Tuesday, December 29, 2009

ಅಪಶ್ರುತಿ ತೆಗೆಯುತ್ತೇನೆ, ಬನ್ನಿ ಒಮ್ಮೆ ಬೈದುಬಿಡಿ!




[caption id="attachment_284" align="alignleft" width="102" caption="ಚಿತ್ರಕೃಪೆ: ಹಿಂದೂ"][/caption]

ಕಾಲೇಜು ಓದುತ್ತಿದ್ದ ಕಾಲ. ಅಶ್ವತ್ಥ್ ಅವರ ಸಂಗೀತದಲ್ಲಿರುವ ಹುರುಳನ್ನು ತಿಳಿಯದ, ಅದರ ಔಚಿತ್ಯ ಗೊತ್ತಿಲ್ಲದ ನಾನು ಸೇರಿದಂತೆ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ನಾವೊಂದು ಎಂಟು ಮಂದಿ ಉಜಿರೆಯಿಂದ ಮಂಗಳೂರಿಗೆ ಹೋದೆವು.



ಅದು ಮುಂದೆ 2000 ಎಂಬ ಸಹಸ್ರಮಾನವನ್ನು ಆಹ್ವಾನಿಸಲು ಅಶ್ವತ್ಥ್ ಸಿದ್ಧಪಡಿಸಿದ್ದ ಒಂದು ಕಾರ್ಯಕ್ರಮ. ಅದರ ಪ್ರಕಾರ 1999ರ ಡಿಸೆಂಬರ್ 31ಕ್ಕೆ ರಾತ್ರಿ ಬೆಂಗಳೂರಿನ ನ್ಯಾಷನಲ್ ಕಾಲೇಜಿನ ಮೈದಾನದಲ್ಲಿ ಒಂದು ಸಾವಿರ ಮಂದಿ ಹಾಡಬೇಕು. ಅದಕ್ಕೆ ಹೆಸರು: ‘ಹೊಸ ಸಹಸ್ರಮಾನಕ್ಕೆ ಸಪಸ್ರ ಕಂಠದ ಗಾಯನ’. ಅದಕ್ಕಾಗಿ ಕರ್ನಾಟಕದ ಬೇರೆ ಬೇರೆ ಕಡೆ ಪೂರ್ವಭಾವಿ ತರಬೇತಿ. ಅದರಲ್ಲಿ ನಾನು ನನ್ನ ತಮ್ಮ ಹೋಗಿದ್ದೆವು.

ಒಂದು ದಿನವಿಡೀ ಅಶ್ವತ್ಥ್ ಅವರಿಂದ ತರಬೇತಿ ಪಡೆದುಕೊಳ್ಳುವ ಒಂದು ಅಪೂರ್ವ ಅವಕಾಶ ನಮಗಿತ್ತು. ಆದರೆ ಆ ಕಾಲಕ್ಕೆ ಅವರೊಬ್ಬ ಅಷ್ಟು ಮಹಾನ್ ಗಾಯಕ ಎಂಬ ಅಂಥ ದೊಡ್ಡ ಕಲ್ಪನೆ ನನ್ನ ಹುಡುಗುಬುದ್ಧಿಗೆ ಹೊಳೆದಿರಲಿಲ್ಲವೇನೋ?

ಆದರೂ ಅವರಿಂದ ಕಲಿತ ಹಾಡುಗಳು ಈಗಲೂ ಒಂದೊಂದೂ ಸ್ಮರಣೀಯ. ಕುವೆಂಪು ಅವರ ಕ್ರಾಂತಿ ಗೀತೆಗಳ ಅರಿವು, ಅದರ ಸ್ವಾದ, ಸಂಗೀತದ ಜೊತೆ ಅದನ್ನು ಉಣಬಡಿಸಿದ ರೀತಿ, ಅಶ್ವತ್ಥ್ ಕಲಿಸುವ ರೀತಿ... ಹೀಗೆ ಎಲ್ಲವೂ ಒಂದೊಂದೂ ನೆನಪಾಗುತ್ತದೆ ಈಗ.

