನ ಪ್ರಸಂಗವನ್ನು ಉಳಿದರ್ಧ ಮಿಸ್ ಮಾಡಿಕೊಂಡ ಹುಡುಗರು ಮಲೆನಾಡಿನಲ್ಲಿ ಸಹಸ್ರ ಸಹಸ್ರ ಸಂಖ್ಯೆಯಲ್ಲಿದ್ದಾರೆ. ಸಂಗೀತ ಕಚೇರಿಗಳಲ್ಲಂತೂ ಎಷ್ಟು ಸಲ ಅರ್ಧ ಮಾತ್ರ ಕೂರುವುದಕ್ಕೆ ಸಾಧ್ಯವಾಗಿ, ಬಸ್ಸು ತಪ್ಪುವ ಕಾರಣಕ್ಕೆ, ತುಂಬ ಸಮಯ ಆಯಿತೆಂಬ ಸಬೂಬಿಗೆ ಅನ್ಯಾಯವಾಗಿ ಸಂಗೀತದ ಸವಿ ಅರ್ಧವೇ ಪ್ರಾಪ್ತವಾಗಿದೆ.

ಹಾಸ್ಟೆಲ್ ನಲ್ಲಿ ವಾಸ ಮಾಡುತ್ತಾ, ಕಾಲೇಜು ಪೂರೈಸಿದವರಿಗೆ ಹೀಗೆ ಅರ್ಧ ಮಾತ್ರ ನೋಡಲಿಕ್ಕೆ ಸಾಧ್ಯವಾದ ಕಾರ್ಯಕ್ರಮ, ಸಿನಿಮಾ, ಆರ್ಕೆಷ್ಟ್ರಾ, ನಾಟಕ, ಯಕ್ಷಗಾನಗಳು ಅದೆಷ್ಟೋ? ಇಂಥ ಸಮಯಕ್ಕೆ ಹಾಸ್ಟೇಲ್ ನಲ್ಲಿರಬೇಕೆಂಬ ಕಟ್ಟುನಿಟ್ಟಿನ ನಿಯಮ ಇದ್ದಾಗ, ನೋಡುತ್ತಿರುವ ಕಾರ್ಯಕ್ರಮ ಮುಗಿಯದೇ ಹೋದಾಗ ಸೀಟಿನಿಂದ ಮನಸ್ಸಿಲ್ಲದ ಮನಸ್ಸಿನಿಂದ ಎದ್ದು, ಹಿಂದೆ ಹಿಂದೇ ನೋಡುತ್ತಾ, ನಿಂತು ಸ್ವಲ್ಪ ನೋಡುತ್ತಾ, ಆ ಕಾರ್ಯಕ್ರಮ ಕಣ್ಣ ಕೊನೆಗೆ ಕಾಣುವವರೆಗೂ ಆಸ್ವಾದಿಸುತ್ತಾ, ತನ್ನ ವಿಧಿಯನ್ನು ಹಳಿಯುತ್ತಾ ಹಾಸ್ಟೇಲ್ ಸೇರಿಕೊಂಡವರ ಸಂಖ್ಯೆ ಎಷ್ಟಿಲ್ಲ?

ಕ್ಷಣಕಾಲ ಕಣ್ಮುಚ್ಚಿ, ನೆನಪಿನ ಗಣಿಗೆ ಕಿವಿ ಹಚ್ಚಿ ಕೇಳಿಸಿಕೊಳ್ಳೋಣ, ಕಾಣಿಸಿಕೊಳ್ಳೋಣ.