Wednesday, February 24, 2010

ಪಟ್ಟಿ ಕಟ್ಟಿಕೊಳ್ಳಿ ಕಣ್ಣಿಗೆ




[caption id="attachment_288" align="alignleft" width="248" caption="ಕಣ್ಣಿಗೆ ಬಟ್ಟೆ ಇರುವವರೆಗೆ"][/caption]

ಏನೇನೋ ನೋಡಬೇಕಿದೆ ಇನ್ನು ಮುಂದೆ,
ಹೊರಡುವ ಮೊದಲು

ಬಟ್ಟೆ ಕಟ್ಟಿಕೊಳ್ಳಿ ಕಣ್ಣಿಗೆ.

ಕಣ್ಣುಗಳಿಗೆ ಕಟ್ಟಿದ ಬಟ್ಟೆಗಾಗಿ

ತೆರಿಗೆ ತೆತ್ತ

ಜನ ಈ ಜಗತ್ತಿನಲ್ಲಿ ಯಾರೂ ಇಲ್ಲ.

ನೀರಿಗಿರುವ, ನೆಲಕ್ಕಿರುವ, ದುಡಿಮೆ, ಖರ್ಚಿಗಿರುವ

ತೆರಿಗೆ, ಬಟ್ಟೆಗಿಲ್ಲ...

ನಾವು ಎಲ್ಲರೂ ಹಾಕಿಕೊಂಡ

ಆ ಸಾಮೂಹಿಕ ಪಟ್ಟಿಯ ಹಿಂದೆ

ಎಲ್ಲ ಸತ್ಯಗಳೂ, ಎಲ್ಲಾ ಮಿತ್ಯಗಳೂ

ಅವರವರು ಅರಿತುಕೊಂಡಂತೆ.

ನಮ್ಮ ಅರಿವು, ನಮ್ಮ ಮರೆವು

ಜಗತ್ತಿನ ಸುಗಮ ನಡುಗೆಗೆ

ಧಕ್ಕೆ ಆಗದಿರಲಿ.

ಹೆಜ್ಜೆಗಳು ತಪ್ಪಬಹುದು, ಮನಸ್ಸುಗಳು ಜಾರಬಹುದು

ಎಲ್ಲೆಗಳನ್ನು ಮೀರಬಹುದು,

ಸಣ್ಣ ಸಣ್ಣ ಸಮಸ್ಯೆಗಳ ಮಧ್ಯೆ

ಸಿಲುಕುತ್ತಿದ್ದವ

ಈಗ ದೊಡ್ಡ ಸಮಸ್ಯೆಗಳನ್ನ ತಾನೇ

ಹುಟ್ಟುಹಾಕಿ ತನ್ನ ಇನ್ನೊಂದು ಆಕರ್ಷಕ

ತಪ್ಪುಗಳ ಮೂಲ ಅದನ್ನು ಗೆಲ್ಲಬಹುದು.

ಅಷ್ಟಕ್ಕೂ ಗೆಲುವೆಂಬುದು

ಯಾರ ಸೋಲಿನ ವಿರುದ್ಧಾರ್ಥಕ ಪದ



?
ಪಟ್ಟಿಗಳ ಕಟ್ಟಿಕೊಂಡ ಗಾಂಧಾರಿ ಇರುವವರೆಗೂ

ಅಲ್ಲೊಂದು ಕೌರವರ ಅಟ್ಟಹಾಸವಿರುತ್ತದೆ,

ಪಾಂಡವರ ವಿಜಯವಿರುತ್ತದೆ.

ದ್ರೌಪದಿಯ ಹೆರಳು, ಕುಂತಿಯ ನರಳು

ಕರ್ಣನ ಔದಾರ್ಯದ ಉರುಳು

ಸಾಗುತ್ತಿರುತ್ತದೆ.

ಗಾಂಧಾರಿಯ ಕಣ್ಣ ಸುತ್ತಾ ಬಟ್ಟೆಯ ಗುರುತು,

ಪಾಂಡವರ ಪಕ್ಷಪಾತಿ ಕೃಷ್ಣನ ಸುತ್ತ,

ದೃತರಾಷ್ಟ್ರನ ಕುರುಡಿನ ಸುತ್ತ

ಕೌರವರ ದುರಾದೃಷ್ಟದ ಸುತ್ತ

ಈ ಪಟ್ಟಿಯ ಕಲೆಗಳು ಇದ್ದೇ ಇದ್ದವು,
ಕಲೆಗಳಿಗೆ ಸಾಕ್ಷಿಪ್ರಜ್ಞೆ ಬರುವವರೆಗೆ

ಲಲಿತ ಕಲೆ,

ಕಣ್ಣಿಗೆ ಬಟ್ಟೆ ಇರುವವರೆಗೆ

ಕವಿಗೆ ಬೆಲೆ.