[caption id="attachment_285" align="alignleft" width="180" caption="ನಾನು, ನನ್ನ ಸಹೋದರ ವಿಶ್ವಾಸ್"][/caption]

ಆದರೆ ಒಂದು ಹಂತ ಎದುರಾಯಿತು. ನನ್ನ ಹಿಂದೆ ಯಾರೋ ಅಪಶ್ರುತಿ ತೆಗೆಯುತ್ತಿದ್ದರಂತ ಕಾಣಿಸುತ್ತದೆ. ಎರಡು ಮೂರು ಸಲ ನನ್ನ ಕಡೆ ನೋಡಿದರು ಅಶ್ವತ್ಥ್. ನಾನು ಅಷ್ಟೊಂದು ಗಮನ ಹರಿಸದೇ ನನ್ನ ಪಾಡಿಗೆ ಹಾಡುತ್ತಿದ್ದೆ. ಆದರೆ ಮತ್ತೊಂದು ಸಲ ನನ್ನ ಕಡೆಯಿಂದ ಅಪಶ್ರುತಿ ಬಂದಾಗ ಅಶ್ವತ್ಥ್ ಕೆರಳಿದರು.

‘ಅಯ್ಯೋ ಏನ್ರೀ ಹಾಗ್ ಅಪಶ್ರುತಿ ತೆಗೀತೀರಿ, ಸರಿಯಾಗ್ ಹಾಡೋಕ್ ಬರ್ದಿದ್ರೆ ಯಾಕ್ರೀ ಬರ್ತೀರಿ ಇಲ್ಗೆಲ್ಲಾ, ಸರಿಯಾಗ್ ಹಾಡೋಕ್ ಏನ್ ತೊಂದ್ರೆ ನಿಮ್ಗೆ?’

ಬೈಗಳವನ್ನೂ ತಾರಕದಲ್ಲೇ ಹೇಳಿದರು.

ಆದರೆ ನಾನು ಆ ದಿನ ನಿಜಕ್ಕೂ ಅಪಶ್ರುತಿಯಲ್ಲಿ ಹಾಡಿರಲಿಲ್ಲ. ಹಿಂದಿನವರು ಅಪಶ್ರುತಿ ತೆಗೆದಿದ್ದು ತಾವು ಎಂದು ಒಪ್ಪಿಕೊಳ್ಳಲಿಲ್ಲ.

ಅದಾದ ಮೇಲೆ ಅಲ್ಲಿ ಕಲಿತ ಹಾಡುಗಳನ್ನು ಮಂಗಳೂರಿನಲ್ಲಿ ಹಾಡಿದೆವು. ಹಾಡು ಚೆನ್ನಾಗಿ ಬಂದಾಗ ಅಶ್ವತ್ಥ್ ನಮ್ಮನ್ನು ಅಭಿನಂದಿಸಿದರು. ‘ಮಂಗಳೂರಿನವರು, ಚೆನ್ನಾಗ್ ಹಾಡ್ತೀರ್ರೀ’ ಅಂತ ಉಬ್ಬಿಸಿದರು ನಮ್ಮನ್ನು. ಮುಂದೆ ಬೆಂಗಳೂರಿಗೆ ಬಂದಾಗ, ನಮ್ಮ ಕಡೆ ಬಂದು. ‘ನೀವು ಮುಂದೆ ಬನ್ರೂ, ನೀವ್ ಮಂಗಳೂರಿನೋರು ಚೆನ್ನಾಗಿ ಹಾಡ್ತೀರಿ’ ಎಂದು ಹುರಿದುಂಬಿಸಿದರು.

ಅದು ಇವತ್ತಿಗೂ ಅಶ್ವತ್ಥ್ ಅವರಿಗೆ ಗೊತ್ತಿಲ್ಲ, ಅಪಶ್ರುತಿ ತೆಗೆದಿದ್ದು ನಾನಲ್ಲ ಅಂತ!

@#@ @#@

ಅದಾದ ಮೇಲೆ ನಾನು ಬಂದು, ಪತ್ರಿಕೋದ್ಯಮಕ್ಕೆ ಸೇರಿಕೊಂಡು, ಹಾಡು ಬಿಟ್ಟು ಎಲ್ಲಾ ಮುಗಿದಿದೆ. ಅದಾದ ಮೇಲೆ ಒಮ್ಮೆ ಕಲಾಕ್ಷೇತ್ರದಲ್ಲಿ ಅವರ ಬಳಿ ‘ನಿಮ್ಮ ತರಬೇತಿ ಪಡೆದು ಆ ದಿನ ಹಾಡಿದ್ದೆ’ ಎಂದು ಹೇಳಿಕೊಂಡು. ಅವರು ಆ ದಿನ ಅವರದೇ ಆದ ಶೈಲಿಯಲ್ಲಿ ನಕ್ಕು ಹೊರಟು ಹೋದರು.

ಅನಂತರ ಪತ್ರಿಕೋದ್ಯಮದಲ್ಲಿದ್ದ ಕಾರಣಕ್ಕೆ ಅವರನ್ನು ಭೇಟಿ ಆಗಬೇಕಾಗಿ ಬಂತು. ಸಂತೋಷದಿಂದ ಭೇಟಿ ಆದೆ. ಅವರ ಮನೆಯಲ್ಲಿ ಒಂದು ಸಲ ಸಿನಿಮಾ ಪತ್ರಕರ್ತನಾಗಿ ಅವರ ಆತಿಥ್ಯ ಸ್ವೀಕರಿಸಿದೆ. ತಡರಾತ್ರಿಯವರೆಗೆ ಅವರು ಆತಿಥ್ಯ ನೀಡಿ, ಅವರ ಹಾಡು ಕೇಳಿಸಿದ್ದು, ಯಾರಾದರೂ ಮಾತಾಡಿದರೆ ‘ಶ್ ಕೇಳಿ, ಹಾಡು ಕೇಳಿ ಮಾತಾಡ್ಬೇಡಿ’ ಎಂದು ಚಿಕ್ಕ ಮಕ್ಕಳಿಗೆ ಹಳುವಂತೆ ಕಣ್ಣು ಬಿಟ್ಟು ಹೆದರಿಸಿದ್ದು ಎಲ್ಲಾ ನೆನಪಿದೆ.

ಈಗ ಅವರು, ನಾನು ವಾಸಿಸುವ ಬೆಂಗಳೂರಿನ ಎನ್ ಆರ್ ಕಾಲೋನಿ ಭಣಭಣಗುಟ್ಟುತ್ತಿದೆ. ಯಾವತ್ತಾದರೂ ಒಮ್ಮೆ ಕಾಣಿಸಿಕೊಂಡು, ತರಕಾರಿಗೆ ಚೌಕಾಶಿ ಮಾಡುವ ಅವರು ಅಲ್ಲಿಲ್ಲ. ಅವರನ್ನು ಕೂರಿಸಿಕೊಂಡು ಹೋಗುವ ಮೊಪೆಡ್ ಕಾಣಿಸಿಕೊಳ್ಳುವುದಿಲ್ಲ. ಅವರ ಓರೆಯಾದ ಬಾಗಿಲೊಳಗೆ ಯಾವತ್ತಾದರೂ ಕಂಡಾರೇನೋ ಎಂದು ನಾನು ರಸ್ತೆಯಿಂದಲೇ ಇಣುಕುವ ಆಶಾವಾದ ಇನ್ನಿಲ್ಲ. ಯಾವುದೋ ಆಟೋವನ್ನು ನಿಲ್ಲಿಸಿ ‘ಅಲ್ಲಿಗೆ ಬರ್ತೀರಾ, ಇಲ್ಗೆ ಬರ್ತೀರಾ’ ಎಂದು ಕೇಳಲು ಅಶ್ವತ್ಥ್ ಇಲ್ಲ.

@#@ @#@

ಈಗ ಸಂಗೀತ, ಪ್ರಾಕ್ಟೀಸ್ ಬಿಟ್ಟು ನಿಜಕ್ಕೂ ನಾನು ಅಪಶ್ರುತಿ ತೆಗೆಯುತ್ತಿದ್ದೇನೆ. ಈಗ ಅಶ್ವತ್ಥ್ ಧಾರಾಳವಾಗಿ ನನ್ನನ್ನು ಬೈಯಬಹುದು. ‘ಯಾಕ್ರೀ ಸರಿಯಾಗ್ ಹಾಡೋಕಾಗಲ್ವೇನ್ರೀ’ ಅಂತ ಕಣ್ಣು ಕೆಂಪಗಾಗಿಸಬಹುದು.

ಆದರೆ ಅದಕ್ಕೀಗ ಅವರೇ ಇಲ್ಲ.

Friday, December 25, 2009

ವೈದೇಹಿ ಬಂದರು, ಕಳ್ಳರಂಗಡಿ ಬಾಗಿಲು ತೆರೆಯಿತು

[caption id="attachment_281" align="alignleft" width="106" caption="ವೈದೇಹಿ (ಚಿತ್ರಕೃಪೆ: ಕೆಂಡಸಂಪಿಗೆ)"][/caption]

ವೈದೇಹಿ ಅವರ ಕ್ರೌಂಚ ಪಕ್ಷಿಗಳಿಗೆ ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಸಂದ ಸುದ್ದಿ. ಅವರ ಕತೆಗಳ ರುಚಿ ಹತ್ತಿದವರಿಗೆ ವೈದೇಹಿ ಅವರಿಗೆ ಸಂದ ಈ ಪ್ರಶಸ್ತಿ ದೊಡ್ಡ ಸಂತೋಷ ಕೊಡುವ ವಿಷಯ. ಎಲ್ಲಾ ಪಂಜರದ ಗಿಣಿಗಳಿಗೆ, ಹೊಸ ಕಾಲದ ಹಳೆ ಹಿಂಸೆಗಳಿಗೆ ಮೈ ಒಡ್ಡಿದ ಸ್ತ್ರೀ ಜಗತ್ತಿಗೆ ಇದರಿಂದ ಸಮಾಧಾನವಾದರೂ ಆದೀತೇನೋ? ಸುಮಾರು ಹದಿಮೂರು ವರ್ಷಗಳ ಹಿಂದೆ ತಮ್ಮ ಕಥಾ ಸಂಕಲನವೊಂದರಿಂದ ಪರಿಚಿತರಾದಾಗ, ಎಲ್ಲೋ ಯಾವ ಊರಲ್ಲೋ, ಯಾವ ಪುಸ್ತಕದ, ಯಾವ ಪುಟಗಳಲ್ಲೋ ಕತೆಗಳನ್ನು ತಮ್ಮ ಪಾಡಿಗೆ ಕಟ್ಟುತ್ತಿದ್ದ ವೈದೇಹಿ ಹೀಗೊಬ್ಬ ಅಜ್ಞಾತ ಅಭಿಮಾನಿಯ ಉತ್ಕಟ ಓದನ್ನು ಕಲ್ಪಿಸಿಯೂ ಇರಲಾರರಾಗಿದ್ದರೇನೋ? ಆದರೆ ಅಂಥ ಅಸಂಖ್ಯ ಓದುಗರನ್ನು ತಮ್ಮ ಸಂವೇದನೆಯಿಂದ ಮುಟ್ಟಿದರು. ಅವರ ಕತೆಗಳ ಪ್ರಪಂಚ ಹೆಣ್ಮಕ್ಕಳ ಸುತ್ತಲೇ ಸುತ್ತುತ್ತಿತ್ತಾದ್ದರೂ ಆ ಜಗತ್ತಿನಲ್ಲಿ ಏನಿತ್ತು, ಏನಿರಲಿಲ್ಲ? ಕ್ರೌರ್ಯ ತಣ್ಣಗೆ ಕೂತಿರುತ್ತಿತ್ತು, ನಗು ಗೊಳ್ಳನೆ ತಂಗಿರುತ್ತಿತ್ತು, ಜೀವನ ಪ್ರೀತಿ ತೋಳ್ತೆರೆದು ಕರೆಯುತ್ತಿತ್ತು, ಕಣ್ಣೀರು ಕಣ್ಣ ರೆಪ್ಪೆಯಲ್ಲಿ ಮೂಡಿದಾಗಲೇ ಅವರು ತಮ್ಮ ಕುಂದಾಪ್ರ ಕನ್ನಡದಿಂದ ಮತ್ತೆ ನಗುವಿನ ಬತ್ತಿಯನ್ನು ನಮ್ಮೆಲ್ಲರ ಗುಳಿಕೆನ್ನೆಯಲ್ಲಿಟ್ಟು ಹಚ್ಚುತ್ತಿದ್ದರು. ನಮ್ಮ ನಿಮ್ಮ ಮನಸ್ಸಲ್ಲಿ ಕಟ್ಟಳೆಗಳ ಸರಳುಗಳ ಮಧ್ಯೆ ಒಂದು ವಾಂಛೆ, ಕಾಮನೆ ಕಳ್ಳನಂತೆ ಕೂತಿದ್ದಾಗ, ಹೊರಬರಲು ಕಾದಿದ್ದಾಗ ಅವರು ತಮ್ಮ ಕತೆಗಳ ಪಾತ್ರಗಳಲ್ಲಿ ಅದನ್ನೆಲ್ಲಾ ದಿಕ್ಕರಿಸಿ ತೋರಿಸಿದರು (ಸೌಗಂಧಿಯ ಸ್ವಗತಗಳು). ಅವರ ಅಕ್ಕುವಿನ ಟುವಾಲು, ಪುಟ್ಟಮ್ಮತ್ತೆಯ ಕೈರುಚಿ, ಶಾಕುಂತಲೆಯ ಬಿಗಿದ ಎದೆ ವಸ್ತ್ರ, ಆಭಾಳ ಮೇಕಪ್ ಕಿಟ್, ಹೆಣ್ಮಕ್ಕಳ ಸಂದಣಿಯ ಗುಟ್ಟು ಹಡೆ ಮಾತು... ವೈದೇಹಿ ಅವರ ಈ ಪ್ರಶಸ್ತಿ ಸಂದರ್ಭದಲ್ಲಿ ಸುಮ್ಮನೆ ನೆನಪಾಗುತ್ತಿದೆ.  ‘ಕಳ್ಳ ಕುಳ್ಳ’ರ ಬ್ಲಾಗಂಗಡಿ ಮುಚ್ಚಿತ್ತು. ಒಂದು ಸುಂದರ ಸಂದರ್ಭದಲ್ಲಿ ಮತ್ತೆ ತೆರೆದುಕೊಳ್ಳಲು ಕಾಯುತ್ತಿತ್ತು. ಆದರೀಗ ನಮ್ಮ ವಸಂತಕ್ಕನ ಪ್ರಶಸ್ತಿ ಸಂಭ್ರಮದಿಂದಾಗಿ ಮತ್ತೆ ಈ ಬ್ಲಾಗ್ ಗೆ ಖುಷಿ ಮರಳಿದೆ. ಇಲ್ಲಸಲ್ಲದ ಮಾತುಗಳ, ಸಂದರ್ಭಕ್ಕೊದಗದ ಮೌನದ, ಬರಬಾರದ ಜಾಣ ಕಿವುಡಿರುವ ಈ ಕಾಲದಲ್ಲಿ ಮತ್ತೆ ಏನಾದರೂ ಮಾತಾಡುವ ತವಕ. ವೈದೇಹಿ ಅವರ ಅಕ್ಷರ ಹೊಲದಲ್ಲಿ ಪ್ರಶಸ್ತಿಯ ಪೈರು ಮೂಡಿದೆ. ಆ ಪೈರಿನ ಸುಗ್ಗಿಯನ್ನು ಸಂಭ್ರಮಿಸಲು ಮತ್ತಷ್ಟು ಅಕ್ಷರಗಳೇ ಮೊಳಕೆಯೊಡೆಯಬೇಕು. ಹಾಗಾದರೆ ಅದೇ ಅವರಿಗೆ ನಾವೆಲ್ಲಾ ಸಲ್ಲಿಸಬಹುದಾದ ಗೌರವ. ಜೋಗಿ ಪುಸ್ತಕ ಬಿಡುಗಡೆ(ಬೆಳಿಗ್ಗೆ ಹತ್ತಕ್ಕೆ ಬೆಂಗಳೂರಿನ ಇಂಡಿಯನ್ ಇನ್ಸ್ ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್), ಜಿಎಸ್ಎಸ್ ಅವರ ಕಾವ್ಯ ‘ಚೈತ್ರೋದಯ’(ಬೆಳಿಗ್ಗೆ ಹತ್ತೂವರೆಗೆ, ರವೀಂದ್ರ ಕಲಾಕ್ಷೇತ್ರ)ಗಳ ಜೊತೆ ಈ ಭಾನುವಾರ (27, ಡಿಸೆಂಬರ್, 2009) ಸಾಹಿತ್ಯ ಲೋಕದಲ್ಲಿ ಹಬ್ಬ. ವೈದೇಹಿ ಅವರ ಪ್ರಶಸ್ತಿಯನ್ನು ಅಲ್ಲೇ ನಾವೆಲ್ಲಾ ಸಂಭ್ರಮಿಸೋಣ, ಆಚರಿಸೋಣ.